ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯವೇ ಸಂಭ್ರಮದಲ್ಲಿರುವಾಗ ಪ್ರತಿಭಟಿಸಬೇಕೆ?

ಮಹಾರಾಷ್ಟ್ರಏಕೀಕರಣ ಸಮಿತಿ ಮುಖಂಡರಿಗೆ ಜಿಲ್ಲಾಧಿಕಾರಿ ಜಯರಾಮ್‌ ಬುದ್ಧಿಮಾತು
Last Updated 4 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಬೆಳಗಾವಿ: ಕನ್ನಡ ರಾಜ್ಯೋತ್ಸವ ಬಹಿಷ್ಕರಿಸಿ ಕರಾಳ ದಿನಾಚರಣೆ ಮೆರವಣಿಗೆ ಆಯೋಜಿಸಿದ್ದ ಮಹಾರಾಷ್ಟ್ರಏಕೀಕರಣ ಸಮಿತಿ (ಎಂಇಎಸ್‌) ಮುಖಂಡರಿಗೆ ಜಿಲ್ಲಾಧಿಕಾರಿ ಎನ್‌. ಜಯರಾಮ್‌ ಶುಕ್ರವಾರ ಇಲ್ಲಿ ಬುದ್ಧಿಮಾತು ಹೇಳಿದರು.
 
‘ರಾಜ್ಯದಲ್ಲಿರುವ ಎಲ್ಲರೂ ಇತರರ ಭಾವನೆ ಕೆರಳಿಸದಂತೆ, ಅವರಿಗೆ ನೋವಾಗದಂತೆ ನಡೆದುಕೊಳ್ಳಬೇಕು. ಗಡಿ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಿರುವಾಗ ನೀವು ಜನರನ್ನು ಪ್ರಚೋದಿಸುವುದು ಸರಿಯೇ? ಎಲ್ಲರೂ ಆಚರಿಸಬೇಕಾದ ಉತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳಬೇಕು. ಪಕ್ಕದ ಮನೆಯವರು ಸಂಭ್ರಮದಲ್ಲಿರುವಾಗ ಇನ್ನೊಂದು ಮನೆಯವರು ಪ್ರತಿಭಟಿಸುವುದು ಸರಿಯಲ್ಲ. ಬೇಡಿಕೆಗಳಿದ್ದರೆ ಶಾಂತಿಯುತವಾಗಿ ಕೇಳುವುದಕ್ಕೆ ಎಲ್ಲರಿಗೂ ಹಕ್ಕಿದೆ.
 
ಮೆರವಣಿಗೆಯನ್ನು ರಾಜ್ಯೋತ್ಸವವ ದಿನದಂದೇ ಏಕೆ ಮಾಡಬೇಕು? ಬೇರೆ ದಿನ ಮಾಡಬಾರದೇಕೆ’ ಎಂದು ತಮ್ಮನ್ನು ಭೇಟಿ ಮಾಡಿದ ಮುಖಂಡರಿಗೆ ಕೇಳಿದರು.
 
ಇದಕ್ಕೆ ಪ್ರತಿಕ್ರಿಯಿಸಿದ ಎಂಇಎಸ್‌ ಮುಖಂಡರಾದ ಮನೋಹರ ಕಿಣೇಕರ ಹಾಗೂ ದೀಪಕ ದಳವಿ, ‘ಕರಾಳ ದಿನಾಚರಣೆಯನ್ನು ಬಹಳ ವರ್ಷಗಳಿಂದಲೂ ರಾಜ್ಯೋತ್ಸವ ದಿನದಂದೇ ಮಾಡುತ್ತಿದ್ದು, ನಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದು ಸಮರ್ಥಿಸಿಕೊಂಡರು.
 
ಬಂಧನಕ್ಕೆ ವಿರೋಧ: ‘ಮುಖಂಡರಾದ ನಾವು ಕರೆ ನೀಡಿದ ಕಾರಣಕ್ಕೆ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಆದರೆ ಪೊಲೀಸರು ಅಮಾಯಕರನ್ನು ಹುಡುಕಿ, ಹುಡುಕಿ ರಾತ್ರೋರಾತ್ರಿ ಬಂಧಿಸಿ ದೌರ್ಜನ್ಯ ಎಸಗುತ್ತಿದ್ದಾರೆ. ಬಂಧಿಸುವುದಿದ್ದರೆ ಮುಖಂಡರನ್ನೇ ಬಂಧಿಸಿ. ಎಲ್ಲರೂ ಒಂದೆಡೆ ಬಂದು ಸೇರುತ್ತೇವೆ’ ಎಂದು ಹೇಳಿದರು.
 
‘ಯಾವುದೇ ಕಾರಣಕ್ಕೂ ಅಮಾಯಕರನ್ನು ಬಂಧಿಸದಂತೆ ಪೊಲೀಸರಿಗೆ ಸೂಚಿಸಬೇಕು’ ಎಂದು ಅವರು ಮನವಿ ಮಾಡಿದರು.
 
ಎಲ್ಲರನ್ನೂ ರಕ್ಷಿಸಲು ಕ್ರಮ: ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಮುಗ್ಧರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಇದೇ ವೇಳೆ, ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವುದೂ ನಿಶ್ಚಿತ. ಸಮಾಜದಲ್ಲಿ ಶಾಂತಿ ಭಂಗ ಮಾಡುವವರನ್ನು, ಕಾನೂನು– ಸುವ್ಯವಸ್ಥೆ ಹಾಳುಗೆಡುವುವರ ವಿರುದ್ಧ ಪೊಲೀಸರು ಕ್ರಮ ಜರುಗಿಸುತ್ತಾರೆ’ ಎಂದರು. 
 
ಇದಕ್ಕೂ ಮುನ್ನ ನಗರ ಪೊಲೀಸ್‌ ಕಮಿಷನರ್‌ ಟಿ.ಜಿ. ಕೃಷ್ಣಭಟ್‌ ಅವರನ್ನು ಭೇಟಿಯಾದ ಈ ಮುಖಂಡರು, ‘ಅಮಾಯಕರನ್ನು ಬಂಧಿಸಬಾರದು’ ಎಂದು ಮನವಿ ಮಾಡಿದರು. 
 
***
ಚುನಾವಣಾ ನಿಯಮ ತಿದ್ದುಪಡಿಗೆ ಡಿ.ಸಿ ಮನವಿ
ಬೆಳಗಾವಿ: ಜಿಲ್ಲೆಯಲ್ಲಿ ಪದೇಪದೇ ಭಾಷಾ ವೈಷಮ್ಯ ಹುಟ್ಟುಹಾಕುವ ಹಾಗೂ ಸಮಾಜದ ಸ್ವಾಸ್ಥ್ಯ ಕದಡುವ ರೀತಿಯಲ್ಲಿ ವರ್ತಿಸುತ್ತಿರುವ ಜನಪ್ರತಿನಿಧಿಗಳನ್ನು ನಿಯಂತ್ರಿಸಲು ಚುನಾವಣಾ ನಿಯಮಾವಳಿಗೆ ತಿದ್ದುಪಡಿ ತರಬೇಕು ಎಂದು ಕೋರಿ ಜಿಲ್ಲಾಧಿಕಾರಿ ಎನ್‌. ಜಯರಾಮ್‌ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 
 
‘ರಾಜ್ಯವಿರೋಧಿ ಸಭೆ, ಸಮಾರಂಭ ಅಥವಾ ಮೆರವಣಿಗೆಯಲ್ಲಿ ಭಾಗವಹಿಸುವುದಿಲ್ಲ. ಯಾವುದೇ ಪ್ರಚೋದನಾಕಾರಿ ಹೇಳಿಕೆ ನೀಡುವುದಿಲ್ಲ. ಒಂದು ವೇಳೆ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡರೆ ನನ್ನ ಸದಸ್ಯತ್ವ ತಕ್ಷಣವೇ ಅನರ್ಹಗೊಳ್ಳಲಿ’ ಎಂದು ಪ್ರತಿಯೊಬ್ಬ ಅಭ್ಯರ್ಥಿಯಿಂದ ಮುಚ್ಚಳಿಕೆ (ಅಫಿಡವಿಟ್‌) ಪಡೆಯುವ ನಿಯಮವನ್ನು ಚುನಾವಣಾ ನಿಯಮಾವಳಿಗಳಲ್ಲಿ ಸೇರಿಸಬೇಕು’ ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.
 
ರಾಜ್ಯೋತ್ಸವದಂದು ನಗರದಲ್ಲಿ ಎಂಇಎಸ್‌ ಆಯೋಜಿಸಿದ್ದ ಕರಾಳ ದಿನಾಚರಣೆಯ ಮೆರವಣಿಗೆಯಲ್ಲಿ ಶಾಸಕ ಸಂಭಾಜಿ ಪಾಟೀಲ, ಪಾಲಿಕೆ ಮೇಯರ್‌, ಉಪಮೇಯರ್‌ ಭಾಗವಹಿಸಿದ್ದರು. ಈ ಸಂದರ್ಭ ರಾಜ್ಯದ ವಿರುದ್ಧ ಘೋಷಣೆ ಕೂಗಲಾಗಿತ್ತಲ್ಲದೇ ಕನ್ನಡ ಫಲಕಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು.
 
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬುಧವಾರ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಪ್ರತ್ಯೇಕ ಪತ್ರ ಬರೆದಿದ್ದಾರೆ. ಪತ್ರಗಳ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
 
***
ಷೋಕಾಸ್‌ ನೋಟಿಸ್‌ ಜಾರಿ
ಬೆಂಗಳೂರು: ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್‌ ಸೀಡ್ ಮಾಡಲು ಮೊದಲ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ, ಮೇಯರ್‌ ಹಾಗೂ ಉಪಮೇಯರ್‌ಗೆ ಶುಕ್ರವಾರ ಷೋಕಾಸ್‌ ನೋಟಿಸ್‌ ಜಾರಿ ಮಾಡಿದೆ.
 
ಬೆಳಗಾವಿ ಜಿಲ್ಲಾಧಿಕಾರಿ  ವರದಿ ಪರಿಶೀಲಿಸಿದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ವಿ. ಪೊನ್ನುರಾಜ್‌ ಅವರು ಸರ್ಕಾರದ ಜತೆ ಚರ್ಚಿಸಿ, ಷೋಕಾಸ್‌ ನೋಟಿಸ್‌ ಜಾರಿ ಮಾಡಿದರು. ನೋಟಿಸ್‌ಗೆ ಪಾಲಿಕೆಯ ಮೇಯರ್‌ ನೀಡುವ ಉತ್ತರ ನೋಡಿಕೊಂಡು ಸೂಪರ್‌ ಸೀಡ್‌ ಮಾಡುವ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ. 
 
**
‘ಮಹಾಮೇಳಾವ’ಗೆ ಎಂಇಎಸ್‌ ಸಿದ್ಧತೆ
ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಇದೇ 21ರಿಂದ ನಡೆಯಲಿರುವ ವಿಧಾನಮಂಡಲ ಅಧಿವೇಶನಕ್ಕೆ ಪ್ರತಿಯಾಗಿ, ಮಹಾರಾಷ್ಟ್ರ ಏಕೀಕರಣ ಸಮಿತಿಯು (ಎಂಇಎಸ್‌) ಅಧಿವೇಶನದ ಮೊದಲ ದಿನವೇ ‘ಮಹಾಮೇಳಾವ’ ನಡೆಸಲು ಸಿದ್ಧತೆ ನಡೆಸಿದೆ.
 
‘ಗಡಿಭಾಗದ ಬೆಳಗಾವಿ ಸೇರಿದಂತೆ ಮರಾಠಿ ಭಾಷಿಕರು ಹೆಚ್ಚು ಇರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಸರ್ಕಾರದ ಗಮನ ಸೆಳೆಯಲು ಹಾಗೂ ಇಲ್ಲಿ ವಿಧಾನಮಂಡಲದ ಅಧಿವೇಶನ ನಡೆಸುವುದನ್ನು ವಿರೋಧಿಸಿ ಮಹಾಮೇಳಾವ ನಡೆಸುತ್ತೇವೆ’ ಎಂದು ಮಾಜಿ ಶಾಸಕ, ಸಂಘಟನೆಯ ಕೇಂದ್ರ ಘಟಕದ ಮುಖಂಡ ಮನೋಹರ ಕಿಣೇಕರ ಹೇಳಿದರು. 
 
‘ಸಿದ್ಧತೆ ಬಗ್ಗೆ ಚರ್ಚಿಸಲು ಎಂಇಎಸ್‌ನ ಎಲ್ಲ ಘಟಕಗಳ ಸದಸ್ಯರ ಸಭೆಯನ್ನು ಸದ್ಯದಲ್ಲಿಯೇ ಕರೆಯಲಾಗುವುದು. ನಗರದ ಸಂಭಾಜಿ ಉದ್ಯಾನ, ಸರ್ದಾರ್‌ ಮೈದಾನ ಅಥವಾ ಟಿಳಕವಾಡಿಯ ವ್ಯಾಕ್ಸಿನ್‌ ಡಿಪೊದಲ್ಲಿ ಕಾರ್ಯಕ್ರಮ ನಡೆಸಲು ಸ್ಥಳಾವಕಾಶ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ಕಳೆದ ವರ್ಷ, ಮಹಾಮೇಳವಕ್ಕೆ ವ್ಯಾಕ್ಸಿನ್‌ ಡಿಪೊದಲ್ಲಿ ಅವಕಾಶ ನೀಡಲಾಗಿತ್ತು’ ಎಂದು ಅವರು ತಿಳಿಸಿದರು.
 
ಸಮ್ಮೇಳನದಲ್ಲಿ ಭಾಗವಹಿಸುವಂತೆ ಮಹಾರಾಷ್ಟ್ರದ ಎಲ್ಲ ಪ್ರಮುಖ ರಾಜಕೀಯ ಮುಖಂಡರಿಗೆ ಆಹ್ವಾನ ನೀಡಲಾಗುವುದು ಎಂದು ಹೇಳಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT