ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮಾ, ಯಾರದು ಈ ಹಾಡು?

ಮಕ್ಕಳ ಪದ್ಯ
Last Updated 22 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಜುಳು ಜುಳು ಕುಲು ಕುಲು ಕೇಳುತಿದೆ
ಸಲಿಲವು ತುಳುಕುತ ಸಾಗುತಿದೆ
ಅಮ್ಮಾ, ಯಾರದು ಈ ಹಾಡು?
ಹಾಡಿನ ಒಡಲನು ತೆರೆದು ಇಡು!

ಹಾಡು, ಹರಿಯುವ ನೀರಿನದೆ?
ನಿಶ್ಚಲ ನಿಂತಿರೊ ಬಂಡೆಯದೆ?
ಹೊರಳುತ ಉರುಳುವ ಹರಳಿನದೆ?
ಎಲ್ಲಿಗೊ ತೆರಳುವ ಮರಳಿನದೆ?
ಅಮ್ಮಾ, ಯಾರದು ಈ ಹಾಡು?
ಹಾಡಿನ ಜಾಡನು ಹಿಡಿದು ಕೊಡು!

ಬೆಟ್ಟದ ಹೊಟ್ಟೆಯ ಹಾಡೆ ಇದು?
ಧಾರೆಯನೆರೆಯುವ ಕಣಿವೆಯದು?
ಮರಗಳ ಮರ್ಮರಕುತ್ತರವೋ?
ತಿರುಗಾಟದ ಪದ ಭೂಮಿಯದೋ?
ಅಮ್ಮಾ, ಯಾರದು ಈ ಹಾಡು?
ಹಾಡಿನ ಗೂಡನು ಹುಡುಕಿ ಬಿಡು!

ನೀರಿಗೆ ಇಳಿದರೆ ನೀರೆಯರು?
ಕಿಲಕಿಲ ನಗುವ ಲಲನೆಯರು?
ಆಡುತ್ತಿದೆಯೆ ನೀರಾಟ
ಕಿನ್ನರಿ ಕಿನ್ನರ ಪರಿವಾರ?
ಅಮ್ಮಾ, ಯಾರದು ಈ ಹಾಡು?
ಹಾಡಿನ ಗೂಢವ ಬಿಡಿಸಿ ಬಿಡು!

ಜುಳು ಜುಳು ಗಂಗೆಯ ಜೋಗುಳವೆ?
ಕುಲು ಕುಲು ಮೀನ್ಗಳ ಕಲರವವೆ?
ಪಡಿನುಡಿಯಿತೆ ಆ ಪಾತಾಳ?
ಬುಸುಗುಡುತಿವೆಯೇ ಆ ವ್ಯಾಳ?
ಅಮ್ಮಾ, ಯಾರದು ಈ ಹಾಡು?
ಹಾಡನ್ನೂಡುತ ಕಲಿಸಿಕೊಡು!

ಹಾಡು, ನುಡಿಸುವ ಸೂರ್‍ಯನದೆ?
ನಗಿಸುವ ಕೀಟಲೆ ಗಾಳಿಯದೆ?
ನದಿಯೆದೆ ಕರಗಿಸೊ ಹಕ್ಕಿಯದೆ?
ಎದೆಯಲ್ಲುಳಿಯುವ ಚಂದ್ರನದೆ?
ಅಮ್ಮಾ, ಯಾರದು ಈ ಹಾಡು?
ಹಾಡನು ಕುಡಿಯುತ ಬೆಳೆಯಗೊಡು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT