ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯೋಮ ವಿಸ್ಮಯದ ಎರಡು ಪ್ರಶ್ನೆಗಳು

Last Updated 22 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

1. ನಕ್ಷತ್ರಗಳ ಜೀವಿತಾವಧಿ ಎಷ್ಟು?
ಯಾರೇ ಆದರೂ ಊಹಿಸಬಹುದಾದಂತೆ ನಕ್ಷತ್ರಗಳದು ಅಸಾಮಾನ್ಯ ಆಯುರ್ಮಾನ. ಅವುಗಳದು ಶತಮಾನ, ಸಹಸ್ರಮಾನ, ಲಕ್ಷಮಾನಗಳಲ್ಲಿ ನಿರೂಪಿಸಬಹುದಾದ ಆಯುಷ್ಯ ಅಲ್ಲ. ಹಾಗೆಂದು ಅವು ಅನಂತಕಾಲ ಬದುಕುವ ಚಿರಾಯುಗಳೂ ಅಲ್ಲ. ವಾಸ್ತವ ಏನೆಂದರೆ ತಾರೆಗಳ ಜೀವಿತಾವಧಿ ಕನಿಷ್ಠ ಮೂರು–ನಾಲ್ಕು ದಶಲಕ್ಷ ವರ್ಷಗಳಿಂದ ಗರಿಷ್ಠ ಒಂದು ನೂರು ಶತಕೋಟಿ ವರ್ಷದವರೆಗೆ ವಿಪರೀತ ಭಿನ್ನ ಭಿನ್ನ! ನಕ್ಷತ್ರಗಳ ಆಯುಷ್ಯದ ಕನಿಷ್ಠ–ಗರಿಷ್ಠ ಅವಧಿಗಳ ನಡುವೆ ಎಂಥ ಭಾರೀ ಅಂತರ! ಗಮನಿಸಿದಿರಾ?

ತಾರೆಗಳ ಜೀವಿತಾವಧಿ ಇಷ್ಟೊಂದು ಭಿನ್ನ ಭಿನ್ನವಾಗಿರಲು ಕಾರಣ ಅವುಗಳ ದ್ರವ್ಯರಾಶಿಗಳ ಅತೀವ ಭಿನ್ನತೆ. ಏಕೆಂದರೆ ನಕ್ಷತ್ರಗಳ ಆಯುಷ್ಯ ಅವುಗಳ ಆರಂಭಿಕ ದ್ರವ್ಯರಾಶಿಯನ್ನು ಅವಲಂಭಿಸಿದೆ. ಅದರಲ್ಲೂ ಒಂದು ವಿಸ್ಮಯದ ವಿಪರ್ಯಾಸ ಇದೆ. ತಾರೆಗಳ ಆಯುರ್ಮಾನ ಅವುಗಳ ದ್ರವ್ಯರಾಶಿಗೆ ವಿಲೋಮವಾಗಿ ಸಂಬಂಧಿಸಿದೆ. ಹಾಗೆಂದರೆ ಮೂಲ ದ್ರವ್ಯರಾಶಿ ಅಧಿಕ ಇದ್ದಷ್ಟೂ ಆಯುಷ್ಯ ಕಡಿಮೆ; ದ್ರವ್ಯರಾಶಿ ಕಡಿಮೆ ಇದ್ದಷ್ಟೂ ಆಯುಷ್ಯ ಹೆಚ್ಚು!

ವಿಶ್ವದಲ್ಲಿ ಹರಡಿರುವ ದ್ರವ್ಯದಿಂದ (ಚಿತ್ರ–2) ನಕ್ಷತ್ರಗಳು ಮೈದಳೆದು (ಚಿತ್ರ–3,4) ಗ್ಯಾಲಕ್ಸಿಗಳಲ್ಲಿ ಸಾವಿರಾರು ಕೋಟಿ ಸಂಖ್ಯೆಗಳಲ್ಲಿ ಗುಂಪು ಗುಂಪಾಗಿವೆ (ಚಿತ್ರ–1). ಹಾಗೆ ಜನ್ಮ ತಳೆವ ನಕ್ಷತ್ರಗಳು ಪಡೆವ ಆರಂಭಿಕ ದ್ರವ್ಯ ಬಹು ವಿಶಾಲ ವ್ಯಾಪ್ತಿಯಲ್ಲಿ ಬಹಳ ಭಿನ್ನ ಭಿನ್ನ ಪ್ರಮಾಣಗಳಲ್ಲಿರುತ್ತದೆ. ನಮ್ಮ ಸೂರ್ಯನ ಶೇಕಡ ಏಳೂವರೆಯಷ್ಟೇ ಅಲ್ಪ ಮೊತ್ತದಿಂದ ಸೂರ್ಯನ 265 ಪಟ್ಟು ಆಗುವಷ್ಟು ದ್ರವ್ಯರಾಶಿಯ ನಕ್ಷತ್ರಗಳು ಪತ್ತೆಯಾಗಿವೆ (ನಮ್ಮ ಸೂರ್ಯನ ದ್ರವ್ಯರಾಶಿ ಎರಡು ದಶಲಕ್ಷ ಕೋಟಿ ಕೋಟಿ ಕೋಟಿ ಟನ್‌).

ಸರಿಸುಮಾರು ನಮ್ಮ ಸೂರ್ಯನಷ್ಟು ದ್ರವ್ಯರಾಶಿಯ ನಕ್ಷತ್ರಗಳು ಸಾಮಾನ್ಯವಾಗಿ ಹತ್ತು ಶತಕೋಟಿ ವರ್ಷ ಬಾಳುತ್ತವೆ. ಸೂರ್ಯನದೂ ಇಷ್ಟೇ ಆಯುಷ್ಯವಾಗಿದ್ದು ಅದರಲ್ಲಿ ಅರ್ಧ ಕಾಲ ಈಗಾಗಲೇ ಮುಗಿದಿದೆ. ನಮ್ಮ ಸೂರ್ಯನ (ಚಿತ್ರ–5) ದ್ರವ್ಯರಾಶಿಯ ಶೇಕಡ ನಲವತ್ತಕ್ಕೂ ಕಡಿಮೆ ಆರಂಭಿಕ ದ್ರವ್ಯರಾಶಿಯ ತಾರೆಗಳ ಒಂದು ನೂರು ಶತಕೋಟಿ ವರ್ಷಕಾಲ ಬದುಕಿರುತ್ತವೆ. ತದ್ವಿರುದ್ಧವಾಗಿ ಸೂರ್ಯನ ನೂರಾರು ಪಟ್ಟು ದ್ರವ್ಯರಾಶಿಯ ನಕ್ಷತ್ರಗಳು ಮೂರು–ನಾಲ್ಕು ದಶಲಕ್ಷ ವರ್ಷಗಳಲ್ಲೇ ಮೃತವಾಗಿಬಿಡುತ್ತವೆ.

ತಾರೆಗಳ ಆಯುಷ್ಯದ ಈ ವಿಪರ್ಯಾಸಕ್ಕೆ ಸ್ಪಷ್ಟ ಕಾರಣ ಇದೆ. ನಿಮಗೇ ತಿಳಿದಂತೆ ಎಲ್ಲ ನಕ್ಷತ್ರಗಳ ಆಂತರ್ಯದಲ್ಲೂ ‘ಉಷ್ಣ ಬೈಜಿಕ ಸಮ್ಮಿಲನ’ ನಡೆದಿದೆ. ಹಾಗೆಂದರೆ ಜಲಜನಕದ ಪರಮಾಣುಗಳು ಬೆಸೆಗೊಂಡು ಹೀಲಿಯಂ ಆಗುತ್ತ ಜೊತೆಗೆ ಶಾಖ ಮತ್ತು ಬೆಳಕು ಬಿಡುಗಡೆಯಾಗುವ ಕ್ರಿಯೆ. ನಕ್ಷತ್ರಗಳ ದ್ರವ್ಯರಾಶಿ ಅಧಿಕ ಇದ್ದಷ್ಟೂ ಈ ಕ್ರಿಯೆ ಹೆಚ್ಚು ತೀವ್ರವಾಗಿ ಜರುಗುತ್ತದೆ.

ಹಾಗಾಗಿ ಅಧಿಕ ದ್ರವ್ಯರಾಶಿಯ ತಾರೆಗಳು ತಮ್ಮ ದ್ರವ್ಯ ದಾಸ್ತಾನನ್ನು ಬೇಗ ಬೇಗ ವ್ಯಯಿಸುತ್ತ, ವಿಪರೀತ ಉಜ್ವಲವಾಗಿ ಬೆಳಗುತ್ತ, ಬದುಕಿನ ಎಲ್ಲ ಹಂತಗಳನ್ನೂ ಬೇಗ ಬೇಗ ದಾಟಿ ಕ್ಷಿಪ್ರವಾಗಿ ಮೃತವಾಗುತ್ತವೆ; ಸೂಪರ್‌ನೋವಾ ಮಹಾಸ್ಫೋಟದೊಡನೆ ಪ್ರಳಯ ರೂಪದ ಅಂತ್ಯ ಕಾಣುತ್ತವೆ (ಚಿತ್ರ–7,8). ತದ್ವಿರುದ್ಧವಾಗಿ ಕಡಿಮೆ ದ್ರವ್ಯರಾಶಿಯ ನಕ್ಷತ್ರಗಳು ಮಂದವಾಗಿ ‘ಉರಿಯುತ್ತ’, ಮಂಕಾಗಿ ಹೊಳೆಯುತ್ತ ತುಂಬ ದೀರ್ಘಕಾಲ ಬಾಳುತ್ತವೆ. ಕಡೆಗೆ ಯಾವುದೇ ಸದ್ದು–ಗದ್ದಲ ಇಲ್ಲದೆ ‘ಗ್ರಹಿಯ ನೀಹಾರಿಕೆ’ಗಳಾಗಿ ಬದುಕನ್ನು ಮುಗಿಸುತ್ತವೆ (ಚಿತ್ರ–5,6). ವಿಶೇಷ ಏನೆಂದರೆ ವಿಶ್ವದಲ್ಲಿ ಕಡಿಮೆ ದ್ರವ್ಯರಾಶಿಯ, ದೀರ್ಘ ಆಯುಷ್ಯದ ನಕ್ಷತ್ರಗಳದೇ ಅಧಿಕ ಸಂಖ್ಯೆ.

2. ವ್ಯೋಮ ನೌಕೆಗಳಲ್ಲಿ ‘ಆರ್‌.ಟಿ.ಜಿ.’ ಏಕೆ?
‘ಆರ್‌.ಟಿ.ಜಿ.’– ಅದು ‘ರೇಡಿಯೋ ಐಸೋಟೋಪ್‌ ಥರ್ಮೋ ಎಲೆಕ್ಟ್ರಿಕ್‌ ಜನರೇಟರ್‌’ನ ಸಂಕ್ಷಿಪ್ತ ನಾಮ. ಹೆಸರೇ ಸೂಚಿಸುವಂತೆ ಆರ್‌.ಟಿ.ಜಿ. ಒಂದು ವಿದ್ಯುದುತ್ಪಾದಕ ಸಾಧನ. ವಿಕಿರಣ ಪಟು ಸಮಸ್ಥಾನಿಗಳಿಂದ ತಂತಾನೇ ಬಿಡುಗಡೆಯಾಗುವ ಶಾಖಶಕ್ತಿಯನ್ನು ವಿದ್ಯುತ್‌ ಶಕ್ತಿಯನ್ನಾಗಿ ಪರಿವರ್ತಿಸುವ ವಿಶೇಷ ಸಾಧನ ಅದು. ಆದರೆ ಆರ್‌.ಟಿ.ಜಿ. ಬೈಜಿಕ ವಿದ್ಯುತ್‌ ಸ್ಥಾವರ’ಗಳಿಂದ ವಿಭಿನ್ನ.

ಗಾತ್ರದಲ್ಲಿ ಮತ್ತು ವಿದ್ಯುತ್‌ ಉತ್ಪಾದನಾ ಪ್ರಮಾಣ ಎರಡರಲ್ಲೂ ಅವುಗಳದು ‘ವಾಮನ–ತ್ರಿವಿಕ್ರಮ’ ಹೋಲಿಕೆ. ವಾಸ್ತವವಾಗಿ ಆರ್‌.ಟಿ.ಜಿ.ಗಳು ಬಾಹ್ಯಾಕಾಶ ಬ್ಯಾಟರಿ’ಗಳು ಅಥವಾ ‘ಬೈಜಿಕ ಬ್ಯಾಟರಿ’ಗಳು ಎಂದೂ ಪ್ರಸಿದ್ಧ. ಆರ್‌.ಟಿ.ಜಿ.ಗಳ ಪ್ರಧಾನ ಬಳಕೆ ನಡೆದಿರುವುದೇ ವ್ಯೋಮ ಸಾಧನಗಳಲ್ಲಿ: ಕೆಲ ವಿಶೇಷ ಉಪಗ್ರಹಗಳಲ್ಲಿ ಮತ್ತು ಬಹುಪಾಲು ಎಲ್ಲ ವ್ಯೋಮ ನೌಕೆಗಳಲ್ಲಿ ಆರ್‌.ಟಿ.ಜಿ. ಅತ್ಯವಶ್ಯ. ಹಾಗಾಗಿ ಅದಕ್ಕೆ ಬಹಳ ಮಹತ್ವ.

ನಿಮಗೇ ತಿಳಿದಂತೆ ಭೂಮಿಯಿಂದ ನೂರಾರು ಕಿ.ಮೀ.ಗಳಿಂದ ಸಾವಿರಾರು ಕಿ.ಮೀ. ದೂರಗಳಲ್ಲಿ ಭೂಮಿಯನ್ನು ಪರಿಭ್ರಮಿಸುವ ಕೃತಕ ಉಪಗ್ರಹಗಳು (ಚಿತ್ರ–9,10) ನಮ್ಮಿಂದ ಕೋಟ್ಯಂತರ ಕಿ.ಮೀ. ದೂರಗಳಲ್ಲಿರುವ ಸೌರವ್ಯೂಹದ ಗ್ರಹ, ಉಪಗ್ರಹ, ಧೂಮಕೇತು ಇತ್ಯಾದಿ ಕಾಯಗಳ ಬಳಿ ಸಾಗುವ ವ್ಯೋಮನೌಕೆಗಳು (ಚಿತ್ರ–11 ರಿಂದ 15) ಅವುಗಳ ಕಾರ್ಯ ನಿರ್ವಹಿಸಲು ವಿದ್ಯುತ್‌ ಶಕ್ತಿ ಅತ್ಯಗತ್ಯ.

ಕೃತಕ ಉಪಗ್ರಹಗಳು ಮತ್ತು ವ್ಯೋಮ ನೌಕೆಗಳ ಚಲನೆಗೆ–ಪಯಣಕ್ಕೆ ವಿದ್ಯುತ್‌ ಶಕ್ತಿ ಬೇಕಿಲ್ಲವಾದರೂ ಅವುಗಳಲ್ಲಿ ಇಡಲಾಗುವ ವೈಜ್ಞಾನಿಕ ಸಾಧನಗಳಿಗೆ– ಎಂದರೆ ಕ್ಯಾಮರಾ ಮತ್ತಿತರ ಮಾಹಿತಿ ಸಂಗ್ರಾಹಕ ಸಾಧನಗಳು, ಪ್ರೇಷಕ–ಗ್ರಾಹಕಗಳು ಇತ್ಯಾದಿ–ನಿರಂತರ ವಿದ್ಯುತ್‌ ಸರಬರಾಜು ಬೇಕೇ ಬೇಕು. ಇಂತಹ ಎಲ್ಲ ಸಾಧನಗಳಿಗೆ ವರ್ಷಗಟ್ಟಳೆ ಕಾಲ ನೂರಾರು ವ್ಯಾಟ್‌ಗಳಷ್ಟು ವಿದ್ಯುತ್ತನ್ನು ಅವಿರತ ಪೂರೈಸುವುದು ಸಾಮಾನ್ಯ ವಿದ್ಯುತ್ಕೋಶಗಳಿಂದ ಸಾಧ್ಯವೇ ಇಲ್ಲ. ಆದ್ದರಿಂದ ವ್ಯೋಮಸೌಕೆಗಳಿಗೆ ವಿದ್ಯುತ್ತನ್ನು ಒದಗಿಸುವ ಎರಡು ವಿಧಾನಗಳು ಜಾರಿಯಲ್ಲಿವೆ.

ಮೊದಲಿನದು ಸೌರಶಕ್ತಿಯ ಬಳಕೆ. ಕೃತಕ ಉಪಗ್ರಹ ಅಥವಾ ವ್ಯೋಮನೌಕೆಗಳಿಗೆ ರೆಕ್ಕೆಗಳ ರೂಪದಲ್ಲಿ ಸೌರಕೋಶಗಳನ್ನು ಅಳವಡಿಸಿ (ಚಿತ್ರ–9,10,13) ಬಾಹ್ಯಾಕಾಶದಲ್ಲಿ ಸದಾಕಾಲ ಲಭ್ಯ ಇರುವ ಸೌರಶಕ್ತಿಯನ್ನು ವಿದ್ಯುತ್ತನ್ನಾಗಿ ಪರಿವರ್ತಿಸಿ ಪೂರೈಸುವ ವಿಧಾನ ಇದು.

ಆದರೆ ಸೂರ್ಯನಿಂದ ಬಹುದೂರದ– ಎಂದರೆ ಮಂಗಳ ಮತ್ತು ಅದರಾಚಿನ ಕಾಯಗಳ ಕಡೆಗೆ ಹೋಗುವ ವ್ಯೋಮ ನೌಕೆಗಳಿಗೆ (ಚಿತ್ರ–11,13,14,15) ಹಾಗೂ ತಮ್ಮ ಪಯಣದ ಪಥದಲ್ಲಿ ಆಗಾಗ ಸೂರ್ಯನಿಂದ ಮರೆಯಾಗುವ ಕೃತಕ ಉಪಗ್ರಹಗಳಿಗೆ ಶಾಶ್ವತವಾಗಿ ಅಥವಾ ಆಗಾಗ ಸೌರವಿದ್ಯುತ್‌ ಅಲಭ್ಯವಾಗುವುದು ಸ್ಪಷ್ಟ ತಾನೇ? ಅಂತಹ ನಿರ್ಮಿತಿಗಳಲ್ಲಿ ಅಳವಡಿಸಲಾದ ವೈಜ್ಞಾನಿಕ ಸಾಧನಗಳನ್ನು ಶಾಖ ಒದಗಿಸಿ ಅತಿ ಶೀತದಿಂದ ರಕ್ಷಿಸಲು ಮತ್ತು ಅವುಗಳಿಗೆ ಅವಿರತವಾಗಿ ವಿದ್ಯುತ್ತನ್ನು ಒದಗಿಸಲು ಆರ್‌.ಟಿ.ಜಿ.ಯ ಬಳಕೆಯೇ ದ್ವಿತೀಯ ವಿಧಾನದ ಏಕೈಕ ಕ್ರಮ.

ಪ್ರಸ್ತುತ ಬಳಕೆಯಲ್ಲಿರುವ ಆರ್‌.ಟಿ.ಜಿ.ಗಳಲ್ಲಿ ಪ್ಲುಟೋನಿಯಂ–238’ ಅನ್ನು ಇಂಧನವನ್ನಾಗಿ ಬಳಸಲಾಗುತ್ತಿದೆ. ಪ್ರತಿ ಆರ್‌.ಟಿ.ಜಿ.ಯಲ್ಲೂ 5 ಕಿ.ಲೋ. ಗ್ರಾಂ.ನಷ್ಟು ಈ ಬೈಜಿಕ ಇಂಧನ ಇದ್ದು 110 ವ್ಯಾಟ್‌ ವಿದ್ಯುತ್‌ ಶಕ್ತಿ ಉತ್ಪಾದನೆಗೊಳ್ಳುತ್ತಿದೆ. ಆರ್‌.ಟಿ.ಜಿ.ಗಳು ಹಲವು ಹತ್ತು ವರ್ಷಗಳ ಕಾಲ ನಿರಂತರವಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲವು. ಉದಾಹರಣೆಗೆ ‘ವಾಯೇಜರ್‌’ ವ್ಯೋಮನೌಕೆಯಲ್ಲಿರುವ ಎರಡು ಆರ್‌.ಟಿ.ಜಿ.ಗಳು (ಚಿತ್ರ–14) ಇಸವಿ 1977ರಿಂದ ಈವರೆಗೂ, ಎಂದರೆ 39 ವರ್ಷಗಳ ನಂತರವೂ ಕ್ರಿಯಾಶೀಲವಾಗಿವೆ; ಇನ್ನೂ ಒಂದು ದಶಕದವರೆಗೂ ಸಮರ್ಥವಾಗಿಯೇ ಉಳಿಯಲಿವೆ! ಹಾಗೆಲ್ಲ ಆಗಿರುವುದರಿಂದಲೇ ವ್ಯೋಮನೌಕೆಗಳಿಗೆ ಆರ್‌.ಟಿ.ಜಿ. ಬೇಕೇ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT