ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಕೌಂಟರ್‌ನಲ್ಲಿ 24 ನಕ್ಸಲರ ಹತ್ಯೆ

ಆಂಧ್ರ–ಒಡಿಶಾ ಗಡಿಯಲ್ಲಿ ನಕ್ಸಲ್‌ ವಿಶೇಷ ನಿಗ್ರಹ ಪಡೆ ಕಾರ್ಯಾಚರಣೆ
Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಹೈದರಾಬಾದ್: ಮಾವೋವಾದಿಗಳಿಗೆ ದೊಡ್ಡ ಪೆಟ್ಟು ನೀಡಿರುವ ನಕ್ಸಲ್ ನಿಗ್ರಹ ವಿಶೇಷ ಪಡೆ ಗ್ರೇ ಹೌಂಡ್ಸ್, ಆಂಧ್ರ ಪ್ರದೇಶ–ಒಡಿಶಾ ಗಡಿಯಲ್ಲಿ (ಎಒಬಿ) 24 ನಕ್ಸಲರನ್ನು ಹತ್ಯೆ ಮಾಡಿದೆ.

ಹತ್ಯೆಯಾದವರಲ್ಲಿ ಎಒಬಿ ಭಾಗದ ಕಾರ್ಯದರ್ಶಿ ಮತ್ತು ಕೇಂದ್ರೀಯ ಸಮಿತಿ ಸದಸ್ಯ ಗಜರ್ಲಾ ರವಿ ಅಲಿಯಾಸ್ ಉದಯ್ ಮತ್ತು ಪೂರ್ವ ವಿಭಾಗದ ಸಮಿತಿ ಸದಸ್ಯ ಬಕೂರಿ ವೆಂಕಟ ರಮಣ ಅಲಿಯಾಸ್ ಗಣೇಶ್ ಕೂಡಾ ಸೇರಿದ್ದಾರೆ.

ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯ ರಾಮಗಡ ಮತ್ತು ಪನಸ್‌ಪುತ್ ನಡುವಿರುವ ರಾಮಗಡ ಅರಣ್ಯದಲ್ಲಿ ಸೋಮವಾರ ಮುಂಜಾನೆ ಈ ಘಟನೆ ನಡೆದಿದೆ.
ಎನ್‌ಕೌಂಟರ್ ನಡೆದ ಪ್ರದೇಶದಲ್ಲಿ ಎ.ಕೆ 47 ಬಂದೂಕು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಸ್ಫೋಟಕ ವಶಪಡಿಸಿಕೊಳ್ಳಲಾಗಿದೆ.

ನಕ್ಸಲರ ಬೆನ್ನೆಲುಬಾಗಿದ್ದ ಹಾಗೂ ಕೇಂದ್ರ ಸಮಿತಿಯ ಕಾರ್ಯದರ್ಶಿ ರಾಮಕೃಷ್ಣ (ಆರ್‌ಕೆ) ಮತ್ತು ಇತ್ತೀಚೆಗೆ ನಕ್ಸಲರ ಗುಂಪು ಸೇರಿದ್ದ ಈತನ ಪುತ್ರ ಮುನ್ನಾ, ದಾಳಿ ವೇಳೆ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.

ಒಡಿಶಾ ಪೊಲೀಸರು ಹಾಗೂ  ಆಂಧ್ರ ಪ್ರದೇಶದ ನಕ್ಸಲ್ ನಿಗ್ರಹ ವಿಶೇಷ ಪಡೆ ಗ್ರೇ ಹೌಂಡ್ಸ್ ಜಂಟಿ ಕಾರ್ಯಾಚರಣೆ ನಡೆಸಿತು. ಅರಣ್ಯದೊಳಗೆ ಸುಮಾರು 10 ಕಿ.ಮೀ ದೂರದಲ್ಲಿ ನಕ್ಸಲರು ಸಭೆ ನಡೆಸುತ್ತಿದ್ದ ಸ್ಥಳವನ್ನು ವಿಶೇಷ ಪಡೆಗಳು ಪತ್ತೆ ಹಚ್ಚಿದವು. ಈ ವೇಳೆ ನಕ್ಸಲರು ಮತ್ತು ಭದ್ರತಾ ಪಡೆ ಮಧ್ಯೆ ಗುಂಡಿನ ಚಕಮಕಿ ನಡೆಯಿತು. ಗುಂಪಿನಲ್ಲಿದ್ದ ಆರು ಮಹಿಳೆಯರು ಸೇರಿ 24 ನಕ್ಸಲರು ಮೃತಪಟ್ಟರು. ವಿಶೇಷ ಪಡೆಯ ಇಬ್ಬರು ಕಮಾಂಡೋಗಳು ಗಾಯಗೊಂಡರು.  ಈ ಬಳಿಕ ಸುಮಾರು ನಾಲ್ಕು ಗಂಟೆ ಕಾಲ ಶೋಧ ಕಾರ್ಯಾಚರಣೆ ನಡೆಯಿತು.

‘ನಾಲ್ಕು ಎ.ಕೆ. 47 ಬಂದೂಕು,  ಎರಡು ಎಸ್‌ಎಲ್ಆರ್‌ ಮತ್ತು ಎರಡು ಇನ್ಸಾಸ್‌ ಬಂದೂಕುಗಳು ಸ್ಥಳದಲ್ಲಿ ದೊರೆತಿರುವುದರಿಂದ  ಹಿರಿಯ ನಕ್ಸಲರೇ ಸಭೆಯಲ್ಲಿ ಭಾಗಿಯಾಗಿದ್ದರು ಎಂದು ಅಂದಾಜಿಸಲಾಗಿದೆ. ಗುರುತು ಪತ್ತೆಯಾಗುವ ತನಕ ಸತ್ತ ನಕ್ಸಲರ ಹೆಸರು ಬಹಿರಂಗಪಡಿಸಲಾಗದು’ ಎಂದು ವಿಶಾಖಪಟ್ಟಣ ಎಸ್‌ಪಿ ರಾಹುಲ್‌ದೇವ್ ಶರ್ಮಾ ತಿಳಿಸಿದ್ದಾರೆ.

ಗಾಯಗೊಂಡ ಕಮಾಂಡೋಗಳನ್ನು ಹೆಲಿಕಾಪ್ಟರ್‌ ಮೂಲಕ ವಿಶಾಖಪಟ್ಟಣದ ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಟೀಕೆ:  ತೆಲಂಗಾಣ ಪ್ರಜಾಸತ್ತಾತ್ಮಕ ರಂಗ (ಟಿಡಿಎಫ್) ಮತ್ತು ಕ್ರಾಂತಿಕಾರಿ ಬರಹಗಾರರ ವೇದಿಕೆಗಳು ನಕ್ಸಲರ ಹತ್ಯೆಯನ್ನು ಖಂಡಿಸಿದ್ದು, ಇದು ನಕಲಿ ಎನ್‌ಕೌಂಟರ್ ಎಂದಿವೆ. 

‘ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ನಕ್ಸಲರು ಸರ್ವಸದಸ್ಯರ ಸಭೆ  ನಡೆಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಇಸ್ರೇಲ್ ಡ್ರೋನ್‌ಗಳ ಮೂಲಕ ನಕ್ಸಲರಿರುವ ಸ್ಥಳವನ್ನು ಪತ್ತೆಹಚ್ಚಿ ಪೊಲೀಸರು ಹತ್ಯೆ ಮಾಡಿದ್ದಾರೆ. ಗಾಯಾಳು ನಕ್ಸಲರಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಪ್ರಕರಣ ದಾಖಲಿಸಬೇಕು’ ಎಂದು ಬರಹಗಾರ ವರವರ ರಾವ್ ಅವರು ಆಗ್ರಹಿಸಿದ್ದಾರೆ. ತೆಲಂಗಾಣ ಪ್ರಜಾಸತ್ತಾತ್ಮಕ ರಂಗವು  ನಕ್ಸಲರ ಹತ್ಯೆಗೆ ಚಂದ್ರಬಾಬು ನಾಯ್ಡು ಸರ್ಕಾರವನ್ನು  ದೂರಿದೆ.

ಹೈಕೋರ್ಟ್‌ಗೆ ಪಿಐಎಲ್: ಸಂಬಂಧಿಕರು ಶವಗಳನ್ನು ಗುರುತಿಸುವವರೆಗೆ ಮರಣೋತ್ತರ ಪರೀಕ್ಷೆ ನಡೆಸದಂತೆ ಆಗ್ರಹಿಸಿ ಎಪಿ ಸಿವಿಲ್ ಲಿಬರ್ಟೀಸ್ ಕಮಿಟಿ ಕಾರ್ಯಕರ್ತ ರಘುನಾಥನ್ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಮಲ್ಕನ್‌ಗಿರಿ ಜಿಲ್ಲಾಸ್ಪತ್ರೆ ವೈದ್ಯರ ಬದಲಾಗಿ ಕೆ.ಜಿ. ಆಸ್ಪತ್ರೆಯ ನುರಿತ ವಿಧಿವಿಜ್ಞಾನ ವೈದ್ಯರಿಂದ ಮರಣೋತ್ತರ ಪರೀಕ್ಷೆಗೆ ಅವರು ಆಗ್ರಹಿಸಿದ್ದಾರೆ.
*
ಗಜರ್ಲಾ ರವಿ ಯಾರು?
ದಾಳಿ ತಂತ್ರ ರೂಪಿಸುವಲ್ಲಿ ನಿಷ್ಣಾತ ಎನಿಸಿರುವ ರವಿ, 2003ರಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಗುರಿಯಾಗಿಸಿ ನಡೆದಿದ್ದ ಅಲಿಪಿರಿ ಸ್ಫೋಟದ ಸಂಚುಕೋರ. ವೈ.ಎಸ್‌. ರಾಜಶೇಖರ ರೆಡ್ಡಿ ಸರ್ಕಾರದ ಜತೆ ಶಾಂತಿ ಮಾತುಕತೆಯಲ್ಲೂ ಭಾಗವಹಿಸಿದ್ದ. ಈತನ ಸುಳಿವು ಕೊಟ್ಟವರಿಗೆ ₹20 ಲಕ್ಷ ಬಹುಮಾನ ಘೋಷಿಸಲಾಗಿತ್ತು.
*
ಆಂಧ್ರ ಪ್ರದೇಶ ಗಡಿಯ ದಟ್ಟ ಅರಣ್ಯದಲ್ಲಿ 25 ನಕ್ಸಲರು ಸರ್ವಸದಸ್ಯರ ಸಭೆಯಲ್ಲಿ ಭಾಗಿಯಾಗಲು ಸೇರಿದ್ದ ವೇಳೆ ದಾಳಿ ನಡೆಸಲಾಯಿತು.
ನಂದೂರಿ ಸಾಂಬಶಿವರಾವ್,
ಆಂಧ್ರಪ್ರದೇಶ ಪೊಲೀಸ್ ಮಹಾನಿರ್ದೇಶಕ
*
ಇದು ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಸರ್ಕಾರದ ನಿರಂಕುಶ ಮತ್ತು ಅಮಾನವೀಯ ಆಡಳಿತವನ್ನು ತೋರಿಸುತ್ತದೆ.
ತೆಲಂಗಾಣ ಪ್ರಜಾಸತಾತ್ಮಕ ರಂಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT