ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತುಗಳ ಮಾಯವಾದ ನಿರ್ವಾತ

ಭಾವಸೇತು
Last Updated 22 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

-ಉಮೇಶ ದೇಸಾಯಿ
ಇಂದು ನಿಜದ ಮಾತು ಆಡುವವರ, ಅಂತೆಯೇ ಆಡಿದ ಮಾತನ್ನು ಕೇಳುವವರ ಕೊರತೆ ಇದೆ. ಇದು ಸದ್ಯದ ಅತ್ಯಂತ ದೊಡ್ಡ ಸಮಸ್ಯೆ. ಮಾತುಗಳು ಈಗ ಬೇಡದ ವಸ್ತು. ಮನೆಯ ಒಳಗೂ ಹೊರಗೂ ಮಾತು ಯಾರಿಗೂ ಬೇಡ. ಕೈಯಲ್ಲೊಂದು ಮೊಬೈಲು ಅದರಲ್ಲಿ ವಾಟ್ಸಾಪು, ಫೇಸಬುಕ್ಕು ಇದ್ದರಾಯಿತು.

ಸುತ್ತ ಬೆಂಕಿ ಬಿದ್ದರೂ ಖಬರಿಲ್ಲದೆ ಇದ್ದಾರು ಈಗಿನವರು. ಹಾಗಂತ ಆ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಸದ್ದು ಕೇಳುತ್ತಿದೆಯೇ? ಇಲ್ಲ, ನಿಮ್ಮ ಊಹೆ ತಪ್ಪು.

ಎಮಿಟೋಮುಗಳು ತುಳುಕಾಡುತ್ತವೆ ಅಲ್ಲಿ, ಮಾತಿಗೆ ಬರಗಾಲವಿದೆ. ಮಾತುಗಳು ಸೃಷ್ಟಿಸುವ ಬಂಧ ಈ ಸ್ಟಿಕ್ಕರ್‌ಗಳು ಹುಟ್ಟಿಸಲಾರವು ನಿಜ. ಆದರೆ ತಕ್ಷಣದ ಪ್ರತಿಕ್ರಿಯೆ ಒಂದು ಸ್ಟಿಕ್ಕರ್‌ ಮೂಲಕ ಕೊಟ್ಟು ಪುನೀತರಾಗುವ ಜನರೇ ಇರುವ ಜಗತ್ತಿದು. ಹಾಗಂತ ಈ ತಾಣಗಳಲ್ಲಿ ಮಾತು ಇಲ್ಲವೇ ಇಲ್ಲ ಅಂತ ಹೇಳುವಂತಿಲ್ಲ..

ಇಲ್ಲಿ ಹಗೆ, ಹೊಗೆ, ಬೇಗೆ ಎಲ್ಲ ಇವೆ. ಹಲವು ಸಲ ಹದ್ದು ಮೀರಿ ಆಡಿದವ ಅಹುದಹುದು ಎಂದವ ಕೂಡ ಕಂಬಿ ಎಣಿಸಿದ್ದಿದೆ..! ಮಾತುಗಳಲ್ಲಿ ಈಗ ಮೊದಲಿನ ಸ್ವಾದ ಇಲ್ಲ. ಯಾರು ಏನೇ ಮಾತಾಡಲಿ, ಆ ಮಾತುಗಳಲ್ಲಿ ಅಂತಃಕರಣ ಮಾಯವಾಗಿದೆ.

ಬರೀ ಗೊಡ್ಡು ಉಪದೇಶಗಳ ರಾಜ್ಯಭಾರ ಈಗ. ಮಾತುಗಳಲ್ಲೇ ಆಕಾಶ ಕೆಳಗಿಳಿಸುವ ರಾಜಕಾರಣಿಗಳ ಮಾತುಗಳು ಈಗೀಗ ಬರೀ ಖಾಲಿಕೊಡದಂತೆ ಶಬ್ದ ಮಾತ್ರ ಮಾಡುತ್ತವೆ. ಅಸಲು ಮಾತು ಈ ಹಿಂದೆ ನೋವು ಮಾಗಿಸುವ ಶಕ್ತಿ ಹೊಂದಿತ್ತು. ಆದರೆ ಈಗಿನ ಮಾತುಗಳು ಬೇಗೆ ಹೆಚ್ಚಿಸುವುದು ಮಾತ್ರವಲ್ಲ, ಗಾಯಗಳಿಗೆ ಉಪ್ಪು ಸುರಿಯುವ ಹಾಗಿವೆ.

ಈಗಿನ ಅನೇಕ ಬಿಕ್ಕಟ್ಟುಗಳಿಗೆ ಅರ್ಥಪೂರ್ಣ ಮಾತುಗಳು ಪರಿಹಾರವಾಗಬಲ್ಲವೇನೋ. ಆದರೆ ಸಂವಹನಕ್ಕೆ ನೂರೆಂಟು ಸಾಧನಗಳಿದ್ದರೂ ಆ ಸಂವಹನದಲ್ಲಿ ಅಸಹನೀಯ ಮೌನವಿದೆ. ವಿಪರ್ಯಾಸವೆಂದರೆ  ಬಿಕ್ಕಟ್ಟುಗಳ ಶಮನ ಮಾಡುವುದು ಬಿಟ್ಟು ಹೊಸ ಸಮಸ್ಯೆಗಳಿಗೆ ಮಾತುಗಳು ದಾರಿಮಾಡಿಕೊಡುತ್ತಿವೆ.

ಮಾತುಗಳು ಇದ್ದರೂ ಅವು ಕೇವಲ ತೋರಿಕೆಯದಾಗಿವೆ ಹಾಗೂ ಈ ಮುಖಸ್ತುತಿ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿದೆ. ಮಾತುಗಳ ಹಿಂದೆ ಅಡಗಿದ್ದ ಕಳಕಳಿ, ಅಂತಃಕರಣ ಎಲ್ಲ ಮಾಯವಾಗಿ ಮಾತುಗಳು ಒಂದು ಬಗೆಯ ನಿರ್ವಾತ ಮಾತ್ರ ನಿರ್ಮಿಸಲು ಸಾಧ್ಯವಾಗಿದೆ. ಮಾತುಗಳ ಹುಡುಕುತ್ತ ಸಾಗಬೇಕಾಗಿದೆ...ಮಾತುಗಳ ಆಡುತ್ತ ದಾರಿ ಸವೆಸಬೇಕಾಗಿದೆ... ಮಾತೆಂಬ ಊರುಗೋಲು ಹಿಡಿದು ಹೊರಟು ಕತ್ತಲಿನ ದಾರಿ ದಾಟಬೇಕಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT