ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ದರ್ಶನ್ ಮನೆ ವಶ

Last Updated 22 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಡಳಿತವು ಶನಿವಾರ ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಮ್ಸ್‌ ಬಡಾವಣೆಯಲ್ಲಿರುವ ಕನ್ನಡ ಚಿತ್ರನಟ ದರ್ಶನ್‌ ಅವರ ಮನೆಯೂ ಸೇರಿದಂತೆ ಒಟ್ಟು ಎಂಟು ಮನೆಗಳನ್ನು ವಶಪಡಿಸಿಕೊಂಡಿದೆ.

ಇಲ್ಲಿ ಒಟ್ಟು 4 ಎಕರೆ ಜಾಗವನ್ನು ಜಿಲ್ಲಾಡಳಿತ ಸ್ವಾಧೀನಕ್ಕೆ ಪಡೆಯಿತು. ಇದರಲ್ಲಿ 15 ಖಾಲಿ ನಿವೇಶನಗಳು, ಬಿಬಿಎಂಪಿಗೆ ಸೇರಿದ ಎರಡು ಉದ್ಯಾನಗಳು, ಹಾಗೂ ಮೂರು ಮೂಲಸೌಕರ್ಯ ಅಭಿವೃದ್ಧಿ ನಿವೇಶನ, ಹಾಗೂ 20 ಗುಂಟೆ ಸರ್ಕಾರಿ ಜಾಗವೂ ಸೇರಿದೆ.

ದರ್ಶನ್‌ ಮನೆಯಲ್ಲಿದ್ದ ಅವರ ಬಂಧುವೊಬ್ಬರು, ‘ಮನೆಯನ್ನು ವಶಕ್ಕೆ ಪಡೆಯಬೇಡಿ, ನಮಗೂ ಹೈಕೋರ್ಟ್‌ನಿಂದ ತಡೆಯಾಜ್ಞೆ ಸಿಕ್ಕಿದೆ. ಆದರೆ ಪ್ರತಿ ಸಿಕ್ಕಿಲ್ಲ’ ಎಂದು ಮನವಿ ಮಾಡಿಕೊಂಡರು. ಅವರು ತಡೆಯಾಜ್ಞೆಯ ಪ್ರತಿ ಒದಗಿಸದ ಕಾರಣ ಮನೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಆವರಣ ಗೋಡೆಯ ಮೇಲೆ ಬರೆದಿದ್ದಾರೆ. ವಶಕ್ಕೆ ಪಡೆದ ಯಾವುದೇ ಮನೆಗಳಿಗೆ ಅಧಿಕಾರಿಗಳು ಬೀಗ ಹಾಕಿಲ್ಲ.

ದರ್ಶನ್‌ ಮನೆಯನ್ನು ವಶಕ್ಕೆ ಪಡೆಯುವಾಗ ಸ್ಥಳದಲ್ಲಿ ಸೇರಿದ್ದ ಅಭಿಮಾನಿಗಳು ಅಧಿಕಾರಿಗಳ ಜತೆ  ಸ್ವಲ್ಪ ಮಟ್ಟಿನ ಮಾತಿನ ಚಕಮಕಿ ನಡೆಸಿದರು. ಬಳಿಕ ಅಧಿಕಾರಿಗಳು ಕರ್ತವ್ಯಕ್ಕೆ ಅಡ್ಡಿಪಡಿಸದಂತೆ ಅವರ ಮನವೊಲಿಸಿದರು.

ಜಿಲ್ಲಾಡಳಿತ ಮನೆಯನ್ನು ವಶಕ್ಕೆ ಪಡೆಯುವಾಗ ದರ್ಶನ್‌ ಮನೆಯಲ್ಲೇ ಇದ್ದರು. ಆದರೆ ಮನೆಯಿಂದ ಯಾರೂ ಹೊರಗೆ ಬರಲಿಲ್ಲ ಎಂದು ತಿಳಿದು ಬಂದಿದೆ.
ಹಲಗೇವಡೇರಹಳ್ಳಿ ಗ್ರಾಮದ ಸರ್ವೇ ನಂಬರ್‌ 38ರಿಂದ 46ರ ನಡುವೆ ಹಾಗೂ ಸರ್ವೇ ನಂಬರ್‌ 51ರಿಂದ 56ರವರೆಗಿನ 7ಎಕರೆ 31 ಗುಂಟೆ ಜಾಗ ಸರ್ಕಾರಿ ಹದ್ದಿಗಿಡದ ಹಳ್ಳದ ಖರಾಬು ಜಾಗ.

ಇದನ್ನು ಐಡಿಯಲ್ ಹೋಮ್ಸ್‌ ಸಹಕಾರ ಸಂಘದವರು ಹಾಗೂ ಕೆಲವು ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಬಡಾವಣೆ ನಿರ್ಮಿಸಿದ್ದಾರೆ.  3 ಎಕರೆ 20 ಗುಂಟೆ ಜಾಗದಲ್ಲಿ ಒಟ್ಟು 32 ಖಾಲಿ ನಿವೇಶನಗಳಿವೆ. 1 ಎಕರೆ 38 ಗುಂಟೆ ಜಾಗದಲ್ಲಿ ಮನೆ ಹಾಗೂ ಕಟ್ಟಡಗಳು ನಿರ್ಮಾಣವಾಗಿವೆ.

22 ಗುಂಟೆ ಜಾಗದಲ್ಲಿ ಎಸ್‌.ಎಸ್‌. ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. 1 ಎಕರೆ 24 ಗುಂಟೆ ಜಾಗ ರಸ್ತೆಗೆ ಬಳಕೆ ಆಗಿದೆ. 07 ಗುಂಟೆ ಜಾಗದಲ್ಲಿ ಬಿಬಿಎಂಪಿ ವತಿಯಿಂದ ನೀರಿನ ಟ್ಯಾಂಕ್‌ ನಿರ್ಮಿಸಲಾಗಿದೆ ಎಂದು 2016ರ ಸೆಪ್ಟೆಂಬರ್‌ 08ರಂದು ಎಂದು ಭೂದಾಖಲೆಗಳ ಜಂಟಿ ಆಯುಕ್ತರು ಜಿಲ್ಲಾಡಳಿತಕ್ಕೆ ವರದಿಯನ್ನು  ಸಲ್ಲಿಸಿದ್ದರು. ಜಿಲ್ಲಾಡಳಿತವು ಈ ವರದಿಯನ್ನು ಉಲ್ಲೇಖಿಸಿ ಸರ್ಕಾರಿ ಜಮೀನನನ್ನು ವಶಕ್ಕೆ ಪಡೆಯುವ ಬಗ್ಗೆ 75ಕ್ಕೂ ಅಧಿಕ ಆಸ್ತಿ ಮಾಲೀಕರಿಗೆ  ಹದಿನೈದು ದಿನಗಳ ಹಿಂದೆ ನೋಟಿಸ್‌ ನೀಡಿತ್ತು.  ಎಸ್‌.ಎಸ್‌.ಆಸ್ಪತ್ರೆ ಹಾಗೂ ಇತರ 47 ಮನೆಗಳ ಮಾಲೀಕರು ಮನೆ ವಶಕ್ಕೆ ಪಡೆಯದಂತೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು.  ಹಾಗಾಗಿ ಆ ಮನೆಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿಲ್ಲ.

ನಾಲ್ಕು ಕಡೆ ಏಕಕಾಲದಲ್ಲಿ ಕಾರ್ಯಾಚರಣೆ

ಯಶವಂತಪುರ ಹೋಬಳಿ, ಜಾಲ ಹೋಬಳಿ, ಕೆ.ಆರ್‌.ಪುರ, ಕೆಂಗೇರಿ ಹೋಬಳಿ ಸೇರಿದಂತೆ  ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಏಕಕಾಲದಲ್ಲಿ ಸರ್ಕಾರಿ ಜಮೀನು ಒತ್ತುವರಿಯನ್ನು ಶನಿವಾರ  ತೆರವುಗೊಳಿಸಲಾಗಿದೆ. ಒಟ್ಟು 20 ಎಕರೆ 24 ಗುಂಟೆ ಜಿಲ್ಲಾಡಳಿತವು  ವಶಕ್ಕೆ ಪಡೆದಿದ್ದು, ಇದರ ಒಟ್ಟು ಮೌಲ್ಯ ₹ 543 ಕೋಟಿ ಎಂದು ಅಂದಾಜಿಸಲಾಗಿದೆ.

ಅಂಕಿಅಂಶ

20ಎಕರೆ  24 ಗುಂಟೆ- ಜಿಲ್ಲಾಡಳಿತವು ಶನಿವಾರ ತೆರವುಗೊಳಿಸಿದ ಜಾಗದ ಒಟ್ಟು ವಿಸ್ತೀರ್ಣ

₹543.00 ಕೋಟಿ- ತೆರವುಗೊಳಿಸಿದ ಜಾಗದ ಅಂದಾಜು ಮೌಲ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT