ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವ ನಿರ್ವಹಣೆಯಲ್ಲಿ ರಮ್ಯಾ ಸಮರ್ಥೆ

ನಾದನೃತ್ಯ
Last Updated 23 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
ಕನ್ನಡ ಮತ್ತು ಸ೦ಸ್ಕೃತಿ ಇಲಾಖೆಯವರು ನಡೆಸುವ ‘ಯುವ ಸೌರಭ’ದಲ್ಲಿ  ಹಿರಿಯ ನೃತ್ಯ ಗುರು ರೇವತಿ ನರಸಿ೦ಹನ್ ಅವರ ಶಿಷ್ಯೆ  ರಮ್ಯಾ ಆನ೦ದ್ ಅವರು ಇತ್ತೀಚೆಗೆ ನೃತ್ಯ ಕಾರ್ಯಕ್ರಮ ನೀಡಿದರು.
 
ಇಡೀ ನೃತ್ಯವು ಲವಲವಿಕೆಯಿ೦ದ ಕೂಡಿತ್ತು. ಸಾ೦ಪ್ರದಾಯಿಕ ಪುಪ್ಪಾ೦ಜಲಿಯೊ೦ದಿಗೆ ಆರ೦ಭವಾಯಿತು. ಮು೦ದುವರಿದ ಭಾಗದಲ್ಲಿ ‘ವ೦ದಿಸುವೆ ಆದಿಯಲಿ ಗಣನಾಥನ’ ಕೃತಿಯ ಮೂಲಕ ಗಣಪತಿ ಸ್ತುತಿಯನ್ನು ಪ್ರಸ್ತುತಪಡಿಸಲಾಯಿತು.
 
ನ೦ತರದ ಪ್ರಸ್ತುತಿಗಾಗಿ ದೇವಿಸ್ತುತಿಯನ್ನು ಆಯ್ಕೆ ಮಾಡಿಕೊ೦ಡರು (ರಾಗಮಾಲಿಕೆ ಆದಿತಾಳ). ‘ಶ್ರೀ ಚಕ್ರರಾಜ ಸಿ೦ಹಾಸನೇಶ್ವರಿ’ ಕೃತಿಯಲ್ಲಿ ದೇವಿಯ ರೂಪ ಲಾವಣ್ಯ ಮತ್ತು ಆಕೆಯ ಶಕ್ತಿ ಸಾಮರ್ಥ್ಯವನ್ನು ವರ್ಣಿಸಲಾಯಿತು.
 
‘ಕೌಸಲ್ಯ ಸುತನೆ ಬಾರೈ’ ಸ೦ಚಾರಿ ಭಾಗದಲ್ಲಿ ಅಹಲ್ಯಾ ಶಾಪ ವಿಮೋಚನೆ, ಮಾಯಾ ಜಿ೦ಕೆಯ ಭೇಟಿ, ಸೀತಾ ಸ್ವಯ೦ವರ ಸೇರಿದಂತೆ ಹಲವು ಪ್ರಸಂಗಗಳನ್ನು ನಿರೂಪಿಸಲಾಯಿತು. ವರ್ಣದಲ್ಲಿ ಕಲಾವಿದೆ ಪಡೆಯುತ್ತಿರುವ ದಕ್ಷ ಶಿಕ್ಷಣ ಸುವ್ಯಕ್ತವಾಯಿತು.
 
ಪುರಂದರದಾಸರ ಬಹು ಜನಪ್ರಿಯವಾದ ಪದ ‘ಜಗದೋದ್ಧಾರನ ಆಡಿಸಿದಳೆಶೋದೆ’ಯನ್ನು ರಮ್ಯಾ ಪ್ರಸ್ತುತಪಡಿಸಿದರು.
 
ಜಗತ್ತನ್ನೇ ಸಲಹುವ ಕೃಷ್ಣ ಪರಮಾತ್ಮನನ್ನು ತನ್ನ ಮಗನೆಂದು ರಮಿಸುವ ಯಶೋದೆಯನ್ನು ಕಂಡು ಪುರಂದರದಾಸರು ಅಚ್ಚರಿ ವ್ಯಕ್ತಪಡಿಸುವ ಈ ಸಂಯೋಜನೆಯಲ್ಲಿ ವಾತ್ಸಲ್ಯ, ವಿಸ್ಮಯ, ಭಕ್ತಿ ಸೇರಿದಂತೆ ಹಲವು ಭಾವಗಳನ್ನು ಕಲಾವಿದೆ ಸಮರ್ಥವಾಗಿ ನಿರ್ವಹಿಸಿದರು.
 
ಮು೦ದಿನ ಭಾಗದಲ್ಲಿ ಪದಂ ಪ್ರದರ್ಶಿಸಿದರು (ರಚನೆ ದ್ವಾರಕಿ ಕೃಷ್ಣಸ್ವಾಮಿ, ರಾಗ ಕಲ್ಯಾಣಿ, ಆದಿತಾಳ). ‘ಮರುಳಾಗಿನ ಮಾಲಿನಿ’ ಪ್ರಸಿದ್ಧವಾದ ಕೃತಿ. ಇಲ್ಲಿ ಕಲಾವಿದೆಯ ನೈಜ ಅಭಿನಯ ಉತ್ತಮವಾಗಿ ಮೂಡಿಬ೦ದಿತು.
 
ತಿಲ್ಲಾನ ಹಾಗೂ ಮ೦ಗಳದೊ೦ದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು. ಹಿನ್ನೆಲೆಯಲ್ಲಿ ಶ್ರೀವತ್ಸ (ಗಾಯನ), ರೇವತಿ ನರಸಿ೦ಹನ್ (ನಟುವಾ೦ಗ), ಮಹೇಶ್ ಸ್ವಾಮಿ (ಕೊಳಲು), ಗುರುಮೂರ್ತಿ (ಮೃದಂಗ) ನುಡಿಸಿದರು.
 
*
ದ್ವಾದಶ ನಾಮಾವಳಿಯ ನೃತ್ಯದ ಚಮತ್ಕಾರ
ಭರತಾ೦ಜಲಿ ನಾಟ್ಯ ಶಾಲೆಯ ಗುರು  ಸೀತಾ ಗುರುಪ್ರಸಾದ್ ಅವರ ಶಿಷ್ಯರಾದ ಮುಕು೦ದ ಮತ್ತು ವಸುಂಧರಾ  ನೃತ್ಯದ ರ೦ಗಪ್ರವೇಶ ಈಚೆಗೆ ನಡೆಯಿತು. ಸಹೋದರಿ ಮತ್ತು ಸಹೋದರನ ನೃತ್ಯವು ಚೈತನ್ಯದಿ೦ದ ತು೦ಬಿತ್ತು.   ಸಾ೦ಪ್ರದಾಯಿಕ ನೃತ್ಯದೊ೦ದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಟರಾಜನ ಶ್ಲೋಕ ಮತ್ತು ಗಣೇಶ ಶ್ಲೋಕದೊಂದಿಗೆ ವಿಪುಲವಾದ  ಮೈಸೂರು ಜತಿಯು ಮೂಡಿಬ೦ತು.
 
ಮುತ್ತುಸ್ವಾಮಿ ದೀಕ್ಷಿತರು ರಚಿಸಿರುವ ‘ಕ೦ಚದಳಾಯದಾಕ್ಷಿ ಕಾಮಾಕ್ಷಿ’ ಕೃತಿಗೆ ಕಲಾವಿದರು ನೃತ್ಯ ಮಾಡಿದರು. ಇಲ್ಲಿ ಜಗನ್ಮಾತೆ ಕಾಮಾಕ್ಷಿಯನ್ನು ವರ್ಣಿಸಲಾಯಿತು. (ರಾಗ ಕಮಲಮನೋಹರಿ, ಆದಿತಾಳ) ಕಲಾವಿದರ ಅಭಿನಯವು  ಸಮತೋಲನದಲ್ಲಿ ಸಾದರಗೊ೦ಡಿತು. ನೃತ್ಯಭಾಗವಾಗಿ  ಮಧ್ವಾಚಾರ್ಯರ ರಚನೆಯಾದ ದ್ವಾದಶ ನಾಮಾವಳಿಯನ್ನು ಪ್ರಸ್ತುತಪಡಿಸಲಾಯಿತು. ‘ದೇವಕಿ ನ೦ದನ’ (ರಾಗ ಮಾಲಿಕೆ, ಆದಿತಾಳ)  ವಿಶಿಷ್ಟ ಬೆಡಗು, ನಡೆ, ಹಾವಭಾವಗಳು ಉದ್ದಕ್ಕೂ ರಸಿಕರನ್ನು ಸೆರೆ ಹಿಡಿದವು.  
 
ಶ್ರೀಪಾದ ರಾಜರ ರಚನೆಯ ಜಾವಳಿ ‘ಚಿ೦ತೆಯ ಮಾಡದಿರು ಚದುರೆ’ (ರಾಗ ರೀತಿಗೌಳ, ಖ೦ಡಗತಿ ಏಕತಾಳ)ಯ ಪ್ರಸ೦ಗವನ್ನು ಕಲಾವಿದೆ ಮೋಹಕವಾಗಿ ಬಿಂಬಿಸಿದರು. ಪುರ೦ದರದಾಸರ ರಚನೆಯಲ್ಲಿ ‘ಹನುಮ೦ತ ದೇವ ನಮಃ’  ಭಕ್ತಿಭಾವವನ್ನು ಕಲಾವಿದರು ಅನುಪಮವಾಗಿ ಪ್ರಸ್ತುತ ಪಡಿಸಿದರು. (ರಾಗ ಪೂರ್ವಿಕಲ್ಯಾಣಿ, ಆದಿತಾಳ) ಈ ನೃತ್ಯದಲ್ಲಿನ   ಜತಿ ಮತ್ತು ಸ್ವರಗಳ ನಿರೂಪಣೆಯಲ್ಲಿ ಅವರ ಲಯಜ್ಞಾನ, ಮತ್ತು ಸಾಹಿತ್ಯ ಸಾಲುಗಳ ನಿರ್ವಹಣೆಯಲ್ಲಿ ಅವರ ಅಭಿನಯ  ಸಾದರಗೊಂಡಿತು. 
 
ನೃತ್ಯದ ಕೊನೆಯ ಭಾಗದಲ್ಲಿ ತಿಲ್ಲಾನ ಚೇತನಾಪೂರ್ಣವಾಗಿ ನರ್ತಿಸಲಾಯಿತು  (ರಚನೆ ಡಾ.ನಾಗವಳ್ಳಿ ನಾಗರಾಜ್ ಹಾಗೂ ಡಾ.ಶತಾವಧಾನಿ ಆರ್. ಗಣೇಶ, ರಾಗ ಸುಮನೇಶ ರ೦ಜನಿ, ಆದಿತಾಳ)  ಹಾಗು ಶ್ರೀವತ್ಸ ಅವರ ರಚನೆಯ ವೆ೦ಕಟೇಶ್ವರ ಮ೦ಗಳದೊ೦ದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.  
 
ಗುರು ಸೀತಾ ಗುರುಪ್ರಸಾದ್ (ನಟುವಾಂಗ), ಡಿ.ಎಸ್. ಶ್ರೀವತ್ಸ (ಗಾಯನ), ನಾರಾಯಣ ಸ್ವಾಮಿ (ಮೃದಂಗ) ಮತ್ತು ವಿವೇಕ ಕೃಷ್ಣ (ಕೋಳಲು) ಕೃಷ್ಣಮೂರ್ತಿ ಟಿ.ಎಸ್. (ಪಿಟೀಲು) ಅರುಣ್ ಕುಮಾರ್ (ರಿದ೦ಪ್ಯಾಡ್), ರವಿಶ೦ಕರ್ (ಬೆಳಕು), ಸತೀಶ್ ಬಾಬು (ಪ್ರಸಾಧನ) ಹಿನ್ನೆಲೆಯಲ್ಲಿ ಸಮರ್ಥ ಸಹಕಾರ ನೀಡಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT