ನಲ್ದಾಣ

ಸ್ವರ್ಗ ಚುಂಬಿಸುವ ಹಂಬಲದ ನಗರ

ಮನುಷ್ಯ ನಿರ್ಮಿತ ನಂದನದಂತೆ ಕಾಣಿಸುವ ದುಬೈ ಎಲ್ಲ ಲೌಕಿಕ ಸುಖಗಳನ್ನು ತನ್ನೊಳಗೆ ತುಂಬಿಕೊಂಡಂತಿದೆ. ನೀರಿನ ಕೊರತೆ ಎದುರಿಸುವ ಈ ನಾಡು, ಮನುಷ್ಯನ ಅಪರಿಮಿತ ಆಸೆಗಳ ಸಾಕ್ಷಾತ್ಕಾರದ ಉದಾಹರಣೆಯಂತೆಯೂ ಕಾಣಿಸುತ್ತದೆ. ತಮ್ಮನ್ನು ಮತ್ತೆ ಮತ್ತೆ ಆಕರ್ಷಿಸುವ ದುಬೈ ಬಗ್ಗೆ ಕನ್ನಡ ಸಿನಿಮಾದ ಜನಪ್ರಿಯ ನಟ ಶ್ರೀಮುರಳಿ ಅವರ ಅನಿಸಿಕೆ–ಅನುಭವ ಇಲ್ಲಿದೆ.  

ಬುರ್ಜ್ ಖಲೀಫಾ ಎದುರು ಶ್ರೀಮುರಳಿ ದಂಪತಿ

ಅಮೆರಿಕ, ಯುರೋಪ್ ಸೇರಿದಂತೆ ಸಾಮಾನ್ಯವಾಗಿ ವರ್ಷಕ್ಕೆ ಒಂದೆರಡು ದೇಶಗಳಿಗೆ ಕುಟುಂಬಸಮೇತ ಪ್ರವಾಸ ಹೋಗುತ್ತೇನೆ. ಇಂಥ ಪ್ರವಾಸಗಳಲ್ಲಿ ನನಗೆ ಹೆಚ್ಚು ಆಕರ್ಷಕ ಎನಿಸಿದ್ದು ದುಬೈ. ಮನುಷ್ಯ ನಿರ್ಮಿತ ಆ ನಗರದಲ್ಲಿ ನಮಗೆ ಅಸಾಧ್ಯ ಎನಿಸಬಹುದಾದ ಅನೇಕ ಸಂಗತಿಗಳನ್ನು ಅಲ್ಲಿನವರು ಸಾಧ್ಯಗೊಳಿಸಿದ್ದಾರೆ.

ಮರುಭೂಮಿಯ ನಂದನವನದಂತಿರುವ ದುಬೈಗೆ ಯಾರೇ ಹೋಗಿ ಬಂದರೂ, ಅಲ್ಲಿನ ನೆನಪುಗಳು ಅಚ್ಚಳಿಯದಂತೆ ಮನದಾಳದಲ್ಲಿ ಉಳಿಯುವುದು ಸಹಜ.

ದುಬೈನಲ್ಲಿರುವ ಮೂಲನಿವಾಸಿಗಳು ಸುಖಿಗಳು. ಅಲ್ಲಿ ನೀರಿಗಿಂತ ಹೆಚ್ಚಾಗಿರುವುದು ತೈಲ. ಹಾಗಾಗಿ ಅಲ್ಲಿನವರು ಆಗರ್ಭ ಶ್ರೀಮಂತರು. ಲೌಕಿಕ ಬದುಕಿನ ಅಗತ್ಯಗಳ ಕೊರತೆ ಅವರಿಗಿಲ್ಲ. ತಮ್ಮ ದೇಶವನ್ನು ಅಗಾಧವಾಗಿ ಪ್ರೀತಿಸುವ ಅವರು ಮರುಭೂಮಿ ನಾಡಲ್ಲಿ ಸ್ವರ್ಗ ಸೃಷ್ಟಿಸಿಕೊಂಡಿದ್ದಾರೆ. ಕೃತಕ ಸಮುದ್ರ, ಸರೋವರ, ಮನರಂಜನಾ ಪಾರ್ಕ್‌ಗಳು, ಮೂರ್ನಾಲ್ಕು ಕಿಲೋಮೀಟರ್ ಹರಡಿಕೊಂಡಿರುವ ಶಾಪಿಂಗ್ ಕಾಂಪ್ಲೆಕ್ಸ್‌ಗಳಿವೆ.

ಮೋಜು–ಮನರಂಜನೆಗೆ ಬೇಕಾದ್ದನ್ನೆಲ್ಲ ಪ್ರಕೃತಿ ಸಹಜ ಎನಿಸುವಂತೆ ಕೃತಕವಾಗಿ ನಿರ್ಮಿಸಿಕೊಂಡಿದ್ದಾರೆ. ಇಲ್ಲಿರುವ ಕಟ್ಟಡಗಳ ಮುಂದೆ ನೀರಿನ ಕಾರಂಜಿ ಅರಳುತ್ತಿರುತ್ತದೆ. ವಾಹನಗಳು ಮತ್ತು ಕಟ್ಟಡಗಳೆಲ್ಲವೂ ಹವಾನಿಯಂತ್ರಿತ ವ್ಯವಸ್ಥೆ ಹೊಂದಿವೆ. ಹೊರಗೆ ಬಂದಾಗಷ್ಟೆ ಸೆಕೆಗೆ ಬೆವರಬೇಕು. ಮೊದಲ ಸಲ ಅಲ್ಲಿಗೆ ಭೇಟಿ ನೀಡುವವರಿಗೆ ಇದು ನಿಜವಾಗಿಯೂ ನೀರಿಲ್ಲದೆ ನಾಡೇ ಎಂಬ ಪ್ರಶ್ನೆ ಕಾಡದಿರದು.

ಮನತಣಿಸುವ ತಾಣಗಳು
ನನ್ನ ಹತ್ತು ದಿನದ ಪ್ರವಾಸದಲ್ಲಿ ನನ್ನನ್ನು ಹೆಚ್ಚು ಸೆಳೆದಿದ್ದು ಅಲ್ಲಿರುವ ‘ಅಟ್ಲಾಂಟಿಕ್ ಸಿಟಿ’ ಎಂಬ ಮನರಂಜನಾ ಪಾರ್ಕ್, ಅರಮನೆ, ‘ದುಬೈ ಮಾಲ್’ ಎಂಬ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ವಿಶ್ವದ ಅತಿ ಎತ್ತಿರದ ಕಟ್ಟಡ ಬುರ್ಜ್ ಖಲೀಫಾ.

ಅಟ್ಲಾಂಟಿಕ್ ಸಿಟಿಯಲ್ಲಿ ಸುತ್ತಾಡಿ ಎಂಜಾಯ್ ಮಾಡಲು ಕನಿಷ್ಠ ಮೂರು ದಿನವಾದರೂ ಬೇಕು. ವಿವಿಧ ಬಗೆಯ ನೀರಿನ ಆಟಗಳು, ಅಪರೂಪದ ಪ್ರಭೇದದ ಪ್ರಾಣಿಗಳು ಮತ್ತು ಸಸ್ಯಗಳ ಸಂಗ್ರಹಾಲಯ, ಡಾಲ್ಫಿನ್‌ಗಳಿರುವ ನಮ್ಮೂರಿನ ಕೆರೆಗಾತ್ರದ ಅಕ್ವೇರಿಯಂಗಳು ಅಲ್ಲಿವೆ. ನಮ್ಮ ದೇಶದಲ್ಲಾದರೆ ಏಳೆಂಟು ಕಡೆ ಸುತ್ತಾಡಿ ನೋಡಬೇಕಾದ ಸ್ಥಳಗಳಲ್ಲಿರುವ ವೈಶಿಷ್ಟ್ಯಗಳೆಲ್ಲವನ್ನೂ ದುಬೈ ಮಂದಿ ಒಂದೇ ಕಡೆ ಸೃಷ್ಟಿಸಿದ್ದಾರೆ.

ಚಿನ್ನಾಭರಣ, ಸುಗಂಧದ್ರವ್ಯ, ಸೌಂದರ್ಯವರ್ಧಕಗಳು ಸೇರಿ ಹಲವು ವಸ್ತುಗಳ ಶಾಪಿಂಗ್‌ಗೆ ದುಬೈ ಹೆಸರುವಾಸಿ. ನಾನು ಭೇಟಿ ನೀಡಿದ್ದ ‘ದುಬೈ ಮಾಲ್‌’ ಕಾಂಪ್ಲೆಕ್ಸ್ ಸುಮಾರು ಐದು ಕಿಲೋಮೀಟರ್‌ ಉದ್ದವಿದೆ. ಮೋಜು–ಮಸ್ತಿ ಮಾಡುವವರಿಗೆ, ಶಾಪಿಂಗ್ ಮೋಹಿಗಳಿಗೆ ಇಂತಹದ್ದು ಇಲ್ಲ ಎನ್ನುವಂತಿಲ್ಲ. ನಾವು ನಿತ್ಯ ವರ್ಕೌಟ್ ಮಾಡುವ ಬದಲು, ಕುಟುಂಬದೊಂದಿಗೆ ಅಲ್ಲಿ ಸುತ್ತಾಡಿದರೆ ಸಾಕು; ಅದೇ ದೊಡ್ಡ ವರ್ಕೌಟ್ ಆಗುತ್ತದೆ.

ಇಲ್ಲಿರುವ ಅರಮನೆಯಲ್ಲಿ ಅಡ್ಡಾಡಿದರೆ, ಹಿಂದಿನ ರಾಜರು ಎಷ್ಟೊಂದು ವೈಭವೋಪೇತವಾಗಿದ್ದರು ಎಂಬುದು ಕಣ್ಣ ಮುಂದೆ ಬರುತ್ತದೆ. ಒಳಗೆ ಕಾಲಿಟ್ಟರೆ ಯಾವುದೋ ಲೋಕಕ್ಕೆ ಬಂದಿದ್ದೇವೆ ಎನಿಸುವಂತಹ ಸೌಂದರ್ಯ. ಅರಮನೆಯ ಸುತ್ತಮುತ್ತಲಿರುವ ಉದ್ಯಾನದಲ್ಲಿ ಜಿಂಕೆಗಳು ಸೇರಿದಂತೆ ಸೌಮ್ಯ ಪ್ರಾಣಿಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಇನ್ನು ವಿಶ್ವದಲ್ಲೇ ಅತ್ಯಂತ ಎತ್ತರವಾದ, ಮೋಡಕ್ಕೆ ಮುತ್ತಿಕ್ಕಿದಂತೆ ಕಾಣುವ ಬುರ್ಜ್‌ ಖಲೀಫಾ ಕಟ್ಟಡವನ್ನು ನೋಡುವುದೇ ಒಂದು ಸೊಗಸು. 

ಹಗಲಲ್ಲಿ ಇಲ್ಲಿ ಬಿರುಬಿಸಿಲಿರುವಂತೆ, ರಾತ್ರಿಯಾಗುತ್ತಿದ್ದಂತೆ ಚಳಿ ಹೆಚ್ಚಾಗುತ್ತದೆ. ಆ ಚಳಿಯಲ್ಲಿ ಹೊರವಲಯದ ಮರುಭೂಮಿಯಲ್ಲಿ ಕೆಲವರು ವಾಹನಗಳಲ್ಲಿ ಜಾಲಿರೈಡ್ ಮಾಡುತ್ತಾರೆ. ಅಲ್ಲಿಯೂ ಓಪನ್ ರೆಸ್ಟೊರೆಂಟ್‌ಗಳಿವೆ. ಚುಮುಗುಡುವ ಚಳಿಯಲ್ಲಿ ಪ್ರವಾಸಿಗರು ಹಾಡುಗಳನ್ನು ಆಲಿಸುತ್ತಾ, ಲಲನೆಯರ ನೃತ್ಯವನ್ನು ಆನಂದಿಸುತ್ತಾರೆ.

ದುಬೈ ಒಂದು ರೀತಿಯಲ್ಲಿ ತಾತ್ಕಾಲಿಕ ವಲಸಿಗರ ನಾಡು. ಇಲ್ಲಿ ಎಲ್ಲ ದೇಶಗಳ ಜನರೂ ದುಡಿಮೆಗಾಗಿ ಬಂದು ನೆಲೆಸಿದ್ದಾರೆ. ಅದರಲ್ಲೂ ಕರ್ನಾಟಕ ಹಾಗೂ ದಕ್ಷಿಣ ಭಾರತದವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಈ ಭಾಗದ ಕಲಾವಿದರು ಅಲ್ಲಿಗೆ ಹೋದರೆ ಗುರುತಿಸಿ ಕೈ ಕುಲುಕುವ ಕನ್ನಡಿಗರು – ದಕ್ಷಿಣ ಭಾರತೀಯರು ಸಿಗುತ್ತಾರೆ. ಅಲ್ಲಿನವರಿಗೆ ಕಲಾವಿದರ ಮೇಲೆ ವಿಪರೀಥ ಗೌರವ–ಅಭಿಮಾನ.

ಅಭದ್ರತೆ ಕಾಡದು
ದುಬೈನ ಮತ್ತೊಂದು ವಿಶೇಷ ಅಲ್ಲಿನ ಭದ್ರತೆ. ಸಾಮಾನ್ಯವಾಗಿ ನನ್ನ ಕೈಲಿ ಸರಿಯಾಗಿ ಮೊಬೈಲ್ ನಿಲ್ಲುವುದಿಲ್ಲ. ಹತ್ತು ದಿನಗಳ ಸುತ್ತಾಟದಲ್ಲಿ ನಾಲ್ಕು ಸಲ ಮೊಬೈಲ್ ಕಳೆದುಕೊಂಡಿದ್ದೇನೆ. ತಕ್ಷಣ ಮೊಬೈಲ್‌ಗೆ ಕರೆ ಮಾಡಿದೆ. ಕರೆ ಸ್ವೀಕರಿಸಿದವರು, ನಾನು ಮೊಬೈಲ್ ಕಳೆದುಕೊಂಡ ವಿಳಾಸ ತಿಳಿಸಿ, ‘ಬಂದು ತೆಗೆದುಕೊಂಡು ಹೋಗಿ’ ಎಂದು ಪ್ರತಿಕ್ರಿಯಿಸಿದರು.

ಭಾರತದಲ್ಲಿ ಅದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಪ್ರವಾಸಿಗರು ಸೇರಿದಂತೆ ಅವರ ವಸ್ತುಗಳಿಗೆ ಭದ್ರತೆಯ ಗ್ಯಾರಂಟಿ ಅಲ್ಲಿದೆ. ಪ್ರಪಂಚದಲ್ಲಿ ಪ್ರವಾಸಿಗರಿಗೆ ಅತ್ಯಂತ ಹೆಚ್ಚಿನ ಸುರಕ್ಷತೆ ಇರುವ ನಗರ ಇದೆಂದರೆ ತಪ್ಪಲ್ಲ.

ಮೂಲ ನಿವಾಸಿಗಳಂತೆ, ಬದುಕು ಅರಸಿ ಅಲ್ಲಿಗೆ ಹೋಗಿ ನೆಲೆಸಿರುವ ಇತರ ದೇಶಗಳ ಜನರೂ ಅಲ್ಲಿನ ಅತ್ಯಂತ ಕಟ್ಟುನಿಟ್ಟಿನ ಕಾನೂನುಗಳಿಗೆ ಹೊಂದಿಕೊಂಡಿದ್ದಾರೆ. ಅಲ್ಲಿ ಪ್ರವಾಸಿಗರ ಬಗ್ಗೆ ತೋರುವ ಕಾಳಜಿ ಮತ್ತು ದೊರೆಯುವ ಭದ್ರತೆಯೇ ಮೂರು ಸಲ ನನ್ನನ್ನು ಅಲ್ಲಿಗೆ ಹೋಗುವಂತೆ ಪ್ರೇರೇಪಿಸಿತು.ಎಷ್ಟು ಸಲ ಹೋಗಿಬಂದರೂ, ಮತ್ತೆ ಮತ್ತೆ ಭೇಟಿ ನೀಡಬೇಕೆನಿಸುವ ದುಬೈ ನಿಜವಾಗಿಯೂ ಭೂಮಿಯ ಮೇಲಿನ ನಂದನ.

Comments
ಈ ವಿಭಾಗದಿಂದ ಇನ್ನಷ್ಟು
ಕುಸುಮ ಲೋಕದ ಮಿರಾಕಲ್!

ದುಬೈ ಪ್ರವಾಸ
ಕುಸುಮ ಲೋಕದ ಮಿರಾಕಲ್!

22 Apr, 2018
ಕೊನೇ ಪುಸ್ತಕ ಮಳಿಗೆಯಲ್ಲಿ ಸುಸ್ತಾಗುವಷ್ಟು ಸುತ್ತಿ!

ದಿ ಲಾಸ್ಟ್ ಬುಕ್ ಸ್ಟೋರ್
ಕೊನೇ ಪುಸ್ತಕ ಮಳಿಗೆಯಲ್ಲಿ ಸುಸ್ತಾಗುವಷ್ಟು ಸುತ್ತಿ!

22 Apr, 2018
ಚಿಲ್ಕಾ ಎಂಬ ವಿಶಾಲ ಜಲಾಗಾರ

ಪ್ರವಾಸ
ಚಿಲ್ಕಾ ಎಂಬ ವಿಶಾಲ ಜಲಾಗಾರ

15 Apr, 2018
ಮಂಜಿನ ಪರದೆಯಡಿ ಮುಗುಳ್ನಗುವ ರಾಣಿಜರಿ

ಪ್ರವಾಸ
ಮಂಜಿನ ಪರದೆಯಡಿ ಮುಗುಳ್ನಗುವ ರಾಣಿಜರಿ

15 Apr, 2018
ಶಿಲ್ಪ ಕಲೆಯ ಭವ್ಯತೆ ಎಲಿಫೆಂಟಾ ದೇವಾಲಯ

ಪ್ರವಾಸ
ಶಿಲ್ಪ ಕಲೆಯ ಭವ್ಯತೆ ಎಲಿಫೆಂಟಾ ದೇವಾಲಯ

1 Apr, 2018