ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗಳೆಲ್ಲಾ ಹೋಟೆಲ್‌ಗಳಾಗಿ ಚಿಕಿತ್ಸೆಗಳೆಲ್ಲಾ ತಿಂಡಿಗಳಾಗಿ...!

ಆಸ್ಪತ್ರೆಗಳ ‘ಜೀವ’ ಉಳಿಸುವುದು ಹೇಗೆ?
Last Updated 5 ನವೆಂಬರ್ 2016, 4:07 IST
ಅಕ್ಷರ ಗಾತ್ರ
‘ನೋಡಿ ಸಾರ್, ನಿಮಗೆ ₹5 ಕ್ಕೂ ಇಡ್ಲಿ ಸಿಗತ್ತೆ. ₹ 50ಕ್ಕೂ ಇಡ್ಲಿ ಸಿಗತ್ತೆ. ₹ 500ಕ್ಕೂ ಇಡ್ಲಿ ಸಿಗತ್ತೆ. ಎಲ್ಲ ಹೋಟೆಲ್‌ಗಳಲ್ಲಿಯೂ ದರಪಟ್ಟಿಯನ್ನು ಪ್ರದರ್ಶನ ಮಾಡಿದ್ದಾರೆ. ನೀವು ನಿಮ್ಮ ಕಿಸೆಯ ಸಾಮರ್ಥ್ಯವನ್ನು ನೋಡಿಕೊಂಡು ನಿಮಗೆ ಬೇಕಾದ ಹೋಟೆಲ್‌ಗೆ ಹೋಗಬಹುದು. ಇದರಲ್ಲಿ ಯಾರ ತಕರಾರೂ ಇಲ್ಲ’.
 
ಖಾಸಗಿ ಆಸ್ಪತ್ರೆಗಳು ಬೇಕಾಬಿಟ್ಟಿ ದರ ವಸೂಲಿ ಮಾಡುತ್ತವೆ ಎಂಬ ಆರೋಪಕ್ಕೆ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ಪ್ರತ್ಯುತ್ತರ ಇದು. 
ಆಸ್ಪತ್ರೆಯನ್ನು ಉದ್ಯಮ ಎಂದು ಘೋಷಿಸಲಾಗಿದೆ. ಯಾವುದೇ ಖಾಸಗಿ ಆಸ್ಪತ್ರೆಗೆ ಉಚಿತ ನೀರು, ವಿದ್ಯುತ್ ನೀಡುವುದಿಲ್ಲ. ಎಲ್ಲ ವಾಣಿಜ್ಯ ದರ. ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೂ ಸರ್ಕಾರದಿಂದ ಯಾವುದೇ ಸಹಾಯ ಇಲ್ಲ. ತೆರಿಗೆ ವಿನಾಯಿತಿಯೂ ಇಲ್ಲ.  
 
ಆಸ್ಪತ್ರೆಗಳಲ್ಲಿ ಇರುವ ಆಧುನಿಕ ಯಂತ್ರೋಪಕರಣಗಳಿಗೂ ತೆರಿಗೆ ವಿನಾಯಿತಿ ಇಲ್ಲ. ಕನಿಷ್ಠ ಕೂಲಿ ಮತ್ತು ಕಾರ್ಮಿಕ ಕಾಯ್ದೆ ಇತರ ಎಲ್ಲ ಉದ್ಯಮಗಳಂತೆ ಇದಕ್ಕೂ ಅನ್ವಯವಾಗುತ್ತದೆ. ಹೀಗಿದ್ದ ಮೇಲೆ ಪ್ರತಿ ಸೇವೆಗೂ ಇಂತಿಷ್ಟೇ ಹಣ ಪಡೆಯಿರಿ ಎಂದು ಹೇಳುವುದಕ್ಕೆ ಸರ್ಕಾರಕ್ಕೆ ಹಕ್ಕೂ ಇಲ್ಲ, ನೈತಿಕವಾಗಿ ಅದು ಸರಿಯೂ ಅಲ್ಲ ಎಂದು ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಯವರು ಹೇಳುತ್ತಾರೆ.
 
ಹೌದು, ಖಾಸಗಿ ಆಸ್ಪತ್ರೆಗಳಲ್ಲಿ ಅನಗತ್ಯ ಟೆಸ್ಟ್‌ಗಳನ್ನು ಮಾಡಿಸಲಾಗುತ್ತದೆ. ವಿಮಾ ಕಂಪೆನಿಗಳ ಜೊತೆ ಹೊಂದಾಣಿಕೆ ಇದೆ. ಔಷಧ ಕಂಪೆನಿಗಳ ಜೊತೆಯೂ ಹೊಂದಾಣಿಕೆ ಇದೆ. ಆಸ್ಪತ್ರೆಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಔಷಧ ಪೂರೈಸುವ ಕಂಪೆನಿಗಳು ಔಷಧ ಅಂಗಡಿಗಳಲ್ಲಿ ಗ್ರಾಹಕರಿಂದ ಹೆಚ್ಚು ದರ ಪಡೆಯುತ್ತವೆ.
 
ಒಂದು ಜೀವ ರಕ್ಷಕ ಔಷಧಕ್ಕೆ ಅಂಗಡಿಯಲ್ಲಿ ₹ 7,000 ಇದ್ದರೆ ಅದನ್ನು ಔಷಧ ಕಂಪೆನಿಗಳು ಆಸ್ಪತ್ರೆಗೆ ಕೇವಲ ₹ 3,000ಕ್ಕೆ ಒದಗಿಸುತ್ತವೆ. ಔಷಧ ಅಂಗಡಿಗಳು ಮತ್ತು ವೈದ್ಯರ ನಡುವೆ ಕೂಡ ಅಕ್ರಮ ವಹಿವಾಟು ಇದೆ. ಪ್ರಯೋಗಾಲಯಗಳು ಮತ್ತು ವೈದ್ಯರ ನಡುವೆ ಸಹ ಹೊಂದಾಣಿಕೆ ಇದೆ. ವೈದ್ಯರಿಗೆ ಔಷಧ ಕಂಪೆನಿಗಳಿಂದ, ಪ್ರಯೋಗಾಲಯಗಳಿಂದ ನಿರ್ದಿಷ್ಟ ಹಣ ಸಿಗುತ್ತದೆ.
 
ಇವೆಲ್ಲವೂ ಹೌದು. ಆದರೆ ಇವನ್ನೆಲ್ಲಾ ತಪ್ಪಿಸಲು ಕೇವಲ ಕಾನೂನಿನಿಂದ ಸಾಧ್ಯವಿಲ್ಲ.
 
‘ನೀವು ಬೇಕಾದಷ್ಟು ಕಠಿಣ ಕಾನೂನು ಮಾಡಬಹುದು. ಆದರೆ ಅದನ್ನು ಅನುಷ್ಠಾನಕ್ಕೆ ತರುವವರು ಯಾರು? ಎಲ್ಲ ಆಸ್ಪತ್ರೆಗಳೂ ದರಪಟ್ಟಿಯನ್ನು ಪ್ರದರ್ಶನ ಮಾಡಬೇಕು ಎಂಬ ನಿಯಮ ಕರ್ನಾಟಕ ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆಯಲ್ಲಿಯೇ ಇದೆ. ಆದರೆ ಇದನ್ನು ಎಷ್ಟು ಆಸ್ಪತ್ರೆಗಳು ಪಾಲಿಸುತ್ತವೆ? ಇದನ್ನು ಪರಿಶೀಲಿಸುವ ಕೆಲಸವನ್ನು ಯಾರು ಮಾಡುತ್ತಿದ್ದಾರೆ’ ಎಂದು ಸರಗೂರಿನ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ನ ಡಾ. ಎಂ.ಎ.ಬಾಲಸುಬ್ರಹ್ಮಣ್ಯ ಪ್ರಶ್ನಿಸುತ್ತಾರೆ.
 
ಆಸ್ಪತ್ರೆಗಳು ಮಾತ್ರ ಬಂಡವಾಳ ಹೂಡಿ ಲಾಭ ತೆಗೆಯುವ ಉದ್ಯಮಗಳಾಗಿಲ್ಲ. ವೈದ್ಯಕೀಯ ಕಾಲೇಜುಗಳೂ ಹಾಗೆಯೇ ಆಗಿವೆ. ₹ 3 ಕೋಟಿ ಕೊಟ್ಟರೆ ಎಂಬಿಬಿಎಸ್ ಮತ್ತು ಎಂ.ಎಸ್ ಪದವಿಯನ್ನು ಪಡೆದು ಹೊರಬರಬಹುದು. ₹ 3 ಕೋಟಿ ನೀಡಿದರೆ ಯಾರು ಬೇಕಾದರೂ ಆರ್ಥೋಪೆಡಿಕ್ ಸರ್ಜನ್ ಆಗಬಹುದು ಎನ್ನುವ ಪರಿಸ್ಥಿತಿ ಇದೆ.
 
ಹೀಗೆ ₹ 3 ಕೋಟಿ ಕೊಟ್ಟು ವೈದ್ಯನಾದವನು ₹ 30 ಕೋಟಿ ದುಡಿಯುವ ಬಗ್ಗೆ ಆಲೋಚಿಸುತ್ತಾನೆಯೇ ವಿನಾ ರೋಗಿಗಳಿಗೆ ಸೇವೆ ಮಾಡುತ್ತಾನೆ ಎಂದು ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಅವರು ಕೇಳುತ್ತಾರೆ.
 
ಇದೊಂದು ತರಹ ರಿಯಲ್ ಎಸ್ಟೇಟ್ ವ್ಯಾಪಾರದಂತೆಯೇ ಆಗಿದೆ. ದುಬಾರಿ ಶುಲ್ಕದ ಮೇಲೆ ನಿಯಂತ್ರಣ ತರಲು ಹೊರಟರೆ ಕಪ್ಪುಹಣದ ಚಲಾವಣೆ ಹೆಚ್ಚಾಗುತ್ತದೆ. ರಿಯಲ್ ಎಸ್ಟೇಟ್‌ನಲ್ಲಿ ಮಾರ್ಗದರ್ಶಿ ದರ ಒಂದು ಇರುತ್ತದೆ. ಮಾರುಕಟ್ಟೆ ದರ ಬೇರೆ ಇರುತ್ತದೆ. ಮಾರ್ಗದರ್ಶಿ ದರದಂತೆ ಅಧಿಕೃತ ವ್ಯವಹಾರ ನಡೆದರೆ ಉಳಿದ ವ್ಯವಹಾರ ಮಾರುಕಟ್ಟೆ ದರದಲ್ಲಿ ನಡೆಯುತ್ತದೆ.
 
ಇಲ್ಲಿ ಕಪ್ಪುಹಣದ ಚಲಾವಣೆ ಅನಿವಾರ್ಯ. ಹೀಗಾದರೆ ಕೇವಲ ಕಾರ್ಪೊರೇಟ್ ಆಸ್ಪತ್ರೆಗಳು ಉಳಿಯುತ್ತವೆ. ಮಧ್ಯಮ ದರ್ಜೆಯ ಖಾಸಗಿ ಆಸ್ಪತ್ರೆಗಳು ಬಾಗಿಲು ಮುಚ್ಚಿಕೊಳ್ಳುತ್ತವೆ ಎಂದು ಯಲಹಂಕ ನವಚೇತನ ಆಸ್ಪತ್ರೆಯ ಡಾ. ಗಿರೀಶ್ಚಂದ್ರ ಅಭಿಪ್ರಾಯಪಡುತ್ತಾರೆ. 
 
ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣದಲ್ಲಿ ಇಡಲು ಈಗಾಗಲೇ ಸಾಕಷ್ಟು ಕಾನೂನುಗಳಿವೆ. ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣಾಧಿಕಾರಿಗೆ ಸಾಕಷ್ಟು ಅಧಿಕಾರ ಇದೆ. ಯಾವುದೇ ಆಸ್ಪತ್ರೆಗೆ ಹೋಗಿ ಅವರು ಪರಿಶೀಲನೆ ಮಾಡಬಹುದು. ಆದರೆ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ‘ಮಾಮೂಲು’ ಪಡೆದು ಸುಮ್ಮನಾಗುತ್ತಿದ್ದಾರೆ. ಡ್ರಗ್ ಕಂಟ್ರೋಲರ್ ಅವರಿಗೂ ಸಾಕಷ್ಟು ಅಧಿಕಾರ ಇದೆ.
 
ಅವರೂ ಔಷಧ ಅಂಗಡಿಗಳ ಅವ್ಯವಹಾರವನ್ನು ತಡೆಯಬಹುದು. ಅವರು ಕೂಡ ‘ಮಾಮೂಲಿ’ಗೆ ಶರಣಾಗಿದ್ದಾರೆ. ಇಡೀ ವ್ಯವಸ್ಥೆಯೇ ಕೊಳೆತು ಹೋಗಿರುವಾಗ ಕೇವಲ ಒಂದು ಕಡೆ ಚಿಕಿತ್ಸೆ ಮಾಡುತ್ತೇನೆ ಎಂದರೆ ರೋಗಿ ಸಾಯುತ್ತಾನೆಯೇ ವಿನಾ ಆರೋಗ್ಯ ಸುಧಾರಿಸುವುದಿಲ್ಲ ಎಂದೂ ಖಾಸಗಿ ಆಸ್ಪತ್ರೆ ವೈದ್ಯರು ಹೇಳುತ್ತಾರೆ.
 
ಸರ್ಕಾರ ತನ್ನ ಲೋಪದೋಷಗಳನ್ನು ಮೊದಲು ಸರಿಪಡಿಸಿಕೊಳ್ಳಬೇಕು. ಸರ್ಕಾರ ಈಗ ಯಶಸ್ವಿನಿ ಮುಂತಾದ ಆರೋಗ್ಯ ಭಾಗ್ಯಗಳನ್ನು ಕರುಣಿಸಿದೆ. ಆದರೆ ಈ ಯೋಜನೆಯಡಿ ಚಿಕಿತ್ಸೆ ನೀಡಿದರೆ ಆ ಹಣ ಆಸ್ಪತ್ರೆಗಳಿಗೆ ಸಂದಾಯವಾಗಲು ಕನಿಷ್ಠ 6 ತಿಂಗಳು ಬೇಕು. ಕೆಲವೊಮ್ಮೆ ಅದಕ್ಕಾಗಿ ಲಂಚವನ್ನೂ ನೀಡಬೇಕು.
 
ಸರ್ಕಾರದ ವಿಮಾ ಯೋಜನೆಗಳ ಹಣವನ್ನು ಒದಗಿಸಿಕೊಡಲು ಏಜೆಂಟ್‌ಗಳೂ ಹುಟ್ಟಿಕೊಂಡಿದ್ದಾರೆ. ಅವರು ಅಧಿಕಾರಿಗಳ ಪಾಲನ್ನು ನೀಡಿ, ತಮ್ಮ ಕಮಿಷನ್ ಇಟ್ಟುಕೊಂಡು ಆಸ್ಪತ್ರೆಗೆ ಹಣ ಕೊಡುತ್ತಾರೆ. ಆಸ್ಪತ್ರೆಗಳು ಇದನ್ನೆಲ್ಲಾ ರೋಗಿಯ ತಲೆಯ ಮೇಲೆ ಹಾಕುವುದು ಅನಿವಾರ್ಯ.
 
‘ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ. ಇಷ್ಟ ಇದ್ದರೆ ನಮ್ಮಲ್ಲಿ ಬನ್ನಿ. ಇಲ್ಲವಾದರೆ ಬೇರೆ ಕಡೆ ಹೋಗಿ ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ. ಸರ್ಕಾರ ಈ ಕ್ಷೇತ್ರವನ್ನು ಉದ್ಯಮ ಎಂದು ಗುರುತಿಸಿದ್ದರೂ ವೈದ್ಯರು ಇದನ್ನು ಸೇವೆ ಎಂದು ಹೃದಯಪೂರ್ವಕವಾಗಿ ಪರಿಗಣಿಸಿದರೆ ಮಾತ್ರ ಕೆಲವು ಬದಲಾವಣೆ ತರಲು ಸಾಧ್ಯ ಎನ್ನುತ್ತಾರೆ ಖ್ಯಾತ ಮಧುಮೇಹ ತಜ್ಞ ಡಾ. ಲಕ್ಷ್ಮಿನಾರಾಯಣ.
 
ಇದೇ ಮಾತನ್ನು ಡಾ. ಎಂ.ಎ.ಬಾಲಸುಬ್ರಹ್ಮಣ್ಯ ಕೂಡ ಬೆಂಬಲಿಸುತ್ತಾರೆ. ಮಹಾನಗರ ಪಾಲಿಕೆ ಮತ್ತು ಇತರ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಗೆ ಬಂದಿರುವ ಸ್ವಯಂ ಆಸ್ತಿ ಘೋಷಣೆ ಪದ್ಧತಿಯಂತೆ ಆಸ್ಪತ್ರೆಗಳಿಗೂ  ಸ್ವಯಂ ಘೋಷಣೆಯ ಅವಕಾಶವನ್ನು ನೀಡಿದರೆ ಒಂದಿಷ್ಟು ಸುಧಾರಣೆ ಬರಬಹುದು.
 
ಯಾವುದೇ ಮನುಷ್ಯ ತಾನು ಒಳ್ಳೆಯವನಾಗಬೇಕು ಎಂದು ಬಯಸುತ್ತಾನೆಯೇ ವಿನಾ ಕೆಟ್ಟವನಾಗಬೇಕು ಎಂದು ಬಯಸುವುದಿಲ್ಲ. ಮೋಸ ಮಾಡಿ ನೆಮ್ಮದಿಯಿಂದ ಮಲಗಲು ಸಾಧ್ಯವಿಲ್ಲ. ಮೋಸ ಮಾಡದಂತಹ ವಾತಾವರಣ ನಿರ್ಮಿಸಬೇಕು ಎಂದರೆ ಸರ್ಕಾರ ಪಾರದರ್ಶಕವಾಗಿರಬೇಕು, ಎಲ್ಲರೊಡನೆ ಚರ್ಚೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಬಾಲಸುಬ್ರಹ್ಮಣ್ಯ ಹೇಳುತ್ತಾರೆ.
 
ಅಡುಗೆ ಅನಿಲದ ಸಬ್ಸಿಡಿಯನ್ನು ಆಧಾರ್‌ ಸಂಖ್ಯೆ ಬಳಸಿ ಎಲ್ಲ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಿದ ಹಾಗೆ ಯಶಸ್ವಿನಿ ಮುಂತಾದ ಯೋಜನೆಗಳ ಹಣವನ್ನೂ ನೇರವಾಗಿ ಆಸ್ಪತ್ರೆಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವ ಪದ್ಧತಿಯನ್ನು ತಕ್ಷಣಕ್ಕೆ ಜಾರಿಗೆ ತಂದರೆ ರೋಗಿಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ.

ಸರ್ಕಾರಿ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಬೇಕು. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಸಮಾನ ಆರೋಗ್ಯ ಸೇವೆ ಸಿಗುವಂತಾಗಬೇಕು. ಅಂದಾಗ ಮಾತ್ರ ದುಬಾರಿ ಶುಲ್ಕ ಹಾಗೂ ಆಸ್ಪತ್ರೆಗಳಲ್ಲಿ ನಡೆಯುವ ಅವ್ಯವಹಾರಗಳನ್ನು ತಡೆಯಲು ಸಾಧ್ಯ ಎಂದೂ ಅವರು ಹೇಳುತ್ತಾರೆ.
 
ಇಂಗ್ಲೆಂಡಿನಲ್ಲಿ ರಾಷ್ಟ್ರೀಯ ಆರೋಗ್ಯ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಯಾವುದೇ ಉದ್ಯೋಗಿಯ (ಸರ್ಕಾರಿ ಅಥವಾ ಖಾಸಗಿ)  ವೇತನದಲ್ಲಿ ಈ ಯೋಜನೆಗಾಗಿ ಹಣವನ್ನು ಕಡಿತ ಮಾಡಲಾಗುತ್ತದೆ. ಆಸ್ಪತ್ರೆಗೆ ಆತ ಯಾವುದೇ ಕಾರಣಕ್ಕೆ ಹೋದರೂ ಆತನಿಗೆ ಉಚಿತ ಸೇವೆ ಲಭ್ಯವಾಗುತ್ತದೆ. ಇಂತಹ ಯೋಜನೆ ಇಲ್ಲಿಯೂ ಜಾರಿಗೆ ಬರಬೇಕು ಎಂದು ಇಂಗ್ಲೆಂಡ್‌ನಲ್ಲಿ 20 ವರ್ಷ ಕೆಲಸ ಮಾಡಿದ ಡಾ. ಗಿರೀಶ್ಚಂದ್ರ ಅಭಿಪ್ರಾಯಪಡುತ್ತಾರೆ.
 
ಖಾಸಗಿ ಆಸ್ಪತ್ರೆಗಳು ಜನರನ್ನು ಶೋಷಿಸುತ್ತಿವೆ ಎಂಬ ಬಗ್ಗೆ ಯಾರಿಗೂ ಅನುಮಾನವಿಲ್ಲ. ಅದನ್ನು ತಡೆಯಲು ರಾಜ್ಯ ಸರ್ಕಾರ ಮುಂದಾಗಿರುವುದನ್ನೂ ಬಹುತೇಕ ಎಲ್ಲ ವೈದ್ಯರು ಸ್ವಾಗತಿಸುತ್ತಾರೆ.  ಆದರೆ ಕಾನೂನು ಎಂಬ ಬಂದೂಕಿನಿಂದ ಅಥವಾ ಕೈಯಲ್ಲಿ ಕತ್ತಿ ಹಿಡಿದುಕೊಂಡು ಯುದ್ಧ ಸಾರಿದರೆ ಉಪಯೋಗಕ್ಕಿಂತ ಅವಘಡಗಳೇ ಹೆಚ್ಚಾಗಬಹುದು ಎಂಬ ಶಂಕೆಯನ್ನೂ ಅವರು ವ್ಯಕ್ತಪಡಿಸುತ್ತಾರೆ.
 
‘ನಮಗೆ ಸಮಾಜದಲ್ಲಿ ಕೆಟ್ಟವರಾಗಬೇಕು ಎಂದೇನೂ ಇಲ್ಲ. ಆದರೆ ಒಳ್ಳೆಯವರಾಗುವ ಮಾರ್ಗ ಕಾಣುತ್ತಿಲ್ಲ’ ಎನ್ನುತ್ತಾರೆ ಅವರು. ಇದಕ್ಕೆ ಉತ್ತರ ಹುಡುಕುವ ಕೆಲಸವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT