ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಂತ್ರಜ್ಞಾನ ಬಳಕೆಯಿಂದ ಭ್ರಷ್ಟಾಚಾರ ನಿರ್ಮೂಲನೆ’

‘ಭ್ರಷ್ಟಾಚಾರ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾಶಂಕರ್‌ ಹೇಳಿಕೆ
Last Updated 4 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಬೆಂಗಳೂರು: ‘ಆಡಳಿತವನ್ನು ಹೆಚ್ಚು ತಂತ್ರಜ್ಞಾನ ಮುಖಿಯನ್ನಾಗಿಸುವ ಮೂಲಕ ನಮ್ಮ ದೇಶದ ಪಿಡುಗಾಗಿರುವ ಭ್ರಷ್ಟಾಚಾರ ತೊಲಗಿಸಲು ಸಾಧ್ಯ’ ಎಂದು ‘ಇಂಡಿಯನ್‌ ಎಲೆಕ್ಟ್ರಾನಿಕ್ಸ್‌ ಅಂಡ್‌ ಸೆಮಿಕಂಡಕ್ಟರ್‌ ಅಸೋಸಿಯೇಷನ್’ ಅಧ್ಯಕ್ಷ ಎಂ.ಎನ್. ವಿದ್ಯಾಶಂಕರ್‌ ಅಭಿಪ್ರಾಯಪಟ್ಟರು. 
 
ರಾಮನ್‌ ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಭ್ರಷ್ಟಾಚಾರ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಪ್ರಮುಖ ಆದಾಯ ಮೂಲಗಳೆಂದರೆ ಆಸ್ತಿ ತೆರಿಗೆ ಮತ್ತು ವಾಹನ ನಿಲ್ದಾಣ ಶುಲ್ಕ. ನಗರದಲ್ಲಿ ಕೇವಲ 8 ಲಕ್ಷ ಜನರು ಮಾತ್ರ ಆಸ್ತಿ ತೆರಿಗೆ ಪಾವತಿಸುತ್ತಿದ್ದಾರೆ.
 
ತೆರಿಗೆ ಪಾವತಿ ಮಾಡದವರನ್ನು ಕಂಡುಹಿಡಿಯುವುದು ಬಿಬಿಎಂಪಿಗೆ ಕಷ್ಟವೇನಲ್ಲ. ನಗರದಲ್ಲಿ 32 ಲಕ್ಷ ಜನರು ವಿದ್ಯುತ್‌ ಸಂಪರ್ಕ ಪಡೆದುಕೊಂಡಿದ್ದಾರೆ. ಇದನ್ನು ಪರಿಶೀಲಿಸಿದರೆ ತೆರಿಗೆ ಪಾವತಿಸದವರ ಪಟ್ಟಿ ಸಿಗುತ್ತದೆ. ಆದರೆ ಇದನ್ನು ಮಾಡಲು ರಾಜಕೀಯ ಹಿತಾಸಕ್ತಿ ಅಡ್ಡಿಯಾಗುತ್ತದೆ’ ಎಂದು ಹೇಳಿದರು. 
 
‘ನರೇಗಾ ಯೋಜನೆ ಅಡಿಯಲ್ಲಿ ರಾಜ್ಯಕ್ಕೆ ₹900 ಕೋಟಿಯಷ್ಟು ಅನುದಾನ ನೀಡಲಾಗುತ್ತಿದೆ. ಇದರ ಬದಲು ಕಂಪೆನಿ ಪ್ರಾರಂಭಿಸಲು ಬಂಡವಾಳ ಹೂಡಿದರೆ ಅಲ್ಲಿನ ಜನರಿಗೆ ಕೆಲಸದ ಭದ್ರತೆಯೂ ಆಗುತ್ತದೆ ಎಂದು ಯೋಜನಾ ಆಯೋಗಕ್ಕೆ ಸಲಹೆ ನೀಡಿದ್ದೆ. ಇದರಿಂದ ಸಂಸದ, ಸಚಿವ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಹೀಗೆ ಎಲ್ಲರಿಗೂ ಹಣ ಸಂದಾಯ ಸ್ಥಗಿತಗೊಳ್ಳುವುದರಿಂದ ನನ್ನ ಸಲಹೆ ಹಾಗೆಯೇ ಉಳಿಯಿತು’ ಎಂದರು.
 
‘ಎರಡು ವರ್ಷ ನಾನು ಮುಖ್ಯ ಚುನಾವಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದೇನೆ. ಕ್ರಿಮಿನಲ್‌ ಹಿನ್ನೆಲೆಯ ಅಭ್ಯರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆಯೇ ವಿನಃ ಕಡಿಮೆಯಾಗಿಲ್ಲ. ಆದರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಕಾನೂನು ಹೇಳುತ್ತದೆ. ಆದರೆ ಜೈಲಿನಿಂದಲೇ ಸ್ಪರ್ಧಿಸಿ ಅಧಿಕ ಮತದಿಂದ ಗೆಲುವು ಸಾಧಿಸಿರುವ ಉದಾಹರಣೆಗಳು ನಮ್ಮ ಮುಂದಿವೆ’ ಎಂದು ತಿಳಿಸಿದರು.
 
‘ ನಮ್ಮ ನಗರದಲ್ಲೇ ಶೇ 45 ಕುಡಿಯುವ ನೀರು ಸೋರಿಕೆಯಾಗುತ್ತದೆ. ಸಿಂಗಪುರದಲ್ಲಿ ಶೇ 7ರಷ್ಟು, ಟೊಕಿಯೊದಲ್ಲಿ ಶೇ 5ರಷ್ಟು ಮಾತ್ರ ನೀರು ಸೋರಿಕೆಯಾಗುತ್ತಿದೆ. ಹೀಗೆ ಎಲ್ಲಾ ಹಂತದಲ್ಲಿ ಆಗುತ್ತಿರುವ ಭ್ರಷ್ಟಾಚಾರ ಒಬ್ಬರಿಂದ ತಡೆಯಲು ಸಾಧ್ಯವಿಲ್ಲ. ಉಕ್ಕಿನ ಸೇತುವೆಗೆ ನಡೆಸುತ್ತಿರುವ ಸಮೂಹ ಪ್ರತಿಭಟನೆಯೇ ಇದಕ್ಕೆ ಉದಾಹರಣೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT