ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಬಿಟ್‌ ಕಾರ್ಡ್‌ ಮಾಹಿತಿ ಸೋರಿಕೆ: ಹೆಚ್ಚಲಿ ಸುರಕ್ಷತೆ

Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ದೇಶಿ ಬ್ಯಾಂಕಿಂಗ್ ವ್ಯವಸ್ಥೆಗೆ ಕನ್ನ ಹಾಕಿ 32 ಲಕ್ಷ ಗ್ರಾಹಕರ ಡೆಬಿಟ್‌ ಕಾರ್ಡ್‌ಗಳ ಮಾಹಿತಿ ಕದ್ದು  ವಿದೇಶಿ ನೆಲದಿಂದಲೇ ₹ 1.3 ಕೋಟಿಯಷ್ಟು ಹಣ ವಂಚಿಸಿದ ಘಟನೆಗೆ ಹಲವಾರು ಆಯಾಮಗಳು ಇರುವುದು ಹೆಚ್ಚು ಆತಂಕ ಮೂಡಿಸುವ ವಿದ್ಯಮಾನವಾಗಿದೆ.

ದೇಶದ ಬ್ಯಾಂಕಿಂಗ್ ಇತಿಹಾಸದಲ್ಲೇ  ಅತಿ ದೊಡ್ಡ  ಮಾಹಿತಿ ಕನ್ನ ಪ್ರಕರಣ ಇದಾಗಿದೆ. ವಿದೇಶದಲ್ಲಿದ್ದುಕೊಂಡೆ ಡೆಬಿಟ್‌ ಕಾರ್ಡ್‌ಗಳ ಮಾಹಿತಿ ಕದ್ದ ಖದೀಮರು (ಹ್ಯಾಕರ್ಸ್‌) ತಮ್ಮ ವಂಚನೆಯ ಸಾಕ್ಷ್ಯಗಳೇ ಸಿಗದಂತೆ ಮಾಡಿರುವುದು ಸೈಬರ್‌ ದಾಳಿ ಎದುರಿಸುವಲ್ಲಿನ ನಮ್ಮ ಬ್ಯಾಂಕಿಂಗ್‌ ವ್ಯವಸ್ಥೆಯ ಭದ್ರತಾ ವೈಫಲ್ಯಕ್ಕೆ ನಿದರ್ಶನವಾಗಿದೆ.

ತುಂಬ ತಡವಾಗಿಯಾದರೂ ಎಚ್ಚೆತ್ತುಕೊಂಡ  ಬ್ಯಾಂಕ್‌ಗಳು ಅಗತ್ಯ ಕ್ರಮ ಕೈಗೊಂಡು   ಹೆಚ್ಚಿನ ಹಣಕಾಸು ನಷ್ಟ ತಡೆದಿವೆ.  60 ಕೋಟಿ ಡೆಬಿಟ್‌ ಕಾರ್ಡ್‌ಗಳಲ್ಲಿ ಕೇವಲ ಶೇ 0.5ರಷ್ಟು ಕಾರ್ಡ್‌ಗಳ ಮಾಹಿತಿ ಸೋರಿಕೆಯಾಗಿದ್ದು,  ಆತಂಕಪಡಬೇಕಾಗಿಲ್ಲ ಎಂದು  ಸರ್ಕಾರವೂ ಭರವಸೆ ನೀಡಿರುವುದರಿಂದ ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ನಷ್ಟದ ಪ್ರಮಾಣ ಸೀಮಿತವಾಗಿರುವುದು ಆಕಸ್ಮಿಕವೇ ಹೊರತು, ತಂತ್ರಜ್ಞಾನ ನೆರವಿನಿಂದಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಆದರೆ, ಬ್ಯಾಂಕ್‌ಗಳ ಸುರಕ್ಷಿತ ವಹಿವಾಟಿನ ಬಗ್ಗೆಯೇ ಈ ಘಟನೆ ಗ್ರಾಹಕರಲ್ಲಿ ಅಪನಂಬಿಕೆ  ಮೂಡಿಸಿದೆ. ಎಟಿಎಂಗಳ ಬಳಕೆಯಲ್ಲಿ ಈಗಾಗಲೇ ಇರುವ ಅಸುರಕ್ಷಿತ ಭಾವನೆಗೆ ಈ ಘಟನೆ ಇನ್ನಷ್ಟು ಇಂಬು ನೀಡಿದೆ. ಪ್ಲಾಸ್ಟಿಕ್‌ ಕಾರ್ಡ್‌ (ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌) ಮತ್ತು ಆನ್‌ಲೈನ್‌ ವಹಿವಾಟುಗಳ ಬಗ್ಗೆ ಬ್ಯಾಂಕ್‌ ಗ್ರಾಹಕರ ವಿಶ್ವಾಸಕ್ಕೆ ಧಕ್ಕೆ ಒದಗಿದೆ.

ಹಲವಾರು ಅನುಕೂಲಗಳ ಹೊರತಾಗಿಯೂ ಖಾತೆಯಲ್ಲಿನ ಹಣ ಕಳೆದುಕೊಳ್ಳುವ ಭೀತಿಯಿಂದ  ಉದ್ಯಮಿಗಳು ಮತ್ತು  ಜನಸಾಮಾನ್ಯರು ಇನ್ನು ಮುಂದೆ ಡೆಬಿಟ್‌ ಕಾರ್ಡ್ ಬಳಕೆಗೆ ಹಿಂದೇಟು ಹಾಕಬಹುದು. ನಗದುರಹಿತ ಅರ್ಥ ವ್ಯವಸ್ಥೆ ಸೃಷ್ಟಿಸುವ ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಇದರಿಂದ ಭಾರಿ ಪೆಟ್ಟು ಬೀಳಲಿದೆ.

ಇದೊಂದು ದೇಶಿ ಬ್ಯಾಂಕಿಂಗ್‌ ವ್ಯವಸ್ಥೆ ಮೇಲಿನ ಸೈಬರ್‌ ದಾಳಿಯಾಗಿದೆ. ಹೀಗಾಗಿ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಭದ್ರತಾ ಲೋಪ ಎಂದಷ್ಟೆ ಇದನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಇದರಲ್ಲಿ ದೇಶದ ಭದ್ರತೆಯ ಪ್ರಶ್ನೆಯೂ ಅಡಗಿರುವುದನ್ನು ಸರ್ಕಾರ, ಆರ್‌ಬಿಐ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಈ ಮಾಹಿತಿ ಕಳ್ಳತನವು ಕೆಲ ವಾರಗಳ ನಂತರವೇ ಅನುಭವಕ್ಕೆ ಬರುವಂತೆ ಮತ್ತು ತನ್ನ ಕೃತ್ಯ ಪೂರ್ಣಗೊಂಡ ನಂತರ ತನ್ನಷ್ಟಕ್ಕೆ ತಾನೇ ನಾಶವಾಗುವ ರೀತಿಯಲ್ಲಿ ಹ್ಯಾಕರ್ಸ್‌ಗಳು ಈ ಕುತಂತ್ರಾಂಶವನ್ನು ಅತ್ಯಾಧುನಿಕ ರೀತಿಯಲ್ಲಿ  ಅಭಿವೃದ್ಧಿಪಡಿಸಿರುವುದಾಗಿ ಶಂಕಿಸಲಾಗಿದೆ.   ವಂಚನೆ ನಡೆದಿರುವುದು ಅನುಭವಕ್ಕೆ ಬರುವ ಹೊತ್ತಿಗೆ ಖಾತೆಯಲ್ಲಿನ ಹಣ ವಂಚಕರ ಪಾಲಾಗಿದೆ.  ಬ್ಯಾಂಕ್‌ಗಳಿಗೂ ಈ ವಂಚನೆಯ ವಾಸನೆ ತಡವಾಗಿ ಅನುಭವಕ್ಕೆ ಬಂದಿರುವುದು ಈ ಶಂಕೆ ಪುಷ್ಟೀಕರಿಸುತ್ತದೆ. 

ಡೆಬಿಟ್‌ ಕಾರ್ಡ್‌ನ ಮಾಹಿತಿ ಸೋರಿಕೆಯ  ಈ ಭದ್ರತಾ ಲೋಪವು ಗ್ರಾಹಕರ ಗಮನಕ್ಕೆ ಬಂದಿರದೇ ನಡೆದಿರುವುದರಿಂದ  ಮತ್ತು ಇದರಲ್ಲಿ  ಗ್ರಾಹಕರ ತಪ್ಪೇನೂ ಇರದಿರುವುದರಿಂದ ಬ್ಯಾಂಕ್‌ಗಳು, ಎಟಿಎಂ ನಿರ್ವಹಣೆಯ ಹೊರಗುತ್ತಿಗೆ ಪಡೆದುಕೊಂಡಿರುವ ಸಂಸ್ಥೆಗಳೇ ನಷ್ಟ ಭರ್ತಿ ಮಾಡಿಕೊಡಲಿವೆ.  ಹೀಗಾಗಿ ಗ್ರಾಹಕರು ಹಣ ಕಳೆದುಕೊಳ್ಳುವ ಬಗ್ಗೆ ಆತಂಕ ಪಡಬೇಕಾಗಿಲ್ಲ.

ಹಿಟಾಚಿ ಪೇಮೆಂಟ್‌ ಸರ್ವಿಸಸ್‌ನಲ್ಲಿ ಸೇರ್ಪಡೆ  ಮಾಡಲಾದ ಈ ಕುತಂತ್ರಾಂಶವು ಯೆಸ್‌ ಬ್ಯಾಂಕ್‌ ಎಟಿಎಂಗಳ ಮೂಲಕ ತನ್ನ ಕೈಚಳಕ ತೋರಿಸಿರುವುದು ದೇಶಿ ಬ್ಯಾಂಕಿಂಗ್‌ ವ್ಯವಸ್ಥೆಗೆ ದೊಡ್ಡ ಪಾಠವಾಗಿದೆ. ಬ್ಯಾಂಕಿಂಗ್ ವಹಿವಾಟಿನ ಸುರಕ್ಷತೆ ಹೆಚ್ಚಿಸಲು ಬ್ಯಾಂಕ್‌ಗಳು ಯುದ್ಧೋಪಾದಿಯಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ.

ಬ್ಯಾಂಕಿಂಗ್‌ ಸೇವೆಗಳ ಹೊರಗುತ್ತಿಗೆಯನ್ನೇ ಆಮೂಲಾಗ್ರವಾಗಿ ಪರಾಮರ್ಶಿಸಬೇಕಾಗಿದೆ. ಪರಿಣತ ತಂತ್ರಜ್ಞರ ತಂಡದ ನೆರವಿನಿಂದ ಈ ಕುತಂತ್ರಾಂಶ ಬಳಸಿದ ದುಷ್ಟರನ್ನು ಪತ್ತೆ ಹಚ್ಚುವ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸೈಬರ್‌ ಸುರಕ್ಷತೆ ಹೆಚ್ಚಿಸಲು ಬ್ಯಾಂಕ್‌ಗಳು  ತುರ್ತಾಗಿ ಕ್ರಮ ಕೈಗೊಂಡರೆ ಮಾತ್ರ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳ ವಿಶ್ವಾಸಾರ್ಹತೆ ಹೆಚ್ಚೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT