ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆ ಆಗಲಿ ವಿಲಾಸ ವಿನೋದ

Last Updated 30 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಕಲಿಕೆಯು ಶಾಲೆಯಲ್ಲಿ ಮೊದಲಾಗುವುದೂ ಇಲ್ಲ, ಶಾಲಾ ದಿನಗಳು ಮುಗಿದ ಮೇಲೆ ಮುಕ್ತಾಯವೂ ಆಗುವುದಿಲ್ಲ. ಶಾಲಾಪೂರ್ವ ಕಲಿಕೆಯಾಗಲೀ ಶಾಲೆಯ ಅನಂತರದ ಕಲಿಕೆಯಾಗಲೀ ಆಯಾಸಕರ ಎನಿಸಿದಿದ್ದ ಮೇಲೆ ಶಾಲಾಕಲಿಕೆ ಮಾತ್ರ ಏಕೆ ಆಯಾಸದಾಯಕ? ಇದು ಕುತೂಹಲದ ಪ್ರಶ್ನೆ. ಕಲಿಕೆಯ ಕುತೂಹಲ ಮಗುವಿಗೆ ಸಹಜವಾಗಿಯೇ ಇರುವಾಗ ಆ ಸಹಜ ಕಲಿಕೆಯಿಂದ ನಾವು ದೂರ ಸರಿದಿರಬೇಕು.

ಬದುಕೇ ನಿರಂತರ ಕಲಿಕೆ. ಆದಾಗ್ಯೂ ಬದುಕಿನಲ್ಲಿ ನಮಗೆ ಆಯಾಸ ಆಗುವುದೂ ಸತ್ಯವೇ! ಅಂದಮೇಲೆ ಆಯಾಸದ ಕಾರಣಗಳನ್ನು ಅರಿತರೆ ಆ ಕಾರಣಗಳನ್ನು ವಿಲೇ ಮಾಡಿ ಕಲಿಕೆಯ ಪ್ರಕ್ರಿಯೆ ನಡೆಸಿದಾಗ ಕಲಿಕೆ ಹೊರೆ ಎನಿಸುವುದಿಲ್ಲ. ಬದುಕಿನ ಆಯಾಸದ ಕಾರಣಗಳು:

*ನಮಗೆ ಒಪ್ಪಿಗೆಯಿಲ್ಲದ ಕೆಲಸ ಮಾಡಿದಾಗ ಸಹಜವಾಗಿಯೇ ನಮ್ಮ ದೇಹಮನಸ್ಸುಗಳು ಸಹಕರಿಸಿದೆ ಆಯಾಸವಾಗುತ್ತದೆ.

*ನಮಗೆ ಯಾವುದೇ ಕೆಲಸವನ್ನು ವಹಿಸಿದಾಗ ಅದನ್ನು ನಾವು ನಿರ್ವಹಿಸಲಾರೆವೇನೋ ಎಂಬ ಅಳುಕು ಇದ್ದಾಗ ಆಯಾಸ ಎನಿಸುತ್ತದೆ.

*ಯಾವುದೇ ಕೆಲಸ ಮಾಡಿದಾಗ ನಿರೀಕ್ಷಿತ ಮನ್ನಣೆ ದೊರಕದೆ ಹೋದಾಗ ಹೊರೆಯ ಅನುಭವ ಆಗುತ್ತದೆ.

*ನಾವು ಏಕಾಂಗಿಯಾಗಿ ಸಹಾಯಕ/ ಸಲಹೆಗಾರರ ಬೆಂಬಲವಿಲ್ಲದೆ ಕೆಲಸ ಮಾಡುವಾಗ ಆ ಕೆಲಸ ಆಯಾಸ ಎನಿಸುತ್ತದೆ.

*ನಮ್ಮ ವಿಶೇಷ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಇಲ್ಲದೆ, ಇತರರ ಸೂಚನೆಯನ್ನು ಯಾಂತ್ರಿಕವಾಗಿ ಪಾಲಿಸುವಾಗ ಆಯಾಸವೆನಿಸುತ್ತದೆ. ಏಕೆಂದರೆ ಅಲ್ಲಿ ಭಾಗವಹಿಸಿಕೆಗಾಗಲಿ, ಮನ್ನಣೆಯ ಮುಗ್ಗಟ್ಟನ್ನು (Identity crisis) ನಿವಾರಿಸಿಕೊಳ್ಳಲಾಗಲಿ ಆಸ್ಪದವಿಲ್ಲ.

*ನಮಗೆ ವಹಿಸಿದ ಕೆಲಸವು ತಪ್ಪಾದಾಗ ದುರಭಿಮಾನವೆನಿಸಿ ಅವಮಾನವಾದಾಗ ನಮ್ಮ ಮೇಲೂ, ಕೆಲಸದ ಮೇಲೂ ಬೇಜಾರಾಗಿ ಕೆಲಸ ಹೊರೆ ಎನಿಸತೊಡಗುತ್ತದೆ.

*ನಮ್ಮನ್ನು ಜನರು ಉಪೇಕ್ಷೆ ಮಾಡಿದಾಗ ನಮಗೆ ಬದುಕೇ ಹೊರೆ ಎನಿಸುತ್ತದೆ. ‘ಇತರರು ನಮ್ಮ ಪಾಲಿಗೆ ನರಕ; ಏಕೆಂದರೆ ಅವರು ನಮ್ಮನ್ನು (ಜೀವಂತವ್ಯಕ್ತಿಗಳೆಂದು ಪರಿಗಣಿಸದೆ) ವಸ್ತುವೆಂದು ಭಾವಿಸುತ್ತಾರೆ’ ಎಂದು ಜೀನ್‌ ಪಾಲ್‌ ಸಾತ್ರೇ ಹೇಳಿದ್ದಾರೆ.

*ನಮಗೆ ಸ್ವಾತಂತ್ರ್ಯವನ್ನೇ ನೀಡದೆ ಉಸಿರು ಕಟ್ಟಿಸುವ ಹಾಗೆ ಎಲ್ಲ ವಿಷಯದಲ್ಲೂ ಮೂಗು ತೂರಿಸಿದರೆ ಆಗಲೂ ಬದುಕು ಭಾರವೆನಿಸುತ್ತದೆ.

*ಯಾಂತ್ರಿಕ ಪುನರಾವರ್ತನೆ ಎಂಥವರಿಗೂ ಬೇಸರ ಮೂಡಿಸುತ್ತದೆ. ಏಕೆಂದರೆ ಅಲ್ಲಿ ಹೊಸತನಕ್ಕೆ/ಸಾಹಸಕ್ಕೆ ಅವಕಾಶವೇ ಇಲ್ಲ.

*ಆಳಪರಿಶೀಲನೆ ಇಲ್ಲದೆ ಮೇಲುಮೇಲು ಅರಿವನ್ನು ಶಾಬ್ದಿಕವಾಗಿ ಪಡೆದಾಗ, ಅದಕ್ಕೆ ಅನುಭವದ ಬೆಂಬಲ, ತಾರ್ಕಿಕ ಸಮರ್ಥನೆ ಇಲ್ಲದೆ ಯಾದೃಚ್ಛಿಕವಾಗಿ ಅಭಿಪ್ರಾಯ ಹೇರಿಕೆ ಎನಿಸಿದಾಗ ದಣಿವಿನ ಅನುಭವವಾಗುವುದೇ ವಿನಾ ತಣಿವಿನ ಅನುಭವವಾಗದು.

ಕಲಿಕೆಯೂ ಬದುಕಿನ ಹಾಗೆ ನೀರಸ ಹೊರೆ ಎನಿಸಿದರೆ ಅದಕ್ಕೂ ಈ ಬಗೆಯ ಸಂದರ್ಭವೇ ಕಾರಣ ಇರಬೇಕು. ಇವನ್ನು ಇಲ್ಲವಾಗಿಸುವ ಪ್ರಯತ್ನ ನಿರಂತರವಾಗಿ ಕಾಲದಿಂದ ಕಾಲಕ್ಕೆ ಬದಲಾವಣೆ ಆಗುತ್ತಾ ಸಾಗಿದೆ. ಅದನ್ನು ಅಳವಡಿಸಿಕೊಂಡಾಗ ಕಲಿಕೆ ಆಯಾಸರಹಿತ ಅಷ್ಟೇ ಅಲ್ಲ, ಆಯಾಸನಿವಾರಕವೂ ಆಗಬಲ್ಲದು!

ಈಗ ಕಲಿಕೆಯ ವಿಷಯಕ್ಕೆ ಬರೋಣ. ಮಗು ಬುಗುರಿಯು ಸುತ್ತವುದನ್ನು ತದೇಕ ಚಿತ್ತವಾಗಿ ನೋಡುವುದು. ಆ ತಿರುಗುವ ಬುಗುರಿಯನ್ನು ನಿಲ್ಲಿಸಲು, ತಾನೇ ತಿರುಗಿಸಲು ಪ್ರಯತ್ನ ಪಟ್ಟು ಕಲಿಯುವುದು. ಬುಗುರಿಯನ್ನು ಸ್ವತಃ ತಯಾರಿಸಲು ಅವಕಾಶ ಸಿಕ್ಕರೆ ಖಂಡಿತವಾಗಿಯೂ ಪ್ರಯತ್ನಿಸುವುದು .ಅದರ ತಿರುಗುವಿಕೆಯನ್ನು ಉತ್ತಮ ಪಡಿಸಲು ಪ್ರಯತ್ನಿಸುವುದು. ಇವೆಲ್ಲ ಶ್ರಮವನ್ನು ಒಳಗೊಂಡ ಹಂತಗಳೇ ಆದರೂ ಇದು ಹಿತಕರವಾದದ್ದು.

‘ಸುಖ ಎಂದರೆ ಹಿತಕರವಾದ ವೇದನೆ’ ಎಂದು ಸಂಸ್ಕೃತದಲ್ಲಿ ವ್ಯಾಖ್ಯಾನಿಸಿದ್ದಾರೆ. ಕಲಿಕೆ ನಿರಾಯಾಸಕರ ಹಾಗೂ ನಿರಾಶಾದಾಯಕ ಎಂದೂ ಅಲ್ಲ. ಅಂದಮೇಲೆ ಶಾಲಾ ಕಲಿಕೆಯನ್ನು ಹೊಣೆಯ ಹೊರೆ ಎನಿಸಿದಂತೆ ನಿರ್ವಾಹಣೆ ಮಾಡಲು ಸಾಧ್ಯ. ಈಗಾಗಲೇ ಪ್ರಸ್ತಾಪಿಸಿರುವ ಆಯಾಸದಾಯಕ ಅಂಗಗಳು ಉಲ್ಬಣಿಸದ ಹಾಗೆ  ನೋಡಿಕೊಂಡರಾಯಿತು.

ಏಕತಾನತೆಯ ಬದುಕಿನ ನೀರಸತೆಯನ್ನು ಬಡಿದೋಡಿಸಬಲ್ಲ ಉದ್ವೇಗದ ಅಲೆಯನ್ನು ಎಬ್ಬಿಸಿ, ಅದನ್ನು ಕಲಿಯಬೇಕಾದ ವಿಷಯ ಕುರಿತಂತೆ ಉತ್ಸಾಹದ ಅಲೆಯಾಗಿ ಉನ್ನತೀಕರಿಸಬೇಕು. ಆಗ ಮಕ್ಕಳು ತಾವಾಗಿಯೇ ಕಲಿಯಲು ಮುಂದಾಗುತ್ತಾರೆ. ಕಲಿಕೆ ಮುಗಿಯುವವರೆಗೂ ಆ ಉತ್ಸಾಹ ಅವಿರತವಾಗುವಂತೆ ನೋಡಿಕೊಳ್ಳಬೇಕು. ಅದಕ್ಕೆ ಮಾಡಬೇಕೇನು?

ಮಗುವಿಗೆ ಪರಿಕಲ್ಪನೆಯ ತೀರ್ಮಾನಗಳನ್ನು ಶಬ್ದರೂಪದಲ್ಲಿ ಹೇರಿದ್ದರೆ ಆಯಾಸವಾಗುತ್ತಿತ್ತು. ಅನುಭವದ ಮರುನಿರ್ಮಾಣ ಮಾಡಿ, ಮಗುವೇ ತೀರ್ಮಾನಿಸಲು ಪ್ರೇರಣೆ ನೀಡುವುದರಿಂದ, ಮನವೊಲಿಕೆ ಮೂಲಕ ಕಲಿಕೆ ಹೇಗೆ ಆಯಾಸದಾಯಕ ಎನಿಸೀತು?
ಸ್ವಪ್ರೇರಣೆಯ ಕಲಿಕೆ ಆಸ್ವಾದನೀಯವೇ ವಿನಾ ಆಯಾಸದಾಯಕ ಅಲ್ಲ.

ಕಲಿಯುವ ಮಗುವಿಗೆ ಸ್ವವಿಶ್ವಾಸ ಮೂಡಿಸಿದಾಗ ಕಲಿಯುವೆನೋ ಇಲ್ಲವೋ ಎಂಬ ಅಳುಕು, ಕಲಿಯಬಲ್ಲೆನೋ ಇಲ್ಲವೋ ಎಂಬ ಅಂಜಿಕೆ ಎಂದೂ ಮೂಡುವುದಿಲ್ಲ. ಹೀಗಾಗಿ ಕಲಿಕೆ ತ್ರಾಸದಾಯಕ ಆಗುವ ಬದಲು ತವಕಪೂರಿತ ಪ್ರವಾಸ ಎನಿಸುವುದು. ಇದರ ಸಲುವಾಗಿ ಕಲಿತ ಮೇಲೆ ಏನೆಲ್ಲ ಲಾಭಗಳಿವೆಯೆಂಬ ಆಸೆ ಮೂಡಿಸುವ (ಅದು ಅನೇಕ ವೇಳೆ ಹುಸಿ ಭರವಸೆ ಆಗುವ ಅಪಾಯವುಂಟು) ಬದಲು ಬೇಕಾದಷ್ಟು ಅಡ್ಡಿ ಬಂದರೂ ಕಲಿತೇ ಕಲಿವೆನೆಂಬ ಛಲವನ್ನೂ – ಇದನ್ನು ಆಸ್ಥೆ ಎನ್ನಲಾಗುವುದು – ಮೂಡಿಸಿದಾಗ ಆಯಾಸಕ್ಕೆ ಆಸ್ಪದ ಇಲ್ಲವೇ ಇಲ್ಲ.

ಸಮಯೋಚಿತವಾಗಿ ಕಲಿಕೆಯ ಸಕಾರಾತ್ಮಕ ಅಂಶಗಳನ್ನು ಗುರುತಿಸಿ ಮೆಚ್ಚುವುದು, ದೋಷಗಳನ್ನು ಕ್ಲೇಶವಿಲ್ಲದ ಹಾಗೆ ಸರಳವಾಗಿ, ಪರಿಹಾರ ಕೇಂದ್ರಿತವಾಗಿ ಸೂಚಿಸಿದಾಗ ಮಾತ್ರ ಅಧ್ಯಾಪಕರು ಸುಗಮ ಕಾರರೆನಿಸಿಕೊಳ್ಳುತ್ತಾರೆ.

ಕಲಿಕೆಯ ಪ್ರಕ್ರಿಯೆಯು ಸುಗಮಕಾರರೂ ಸೇರಿದಂತೆ  ಸಾಮೂಹಿಕವಾಗಿ ಆಗುತ್ತಿರುವುದರಿಂದ ಏಕಾಂಗಿತನವಾಗಲೂ ಅನಗತ್ಯ ಪೈಪೋಟಿಯಾಗಲಿ ಇರದೆ, ಅದರ ಬದಲಿಗೆ ಸಹಕಾರದ ಮೂಲಕ ಪರಿಪೂರಕತೆಯ ಮೂಲಕ ಕಲಿಕೆ ನಡೆಯುವಾಗ ಬೇಸರದ ಹೊರೆ ಇಣುಕಿಹಾಕಲೂ ತಾಣವಿಲ್ಲ; ಸಹ ವೀರ್ಯಂ ಕರವಾವಹೈ...
ಇತರರ ಬೆಂಬಲ ಪಡೆದು ತಾನು ಮುಂದೆ ಸಾಗುವಾಗ ಮನ್ನಣೆಯ ಮುಗ್ಗಟ್ಟಿನ ಪ್ರಶ್ನೆಯೇ ಏಳುವುದಿಲ್ಲ. ಬದಲಾಗಿ ಸುಗಮಕಾರರು ಹಾಗೂ ಸಹ ಸಾಹಸಿಗರೊಂದಿಗೆ ಕೈಗೊಳ್ಳುತ್ತಿರುವ ಸಾಹಸಕಾರ್ಯ ಆಗಿ ಕಲಿಕೆಗೆ ಸಮರೋತ್ಸಾಹ ಬರುತ್ತದೆ.

ಮಾನ–ಅವಮಾನದ ಪ್ರಶ್ನೆ ಬರುವುದು ಪ್ರತ್ಯೇಕತಾಪ್ರಜ್ಞೆ ಇದ್ದಾಗ. ಗುಂಪುಕಾರ್ಯದಲ್ಲಿ ತಪ್ಪಿಗೆ ಶಿಕ್ಷಿಸುವ ವಿಧಾನವೇ ಇಲ್ಲ. ಕಲಿಯುವಾಗಿನ ತಪ್ಪನ್ನು ಖಂಡಿಸದೆ – ಆ ತಪ್ಪಿನಿಂದ ಕಲಿಯುವವರು, ಕಲಿಸುವವರು (ಸುಗಮಕಾರರು) ತಂತಮ್ಮ ಇತಿಮಿತಿಗಳನ್ನು ಅರಿತು ಆ ಮಿತಿಯಿಂದ ಮೇಲೇರಲು ಸದವಕಾಶವೆಂದು ಭಾವಿಸಲು ಆಧುನಿಕ ಶಿಕ್ಷಣ ವಿಧಾನದಲ್ಲಿ ಪ್ರೇರೇಪಿಸಲಾಗಿದೆ. ಅಪಕಲಿಕೆ ಹಾಗೂ ಅವಕಲಿಕೆಗಳು ಕಲಿಕಾಪ್ರಕ್ರಿಯೆಯ ಸುಧಾರಣೆಗೆ ದಾರಿದೀಪಗಳು. ನೋವು ರೋಗದ ಮುನ್ಸೂಚನೆ ನೀಡಿ ಅದಕ್ಕೆ ನಿವಾರಣೆಯನ್ನು ಹುಡುಕಲು ಹೇಗೆ ಪ್ರೇರಣೆ ಆಗಬಲ್ಲದೋ ಹಾಗೆಯೇ ದೋಷವನ್ನು ದ್ವೇಷಿಸದೆ ಪೋಷಿಸಿದೆ. ದಾರಿಸೂಚಕವಾಗಿಸಿದಾಗಲೇ ಸುಗಮಕಾರರೆನಿಸಲು ಸಾಧ್ಯ.

ಸಮೂಹ ಚಟುವಟಿಕೆಗಳಲ್ಲಿ ‘ನಾನು’, ‘ನೀನು’ಗಳು ಒಗ್ಗೂಡಿ ‘ನಾವು’ ಆಗುವ ಮೂಲಕ ಸಂಕಲಿತ ಅಹಂ (Collective ego) ಇರುವಾಗ ಕೀಳರಿಮೆ/ ಮೇಲರಿಮೆಯ ಬಾಧೆಗಳಿಲ್ಲ. ಅಹಮಿಕೆ ಆಲೋಚನಾ ಕೇಂದ್ರವಾದಾಗಲೇ ಕೀಳರಿಮೆ/ಮೇಲರಿಮೆಗಳ ಕಾಟ. ಅಧ್ಯಾಪಕರೂ ಮೇಲರಿಮೆ ಪ್ರದರ್ಶಿಸದೆ ಮಕ್ಕಳೊಂದಿಗೆ ಮಗುವಾಗುವಂತೆ ಮಾಡವ ಸಲುವಾಗಿಯೇ ಅವರನ್ನು ಸುಗಮಕಾರರು ಎಂದು ಕರೆಯಲಾಗಿದೆ.

ಈಗಿನ ಕಲಿಕಾಕ್ರಮದಲ್ಲಿ ಮಕ್ಕಳಿಗೆ ತಪ್ಪು ಮಾಡುವ, ಅನಂತರ ತಿದ್ದಿಕೊಳ್ಳುವ ಸ್ವಾತಂತ್ರ್ಯ ನೀಡಲಾಗಿದೆ. ನಾವು ಕೈಗೊಂಡ ಪ್ರಯತ್ನ ಯಶಸ್ವಿಯಾದಾಗ ಬೀಗದಂತೆ, ಸೋಲಾದಾಗ ಬಾಗದಂತೆ ನೋಡಿಕೊಳ್ಳುವುದು ಸುಗಮಕಾರರ ಹೊಣೆ. ಮಿಗಿಲಾಗಿ ನಮಗೆ ಸೋಲು ಕಲಿಸುವ ಪಾಠವನ್ನು ಗೆಲವು ಕಲಿಸಲಾರದು. ಗೆಲುವಿನಿಂದ ಅರಳಿಕೆ; ಸೊಲಿನಿಂದ ಅರಿಯುವಿಕೆ.

ಗೆಲುವು ಅರಳುವಿಕೆಗೂ ಸೋಲು ಮರುಪರಿಶೀಲಿಸಿ ಅರಿಯುವಿಕೆಗೂ ದಾರಿ ಮಾಡಿಕೊಟ್ಟರೆ  ಅಳು–ಅಳಲಿಗೆ ಸ್ಥಳವೆಲ್ಲಿ?
ಗೆದ್ದಾಗ ನಲಿವಿನಲ್ಲಿ ಸೋತಾಗ ನೋವಿನಲ್ಲಿ ಮೈಮರೆತು ಕಾಲ ಕಳೆದರೆ ಕಲಿಕೆಗೆ ನೆಲೆಯಾದರೂ ಎಲ್ಲಿ?

ಆದರ್ಶ ಶಿಕ್ಷಣದ ಕಲಿಕಾಕ್ರಮ ಹೊರೆಯಲ್ಲ; ಹೊರೆಯನ್ನೂ ಹಗುರವಾಗಿಸಬಲ್ಲ ವಿಧಾನ, ಆಯಾಸಕಾರಕವಾಗುವ ಬದಲು ಆಯಾಸನಿವಾರಕ ಕ್ರಮ.
‘ಹಿಗ್ಗು ತರಲಿ ಬಿಡುಗಡೆ, ಹಿಗ್ಗುತಿರಲಿ ಒಳಗಡೆ’ ಎಂದು ಬೇಂದ್ರೆಯವರು ಹಾಡಿದ್ದಾರೆ. ಹಿಗ್ಗು ಎಂದರೆ ವಿಕಾಸ ಎಂದೂ ವಿಲಾಸ/ವಿನೋದ ಎಂದೂ ಅರ್ಥವಿದೆ. ಇದರ ಸದ್ಬಳಕೆಯನ್ನು ಕವಿ ಕೈಗೊಂಡಿರುವರು.

ಕಲಿಕೆ ಎಂಬುದು ಮೈಮನಗಳ, ಅಷ್ಟೇಕೆ ಇಡೀ ವ್ಯಕ್ತಿತ್ತ್ವದ ವಿಕಾಸ – ಹಿಗ್ಗು. ಅಲ್ಲಿ ಹೊರೆಯೆನಿಸಿದರೆ ಅದು ಕಲಿಕೆಯ ಅಪೂರ್ಣ ಅಳವಡಿಕೆ, ಇಲ್ಲವೇ ದೋಷ ಪೂರ್ಣ ಅಳವಡಿಕೆ. ಕೆಲವೊಮ್ಮೆ ಕಲಿಕೆಯ ಪ್ರಕ್ರಿಯೆ ನೀಡಿದ ಸವಿನೆನಪು ಬದುಕಿನ ಅಪರಿಹಾರ್ಯ ನೋವುಗಳಿಗೂ ನೆನಪಿನ ಸಂಜೀವಿನಿ ಆಗ ಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT