ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯ ಕಲಿಸುವವರಿಗೆ ಬೇಕಿದೆ ತರಬೇತಿ

ಕಾವ್ಯ ಕಮ್ಮಟ ಉದ್ಘಾಟಿಸಿದ ವಿಮರ್ಶಕ ಗಿರಡ್ಡಿ ಗೋವಿಂದರಾಜ
Last Updated 25 ಅಕ್ಟೋಬರ್ 2016, 9:40 IST
ಅಕ್ಷರ ಗಾತ್ರ

ಮೈಸೂರು: ‘ಕಾವ್ಯ ಕಲಿಸುವವರಿಗೆ ತರಬೇತಿಯ ಅಗತ್ಯವಿದೆ’ ಎಂದು ವಿಮರ್ಶಕ ಗಿರಡ್ಡಿ ಗೋವಿಂದರಾಜ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಬೆಳಗಾವಿ ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಸಹಯೋಗದಲ್ಲಿ ಇಲ್ಲಿನ ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಿದ್ದ ಮೂರು ದಿನಗಳ ಕಾವ್ಯ ಕಮ್ಮಟವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

‘ಪ್ರೌಢಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಹೇಗೆ ಕಲಿಸಬೇಕೆಂದು ತರಬೇತಿ ಅಗತ್ಯವಿದ್ದು, ಕಾವ್ಯ ಕಮ್ಮಟದಿಂದ ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಕಾವ್ಯ ಎನ್ನುವುದು ರಹಸ್ಯಮಯ ವ್ಯಾಪಾರ. ಕವಿ ನಿಮಿತ್ತ ಮಾತ್ರ, ಅವರೊಳಗೆ ವಿಶೇಷವಾದ ಶಕ್ತಿ ಪ್ರವೇಶಿಸಿ ಕವಿತೆ ರಚಿಸುತ್ತದೆ ಎಂದವರಿದ್ದಾರೆ. ಬೇಂದ್ರೆ ಕೂಡಾ ತಮ್ಮ ಕನಸಿನಲ್ಲಿ ದತ್ತವಾಗಿ ಸಿಕ್ಕ ಸಾಲುಗಳನ್ನು ಬರೆಯುತ್ತಿದ್ದೆ ಎಂದು ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ ಕವಿತೆಯ ರಚನೆಯ ಸಂದರ್ಭ ಸೂಚಿಯಲ್ಲಿ ಕೊಟ್ಟಿದ್ದಾರೆ. ಅವರ ಜನಪ್ರಿಯವಾದ ಕುಣಿಯೋಣ ಬಾರಾ ಕವಿತೆ ಹುಟ್ಟಿದ್ದು ಹೇಗೆಂದರೆ, ತಮ್ಮ ಮನೆಯಾಕೆಯೊಂದಿಗೆ ಜಗಳವಾಡಿ ಮನೆಯ ಹೊರಗೆ ಬಂದು ಕುಳಿತುಕೊಂಡಾಗ ಕಾಗೆಗಳು ಕುಣಿದಾಡುವುದನ್ನು ಕಂಡು ಬರೆಯುತ್ತಾರೆ’ ಎಂದು ವಿವರಿಸಿದರು.

‘ಕಾವ್ಯವನ್ನು ಅರ್ಥ ಮಾಡಿಕೊಳ್ಳುವ ರೀತಿ ಆಗಾಗ ಬದಲಾಗುತ್ತಲೇ ಇರುತ್ತದೆ. ಹಳಗನ್ನಡ ಓದಿಕೊಳ್ಳುವಾಗ ನವೋದಯ ಕಾವ್ಯ ಇಷ್ಟವಾಗಲಿಲ್ಲ. ಅದನ್ನು ಅರಗಿಸಿಕೊಳ್ಳುವಾಗ ನವ್ಯ ಕಾವ್ಯ ಬಂತು. ಅದು ಅರ್ಥವಾಗುತ್ತಿಲ್ಲ, ಅದರ ಕುರಿತ ವಿಮರ್ಶೆಯೂ ಅರ್ಥವಾಗುತ್ತಿಲ್ಲ ಎನ್ನುವ ದೂರು ಬಂತು. ಹೀಗೆ ಹೊಸ ಕಾವ್ಯ ಬಂದಾಗ ತನ್ನದೇ ಮಾನದಂಡ ತರುತ್ತದೆ’ ಎಂದು ಹೇಳಿದರು.

‘ಕಾವ್ಯದ ವಿಮರ್ಶೆಗೆ ಕಲಿಕೆ ಬೇಕು. ಸಿದ್ಧಾಂತಗಳ ಮೂಲಕ ವಿಮರ್ಶೆ ಮಾಡಲಾಗದು. ಕವಿತೆಯ ಸೂಕ್ಷ್ಮತೆಯನ್ನು ಅರಿಯಬೇಕು. ವಿಮರ್ಶೆ ಕೂಡಾ ಕವಿತೆಯನ್ನು ಅರ್ಥೈಸಬೇಕು. ಆದರೆ, ಅನೇಕ ಬಾರಿ ಕವಿತೆಗಿಂತ ವಿಮರ್ಶೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಅರ್ಥವಾಗುವ ರೀತಿಯಲ್ಲಿ ಬರೆದಿಲ್ಲವೆಂದರೆ ಬರೆದವರಿಗೇ ಸ್ಪಷ್ಟವಾಗಿಲ್ಲ ಎಂದರ್ಥ’ ಎಂದರು.

ಶಿಬಿರದ ಪ್ರಧಾನ ಸಂಚಾಲಕ ಪ್ರೊ.ಅರವಿಂದ ಮಾಲಗತ್ತಿ, ಈ ಶಿಬಿರದಲ್ಲಿ ಬೆಟಗೇರಿ ಕೃಷ್ಣಶರ್ಮ ಅವರ ಕಾವ್ಯದೊಂದಿಗೆ ಕನ್ನಡ ಕಾವ್ಯ ನೋಡಲಾಗುವುದು. ಜತೆಗೆ, ಕನ್ನಡ ಕಾವ್ಯದ ಇತಿಹಾಸ, ತಾಂತ್ರಿಕತೆ, ಸಂರಚನೆಯ ಮೂಲತತ್ವಗಳನ್ನು ತಿಳಿಸಿಕೊಡಲಾಗುವುದು ಎಂದರು.

ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಪಾಟೀಲ ಭಾಗವಹಿಸಿದ್ದರು. ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೀತಿ ಶ್ರಿಮಂಧರಕುಮಾರ್ ಸ್ವಾಗತಿಸಿದರು. ಡಾ.ಎನ್‌.ಕೆ.ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT