ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಆರೋಗ್ಯದಿಂದ ದೈಹಿಕ ಸದೃಢತೆ

Last Updated 25 ಅಕ್ಟೋಬರ್ 2016, 5:19 IST
ಅಕ್ಷರ ಗಾತ್ರ

ಕೋಲಾರ: ‘ಮನುಷ್ಯ ಮಾನಸಿಕವಾಗಿ ಆರೋಗ್ಯವಂತನಾಗಿದ್ದರೆ ಮಾತ್ರ ದೈಹಿಕವಾಗಿ ಸದೃಢನಾಗಬಹುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್ ಅಭಿಪ್ರಾಯಪಟ್ಟರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಗರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾನಸಿಕ ಕಾಯಿಲೆಗಳನ್ನು ನಿರ್ಲಕ್ಷಿಸಬಾರದು. ಮಾನಸಿಕ ಖಿನ್ನತೆಗೆ ಒಳಗಾಗಿರುವವರನ್ನು ಒಬ್ಬಂಟಿಯಾಗಿರಲು ಬಿಡಬಾರದು ಎಂದು ಹೇಳಿದರು.
ಯಾವುದೇ ಕಾಯಿಲೆಯ ಲಕ್ಷಣ ಕಾಣಿಸಿಕೊಂಡಾಗ ವೈದ್ಯರ ಬಳಿ ತೆರಳಿ ಪ್ರಥಮ ಚಿಕಿತ್ಸೆ ಪಡೆಯಬೇಕು. ಖಿನ್ನತೆಯಿಂದ ಬಳಲುತ್ತಿರುವವರ ಮೇಲೆ ಹೆಚ್ಚು ನಿಗಾ ವಹಿಸಬೇಕು.

ಜತೆಗೆ ಅವರನ್ನು ಜನರೊಂದಿಗೆ ಬೆರೆಯುವಂತೆ ಮಾಡಬೇಕು. ಆಪ್ತ ಸಮಾಲೋಚನೆಯಿಂದ ಮನೋರೋಗವನ್ನು ಪ್ರಾಥಮಿಕ ಹಂತದಲ್ಲೇ ನಿವಾರಿಸಬಹುದು ಎಂದರು.
ಬಂಧಿಸುವುದು ಸರಿಯಲ್ಲ: ಇಲಾಖೆಯ ಯೋಜನಾಧಿಕಾರಿ ಡಾ.ಎಸ್.ಜಿ.ನಾರಾಯಣಸ್ವಾಮಿ ಮಾತನಾಡಿ, ‘ಮಾನಸಿಕ ಕಾಯಿಲೆ ಪುರಾತನ ಕಾಲದಿಂದಲೂ ಮನುಷ್ಯರನ್ನು ಕಾಡುತ್ತಿದೆ. ಈ ಕಾಯಿಲೆ ಇರುವವರನ್ನು ನಾಲ್ಕು ಗೋಡೆಗಳ ಮಧ್ಯೆ ಕತ್ತಲೆಯ ಕೋಣೆಯಲ್ಲಿ ಬಂಧಿಸುವುದು ಸರಿಯಲ್ಲ’ ಎಂದು ಕಿವಿಮಾತು ಹೇಳಿದರು.

ಮೌಢ್ಯಾಚರಣೆ ಮತ್ತು ಕಂದಾಚಾರದಿಂದ ಮಾನಸಿಕ ಕಾಯಿಲೆಯನ್ನು ನಿವಾರಣೆ ಮಾಡಬಹುದೆಂದು ಜನ ನಂಬಿದ್ದಾರೆ. ಆದರೆ, ಈ ನಂಬಿಕೆ ಸರಿಯಲ್ಲ. ಮನೋರೋಗಿಗಳಿಗೆ ವೈಜ್ಞಾನಿಕವಾಗಿ ಚಿಕಿತ್ಸೆ ಕೊಡಿಸಿದರೆ ಮಾತ್ರ ಕಾಯಿಲೆ ನಿವಾರಣೆಯಾಗುತ್ತದೆ. ಮನೋರೋಗಕ್ಕೆ ಚಿಕಿತ್ಸೆ ಇಲ್ಲವೆಂದು ಜನ ನಂಬಿದ್ದ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು 1982ರಲ್ಲಿ ಚಿಕಿತ್ಸೆ ಕಂಡುಹಿಡಿಯಿತು. ಅಂದಿನಿಂದ ಪ್ರತಿ ವರ್ಷ ಅ.12ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಆಚರಿಸಲಾಗುತ್ತಿದೆ ಎಂದರು.

ಹೆಚ್ಚಿನ ಕಾಲಾವಕಾಶ: ‘ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯದಷ್ಟೇ ಮುಖ್ಯ. ಖಿನ್ನತೆ ಮತ್ತು ಬುದ್ಧಿಮಾಂದ್ಯತೆ ಇತರೆ ಕಾಯಿಲೆಗಳಂತೆ ತಕ್ಷಣಕ್ಕೆ ವಾಸಿಯಾಗುವುದಿಲ್ಲ. ಇದಕ್ಕೆ ಹೆಚ್ಚಿನ ಕಾಲಾವಕಾಶ ಬೇಕು. ಮಾನಸಿಕ ಕಾಯಿಲೆಗಳಿಗೂ ಪ್ರಥಮ ಚಿಕಿತ್ಸೆಯ ಅಗತ್ಯವಿದ್ದು, ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮನೋರೋಗದ ಬಗ್ಗೆ ತರಬೇತಿ ನೀಡಲಾಗುತ್ತಿದೆ’ ಎಂದು ಸಂಪನ್ಮೂಲ ವ್ಯಕ್ತಿ ಡಾ.ಕಲಾವತಿ ಹೇಳಿದರು.

ಮಾಟ, ಮಂತ್ರಗಳಿಂದ ಯಾವುದೇ ಕಾಯಿಲೆ ವಾಸಿಯಾಗುವುದಿಲ್ಲ. ಮನೋವೈದ್ಯರು ಹಂತ ಹಂತವಾಗಿ ಚಿಕಿತ್ಸೆ ಕೊಡುವ ಮೂಲಕ ಮಾನಸಿಕ ಕಾಯಿಲೆಗಳನ್ನು ವಾಸಿ ಮಾಡಬಹುದು. ಮನೋರೋಗಗಳ ಬಗ್ಗೆ ಇರುವ ಪೂರ್ವಾಗ್ರಹಗಳನ್ನು ತೊಡೆದು ಹಾಕಬೇಕು ಎಂದು ಸಲಹೆ ನೀಡಿದರು.

ಒತ್ತಡದಿಂದ ಬರುತ್ತವೆ: ಮನೋವೈದ್ಯ ಡಾ.ಪಾವನ ಮಾತನಾಡಿ, ‘ಮಾನಸಿಕ ಕಾಯಿಲೆಗಳು ಸಾಮಾನ್ಯವಾಗಿ ಒತ್ತಡದಿಂದ ಬರುತ್ತವೆ.  ಕೆಲವರಿಗೆ ಹುಟ್ಟಿನಿಂದಲೇ ಬುದ್ಧಿಮಾಂದ್ಯತೆ ಬರುತ್ತದೆ. ಅತಿಯಾದ ಅಸಮಾಧಾನ ಮತ್ತು ಚಿಂತೆಯು ಖಿನ್ನತೆಗೆ ಕಾರಣವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ದೃಶ್ಯ ಮಾಧ್ಯಮದಲ್ಲಿ ಕೆಲ ಪ್ರಕರಣಗಳನ್ನು ವೈಭವೀಕರಿಸುವುದು ಸಹ ಮನೋರೋಗವನ್ನು ಅತಿರೇಕಕ್ಕೆ ಕೊಂಡೊಯ್ಯುತ್ತದೆ. ಮಾನಸಿಕ ಒತ್ತಡಗಳಿಂದ ಮಧುಮೇಹ, ರಕ್ತದೊತ್ತಡ ಬರುತ್ತದೆ. ದೇಶದ 130 ಕೋಟಿ ಜನಸಂಖ್ಯೆಗೆ ಕೇವಲ 4 ಸಾವಿರ ಮನೋವೈದ್ಯರಿದ್ದಾರೆ. ಮಾನಸಿಕ ಕಾಯಿಲೆಗೆ ತುತ್ತಾದವರು ಆತ್ಮಹತ್ಯೆ ಅಥವಾ ಗಂಭೀರ ಅನಾಹುತ ಮಾಡಿಕೊಳ್ಳಲು ಮುಂದಾಗುತ್ತಾರೆ. ಆದ ಕಾರಣ ರೋಗಿಗಳನ್ನು ಒಂಟಿಯಾಗಿರಲು ಬಿಡಬಾರದು ಎಂದು ತಿಳಿಸಿದರು.

ಮನಸ್ಸಿನ ಮೇಲೆ ಒತ್ತಡ ಹೆಚ್ಚಾದಾಗ ಯುವಕರು ಮದ್ಯಪಾನ, ಧೂಮಪಾನದಂತಹ ದುಶ್ಚಟಗಳ ದಾಸರಾಗುತ್ತಾರೆ. ಈ ದುಶ್ಚಟಗಳಿಂದ ಆರೋಗ್ಯದ ಮತ್ತಷ್ಟು ಹದಗೆಡುತ್ತದೆಯೇ ಹೊರತು ಕಾಯಿಲೆ ವಾಸಿಯಾಗುವುದಿಲ್ಲ. ಅನಕ್ಷರಸ್ಥರಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಹೇಳಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಲತಾ ಪ್ರಮೀಳಾ, ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಸರಸ್ವತಿ, ವೈದ್ಯೆ ಡಾ.ವಿಜಯಕುಮಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT