ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 1 ನವೆಂಬರ್ 2016, 19:30 IST
ಅಕ್ಷರ ಗಾತ್ರ

-ಪ್ರಕಾಶ, ಬಾಗಲಕೋಟೆ
*ನಾನು ಬ್ಯಾಂಕ್‌ ಉದ್ಯೋಗಿ, 30X40 ಅಳತೆ ನಿವೇಶನ ಮಾರಾಟ ಮಾಡಿ ₹ 9.55 ಲಕ್ಷ ಬಂದಿದೆ. ಇದಕ್ಕೆ ಯಾವ ತರಹದ ತೆರಿಗೆ ಬರುತ್ತದೆ, ಬಂದರೆ ತೆರಿಗೆ ಹೇಗೆ ಪಾವತಿಸಬೇಕು. ಹಣದ ಉಪಯೋಗ ಯಾವ ರೀತಿಯಲ್ಲಿ ಮಾಡಬೇಕು. ದಯಮಾಡಿ ತಿಳಿಸಿ.
ಉತ್ತರ: 
ನಿವೇಶನ ಖರೀದಿಸಿದ ಹಣ ಹಾಗೂ ಮಾರಾಟ ಮಾಡಿ ಬಂದಿರುವುದರ ವ್ಯತ್ಯಾಸಕ್ಕೆ ಕ್ಯಾಪಿಟಲ್‌ ಟ್ಯಾಕ್ಸ್, ಶೇ  20 ರಂತೆ ಕೊಡಬೇಕಾಗುತ್ತದೆ. ಇದೇ ವೇಳೆ ಹೀಗೆ ಬಂದ ಮೊತ್ತದಲ್ಲಿ  ಹಣದುಬ್ಬರ ವೆಚ್ಚ (Cast of inf*a*tion) ಲೆಕ್ಕ ಹಾಕಿ, ಬರುವ ಮೊತ್ತ ಕೂಡಾ ಕಳೆದು ತೆರಿಗೆ ಸಲ್ಲಿಸಬಹುದು. ತೆರಿಗೆಯನ್ನು ಆದಾಯ ತೆರಿಗೆ ಕಚೇರಿ ಅಥವಾ ಆಯ್ದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಚಲನ್‌ ತುಂಬಿಸಿ ಕಟ್ಟಬಹುದು. ತೆರಿಗೆ ಸಂಪೂರ್ಣ ಉಳಿಸಲು NHIA ಅಥವಾ REC ಇವುಗಳಲ್ಲಿ 3 ವರ್ಷಗಳ ಅವಧಿಗೆ ಇಡಬಹುದು. ಒಟ್ಟಿನಲ್ಲಿ ನಿಮಗೆ ಬಂದಿರುವ ಈ ದೊಡ್ಡ ಮೊತ್ತ ನಿಮ್ಮ ಬ್ಯಾಂಕಿನಲ್ಲಿಯೇ, 5 ವರ್ಷಗಳ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿ ಹಾಗೂ ಅವಧಿ ಮುಗಿಯುತ್ತಲೇ ಮುಂದುವರಿಸಿಕೊಳ್ಳಿ. ನಿಮ್ಮ ಬ್ಯಾಂಕಿನಲ್ಲಿ  ನೌಕರರಿಗೆ ಶೇ 1 ಬಡ್ಡಿ ದರ ಹೆಚ್ಚಿಗೆ ಸಿಗುವುದರಿಂದ ಇದಕ್ಕೆ ಮಿಗಿಲಾದ ದಾರಿ ಬೇರೊಂದಿಲ್ಲ.

-ಹೆಸರು ಬೇಡ, ಮಂಗಮ್ಮನಪಾಳ್ಯ, ಬೆಂಗಳೂರು
*ನಾನು ವಿಧವೆ. ಪೋಷಕರ ಜೊತೆ ವಾಸವಾಗಿದ್ದೇನೆ. ಒಂದು ಖಾಸಗಿ ಕಂಪೆನಿಯಲ್ಲಿ ಕೆಲಸ. 14 ವರ್ಷದ ಮಗಳಿದ್ದಾಳೆ. ಅವಳ ಹೆಸರಿನಲ್ಲಿ ₹ 5 ಲಕ್ಷ ಪಾಲಿಸಿ ಮಾಡಿದ್ದೇನೆ. ಅಂಚೆ ಕಚೇರಿಯಲ್ಲಿ ₹ 500 ಆರ್‌.ಡಿ. ಮಾಡಿದ್ದೇನೆ. ಎಲ್ಲಾ ಖರ್ಚು ಕಳೆದು ₹ 3,000 ಉಳಿಸುತ್ತೇನೆ, ನನ್ನ ಮುಂದಿನ ಭವಿಷ್ಯಕ್ಕಾಗಿ ಈ ಹಣ ಹೇಗೆ ವಿನಿಯೋಗಿಸಲಿ, ಸಲಹೆ ನೀಡಿ.
ಉತ್ತರ:
ವಿಮಾ ಪಾಲಿಸಿ ಹಾಗೂ ಅಂಚೆ ಕಚೇರಿ ಆರ್‌.ಡಿ. ನಿಲ್ಲಿಸದೆ ಹಾಗೆಯೇ ಮುಂದುವರಿಸಿ. ನಿಮ್ಮ ಹಾಗೂ ನಿಮ್ಮ ಮಗಳ ಭವಿಷ್ಯಕ್ಕಾಗಿ ನೀವು ಉಳಿಸಬಹುದಾದ ₹ 3000, 10 ವರ್ಷಗಳ ಆರ್‌.ಡಿ. ಮಾಡಿರಿ. ಶೇ 8ರ ಬಡ್ಡಿ ದರದಲ್ಲಿ 10 ವರ್ಷಗಳ ಅಂತ್ಯಕ್ಕೆ ₹ 5.50 ಲಕ್ಷ ಪಡೆಯುವಿರಿ. ಈ ಹಣ ಮಗಳ ಮದುವೆಗೆ ಮುಡುಪಾಗಿಡಿ. ನಿಮ್ಮ ವಾರ್ಷಿಕ ಆದಾಯ ₹ 4.50 ಲಕ್ಷ ದೊಳಗಿರುವುದರಿಂದ, ನಿಮ್ಮ ಮಗಳು ಮುಂದೆ ವೃತ್ತಿಪರ ಶಿಕ್ಷಣ (ಬಿಇ–ಎಂಬಿಬಿಎಸ್‌  ಇನ್ನೂ ಮುಂದೆ) ಪಡೆಯುವಲ್ಲಿ ಗರಿಷ್ಠ ₹ 10 ಲಕ್ಷಗಳ ತನಕ ಬಡ್ಡಿ ಅನುದಾನಿತ ಶಿಕ್ಷಣ ಸಾಲ ದೊರೆಯುತ್ತದೆ. ಈ ಸಾಲ ಕೆಲಸಕ್ಕೆ ಸೇರಿದ ನಂತರ ತೀರಿಸಬಹುದು. 

-ಶಾರದಾ, ಮೈಸೂರು
*ನಾನು ಗೃಹಿಣಿ. ವಯಸ್ಸು 52. ವಾರ್ಷಿಕ ವರಮಾನ ₹ 2–3 ಲಕ್ಷ. ನನ್ನ ವಿಮಾ ಪಾಲಿಸಿಯಿಂದ ₹ 1,14,600 ಬಂದಿರುತ್ತದೆ. ಇದರಲ್ಲಿ ₹ 2,340 ಕಳೆದು (ಟಿಡಿಎಸ್‌) ನನಗೆ ಕೊಟ್ಟಿರುತ್ತಾರೆ. ನಾನು ಫಾರಂ ನಂ. 16 ಕೊಟ್ಟಿರಲಿಲ್ಲ. ಈ ಹಣ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಿ. ವಾಪಸ್ಸು ಪಡೆಯಬಹುದೇ?
ಉತ್ತರ:
ನಿಮ್ಮ ವಯಸ್ಸಿಗೆ ಅನುಗುಣವಾಗಿ ವಾರ್ಷಿಕ ಒಟ್ಟು ಆದಾಯ ₹ 2.50 ಲಕ್ಷಗಳ ತನಕ ನಿಮಗೆ ತೆರಿಗೆ ಬರುವುದಿಲ್ಲ. ನಿಮಗೆ ಬಂದಿರುವ ಹಣ ₹ 1,14,600 ನೀವು ಕಟ್ಟಿರುವ ವಾರ್ಷಿಕ ಪ್ರೀಮಿಯಂ  ಹಾಗೂ ಬೋನಸ್ಸಿನಿಂದಾಗಿರುತ್ತದೆ. ಆದ್ದರಿಂದ ₹ 1,14,600ಕ್ಕೆ ಆದಾಯ ತೆರಿಗೆ ಬರುವುದಿಲ್ಲ. ನೀವು ನಿಮ್ಮ ಮನೆಗೆ ಸಮೀಪದ ಚಾರ್ಟ್‌ರ್‌್ಡ ಅಕೌಂಟೆಂಟ್‌ ಅವರನ್ನು ವಿಚಾರಿಸಿ, ಆದಾಯ ತೆರಿಗೆ ರಿಟರ್ನ್‌ ತುಂಬಿ ಟಿ.ಡಿ.ಎಸ್‌. ಹಣ ವಾಪಸ್‌ ಪಡೆಯಲು ವಿಚಾರಿಸಿ. ಅವರ ಸಲಹೆಯಂತೆ ಮಾಡಿ. ಟಿ.ಡಿ.ಎಸ್‌. ₹ 2,340 ವಾಪಸ್ಸು ಬಂದೇ ಬರುತ್ತದೆ.
ವಿ.ಸೂ.: ನಿಮ್ಮ ಪಾಲಿಸಿ ‘ಜೀವನ ಆಧಾರ’, ‘ಜೀವನ ಧಾರ’, ‘ಜೀವನ ಅಕ್ಷಯ’, ‘ನವ್‌ ಜೀವನ ಧಾರ’ ಹಾಗೂ ‘ನವ್‌ ಜೀವನ ಅಕ್ಷಯ’ ಆದಲ್ಲಿ ಮಾತ್ರ ಅವಧಿ ಮುಗಿದು ಬಂದಿರುವ ಹಣಕ್ಕೆ ತೆರಿಗೆ ಅನ್ವಯವಾಗುತ್ತದೆ.

-ಪ್ರಭು, ಶಿವಮೊಗ್ಗ
*ನನ್ನ ವಯಸ್ಸು 72, ನನ್ನ ಪತ್ನಿ ವಯಸ್ಸು 63. ನಾನು ಕರ್ಣಾಟಕ ಬ್ಯಾಂಕಿನಲ್ಲಿ ಠೇವಣಿ ಇಟ್ಟ ₹ 60 ಲಕ್ಷ ಬಡ್ಡಿ ಸೇರಿ ₹ 72 ಲಕ್ಷ ವಾಯಿದೆ ಮುಗಿದು ಕೈ ಸೇರಲಿದೆ. ನಮಗೆ ಇಬ್ಬರಿಗೂ ತಲಾ ₹ 20,000 ತಿಂಗಳಿಗೆ ಸಿಗುವಂತಾಗ ಬೇಕು. ನಾನು ಹಣ ವಿಂಗಡಿಸಿ ನನ್ನ ಹೆಂಡತಿ ಹೆಸರಿನಲ್ಲಿ ಇಡುತ್ತೇನೆ. ತೆರಿಗೆ ಹಾಗೂ ಹೆಚ್ಚಿನ ವರಮಾನದ ವಿಚಾರದಲ್ಲಿ ಸಲಹೆ ನೀಡಿ.
ಉತ್ತರ:
ನೀವಿಬ್ಬರೂ ಹಿರಿಯ ನಾಗರಿಕರಾದ್ದರಿಂದ ವಾರ್ಷಿಕವಾಗಿ ಬಡ್ಡಿ ಹಾಗೂ ಇತರೆ ಆದಾಯದಿಂದ ಬರುವ ಆದಾಯ ತಲಾ ₹ 3 ಲಕ್ಷಗಳ ತನಕ ನಿಮಗೆ ತೆರಿಗೆ ಬರುವುದಿಲ್ಲ. ಹಾಗೆ ದಾಟಿದಲ್ಲಿ ಸೆಕ್ಷನ್‌ 80ಸಿ ಆಧಾರದ ಮೇಲೆ ಕರ್ಣಾಟಕ ಬ್ಯಾಂಕಿನಲ್ಲಿ ತೆರಿಗೆ ಉಳಿಸುವ ಠೇವಣಿ ಮಾಡಿರಿ. ಕರ್ಣಾಟಕ ಬ್ಯಾಂಕಿನಲ್ಲಿ, ಮುಖ್ಯವಾಗಿ ಹಿರಿಯ ನಾಗರಿಕರಿಗೆ, ಠೇವಣಿ ಮೇಲಿನ ಬಡ್ಡಿ ಯಾವುದೇ ಕಡಿತವಿಲ್ಲದೇ, ಪ್ರತೀ ತಿಂಗಳೂ ಬಡ್ಡಿ ಕೊಡುತ್ತಾರೆ. ಉಳಿದ ಬ್ಯಾಂಕುಗಳಲ್ಲಿ ಪ್ರತಿ ತಿಂಗಳೂ ಬಡ್ಡಿ ಪಡೆದರೆ ನಿಗದಿತ ಬಡ್ಡಿಗಿಂತ ಸ್ವಲ್ಪ ಕಡಿತ ಮಾಡಿ ಕೊಡುತ್ತಾರೆ. ₹ 36 ಲಕ್ಷ ನಿಮ್ಮಿಬ್ಬರ ಹೆಸರಿನಲ್ಲಿ ಪ್ರತ್ಯೇಕವಾಗಿ ಠೇವಣಿ ಇರಿಸುವುದರಿಂದ, ಶೇ 8.25 ಬಡ್ಡಿ ದರದಲ್ಲಿ, ಪ್ರತೀ ತಿಂಗಳೂ ನೀವಿಬ್ಬರೂ ತಲಾ ₹ 24,750 ಪಡೆಯಬಹುದು.

-ಹೆಸರು ಬೇಡ, ತಿಪಟೂರು
*ವಯಸ್ಸು 33. ವೆಲ್ಡಿಂಗ್‌ ಕೂಲಿ ಕೆಲಸ. ಅಪ್ಪ, ಅಮ್ಮ ಇಬ್ಬರು ಅಣ್ಣಂದಿರು ಇದ್ದಾರೆ. ಸ್ವಂತ ಮನೆ ಇದೆ. ಮಗ ಯುಕೆಜಿ.  ಎಸ್‌ಎಸ್‌ಎಲ್‌ಸಿ ನಂತರ ಕೆಲಸಕ್ಕೆ ಸೇರಿದೆ. ಪ್ರತೀ ದಿವಸ ₹ 200 ಪಿಗ್ಮಿ ಕಟ್ಟುತ್ತೇನೆ. 2014 ರಲ್ಲಿ ₹ 1.50 ಲಕ್ಷ, 2015 ರಲ್ಲಿ ₹ 1 ಲಕ್ಷ, 2016 ರಲ್ಲಿ ₹ 1 ಲಕ್ಷ ಠೇವಣಿ ಇಟ್ಟಿದ್ದೇನೆ. 2017–18 ರಲ್ಲಿಯೂ ಇರಿಸುವ ಯೋಜನೆ ಇದೆ.  2019 ರಲ್ಲಿ ಎಲ್ಲಾ ಸೇರಿಸಿ ಒಂದೇ ಠೇವಣಿ ಮಾಡಬೇಕೆಂದಿದ್ದೇನೆ. ನನ್ನ ಹಣಕ್ಕೆ ಆದಾಯ ತೆರಿಗೆ ಸಮಸ್ಯೆ ಬರುತ್ತದೆಯೇ– ತೆರಿಗೆ ಉಳಿಸುವ ವಿಧಾನ ತಿಳಿಸಿ. ಪ್ರತಿ ವರ್ಷ ₹ 13,200 ಎಲ್‌ಐಸಿ  ಕಟ್ಟುತ್ತೇನೆ.
ಉತ್ತರ:
ನೀವು ಆದಾಯ ತೆರಿಗೆ ಭಯದಿಂದ ಹೊರಗೆ ಬನ್ನಿರಿ. ನಿಮ್ಮ ಆದಾಯ ಹಾಗೂ ಉಳಿತಾಯದಿಂದ ಬರುವ ಬಡ್ಡಿಗೆ ಆದಾಯ ತೆರಿಗೆ ಬರುವುದಿಲ್ಲ. ತೆರಿಗೆ ಭಯದಿಂದ ಉಳಿತಾಯ ಮಾಡುವುದನ್ನು ಎಂದಿಗೂ ನಿಲ್ಲಿಸಬೇಡಿ. 2019 ರಲ್ಲಿ ಧೈರ್ಯ ಮಾಡಿ ಎಲ್ಲಾ ಠೇವಣಿ ಸೇರಿಸಿ ಒಂದೇ ಠೇವಣಿ ಮಾಡಿ. ಹೀಗೆ ಠೇವಣಿ ಇರಿಸುವಾಗ ಕಾಲ ಕಾಲಕ್ಕೆ ಬಡ್ಡಿ ಪಡೆಯದೆ, ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿ ನಿಮ್ಮ ಹಣ ಬೆಳೆಯಲು ಬಿಡಿ. ನೀವು ಹೊರ ನೋಟಕ್ಕೆ ಪ್ರತಿಷ್ಟಿತ ವ್ಯಕ್ತಿಯಲ್ಲದಿದ್ದರೂ, ಪ್ರತಿಷ್ಠಿತ ವ್ಯಕ್ತಿಗಳೂ ನಿಮ್ಮ ಉಳಿತಾಯದ ಯೋಜನೆ ಅನುಸರಿಸುವಂತಿದೆ.

-ವಾಸೀಂ ಅಕ್ರಮ್‌, ಊರು ಬೇಡ
*ಎರನಾನು ಬಿ.ಕಾಂ. ಓದುತ್ತಿದ್ದೇನೆ. ನನ್ನ ಹತ್ತಿರ ₹ 10,000 ನಗದು ಇದೆ. ಇದನ್ನು ಅಂಚೆ ಕಚೇರಿಯಲ್ಲಿ ಎಫ್‌ಡಿ ಮಾಡಬೇಕೆಂದಿದ್ದೇನೆ. ಬ್ಯಾಂಕುಗಳಿಗಿಂತ ಇಲ್ಲಿ ಹೆಚ್ಚಿನ ಬಡ್ಡಿ ಬರುತ್ತದೆ ಎಂದು ಕೇಳಿದ್ದೇನೆ. ಇದು ನಿಜಾನಾ. ಎಷ್ಟು ಅವಧಿಗೆ ಇಡಲಿ ಹಾಗೂ ನನ್ನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಮಾರ್ಗದರ್ಶನ ಮಾಡಿ.
ಉತ್ತರ:
ಬ್ಯಾಂಕುಗಳಿಗಿಂತ ಅಂಚೆ ಕಚೇರಿಗಳಲ್ಲಿ ಠೇವಣಿ ಮೇಲೆ ಸ್ವಲ್ಪ ಹೆಚ್ಚಿನ ಬಡ್ಡಿ ಬರುವುದು ನಿಜ. ಇಲ್ಲಿ 1, 2, 5 ವರ್ಷಗಳ ಅವಧಿಗೆ ಠೇವಣಿ ಇರಿಸಬಹುದು. ಬಡ್ಡಿ ದರ 1 ವರ್ಷಕ್ಕೆ
ಶೇ 7.1 ಎರಡು ವರ್ಷಕ್ಕೆ ಶೇ 7.2 ಹಾಗೂ 5 ವರ್ಷಗಳಿಗೆ ಶೇ 7.9 ಇರುತ್ತದೆ. ಬ್ಯಾಂಕುಗಳು ಬಡ್ಡಿದರ ಇಳಿಸಿದಂತೆ ಅಂಚೆ ಕಚೇರಿಯಲ್ಲಿ ಕೂಡಾ ಬಡ್ಡಿ ದರ ಕಡಿಮೆಯಾಗುತ್ತಿದೆ. ಒಟ್ಟಿನಲ್ಲಿ ಬ್ಯಾಂಕು ಗಳಿಗಿಂತ ಅಂಚೆ ಕಚೇರಿಯಲ್ಲಿ ಅತ್ಯಲ್ಪ ಬಡ್ಡಿ ಹೆಚ್ಚಿಗೆ ದೊರೆಯುವುದು ನಿಜ. ನಿಮಗೆ ಈ ಹಣ ಯಾವಾಗ ಬೇಕಾಗಬಹುದು ಎನ್ನುವುದನ್ನು ನಿರ್ಧರಿಸಿ ಅವಧಿಯನ್ನು ಆರಿಸಿಕೊಳ್ಳಿ.

-ರಘು, ವಿಜಯಪುರ
*ಕೇಂದ್ರ ಸರ್ಕಾರಿ ನೌಕರ. ಎಲ್ಲಾ ಖರ್ಚು ಕಳೆದು ಉಳಿಯುವ ಹಣ ₹ 15,000. ಊರಲ್ಲಿ ಕಿರಾಣಿ ಅಂಗಡಿ ಇದೆ. ಅಣ್ಣ ನೋಡಿ ಕೊಳ್ಳು ತ್ತಾನೆ. ಅಂಗಡಿಯಿಂದ ₹ 15,000 ಆದಾಯ ಬರುತ್ತದೆ. ನಮಗೆ ಊರಿನಲ್ಲಿ ಒಂದು ಸಂಕೀರ್ಣ ಇದ್ದು ಇದರಿಂದ ₹ 18,000 ಬಾಡಿಗೆ ಬರುತ್ತದೆ. ನಮಗೆ ಸ್ವಂತ ಮನೆ ಇದೆ ಹಾಗೂ ಇನ್ನೂ 6 ಅಂಗಡಿ ಮುಂಗಟ್ಟು ಕಟ್ಟಿಸುವ ಯೋಜನೆ ಇದೆ. ಬೇರಾವ ಉಳಿತಾಯ ಇಲ್ಲ. ಆದಾಯ ವೃದ್ಧಿಸಿಕೊಳ್ಳಲು ಮಾರ್ಗದರ್ಶನ ಮಾಡಿ.
ಉತ್ತರ:
ನೀವು ಇದುವರೆಗೆ ಮಾಡಿರುವ ಎಲ್ಲಾ ಯೋಜನೆಗಳು ತುಂಬಾ ಚೆನ್ನಾಗಿವೆ. ಸಾಧ್ಯವಾದರೆ 6 ಅಂಗಡಿ ಮುಂಗಟ್ಟನ್ನು ಆದಷ್ಟು ಬೇಗ ನಿರ್ಮಿಸಿರಿ. ಸ್ಥಿರ ಆಸ್ತಿ ಹೂಡಿಕೆಗೆ ಮಿಗಿಲಾದ ಹೂಡಿಕೆ ಬೇರೊಂದಿಲ್ಲ. ನೀವು ಹಾಗೂ ನಿಮ್ಮ ಅಣ್ಣ ಎನ್.ಪಿ.ಎಸ್‌. ಯೋಜನೆಯಲ್ಲಿ ಪ್ರತೀ ತಿಂಗಳೂ ತಲಾ ₹ 5,000 ತುಂಬಲು ಪ್ರಾರಂಭಿಸಿರಿ. ನಿವೃತ್ತಿ ಅಥವಾ ಜೀವನದ ಸಂಜೆಯಲ್ಲಿ ಎಷ್ಟಾದರಷ್ಟು ಪಿಂಚಣಿ ರೂಪದಲ್ಲಿ ಹಣ ಪಡೆಯುತ್ತಿರಬಹುದು. ನಿಮ್ಮ ಕುಟುಂಬದಲ್ಲಿ 10 ವರ್ಷದೊಳಗಿರುವ ಹೆಣ್ಣುಮಕ್ಕಳಿರುವಲ್ಲಿ, ಅವರಿಗೆ ಸುಕನ್ಯಾ ಸಮೃದ್ಧಿ ಯೋಜನೆ ಮಾಡಿಸಿರಿ. 6 ಅಂಗಡಿ ಮುಂಗಟ್ಟು ಕಟ್ಟಲು ದೊಡ್ಡ ಮೊತ್ತ ಬೇಕಾಗುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಉಳಿತಾಯ ಮಾಡಲು ಅವಕಾಶವಿರುವುದಿಲ್ಲ.

-ಶ್ರೀಕಾಂತ್‌. ವಿ., ಬೆಂಗಳೂರು
*ವಯಸ್ಸು 30. ಎನ್‌.ಎಂ.ಸಿ.ಯಲ್ಲಿ ಕೆಲಸ. ತಿಂಗಳ ಸಂಬಳ ₹ 30,000. ನನಗೆ 6 ವರ್ಷದ ಕೆಲಸದ ಅನುಭವವಿದೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಬಾಡಿಗೆ
₹ 9,000. ಕಾರಿನ ಸಾಲದ ಕಂತು ₹ 6,000, ಬಂಗಾರ ಕೊಳ್ಳಲು ₹ 2000 ಚಿಟ್‌ ಹಾಕಿದ್ದೇನೆ. ನನ್ನ ಖರ್ಚು ₹ 3000, ಉಳಿದ ಖರ್ಚು ₹ 10,000. ಮದುವೆ ಹಾಗೂ ಭವಿಷ್ಯಕ್ಕೆ ಉಳಿತಾಯದ ಮಾರ್ಗ ತಿಳಿಸಿ.
ಉತ್ತರ:
ಬಾಡಿಗೆ, ಕಾರಿನ ಸಾಲದ ಕಂತು, ಬಂಗಾರದ ಚೀಟಿ, ನಿಮ್ಮ ಖರ್ಚು, ನಿಮ್ಮ ಉಳಿದ ಖರ್ಚು ಪರಿಗಣಿಸುವಾಗ ₹30,000 ಇವುಗಳನ್ನು ನಿಭಾಯಿಸಲು ಮಾತ್ರ ಸಾಕಾಗುತ್ತದೆ. ಬಂಗಾರದ  ಚೀಟಿ, ನಿಮ್ಮ ಖರ್ಚು ಹೊರತುಪಡಿಸಿ ಉಳಿದ ಕಡಿತ ಉಳಿತಾಯದ ಮಾರ್ಗವಾಗಿರುವುದಿಲ್ಲ. ನಿಮಗೆ ಕನಿಷ್ಠ ₹ 5 ಲಕ್ಷದ ಜೀವವಿಮೆಯ ಅಗತ್ಯವಿದೆ. ಪ್ರಾಯಶ ಇದುವರೆಗೆ ಜೀವವಿಮೆ ಮಾಡಿಸಿದಂತಿಲ್ಲ. ಕಾರು ಸಾಲ ಯಾವಾಗ ಮುಗಿಯುತ್ತದೆ ತಿಳಿಯಲಿಲ್ಲ. ಸಾಲ ಮುಗಿದ ನಂತರ ಕಂತಿಗೆ ಕಟ್ಟುವ ₹ 6,000 ಉಳಿಯುತ್ತದೆ. ನಿಮ್ಮ ಇತರ ಖರ್ಚು ₹ 10,000 ಹಂತ ಹಂತವಾಗಿ ₹ 5,000ಕ್ಕೆ ಇಳಿಸಿಕೊಳ್ಳಿ. ಖರ್ಚಾದ ಹಣ ಎಂದಿಗೂ ವಾಪಸು ಬರಲಾರದು. ಕೆಲಸದ ಸ್ಥಳ ವಾಸದ ಮನೆ ಬಹು ದೂರವಾದಲ್ಲಿ, ಕೆಲಸದ ಸ್ಥಳದ ಸಮೀಪ ಮನೆ ಬಾಡಿಗೆಗೆ ಪಡೆಯಿರಿ. ₹ 9000 ಬದಲಾಗಿ ₹ 6000–7000 ಬಾಡಿಗೆ ಮನೆ ಹುಡುಕಿರಿ. ನೀವು ಅವಿವಾಹಿತರು. ಮದುವೆ ಆದನಂತರ ಇನ್ನೂ ಹೆಚ್ಚಿನ ಖರ್ಚು ಬರುವುದು ಸಹಜ. ನಾನು ವಿವರಿಸಿದಂತೆ ಜೀವನದ ಶೈಲಿ ಬದಲಾಯಿಸಿ ಕನಿಷ್ಠ ₹ 5,000 ಉಳಿಸಿ ಮುಂದಿನ ಭವಿಷ್ಯ ಕಾಪಾಡಿಕೊಳ್ಳಿ.

-ಸೋಮಶೇಖರ್‌, ಊರು ಬೇಡ
*ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಉಪನ್ಯಾಸಕ. ತಿಂಗಳ ಸಂಬಳ ₹ 46,000. ವಾರ್ಷಿಕ ₹ 28,000 ಆದಾಯ ತೆರಿಗೆ ಕೊಡುತ್ತೇನೆ. ₹ 1.50 ಲಕ್ಷ ಉಳಿತಾಯ ಮಾಡಿದ್ದೇನೆ. ಆದಾಯ ತೆರಿಗೆ ಕಡಿಮೆ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಿ.
ಉತ್ತರ:
ನೀವು ₹ 1.50 ಲಕ್ಷ  ಸೆಕ್ಷನ್‌ 80 ಸಿ ಆಧಾರದ  ಮೇಲೆ ಉಳಿಸುತ್ತಿರಬಹುದು. ಈ ವಿಚಾರ ಸರಿಯಾಗಿ ತಿಳಿಸಿಲ್ಲ. ₹ 1.50 ಲಕ್ಷ  ಗರಿಷ್ಠ ಮಿತಿಯಾಗಿದ್ದು, ಹೆಚ್ಚಿನ ಹಣ ತೊಡಗಿಸುವಂತಿಲ್ಲ. ಸೆಕ್ಷನ್‌ 80 ಸಿ ಗರಿಷ್ಠ ಮಿತಿ ₹ 1.50 ಲಕ್ಷ ಹೊರತುಪಡಿಸಿ, ಸೆಕ್ಷನ್‌ 80 ಸಿಸಿಡಿ (1ಬಿ) ಆಧಾರದ ಮೇಲೆ ಪ್ರತ್ಯೇಕವಾಗಿ ₹ 50,000 ಎನ್‌.ಪಿ.ಎಸ್‌.ಯಲ್ಲಿ ಹಣ ಹೂಡಿ. ಒಟ್ಟಿನಲ್ಲಿ ಗರಿಷ್ಠ ₹ 2 ಲಕ್ಷ (80 ಸಿ ಹಾಗೂ 80 ಸಿಸಿಡಿ (1 ಬಿ) ಉಳಿತಾಯ ಮಾಡಿ ತೆರಿಗೆ ಉಳಿಸಬಹುದು. ನಿಮ್ಮ ಇತರೆ ಉಳಿತಾಯದ ವಿಚಾರ ತಿಳಿಸಿಲ್ಲ. ₹ 2 ಲಕ್ಷ ಹೀಗೆ ಉಳಿತಾಯ ಮಾಡಬಹುದು. ಹಣ ಉಳಿಸುತ್ತಾ ಬಂದು ಮುಂದೆ 30X40 ಅಳತೆಯ ನಿವೇಶನ ಕೊಂಡುಕೊಳ್ಳಿ.

-ರಾಮಮೋಹನ್‌, ಬೆಳಗಾವಿ
*ಖಾಸಗಿ ಕಂಪೆನಿಯಲ್ಲಿ ಕೆಲಸ. ಸಂಬಳ
₹ 20,000. ಅವಿವಾಹಿತ. ಇನ್ನು 3 ವರ್ಷ ಗಳಲ್ಲಿ ಮದುವೆಯಾಗಬೇಕು. ಇದುವರೆಗೆ ಯಾವ ಉಳಿತಾಯವನ್ನೂ  ಮಾಡಿಲ್ಲ. ಸರಿಯಾದ ದಾರಿ ತೋರಿಸಿ.
ಉತ್ತರ:
ನಿಮ್ಮ ಮದುವೆಗೆ ಇನ್ನೂ 3 ವರ್ಷಗಳಿರುವುದರಿಂದ ಅಲ್ಲಿತನಕ ₹ 3,000 ಆರ್‌.ಡಿ. ಒಂದು ವರ್ಷದ ಅವಧಿಗೂ, ಇನ್ನೊಂದು ಆರ್‌.ಡಿ.  ₹ 7000 ದಿಂದ ಮೂರು ವರ್ಷಗಳಿಗೂ, ತಕ್ಷಣ ಪ್ರಾರಂಭಿಸಿ. ಪ್ರಥಮ ಮಾಡುವ ₹ 3,000 ಆರ್‌.ಡಿ.ಯಿಂದ ವರ್ಷಾಂತ್ಯದಲ್ಲಿ ಬಂಗಾರದ ನಾಣ್ಯ ಕೊಂಡುಕೊಳ್ಳಿ. ಈ ಪ್ರಕ್ರಿಯೆ ಮದುವೆ ತನಕ ಹಾಗೂ ಮುಂದೆಯೂ ನಿಲ್ಲಿಸದೆ ಮಾಡುತ್ತಾ ಬನ್ನಿ. ₹ 7,000 ಆರ್.ಡಿ. 3 ವರ್ಷ ಮುಗಿಯುತ್ತಿದ್ದಂತೆ ₹ 2.86 ಲಕ್ಷ  ನಿಮ್ಮ ಕೈ ಸೇರುತ್ತದೆ. ಈ ಹಣ ಮದುವೆಗೆ ಉಪಯೋಗಿಸಿ. ಮದುವೆ ನಂತರವೂ, ಈ ಉಳಿತಾಯ ಮುಂದುವರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT