ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗಳಲ್ಲಿ ಮಾತೆಯರ ಮರಣ ಮೃದಂಗ

ಉನ್ನತ ಹುದ್ದೆಯಲ್ಲಿರುವ ಯಾರೂ ಸರ್ಕಾರಿ ಆಸ್ಪತ್ರೆ ಸುಧಾರಣೆಗೆ ಮನಸ್ಸು ಮಾಡುತ್ತಿಲ್ಲವೇಕೆ?
Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಸರಿಯಾಗಿ ಒಂದು ತಿಂಗಳಾಯಿತು. ಬೆಳಗಾವಿ ನಗರಕ್ಕೆ ಸಮೀಪದ ಕಡೋಲಿ ಹಳ್ಳಿಯ ಗಾಯತ್ರಿ ಪಾಟೀಲ ಎಂಬ ಮಹಿಳೆ ಬೆಳಗಾವಿಯ ಅತ್ಯುನ್ನತ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ರಾತ್ರಿ ಗಂಡು ಮಗುವಿಗೆ ಜನ್ಮವಿತ್ತಳು. ಏನೇನೂ ಸಮಸ್ಯೆಯಿಲ್ಲದೆ ಹೆತ್ತಳು. ತಾಯಿ ಮಗು ಇಬ್ಬರೂ ಚೆನ್ನಾಗಿಯೇ ಇದ್ದರು. ಅದೇನಾಯಿತೋ, ರಾತ್ರಿ ಒಮ್ಮಿಂದೊಮ್ಮೆಗೆ ತಾಯಿ ಗಾಯತ್ರಿಗೆ ರಕ್ತಸ್ರಾವ ಆರಂಭವಾಗಿದ್ದು ಹೆಚ್ಚುತ್ತಲೇ ಹೋಯಿತು.

ಸೊಸೆ ನಿತ್ರಾಣಗೊಳ್ಳುತ್ತಿರುವುದನ್ನು ನೋಡುತ್ತಿದ್ದ ಅತ್ತೆ ಓಡಿದಳು, ಡಾಕ್ಟರಿಗೆ, ನರ್ಸ್ ಬಾಯಿಯರಿಗೆಲ್ಲ ತಿಳಿಸಿ ಕರೆಯಲು ಪ್ರಯತ್ನಿಸಿದಳು. ಆಕೆ ಅದೆಷ್ಟು ಪ್ರಯತ್ನಿಸಿದರೂ ಆ ಜಿಲ್ಲಾಸ್ಪತ್ರೆಯಲ್ಲಿ ಯಾರದ್ದೂ ನೆರವು ಸಿಗಲಿಲ್ಲ. ರಾತ್ರಿ ಒಂದು ಗಂಟೆಯ ವೇಳೆಗೆ ತೀವ್ರ ರಕ್ತಸ್ರಾವದಿಂದ ತಾಯಿ ಗಾಯತ್ರಿ ತನ್ನ ಎಳೆಕುಡಿಯನ್ನು ಈ ಲೋಕದ ಮಡಿಲಿಗರ್ಪಿಸಿ ಪ್ರಾಣಬಿಟ್ಟಳು.

ಜಗತ್ತಿನಲ್ಲಿ ಪ್ರತಿವರ್ಷ 5 ಲಕ್ಷದಷ್ಟು ತಾಯಿ ಮರಣಗಳು ಸಂಭವಿಸುತ್ತವೆ. ಅದರಲ್ಲಿ ನೈಜೀರಿಯಾ ದೇಶದ ನಂತರದ ಸ್ಥಾನ ನಮ್ಮ ದೇಶದ್ದು. ವರ್ಷಕ್ಕೆ 45 ಸಾವಿರ ಹಸಿಮೈ ಬಾಣಂತಿಯರನ್ನು ನಾವು ಬಲಿಗೊಡುತ್ತೇವೆ. ತಾಯಂದಿರ ಸಾವಿನಲ್ಲಿ ಉತ್ತರದ ರಾಜ್ಯಗಳದ್ದೇ ಸಿಂಹಪಾಲಾಗಿದ್ದರೂ ದಕ್ಷಿಣದ ರಾಜ್ಯಗಳಲ್ಲಿ ಅತಿ ಹೆಚ್ಚು ಸಾವು ಸಂಭವಿಸುವುದು ಕರ್ನಾಟಕದಲ್ಲಿಯೆ.

ಕಳೆದ ವರ್ಷವೇ 635 ತಾಯಂದಿರು ಎಳೆಮಕ್ಕಳನ್ನು ಬಿಟ್ಟು ಗತಿಸಿಹೋಗಿದ್ದಾರೆ. ಕರ್ನಾಟಕ ರಾಜ್ಯ ಆರೋಗ್ಯ ಸಂಪನ್ಮೂಲ ಕೇಂದ್ರದ ವರದಿ ಪ್ರಕಾರ, ತಾಯಿ ಮರಣದಲ್ಲಿ ಮೊದಲ ಸ್ಥಾನ ದಲ್ಲಿರುವ ಬೆಳಗಾವಿ ಜಿಲ್ಲೆಯಲ್ಲಿ 81 ತಾಯಿ ಮರಣ ಆಗಿದ್ದರೆ ನಂತರದ ಸ್ಥಾನದಲ್ಲಿರುವ ಧಾರವಾಡ ಜಿಲ್ಲೆಯಲ್ಲಿ ಹೆಚ್ಚೂಕಮ್ಮಿ ಅದರ ಅರ್ಧದಷ್ಟು (44) ತಾಯಿ ಮರಣಗಳಾಗಿವೆ.

ಹೆರಿಗೆ ಸಮಯದಲ್ಲಿ ತಾಯಂದಿರೇಕೆ ಸಾಯುತ್ತಾರೆ? ಮೊಟ್ಟ ಮೊದಲನೆಯ ಕಾರಣ, ಹೆರಿಗೆ ನಂತರದ ಅತಿಯಾದ ರಕ್ತಸ್ರಾವ. ಇದಕ್ಕೆ ಕಾರಣ ರಕ್ತಹೀನತೆ. 635 ಸಾವುಗಳಲ್ಲಿ 497 ಅಂದರೆ 85% ಸಾವು ಅಪೌಷ್ಟಿಕತೆಯ ರಕ್ತ ಹೀನತೆಯಿಂದಾಗಿಯೇ ಆಗಿದ್ದು. ಅತ್ಯಂತ ಸುಲಭವಾಗಿ ತಡೆಗಟ್ಟಬಹುದಾದ ಸಮಸ್ಯೆಯಿದು.

ಮನೆಯಲ್ಲಿಯೇ ಹೆರಿಗೆಗಳಾದಾಗ ಸಾವನ್ನು ನಿಯಂತ್ರಿಸುವುದು ಅಸಾಧ್ಯವೆಂದು ಮನಗಂಡಾಗ ಸರ್ಕಾರವು ಆಸ್ಪತ್ರೆಯಲ್ಲಿ (ಸಾಂಸ್ಥಿಕ) ಹೆರಿಗೆಗಳಿಗೆ ಮಹತ್ವವನ್ನು ಕೊಟ್ಟಿತು.

ಆರೋಗ್ಯ ಉಪಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನುರಿತ ವೈದ್ಯರು ಮತ್ತು ದಾದಿಯರ ಕೈಯಿಂದ ಹೆರಿಗೆಗಳಾದರೆ ಸಂಭವಿಸಬಹುದಾದ ಮರಣಗಳನ್ನು ತಪ್ಪಿಸಬಹುದು ಎಂದು ಹತ್ತು ವರ್ಷಗಳ ಹಿಂದೆಯೇ ಸಾಂಸ್ಥಿಕ ಹೆರಿಗೆಗಳಿಗೆ ಆದ್ಯತೆ ಕೊಟ್ಟಿತು.

ಬಿಪಿಎಲ್ ಕಾರ್ಡುದಾರ ಕುಟುಂಬಗಳು, ಪರಿಶಿಷ್ಟ ಜಾತಿ–ಪಂಗಡಗಳ  ಕುಟುಂಬಗಳ ಮಹಿಳೆಯರಿಗೆ 19 ವರ್ಷವಾಗಿದ್ದರೆ ಸಾಂಸ್ಥಿಕ ಹೆರಿಗೆಯಿಂದ ₹ 700  ಪ್ರೋತ್ಸಾಹಧನವು ಸಿಗುತ್ತದೆ. ಇದರ ಜೊತೆಗೆಯೇ ಹಳ್ಳಿಹಳ್ಳಿಯಲ್ಲಿ ಸಮುದಾಯದಿಂದಲೇ ಆಯ್ಕೆಯಾದ ಮಹಿಳೆಯೊಬ್ಬಳಿಗೆ ಗರ್ಭಾವಸ್ಥೆ, ಹೆರಿಗೆ, ಬಾಣಂತನದ ತರಬೇತಿಯನ್ನು ಕೊಟ್ಟು ಆಶಾ ಕಾರ್ಯಕರ್ತೆ ಎಂದು ನೇಮಕ ಕೂಡ ಮಾಡಲಾಯಿತು.

ಹಳ್ಳಿಯಲ್ಲಿ ಯಾವುದೇ ಮಹಿಳೆ ಗರ್ಭ ಧರಿಸಿದಳೆಂದರೆ ಕಾಲಾನುಕಾಲಕ್ಕೆ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ನಿಯಮಿತ ಚೆಕ್‌ಅಪ್‌ಗಳು, ಸ್ಕ್ಯಾನಿಂಗ್, ಕಬ್ಬಿಣಾಂಶದ ಮಾತ್ರೆಗಳನ್ನು ಕೊಡಿಸುವುದು ಈ ಎಲ್ಲ ಜವಾಬ್ದಾರಿಗಳೂ ಆಶಾ ಕಾರ್ಯಕರ್ತೆಗೆ. ಒಂದೊಂದು ಹೆರಿಗೆಗೆ ಆಕೆಗೆ ಇಂತಿಷ್ಟೆಂದು ಪ್ರೋತ್ಸಾಹಧನ. ಮೊದಲ ವರ್ಷ ಬರಿಯ ಶೇ 7ರಷ್ಟು ಸಾಂಸ್ಥಿಕ ಹೆರಿಗೆಗಳಾಗಿದ್ದುದು ಎರಡನೆಯ ವರ್ಷಕ್ಕೇ ಅದು ಶೇ 92ಕ್ಕೆ ಏರಿತು. ಮಹಿಳೆಯರ ಸಾವಿನ ಸಂಖ್ಯೆಯೂ ಕಡಿಮೆ ಆಗತೊಡಗಿತು. 

ಅಂಕಿ ಅಂಶಗಳೇ ತೋರಿಸುವ ಪ್ರಕಾರ ಸಾಂಸ್ಥಿಕ ಹೆರಿಗೆಗೆ ಸಮುದಾಯದಿಂದ ಅತ್ಯುತ್ತಮ ಪ್ರತಿಕ್ರಿಯೆ ಬಂತು. 2011-12ರಲ್ಲಿ ಆದ ಒಟ್ಟು 4.45 ಲಕ್ಷ ಹೆರಿಗೆಗಳಲ್ಲಿ 4.15 ಲಕ್ಷ ಹೆರಿಗೆಗಳು ಆಸ್ಪತ್ರೆಗಳಲ್ಲಿಯೇ ಆಗಿರುವುದು ಜನರು ಸರ್ಕಾರದ ಈ ಯೋಜನೆಯನ್ನು ಸ್ವಾಗತಿಸಿರುವುದನ್ನು, ಸ್ವೀಕರಿಸಿರುವುದನ್ನು ತೋರಿಸುತ್ತದೆ. ‘ಕರ್ನಾಟಕ ಆರೋಗ್ಯ ಸಂಪನ್ಮೂಲ ಕೇಂದ್ರ’ 2010- 11ರಲ್ಲಿ ಮಾಡಿರುವ ಒಂದು ಸರ್ವೆಯು ಜನನಿ ಸುರಕ್ಷಾ, ತಾಯಿ ಭಾಗ್ಯ ಮತ್ತು ಮಡಿಲು ಕಿಟ್‌ಗಳು ಸಾಕಷ್ಟು ಜನಪ್ರಿಯವಾಗಿರುವುದನ್ನು ಎತ್ತಿ ತೋರಿಸಿದೆ.

ಸರಿ, ಯೋಜನೆ ಬಂತು, ಸಮುದಾಯ ಅದನ್ನು ಸ್ವೀಕರಿಸಿದ್ದೂ ಆಯಿತು. ಇಂದು ಸಾಮಾನ್ಯವಾಗಿ ಯಾವುದೇ ಹಳ್ಳಿಗೆ ಹೋಗಲಿ, ಆಶಾ ಕಾರ್ಯಕರ್ತೆಯರು ಗರ್ಭಿಣಿಯರನ್ನು ಆರೋಗ್ಯ ತಪಾಸಣೆಗಾಗಿ ಕರೆದೊಯ್ಯುವುದನ್ನು ನಾವು ನೋಡುತ್ತೇವೆ. ಹಾಗಿದ್ದರೂ ಬೆಳಗಾವಿಯಂಥ ಒಂದು ಜಿಲ್ಲೆಯಲ್ಲಿ ಕಳೆದ ಒಂದೇ ವರ್ಷ 81 ಹೆಣ್ಣು ಮಕ್ಕಳು ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆ ಆಗುವಾಗ ತೀರಿಕೊಂಡಿದ್ದೇಕೆ?

ನಮ್ಮ ಕಡೋಲಿಯ ಗಾಯಿತ್ರಿ ಪಾಟೀಲರಂಥ ಹೆಣ್ಣು ಮಕ್ಕಳು ಆರೋಗ್ಯ ತಪಾಸಣೆ ಮಾಡಿಸಿರಲಿಲ್ಲವೇ? ಆ ತಾಯಿ ಸತ್ತದ್ದೇಕೆ? ಒಂದು ಸಾವನ್ನು ಕೆದಕುತ್ತ ಕೆದಕುತ್ತ ಹೋದರೆ ನಮ್ಮ ಆರೋಗ್ಯ ವ್ಯವಸ್ಥೆಯ ಅವ್ಯವಸ್ಥೆಯ ಕತೆಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ದುರ್ಲಕ್ಷ್ಯಗಳೇ ಆರೋಗ್ಯ ಕೇಂದ್ರಗಳನ್ನು ಸುತ್ತುವರೆದಿರುವುದು ಎದ್ದು ಕಾಣುತ್ತದೆ.

ಶಿಕ್ಷಿತರು, ಕೈಯಲ್ಲಿ ಕಾಸಿರುವಂಥವರು ಸರ್ಕಾರಿ ಆಸ್ಪತ್ರೆಯ ಕಡೆಗೆ ಹೊರಳದಿರುವುದು, ಸರ್ಕಾರಿ ಆಸ್ಪತ್ರೆಯೆಂದರೆ ಕೇವಲ ಬಡವರ, ಬಿಪಿಎಲ್‌ನವರ, ಕೂಲಿಕಾರರ, ಹಿಂದುಳಿದವರ ಆರೋಗ್ಯ ಕೇಂದ್ರವಾಗಿರುವುದು, ಆ ಕಾರಣಕ್ಕಾಗಿಯೇ ಉನ್ನತ ಹುದ್ದೆಯಲ್ಲಿರುವ ಯಾರೂ ಅದರ ಸುಧಾರಣೆಗೆ ಮನಸ್ಸು ಮಾಡದಿರುವುದು ಎದ್ದು ಕಾಣುತ್ತದೆ.

ಒಂದೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕನಿಷ್ಠವೆಂದರೂ ಹೆರಿಗೆ ತಜ್ಞರು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರ ನೇಮಕ ಆಗಿರಬೇಕು. ‘ವೈದ್ಯಕೀಯ ಓದಿದವರೊಬ್ಬರೂ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಬರುವುದೇ ಇಲ್ಲ’ ಎಂದು ರಾಗ ಎಳೆಯುವ ಉನ್ನತ ಅಧಿಕಾರಿಗಳು ಅಥವಾ ಮಂತ್ರಿಗಳು ಅವರನ್ನು ಆಕರ್ಷಿಸಲು ಏನು ಮಾಡುತ್ತಿದ್ದಾರೆ? ಎಷ್ಟು ಸಂಬಳ ಕೊಡಲೊಪ್ಪುತ್ತದೆ ನಮ್ಮ ಸರ್ಕಾರ? ಲಂಚವಿಲ್ಲದೆಯೇ ನೇಮಕಾತಿ ಸಾಧ್ಯವಿದೆಯೇ?

ಖಾಸಗೀಕರಣದತ್ತ ಮುಖ ಮಾಡಿರುವ ನಮ್ಮ ನೀತಿಗಳು ಸೇವೆ ಮಾಡಬಯಸುವ ವೈದ್ಯ ವಿದ್ಯಾರ್ಥಿಗಳನ್ನು ವ್ಯವಸ್ಥೆಯೊಳಗೆ ಬರಗೊಡುವುದಿಲ್ಲ, ಕೆಲಸ ಮಾಡಗೊಡುವುದಿಲ್ಲ. ಸಾಕಷ್ಟು ವೈದ್ಯರಿಲ್ಲದೆ, ತಜ್ಞ ವೈದ್ಯರಿಲ್ಲದೆ ಸರ್ಕಾರಿ  ಆಸ್ಪತ್ರೆಗಳು ಬಿಕೋ ಎನ್ನುತ್ತಿರುತ್ತವೆ. ವೈದ್ಯರಷ್ಟೇ ಮುಖ್ಯ ನರ್ಸ್‌ಗಳು, ಇತರೆ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ.

ಸ್ವಚ್ಛತೆ ಇಲ್ಲದಿದ್ದರೆ ಆಸ್ಪತ್ರೆಗಳೇ ರೋಗ ಹುಟ್ಟಿಸುವ ತಾಣಗಳಾಗಿ ಬದಲಾಗುತ್ತವೆ. ಇವರೆಲ್ಲರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದರೆ ಮಾತ್ರ, ಜೊತೆಗೆ ಮೇಲಧಿಕಾರಿಗಳಲ್ಲಿ ತಾಯಿ ಮರಣ, ಶಿಶುಮರಣಗಳನ್ನು ತಡೆಯಲು ತಾವಿದ್ದೇವೆ ಎನ್ನುವ ಮನೋಭಾವ ಇದ್ದರಷ್ಟೇ ಆಸ್ಪತ್ರೆಗಳು ಹೆರಿಗೆಗಳನ್ನು ಪ್ರೋತ್ಸಾಹಿಸುವ, ತಾಯಂದಿರನ್ನು ಉಳಿಸುವ ತಾಣಗಳಾಗುತ್ತವೆ. ಬೆಳಗಾವಿ ಉದಾಹರಣೆಯನ್ನೇ ತೆಗೆದುಕೊಳ್ಳಿ, ಜಿಲ್ಲಾಸ್ಪತ್ರೆ ಅದು.

ಅಂದು ಸುಮಾರು 30ಕ್ಕಿಂತ ಹೆಚ್ಚೇ ಹೆರಿಗೆಗಳಾಗುತ್ತಿದ್ದಾಗ ಕೇವಲ ಒಬ್ಬ ಗೈನಕಾಲಜಿಸ್ಟ್ ಇದ್ದರೆಂದರೆ ಅಲ್ಲಿದ್ದ ವೈದ್ಯರ ಕೊರತೆಯನ್ನು ಯಾರಾದರೂ ಊಹಿಸಬಹುದು. ‘ಮಗಳು ಸಾಯುತ್ತಿದ್ದಾಳೆ ಬನ್ನಿ’ ಎಂದು ತಾಯಿ ಕೂಗಿಕೊಂಡಾಗ ಬರಲು ಸಾಕಷ್ಟು ನರ್ಸ್, ಆಯಾಗಳು ಅಲ್ಲಿರಬೇಕಲ್ಲ?

2015ರಲ್ಲಿ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ತಾಯಂದಿರ ಸಾವನ್ನು ಕಂಡಿದ್ದು ಕರ್ನಾಟಕ. 1 ಲಕ್ಷ ಹೆರಿಗೆಯಲ್ಲಿ 133 ಮಹಿಳೆಯರು ಸಾವಿಗೀಡಾಗಿದ್ದರೆ ಪಕ್ಕದ ತಮಿಳುನಾಡಿನಲ್ಲಿ ತಾಯಿ ಮರಣ 68, ಕೇರಳದಲ್ಲಿ 61. ಕೇವಲ ಮಹಿಳೆಯರಲ್ಲಿರುವ/ ಕಿಶೋರಿಯರಲ್ಲಿರುವ ಅನೀಮಿಯಾ, ರಕ್ತಹೀನತೆಯನ್ನು ತುಂಬಿಕೊಟ್ಟಿದ್ದರೆ ಇವರಲ್ಲಿ ಶೇ 60ರಷ್ಟು ತಾಯಂದಿರ ಸಾವನ್ನು ತಡೆಯಬಹುದಾಗಿತ್ತು.

ಆದರೇನು, ಮಹಿಳೆಯರ ಪೌಷ್ಟಿಕತೆ, ಆಹಾರ ಎಂದೂ ನಮಗೆ ಮುಖ್ಯ ವಿಷಯವೇ ಅಲ್ಲ. ನಮ್ಮ ಮಹಿಳೆಯರಲ್ಲಿ ಶೇ 85ರಷ್ಟು ಮಂದಿ ರಕ್ತಹೀನತೆಯಲ್ಲೇ ಜೀವಿಸುತ್ತಿದ್ದಾರೆ.

ರಕ್ತಹೀನತೆಯಿಂದ ಬಳಲುತ್ತಿರುವ ಹದಿಹರೆಯದ ಹುಡುಗಿಯ ಮದುವೆಯಾಗುತ್ತದೆ. ಒಂದು ವರ್ಷದೊಳಗಡೆಯೇ ಹೊಟ್ಟೆಯಲ್ಲೊಂದು ಮಗು. ಅಂಥ ಹುಡುಗಿಗೆ ಹೆರಿಗೆಯಲ್ಲಿ ರಕ್ತಸ್ರಾವ ಜಾಸ್ತಿಯಾಗುವ ಸಾಧ್ಯತೆ ಬಹಳ ಹೆಚ್ಚು.

ಮೊದಲೇ ರಕ್ತಹೀನವಾಗಿದ್ದವಳು ಹೆಚ್ಚು ರಕ್ತ ಸೋರಿ ಹೋಗಿ ಬಲು ಬೇಗ ಸಾವಿನ ಅಂಚಿಗೆ ಬಂದು ನಿಲ್ಲುತ್ತಾಳೆ. ಈಕೆಗೆ ಒಳ್ಳೆಯ ಆಹಾರ ಕೊಟ್ಟು ಮೂರು ತಿಂಗಳು ಕಬ್ಬಿಣಾಂಶದ ಮಾತ್ರೆಗಳನ್ನು ನುಂಗಿಸಿದರೆ ರಕ್ತ ಹೀನತೆಯಿಂದಲೂ, ಸಾವಿನಿಂದಲೂ ಪಾರಾಗುತ್ತಾಳೆ. ಅನೀಮಿಯಾ ತಡೆಗೆ ಸರಿಯಾದ ಕಬ್ಬಿಣಾಂಶದ ಮಾತ್ರೆ ಸಿಗುವುದು ಕೇವಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಅದೂ ಉಚಿತವಾಗಿ.

ಇದರ ಹೊರತಾಗಿ ಹೊರಗಡೆ ಖಾಸಗಿಯಾಗಿ ಸಿಗುವ ಯಾವುದೇ ಕಬ್ಬಿಣಾಂಶದ ಮಾತ್ರೆಗಳಾಗಲಿ, ಟಾನಿಕ್ ಆಗಲಿ ಸರಿಯಾದ ಪ್ರಮಾಣದ್ದಲ್ಲ. ದುರದೃಷ್ಟವೆಂದರೆ ಆಯಾ ಕುಟುಂಬಕ್ಕೆ ಸೊಸೆಯ ಆಹಾರ ಕಟ್ಟಕಡೆಯ ಆದ್ಯತೆಯಾಗಿರುವಂತೆಯೇ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯಲ್ಲಿ ಕಬ್ಬಿಣಾಂಶದ ಮಾತ್ರೆಗಳನ್ನು ಸತತವಾಗಿ ಇಟ್ಟಿರುವುದು ಕೂಡ ಕಟ್ಟ ಕಡೆಯ ಆದ್ಯತೆ.

ಕೇವಲ 13 ಪೈಸೆಗೊಂದು ಮಾತ್ರೆ ಉತ್ಪಾದನೆ ಆಗುವುದರಿಂದ ಔಷಧ ತಯಾರಕರಿಗೂ ಆದ್ಯತೆಯ ಔಷಧವಲ್ಲ ಇದು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಬ್ಬಿಣಾಂಶದ ಮಾತ್ರೆಗಳ ಸರಿಯಾದ ಪೂರೈಕೆ ಇರುವುದೇ ಇಲ್ಲ. ಕಬ್ಬಿಣಾಂಶದ ಮಾತ್ರೆಗಳ ಸೇವನೆ ಬಗ್ಗೆ ಗರ್ಭಿಣಿಯರಿಗೆ ಸರಿಯಾದ ಮಾಹಿತಿ ಕೊಡುವುದು, ನಿತ್ಯ ಸೇವಿಸುತ್ತಾಳೆಯೇ ಎಂದು ಪರಿಶೀಲಿಸುವುದು ಕೂಡ ಆಗದೆ ಆಕೆ ಎಷ್ಟೋ ಬಾರಿ ಮಾತ್ರೆಗಳನ್ನು ಹಿತ್ತಲಲ್ಲಿ ಎಸೆದುಬಿಡುವ ಪ್ರಸಂಗಗಳು ಜಾಸ್ತಿ.

‘ಅಕ್ಲಾಂಪ್ಸಿಯಾ’ ತಾಯಂದಿರನ್ನು ಕೊಲ್ಲುವ ಇನ್ನೊಂದು ಪ್ರಮುಖ ರೋಗ. ರಕ್ತದೊತ್ತಡವನ್ನು ನಿಯಂತ್ರಿಸದಿದ್ದರೆ ದೇಹದಲ್ಲಿ ಉಪ್ಪಿನಂಶ ಹೆಚ್ಚಾಗಿ ತಾಯಿಯ ಪ್ರಾಣವನ್ನದು ತೆಗೆದುಕೊಳ್ಳುತ್ತದೆ. ನಿಯಮಿತವಾಗಿ ರಕ್ತದೊತ್ತಡದ ತಪಾಸಣೆ, ಸಾಮಾನ್ಯಕ್ಕಿಂತ ಜಾಸ್ತಿ ರಕ್ತದೊತ್ತಡ ಇದ್ದಲ್ಲಿ ವಿಶೇಷ ಕಾಳಜಿ ತೆಗೆದುಕೊಳ್ಳುವುದರ ಮೂಲಕ ತಾಯಿಯ ಸಾವನ್ನು ತಡೆಯಲು ಸಾಧ್ಯ.

ಕೇವಲ ಒಬ್ಬ ಆಶಾ ಕಾರ್ಯಕರ್ತೆ, ಆರೋಗ್ಯ ಕಾರ್ಯಕರ್ತೆ ತಾಯಂದಿರಿಗೆ ಮಾಹಿತಿ ನೀಡುವ ಮೂಲಕ ಹೆಚ್ಚಿನ ತಾಯಿ ಮರಣಗಳನ್ನು ಗೆಲ್ಲಬಹುದು. ಆದರೆ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಆರಂಭವಾದಾಗ ಹಳ್ಳಿ ಹಳ್ಳಿಗಳಲ್ಲಿ ತಾಯಂದಿರ ಆರೋಗ್ಯದ ಸಲುವಾಗಿ ಆಶಾ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಕಂಡುಬಂದ ಉತ್ಸಾಹ ಮುಂದೆ ಅವರನ್ನು ಕೆಲಸದಲ್ಲಿ ಉಳಿಸಿಕೊಳ್ಳುವುದರಲ್ಲಿ ಕಾಣಲಿಲ್ಲ.

ಒಂದು ಹೆರಿಗೆಗೆ ₹ 650 ಇದ್ದುದು ಬಲು ಬೇಗ ₹ 250ಕ್ಕೆ ಇಳಿದಾಗ ಆ ಆಶಾ ಕಾರ್ಯಕರ್ತೆಯರ ಉತ್ಸಾಹವೂ ಜರ್ರೆಂದು ಇಳಿದಿದ್ದೇನೂ ಆಶ್ಚರ್ಯವಲ್ಲ. ಸರ್ಕಾರದ ಉಚಿತ ಆಂಬುಲೆನ್ಸ್ ಸೇವೆ 108  ಕರೆದಾಗೆಲ್ಲ ಸಿಗುವಂತಿದ್ದರೂ ಸಮೀಪದ ಟ್ಯಾಕ್ಸಿ ಡ್ರೈವರಿಗೆ ಫೋನ್ ಮಾಡಿ ಅವರಿಂದ ಕಮಿಷನ್ ಪಡೆಯುತ್ತಿದ್ದರೆ ಅದಕ್ಕೆ ಅವರ ಪ್ರೋತ್ಸಾಹ ಧನದ ಇಳಿಕೆಯಲ್ಲದೆ ಮತ್ತೇನೂ ಕಾರಣವಲ್ಲ. ಎಷ್ಟೋ ಹಳ್ಳಿಗಳ ಹಿಂದುಳಿದ ವರ್ಗಗಳ ಗರ್ಭಿಣಿ, ಬಾಣಂತಿಯರಿಗೆ ತಮ್ಮ ಸೇವೆಗೂ 108 ಗಾಡಿ ಉಚಿತವಾಗಿ ಬರಬಹುದೆಂಬ ಕಲ್ಪನೆ ಕೂಡ ಇಲ್ಲ.  

ತಾಯಿ ಮರಣಕ್ಕೆ ಪರಿಹಾರವಿಲ್ಲ. ಕುಟುಂಬಕ್ಕಾಗಲಿ, ಅನಾಥರಾದ ಮಕ್ಕಳಿಗಾಗಲಿ ಏನೇನೂ ಪರಿಹಾರ ಸಿಗದು. ಕೆಲವು ವರ್ಷಗಳ ಹಿಂದೆ ಬಾಗಲಕೋಟೆಯ ಕೆರೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ತಪ್ಪಿನಿಂದ ತಾಯಿ ಮರಣವೊಂದಾಗಿತ್ತು. ವರ್ಷಾಂತರಗಳ ಕಾಲ ಅಲ್ಲಿನ ಸಂಘಟನೆಗಳು, ಮಾನವ ಹಕ್ಕುಗಳ ಸಂಘಟನೆ ಸೇರಿ ಆ ಕುಟುಂಬಕ್ಕೆ ನ್ಯಾಯ ಒದಗಿಸಲು ಹೋರಾಡಿದರೂ ಏನೇನೂ ಸಿಗಲಿಲ್ಲ. ಜನರ ಆರೋಗ್ಯದ ಹಕ್ಕಿಗೆ ನಮ್ಮ ಆಡಳಿತದಿಂದ ಯಾವುದೇ ಮನ್ನಣೆ ಇಲ್ಲ.

ಇರುವ ಅಲ್ಪಸ್ವಲ್ಪ ಜವಾಬ್ದಾರಿಯನ್ನೂ ಎಷ್ಟು ಬೇಗ ಕಳಚಿಕೊಂಡೇನು ಎಂದು ದಾರಿ ಹುಡುಕುತ್ತಿದೆ. ಉತ್ತಮವಾಗಿ ನಡೆಯುತ್ತಿರುವಂಥ ಉಡುಪಿಯ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯನ್ನೇ ಖಾಸಗಿಗೆ ಕೊಡಲು ಸರ್ಕಾರ ಹೊರಟಿದೆ. (ಉಡುಪಿಯ ತಾಯಿ ಮರಣ ಸಂಖ್ಯೆ ಕೇವಲ 2) ಇನ್ನು ಕಳಪೆ ಸೇವೆ, ಸಿಬ್ಬಂದಿ ಕೊರತೆ, ಹೊಲಸು ಆವರಣ ಎಲ್ಲವೂ ಬೇಜಾನಾಗಿ ಇರುವಂಥ ಬೆಳಗಾವಿ ಆಸ್ಪತ್ರೆಯನ್ನು ಖಾಸಗಿಗೆ ಹಸ್ತಾಂತರಿಸಲು ಸರ್ಕಾರಕ್ಕೆ ನೆವ ಬೇಕೆ? ‘ಸಿಬ್ಬಂದಿ ಇಲ್ಲ, ಸೇವೆ ಇಲ್ಲ, ಅದಕ್ಕಾಗಿ ಖಾಸಗಿಗೆ ಕೊಡುತ್ತೇವೆ’ ಎನ್ನಲು ಎಷ್ಟು ಸಮಯ ಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT