ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ತಿ ನಗರ ನೋಡಿಕೊಳ್ಳಲು ಆಗದ ಮೇಲೆ ಅಧಿಕಾರ ಯಾಕೆ

ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ವಾಗ್ದಾಳಿ
Last Updated 24 ಅಕ್ಟೋಬರ್ 2016, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಂಪೇಗೌಡರ ಹೆಸರು ಸಹಿಸಲು ಸಾಧ್ಯವಿಲ್ಲದೇ ಸರ್ಕಾರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು 4 ಭಾಗವಾಗಿ (ಬಿಬಿಎಂಪಿ) ವಿಭಜಿಸಲು ಮುಂದಾಗುತ್ತಿದೆ’  ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ವಾಗ್ದಾಳಿ ನಡೆಸಿದರು.

ಕುವೆಂಪು ಕಲಾಕ್ಷೇತ್ರದಲ್ಲಿ ಸೋಮವಾರ ರಾಜ್ಯ ಒಕ್ಕಲಿಗರ ಸಂಘ ಹಮ್ಮಿಕೊಂಡಿದ್ದ ಡಾ.ಎಂ.ಎಚ್.ಮರಿಗೌಡ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಗರವನ್ನು ನಾಲ್ಕು ಭಾಗಗಳಾಗಿ ಮಾಡಿ ಅವರಿಗೆ ಬೇಕಾದವರ ಹೆಸರನ್ನು ಇಟ್ಟುಕೊಳ್ಳಬಹುದು ಎಂಬ ಭಾವನೆ ಇದ್ದಲ್ಲಿ ನಗರದ ಜನತೆ ಅದಕ್ಕೆ ಒಪ್ಪಿಗೆ ಸೂಚಿಸುವುದಿಲ್ಲ. ನನ್ನ ಅವಧಿಯಲ್ಲಿ  ವಿಭಜನೆ ಮಾಡಿದೆ ಎಂದು ಖುಷಿ ಪಡುವ ಉದ್ದೇಶ ಸಿದ್ದರಾಮಯ್ಯ ಅವರಿಗೆ ಇದ್ದರೆ ಅದು ವಿಕೃತಿ’ ಎಂದು ಹೇಳಿದರು.

‘ನಮ್ಮ ರೈತರ ಬೆವರಿನ ಹಣದಲ್ಲಿ ಕನ್ನಂಬಾಡಿ ಕಟ್ಟೆ ಕಟ್ಟಲಾಗಿದೆ. ಅದರ ಫಲ ನಮ್ಮ ರೈತರಿಗೆ ಸಿಗಬೇಕು. ಅದನ್ನು ಬಿಟ್ಟು ಇಲ್ಲಿಯ ನೀರನ್ನು ಬೇರೆಯವರಿಗೆ ಕೊಡಿ ಎಂದು ಹೇಳಿದರೆ ಸಹಿಸಲು ಸಾಧ್ಯವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನೀರು, ಗಾಳಿ ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ, ಆದರೆ ಇದು ನ್ಯಾಯಮೂರ್ತಿಗಳಿಗೆ ಗೊತ್ತಾಗುವುದಿಲ್ಲ. ಅದೂ ಬೇರೆ ತೀರ್ಪು ನೀಡಲು ಮೂರು ನ್ಯಾಯಮೂರ್ತಿಗಳು ಇದ್ದಾರೆ. ಇವರ ಬಗ್ಗೆ ನಾವು ಮಾತನಾಡುವಂತೆಯೂ ಇಲ್ಲ. ನ್ಯಾಯಾಂಗ ನಿಂದನೆಗೆ ಗುರಿಯಾಗುತ್ತೇವೆ’ ಎಂದು  ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಭೂಮಿ ಇಲ್ಲದರಿಗೆ ಸರಕಾರ 4  ಹಸು ಕೊಡಲಿ. ಈ ಹಣಕ್ಕೆ ಸರಕಾರವೇ ಜಾಮೀನು ಕೊಡಬೇಕು. ಇದನ್ನು ಮುಂದೆ ನಾನೇ ನಿಂತು ಮಾಡಿಸ್ತೀನಿ. ನಾನು ಎಲ್ಲೂ ಓಡಿ ಹೋಗಲ್ಲ. ಯಾವ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಬಿಡಬಾರದು’ ಎಂದು ಒತ್ತಾಯಿಸಿದರು.

ಶಾಸಕ ಸಿ.ಟಿ.ರವಿ ಅವರು ಮಾತನಾಡಿ, ‘ಕೃಷಿ ಮಾರಾಕಟ್ಟೆಗಳು ದಲ್ಲಾಳಿಗಳ ಹಿಡಿತದಲ್ಲಿವೆ. ಕೃಷಿ ಪ್ರಯೋಗಗಳು ರೈತರನ್ನು ಪರಾವಲಂಬಿಯನ್ನಾಗಿಸಿವೆ. ಕೃಷಿಯನ್ನು ಉಳಿಸಿಕೊಳ್ಳುವ ಸ್ಥಿತಿ ಬಂದಿದೆ. ಬೆಳೆ ಮತ್ತು ಬೆಲೆ ನೀತಿ ಜಾರಿಗೊಂಡರೆ ಮಾತ್ರ ರೈತ ಉಳಿಯಲು ಸಾಧ್ಯ’ ಎಂದರು.

‘ಆಡಳಿತ ಮಾಡಲು ಸಾಧ್ಯ ಇಲ್ಲ ಅಂತ ಬಿಬಿಎಂಪಿಯನ್ನು ತುಂಡು ಮಾಡೋದು ಸರಿಯಲ್ಲ. ದೇಶ ತುಂಡು ಮಾಡುತ್ತಾರೆ ಎಂದಾಗ ನಮ್ಮ ಮನಸ್ಸು ಯಾವ ರೀತಿ ವ್ಯಗ್ರ ಆಗುತ್ತದೋ ಅದೇ ರೀತಿ ಬಿಬಿಎಂಪಿ ವಿಚಾರದಲ್ಲೂ ಅಗಬೇಕು. ಆಳುವ ಸರ್ಕಾರದ ತುಘಲಕ್ ದರ್ಬಾರಿಗೆ ಅವಕಾಶ ನೀಡಬಾರದು’ ಎಂದು ಟೀಕಿಸಿದರು.

‘ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಕೆರೆ ಕಟ್ಟಿಸಿ ನೆರವು ನೀಡುವ ಬಗ್ಗೆ ಚಿಂತಿಸಬೇಕಾದ ಸರ್ಕಾರ, ಉಕ್ಕಿನ  ಸೇತುವೆ ನಿರ್ಮಾಣಕ್ಕೆ ಪಣತೊಟ್ಟಿದೆ. ರಾಜ್ಯದಲ್ಲಿ ಬರಗಾಲ ಇದೆ. ಸಾವಿರ ಕೋಟಿ ವೆಚ್ಚ ಮಾಡಿ ಸೇತುವೆ ಕಟ್ಟಲು ಇದು ಸಕಾಲ ಅಲ್ಲ. ಸಮೃದ್ಧಿಯಾದಾಗ ಚಿನ್ನದ ಸೇತುವೆ ಬೇಕಾದ್ರೆ ಕಟ್ಟಲಿ’ ಎಂದು ವ್ಯಂಗ್ಯವಾಡಿದರು.
*
‘ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು’
‘ಯಾವುದೇ ಸರ್ಕಾರ ಬಂದರೂ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ಸಾಧ್ಯವಿಲ್ಲ. ಸ್ವ ಉದ್ಯೋಗ ಕಲ್ಪಿಸುವುದೊಂದೆ ಪರಿಹಾರ. ಭೂಮಿ ಇಲ್ಲದರಿಗೆ ಸರಕಾರ 4 ಹಸು ಕೊಡಲಿ. ಆ ಹಣಕ್ಕೆ ಸರಕಾರವೇ ಜಾಮೀನು ನೀಡಬೇಕು. ನಾನೇ ಮುಂದೆ ನಿಂತು ಆ ಕೆಲಸ ಮಾಡಿಸುತ್ತೇನೆ. ಯಾವ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು’ ಎಂದು ದೇವೇಗೌಡ ಹೇಳಿದರು.
*
ಪ್ರಧಾನಿಯಾಗಿ ದೆಹಲಿಗೆ ಹೋಗಿದ್ದು ದುರಂತ. ರಾಜ್ಯದಲ್ಲಿಯೇ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರೆ ನನ್ನ ರೈತರಿಗೆ ಹೆಚ್ಚು ಅನುಕೂಲ ಕಲ್ಪಿಸಬಹುದಿತ್ತು.
ಹೆಚ್.ಡಿ. ದೇವೇಗೌಡ,
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT