ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪದ ಪರ್ವಕ್ಕೆ ಬಾಲ್ಯದ ನೆನಕೆ

Last Updated 28 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
ದೀಪಾವಳಿ ಬದುಕಿನ ಸಂಭ್ರಮವನ್ನು ಹೆಚ್ಚಿಸುವ ಹಬ್ಬ. ಹಬ್ಬ ಎಂದಾಕ್ಷಣ ಹಲವು ವರ್ಷಗಳ ಬಾಂಧವ್ಯವೂ ಅದರಲ್ಲಿ ಬೆಸೆದುಕೊಂಡಿರುತ್ತದೆ. ಬಾಲ್ಯದಲ್ಲಿ ಅನುಭವಿಸಿದ ಹಬ್ಬದ ಕ್ಷಣಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
 
ಅದು ಬೆಳಕಿನಂತೆ ನಮ್ಮೊಂದಿಗೆ ಪ್ರತಿಫಲಿಸುತ್ತಿರುತ್ತದೆ. ಹೀಗೆ ನೆರಳಾಗಿ ಬಂದ ಹಬ್ಬದ ಕ್ಷಣಗಳನ್ನು ಕಿರುತೆರೆಯ ನಟಿಯರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
 
**
ಎಲ್ಲ ಹಬ್ಬಗಳಿಗಿಂತ ದೀಪಾವಳಿ ಎಂದರೆ ಮನೆಯಲ್ಲಿ ವಿಶೇಷ ಸಂಭ್ರಮ. ಹಂಡೆಗೆ ನೀರು ತುಂಬಿ ಪೂಜೆ ಮಾಡುವ ಸಡಗರದಿಂದ ಆರಂಭವಾಗುವ ಹಬ್ಬದ ತಯಾರಿ ನಾಲ್ಕು ದಿನಗಳವರೆಗೂ ಇರುತ್ತಿತ್ತು. 
 
ಶಾಲೆಯಿಂದ ಮನೆಗೆ ಬರುವಾಗ ಅಮ್ಮ ಹಂಡೆಗೆ ನೀರು ತುಂಬಿ ಪೂಜೆಗೆ ತಯಾರಿ ಮಾಡುತ್ತಿದ್ದರು. ರಾತ್ರಿಯೇ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಿದ್ದರು. ನಾವು ನಾಲ್ವರು ಮಕ್ಕಳು. ಎಲ್ಲರೂ ಒಬ್ಬರ ನಂತರ ಒಬ್ಬರಂತೆ ಸ್ನಾನಕ್ಕೆಂದು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದೆವು. 
 
ಬೇರೆ ಹಬ್ಬವೆಂದರೆ ಅಡುಗೆ ಮಾಡಿ ತಿನ್ನುವುದಕ್ಕಷ್ಟೇ ಸೀಮಿತ. ಆದರೆ ಈ ಹಬ್ಬದಲ್ಲಿ ರುಚಿಯಾದ ಅಡುಗೆಯ ಜೊತೆಗೆ ಪಟಾಕಿ ಹೊಡೆಯುವ ಸಂಭ್ರಮ. 
 
ನರಕಚತುದರ್ಶಿಯಂದು ಬೆಳಿಗ್ಗೆ ಬೇಗ ಎದ್ದು ಪಟಾಕಿ ಹೊಡೆಯಬೇಕು ಎಂದು ಸ್ನೇಹಿತರೆಲ್ಲ ಸೇರಿ ಮೊದಲೇ ಯೋಜನೆ ಹಾಕಿಕೊಂಡಿರುತ್ತಿದ್ದೆವು. ಹಾಗಾಗಿ ಅಮ್ಮನಿಗೆ ಬೆಳಿಗ್ಗೆ ಬೇಗ ಏಳಿಸುವಂತೆ ಮೊದಲೇ ಹೇಳಿಬಿಡುತ್ತಿದ್ದೆ.
 
ಬೆಳಿಗ್ಗೆ ಎದ್ದ ಕೂಡಲೇ ಸ್ನೇಹಿತರೆಲ್ಲ ಸೇರಿ ಪಟಾಕಿ ಹೊಡೆಯಲು ಅನುವಾಗುತ್ತಿದ್ದೆವು. ಅನಂತರ ಸ್ನಾನ ಮಾಡಿ ಹೊಸ ಬಟ್ಟೆಯನ್ನು ತೊಡುವ ಸಂಭ್ರಮ. ನಮ್ಮ ಮನೆಯಲ್ಲಿ ಹುಟ್ಟುಹಬ್ಬ ಮತ್ತು ದೀಪಾವಳಿಗೆ ಮಾತ್ರವೇ ಹೊಸ ಬಟ್ಟೆ ಕೊಡಿಸುತ್ತಿದ್ದರು. ಈ ಕಾರಣಕ್ಕೆ ದೀಪಾವಳಿ ಮತ್ತಷ್ಟು ವಿಶೇಷವೆನಿಸುತ್ತಿತ್ತು. 
 
ಸಂಜೆಯಾಗುತ್ತಿದ್ದಂತೆ ಪುನಃ ಪಟಾಕಿ ಹಚ್ಚಲು ಶುರುಮಾಡುತ್ತಿದೆವು. ನಮ್ಮ ಕಾಲೋನಿಯಲ್ಲಿ ನಮ್ಮನೆಯಲ್ಲಿ ಮಾತ್ರವೇ ಟ್ರೇನ್‌ ಪಟಾಕಿ ತರುತ್ತಿದ್ದರು. ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ದಾರ ಕಟ್ಟಿ ಅದರ ಮೇಲೆ ರೈಲು ಪಟಾಕಿ ಬಿಡುತ್ತಿದ್ದೆವು.
 
ಆ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ. ಈಗಿನಷ್ಟು ವಾಹನಗಳು ಆಗೆಲ್ಲ ರಸ್ತೆಯಲ್ಲಿ ಓಡಾಡುತ್ತಿದ್ದು ಕಡಿಮೆ. ಹಾಗಾಗಿ ಮಕ್ಕಳಿಗೆ ರಸ್ತೆಗೆ ಹೋಗಬೇಡ ಎಂದು ಈಗಿನವರು ಹೇಳುವಂತೆ ಹಿಂದೆ ನಮ್ಮಗೆಲ್ಲ ಗದರುತ್ತಿರಲಿಲ್ಲ.  ಕಾಲೋನಿಯ ಸಣ್ಣ ಮಕ್ಕಳೊಂದಿಗೆ ದೊಡ್ಡವರು ಕೂಡ ಟ್ರೇನ್‌ ಪಟಾಕಿ ಹಚ್ಚುವಾಗ ನಮ್ಮೊಂದಿಗೆ ಸಂಭ್ರಮಿಸುತ್ತಿದ್ದರು. 
 
ಮನೆ ಎದುರು ಪೇಪರ್‌ ರಾಶಿ ಬಿದ್ದಷ್ಟೂ ನಾವೇ ಹೆಚ್ಚು ಪಟಾಕಿ ಹೊಡೆದೆವು ಎಂದು ಜಂಭ ಕೊಚ್ಚಿಕೊಳ್ಳಬಹುದು ಎಂಬ ಕಾರಣಕ್ಕೆ ಲಕ್ಷ್ಮೀ ಪಟಾಕಿಯನ್ನು ತರುವಂತೆ ಒತ್ತಾಯ ಮಾಡುತ್ತಿದ್ದೆ. ಕೊನೆಯ ದಿನ ಟುಸ್‌ ಪಟಾಕಿಗಳನ್ನೆಲ್ಲ ತಂದು ಮದ್ದನ್ನು ತೆಗೆದು ಪೇಪರ್‌ ಮೇಲಿಟ್ಟು ಬೆಂಕಿ ಹಚ್ಚುತ್ತಿದ್ದೆವು. ಈ ರೀತಿಯ ಸಣ್ಣಸಣ್ಣ ಖುಷಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. 
 
 ಮನೆಯಲ್ಲಿ ಹಲವು ಬಗೆಯ ಸಿಹಿ ತಿನಿಸುಗಳನ್ನು ಮಾಡುತ್ತಿದ್ದರು. ಕಜ್ಜಾಯ, ಚಕ್ಕುಲಿ, ಕೊಡುಬಳೆ ಸೇರಿದಂತೆ ಹಲವು ಕರಿದ ತಿನಿಸು, ಹೋಳಿಗೆ ಮಾಡುತ್ತಿದ್ದರು. ಈಗ ಕಜ್ಜಾಯದ ಹೊರತಾಗಿ ಉಳಿದ ತಿಂಡಿಗಳನ್ನು ಅಂಗಡಿಯಿಂದಲೇ ತಂದುಬಿಡುತ್ತೇವೆ. 
 
ಹಬ್ಬದ ಮೂರು ದಿನ ಸಂಬಂಧಿಕರೆಲ್ಲ ಒಟ್ಟಿಗೆ ಸೇರಿ ಸಂಭ್ರಮದಿಂದ ಆಚರಣೆಯನ್ನು ನಡೆಸುತ್ತಿದ್ದೆವು. ಆಗಿನ ಹಬ್ಬದ ಸಂಭ್ರಮ ಈಗ ಸಿಗುವುದಿಲ್ಲ. ಮಕ್ಕಳ ಬಳಿ ನಮ್ಮ ಹಬ್ಬದ ಸಡಗರವನ್ನು ನೆನೆಯುತ್ತಿರುತ್ತೇನೆ.   
-ವೀಣಾ ಸುಂದರ್‌
 
**
ದೀಪದ ಮೆರುಗು ನೆನೆದು
ದೀಪಾವಳಿ ಎಂದಾಕ್ಷಣ ಬಾಲ್ಯದಲ್ಲಿ ಮನೆ ಮುಂದೆ ದೀಪಾಲಂಕರ ಮಾಡಿದ ಕ್ಷಣಗಳು ನೆನಪಾಗುತ್ತವೆ. ಅಕ್ಕಪಕ್ಕದ ಮನೆಯವರೆಲ್ಲ ಸೇರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದೆವು. 
 
ಹಿಂದಿನ ದಿನ ರಾತ್ರಿ ಹಂಡೆಗೆ ನೀರು ತುಂಬಿ ಪೂಜೆ ಮಾಡುತ್ತಿದ್ದರು. ಬೆಳಿಗ್ಗೆ ಎಣ್ಣೆ ಹಚ್ಚಿ ಸ್ನಾನ ಮಾಡುತ್ತಿದ್ದೆವು. ನಂತರ ಮನೆಯಲ್ಲಿ ವಿಶೇಷ ಪೂಜೆ ಇರುತ್ತಿತ್ತು. ಹೊಸ ಬಟ್ಟೆ ತೊಡುವುದು ದೊಡ್ಡ ಸಂಭ್ರಮ. ಸಂಬಂಧಿಕರೆಲ್ಲ ಒಟ್ಟಿಗೆ ಸೇರುತ್ತಿದ್ದೆವು.
 
ನಮ್ಮನೆಯಲ್ಲಿ ಮಕ್ಕಳಿಗೆ ಇಷ್ಟವಾಗುವ  ತಿನಿಸುಗಳನ್ನು ಮಾಡುತ್ತಿದ್ದರು. ಕಜ್ಜಾಯ, ಹೋಳಿಗೆ ಕಡ್ಡಾಯವಾಗಿ ಹಬ್ಬದ ಮೆನುವಿನಲ್ಲಿರುತ್ತಿತ್ತು.  ಪಟಾಕಿ ಹಚ್ಚುವುದು ದೀಪಾವಳಿ ಹಬ್ಬದ ಬಹು ದೊಡ್ಡ ಸಂಭ್ರಮ.
 
ಕಡಿಮೆ ಶಬ್ದ ಬರುವ ಸುರ್‌ಸುರ್‌ ಬತ್ತಿ, ಆನೆಬಾಲ ಪಟಾಕಿಯನ್ನಷ್ಟೆ ನಾನು ಹಚ್ಚುತ್ತಿದ್ದುದ್ದು. ಪಟಾಕಿ ಹಚ್ಚುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬುದು ತಿಳಿದ ಬಳಿಕ ಪಟಾಕಿಯನ್ನು ಮನೆಗೆ ತರುತ್ತಿಲ್ಲ. ಈಗ ಪತಿಯ ಮನೆಯಲ್ಲಿ ಹಬ್ಬವನ್ನು ಆಚರಿಸುತ್ತೇವೆ.
- ಜ್ಯೋತಿ ರೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT