ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕರೆಗೆ 18 ಕ್ವಿಂಟಲ್! ರೈತ ವಿಜ್ಞಾನಿಗಳ ಸಾಧನೆ

Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
ಮಳೆ ನಂಬಿಕೊಂಡು ಎಳೆ ಪೈರು ನಾಟಿ ಮಾಡಿದವರ ಮೊಗದಲ್ಲೀಗ ನಿರಾಶೆ. ಮಧ್ಯೆ ಒಮ್ಮೆ ಜೋರು ಮಳೆ ಸುರಿದು ಆಶೆ ಮೂಡಿಸಿದರೂ ನಂತರದಲ್ಲಿ ನಿರೀಕ್ಷೆ ಸುಳ್ಳಾಯಿತು.
 
ಹೀಗಾಗಿ ಭತ್ತದ ಗದ್ದೆಗಳೆಲ್ಲ ಖಾಲಿ ಖಾಲಿ. ಆದರೆ ಭತ್ತ ಬೆಳೆಗಾರ, ಹಾವೇರಿ ಜಿಲ್ಲೆ ಚಿನ್ನಿಕಟ್ಟೆ ಗ್ರಾಮದ ಶ್ರೇಣಿಕ ರಾಜು ಅವರ ಮೊಗದಲ್ಲಿ ಮಂದಹಾಸ. ಸೋತ ಗದ್ದೆಗಳ ಮಧ್ಯೆ ಎದೆಯೆತ್ತರ ಬೆಳೆದು ನಿಂತಿರುವ ಅವರ ರಾಗಿ ಹೊಲ ಮಾತ್ರ ಎಲ್ಲರ ಕಣ್ಣುಕುಕ್ಕುತ್ತಿದೆ.
 
ಹಾಗೆ ನೋಡಿದರೆ ಈ ರಾಗಿ ಹೊಲ ಕೂಡ ಮೊದಲು ಭತ್ತದ ಗದ್ದೆಯಾಗಿತ್ತು. ಆದರೀಗ ಮಳೆ ಕೊರತೆ ಹಿನ್ನೆಲೆಯಲ್ಲಿ ರಾಗಿ ಹೊಲವಾಗಿ ಮಾರ್ಪಟ್ಟಿದೆ. ತೆನೆಗಳೊಂದಿಗೆ ಹೊಯ್ದಾಡುವ ದೇಸಿ ರಾಗಿ ತಳಿಗಳು ರೈತರ ಗಮನ ಸೆಳೆಯುತ್ತಿವೆ. ‘ಮಳೆಯೇ ಇಲ್ಲ’, ‘ಬೆಳೆ ಹಾನಿಯಾಗಿದೆ’ ಎಂಬ ನೋವಿನ ಕಥೆಗಳ ಮಧ್ಯೆ ರೈತ ಅನುಶೋಧನೆಯೊಂದು ರೈತರಲ್ಲಿ ಆಶಾಭಾವನೆ ಮೂಡಿಸುತ್ತದೆ.
 
ಕಡಿಮೆ ಮಳೆಯ ಮಧ್ಯೆಯೂ ಯಶಸ್ಸು ಕಾಣಲು ಸಾಧ್ಯವಾಗಿರುವುದು ‘ಗುಳಿ ರಾಗಿ’ ಪದ್ಧತಿಯಿಂದ. ಇದು ರೈತರೇ ಕಂಡುಕೊಂಡ ವಿಧಾನ. ಸಂಶೋಧನೆ ಎಂಬುದು ಆಧುನಿಕ ಕೃಷಿ ವಿಜ್ಞಾನದ ಹಿಡಿತಕ್ಕೆ ಮಾತ್ರ ಸಿಕ್ಕಿರುವ ಅವಕಾಶ ಎಂಬಂತಾಗಿರುವ ಈ ದಿನಗಳಲ್ಲಿ ರೈತರ ಈ ಅನುಶೋಧನೆ ಅದಕ್ಕೆ ಸವಾಲೆಸೆಯುವಂತಿದೆ. ಅಷ್ಟಕ್ಕೂ ಇದು ತೀರಾ ಇತ್ತೀಚಿನದೇನಲ್ಲ.
 
ಏನಿದು ಗುಳಿ ರಾಗಿ?: ಇದೊಂದು ಅಪ್ಪಟ ರೈತ ಸಂಶೋಧನೆ. ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ತೆಗೆಯುವ ವಿಶಿಷ್ಟ ವಿಧಾನ. ಹಸಿರು ಕ್ರಾಂತಿ ಹೆಸರಿನಲ್ಲಿ ಬಂದ ಅಧಿಕ ಇಳುವರಿ ತಳಿಗಳಿಗೆ ಯಥೇಚ್ಛ ರಾಸಾಯನಿಕ ಸುರಿದು ಆರೈಕೆ ಮಾಡಿದರೂ 10–12 ಕ್ವಿಂಟಲ್ ಇಳುವರಿ ತೆಗೆಯುವುದು ಕಷ್ಟ. ಆದರೆ ಈ ವಿಧಾನದಲ್ಲಿ ಕನಿಷ್ಠವೆಂದರೂ 18 ಕ್ವಿಂಟಲ್ ಇಳುವರಿ ಪಡೆಯಬಹುದು. 25 ಕ್ವಿಂಟಲ್‌ವರೆಗೂ ಇಳುವರಿ ತೆಗೆದ ಭೂಪರಿದ್ದಾರೆ!
 
ಮೇಲ್ನೋಟಕ್ಕೆ ಇದು ಭತ್ತದಲ್ಲಿ ಅನುಸರಿಸುವ ‘ಮಡಗಾಸ್ಕರ್’ (ಎಸ್‌ಆರ್‌ಐ ಅಥವಾ ಶ್ರೀ) ವಿಧಾನದಂತಿದೆ. ಎಳೆಯ ಭತ್ತದ ಪೈರನ್ನು ನಿರ್ದಿಷ್ಟ ಅಂತರದಲ್ಲಿ ನಾಟಿ ಮಾಡಿ, ಆ ಬಳಿಕ ಪೈರುಗಳ ಸಾಲಿನ ಮಧ್ಯೆ ಕಳೆ ತೆಗೆಯುವುದು ಎಸ್‌ಆರ್‌ಐ ಪದ್ಧತಿಯಲ್ಲಿದೆ. ‘ಗುಳಿ ರಾಗಿ’ ಪದ್ಧತಿಯಲ್ಲೂ ಹೆಚ್ಚು ಕಡಿಮೆ ಇದೇ ವಿಧಾನವಿದೆ. ಆದರೆ ಇದು ಯಾವಾಗಿನಿಂದ ರೂಢಿಗೆ ಬಂತು ಎಂಬ ಬಗ್ಗೆ ಖಚಿತ ಮಾಹಿತಿಯಿಲ್ಲ.
 
‘ನಾವು ಅಧ್ಯಯನ ನಡೆಸಿದಾಗ, ಶಿಕಾರಿಪುರ ಸೀಮೆಯಿಂದ ಗುಳಿ ರಾಗಿ ಪದ್ಧತಿ ಬಂದಿರಬೇಕು ಎಂದು ಹಾವೇರಿ ಜಿಲ್ಲೆಯವರು ಹೇಳಿದರು. ಆದರೆ ಆ ಭಾಗದವರಿಗೆ ಹೆಚ್ಚೇನೂ ತಿಳಿದಿರಲಿಲ್ಲ. ಹಿಂದೆಲ್ಲ ಹತ್ತಿ, ಮೆಣಸಿನ ಕಾಯಿಯನ್ನು ಹೀಗೆ ಬೆಳೆಯುತ್ತಿದ್ದುದನ್ನು ಗಮನಿಸಿ ರೈತರು ರಾಗಿಯನ್ನು ಸಹ ಹೀಗೆಯೇ ಬೆಳೆದು ಯಶಸ್ಸು ಕಂಡಿರಬಹುದು. ಅದೇ ಮುಂದೆ ವಿಶಿಷ್ಟ ವಿಧಾನವಾಗಿ ರೂಪುಗೊಂಡಿರಬಹುದು’ ಎಂದು ಈ ವಿಧಾನವನ್ನು ವ್ಯವಸ್ಥಿತವಾಗಿ ದಾಖಲಿಸಿರುವ ಮಲ್ಲಿಕಾರ್ಜುನ ಹೊಸಪಾಳ್ಯ ಅಭಿಪ್ರಾಯಪಡುತ್ತಾರೆ.
 
ಹೆಂಟೆಗಳಿಲ್ಲದೇ ಸಮತಟ್ಟು ಮಾಡಿದ ಹೊಲದಲ್ಲಿ ಒಂದೂವರೆ ಅಡಿ ಅಂತರದಲ್ಲಿ ಅಡ್ಡ ಹಾಗೂ ಉದ್ದ ಸಾಲು ಮಾಡಲಾಗುತ್ತದೆ. ಈ ಎರಡು ಸಾಲುಗಳು ಸಂಧಿಸುವ ಜಾಗದಲ್ಲಿ ಗುಳಿ ಮಾಡಿ, ಅಲ್ಲಿ ಪೈರು ನಾಟಿ ಮಾಡುವ ಈ ವಿಧಾನದಲ್ಲಿ ಪೈರುಗಳಿಗೆ ಬೇರು ಬಿಡಲು ಸಾಕಷ್ಟು ಸ್ಥಳಾವಕಾಶ ಸಿಗುತ್ತದೆ.
 
ಒಂದು ಗುಳಿಗೆ ಎರಡೇ ಪೈರು (ಕೆಲವು ಸಲ ಒಂದೇ) ನಾಟಿ ಮಾಡುವುದರಿಂದ ಸೂರ್ಯನ ಶಾಖ, ನೀರು ಹಾಗೂ ಪೋಷಕಾಂಶಗಳಿಗಾಗಿ ಪೈರುಗಳ ಮಧ್ಯೆ ಪೈಪೋಟಿ ಇರುವುದಿಲ್ಲ. ಕೊರಡು ಹೊಡೆಯುವುದರಿಂದ ಧಾರಾಳವಾಗಿ ತೆಂಡೆ ಹಾಗೂ ಮರಿ ತೆಂಡೆಗಳು ಒಡೆಯುತ್ತವೆ. ಇದರಿಂದಾಗಿ ಇಳುವರಿ ಹೆಚ್ಚಾಗುತ್ತದೆ.
 
ಮಾದರಿಯಾಗುವ ವಿಧಾನ: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಚಿನ್ನಿಕಟ್ಟೆ ಗ್ರಾಮದಲ್ಲಿ ಕೆಲವು ರೈತರು ಗುಳಿ ರಾಗಿ ವಿಧಾನದಲ್ಲಿ ಯಶಸ್ಸು ಕಂಡಿದ್ದು ಪ್ರಚಾರ ಪಡೆಯಿತು. ಹೆಚ್ಚೆಚ್ಚು ರೈತರು ಈ ವಿಧಾನದತ್ತ ಹೊರಳಿದರು. ಮಾಧ್ಯಮಗಳಲ್ಲಿ ಗುಳಿ ರಾಗಿ ಜಾಗ ಪಡೆಯಿತು. ಅದನ್ನು ಗಮನಿಸಿದ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಕೃಷಿ ವಿಭಾಗದ ಪ್ರಾಧ್ಯಾಪಕ ನಾರ್ಮನ್ ಅಪಾಫ್ ಚಿನ್ನಿಕಟ್ಟೆ ಗ್ರಾಮಕ್ಕೆ ಭೇಟಿ ನೀಡಿ ರೈತರ ಜತೆ ಚರ್ಚಿಸಿದರು.
 
‘ರಾಗಿಯಲ್ಲಿ ಇಂಥ ಅದ್ಭುತ ವಿಧಾನ ನೋಡಿಲ್ಲ. ಹೀಗೆ ರಾಗಿ ಬೆಳೆಯುವುದು ಇತರ ದೇಶಗಳಿಗೂ ಮಾದರಿಯಾಗಿದೆ’ ಎಂದು ಉದ್ಗರಿಸಿದ ಅವರು, ಈ ರೈತ ಅನುಶೋಧನೆಯನ್ನು ವ್ಯಾಪಕವಾಗಿ ಪರಿಚಯಿಸಲು ವಿಜ್ಞಾನಿಗಳು ಕೈಜೋಡಿಸಬೇಕು ಎಂದು ಸಲಹೆ ಮಾಡಿದರು. ಹಾವೇರಿ ಜಿಲ್ಲೆಯ ಈ ಪದ್ಧತಿಯ ಬಗ್ಗೆ ಅವರು ತಮ್ಮ ಬ್ಲಾಗ್‌ನಲ್ಲೂ ದಾಖಲಿಸಿ, ಇತರ ದೇಶಗಳ ಕೃಷಿ ವಿಜ್ಞಾನಿಗಳ ಗಮನವನ್ನೂ ಸೆಳೆದರು.
 
‘ಏನೆಲ್ಲ ಒಳಸುರಿ ಸುರಿದರೂ ಹತ್ತು ಕ್ವಿಂಟಲ್ ರಾಗಿ ಸಿಗುವುದು ಕಷ್ಟ. ಆದರೆ ಗುಳಿ ರಾಗಿ ವಿಧಾನದಲ್ಲಿ ಬೆಳೆದರೆ, ಕಡಿಮೆಯೆಂದರೂ ಹದಿನೆಂಟು ಕ್ವಿಂಟಲ್ ಇಳುವರಿ ಖಂಡಿತ ಸಿಗುತ್ತದೆ’ ಎನ್ನುತ್ತಾರೆ ಶ್ರೇಣಿಕ ರಾಜು.
 
ಇವರ ಪಕ್ಕದ ಹೊಲದ ರೈತ ಮೂಕಪ್ಪ ಪೂಜಾರ್, ‘ಹೈಬ್ರಿಡ್ ತಳಿ ಈ ವಿಧಾನಕ್ಕೆ ಹೊಂದಿಕೊಳ್ಳುವುದಿಲ್ಲ. ಹೀಗಾಗಿ ನಾವು ಉಂಡೆ ರಾಗಿ ಬಿತ್ತನೆ ಮಾಡುತ್ತೇವೆ. ನಾಲ್ಕೂವರೆ ತಿಂಗಳ ಈ ತಳಿ, ಸುಮಾರು ಹತ್ತು ಚಕ್ಕಡಿ ತುಂಬುವಷ್ಟು ಮೇವು ಕೊಡುತ್ತದೆ’ ಎಂದು ಖುಷಿಯಿಂದ ಹೇಳುತ್ತಾರೆ.
 
ಮಳೆ ಕೊರತೆಗೆ ಪರಿಹಾರ ಕೊಡುವ ಗುಳಿ ರಾಗಿ ಪದ್ಧತಿ ಈಗ ಬೇರೆ ರಾಜ್ಯಗಳಿಗೂ ವ್ಯಾಪಿಸಿದೆ. ಅಲ್ಲಿನ ರೈತರ ಅನುಭವ ಹಂಚಿಕೊಳ್ಳಲು ‘ಸಹಜ ಸಮೃದ್ಧ’ ಬಳಗವು ಹನುಮನಹಟ್ಟಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಈಚೆಗೆ ಕಾರ್ಯಾಗಾರ ಆಯೋಜಿಸಿತ್ತು. ಛತ್ತೀಸಗಢ, ತಮಿಳುನಾಡು, ಆಂಧ್ರ ಹಾಗೂ ಕರ್ನಾಟಕದ ರೈತರು ಪಾಲ್ಗೊಂಡಿದ್ದರು.
 
‘ಕರ್ನಾಟಕ ಮೂಲದ ರೈತ ಜ್ಞಾನವೊಂದು ಛತ್ತೀಸಗಢದ ರೈತರಿಗೂ ನೆರವಾಗಿದೆ. ರೈತಮೂಲ ಅನುಶೋಧನೆಗೆ ಸಿಕ್ಕ ಈ ಮನ್ನಣೆಯನ್ನು ಆಧುನಿಕ ಕೃಷಿ ವಿಜ್ಞಾನ ಪುರಸ್ಕರಿಸಬೇಕು’ ಎನ್ನುತ್ತಾರೆ ಬಳಗದ ಸಂಯೋಜಕ ಸಿ. ಶಾಂತಕುಮಾರ್. 
 
ಸತತ ಎರಡು ವರ್ಷಗಳ ಬರಗಾಲದಿಂದ ತತ್ತರಿಸಿದ್ದ ರೈತರಿಗೆ ಈ ವರ್ಷವೂ ಅದೇ ಭಯ ಕಾಡುತ್ತಿದೆ. ಕಾವೇರಿ ಸೇರಿದಂತೆ ಹಲವು ನದಿಗಳಲ್ಲಿ ನೀರಿನ ಮಟ್ಟವೂ ಕಡಿಮೆಯಾಗಿದೆ. ನದಿ ನೀರನ್ನೇ ನಂಬಿಕೊಂಡು ವರ್ಷಕ್ಕೆ ಎರಡು ಬೆಳೆ ತೆಗೆಯುತ್ತಿದ್ದ ರೈತರು ಈಗ ನಿಧಾನವಾಗಿ ಸಿರಿಧಾನ್ಯಗಳತ್ತ ವಾಲುತ್ತಿದ್ದಾರೆ. ಬರುವ ಬೇಸಿಗೆಯಲ್ಲಿ, ಲಭ್ಯವಿರುವ ನೀರಿನಲ್ಲಿ ರಾಗಿ ಬೆಳೆಯುವವರಿಗೆ ‘ಗುಳಿ ರಾಗಿ’ ವರದಾನವಾಗುವ ಸಾಧ್ಯತೆಯಿದೆ.
 
 ಕೋಟ್ಯಂತರ ಹಣ ಸುರಿದು ಸಂಶೋಧನೆ ಮಾಡಿ, ಅದರಿಂದ ಕೃಷಿಕರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುವ ಬದಲಿಗೆ ಸರಳ ದೇಸಿ ಜ್ಞಾನದ ಗುಳಿ ರಾಗಿ ವಿಧಾನ ಅನುಸರಿಸುವುದು ಶ್ರೇಷ್ಠವಲ್ಲವೇ? 
 
**
ಗುಳಿರಾಗಿಯನ್ನೇ ಹೋಲುವ ಪಗಡೆ ಸಾಲು, ಉಂಡೆ ರಾಗಿ ಪದ್ಧತಿ ದಕ್ಷಿಣ ಕರ್ನಾಟಕದಲ್ಲಿ ಚಾಲ್ತಿಯಲ್ಲಿದ್ದವು. ನಂತರ ಇವು ಮರೆಯಾದವು. ದೇಸಿ ತಳಿಗಳು ಗುಳಿ ರಾಗಿ ಪದ್ಧತಿಗೆ ಹೆಚ್ಚು ಸೂಕ್ತ. ಅದರಲ್ಲೂ ಉಂಡೆ ರಾಗಿ, ಎಡಗು ರಾಗಿ, ಬುಲ್ಡೆ ರಾಗಿ ಈ ವಿಧಾನಕ್ಕೆ ಹೊಂದಿಕೊಳ್ಳುತ್ತವೆ.
 
ಕುಂದಗೋಳದ ಹನುಮನಹಳ್ಳಿಯ ಯುವ ರೈತ ಸುನೀಲ್, ಜಗಳೂರು, ಶರಾವತಿ, ಮಳಲಿ, ಸಣ್ಣಕಡ್ಡಿ, ದೊಡ್ಡ ರಾಗಿ ತಳಿ ಜತೆ ಈ ಹಂಗಾಮಿನಲ್ಲಿ ಪ್ರಯೋಗ ಮಾಡುತ್ತಿದ್ದಾರೆ. ಬಿತ್ತನೆಗೆ ಒಂದು ಕಿಲೋ ಬೀಜ ಸಾಕು. ಸಾಲಿನಿಂದ ಸಾಲಿಗೆ ಒಂದೂವರೆ ಅಡಿ ಅಂತರವಿದ್ದು, ಎರಡೂ ಸಾಲು ಕೂಡುವ ಕಡೆ ಗುಳಿ ರಚನೆಯಾಗುತ್ತದೆ. ಅಲ್ಲಿ ಒಂದೊಂದು ಬೊಗಸೆ ಕೊಟ್ಟಿಗೆ ಗೊಬ್ಬರ ಹಾಕಿ, 20–25 ದಿನದ ಪೈರು ನಾಟಿ ಮಾಡಬೇಕು.
 
ಈ ಪದ್ಧತಿಯ ಯಶಸ್ಸು ಇರುವುದು ಎಡೆಕುಂಟೆ ಹಾಗೂ ಕೊರಡು ಹೊಡೆಯುವುದರಲ್ಲಿ. ಎಡೆ ಕುಂಟೆ ಕಳೆ ನಾಶ ಮಾಡಿ, ಪೈರಿನ ಬುಡಕ್ಕೆ ಮಣ್ಣು ಏರಿಸುತ್ತದೆ. ಕೊರಡು ಹೊಡೆಯುವುದರಿಂದ, ಪೈರಿನ ಬುಡ ನೆಲಕ್ಕೆ ಬಾಗಿ ಅಲ್ಲಿ ಹೊಸ ತೆಂಡೆಗಳು ಒಡೆಯುತ್ತವೆ. ‘ಕೊರಡು’ ಎಂದರೆ, ಐದೂವರೆ ಅಡಿ ಉದ್ದ ಹಾಗೂ ಒಂದು ಅಡಿ ವ್ಯಾಸದ ಅರ್ಧ ಕೊಳವೆ. ಅದು ನೋಡಲು ಅರ್ಧಕ್ಕೆ ಸೀಳಿದ ಬಿದಿರಿನಂತೆ ಕಾಣುತ್ತದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT