ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಷ್ಪ ಕೃಷಿಯಲ್ಲಿ ಖುಷಿ

Last Updated 31 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಮಲೆನಾಡಿನಲ್ಲಿ ಅಂಥೋರಿಯಂ ಕೃಷಿ ಆರಂಭವಾಗಿ ದಶಕಗಳೇ ಕಳೆದಿವೆ. ಕೆಲವೇ ಕೆಲವು ಕೃಷಿಕರು ಇದರಿಂದ ಲಾಭ ಮಾಡಿಕೊಂಡಿದ್ದಾರೆ.  ಒಂದಷ್ಟು ಜನ ಸ್ವಲ್ಪವೇ ವರ್ಷದಲ್ಲಿ ಇದನ್ನು ಕೈ ಬಿಟ್ಟಿದ್ದಾರೆ. ಹೆಚ್ಚಿನ ಕಡೆ ಪುರುಷರೇ ಇದರಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕನ್ನಂಗಿಯ ಆಶಾ ಶೇಷಾದ್ರಿ ಅವರು  18 ವರ್ಷಗಳಿಂದ ಅಂಥೋರಿಯಂ ಕೃಷಿಯಲ್ಲಿ ನಿರತರಾಗಿದ್ದಾರೆ.

‘1998ರಲ್ಲಿ ಮಡಿಕೇರಿಯಲ್ಲಿ ಒಂದಿಬ್ಬರು  ಅಂಥೋರಿಯಂ ಕೃಷಿ ಆರಂಭಿಸಿದ್ದರು. ಆಗ ಕೃಷಿ ಸ್ಥಳಗಳನ್ನು ನೋಡುವುದು ನನ್ನ ಹವ್ಯಾಸವಾಗಿತ್ತು. ಆಗ ಮಡಿಕೇರಿಗೆ ಹೋದಾಗ ಹೀಗೆ ಯಾರೋ ಒಬ್ಬರು ಅಂಥೋರಿಯಂ ಬೆಳೆದಿದ್ದಾರೆ ಎಂದು ಹೇಳಿದರು. ಕುತೂಹಲ ತಡೆಯದೆ ಹೋಗಿ ನೋಡಿದೆ. ನಾನೂ ಯಾಕೆ ಇಂಥ ಕೃಷಿ ಆರಂಭಿಸಬಾರದು ಎಂದು ಕೈ ಹಚ್ಚಿದೆ’ ಹೀಗೆ  ಪುಷ್ಪ ಕೃಷಿಯ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಆಶಾ.

ಸವಾಲಿನ ಆರಂಭದ ದಿನ: ಅಂಥೋರಿಯಂ ಕೃಷಿ ಆರಂಭದ ದಿನಗಳು ಸವಾಲಿನಿಂದ ಕೂಡಿದ್ದನ್ನೂ ಆಶಾ ಅವರು ಸ್ಮರಿಸುತ್ತಾರೆ.  ಅಂಥೋರಿಯಂಗೆ ಬೇಕಾದ ಪರಿಸರ, ತೇವಾಂಶ, ಮಣ್ಣಿನ ಪಿ.ಎಚ್‌., ಇ.ಸಿ ಯಾವುದೂ ತಿಳಿಯದೆ ಕೃಷಿ ಆರಂಭಿಸಿದರು.  ಇದರಿಂದ ಸಮಸ್ಯೆಗಳನ್ನು ಅನುಭವಿಸಿದರು. ಆದರೆ ಸಮಸ್ಯೆಗಳನ್ನೇ ಸವಾಲಾಗಿ ತೆಗೆದುಕೊಂಡು ಅದಕ್ಕೆ ಪರಿಹಾರ ಕಂಡುಕೊಂಡೆವು ಎನ್ನುತ್ತಾರೆ ಆಶಾ. ಇದೇ ಅವರಿಗೆ ಯಶಸ್ಸಿನ ಮೆಟ್ಟಿಲಾಯಿತು. ಅರ್ಧ ಎಕರೆಯಿಂದ ಆರಂಭವಾದ ಕೃಷಿ ಸದ್ಯ 2.5 ಎಕರೆಗೆ ವಿಸ್ತರಣೆಯಾಗಿದೆ.

ವಿದೇಶಕ್ಕೂ ಹೋಗಿ ಬಂದರು: ಈ ಸಸ್ಯಗಳು ಸ್ಥಳೀಯವಾಗಿ ದೊರೆಯುವುದಿಲ್ಲ. ಆದ್ದರಿಂದ ಆಶಾ ಅವರು 15 ಸಾವಿರ ಗಿಡಗಳನ್ನು ಏಜೆಂಟ್‌ ಮೂಲಕ ಹಾಲೆಂಡ್‌ನಿಂದ ತರಿಸಿದರು. ಅವುಗಳನ್ನು ಅರ್ಧ ಎಕರೆಯಲ್ಲಿ ನಾಟಿ ಮಾಡಿದರು. ಇದಕ್ಕಾಗಿ ನೆರಳಿನ ನೆಟ್‌ ಹಾಕಿದರು. ಹಾಲೆಂಡ್‌ನಲ್ಲಿದ್ದ ತಜ್ಞರ ಸಲಹೆ ಪಡೆದದ್ದೂ ಅಲ್ಲದೆ ಆಶಾ ಅವರು ಹಾಲೆಂಡ್‌ಗೆ ಹೋಗಿ ಅಲ್ಲಿ ಯಾವ ರೀತಿ ಅಂಥೋರಿಯಂ ಬೆಳೆಯಲಾಗುತ್ತದೆ ಎಂಬುದನ್ನು ತಿಳಿದುಕೊಂಡರು. 

ಪ್ರಾರಂಭದ ಹೂಡಿಕೆ: ಅಂಥೋರಿಯಂ ಕೃಷಿಗೆ ಪ್ರಾರಂಭದಲ್ಲಿ ಹೆಚ್ಚಿನ ಹೂಡಿಕೆ ಅಗತ್ಯವಿದೆ. ನೆರಳಿನ ನೆಟ್‌ ಇಲ್ಲವೇ ಪಾಲಿಹೌಸ್‌ ವ್ಯವಸ್ಥೆ ಮಾಡಬೇಕು. ಹಾಲೆಂಡ್‌ನಿಂದ ಒಂದು ಗಿಡ ತರಿಸಲು ಅಂದಾಜು ₹110 ವೆಚ್ಚವಾಗುತ್ತದೆ. ಒಂದು ಎಕರೆಗೆ 40 ಸಾವಿರ ಸಸಿ ಬೇಕಾಗುತ್ತದೆ. ಮಳೆ ಜಾಸ್ತಿ ಇರುವಲ್ಲಿ ಗ್ರೀನ್‌ಹೌಸ್ ಮಾಡಬೇಕು. ಕಡಿಮೆ ಇದ್ದಲ್ಲಿ ಶೇಡ್‌ನೆಟ್‌ ಬೇಕು. ಇದಕ್ಕೆ ಗುಣಮಟ್ಟದ ಮೇಲೆ ದರವಿದೆ. ಚಪ್ಪರದ ರೀತಿ ಮಾಡಲು ಪೈಪ್‌ಗಳ ಅಗತ್ಯವಿದೆ.

ಇದಲ್ಲದೆ ನೀರಾವರಿಗೆ ₹4 ರಿಂದ ₹5 ಲಕ್ಷ ವೆಚ್ಚವಾಗುತ್ತದೆ. ಇನ್ನು ಮಡಿಗಳ ಸಿದ್ಧತೆಗೆ ಪ್ಲಾಸ್ಟಿಕ್‌ ಹಾಸಬೇಕು. ರೋಗ ಬರದಂತೆ ಔಷಧ ಸಿಂಪಡಿಸಬೇಕು. ಇದಕ್ಕೆಲ್ಲ ಆರಂಭದಲ್ಲಿ ಒಂದಷ್ಟು ಹೂಡಿಕೆ ಮಾಡಿ ಗಿಡಗಳನ್ನು ಜಾಗ್ರತೆಯಿಂದ ನೋಡಿಕೊಂಡರೆ ಮೂರು ವರ್ಷದಲ್ಲಿ ಹೂಗಳು ಕೈಸೇರುತ್ತವೆ.

ಎಂಟು ಜನ: ಅಂಥೋರಿಯಂಗಾಗಿ ಆಶಾ ಅವರ ಫಾರ್ಮ್‌ನಲ್ಲಿ ಒಟ್ಟು  ಜನ ಕೆಲಸ ಮಾಡುತ್ತಾರೆ. ನಾಲ್ಕು ಜನರಿಗೆ ಪ್ರತಿ ದಿನ ಕೆಲಸವಿರುತ್ತದೆ. ನೀರಾವರಿ ಹಾಗೂ ಗೊಬ್ಬರ ಒದಗಿಸಲು ಕೆಲವು ತಾಂತ್ರಿಕತೆ ಅಳವಡಿಸಿಕೊಂಡರೆ ಹೆಚ್ಚು ಕೆಲಸ ಇರುವುದಿಲ್ಲ. ಆಶಾ ಅವರು ಟ್ರಾಪಿಕಲ್‌ ರೆಡ್‌್ ಹೂಗಳನ್ನು ಹೆಚ್ಚು ಬೆಳೆದಿದ್ದಾರೆ. ಏಕೆಂದರೆ ಈ ಬಣ್ಣದ ಹೂಗಳಿಗೆ ಹೆಚ್ಚಿನ ಬೇಡಿಕೆ ಇದೆ.

ರೋಗ ನಿರ್ವಹಣೆ: ಪ್ರಾರಂಭದಲ್ಲಿ ಆಶಾ ಅವರ ತೋಟದಲ್ಲಿ ಬೆಳೆದ ಹೂಗಳಿಗೆ ಯಾವ ರೋಗ ಬಂದಿದೆ, ಯಾಕೆ ಹೂಗಳು ಅರಳದೆ ಮುದುಡಿವೆ ಎಂದೇ ತಿಳಿದಿರಲಿಲ್ಲ. ಆದರೆ ಈಗ ಅವರ ಅನುಭವವೇ ಎಲ್ಲವನ್ನೂ ಕಲಿಸಿದೆ. ಸಾಮಾನ್ಯವಾಗಿ ಇವುಗಳಿಗೆ ಫಂಗಸ್‌ ಮತ್ತು ಬ್ಯಾಕ್ಟೀರಿಯಾ ರೋಗದ ಬಾಧೆ ಹೆಚ್ಚು. ಇದನ್ನು ನಿಯಂತ್ರಣದಲ್ಲಿಡಲು 30 ಡಿಗ್ರಿ ಸೆಲ್ಸಿಯಸ್‌ನಲ್ಲಿ ಉಷ್ಣಾಂಶ ಕಾಪಾಡಿಕೊಳ್ಳಬೇಕು. ಶೇಡ್‌ನೆಟ್‌ನಲ್ಲಿ ಮಳೆಗಾಲದಲ್ಲಿ ಫಂಗಸ್‌ ಬರುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ ಉಷ್ಣಾಂಶ ತೀರಾ ಹೆಚ್ಚಿದರೆ ಬ್ಯಾಕ್ಟೀರಿಯಾ ಕಾಡಬಹುದು.

ಬೇಡಿಕೆ ಇದ್ದಾಗ ಪೂರೈಸಬೇಕು: ಅಂಥೋರಿಯಂ ಹೂಗಳನ್ನು ಬೇಡಿಕೆ ಇದ್ದಾಗ ಪೂರೈಸಬೇಕು. ಕೊಳ್ಳುವವರು ಒಂದು ದಿನ ಮೊದಲು ಬೇಡಿಕೆ ಸಲ್ಲಿಸುತ್ತಾರೆ. ಅದಕ್ಕೆ ತಕ್ಕಂತೆ ಸೂಕ್ತವಾಗಿ ಪ್ಯಾಕ್‌ ಮಾಡಿ ಬಾಕ್ಸ್‌ಗಳಲ್ಲಿ ಸರಬರಾಜು ಮಾಡುತ್ತಾರೆ. ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ಗೆ ಮಾರಾಟವಾಗುತ್ತವೆ. ಮಧ್ಯಮ ಗಾತ್ರದ ಹೂಗಳಿಗೆ ₹12 ಇದ್ದರೆ ದೊಡ್ಡದಕ್ಕೆ ₹20 ಸಿಗುತ್ತದೆ.

ಆಶಾ ಅವರು ಸಣ್ಣ ಪ್ರಮಾಣದಲ್ಲಿ ಆರ್ಕಿಡ್‌ಗಳನ್ನು ಬೆಳೆಸಿದ್ದಾರೆ. ಆದರೆ ಅದು ಕೇವಲ ಹವ್ಯಾಸಕ್ಕಾಗಿ. ಅವುಗಳನ್ನು ವಾಣಿಜ್ಯ ಉದ್ದೇಶದಿಂದ ಬೆಳೆದಿಲ್ಲ. ಸದ್ಯಕ್ಕೆ ಅಂಥೋರಿಯಂ ಕಡೆಗೆ ಮಾತ್ರ ತಮ್ಮ ಗಮನ ಎನ್ನುತ್ತಾರೆ ಇವರು.

ತೋಟಗಾರಿಕೆ ಇಲಾಖೆ ನೆರವು: ಅಥೋರಿಯಂ ಕೃಷಿಯಲ್ಲಿ ತೊಡಗಿಸಿ ಕೊಳ್ಳುವವರಿಗೆ ತೋಟಗಾರಿಕೆ ಇಲಾಖೆ ತರಬೇತಿ ನೀಡುತ್ತದೆ. ಇದಲ್ಲದೆ ಗ್ರೀನ್‌ ಹೌಸ್‌ ನಿರ್ಮಾಣ ಮಾಡಿಕೊಳ್ಳಲು ಇಲಾಖೆ ಸಬ್ಸಿಡಿ ನೀಡುತ್ತದೆ.  ಆದರೆ ಅಂಥೋರಿಯಂ ಕೃಷಿ ಸಣ್ಣ ಮತ್ತು ಸಣ್ಣ ಹಿಡುವಳಿ ರೈತರಿಗೆ ಸೂಕ್ತವಾಗಲಾರದು ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಶಿವಮೊಗ್ಗ ಜಿಲ್ಲಾ ಸಹಾಯಕ ನಿರ್ದೇಶಕ ವಿಶ್ವನಾಥ್‌.  ಹೆಚ್ಚಿನ ಹೂಡಿಕೆ ಅಗತ್ಯವಿರುವುದೇ ಇದಕ್ಕೆ ಕಾರಣ ಎಂಬ ಸ್ಪಷ್ಟೀಕರಣ ಅವರದು.

ಹಲವು ಪ್ರಶಸ್ತಿಗಳು: ಆಶಾ ಅವರಿಗೆ 2014ರಲ್ಲಿ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2001ರಲ್ಲಿ ಡಾ.ಎಂ.ಎಚ್‌.ಮರಿಗೌಡ ಉತ್ತಮ ತೋಟಗಾರಿಕೆ ಪ್ರಶಸ್ತಿ ಬಂದಿದೆ. ಇವುಗಳಲ್ಲದೆ 2002ರಲ್ಲಿ ಮುಂಬೈನ ಆಸ್ಪಿ ಎಲ್ಎಂ ಪ್ರತಿಷ್ಠಾನದ ‘ಉತ್ತಮ ಭಾರತೀಯ ರೈತ ಮಹಿಳೆ’ ಪ್ರಶಸ್ತಿ, 2013ರಲ್ಲಿ ಎಫ್‌ಕೆಸಿಸಿಐನಿಂದ ‘ಮಹಿಳಾ ಸಾಧಕಿ ಪ್ರಶಸ್ತಿ’, ಭಾರತೀಯ ಆರ್ಕಿಡ್‌ ಸೊಸೈಟಿಯಿಂದ ಗೌರವ ಅಲ್ಲದೆ ಹತ್ತು ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಆಶಾ ಅವರ ಸಂಪರ್ಕಕ್ಕೆ ದೂರವಾಣಿ: 94480 93033

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT