ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳವಳಿ ನೆನಪು ಬಿಚ್ಚಿಟ್ಟ ಹೋರಾಟಗಾರರು

ಮೈಸೂರಿನ ಸುಬ್ಬರಾಯನಕೆರೆಯಲ್ಲಿ ‘ಮೈಸೂರು ಚಲೋ’ ದಿನಾಚರಣೆ
Last Updated 25 ಅಕ್ಟೋಬರ್ 2016, 9:35 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ‘ಮೈಸೂರು ಚಲೋ ಚಳವಳಿ’ ಸ್ಮರಣಾರ್ಥ ಸೋಮವಾರ ಕಾರ್ಯಕ್ರಮ ನಡೆಯಿತು.

ಮೈಸೂರು ಜಿಲ್ಲೆ ಮತ್ತು ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘದ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಲಾಯಿತು. ಮಹಾತ್ಮ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಸ್ವಾತಂತ್ರ್ಯ ಹೋರಾಟಗಾರರು, ಮೈಸೂರು ಸಂಸ್ಥಾನವು ಪ್ರಜಾಪ್ರಭುತ್ವದ ಆಳ್ವಿಕೆಗೆ ಒಳಪಟ್ಟ ದಿನದ ನೆನಪುಗಳನ್ನು ಮೆಲುಕು ಹಾಕಿದರು.

ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣಮೂರ್ತಿ ಮಾತನಾಡಿ, ‘1947ರ ಆಗಸ್ಟ್‌ 15ರಂದು ದೇಶಕ್ಕೆ ಸ್ವಾತಂತ್ರ್ಯ ಬಂದಿತು. ಆದರೆ, ಸಂಸ್ಥಾನಗಳ ಆಳ್ವಿಕೆಯಲ್ಲಿದ್ದ ಜನತೆಗೆ ಇದರಿಂದ ಪ್ರಯೋಜನವಾಗಲಿಲ್ಲ. ಅರಸರ ಗುಲಾಮಗಿರಿಯ ವಿರುದ್ಧ ನಡೆಸಿದ ಹೋರಾಟವೇ ಮೈಸೂರು ಚಲೋ ಚಳವಳಿ ಎಂಬ ಖ್ಯಾತಿಗೆ ಪಾತ್ರವಾಯಿತು’ ಎಂದು ಸ್ಮರಿಸಿದರು.

‘ಜಯಚಾಮರಾಜ ಒಡೆಯರಿಗೆ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರಲು ಆಸಕ್ತಿಯಿತ್ತು. ಆದರೆ, ಅವರ ಸುತ್ತ ಇದ್ದ ಕೆಲ ಅಧಿಕಾರಿಗಳು ಅರಸರ ಮನಪರಿವರ್ತನೆ ಮಾಡಿದರು. 1947ರ ಅ. 24ರಂದು ಮೈಸೂರು ಸಂಸ್ಥಾನಕ್ಕೆ ನಿಜವಾದ ಸ್ವಾತಂತ್ರ್ಯ ಲಭಿಸಿತು. ಇದಕ್ಕೆ ಕೆಲವರು ಪ್ರಾಣತ್ಯಾಗ ಮಾಡಿದರು’ ಎಂದರು.

ಉಪವಿಭಾಗಾಧಿಕಾರಿ ಸಿ.ಎಲ್‌.ಆನಂದ್‌ ಮಾತನಾಡಿ, ‘ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ದೇಶದಲ್ಲಿ 50 ಮಿಲಿಯನ್‌ ಮೆಟ್ರಿಕ್‌ ಟನ್‌ ಆಹಾರ ಧಾನ್ಯ ಉತ್ಪಾದನೆಯಾಗುತ್ತಿತ್ತು. ಈಗ 250 ಮಿಲಿಯನ್‌ ಮೆಟ್ರಿಕ್‌ ಟನ್‌ ಆಹಾರ ಧಾನ್ಯ  ಉತ್ಪಾದನೆಯಾಗುತ್ತಿದೆ. ದೇಶ ಸ್ವಾವಲಂಬಿಯಾಗಲು ಸ್ವಾತಂತ್ರ್ಯ ಹೋರಾಟಗಾರರ ಶ್ರಮವಿದೆ’ ಎಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಂ.ರೇವಣ್ಣ, ಜಿ.ಎಲ್‌.ಅಯ್ಯ, ಪಾಲಿಕೆ ಸದಸ್ಯ ಪ್ರಶಾಂತಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚನ್ನಪ್ಪ, ಬಿ.ಕರುಣಾಕರ್‌ ಇದ್ದರು.

* ಮೈಸೂರು ಸಂಸ್ಥಾನದ ಜನತೆ ಎರಡು ಬಗೆಯ ಗುಲಾಮಗಿರಿಗೆ ಸಿಲುಕಿದ್ದರು. ಬ್ರಿಟಿಷರು ಹಾಗೂ ಅರಸರ ಕಪಿಮುಷ್ಟಿಯಿಂದ ವಿಮುಕ್ತಿ ಪಡೆಯಲು ‘ಮೈಸೂರು ಚಲೋ’ ಚಳವಳಿ ಅನಿವಾರ್ಯವಾಗಿತ್ತು. -ವೆಂಕಟಾಚಾರ್‌, ಸ್ವಾತಂತ್ರ್ಯ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT