ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆತಾಯಿಗಳೆಂಬ ಅಪರಿಚಿತರು

Last Updated 23 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
–ಕಲ್ಗುಂಡಿ ನವೀನ್
 
**
ಕ್ಯಾಬಿನಿಂದ ಇಳಿದು ಬಂದ ತಾಯಿಯತ್ತ ಓಡಿ ಬರುವ ಮಗುವಿಗೆ ತಾಯಿಯ ‘ಡಿಡ್‍ ಯೂ ಫಿನಿಷ್ ಯುವರ್ ಹೋಮ್‌–ವರ್ಕ್’ ಎಂಬ ಮಾತು ಬರಸಿಡಿಲಿನಂತೆ ಬಡಿಯುತ್ತದೆ! ತಂದೆ ಅಥವಾ ತಾಯಿ ‘ನೀನು ಕೇಳ್‍ಕೇಳಿದ್ದೆಲ್ಲ ಕೊಡಿಸಿದೆ. ಫಸ್ಟ್ ಬರಕ್ಕೆ ಆಗ್ಲಿಲ್ಲ ನಿನ್ಕೈಲಿ’ ಎಂದರೆ ಮಗುವಿನಲ್ಲಿ ಅಪರಾಧಪ್ರಜ್ಞೆ ಬೆಳೆಯುತ್ತದೆ.
 
*
ದೇಶ ನೋಡು, ಇಲ್ಲ ಕೋಶ ಓದು ಎಂಬುದೊಂದು ಹಳೆಯ ನಾಣ್ನುಡಿ. ಇದರಿಂದ ಜಗತ್ತಿನ ಅನುಭವ ನಮಗೆ ದೊರೆಯುತ್ತದೆ. ಇಂದು ಶಾಲೆಗಳ ಪೋಷಕ-ವಿದ್ಯಾರ್ಥಿ ಸಭೆಗಳನ್ನು ನೋಡಿದರೆ ಯಾವ ದೇಶ–ಕೋಶದ ಅವಶ್ಯಕತೆಯೇ ಇರುವುದಿಲ್ಲ. ಪುಕ್ಕಟೆ ಲೋಕಾನುಭವ ದೊರೆಯುತ್ತದೆ! ಒಂದೊಂದು ಮಗುವಿನದು ಒಂದೊಂದು ಜಗತ್ತು, ಸಮಸ್ಯೆ.
 
ಹಾಗೆಯೇ, ಪೋಷಕರದ್ದೂ.  ಅಂಕಗಳಲ್ಲ, ಗುಣಮಟ್ಟ ಮುಖ್ಯ ಎಂದೆಲ್ಲ ಭಾಷಣ ಮಾಡುವವರೂ ಸೇರಿದಂತೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಆಡಳಿತ ಮಂಡಳಿಯವರಿಗೆ, ಶಿಕ್ಷಣ ಇಲಾಖೆಯವರಿಗೆ, ಮಂತ್ರಿಗಳಿಗೆ, ಸಮಾಜದಲ್ಲಿ ಎಲ್ಲರಿಗೂ ಅಂಕಗಳೇ ಮುಖ್ಯ, ಪೋಷಕ–ಶಿಕ್ಷಕ ಸಭೆಯ ನಂತರದ ಕೆಲವು ಸಂಭಾಷಣಾ ತುಣುಕುಗಳನ್ನು ನೋಡಿ:
 
‘…ನಾನು ಇಷ್ಟೆಲ್ಲ ದುಡಿಯುವುದು ನಿನಗೋಸ್ಕರ, ಕಣೆ. ನೀನುದ್ಧಾರ ಆಗ್ಲಿ ಅಂತ!’
‘ಸಾರ್ ನೀವು ಯೋಚಿಸ್ಬೇಡಿ. ಹೊಡೀರಿ.  ನಾನ್ ಕಂಪ್ಲೇಟ್ ಕೊಡಲ್ಲ. ಅವನು ಮತ್ತೆ ಹೀಗ್ಮಾಡಿದ್ರೆ ಮನೆಗೇ ಸೇರ್ಸಲ್ಲ. ಹೋಗ್ಲಿ ಎಲ್ ಹೋಗ್ತಾನೆ ನೋಡೋಣ?’
ಇತ್ಯಾದಿ ಇತ್ಯಾದಿ…
 
ಇವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇಲ್ಲಿ ಕೌನ್ಸೆಲಿಂಗ್ ಬೇಕಾಗಿರುವುದು ಪೋಷಕರಿಗೆ ಎಂಬುದು ಸ್ಪಷ್ಟವಾಗುತ್ತದೆ. ಇಲ್ಲಿ ಪೋಷಕರ ತಲೆಮಾರುಗಳ ಲೆಕ್ಕಾಚಾರ ಮಹತ್ವ ಪಡೆಯುತ್ತದೆ. ಮಾನಸಿಕವಾಗಿ ಹಳೆಯ ತಲೆಮಾರನ್ನು ಪ್ರತಿನಿಧಿಸುವ ಪೋಷಕರು ಮೇಲೆ ಹೇಳಿದಂತೆ ‘ಹೊಡೀರಿ ಮನೆ ಬಿಟ್ ಓಡಿಸ್ತಿನಿ’ ಎಂದೋ ‘ನಾನು ಬೀದಿ ದೀಪದ ಕೆಳಗೆ ಓದಿದೆ, ಇವನಿಗೇನು’ ಎನ್ನುತ್ತಾರೆ. ಮತ್ತೆ ಕೆಲವರು ‘ನಾನು ನಿನಗಾಗಿಯೇ ರಾತ್ರಿ ಪಾಳಿ ದುಡಿಯುವುದು’ ಎಂದೋ ‘ನಾನು ಇವ್ನ್ ವಯಸ್ನಲ್ಲಿ…’ ಎಂದೋ ವರಾತ ತೆಗೆಯುತ್ತಾರೆ.
 
ಇನ್ನು ಹೊಸ ಪೀಳಿಗೆಯ ಪೋಷಕರು - ಇವರಲ್ಲಿ ಬಹುತೇಕರು ಹೆಚ್ಚಿನವರು ವಿದ್ಯಾವಂತರು, ವೃತ್ತಪರ ಕೆಲಸಗಳಲ್ಲಿ ತೊಡಗಿರುವವರು - ಕಚೇರಿಯಲ್ಲಿ ಅನ್ವಯಿಸಬೇಕಾದ ಸಿದ್ಧಾಂತಗಳನ್ನು ತಮ್ಮ ಮಕ್ಕಳ ‘ವೈಫಲ್ಯ’ಕ್ಕೆ ಅನ್ವಯಿಸಿ ಹಾದಿ ತಪ್ಪುತ್ತಾರೆ. ಇಂಥವರು ಮಕ್ಕಳ ಅಂಕಪಟ್ಟಿ ಹಿಡಿದು ‘ನಾನು ಇಷ್ಟು ಖರ್ಚುಮಾಡಿದ್ದೇನೆ, ಪ್ರತಿಫಲ ಎಷ್ಟು?’ ಎಂದು ತೂಗಿ ನೋಡುವವರಾಗಿರುತ್ತಾರೆ. 
 
ಹೊಸ ಪೀಳಿಗೆಯ ಪೋಷಕರ ಬಹುದೊಡ್ಡ ಸಮಸ್ಯೆಯೆಂದರೆ – ಒತ್ತಡ ಹಾಗೂ ಸಮಯರಾಹಿತ್ಯ. ಪೋಷಕರಿಬ್ಬರೂ ಕೆಲಸಕ್ಕೆ ಹೋಗಲೇ ಬೇಕಾಗಿರುವುದು ಇಂದಿನ ಆರ್ಥಿಕ ಮತ್ತು ಸಾಮಾಜಿಕ ವಾಸ್ತವ ಮಾತ್ರವೇ ಅಲ್ಲ. ಜೊತೆಗೆ ಈ ಪೋಷಕರಿಗೂ ಅವರದ್ದೇ ಆದ  ‘ಕೆರಿಯರ್‍’ ಇರುತ್ತದೆ; ಅವರದ್ದೇ ಆದ ‘ಓದೂ’ ಸಹ ಇರುತ್ತದೆ.  ಇದರ ನೇರ ಫಲ, ಯಾವ ರೀತಿಯಲ್ಲಿಯೂ ಕಾರಣರಲ್ಲದ ಬಡಪಾಯಿ ಮಕ್ಕಳ ಮೆಲೆ ಉಂಟಾಗುತ್ತದೆ. ಮಕ್ಕಳಿಗೆ ಇಂದು ಅತ್ಯಂತ ಅಪರಿಚಿತರು ಎಂದರೆ ಅದು ತಂದೆ ತಾಯಿಯರು! ಇದು ಅರಗಿಸಿಕೊಳ್ಳಲಾರದ ಕಹಿಸತ್ಯ. 
 
ಇಂತಹ ವಿಷಮ ಸಂದರ್ಭದಲ್ಲಿ ಮಕ್ಕಳು ಯಶಸ್ಸು ಗಳಿಸಲು ತುಂಬ ಹೆಣಗಬೇಕಾಗುತ್ತದೆ. ಪರೀಕ್ಷೆಗಳಲ್ಲಿ ಯಶಸ್ಸಾದರೂ ಜೀವನಕೌಶಲದಿಂದ ವಂಚಿತವಾಗಿರುತ್ತಾರೆ. ಮುಂದೆ ಆ ಮಕ್ಕಳು ಆರ್ಥಿಕವಾಗಿ ಗೆದ್ದರೂ ಕೌಟುಂಬಿಕ ಜೀವನದಲ್ಲಿ, ಸಮಾಜದಲ್ಲಿ ಒಂದಾಗಿ ಬಾಳುವಲ್ಲಿ ವಿಫಲರಾಗುತ್ತಾರೆ. 
 
ಇಂತಹ ಸಂದರ್ಭಗಳಲ್ಲಿ ಸಿದ್ಧ ಪರಿಹಾರಗಳನ್ನು ತೆಗೆದುಕೊಳ್ಳುವುದಕ್ಕಿಂತ ಪೋಷಕರು ಸಮಸ್ಯೆಯನ್ನು ಗ್ರಹಿಸಿ ತಮ್ಮದೇ ಆದ ಪರಿಹಾರಗಳನ್ನು ಕಂಡುಕೊಳ್ಳುವುದು ಹೆಚ್ಚು ಪರಿಣಾಮಕಾರಿ. ಅದಕ್ಕೆ ವಾಸ್ತವದ ಅವಲೋಕನ ಅತ್ಯಾವಶ್ಯಕ. ಮೊದಲನೆಯದಾಗಿ ಎಲ್ಲ ವರ್ಗದ ಪೋಷಕರು ಅರ್ಥಮಾಡಿಕೊಳ್ಳಬೇಕಾಗಿರುವುದು ಅವರು (ಎಂದರೆ ಪೋಷಕರು) ಬೇರೆ ಬೇರೆ ಕಾಲಘಟ್ಟಗಳಲ್ಲಿ ಜೀವಿಸುತ್ತಿದ್ದಾರೆ ಎಂಬುದು.
 
ಇಲ್ಲಿ ತಲೆಮಾರುಗಳ ಅಂತರಕ್ಕೆ ಹೆಚ್ಚು ಕಾಲ ಬೇಕಿಲ್ಲ. ಇಷ್ಟು ಅರ್ಥ ಮಾಡಿಕೊಂಡರೂ ಪರಿಹಾರದ ದಾರಿ ಸುಲಭ. ಮೊದಲ ವರ್ಗದ ‘ನಿನಗಾಗಿ ನಾನು ಇಷ್ಟೆಲ್ಲ ದುಡಿಯುವುದು’ ಎನ್ನುವುದಾಗಲೀ, ‘ಇವ್ನ ವಯಸ್ಸಲ್ಲಿ ನಾನು…’ ಎನ್ನುವುದಾಗಲೀ ಮಕ್ಕಳಿಗೆ ಸಹಾಯಕವಾಗುವುದಿಲ್ಲ. ಜೊತೆಗೆ ‘ನನಗಿರುವ/ಇದ್ದ ಕಷ್ಟ ಇವನಿಗಿಲ್ಲ; ಹಾಗಾಗಿ ಅವನಿಗೆಲ್ಲ ಅತಿಸುಲಭ!’ ಎಂಬ ತೀರ್ಮಾನದಲ್ಲೇ ದೊಡ್ಡ ಐಬಿದೆ. ಈ ಪೋಷಕರು ಮತ್ತು ಮಕ್ಕಳು ಬೇರೆ ಬೇರೆ ಕಾಲಘಟ್ಟದಲ್ಲಿ ಜೀವಿಸುತ್ತಿದ್ದಾರೆ. ಅವರ ಮುಂದಿದ್ದ/ಇರುವ ವಾಸ್ತವಗಳು, ಆಕರ್ಷಣೆ ಮತ್ತು ಭವಿಷ್ಯ ಬೇರೆ ಬೇರೆ; ಹಾಗೆಯೇ ಮಕ್ಕಳ ಅಗತ್ಯಗಳೂ ಬೇರೆ ಬೇರೆ. 
 
ಇದೇ ಸಂದರ್ಭ, ನಮ್ಮ ದೇಶದಲ್ಲಿ ಆದಂತಹ ಕೌಟುಂಬಿಕ ಸ್ಥಿತ್ಯಂತರವನ್ನು ಗಮನಿಸಬೇಕು. ಮನೆ ತುಂಬ ಮಕ್ಕಳಿದ್ದ ಕಾಲದಿಂದ, ಎರಡು ಅಥವಾ ಮೂರು ಮಕ್ಕಳು ಇದರಿಂದ ಏಕೈಕ ವಂಶೋದ್ಧಾರಕ ಎಂಬ ಸ್ಥಿತಿಗೆ ಬಲುಬೇಗ ಬಂದು ತಲುಪಿದೆ ನಮ್ಮ ವಿದ್ಯಾವಂತಸಮಾಜ. ಮಕ್ಕಳಿಗೆ ಬೇಕಾಗಿದ್ದ ಮಾನಸಿಕ ನೆಮ್ಮದಿ, ಸಮಾಧಾನ, ಸಹಕಾರ, ಸಹಬಾಳ್ವೆಯ ಮನೋಧರ್ಮಗಳು ಅಣ್ಣ, ತಮ್ಮ, ಅಕ್ಕ, ತಂಗಿಯರಿಂದ ಸಿಗುತ್ತಿದ್ದುದು ಇಂದು ಆ ಪದಗಳು ನಿಘಂಟಿನ ಗೋರಿಗೆ ಇಳಿಯುತ್ತಿರುವ ಕಾಲಮಾನದಲ್ಲಿ ಸಾಧ್ಯವಿಲ್ಲ. ಜೊತೆಗೆ ತಂದೆ–ತಾಯಿಗೆ ಮಕ್ಕಳಿಗೆ ಸಮಯ ಕೊಡಲು ಬಿಡುವಿಲ್ಲ. ಇನ್ನು ಮಕ್ಕಳಿಗೆ ಮಾನಸಿಕ ನೆಮ್ಮದಿ ಸಿಗುವುದು ಹೇಗೆ? 
 
ಒಡಹುಟ್ಟಿದವರಿಲ್ಲದ, ತಂದೆತಾಯಿಗಳ ಒಡನಾಟವೂ ಕಡಿಮೆಯಾದ ಕಾಲಘಟ್ಟವಿದು. ಹಾಗಾಗಿ, ಯಾರೋ ಅಪರಿಚಿತ ತಲೆಯ ಮೇಲೆ ಕೈಯಿಟ್ಟು ಪ್ರೀತಿಯ ಮಾತಾಡಿದರೆ ಅವನೇ ಹೆಚ್ಚು ಆಪ್ತನಾಗಿಬಿಡುವ ಮುಂದೆ ಅನರ್ಥಗಳಿಗೆ ಎಡೆಯಾಗುವ ಸಾಧ್ಯತೆಗಳಿವೆ. ಎಂಬುದನ್ನು ತಂದೆ ತಾಯಿಗಳು ಅರ್ಥಮಾಡಿಕೊಳ್ಳಬೇಕು. ಹದಿಹರೆಯದ ಪ್ರೀತಿ-ಪ್ರಣಯಕ್ಕೂ ಇದು ದಾರಿಯಾಗಿಬಿಡುತ್ತದೆ. ಈ ಎಚ್ಚರ ತಂದೆ ತಾಯಿಗಳಲ್ಲಿರಬೇಕು.
 
ಪರಿಹಾರವೇನು?
ಇಂದು ಮಕ್ಕಳು ಇಷ್ಟು ಸಮಸ್ಯೆಗಳಿಂದ ಬಳಲುತ್ತಿರುವುದು ನಿಜವಾದರೂ ಅವಕ್ಕೆ ಬೇಕಾದ ಪ್ರೀತಿ, ಆಸರೆಗಳನ್ನು ಕೊಟ್ಟಲ್ಲಿ ಅವರು ಜಗತ್ತನ್ನು ಗೆಲ್ಲುತ್ತಾರೆ. ಆ ಕಾರ್ಯವನ್ನು ಪೋಷಕರು ಮಾಡಬೇಕಾಗಿದೆ. 
 
* ವಾರಕ್ಕೆ ಕನಿಷ್ಠ ಐದು ಘಂಟೆಗಳನ್ನು ಮಕ್ಕಳೊಂದಿಗೆ ಕಳೆಯುವಂತಾಗಬೇಕು. ಆ ಸಮಯದಲ್ಲಿ ಓದಿನ ಕುರಿತು ಹೆಚ್ಚು ಚರ್ಚಿಸಬಾರದು. ನನ್ನ ಮಕ್ಕಳೊಂದಿಗೆ ಸಂತೋಷದ ಕಾಲ ಕಳೆಯುತ್ತಿದ್ದೇನೆ ಎಂಬ ಭಾವವಷ್ಟೇ ಕೆಲಸ ಮಾಡಬೇಕು.
 
* ತಂದೆ ಅಥವಾ ತಾಯಿ ಮಗು ತನ್ನನ್ನು ಮುಟ್ಟುವುದು ಇಷ್ಟಪಡುತ್ತದೆಯೇ ಇಲ್ಲವೇ ಎಂಬುದನ್ನು ಪತ್ತೆಹಚ್ಚಿ ಅದರಂತೆ ಆಪ್ತವಾಗಿ ನಡೆದುಕೊಳ್ಳಬೇಕು. ಕೆಲವು ಮಕ್ಕಳು ಮುದ್ದಿಸುವುದನ್ನು, ಮುಟ್ಟುವುದನ್ನು ತುಂಬ ಇಷ್ಟಪಟ್ಟರೆ ಕೆಲವು ಮಕ್ಕಳಿಗೆ ಅದು ಇಷ್ಟವಾಗುವುದಿಲ್ಲ.
 
* ಮಕ್ಕಳಿಗೆ ಪೋಷಕರು ಎಷ್ಟು ಆಪ್ತವಾಗಬೇಕೆಂದರೆ ತನ್ನ ಸೋಲುಗಳನ್ನು ಗೆಲುವಿನಷ್ಟೇ ಸುಲಭವಾಗಿ ಮನೆಯಲ್ಲಿ ಹೇಳುವಂತಹ ವಾತಾವರಣವಿರಬೇಕು. ಸೋಲನ್ನು ನೋಡಿ ನಕ್ಕು ಮತ್ತೆ ಪ್ರಯತ್ನಿಸುವ ಛಲವನ್ನು ಇದು ಹುಟ್ಟುಹಾಕುತ್ತದೆ.
 
* ಎಲ್ಲರಿಗೂ ಒಂದೊಂದು ಸಾಮರ್ಥ್ಯವಿರುತ್ತದೆ ಎಂಬುದನ್ನು ಮನದಲ್ಲಿಡಿ. 
* ಅಪ್ಪ ಎದ್ದುಬಂದರೆ ಬೈಯ್ಯಲ್ಲಿಕ್ಕಷ್ಟೆ ಎಂಬಂತೆ ಎಂದೂ ಆಗಬಾರದು.
 
* ಮಕ್ಕಳೊಂದಿಗೆ ಕೆಲವು ಕಾಲ ಓದುವುದನ್ನು ರೂಢಿಸಿಕೊಳ್ಳಿ. ಮಕ್ಕಳ ಪುಸ್ತಕವನ್ನೂ ಓದಿ, ಅವರೊಂದಿಗೆ ನಿಮ್ಮ ಓದಿನ ಪುಸ್ತಕಗಳನ್ನೂ ಓದಿ. ಮಕ್ಕಳು ನಿಮ್ಮನ್ನು ಅನುಕರಿಸುತ್ತವೆ. 
 
* ಟಿವಿ ನೋಡುತ್ತ ಊಟಮಾಡುವುದನ್ನು, ಓದುವುದನ್ನು ನಿಷೇಧಿಸಿ. ಧಾರಾವಾಹಿ ನೋಡಬೇಡಿ.
*  ಮಕ್ಕಳ ಪುಸ್ತಕದಲ್ಲಿನ ಲೆಕ್ಕಗಳನ್ನು ಪ್ರಶ್ನೆಗಳನ್ನು ಉತ್ತರಿಸಲು ನೀವು ಪ್ರಯತ್ನಿಸಿ. ನೀವು ತಪ್ಪು ಮಾಡಿದಾಗ ಮಕ್ಕಳೊಂದಿಗೆ ಹೊಟ್ಟೆ ತುಂಬ ನಗಿ.
 
* ಮಕ್ಕಳೊಂದಿಗೆ ದಿನಪತ್ರಿಕೆ ಓದಿರಿ. ಮುಖ್ಯ ಎನಿಸಿದ್ದನ್ನು ಅವರಿಗೆ ವಿವರಿಸಿ.  ದಿನಪತ್ರಿಕೆಗಳ ಸಾಹಿತ್ಯ–ಮಕ್ಕಳ–ವಿಜ್ಞಾನ ಮುಂತಾದ ಪುರವಣಿಗಳನ್ನು ಮಕ್ಕಳೊಂದಿಗೆ ಓದಿ, ಚರ್ಚಿಸಿ.
 
* ಮೌಲ್ಯಯುತ ಪುಟ್ಟ ಪುಟ್ಟ  ಪುಸ್ತಕಗಳನ್ನು ಮಕ್ಕಳೊಂದಿಗೆ ಓದಿ. ಸಾಧಕರ ಜೀವನಚರಿತ್ರೆಗಳಂಥವು ತುಂಬ ಇಲ್ಲಿ ಸಹಾಯಕವಾಗುತ್ತವೆ. 
* ಯಾರನ್ನೂ ಮಕ್ಕಳ ಮುಂದೆ ಎಂದಿಗೂ ಹಿಯಾಳಿಸಬೇಡಿ. ಬದಲಿಗೆ ಅವರ ಗುಣಾವಗುಣಗಳನ್ನು ಚರ್ಚೆ ಮಾಡಿ. ಗುಣಾವಗುಣಗಳಿದ್ದರೂ ವ್ಯಕ್ತಿಗಳನ್ನು ಹೇಗೆ ಗೌರವಿಸಬೇಕು/ ಏಕೆ ಗೌರವಿಸಬೇಕು – ಎಂಬುದನ್ನು ತಿಳಿಯಹೇಳಿ.
 
*  ನಿಮ್ಮ ಜಗಳ ಮಕ್ಕಳ ಮುಂದೆ ಅಲ್ಲ. ನಮಗೆ (ಅಂದರೆ ತಂದೆ ತಾಯಿಗಳಿಗೆ) ಪರಸ್ಪರ ತುಂಬು ಗೌರವವಿದೆ, ಪ್ರೀತಿಯಿದೆ ಎಂಬುದು ಮಕ್ಕಳಿಗೆ ಗೊತ್ತಾಗುವಂತೆ ಪ್ರಯತ್ನಪೂರ್ವಕವಾಗಿ ನೋಡಿಕೊಳ್ಳಿ. 
 
* ನಮಗೆ ಮಾದರಿ ಅಂತರ್ಜಾಲ, ಧಾರಾವಾಹಿಗಳಲ್ಲ, ನಮ್ಮಪ್ಪ–ಅಮ್ಮ  – ಎಂಬ ಭಾವ ಮಕ್ಕಳಿಗೆ ದೃಢವಾಗುವಂತೆ ನಿಮ್ಮ ಸ್ವಭಾವ ರೂಢಿಸಿಕೊಳ್ಳಿ.
* ಭಾನುವಾರ ಕುಟುಂಬಕ್ಕೆ ಮೀಸಲು – ಎಂಬ ನಿಯಮ ಮಾಡಿಕೊಳ್ಳಿ. ಇದು ಕೆಲವು ಬಾರಿ ತಪ್ಪಿದರೂ ಪರವಾಗಿಲ್ಲ. ಆದರೆ ಸಾಧ್ಯವಾದಷ್ಟೂ ತಪ್ಪದಂತೆ ನೋಡಿಕೊಳ್ಳಿ
 
* ಕುಟುಂಬ ಸಮಾಜದ ಭಾಗವಾಗಿರುವುದು ಎಷ್ಟು ಮುಖ್ಯ ಎಂಬುದನ್ನು ನಿಮ್ಮ ಕ್ರಿಯೆಗಳಿಂದಲೇ ಮಕ್ಕಳಿಗೆ ಅರಿವಾಗುವಂತೆ ನಡೆದುಕೊಂಡು ಮಾದರಿಯಾಗಿ.
* ಇರುವುದರಲ್ಲಿಯೇ ತೃಪ್ತಿಯಿಂದಲೂ ಸಂತೋಷದಿಂದಲೂ ಬದುಕಲು ಸಾಧ್ಯ. ಜಗತ್ತಿನಲ್ಲಿ ಎಲ್ಲ ಶ್ರೇಣಿಯ ಜನರಿಗೂ  ಒಂದು ನೆಲೆ,  ಬೆಲೆ, ಪ್ರಾಮುಖ್ಯ, ಗೌರವಗಳು ಇರುತ್ತವೆ ಎಂಬುದನ್ನು ನೆನಪಿಡಿ.
 
* ಹಿರಿಯರಿರಲೀ ಕಿರಿಯರಿರಲೀ – ಪರಸ್ಪರ ಪ್ರೀತಿ, ಗೌರವ, ನಗು, ಪ್ರಾಮಾಣಿಕತೆ, ನಂಬಿಕೆ, ವಿಶ್ವಾಸಗಳು ಇರುವ ಕಡೆ ಯಶಸ್ಸು ಇದ್ದೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT