ಬೆಂಗಳೂರು: ಚಿಕ್ಕಪೇಟೆ ಸಂಚಾರ ಠಾಣೆಯ ಪಿಎಸ್‌ಐ ಡಿ.ಜಿ. ರಾಮಚಂದ್ರಯ್ಯ, ಸೋಮವಾರ ವಿಶೇಷ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಗೆ ₹1.06 ಲಕ್ಷ ದಂಡ ವಿಧಿಸಿದರು.
‘ಠಾಣೆ ವ್ಯಾಪ್ತಿಯಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ಕಾರ್ಯಾಚರಣೆ ನಡೆಸಿದ ರಾಮಚಂದ್ರಯ್ಯ 871 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜತೆಗೆ ಅತೀ ಹೆಚ್ಚು ದಂಡ ವಿಧಿಸುವ ಮೂಲಕ ದಾಖಲೆ ಮಾಡಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ಈ ಹಿಂದೆ ಕಬ್ಬನ್ ಪಾರ್ಕ್ ಸಂಚಾರ ಠಾಣೆಯ ಎಸ್‌ಐ ಉಮೇಶ್ ಉಡುಪಿ, ಒಂದೇ ದಿನ ₹65,800 ದಂಡ ಸಂಗ್ರಹಿಸಿದ್ದರು. ಜತೆಗೆ ಬ್ಯಾಟರಾಯನಪುರ ಠಾಣೆಯ ಎಸ್‌ಐ ಶಿವಸ್ವಾಮಿ ಸಹ ₹66,700 ದಂಡ ವಿಧಿಸಿದ್ದರು. ಅದಾದ ನಂತರ ರಾಮಚಂದ್ರಯ್ಯ ಅತ್ಯಧಿಕ ದಂಡ ಸಂಗ್ರಹಿಸಿದ್ದಾರೆ. ಅವರ ಕಾರ್ಯಕ್ಕೆ ಸೂಕ್ತ ಬಹುಮಾನ ನೀಡುವಂತೆ ಉನ್ನತ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು’ ಎಂದರು.