ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯಲ್ಲಿದೆಯೇ ಸಪ್ಪ ಕಂಬಳಿ ಕಾಲ!

Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
ಮಳೆಗಾಲ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಳ್ಳುವ ಸಮಯ.  ಕೃಷಿಕರು, ಕೃಷಿ ಭೂಮಿಯಲ್ಲಿ ದುಡಿಯುವ ಕಾರ್ಮಿಕರು ಮೈಚಳಿ ಬಿಟ್ಟು ಕೆಲಸಕ್ಕೆ ಸಜ್ಜಾಗಲೇಬೇಕು. ಈ ಕಾಲದಲ್ಲಿ ಮಳೆಯಿಂದ ತಪ್ಪಿಸಿಕೊಳ್ಳಲು ಸಪ್ಪಕಂಬಳಿ ಹೊದ್ದು ಹೊರಡಲೇಬೇಕು. 
 
ಆದರೆ ಈಗೀಗ ಈ ಸಪ್ಪ ಕಂಬಳಿಗಳ ಸಪ್ಪಳ ಕಡಿಮೆಯಾಗಿ ಹೋಗಿದೆ. ಪ್ಲಾಸ್ಟಿಕ್ ಕೊಪ್ಪೆ, ರೇನ್‌ಕೋಟ್ ಧರಿಸಿ ಕೆಲಸ ಮಾಡುವುದು ಸರ್ವೇ ಸಾಮಾನ್ಯ. ಆದರೆ ಅನೇಕ ತಲೆಮಾರುಗಳಿಂದ ಮಲೆನಾಡಿನಲ್ಲಿ ಮಳೆಗಾಲದ ಸಮಯದಲ್ಲಿ ಹೆಚ್ಚು ಬಳಕೆಯಾಗುತ್ತಿದ್ದುದು ಸಪ್ಪಕಂಬಳಿ. ಈಗ ಈ ಕಂಬಳಿ ಕಾಣುವುದೇ ಅಪರೂಪವಾಗಿಬಿಟ್ಟಿದೆ.
 
ಸಾಮಾನ್ಯವಾಗಿ ಮಲೆನಾಡಿನ ಪ್ರದೇಶದಲ್ಲಿ ಎರಡು ಬಗೆಯ ಕಂಬಳಿ ಬಳಕೆ ಮಾಡುವುದನ್ನು ನೋಡಬಹುದು. ಮನೆ ಬಳಕೆಗಾಗಿ ಉಪಯೋಗಿಸುವುದನ್ನು ಹಂಡಕಂಬಳಿ ಎಂದೂ, ಮನೆ ಹೊರಗೆ  ಕೆಲಸ ಕಾರ್ಯಗಳಿಗೆ ಹೋಗುವಾಗ ಸೂಡುವುದನ್ನು ಸಪ್ಪಕಂಬಳಿ ಎಂದು ಕರೆಯುವುದು ವಾಡಿಕೆ. 
 
ಈ ಎರಡು ವಿಧದ ಕಂಬಳಿಗಳ ಉಪಯೋಗದಲ್ಲಿಯೂ ಬಹಳ ಭಿನ್ನತೆ ಇದೆ. ಹಂಡ ಕಂಬಳಿ ಮನೆ ಬಳಕೆಗೆ ಸೀಮಿತ. ಹಬ್ಬ ಹರಿದಿನ, ಮದುವೆ ಮುಂಜಿಗಳಲ್ಲಿ ಈ ಕಂಬಳಿಯನ್ನೇ ನೆಲಕ್ಕೆ ಹಾಸಿ, ಅದರ ಮೇಲಿಂದ ಜಮಖಾನವನ್ನು ಒಪ್ಪವಾಗಿ ಹಾಯಿಸಿಡುತ್ತಾರೆ. ಇನ್ನು ಸಮಯ ಕಳೆಯಲು ಇಸ್ಪೀಟ್ ಆಡುವವರು ಸಹ ಈ ಹಂಡ ಕಂಬಳಿಯನ್ನು ಹಾಸಿಕೊಂಡೇ (ಇಸ್ಪೀಟಿನ ಎಲೆ ಸುಲಭವಾಗಿ ಜಾರಲಿಯೆಂದು) ಆಟ ಆಡುವ ಪದ್ಧತಿಯಿದೆ.
 
ಅಲ್ಲದೇ, ಮನೆಗೆ ಬರುವ ನೆಂಟರಿಷ್ಟರಿಗೆ ಮನೆಯ ಸದಸ್ಯರೆಲ್ಲ ಸುಖವಾಗಿ ನಿದ್ರಿಸಲು ಈ ಕಂಬಳಿಯನ್ನೇ ಉಪಯೋಗ ಮಾಡಲಾಗುವುದು. ಆದರೆ ಸಪ್ಪ ಕಂಬಳಿ ಹಾಗಲ್ಲ. ಇದನ್ನು ಹೆಚ್ಚಾಗಿ ಮಳೆಗಾಲದಲ್ಲಿ ಉಪಯೋಗಿಸಲಾಗುವುದು. ಕೃಷಿಕರು, ಕೃಷಿ ಕಾರ್ಮಿಕರು ಕೆಲಸಕ್ಕೆ ಹೋಗುವಾಗ ಕೊಪ್ಪೆ ಮಾಡಿಕೊಂಡು ಹೋಗುತ್ತಾರೆ. 
 
ಸಪ್ಪ ಕಂಬಳಿ ಈಗೆಲ್ಲಿ?
ಈ ಕಂಬಳಿಯನ್ನು ಉಪಯೋಗಿಸುವವರು ಮಳೆಗಾಲದ ಶುರುವಿನಲ್ಲಿಯೇ ಹೊಸ ಕಂಬಳಿ ಖರೀದಿಸುತ್ತಾರೆ. ಹಾಗೆ ತಂದ ಕಂಬಳಿಯನ್ನು ಎರಡು ಕಡೆಗಳಿಗೆ ವ್ಯವಸ್ಥಿತವಾಗಿ ಗಟ್ಟನ್ನು ಕಟ್ಟಿಕೊಂಡು (ಗ್ರಾಮ್ಯ ಭಾಷೆಯಲ್ಲಿ ಕರೆ ಕಟ್ಟಿಕೊಳ್ಳುವುದು ಎನ್ನುತ್ತಾರೆ) ಅದನ್ನು ನೀರಿನಲ್ಲಿ ಅದ್ದಿ, ಮೆಟ್ಟಿ ಮೆಟ್ಟಿ ತೊಳೆದು ಒಣಗಿಸುತ್ತಾರೆ. ಹೀಗೆ ಮಾಡಿದಂಥ ಕಂಬಳಿ ಬಾಳಿಕೆ ಬರುತ್ತದೆ ಎನ್ನುವುದು ಹಿರಿಯರ ಅನುಭವದ ಮಾತು.
 
ಈ ಸಪ್ಪ ಕಂಬಳಿಯನ್ನು ಕೊಪ್ಪೆ ಮಾಡಿ, ಅದಕ್ಕೆ ಕಡ್ಡಿಯನ್ನು (ಕಂಬ್ಳಿ ಕಡ್ಡಿಯೆಂದೇ ಕರೆಯುತ್ತಾರೆ) ಸಿಕ್ಕಿಸಿಕೊಳ್ಳುತ್ತಾರೆ. ಹೀಗೆ ಸಿದ್ಧಗೊಂಡ ಕಂಬಳಿಯನ್ನೇ ನಮ್ಮ ಅಪ್ಪ-ಅಜ್ಜಂದಿರು ಕೆಲಸಗಳಿಗೆ ಹೋಗುವಾಗ ಹಾಕಿಕೊಂಡು ಹೋಗುತ್ತಿದ್ದರು. ಆಗೆಲ್ಲಾ ಮಳೆ  ವಿಪರೀತ ಬರುತ್ತಿತ್ತು. ಮುಂಜಾನೆ ಹಾಕಿಕೊಂಡ ಕಂಬಳಿಯನ್ನ ಮಧ್ಯಾಹ್ನದ ಊಟದ ಸಮಯದಲ್ಲಿಯೇ ಎತ್ತಿಡಬೇಕಾಗುತ್ತಿತ್ತು.
 
ಆಮೇಲೆ, ಮಧ್ಯಾಹ್ನ ಕೆಲಸಕ್ಕೆ ಹೋಗಿ ಸಾಯಂಕಾಲ ಮನೆಗೆ ಬಂದ ಮೇಲೆ ಆ ಕಂಬಳಿಗೆ ಸಿಕ್ಕಿಸಿಕೊಂಡ ಕಡ್ಡಿಯನ್ನು ತೆಗೆದು, ಹಾಕಿಕೊಂಡ ಕೊಪ್ಪೆಯನ್ನು ಬಿಡಿಸಿ, ಒದ್ದೆಯಾದ ಕಂಬಳಿಯನ್ನು ಅದಕ್ಕೆಂದೇ ಸಿದ್ಧಪಡಿಸಿದ ಹೊತ್ಲಿನಲ್ಲಿ (ಕೆಳಗೆ ಬೆಂಕಿ ಹಾಕಿ, ನಿರ್ದಿಷ್ಟ ಎತ್ತರದಲ್ಲಿ ಒಣಗಿಸಲೆಂದೇ ಮಾಡಿರುವ ಸಾಧನ) ಚೆನ್ನಾಗಿಯೇ ಒಣಗಿಸಿಕೊಳ್ಳುತ್ತಾರೆ. ಮರು ದಿನ ಮತ್ತೆ ಕೊಪ್ಪೆ ಮಾಡಿ ಕೆಲಸಕ್ಕೆ ಹೋಗುತ್ತಿದ್ದರು. 
 
ದೊಡ್ಡ ಮಳೆ ಬಂದರೂ ಮೈ ಒದ್ದೆ ಆಗುತ್ತಿರಲಿಲ್ಲ. ಗಾಳಿ ಬಂದರೂ ಕಂಬಳಿ ಹಾರಿ ಹೋಗುತ್ತಿರಲಿಲ್ಲ. ಮೈ ಬೆಚ್ಚಗಿರಲು ಸಹ ಈ ಕಂಬಳಿಯೇ ಸಹಕಾರಿ ಆಗುತ್ತಿತ್ತು. ಒಮ್ಮೆ ತಂದ ಈ ತರದ ಕಂಬಳಿಯು ಐದಾರು ವರ್ಷಗಳ ಕಾಲ ಯಾವುದೇ ಅಡೆತಡೆ ಇಲ್ಲದೇ ಉಪಯೋಗಿಸುತ್ತಿದ್ದರು. ಅಲ್ಲದೇ ಈ ಸಪ್ಪ ಕಂಬಳಿಯನ್ನು ಬಾಣಂತಿಗೆ ಹೊದೆಸಲು, ಋತುಮತಿಯಾದ ಸಂದರ್ಭದಲ್ಲಿ ಹೊರಗೆ ಮಲಗಲು ಕೊಡುವ ಪದ್ಧತಿಯಿತ್ತು.
 
ಇನ್ನು ತೀರಾ ಹಳೆಯದಾದ ಕಂಬಳಿಯಿದ್ದರೆ ಮನೆಯಲ್ಲಿ ವಯಸ್ಸಾದವರು ಹಾಸಿಗೆಗೆ ಹಾಸಿಕೊಂಡು ಬಳಕೆ ಮಾಡುತ್ತಿದ್ದರು. ಒಟ್ಟಿನಲ್ಲಿ ಈ ಸಪ್ಪ ಕಂಬಳಿಯೂ ವಿಭಿನ್ನ ಉದ್ದೇಶಗಳಿಗೆ ಶಿಷ್ಟಾಚಾರದಂತೆ, ವ್ಯವಸ್ಥಿತವಾಗಿಯೇ ಉಪಯೋಗ ಆಗುತ್ತಿತ್ತು. 
 
ಆದರೆ ಈ ಹೈಟೆಕ್ ಜೀವನ ಶೈಲಿಯಲ್ಲಿ ಸಪ್ಪ ಕಂಬಳಿ ಬಳಕೆ ತೀರಾ ವಿರಳವಾಗಿದೆ. ಅದರ ಉಪಯೋಗ ಕಡಿಮೆ ಆಗಿರುವುದಕ್ಕೆ ವಿಭಿನ್ನ ಕಾರಣಗಳಿವೆ. ಕಂಬಳಿಯ ದರ ಏರಿಕೆ ಆಗಿರುವುದು, ಅದರ ಅಂಚನ್ನು ಈಗಿನವರಿಗೆ ಕಟ್ಟಲು ಬಾರದೇ ಇರುವುದು ಕಾರಣವಾಗಿದೆ. ಹಾಗೆಯೇ ಕಂಬಳಿಯನ್ನು ಮಳೆಗಾಲದ ಸಮಯದಲ್ಲಿ ಉಪಯೋಗಿಸಿದಾಗ, ಅದನ್ನು ಪ್ರತಿನಿತ್ಯ ಬೆಂಕಿಯಲ್ಲಿ ಒಣಗಿಸಲೇಬೇಕಾಗುವುದು. ಅದಕ್ಕೆ ಕಟ್ಟಿಗೆ ಹೆಚ್ಚು ಬೇಕಾಗಿದ್ದಕ್ಕೆ ಅನೇಕ ಕಾರ್ಮಿಕರು ಆ ಕಂಬಳಿ ಬಳಸುತ್ತಿಲ್ಲ.
 
ಬೇಸಿಗೆಯಲ್ಲಿ ಈ ಕಂಬಳಿಯ ಅವಶ್ಯಕತೆ ಇರುವುದಿಲ್ಲ. ಆ ದಿನದಲ್ಲಿ ಇದನ್ನು ಸುಭದ್ರವಾಗಿ ಇಟ್ಟುಕೊಳ್ಳುವುದೇ ದೊಡ್ಡ ಸಮಸ್ಯೆ ಎನ್ನುತ್ತಾರೆ ಕೆಲವರು. ಸಪ್ಪ ಕಂಬಳಿ ಬದಲಾಗಿ ಈಗ ಪ್ಲಾಸ್ಟಿಕ್ ಕೊಪ್ಪೆಯೋ, ರೇನ್‌ಕೋಟೋ ಆಕ್ರಮಣ ಮಾಡಿರಬಹುದು. ಆದ್ರೆ ಸಪ್ಪ ಕಂಬಳಿಯನ್ನು ಸೂಡಿದಾಗಿನ ಆಹ್ಲಾದತೆ, ಆಗುವ ಸಂಭ್ರಮವೇ ಬೇರೆಂದು ಆ ಕಂಬಳಿಯನ್ನು ಉಪಯೋಗಿಸಿದವರೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT