ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಸ್ನೇಹಿ ಜೈವಿಕ ಶಿಲೀಂಧ್ರನಾಶಕ

Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
-ಎಂ. ವೆಂಕಟೇಶ
*
ಜಾಗತಿಕ ಮಟ್ಟದಲ್ಲಿ ಇಂದು ನೈಸರ್ಗಿಕವಾಗಿ ಬೆಳೆದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ತೀವ್ರವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ, ಜೈವಿಕ ವಿಧಾನಗಳನ್ನು ಕ್ರಮಬದ್ಧವಾಗಿ ಅಳವಡಿಸಿ ರೋಗ ನಿರ್ವಹಣೆ ಮಾಡಿ ಬೆಳೆ ಬೆಳೆಯುವುದು ಅನಿವಾರ್ಯವೆನಿಸಿದೆ. ಈ ದಿಶೆಯಲ್ಲಿ ನೋಡಿದಾಗ ಟ್ರೈಕೋಡರ್ಮಾ ಶಿಲೀಂಧ್ರ ಸಾಮಾನ್ಯವಾಗಿ ಎಲ್ಲಾ ಪ್ರದೇಶಗಳ ಮಣ್ಣಿನಲ್ಲಿ ಬದುಕುತ್ತಿದ್ದು, ಇದು ಪರಿಸರ ಸ್ನೇಹಿ ಜೈವಿಕ ಶಿಲೀಂಧ್ರನಾಶಕವೆಂದು ಎನಿಸಿಕೊಂಡಿದೆ.
 
ಟ್ರೈಕೋಡರ್ಮಾದ ಬಳಕೆಯಿಂದಾಗಿ ಅತ್ಯಂತ ಅಪಾಯಕಾರಿ ರೋಗಗಳನ್ನುಂಟು ಮಾಡುವ, ಮಣ್ಣಿನಲ್ಲಿ ವಾಸಿಸುವ ಮತ್ತು ಮಣ್ಣಿನಿಂದ ಹರಡುವ ಸ್ಕ್ಲಿರೋಷಿಯಂ, ರೈಜೋಕ್ಟೋನಿಯಾ, ಪಿಥಿಯಂ, ಫೈಟೋಪ್ತೊರಾ, ಪ್ಯುಜೇರಿಯಂ, ಮ್ಯಾಕ್ರೊಪೋಮಿನಾ ಮುಂತಾದ ಬೇರು ಕೊಳೆರೋಗ, ಬಾಡು/ಸೊರಗು ರೋಗಗಳನ್ನುಂಟು ಮಾಡುವ ಶಿಲೀಂಧ್ರಗಳನ್ನು ನಿರ್ವಹಣೆ ಮಾಡಬಹುದು. ಟ್ರೈಕೋಡರ್ಮಾದಲ್ಲಿ ಪ್ರಮುಖವಾಗಿ ಟ್ರೈಕೋಡರ್ಮಾ ಹಾರ್ಜಿಯಾನಂ ಮತ್ತು ಟ್ರೈಕೋಡರ್ಮಾ ವಿರಡೆ ಪ್ರಮುಖ ಜೈವಿಕ ಶಿಲೀಂಧ್ರನಾಶಕಗಳು.
 
ಸುಡೋಮೊನಾಸ್ ಬಳಕೆಯಿಂದ ಅತ್ಯಂತ ಅಪಾಯಕಾರಿ ರೋಗಗಳನ್ನುಂಟು ಮಾಡುವ ಮಣ್ಣಿನಲ್ಲಿ ವಾಸಿಸುವ ಮತ್ತು ಮಣ್ಣಿನಿಂದ ಹರಡುವ ಗಾಮಿನೊಮೈಸಿಸ್, ಪಿರಿಕ್ಯುಲೇರಿಯಾ, ಜಾಂತೊಮೊನಾಸ್, ಎರ್ಪಿನಿಯಾ ಮತ್ತು ಕೊಲೆಟೋಟ್ರೈಕಂ ಮುಂತಾದ ಸಿ.ಡಿ/ಸೊರಗುರೋಗ, ಬೇರುಕೊಳೆರೋಗ, ಬೆಂಕಿರೋಗ, ಎಲೆಅಂಗಮಾರಿರೋಗ, ದುಂಡಾಣು ಎಲೆ ಅಂಗಮಾರಿರೋಗ, ಕೊಳೆರೋಗ, ಹಣ್ಣುಕೊಳೆ ಮತ್ತು ಚಿಬ್ಬು ರೋಗಗಳನ್ನುಂಟು ಮಾಡುವ ಶಿಲೀಂಧ್ರಗಳು ಮತ್ತು ದಂಡಾಣುಗಳನ್ನು ನಿರ್ವಹಣೆ ಮಾಡುತ್ತದೆ. ಭಾರತದಲ್ಲಿ ಸುಡೋಮೊನಾಸ್ ದಂಡಾಣು ಪ್ರಭೇದಗಳಾದ ಪಿ.ಎಫ್-1, ಪಿ.ಎಫ್-2 ಮತ್ತು ಪಿ.ಎಫ್-9 ಎಂಬ ವಾಣಿಜ್ಯ ಹೆಸರುಗಳಲ್ಲಿ ಲಭ್ಯವಿವೆ.
 
ಟೈಕೋಡರ್ಮಾ ಕಾರ್ಯ ಹೀಗೆ...
ಟೈಕೋಡರ್ಮಾ, ಬೇರುಗಳ ಸಮೀಪದಲ್ಲಿ ಬೆಳೆದು ಬೇರಿನ ಸುತ್ತಲೂ ಅತ್ಯಂತ ಪ್ರಬಲ ಕವಚವನ್ನು ನಿರ್ಮಿಸಿ ಹಾನಿಕಾರಕ ಶಿಲೀಂಧ್ರಗಳಿಂದ ಬೇರನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ. ರೋಗಕಾರಕ ಶಿಲೀಂಧ್ರಗಳ ಮೇಲೆ ಪರಾವಲಂಬಿಯಾಗಿ ಬೆಳೆಯುವ ಇವು, ಅವುಗಳ ಸಂಖ್ಯೆ ಮತ್ತು ಸಂತಾನೋತ್ಪತ್ತಿಯನ್ನು ಕಡಿಮೆ ಮಾಡುತ್ತದೆ.
 
ಮಣ್ಣಿನಲ್ಲಿ ರೋಗನಿರೋಧಕ ವಸ್ತುಗಳಾದ ಡರ್ಮಿನ್, ವಿಂಡಿನ್, ಗ್ಲೈಯೋಟಾಕ್ಸಿನ್, ಟ್ರೈಕೋಡರ್ಮಿನ್, ಅಸಿಟ್ಡಾಲಿಹೈಡ್ ಮತ್ತು ಅನೇಕ ಕಣ್ವಗಳನ್ನು ಬಿಡುಗಡೆ ಮಾಡಿ, ಬೀಜ ಮತ್ತು ಮಣ್ಣಿನಿಂದ ಹರಡುವ ಅನೇಕ ರೋಗಾಣುಗಳನ್ನು ನಿರ್ವಹಣೆ ಮಾಡುವ ಗುಣವನ್ನು ಹೊಂದಿದೆ. 
 
ಇಷ್ಟೇ ಅಲ್ಲದೇ, ಇತರೆ ಶಿಲೀಂಧ್ರಗಳಿಗಿಂತ ವೇಗವಾಗಿ ಬೆಳೆದು ಅವುಗಳಿಗೆ ಆಹಾರ ಮತ್ತು ಸ್ಥಳ ಸಿಗದ ಹಾಗೆ ಮಾಡಿ ರೋಗಗಳನ್ನು ನಿಯಂತ್ರಿಸುತ್ತದೆ. ಅಲ್ಪ ಪ್ರಮಾಣದಲ್ಲಿ ರೋಗಕಾರಕ ದುಂಡಾಣು ಹಾಗೂ ಜಂತುಗಳನ್ನು ನಿಯಂತ್ರಿಸುತ್ತದೆ.
 
ಶಿಲೀಂಧ್ರನಾಶಕಗಳಿಂದಾಗುವ ಲಾಭಗಳು
* ವಾತಾವರಣದಲ್ಲಿ ಯಾವುದೇ ರೀತಿಯ ಮಾಲಿನ್ಯ ಆಗುವುದಿಲ್ಲ.
 
* ಉಪಯುಕ್ತವಾದ ಉಳಿದ ಜೀವಿಗಳ ಮೇಲೆ ಯಾವುದೇ ತರಹದ ಹಾನಿಕಾರಕ ಕೆಲಸಗಳನ್ನು ಮಾಡುವುದಿಲ್ಲ.
 
* ಅತಿ ಕಡಿಮೆ ಖರ್ಚಿನಲ್ಲಿ ರೋಗ ನಿಯಂತ್ರಣ ಮಾಡಬಹುದು.
 
* ಸಾವಯವ ಪದಾರ್ಥ ಹಾಗೂ ತೇವಾಂಶ ಇದ್ದಲ್ಲಿ ಇದು ತಾವಾಗಿಯೇ ಅಭಿವೃದ್ಧಿ ಹೊಂದುತ್ತವೆ.
 
* ಜೈವಿಕ ಸಮತೋಲನ ಕಾಪಾಡಲು ಸಹಕಾರಿ.
 
ಉಪಯೋಗಿಸುವ ವಿಧಾನ 
* ಬೀಜೋಪಚಾರ: ಸಾಮಾನ್ಯವಾಗಿ ಬೀಜೋಪಚಾರಕ್ಕೆ ಟಾಲ್ಕ್ ಪುಡಿ ಆಧಾರಿತ ಜೈವಿಕ ಶಿಲೀಂಧ್ರನಾಶಕಗಳನ್ನು ಬಳಸಬೇಕು. ಉದಾ: ಟೊಮೆಟೊ, ಕಾಳುಮೆಣಸು, ಬಳ್ಳಿಕಡಲೆ ಮತ್ತು ತೊಗರಿ (ಸೊರಗುರೋಗ), ಹತ್ತಿ (ಬೇರು ಕೊಳೆ ರೋಗ), ಶೇಂಗಾ ಮತ್ತು ಗೋಧಿ (ಬುಡ ಕೊಳೆರೋಗ), ಸೋಯಾಅವರೆ, ಜೋಳ (ಬಾಡುರೋಗ ಮತ್ತು ಬುಡಕೊಳೆ ರೋಗ) ಹಾಗೂ ಆಲೂಗಡ್ಡೆ (ಸೊರಗು ಮತ್ತು ಕೊಳೆ ರೋಗ) ಬೆಳೆಗಳಲ್ಲಿ ಪ್ರತಿ ಕಿಲೋ ಗ್ರಾಂ ಬೀಜಕ್ಕೆ 4-10 ಗ್ರಾಂ ನಂತೆ ಬಳಕೆ (ಗಾತ್ರ ಆಧರಿಸಿ ಪ್ರಮಾಣ ನಿರ್ಧಾರ) ಮಾಡಿದರೆ ಒಳ್ಳೆಯದು.
 
* ಸಸಿಗಳ ಬೇರನ್ನು ಅದ್ದುವುದು/ಉಪಚರಿಸುವುದು: ಪ್ಲಾಸ್ಟಿಕ್ ಟ್ರೇಗಳಲ್ಲಿ ಬೆಳೆಸಿದ ಯಾವುದೇ ತೋಟಗಾರಿಕೆ ಬೆಳೆಗಳ (ತರಕಾರಿ, ಹಣ್ಣು, ಹೂವು, ಔಷಧಿ, ಸುಗಂಧ ದ್ರವ್ಯ ಇತ್ಯಾದಿ) ಸಸಿಗಳ ಬೇರನ್ನು ನಾಟಿಗೆ ಮುನ್ನ ಶಿಲೀಂಧ್ರನಾಶಕಗಳಿಂದ ತಯಾರಿಸಿದ ದ್ರಾವಣ/ಬಗ್ಗಡದಲ್ಲಿ 10–15 ನಿಮಿಷಗಳ ಕಾಲ ಮುಳುಗಿಸಿ/ಅದ್ದಿ ತೆಗೆದು/ಉಪಚರಿಸಿ, ನಂತರ ನಾಟಿಗೆ ಬಳಸುವುದು. ಇದಕ್ಕಾಗಿ ಪ್ರತಿ ಲೀಟರ್ ನೀರಿಗೆ 10 ಗ್ರಾಂ ಜೈವಿಕ ಶಿಲೀಂಧ್ರನಾಶಕ(ಗಳ) ಪುಡಿ ಬಳಸುವುದು ಸೂಕ್ತ.
 
* ಮಣ್ಣಿಗೆ ಉಪಚಾರ: ಚೆನ್ನಾಗಿ ಕಳಿತ ಪ್ರತಿ ಟನ್ ಕೊಟ್ಟಿಗೆ ಗೊಬ್ಬರಕ್ಕೆ ಟ್ರೈಕೋಡರ್ಮಾ ಮತ್ತು ಸುಡೋಮೊನಸ್ ಬೆರೆಸಿ (ಎರಡು ಜೈವಿಕ ಶಿಲೀಂಧ್ರನಾಶಕಗಳನ್ನು 1 ರಿಂದ 5 ಕೆ.ಜಿ. ವರೆಗೆ ಬಳಕೆ ಮಾಡಬಹುದು), ಬೆಳೆ ಬಿತ್ತುವ ಮುನ್ನ ಮಣ್ಣಿಗೆ ಸೇರಿಸುವುದು, ಇಲ್ಲವೇ ಮೇಲಿನ ಮಿಶ್ರಣವನ್ನು 8–10 ದಿನ ಚೆನ್ನಾಗಿ ಗಾಳಿಯಾಡುವ ನೆರಳಿರುವ ಸ್ಥಳದಲ್ಲಿ ಪರಿಪಾಕಿಸಿ ನಂತರ ಬಿತ್ತನೆಗೆ ಮುನ್ನ/ ಕೆಲವು ತೋಟಗಾರಿಕಾ ಬೆಳೆಗಳ ಬುಡಕ್ಕೆ ಸಾಲುಗಳಲ್ಲಿ ಹಾಕಿ ಮಣ್ಣು ಒತ್ತರಿಸುವುದು (ಮುರಿ ಮಾಡುವುದು).
 
ಮೇಲೆ ತಿಳಿಸಿದ ಹಾಗೆಯೇ ಇತರೆ ಸಾವಯವ ವಸ್ತುಗಳಾದ ವರ್ಮಿಕ್ಯೂಲೈಟ್, ತೆಂಗಿನ ನಾರಿನ ಪುಡಿ ಗೊಬ್ಬರ, ಎರೆಗೊಬ್ಬರ, ಎಲೆಗೊಬ್ಬರ ಹಾಗೂ ಜಿಪ್ಸಂ ಜೊತೆಗೆ ಸೇರಿಸಿ ಮಣ್ಣಿಗೆ ಹಾಗೂ ಗಿಡಗಳ ಬುಡಕ್ಕೆ ಹಾಕುವುದು ಉತ್ತಮ. ಇತರೇ ಜೈವಿಕ ಗೊಬ್ಬರಗಳಾದ ರೈಜೋಬಿಯಂ, ಅಜೋಸ್ಪಿರಿಲಂ, ಅಜಟೋಬ್ಯಾಕ್ಟರ್, ಬ್ರ್ಯಾಡಿರೈಜೊಬಿಯಂ ಹಾಗೂ ರಂಜಕ ಕರಗಿಸುವ ಬ್ಯಾಕ್ಟೀರಿಯಾಗಳ ಜೊತೆಗೆ ಬೆರೆಸಿ ಉಪಯೋಗಿಸಬಹುದು. ಇದರಿಂದ ಯಾವುದೇ ತರಹದ ಹಾನಿ ಕಂಡು ಬಂದಿಲ್ಲ.
 
* ಸಿಂಪರಣೆ: ಪ್ರತಿ ಲೀಟರ್ ನೀರಿಗೆ 10 ಗ್ರಾಂ ಜೈವಿಕ ಶಿಲೀಂಧ್ರನಾಶಕ ಬೆರೆಸಿ ಸಸ್ಯಗಳ ಎಲೆಗಳ ಮೇಲೆ ತಂಪಾದ ಸಮಯದಲ್ಲಿ ಸಿಂಪಡಿಸುವುದು. ಸಿಂಪರಣೆಗೆ ಉಪಯೋಗಿಸುವಾಗ ಜೈವಿಕ ನಾಶಕವು 2/10–6 (ಸಿ.ಎಫ್.ಯು/ಗ್ರಾಂ) ಇರುವುದನ್ನು ಮಾತ್ರ ಉಪಯೋಗಿಸಬೇಕು.
 
* ದ್ರವರೂಪದಲ್ಲಿ ಬಳಕೆ: ಇತ್ತೀಚಿನ ದಿನಗಳಲ್ಲಿ ದ್ರವರೂಪದಲ್ಲೂ ಲಭ್ಯವಿದ್ದು, ಬೀಜೋಪಚಾರ, ಸಸಿಗಳ ಬೇರು ಅದ್ದಲು ಹಾಗೂ ಸಿಂಪರಣೆಗೂ ಬಳಸಬಹುದಾಗಿದೆ. 
 
***
ಮುಂಜಾಗ್ರತಾ ಕ್ರಮಗಳು
* ಬಳಸುವ ಜೈವಿಕ ಶಿಲೀಂಧ್ರನಾಶಕಗಳಲ್ಲಿ ಸಿ.ಎಫ್.ಯು 2/10–6 ಇರಲೇಬೇಕು.

* ಜೈವಿಕ ಶಿಲೀಂಧ್ರನಾಶಕಗಳನ್ನು ಬಳಸುವಾಗ ಮಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಪದಾರ್ಥಗಳಾದ ಕೊಟ್ಟಿಗೆ ಗೊಬ್ಬರ/ ಬೇವಿನ ಹಿಂಡಿ/ ಕಾಂಪೋಸ್ಟ್/ಎರೆಹುಳು ಗೊಬ್ಬರ ಇರುವಂತೆ ನೋಡಿಕೊಳ್ಳುವುದರಿಂದ ಗರಿಷ್ಠ ಹತೋಟಿ ಸಾಧ್ಯವಿದೆ.

* ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಕಾಪಾಡುವುದರಿಂದ ಜೈವಿಕ ಕ್ರಿಯೆ ಉತ್ತಮಗೊಳ್ಳುವುದು.

* ಬೀಜೋಪಚಾರ ಮಾಡುವಾಗ ರಾಸಾಯನಿಕ, ಶಿಲೀಂಧ್ರನಾಶಕಗಳ ಜೊತೆಗೆ ಬಳಸದೇ ಇರುವುದು ಉತ್ತಮ.

* ಬೀಜೋಪಚಾರ ಮಾಡಿದ ಬೀಜಗಳನ್ನು ನೆರಳಿನಲ್ಲಿ ಒಣಗಿಸಿ ಬಿತ್ತುವುದರಿಂದ ಉತ್ತಮ ರೋಗರಹಿತ ಮೊಳಕೆಗಳನ್ನು ಕಾಣಬಹುದು.

* ಜೈವಿಕ ಶಿಲೀಂಧ್ರನಾಶಕಗಳನ್ನು ಶೇಖರಣೆ ಮಾಡುವಾಗ ಯಾವುದೇ ರಾಸಾಯನಿಕ ಗೊಬ್ಬರ/ ಕಳೆನಾಶಕ/ಕೀಟನಾಶಕಗಳೊಂದಿಗೆ ಎಂದೂ ಸೇರಿಸಬಾರದು.

*ಜೈವಿಕ ಶಿಲೀಂಧ್ರನಾಶಕದ ಪ್ಯಾಕೆಟನ್ನು ತಂಪಾದ ಹಾಗೂ ಒಣ ಪ್ರದೇಶದಲ್ಲಿಡಬೇಕು.

* ಜೈವಿಕ ಶಿಲೀಂಧ್ರನಾಶಕಗಳನ್ನು ಉತ್ಪಾದನೆ ಮಾಡಿದ 6 ತಿಂಗಳೊಳಗಾಗಿ ಉಪಯೋಗಿಸಿ­ದರೆ ಹೆಚ್ಚಿನ ಲಾಭವಾಗುವುದು.
 
**
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448755132
ಲೇಖಕರು ವಿಷಯ ತಜ್ಞರು (ತೋಟಗಾರಿಕೆ), ಕೆ.ವಿ.ಕೆ, ವಿ.ಸಿ.ಫಾರಂ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT