ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜುಗಳೂ ಕಸವಿಲೇವಾರಿಯೂ

Last Updated 30 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಒಂದು ಅಂದಾಜು ಲೆಕ್ಕ ಮಾಡಿ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿ ವಿದ್ಯಾರ್ಥಿಯೂ ಇಂಟರ್ನಲ್ ಅಸೆಸ್‌ಮೆಂಟ್ ಎನ್ನುವ ಕಾರಣಕ್ಕೆ ಅಸೈನ್ಮೆಂಟುಗಳನ್ನು ಬರೆದುಕೊಡಬೇಕು. ಸೆಮಿಸ್ಟರಿಗೆ ಏನಿಲ್ಲವೆಂದರೂ ವಿಷಯಕ್ಕೆ  25 ಪುಟಗಳಷ್ಟು. ವರ್ಷಕ್ಕೆ ಸುಮಾರು  50 ಪುಟಗಳಷ್ಟು. ಐದು ವಿಷಯಗಳನ್ನು ಪದವಿಯಲ್ಲಿ ಓದುತ್ತಾರೆ ಎಂದರೆ 250 ಪುಟಗಳಷ್ಟು. ಒಂದು ಕಾಲೇಜಿನಲ್ಲಿ ಎರಡು ಸಾವಿರ ವಿದ್ಯಾರ್ಥಿಗಳಿದ್ದಾರೆ ಎಂದರೆ ಇದರ ಸಂಖ್ಯೆ ವಾರ್ಷಿಕವಾಗಿ ಐದು ಲಕ್ಷ ಪುಟಗಳು.

ಇದು ಒಂದು ಕಾಲೇಜಿನ ಕಥೆ. ಊರಿಗೆ ಇಂಥವು ಎಷ್ಟೋ? ಹೋಗಲಿ, ಈ ಐದು ಲಕ್ಷ ಪುಟಗಳಲ್ಲಿರುವುದಾದರೂ ಏನು ಘನಾಂದಾರಿ ಜ್ಞಾನ? ಇಂಟರ್ನೆಟ್, ಗೈಡ್ ಪುಸ್ತಕ ಮತ್ತು ಹಿಂದಿನ ವಿದ್ಯಾರ್ಥಿಗಳ ನೋಟ್ಸ್‌ಗಳಿಂದ ಭಟ್ಟಿ ಇಳಿಸಿದ ಅದೇ ಚರ್ವಿತಚರ್ವಣ. ಇಂತಹ ರಾಶಿರಾಶಿ ಅಸೈನ್ಮೆಂಟುಗಳನ್ನು ಮೂರು ವರ್ಷ ಶೇಖರಿಸಿ ಇಡಬೇಕೆಂಬ ನಿಯಮ ಬೇರೆ. ವಿವಿ ಧನಸಹಾಯ ಆಯೋಗದವರು, ಉನ್ನತ ಶಿಕ್ಷಣ ಪರಿಷತ್‌ನವರು, ನ್ಯಾಕ್ ಸಮಿತಿಯವರು ಬಂದಾಗ ತೋರಿಸಬೇಕಲ್ಲ. ಅವರೇನೂ ಈ ಧೂಳು ಹಿಡಿದ ಕಡತಗಳನ್ನೆಲ್ಲಾ ಕೇಳುವುದಿಲ್ಲ. ಆದರೂ ಅಕಸ್ಮಾತ್ ಕೇಳಿಬಿಟ್ಟರೆ ಇಲ್ಲ ಅನ್ನಬಾರದು ನೋಡಿ!

ಮೂರು ವರ್ಷ ಕಳೆದು ಇವನ್ನೆಲ್ಲ ಸುಡೋಣವೆಂದರೆ ಪರಿಸರನಾಶದ ಸಮಸ್ಯೆ; ಈಗೀಗ ಟಿ.ವಿ. ಚಾನೆಲ್ಲುಗಳವರ ಸಮಸ್ಯೆ. ಯಾವನೋ ಕೆಲಸವಿಲ್ಲದ ಹೈದ ಇದನ್ನು ತನ್ನ ಮೊಬೈಲು ಫೋನಿನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡು ಹೋಗಿ ಊರಿನ ಲೋಕಲ್ ಪತ್ರಿಕೆಗಳು, ಟಿ.ವಿ. ವರದಿಗಾರರಿಗೆ ಕೊಟ್ಟರೆ ಸಾಕು. ಅವರೆಲ್ಲಾ ‘ವಿಶ್ವವಿದ್ಯಾಲಯದಲ್ಲಿ ಹಗರಣ ಬಯಲು: ಅಪಾರ ಪ್ರಮಾಣದ ರಹಸ್ಯ ದಾಖಲೆಗಳ ನಾಶ’ ಎಂದು ಬ್ರೇಕಿಂಗ್ ನ್ಯೂಸ್ ಹಾಕುವವರೇ. ಅಥವಾ ಕಾಲೇಜಿನಲ್ಲೇ ಇಟ್ಟುಕೊಳ್ಳೋಣವೆಂದರೆ, ಬೆಕ್ಕುಗಳ ಕಾಟ. ಅವು ಅಲ್ಲೇ ಸಂಸಾರ ಹೂಡಿ, ಮರಿ ಹಾಕಿ... ಮೊದಲೇ ವಿಶ್ವವಿದ್ಯಾಲಯಗಳು ಅಂದರೆ ಪ್ರಾಣಿಸಂಗ್ರಹಾಲಯಗಳು ಎಂದು ಕುಹಕವಾಡುವ ನಿಮಗೆ ಕೈಯಾರೆ ಸಬೂತು ಕೊಟ್ಟು ಬೈಯಿಸಿಕೊಂಡಂತೆ! ಅದಕ್ಕಾಗಿ ಮೇಷ್ಟ್ರುಗಳು ಊರಾಚೆ ಇರುವ ರದ್ದಿಯವನನ್ನು ಹುಡುಕಿಕೊಂಡು ಹೋಗಿ ಲಗೇಜಾಟೋಗಳಲ್ಲಿ ಪರ್ವತಾಕಾರದ ದಾಖಲೆಗಳನ್ನು ಮಾರಾಟ ಮಾಡಿ, ಬಂದ ಹಣದಲ್ಲಿ ವಿಭಾಗದ ಎಲ್ಲ ಮೇಷ್ಟ್ರುಗಳಿಗೆ ಮತ್ತು ಬೋಧಕೇತರ ಸಿಬ್ಬಂದಿಗೆ ರಹಸ್ಯವಾಗಿ ಸಮೋಸ ಚಹಾ ಸಮಾರಾಧನೆ ಮಾಡಬೇಕು. ಇದು ಅವಿಚ್ಛಿನ್ನವಾಗಿ ನಡೆದುಕೊಂಡು ಬಂದಿರುವ ಪರಂಪರೆ. 

ಇದಕ್ಕೆ ಪರ್ಯಾಯವಾಗಿ ನಾವೊಂದಷ್ಟು ಜನರು ಮಾಡಿದ ಪ್ರಯೋಗವನ್ನು ಕುರಿತು ಹೇಳುತ್ತೇನೆ. ನಮ್ಮ ವಿಭಾಗದಲ್ಲಿ ವಿಕಿಪೀಡಿಯಾ ಇಂಡಿಯಾ ಚಾಪ್ಟರ್‌ನೊಂದಿಗೆ ಸಹಯೋಗದ ಒಪ್ಪಂದ ಮಾಡಿಕೊಂಡೆವು. ವಿಕಿಪೀಡಿಯಾ ಪ್ರಪಂಚದ ಅತಿ ದೊಡ್ಡ ಸಾರ್ವಜನಿಕ ವಿಶ್ವಕೋಶ. ಅಲ್ಲಿರುವ ಎಲ್ಲ ಮಾಹಿತಿಯನ್ನು ಹಾಕಿರುವವರು ನಮ್ಮ ನಿಮ್ಮಂತಹ ಸಾಮಾನ್ಯಜನರೇ. ಒಂಚೂರು ಕಂಪ್ಯೂಟರ್ ಮೇಲೆ ಕೈಯಾಡಿಸುವ ಸಾಮರ್ಥ್ಯ ಮತ್ತು ಅಂತರ್ಜಾಲ ಸಂಪರ್ಕ ಇವಿಷ್ಟಿದ್ದರೆ ಸಾಕು ವಿಕಿಪೀಡಿಯಾ ಬಳಸಲು ಮತ್ತು ಅದರಲ್ಲಿ ನಾವೇ ಮಾಹಿತಿ ಹಾಕಲು. ಕನ್ನಡವೂ ಸೇರಿದಂತೆ ಪ್ರಪಂಚದ ಹತ್ತುಹಲವು ಭಾಷೆಗಳಲ್ಲಿ ವಿಕಿಪೀಡಿಯಾ ಇದೆ. ವಿಕಿಪೀಡಿಯಾದಲ್ಲಿರುವ ಮಾಹಿತಿ ಇದಮಿತ್ಥಂ ಎನ್ನುವಂತೆ ನಿಖರವಲ್ಲದಿದ್ದರೂ, ಯಾವ ವಿಚಾರಕ್ಕಾದರೂ ಪ್ರವೇಶಿಕೆಯಂತೆ ಬಳಸಬಹುದಾದ ವಿಶ್ವಕೋಶ.

ನಮ್ಮ ಯೋಜನೆಯ ಪ್ರಕಾರ ವಿಕಿಪೀಡಿಯಾದವರು ನಮ್ಮ ವಿದ್ಯಾರ್ಥಿಗಳಿಗೆ ಅರ್ಧ ದಿನದ ಕಾರ್ಯಾಗಾರವನ್ನು ನಡೆಸಿ ವಿಕಿಪೀಡಿಯಾಕ್ಕೆ ಮಾಹಿತಿಯನ್ನು ಸೇರಿಸುವುದು ಅಥವಾ ತಿದ್ದುವುದು ಹೇಗೆ ಎಂದು ಹೇಳಿಕೊಡುವುದು. ನಿಮಗೆ ಫೇಸ್‌ಬುಕ್, ವಾಟ್ಸಾಪ್ ಇವನ್ನೆಲ್ಲಾ ಬಳಸಲು ಬರುತ್ತದೆ ಎಂದರೆ ಇದೇನೂ ಬಹಳ ಕಷ್ಟದ ವಿಚಾರವಲ್ಲ. ಯಾರು ಬೇಕಾದರೂ ಒಂದೆರಡು ಗಂಟೆಗಳಲ್ಲಿ ಕಲಿಯಬಹುದಾದದ್ದು. ಆಮೇಲೆ ವಿದ್ಯಾರ್ಥಿಗಳು (ಈ ಸಂದರ್ಭದಲ್ಲಿ, ನಾನು ಹೇಳಿಕೊಡುತ್ತಿದ್ದ ಭಾಷಾಶಾಸ್ತ್ರ ವಿಷಯದ ವಿದ್ಯಾರ್ಥಿಗಳು) ಇಂಗ್ಲಿಷ್‌ ವಿಕಿಪೀಡಿಯಾದಲ್ಲಿ ಭಾಷಾಶಾಸ್ತ್ರದ ಬಗ್ಗೆ ಇರುವ ವಿಚಾರಗಳ ಕುರಿತಾದ ಲೇಖನಗಳನ್ನು ಆರಿಸಿಕೊಂಡು ಅವುಗಳನ್ನು ತರ್ಜುಮೆ ಮಾಡಿ ಕನ್ನಡ ವಿಕಿಪೀಡಿಯಾಕ್ಕೆ ಹಾಕಬೇಕು. ಇದೇ ಅವರ ಅಸೈನ್ಮೆಂಟ್. 

ಇದಕ್ಕಿರುವ ಹಲವು ಅಡೆತಡೆಗಳನ್ನು ಗಮನಿಸಿ. ಮೊದಲನೆಯದಾಗಿ, ನಮಗೆ ಕಂಪ್ಯೂಟರ್ ಬಳಸಲು ಬರುವುದಿಲ್ಲ ಎನ್ನುವ ಸಬೂಬು. ಅದಕ್ಕೆ ಒಂದೇ ಮದ್ದು. ಕನ್ನಡದಲ್ಲಿ ಗಾದೆಯೇ ಇದೆಯಲ್ಲ. ‘ಹಾಡ್ತಾ ಹಾಡ್ತಾ ರಾಗ; ಕುಟ್ತಾ, ಕುಟ್ತಾ ಕಂಪ್ಯೂಟರ್’ ಅಂತ. ಇನ್ನು ಕಂಪ್ಯೂಟರ್ ಇಲ್ಲ ಎನ್ನುವ ಸಬೂಬು. ಈಗೀಗ ಎಂತಹ ಸರ್ಕಾರಿ ಕಾಲೇಜುಗಳಲ್ಲೂ ಒಂದಷ್ಟು ಕಂಪ್ಯೂಟರುಗಳಿಗೇನೂ ಬರವಿಲ್ಲ. ಇಲ್ಲದಿದ್ದರೂ ಫೇಸ್‌ಬುಕ್ ನೋಡಲು ಸ್ಮಾರ್ಟ್ ಫೋನ್ ಅಂತೂ ಇರುತ್ತದಲ್ಲ. ಇದಕ್ಕೂ ಅಷ್ಟೇ ಸಾಕು. ಇನ್ನು ಇಂಟರ್ನೆಟ್. ದಿನವೆಲ್ಲಾ ಇದು ಬೇಕಿಲ್ಲ. ನಾವು ಬರೆದದ್ದನ್ನು ಅಪಲೋಡ್ ಮಾಡುವ ಕಾಲಕ್ಕೆ ಒಂದಷ್ಟು ಹೊತ್ತು ಇದ್ದರೆ ಸಾಕು. ಅಥವಾ ನಾವು ಬರೆದದ್ದನ್ನು ಇಂಟರ್ನೆಟ್ ಇರುವ ಕಡೆಗೆ ತೆಗೆದುಕೊಂಡು ಹೋಗಿ ಅಪ್‌ಲೋಡ್ ಮಾಡಿದರೂ ಆಯಿತು. ಇನ್ನು ಕರೆಂಟಿನ ಸಬೂಬು. ಮೊನ್ನೆ ಬಿಗ್‌ಬಾಸ್‌ನಲ್ಲಿ ಏನಾಯಿತು ಅಂತಾ ಕೇಳಿ; ಎಲ್ಲರಿಗೂ ಗೊತ್ತಿರುತ್ತದೆ. ಅದಕ್ಕೆ ಇದ್ದ ಕರೆಂಟು ಇದಕ್ಕಿಲ್ಲ ಅಂದರೆ? ಮಾಡಬೇಕೆಂದರೆ ಮೂವತ್ತು ಮಾರ್ಗ.

ಈಗ ಈ ಯೋಜನೆಯ ಪರಿಣಾಮಗಳನ್ನು ಗಮನಿಸಿ. ಮೊದಲ ಬಾರಿಗೆ ನನ್ನ ವಿದ್ಯಾರ್ಥಿಗಳಿಗೆ ಇಂಗ್ಲಿಷಿನಲ್ಲಿರುವ ವಿಕಿಪೀಡಿಯಾದ ಲೇಖನಗಳನ್ನು ಗಮನವಿಟ್ಟು ಓದಬೇಕಾದ ಜರೂರು. ಯಾಕೆಂದರೆ ಇಷ್ಟು ದಿನ ಅದರಿಂದ ಮಾಹಿತಿಯನ್ನು ಕತ್ತರಿಸಿ, ಕದ್ದು ತಮ್ಮ ಅಸೈನ್ಮೆಂಟುಗಳಿಗೆ ನಕಲು ಮಾಡುವ ಕಾರಣಕ್ಕಷ್ಟೇ ವಿಕಿಪೀಡಿಯಾದ ಬಗ್ಗೆ ಒಲವಿದ್ದದ್ದು. ಆದರೆ ಈಗ ಅದನ್ನು ಅನುವಾದ ಮಾಡಬೇಕು ಎಂದಾದ ಮೇಲೆ ಅದನ್ನು ಕೂಲಂಕಷವಾಗಿ ಗಮನಿಸಲೇ ಬೇಕಲ್ಲ. ಜೊತೆಗೆ, ಹಾಳೆಗಳಲ್ಲಿ ಬರೆದು ಕೊಡುವಾಗ ಇಂತಹ ಮೇಷ್ಟರಿಗೆ ಪ್ರಣಾಮಪೂರ್ವಕವಾಗಿ ಕೊಟ್ಟಿದ್ದು ಎಂದು ಬಣ್ಣಬಣ್ಣದ ಸ್ಕೆಚ್‌ಪೆನ್ನುಗಳಲ್ಲಿ ಚಿತ್ರ ಬಿಡಿಸಿ ಕೆಲಸಕ್ಕೆ ಬಾರದ ಶೃಂಗಾರ ಬೇರೆ. ಹಾಗಾದರೂ ಜಾಸ್ತಿ ಅಂಕಗಳನ್ನು ಕೊಡಲಿ ಅಂತ.

ಈಗ ಅವೆಲ್ಲಾ ಏನೂ ಬೇಡ. ಅವರು ಮಾಡಿದ ಕೆಲಸವನ್ನು ನನಗೆ ತಂದು ತೋರಿಸುವ ಅಗತ್ಯವೂ ಇಲ್ಲ. ಅವರ ಬಳಕೆದಾರರ ಹೆಸರನ್ನು (ಯೂಸರ್‌ನೇಮ್) ನನಗೆ ಎಸ್ಸೆಮೆಸ್ ಮಾಡಿದರೆ ಸಾಕು. ನಾನು ನನ್ನ ಕಂಪ್ಯೂಟರಿನಲ್ಲೇ ಬೇಕಾದಾಗ ಅದನ್ನು ನೋಡಬಹುದು. ಮತ್ತು ಯಾವ ಲೇಖನವೇ ಆಗಲೀ, ಅದಕ್ಕೆ ಯಾರು, ಯಾವ ದಿನ, ಎಷ್ಟು ಹೊತ್ತಿಗೆ ಎಷ್ಟು ಪ್ರಮಾಣದಲ್ಲಿ ಮಾಹಿತಿಯನ್ನು ಸೇರಿಸಿದ್ದಾರೆ ಎನ್ನುವ ಮಾಹಿತಿಯೂ ವಿಕಿಪೀಡಿಯಾದ ಲೇಖನಗಳ ಹಿಂದೆ ಇರುವ ಇತಿಹಾಸ ಪುಟದಲ್ಲಿ ಲಭ್ಯ.

ಈ ಲೇಖನಗಳ ಗುಣಮಟ್ಟವನ್ನು ಅಳೆಯುವವರು ಯಾರು? ಕ್ಲಾಸಿನ ಅಸೈನ್ಮೆಂಟುಗಳಾದರೆ ಒಬ್ಬ ಮೇಷ್ಟ್ರು ಮಾತ್ರ. ಆ ಮೇಷ್ಟ್ರಿಗೆ ಎಷ್ಟು ಗೊತ್ತೋ, ಏನು ಇಷ್ಟವೋ ಅದರ ಆಧಾರದ ಮೇಲೆ ಮೌಲ್ಯಮಾಪನ ನಡೆಯುವುದು. ಆದರೆ ಇಲ್ಲಿ ಹಾಗಲ್ಲ. ಇದು ಕನ್ನಡ ವಿಕಿಪೀಡಿಯಾ ಬಳಸುವ ಎಲ್ಲ ಜನರಿಗೂ ಕಾಣುವ ಮಾಹಿತಿ. ಯಾರು ಬೇಕಾದರೂ ಇದರ ಬಗ್ಗೆ ಚರ್ಚಿಸಬಹುದು. ತಪ್ಪುಗಳನ್ನು ತಿದ್ದಬಹುದು. ಹೊಸ ಮಾಹಿತಿಯನ್ನು ಸೇರಿಸಬಹುದು.

ಇಡೀ ಲೇಖನವನ್ನೇ ಅದು ಸರಿಯಿಲ್ಲದಿದ್ದರೆ, ಕಾರಣ ಕೊಟ್ಟು ತೆಗೆದುಹಾಕಬಹುದು. ನನ್ನ ವಿದ್ಯಾರ್ಥಿಗಳಿಗೂ ಅದರ ಅನುಭವ ಆಯಿತು. ಎಲ್ಲೋ ಶಿವಮೊಗ್ಗದ ಹತ್ತಿರದ ಅಪರಿಚಿತ ವಿಕಿಪೀಡಿಯ ಬಳಕೆದಾರರೊಬ್ಬರು ನನ್ನ ವಿದ್ಯಾರ್ಥಿಯೊಬ್ಬ ಅನುವಾದಿಸಿದ ಲೇಖನದಲ್ಲಿದ್ದ ದೋಷಗಳನ್ನು ಗುರುತಿಸಿ ತಿದ್ದಿದರು. ಇಂತಹ ದೋಷಗಳು ಪುನಃ ಕಾಣಿಸಿದರೆ ಆ ಲೇಖನಗಳನ್ನೆಲ್ಲಾ ಸ್ಥಳಾಂತರ ಮಾಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ಕೊಟ್ಟರು.

ಕನ್ನಡ ಬರುವವರು ಮಾತ್ರವಲ್ಲ. ಕನ್ನಡ ಬರದ, ಆದರೆ ವಿಕಿಪೀಡಿಯಾದ ತಾಂತ್ರಿಕ ಗುಣಮಟ್ಟದ ಬಗ್ಗೆ ಕಾಳಜಿಯುಳ್ಳ ಯಾವಯಾವ ದೇಶದ ವಿಕಿಪೀಡಿಯಾ ಸ್ವಯಂಸೇವಕರೋ ಏನೋ ಅವರೆಲ್ಲಾ ಈ ಲೇಖನದ ತಾಂತ್ರಿಕ ವಿವರಗಳನ್ನು ತಿದ್ದಿದರು ಅಥವಾ ತಿದ್ದಲು ಸಲಹೆ ಕೊಟ್ಟರು. ಪ್ಯಾರಾಗ್ರಾಫುಗಳು ಒಂದೇ ಸಮನಾಗಿ ಇರಬೇಕು. ಛಾಯಾಚಿತ್ರಗಳಿಗೆ ಹಾಕುವ ಕೊಂಡಿ ಸರಿಯಾಗಿ ಕೆಲಸ ಮಾಡಬೇಕು.

ಹೀಗೆ ಇನ್ನೂ ಏನೇನೋ. ಒಟ್ಟಾರೆಯಾಗಿ, ಕ್ಲಾಸ್‌ರೂಮಿನ ಮರೆಯಲ್ಲಿ ಮುಗಿದುಹೋಗಿರುತ್ತಿದ್ದ ಕಾಟಾಚಾರದ ಇಂಟರ್ನಲ್ ಅಸೆಸ್ಮೆಂಟ್ ಎನ್ನುವ ಪ್ರಕ್ರಿಯೆ ಸಣ್ಣಮಟ್ಟದ ಸಾವಜನಿಕ ಚರ್ಚೆಯಾಗಿ ಬೆಳೆಯಿತು. ಇದಕ್ಕಿಂತಲೂ ಮುಖ್ಯವೆಂದರೆ, ನನ್ನ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಅಂಕಗಳಿಗಾಗಿ ಏನೋ ಒಂದನ್ನು ಬರೆದು ಬಿಸಾಕುವ ಬದಲು, ಇನ್ನು ಸದಾಕಾಲ ಸಾರ್ವಜನಿಕವಾಗಿ ಉಪಯುಕ್ತವಾಗುವ ಮಾಹಿತಿಯ ಸಂಪನ್ಮೂಲವನ್ನು ನಾವೇ ಸ್ವತಃ ಸೃಷ್ಟಿಸಿದೆವು ಎನ್ನುವ ಹೆಮ್ಮೆ. ಕನ್ನಡ ವಿಕಿಪೀಡಿಯಾದಲ್ಲಿ ಭಾಷಾಶಾಸ್ತ್ರ, ಮಧ್ಯಕಾಲೀನ ಇಂಗ್ಲಿಶ್ ಸಾಹಿತ್ಯದ ಬಗ್ಗೆ ಇರುವ ಹಲವಾರು ಲೇಖನಗಳೆಲ್ಲ ನನ್ನ ವಿದ್ಯಾರ್ಥಿಗಳಿಂದ ಆದದ್ದು ಎನ್ನುವ ಹೆಮ್ಮೆ ನನಗೆ.

ಇವೆಲ್ಲ ಆಗಿ ಒಂದೆರಡು ವರ್ಷವೇ ಕಳೆದಿದೆ. ನನ್ನ ವಿದ್ಯಾರ್ಥಿಗಳು ಪಾಸಾಗಿ ಎಲ್ಲೆಲ್ಲಿಗೋ ಹೋಗಿದ್ದಾರೆ. ಅವರ ಅನುವಾದದ ಗುಣಮಟ್ಟವೇನೂ ಅತ್ಯುತ್ತಮವಾಗಿತ್ತು ಎಂದಲ್ಲ. ಅವರು ಕಂಪ್ಯೂಟರ್ ಬಳಸಿದ್ದು ಮತ್ತು ಏನನ್ನಾದರೂ ಅನುವಾದಿಸಿದ್ದು ಅದೇ ಮೊದಲು. ಅಂದಮೇಲೆ ಇದಕ್ಕಿಂತ ಬೇರೆ ರೀತಿಯಿರಲು ಸಾಧ್ಯವೂ ಇಲ್ಲ. ಚಮತ್ಕಾರವೇನೆಂದರೆ, ಆ ಲೇಖನಗಳನ್ನು ಆನಂತರ ಬಂದ ಎಷ್ಟೋ ಜನ ವಿಕಿಪೀಡಿಯಾ ಬಳಕೆದಾರರು ತಿದ್ದಿದ್ದಾರೆ.

ಉತ್ತಮಗೊಳಿಸಿದ್ದಾರೆ. ಕನ್ನಡದಲ್ಲಿ ಈ ಮಾಹಿತಿ ಬೇಕೆನ್ನುವವರಿಗೆ ಉಪಯುಕ್ತವಾಗುವ ರೀತಿಯಲ್ಲಿ ಸಿದ್ಧಗೊಳಿಸಿದ್ದಾರೆ. ಅವರು ಯಾರೊ ಏನೋ, ಅವರಿಗೆ ಈ ಲೇಖನವನ್ನು ಮೊದಲು ಮಾಡಿದವರು ನನ್ನ ವಿದ್ಯಾರ್ಥಿಗಳು ಎನ್ನುವ ಪರಿಚಯವೂ ಇರುವುದಿಲ್ಲ. ಮುಂದೆ ಬರುವ ಇನ್ನಷ್ಟು ಜನ ಅಪರಿಚಿತರು ಈಗ ಈ ಅಪರಿಚಿತರು ಮಾಡಿರುವ ಕೆಲಸವನ್ನು ಇನ್ನೂ ಮುಂದುವರೆಸುತ್ತಾರೆ. ಅದನ್ನು ಇನ್ನೂ ಉತ್ತಮಗೊಳಿಸುತ್ತಾರೆ. ಹಿಪೊಕ್ರೆಟಸ್ ಎನ್ನುವ ಗ್ರೀಕ್ ತತ್ವಜ್ಞಾನಿ ಹೇಳಿದ್ದು ಇದನ್ನೇ: ‘Life is short. Art is long ’ ಎಂದು.
ನಮಗೆ ಮಾತ್ರ ಈಗ ರದ್ದಿಗೆ ಹಾಳೆಗಳು ಉತ್ಪತ್ತಿಯಾಗದೇ ಸಮೋಸಾ ಚಹಾಕ್ಕೆ ಖೋತಾ ಆಗಿದೆ. ಹೋಗಲಿ ಬಿಡಿ, ಕರಿದ ತಿಂಡಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT