ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದಿಂದ ₹ 11,300 ಕೋಟಿ ಬೆಳೆ ಹಾನಿ

ಪ್ರವಾಹದಿಂದ 10 ಮಂದಿ ಸಾವು, 23ಸಾವಿರ ಮನೆಗಳಿಗೆ ಹಾನಿ, ₹ 2,485 ಕೋಟಿ ನಷ್ಟ
Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಬರ ಪೀಡಿತ 110 ತಾಲ್ಲೂಕುಗಳಲ್ಲಿ ₹ 11,300 ಕೋಟಿ ಮೊತ್ತದ ಬೆಳೆ ನಷ್ಟ ಆಗಿದೆ ಎಂದು ರಾಜ್ಯ ಸರ್ಕಾರ ಅಂದಾಜು ಮಾಡಿದೆ. ಹೈದರಾಬಾದ್‌– ಕರ್ನಾಟಕ ಭಾಗದಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಉಂಟಾದ  ಪ್ರವಾಹದಲ್ಲಿ ₹ 2,485 ಕೋಟಿ ಮೊತ್ತದ ಬೆಳೆ, ಆಸ್ತಿಪಾಸ್ತಿ ನಷ್ಟ ಆಗಿದೆ ಎಂದೂ ಸರ್ಕಾರದ ಸಮೀಕ್ಷೆ ಖಚಿತಪಡಿಸಿದೆ.

ಬರ ಪರಿಹಾರಕ್ಕೆ ₹ 3,300 ಕೋಟಿ ಮತ್ತು ಪ್ರವಾಹದ ಹಾನಿಗೆ ₹ 386 ಕೋಟಿ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಕಮಿಷನರ್‌ ಜೊತೆ ಸಮಾಲೋಚನೆ ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಪ್ಪಿಗೆ ಪಡೆದು ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಬರ ಮತ್ತು ಪ್ರವಾಹದಿಂದ ಉಂಟಾಗಿರುವ ನಷ್ಟವನ್ನು ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ತಂಡ ಜಂಟಿಯಾಗಿ ಸಮೀಕ್ಷೆ ನಡೆಸಿ ಅಂದಾಜಿಸಿದೆ.

ಬರ ಪೀಡಿತ ತಾಲ್ಲೂಕುಗಳಲ್ಲಿ ರಾಗಿ, ಜೋಳ, ಶೇಂಗಾ, ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ ಹೆಚ್ಚು ಹಾನಿಗೊಳಗಾಗಿದೆ. ಒಟ್ಟು 25 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಕೃಷಿ ಉತ್ಪನ್ನಗಳು ನಷ್ಟವಾಗಿದೆ.

ಕಲಬುರ್ಗಿ, ಯಾದಗರಿ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯಲ್ಲಿ ಭತ್ತ, ಜೋಳ, ಉದ್ದು, ತೊಗರಿಗೆ ಹೆಚ್ಚು ನಷ್ಟ ಉಂಟಾಗಿದೆ. ಕಟ್ಟಡಗಳು, ರಸ್ತೆ ಸೇರಿದಂತೆ ಮೂಲಸೌಕರ್ಯಗಳೂ ಹಾನಿಗೆ ಒಳಗಾಗಿವೆ.

ಪ್ರವಾಹದಲ್ಲಿ 10 ಮಂದಿ ಮೃತಪಟ್ಟಿದ್ದಾರೆ.  217 ಜಾನುವಾರುಗಳು ಸತ್ತಿವೆ. 23 ಸಾವಿರ ಮನೆಗಳು ಹಾನಿಗೆ ಒಳಗಾಗಿವೆ ಎಂದೂ ಸಮೀಕ್ಷೆ ಹೇಳಿದೆ. ಈ ತಾಲ್ಲೂಕುಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 50 ದಿನ ಹೆಚ್ಚುವರಿ ಕೆಲಸ ನೀಡಲು ಅಗತ್ಯವಾದ ಅನುದಾನ ಬಿಡುಗಡೆ ಮಾಡುವಂತೆಯೂ ಮನವಿಯಲ್ಲಿ ವಿನಂತಿಸಲಾಗುವುದು ಎಂದೂ ಮೂಲಗಳು ತಿಳಿಸಿವೆ.

ಬರ ಪರಿಹಾರವಾಗಿ ಈಗಾಗಲೇ 17 ಮೇವು ಬ್ಯಾಂಕ್‌ಗಳನ್ನು ತೆರೆಯಲಾಗಿದೆ. 12 ಜಿಲ್ಲೆಗಳ 190 ಹಳ್ಳಿಗಳಿಗೆ 328 ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ವಿಪತ್ತು ಪರಿಹಾರ ನಿಧಿಯಲ್ಲಿ (ಎಸ್‌ಡಿಆರ್‌ಎಫ್‌) ₹ 2 ಕೋಟಿಗೂ ಕಡಿಮೆ ಇರುವ ಜಿಲ್ಲೆಗಳಿಗೆ ಹೆಚ್ಚುವರಿಯಾಗಿ ಅನುದಾನ ಬಿಡುಗಡೆ ಮಾಡಲಾಗಿದೆ. ಬರ ಪರಿಹಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸದ್ಯ ಅನುದಾನದ ಕೊರತೆ ಇಲ್ಲ ಎಂದೂ ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರದ ಮಾರ್ಗಸೂಚಿ:  ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಮಳೆಯಾಶ್ರಿತ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್‌ಗೆ ₹ 6,800 ನಷ್ಟ ಪರಿಹಾರ ನೀಡುವಂತೆ ಮನವಿ ಸಲ್ಲಿಸಲು ಅವಕಾಶ ಇದೆ. ನೀರಾವರಿ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್‌ಗೆ ₹ 13,500 ಹಾಗೂ ಬಹು ವಾರ್ಷಿಕ ಬೆಳೆಗೆ (ತೆಂಗು, ಅಡಿಕೆ) ಪ್ರತಿ ಹೆಕ್ಟೇರ್‌ಗೆ ₹ 18,000 ಪರಿಹಾರ ಕೇಳಬಹುದಾಗಿದೆ.

ರಾಜ್ಯ ಸರ್ಕಾರ ಮನವಿ ಸಲ್ಲಿಸಿದ ಬಳಿಕ ಕೇಂದ್ರ ಸರ್ಕಾರ ಪರಿಸ್ಥಿತಿ ಅಧ್ಯಯನಕ್ಕೆ ತಂಡ ಕಳುಹಿಸಲಿದೆ. ಈ ತಂಡ ನೀಡುವ ವರದಿಯನ್ನು ಕೇಂದ್ರ ಉನ್ನತ ಸಮಿತಿ ಪರಿಶೀಲಿಸಿ ಪರಿಹಾರ ಮೊತ್ತ ನಿರ್ಧರಿಸಲಿದೆ. ಕಳೆದ ಸಾಲಿನಲ್ಲಿ ಬರದಿಂದ ₹ 15 ಸಾವಿರ ಕೋಟಿ ನಷ್ಟ ಉಂಟಾಗಿದ್ದು. ₹ 3,850 ಕೋಟಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಕೇಂದ್ರ ₹ 1,540 ಕೋಟಿ ಬಿಡುಗಡೆ ಮಾಡಿತ್ತು ಎಂದೂ ಮೂಲಗಳು ತಿಳಿಸಿವೆ.

ಇನ್ನಷ್ಟು ತಾಲ್ಲೂಕುಗಳಲ್ಲಿ ಬರ
ಸೆಪ್ಟೆಂಬರ್‌ ತಿಂಗಳ ಅಂತ್ಯದವರೆಗಿನ ಮಳೆ ಕೊರತೆ ಆಧಾರದಲ್ಲಿ ಈವರೆಗೆ ಬರ ಪೀಡಿತ ತಾಲ್ಲೂಕುಗಳನ್ನು ಘೋಷಿಸಲಾಗಿದೆ. ಆದರೆ, ಕಳೆದ ನಾಲ್ಕು ವಾರಗಳಿಂದ (ಅಕ್ಟೋಬರ್‌ ತಿಂಗಳಲ್ಲಿ) ಮಳೆ ಕೊರತೆ ಮುಂದುವರಿದಿರುವುದರಿಂದ ಬರ ಪೀಡಿತ ತಾಲ್ಲೂಕುಗಳ ಸಂಖ್ಯೆ ಇನ್ನೂ 20ರಿಂದ 25ರಷ್ಟು ಹೆಚ್ಚುವ ಸಾಧ್ಯತೆ ಇದೆ. ಈ ಬಗ್ಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ನಿರ್ಧರಿಸಲಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಜೂನ್‌ ತಿಂಗಳಲ್ಲಿ ಶೇ 13ರಷ್ಟು ಹೆಚ್ಚುವರಿ ಮಳೆ ಬಿದ್ದಿದೆ. ಆದರೆ, ನಂತರದ ಎಲ್ಲ ತಿಂಗಳುಗಳಲ್ಲಿ ಮಳೆ ಅಭಾವ ಉಂಟಾಗಿದೆ. ಜುಲೈನಲ್ಲಿ ಶೇ 17, ಆಗಸ್ಟ್‌ನಲ್ಲಿ ಶೇ 39, ಸೆಪ್ಟೆಂಬರ್‌ನಲ್ಲಿ ಶೇ 31ರಷ್ಟು ಮಳೆ ಅಭಾವ ಉಂಟಾಗಿದ್ದರೆ, ಅಕ್ಟೋಬರ್‌ನಲ್ಲಿ ಶೇ 75ರಷ್ಟು ಕೊರತೆ ಉಂಟಾಗಿದೆ. ಅದರಲ್ಲೂ ಕೆಲವು ಭಾಗಗಳಲ್ಲಿ ಶೇ 95ಕ್ಕೂ ಹೆಚ್ಚು ಕೊರತೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT