ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನಕಟ್ಟೇಲಿ ಮೇಡಂ ಕ್ಯೂರಿ

Last Updated 6 ನವೆಂಬರ್ 2016, 3:36 IST
ಅಕ್ಷರ ಗಾತ್ರ

ಟಾಟಾ ಏಸ್‌ನ ಕ್ಲಚ್ ಮೇಲೆ ಕಾಲಿಟ್ಟು, ‘ಹೊರಡೋಣವೇ’ ಎಂದು ಕನ್ನಡದ ಮೇಷ್ಟರು ಕೇಳಿದರು. ಅವರ ದನಿಯಲ್ಲಿ ಆತಂಕವೂ ಬೆರೆತಿತ್ತು. ಸರಕು ಸಾಗಿಸುವ ಆ ವಾಹನದಲ್ಲಿ ಹೆಣ್ಣುಮಕ್ಕಳಿದ್ದರು. ಎಲ್ಲರೂ ಒಂಬತ್ತು, ಹತ್ತನೇ ತರಗತಿಯವರು. ಆ ವಾಹನದ ಮಾಲೀಕ ಅದಕ್ಕೆ ವಿಮೆ ಮಾಡಿಸಿರಲಿಲ್ಲ. ಪರವಾನಗಿ ಇಟ್ಟುಕೊಳ್ಳುವ ಪೈಕಿಯೂ ಅವರಾಗಿರಲಿಲ್ಲ. ಅದಕ್ಕೇ ವಿಧಿಯಿಲ್ಲದೆ ಕನ್ನಡದ ಮೇಷ್ಟರೇ ಆ ಗಾಡಿಯಲ್ಲಿ ರಂಗ ಪರಿಕರಗಳು ಹಾಗೂ ಮಕ್ಕಳನ್ನು ತುಂಬಿಕೊಂಡು ಹೊರಟಿದ್ದರು. ಪಕ್ಕದಲ್ಲಿ ಕುಳಿತಿದ್ದವರು ನಾಟಕದ ಮೇಷ್ಟರು. ಸರಕು ಸಾಗಿಸುವ ಆ ವಾಹನ ನಾಟಕದ ಕನಸುಗಳ ರಥವಾಗಿ ರೂಪಾಂತರ ಹೊಂದಿದಂತಿತ್ತು.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ ಸರ್ಕಾರಿ ಪ್ರೌಢಶಾಲೆಯ ಏಳು ಬಾಲಕಿಯರಿಂದ ‘ಬೆಳಕಿನೊಂದು ಕಿರಣ ಮೇರಿ ಕ್ಯೂರಿ’ ನಾಟಕ ಆಡಿಸಿದ ಅನುಭವದಲ್ಲಿ ಹಲವು ಉಪಕಥೆಗಳಿವೆ. ನಾಟಕದ ಮೇಷ್ಟರು, ಕನ್ನಡದ ಮೇಷ್ಟರಿಗೆ ಅವೆಲ್ಲ ಅನುಭವಗಳಾದರೆ, ಕೇಳುವ ನಮ್ಮಂಥವರಿಗೆ ಅವು ಉಪಕಥೆಗಳಂತೆ ಭಾಸವಾಗುತ್ತವೆ.

ತಾಲ್ಲೂಕು, ಜಿಲ್ಲೆ, ವಿಭಾಗ, ರಾಜ್ಯ – ಹೀಗೆ ‘ಪ್ರತಿಭಾ ಕಾರಂಜಿ’ಯ ನಾಲ್ಕು ಘಟ್ಟಗಳನ್ನು ದಾಟಿ ದಕ್ಷಿಣ ಭಾರತ ಮಟ್ಟದ ಸ್ಪರ್ಧೆಗೆ ಈ ನಾಟಕ ತಂಡ ಆಯ್ಕೆಯಾಗಿದೆ. ಅರೆ ಮಲೆನಾಡಿನ ಶಾಲೆಯ ಮಕ್ಕಳನ್ನು ಬದುಕಿನ ಅವರದ್ದೇ ಆದ್ಯತೆ–ಅನಿವಾರ್ಯತೆಗಳಿಂದ ಬಿಡಿಸಿ, ನಾಟಕದ ನಿಕಷಕ್ಕೆ ಒಡ್ಡಿಕೊಳ್ಳುವಂತೆ ಮಾಡುವುದು ತಮಾಷೆಯಲ್ಲ.

ಇದ್ದುದು ವಾರದ ಗಡುವು
‘‘ತಾಲ್ಲೂಕು ಮಟ್ಟದ ‘ಪ್ರತಿಭಾ ಕಾರಂಜಿ’ಗೆ ತಂಡವೊಂದನ್ನು ಕರೆದುಕೊಂಡು ಹೋಗಬಹುದು’’ ಎಂಬ ಒಕ್ಕಣೆಯ ಪತ್ರ ಶಿಕ್ಷಣ ಇಲಾಖೆಯಿಂದ ತಲುಪಿದಾಗ ಮಾವಿನಕಟ್ಟೆ ಶಾಲೆಯ ನಾಟಕದ ಮೇಷ್ಟರಾದ ವೆಂಕಟೇಶ್ವರ ಕೆ. ಅವರ ಬಳಿ ವಾರದ ಗಡುವಷ್ಟೇ ಇದ್ದುದು. ಆಡಿಸಬೇಕಾದದ್ದು ವಿಜ್ಞಾನ ನಾಟಕ. ಎಂಟು ಮಕ್ಕಳಷ್ಟೇ ತಂಡದಲ್ಲಿ ಇರಬೇಕು ಎನ್ನುವುದು ನಿಯಮ.

ನೇಮಿಚಂದ್ರ ಬರೆದಿದ್ದ ಬರಹದಲ್ಲಿ ಮೇರಿ ಕ್ಯೂರಿ ಕುರಿತು ಅದಾಗಲೇ ಓದಿದ್ದ ವೆಂಕಟೇಶ್ವರ, ಎರಡನೇ ಯೋಚನೆಯೇ ಇಲ್ಲದೆ ಅದನ್ನೇ ಆಯ್ಕೆ ಮಾಡಿಕೊಂಡರು.ನೇಮಿಚಂದ್ರ ಅವರಿಗೆ ಫೋನು ಮಾಡಿ ಅನುಮತಿ ಪಡೆದುಕೊಂಡದ್ದೂ ಆಯಿತು. ನೇಮಿಚಂದ್ರ ಅದನ್ನು ದೊಡ್ಡ ನಾಟಕದ ರೂಪದಲ್ಲಿಯೂ ಬರೆದಿದ್ದರು. ಆದರೆ, ನಾಟಕವನ್ನು ಅರ್ಧ ಗಂಟೆಗೆ ಅವಧಿಗೆ ಒಗ್ಗಿಸುವ ಸವಾಲಿತ್ತು. ಅದನ್ನು ವೆಂಕಟೇಶ್ವರ ಅಲ್ಪಾವಧಿಯಲ್ಲೇ ಸಿದ್ಧಪಡಿಸಿದರು.

ಪೋಷಾಕುಗಳು ಬೇಕಲ್ಲ. ನಾಟಕ ಆಡುವುದನ್ನೇ ಗುಮಾನಿಯಿಂದ ನೋಡುವ ಮಕ್ಕಳ ಅಪ್ಪ–ಅಮ್ಮ ಬಟ್ಟೆ ಕೊಡಿಸುವಷ್ಟು ಉದಾರಿಗಳಾಗಲು ಸಾಧ್ಯವಿಲ್ಲ. ಅವರ ಆರ್ಥಿಕತೆಯೂ ಅದಕ್ಕೆ ಅಡ್ಡಗಾಲು. ಹಿಂದಿನ ಹಬ್ಬಕ್ಕೆ ಯಾವ ಹೊಸ ಬಟ್ಟೆ ಕೊಡಿಸಿದ್ದರೋ ಮಕ್ಕಳು ಅವನ್ನೇ ತಂದರು. ಶಿವಮೊಗ್ಗದಲ್ಲಿ ಕಾಸ್ಟ್ಯೂಮ್ ಕಾಶೀನಾಥ್ ಎಂಬ ವಸ್ತ್ರವಿನ್ಯಾಸಕ ಇದ್ದಾರೆ. ಅವರು ಸಿನಿಮಾದವರಿಗೆ ಪೋಷಾಕುಗಳನ್ನು ಮಾಡಿಕೊಡುತ್ತಾರೆ. ಸದಾ ಕೈತುಂಬಾ ಕೆಲಸ. ಅವರಿಗೆ ದುಂಬಾಲು ಬಿದ್ದು, ಇದ್ದ ಬಟ್ಟೆಗಳನ್ನೇ ನಾಟಕದ ಪೋಷಾಕುಗಳನ್ನಾಗಿ ಪರಿವರ್ತಿಸಿಕೊಂಡರು ವೆಂಕಟೇಶ್ವರ.

ಪ್ರತಿ ಸಲವೂ ಹುಡುಗರಿಂದಲೇ ನಾಟಕ ಆಡಿಸುತ್ತಿದ್ದ ಅವರು ಹೆಣ್ಣುಮಕ್ಕಳ ಕೋರಿಕೆಗೆ ಮಣಿದರು. ಈ ಸಲ ಏಳು ಬಾಲಕಿಯರನ್ನು ಆರಿಸಿಕೊಂಡರು. ಒಬ್ಬ ಬಾಲಕ ಸಂಗೀತ ಹಾಗೂ ಬೆಳಕಿನ ನಿರ್ವಹಣೆಗೆ ಸಾಕಾಯಿತು. ಜಯಶ್ರೀ ಜೆ, ತೇಜಸ್ವಿನಿ ಎಸ್, ಆಶಾ ಎಂ, ದೇವಿಕಾ ಆರ್, ಜ್ಯೋತಿಕಾ ಕೆ, ರಕ್ಷಿತಾ ಪಿ, ಸುಪ್ರಿಯಾ ಎಸ್‌.ಜೆ. – ಇವರೇ ಅಭಿನಯಕ್ಕೆ ಆಯ್ಕೆಯಾದ ಬಾಲಕಿಯರು. ಕಳೆದ ಸಲ ಪ್ರತಿಭಾ ಕಾರಂಜಿಯಲ್ಲಿ ಶ್ರೇಷ್ಠ ನಟ ಪ್ರಶಸ್ತಿ ಸಂದಿದ್ದ, ಒಂಬತ್ತನೇ ತರಗತಿಯ ಅಭಿಷೇಕ್ ಸಂಗೀತ–ಬೆಳಕು ನಿರ್ವಹಣೆಗೆ ಮುಂದೆ ಬಂದ. ಬೆಳಕು ನಿರ್ವಹಣೆಗೆ ಸಾಥ್‌ ನೀಡಲು ಸುಪ್ರಿಯಾ ಜೆ. ಒಪ್ಪಿದಳು.

ಆಮೇಲಿನದ್ದು ಬರೀ ತಾಲೀಮು
ವೆಂಕಟೇಶ್ವರ ಮೊದಲು ತಂಡದ ಎಲ್ಲರನ್ನೂ ಕೂರಿಸಿಕೊಂಡು ನೇಮಿಚಂದ್ರ ಬರೆದಿದ್ದ ಮೂಲ ನಾಟಕದ ಅಷ್ಟೂ ಪುಟಗಳನ್ನು ಓದಿದರು. ಪಾತ್ರಗಳ ರೂಹು ಅರ್ಥ ಮಾಡಿಸಲು ಇದು ಅಗತ್ಯವಿತ್ತು. ನೀನಾಸಮ್ ತಿರುಗಾಟದಲ್ಲಿ ಎರಡು ವರ್ಷ ಅನುಭವ ಪಡೆದುಕೊಂಡಿರುವ ವೆಂಕಟೇಶ್ವರ ಅವರ ಓದುವ ಶೈಲಿಯಲ್ಲೇ ರಂಗಭಾಷೆಗೆ ತಕ್ಕಂಥ ಏರಿಳಿತವಿದೆ.

ಮಕ್ಕಳ ಕಿವಿಗೆ ಅವರ ಓದು ಬಿದ್ದರೆ ಕೆಲಸ ಸುಲಭ. ಜಯಶ್ರೀ ಜೆ, ಆಶಾ ಎಂ. ರಂಗಸಜ್ಜಿಕೆಯ ಹೊಣೆಗಾರಿಕೆ ವಹಿಸಿಕೊಂಡರು. ದೇವಿಕಾ ಆರ್. ಪ್ರಸಾಧನದ ಜವಾಬ್ದಾರಿಗೆ ಓಗೊಟ್ಟಳು. ವೇಷಭೂಷಣದ ಉಸ್ತುವಾರಿ ರಕ್ಷಿತಾ ಪಿ. ಹಾಗೂ ತೇಜಸ್ವಿನಿ ಎಸ್‌. ಅವರಿಗೆ ಸಿಕ್ಕಿತು. ಪ್ರೀತಿ ಹಾಗೂ ಕಾಂಚನಾ ರಂಗ ನಿರ್ವಹಣೆಗೆ ಮುಂದಾದರು.

ಮೇರಿ ಕ್ಯೂರಿ ಪಾತ್ರಕ್ಕೆ ಆಯ್ಕೆಯಾದ ಜಯಶ್ರೀ ಹಾಗೂ ಪಿಯರ್ ಕ್ಯೂರಿಗೆ ಸೂಕ್ತ ಎನಿಸಿದ ತೇಜಸ್ವಿನಿ ಇಬ್ಬರೂ ಮೊದಲು ನಿರೂಪಕಿಯರಾಗಿಯೂ ರಂಗದ ಮೇಲೆ ಕಾಣಿಸಿಕೊಳ್ಳಬೇಕಿತ್ತು. ಮೇರಿಯ ತಂದೆ ವ್ಲಾಡಿಸ್ಲಾವಾ ಸ್ಲೊಡೋವ್‌ಸ್ಕಿ ಪಾತ್ರಧಾರಿ ಆಶಾ, ಮೇರಿಯ ತಾಯಿ ಪಾತ್ರಕ್ಕೆ ಆಯ್ಕೆಯಾದ ದೇವಿಕಾ ಅಕ್ಕನ ಪಾತ್ರಕ್ಕೆ ಒಪ್ಪಿದ ಜ್ಯೋತಿಕಾ ಎಲ್ಲರೂ ನಿರೂಪಕಿಯರಾಗಿ ನಾಟಕಕ್ಕೆ ಒಂದು ಪ್ರವೇಶಿಕೆ ಕಲ್ಪಿಸಬೇಕಿತ್ತು.

ಮೇರಿ ಕ್ಯೂರಿ ರೇಡಿಯಂ ಕಂಡುಹಿಡಿದ ಬಗೆಯನ್ನೇ ಹೆಚ್ಚಾಗಿ ತೋರದೆ ಅವರು ಮಾಡಿದ ಮಾನವೀಯ ಕೆಲಸಗಳನ್ನು ಆಧಾರವಾಗಿಟ್ಟುಕೊಂಡು, ಭಾವುಕ ನೆಲೆಗಟ್ಟಿನಲ್ಲಿ ನಾಟಕವನ್ನು ಹೆಣೆದದ್ದು ಫಲಕಾರಿಯಾಯಿತು. ಹೆಚ್ಚು ರಂಗ ಪರಿಕರಗಳನ್ನು ಬಳಸುವ ಆರ್ಥಿಕ ಶಕ್ತಿ ತಂಡಕ್ಕೆ ಇರಲಿಲ್ಲ. ಇದ್ದ ಪರಿಕರಗಳನ್ನೇ ಸಮರ್ಪಕವಾಗಿ ಬಳಸುವ ದಾರಿಗಳನ್ನು ಹುಡುಕಿಕೊಂಡರು.

ಗಾಜಿನ ಜಾಡಿಯೊಳಗೆ ಸಣ್ಣ ಬಲ್ಬನ್ನು ಹಾಕಿ, ಅದು ಬೆಳಕು ಸೂಸುವಂತೆ ಮಾಡುವ ಯೋಚನೆ ವಿದ್ಯಾರ್ಥಿನಿಯೊಬ್ಬಳಿಗೆ ಹೊಳೆಯಿತು. ತಾಲೀಮು ಮಾಡುತ್ತಾ ಮಾಡುತ್ತಾ ‘ಮೇರಿ ಕ್ಯೂರಿ’ ನಾಟಕದ ವಸ್ತು ಗಟ್ಟಿಗೊಳ್ಳುತ್ತಾ ಹೋಯಿತು. ಅಭಿನಯದಲ್ಲಿ ವಿದ್ಯಾರ್ಥಿನಿಯರು ಪಳಗಿದರು. ಚನ್ನಗಿರಿಯಲ್ಲಿ ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಗೆದ್ದಮೇಲೆ ಉತ್ಸಾಹ ಇಮ್ಮಡಿಯಾಯಿತು.

ಜಿಲ್ಲಾಮಟ್ಟದ ಸ್ಪರ್ಧೆ ನಡೆದದ್ದು ದಾವಣಗೆರೆಯಲ್ಲಿ. ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಇರುವ ಸೌಕರ್ಯಗಳು ಹಾಗೂ ಅವರಿಗೆ ಸಿಗುವ ಅತಿ ಎನ್ನಿಸುವಷ್ಟು ಪ್ರೋತ್ಸಾಹ ಕಂಡು ಈ ಮಕ್ಕಳ ಮನಸ್ಸಿನಲ್ಲಿ ಅಳುಕು ಉಂಟಾಗಿದ್ದು ನಿಜ.

‘ಖಾಸಗಿ ಶಾಲೆಗಳ ಮಕ್ಕಳಿಗೆ ಶಕ್ತಿಪೇಯಗಳನ್ನು ಕುಡಿಸುವ ಕೈಗಳಿರುತ್ತವೆ. ಕೆಲವರಂತೂ ಎರಡು ಬಸ್‌ಗಳಲ್ಲಿ ರಂಗ ಪರಿಕರಗಳನ್ನು ಹೊತ್ತು ತರುತ್ತಿದ್ದರು. ಅವರನ್ನು ನೋಡಿ ಸಹಜವಾಗಿಯೇ ನಮ್ಮ ಮಕ್ಕಳ ಉತ್ಸಾಹ ಉಡುಗುತ್ತಿತ್ತು. ಆದರೂ ನಾವು ಚಿಯರ್ ಮಾಡುತ್ತಿದ್ದೆವು. ನಾವು ಉತ್ತಮವಾಗಿ ಪ್ರದರ್ಶನ ನೀಡೋಣ. ಬೇರೆಯವರ ಕುರಿತು ತಲೆ ಕೆಡಿಸಿಕೊಳ್ಳುವುದು ಬೇಡ ಎನ್ನುತ್ತಿದ್ದೆ. ಅದು ಕೊನೆಗೂ ಫಲ ಕೊಟ್ಟಿತು’ ಎಂದು ವೆಂಕಟೇಶ್ವರ ಹೆಮ್ಮೆಯಿಂದ ಹೇಳುತ್ತಾರೆ.

ಕಳೆದ ಆಗಸ್ಟ್‌ 30ರಂದು ಜಿಲ್ಲಾ ಹಂತದಲ್ಲಿ ಗೆದ್ದಮೇಲೆ ಚಿತ್ರದುರ್ಗದಲ್ಲಿ ವಿಭಾಗಮಟ್ಟದ ಸ್ಪರ್ಧೆಗೆ ಕೆಲವು ದಿನಗಳಷ್ಟೇ ಬಾಕಿ ಇದ್ದವು. ಆರು ಜಿಲ್ಲೆಗಳಿಗೆ ಒಂದು ವಿಭಾಗ.ಜಿಲ್ಲಾಮಟ್ಟದಲ್ಲಿ ಏಳು ತಂಡಗಳಲ್ಲಿ ಆಯ್ಕೆಯಾದ ಮಾವಿನಕಟ್ಟೆ ಶಾಲೆಯ ವಿದ್ಯಾರ್ಥಿನಿಯರ ಉತ್ಸಾಹ ಮುಪ್ಪಟ್ಟಾಗಿತ್ತು. ಅಲ್ಲಿಯೂ ತಂಡ ಗೆಲುವಿನ ನಗೆ ಬೀರಿತು.

ಕುಂದಾಪುರದ ‘ರಂಗ ಅಧ್ಯಯನ ಕೇಂದ್ರ’ದಲ್ಲಿ ರಾಜ್ಯಮಟ್ಟದ ಸ್ಪರ್ಧೆ ನಡೆದಾಗ ಸವಾಲು ಬೆಟ್ಟದಷ್ಟಿತ್ತು. ಶಿರಸಿ ಶಾಲೆಯ ಮಕ್ಕಳು ರಂಗ ಚಟುವಟಿಕೆಯಲ್ಲಿ ಮುಂದು.ಆಳ್ವಾಸ್ ಶಾಲೆಯ ಮಕ್ಕಳನ್ನೇ ಸೋಲಿಸಿ ಬಂದಿದ್ದ ಬಂಟ್ವಾಳದ ಮಕ್ಕಳೂ ಕಡಿಮೆ ಇರಲಿಲ್ಲ.

ದಕ್ಷಿಣ ಕನ್ನಡದ ಶಾಲೆಗಳು ಸಾಂಸ್ಕೃತಿಕವಾಗಿ ಸದಾ ಮುಂದು. ಆ ತಂಡಗಳನ್ನೆಲ್ಲಾ ಮಾವಿನಕಟ್ಟೆ ಮಕ್ಕಳು ಹಿಂದಿಕ್ಕಿದರು; ದಾವಣಗೆರೆ ಜಿಲ್ಲೆ ಸಾಂಸ್ಕೃತಿಕವಾಗಿ ಒಣಗಿದಂತಿದೆ ಎಂಬ ಹಣೆಪಟ್ಟಿಯನ್ನೂ ಕಳಚಿದರು. ರಾಜ್ಯಮಟ್ಟದಲ್ಲಿ ಲಭಿಸಿದ್ದು ಮೊದಲ ಸ್ಥಾನ. ಈ ತಂಡ ಹಾಗೂ ಎರಡನೇ ಸ್ಥಾನ ಪಡೆದ ಮಂಗಳೂರು ತಂಡಗಳು ದಕ್ಷಿಣ ಭಾರತ ಮಟ್ಟದ ಸ್ಪರ್ಧೆಗೆ ಅಣಿಯಾಗುತ್ತಿವೆ. ಬೆಂಗಳೂರಿನಲ್ಲಿ ನವೆಂಬರ್ ನಡುಘಟ್ಟದಲ್ಲಿ ಆ ಸ್ಪರ್ಧೆ ನಡೆಯಲಿದೆ.

‘ಮಂತ್ರಕ್ಕೆ ಎಟುಕಿದ ಮಾವು’ ಇದಲ್ಲ
2009ರಲ್ಲಿ 42 ನಾಟಕದ ಮೇಷ್ಟ್ರುಗಳನ್ನು ಸರ್ಕಾರ ರಾಜ್ಯದ ವಿವಿಧ ಶಾಲೆಗಳಿಗೆ ನೇಮಿಸಿಕೊಂಡಿತು. ಆಗ ಮಾವಿನಕಟ್ಟೆಗೆ ಆಯ್ಕೆಯಾದವರು ವೆಂಕಟೇಶ್ವರ. ದಾವಣಗೆರೆ ಜಿಲ್ಲೆಗೆ ಇದ್ದುದು ಇದೊಂದೇ ಹುದ್ದೆ. ಅವರು ಆಯ್ಕೆಯಾದಾಗ ತಾಲೀಮಿಗೆ ಕೋಣೆ ಇರಲಿಲ್ಲ. ಎಲ್ಲಿಂದ ಪ್ರಾರಂಭಿಸಬೇಕು ಎಂಬ ಗೊಂದಲ ಕೂಡ ಎದುರಲ್ಲಿತ್ತು.‘‘ನಾನು ಇಂಗ್ಲಿಷ್‌ ಎಂ.ಎ. ಪಾಸಾಗಿದ್ದರಿಂದ ಆ ವಿಷಯವನ್ನೂ ಪಾಠ ಮಾಡಲಾರಂಭಿಸಿದೆ.

ಪಠ್ಯವೇ ಇಲ್ಲದ ನಾಟಕವನ್ನು ಶಾಲೆಗಳಲ್ಲಿ ಕಲಿಸುವುದು ನನಗೆ ಸವಾಲಾಗಿತ್ತು. ಮೊದಲು ಸಾಕಷ್ಟು ಪುಸ್ತಕಗಳನ್ನು ಓದಿಕೊಂಡೆ. ಮಕ್ಕಳ ರಂಗ ಚಟುವಟಿಕೆಯ ಸಾಧ್ಯತೆಗಳ ಕುರಿತು ಪರಿಣತರೊಡನೆ ಚರ್ಚಿಸಿದೆ. ಮರದ ಅಡಿಯಲ್ಲಿ ನಾವು ಮೊದಲು ರಂಗ ತರಬೇತಿ ನೀಡತೊಡಗಿದೆವು. ಇಂಗ್ಲಿಷ್‌ ಪಠ್ಯವನ್ನು ಅರ್ಥ ಮಾಡಿಸಲು ಕೆಲವು ರಂಗತಂತ್ರಗಳನ್ನು ಅನುಸರಿಸಿದೆ.

ನಾಟಕದ ತಂತ್ರಗಳನ್ನು ಬಳಸಿಯೇ ವ್ಯಾಕರಣದ ಪಾಠ ಹೇಳಿಕೊಟ್ಟೆ. ಅದು ಫಲ ಕೊಟ್ಟಿತು. 2010–11ರಲ್ಲಿ ಇಂಗ್ಲಿಷ್‌ನಲ್ಲಿ ಶೇ 100ರಷ್ಟು ಫಲಿತಾಂಶ ಬಂತು. ಕ್ರಮೇಣ ಬೇರೆ ಪಠ್ಯಗಳನ್ನೂ ರಂಗತಂತ್ರದ ಮೂಲಕ ಕಲಿಸಿಕೊಡುವ ಪ್ರಯೋಗಗಳಿಗೆ ಕೈಹಾಕಿದೆ’ ಎನ್ನುತ್ತಾರೆ ವೆಂಕಟೇಶ್ವರ.

‘ಜನಮನದಾಟ’ ತಂಡ ಪ್ರಸ್ತುತಪಡಿಸಿದ ‘ಊರು ಕೇರಿ’ ನಾಟಕ ಪ್ರದರ್ಶನ ಚನ್ನಗಿರಿಯಲ್ಲಿ ನಡೆದಾಗ, ಎಲ್ಲಾ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಮೇಷ್ಟರು ತೋರಿಸಿದರು. 2012ರಲ್ಲಿ ಹದಿನೈದು ದಿನಗಳ ರಂಗ ತರಬೇತಿ ಶಿಬಿರ ನಡೆಸಲು ಇದು ಸ್ಫೂರ್ತಿಯಾಯಿತು. ರಂಗಾಯಣದ ಸಹಯೋಗದಲ್ಲಿ 15 ದಿನಗಳ ಕಾಲ ರಂಗ ಕಾರ್ಯಾಗಾರ ನಡೆಸಲು ಮಾವಿನಕಟ್ಟೆ ಸಜ್ಜಾಯಿತು.

ಮಕ್ಕಳು ತಾವೇ ಕಚ್ಚಾ ವಸ್ತುಗಳನ್ನು ಬಳಸಿ ಪರಿಕರಗಳನ್ನು ತಯಾರಿಸಿದರು. ಮುಖವಾಡಗಳು, ಮರಳು ಶಿಲ್ಪಗಳು, ಅಡಿಕೆ ಸಿಪ್ಪೆಯಿಂದ ಮಾಡಿದ ಹಾರಗಳು... ಹೀಗೆ ಮಕ್ಕಳು ತಮ್ಮೊಳಗಿನ ಕಲಾವಿದರನ್ನು ಜಾಗೃತಗೊಳಿಸಿದ ಹಬ್ಬ ಅದು. ಎಚ್ಚೆಸ್ವಿ ರೂಪಾಂತರಿಸಿದ ನಾಟಕ ‘ಸುಣ್ಣದ ಸುತ್ತು’ (ಬ್ರೆಕ್ಟ್‌ನ ‘ಕಕೇಷಿಯನ್ ಚಾಕ್ ಸರ್ಕಲ್’) ಪ್ರದರ್ಶನಕ್ಕೆ ಮಕ್ಕಳು ನಡೆಸಿದ ತಾಲೀಮಿನ ಜತೆಗೇ ಹಲವು ಕಥೆಗಳು ಬೆಸೆದುಕೊಂಡಿವೆ. ಹದಿನೈದು ದಿನ ಕಷ್ಟಪಟ್ಟು ಕಲಿತ ನಾಟಕವನ್ನು ಅವರು ಪ್ರದರ್ಶಿಸಿದಾಗ ಶಾಲೆಯ ಆವರಣ ಜನರಿಂದ ಭರ್ತಿಯಾಗಿತ್ತು.

2013ರಲ್ಲಿ ರಾಜ್ಯಮಟ್ಟದ ‘ಪ್ರತಿಭಾ ಕಾರಂಜಿ’ಯಲ್ಲಿ ‘ಸತ್ರು ಅಂದ್ರೆ ಸಾಯ್ತಾರಾ’ ನಾಟಕದ ಅಭಿನಯಕ್ಕೆ ರಾಹುಲ ಎಂಬ ಹುಡುಗನಿಗೆ ಶ್ರೇಷ್ಠ ನಟ ಪ್ರಶಸ್ತಿ ಒಲಿಯಿತು. ಕಳೆದ ವರ್ಷ ‘ಗೆಲಿಲಿಯೊ’ ನಾಟಕದ ಪಾತ್ರಕ್ಕೆ ಶ್ರೇಷ್ಠ ನಟ  ಪ್ರಶಸ್ತಿ ಪಡೆದ ಅಭಿಷೇಕ್ ಈಗ ಧ್ವನಿ ನಿರ್ವಹಣೆಯ ಜವಾಬ್ದಾರಿ ವಹಿಸುತ್ತಿದ್ದಾನೆ.

ಬೆನ್ನುತಟ್ಟಿದವರು
ಈ ಮೊದಲು ‘ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ’ಯ (ಎಸ್‌ಡಿಎಂಸಿ) ಅಧ್ಯಕ್ಷರಾಗಿದ್ದ ಎಚ್‌. ತಿಪ್ಪೇಶಪ್ಪ ಈಗ ‘ಮಕ್ಕಳ ಹಿತರಕ್ಷಣಾ ಸಮಿತಿ’ಯ ಅಧ್ಯಕ್ಷರಾಗಿದ್ದಾರೆ. ಮಕ್ಕಳು ಏನೇ ಸಾಧನೆ ಮಾಡಿದರೂ ನಿಷ್ಕಲ್ಮಶ ನಗು ತುಳುಕಿಸುತ್ತಾ ಅವರ ಜತೆ ಬೆರೆಯುವ, ಅವರ ಬೆನ್ನುತಟ್ಟುವ ವ್ಯಕ್ತಿತ್ವ ಅವರದ್ದು. ‘‘ಈ ಮಕ್ಕಳ ಪೋಷಕರಿಗೆ ಇವರ ಸಾಧನೆ ಎಂಥದ್ದು ಎಂದು ಅರಿವೇ ಆಗುವುದಿಲ್ಲ. ಅದನ್ನು ನೋಡಿದಾಗ ಸಂಕಟವಾಗುತ್ತದೆ.

ನಮ್ಮ ಶಾಲೆ ಇಷ್ಟು ದೊಡ್ಡ ಹೆಸರು ಮಾಡುತ್ತಿದೆ ಎನ್ನುವುದನ್ನು ನೆನೆದಾಗ ಖುಷಿಯಾಗುತ್ತದೆ’’ ಎನ್ನುವ ಅವರು, ಶಾಲೆಗೆ ಕಾಂಪೌಂಡ್‌ ಸೇರಿದಂತೆ ಹಲವು ಮೂಲಸೌಕರ್ಯ ದಕ್ಕಿಸಿಕೊಡಲು ಶ್ರಮಿಸಿದ್ದಾರೆ. ಮುಖ್ಯ ಶಿಕ್ಷಕ ಜಯಾ ನಾಯಕ್ ಡಿ. ಅವರಿಗೂ ಮಕ್ಕಳ ಈ ಸಾಧನೆಯ ಕುರಿತು ಹೆಮ್ಮೆ ಇದೆ. ‘ಇಲ್ಲಿ ಮಕ್ಕಳಿಗೆ ಸ್ವಲ್ಪ ಬಿಡುವು ಸಿಕ್ಕರೂ ಅಡಿಕೆ ಸುಲಿಯುವ ಕೆಲಸಕ್ಕೆ ಹಚ್ಚುತ್ತಾರೆ. ಅವರನ್ನು ಹಿಡಿದು ತರುವುದೇ ಕಷ್ಟದ ಕೆಲಸ. ಎಷ್ಟೋ ಸಲ ಪರೀಕ್ಷೆಗೆ ಕಟ್ಟಿಸಲೂ ಹೆಣಗಾಡಬೇಕು.

ಒಂದು ಫೋಟೊ ಕೊಡಲೂ ಪೋಷಕರು ಹಿಂದೆ ಮುಂದೆ ನೋಡುತ್ತಾರೆ. ಬಾಲಕಿಯರನ್ನು ಬೇರೆ ಊರುಗಳಿಗೆ ನಾಟಕಕ್ಕೆ ಕರೆದುಕೊಂಡು ಹೋಗುವುದೂ ಸವಾಲೇ.ಅದನ್ನೆಲ್ಲಾ ಎದುರಿಸಿದ ನಮ್ಮ ಶ್ರಮಕ್ಕೆ ಈಗ ಫಲ ಸಂದಿದೆ’ ಎಂದು ಖುಷಿ ವ್ಯಕ್ತಪಡಿಸುವ ಮುಖ್ಯಶಿಕ್ಷಕರಿಗೆ ತಮ್ಮ ತಂಡ ಇನ್ನೊಂದು ಗೆಲುವು ಸಾಧಿಸುವ ವಿಶ್ವಾಸವಿದೆ.

ಒಂದು ಸಣ್ಣ ಶುಭಹಾರೈಕೆ ಕೇಳಿದರೆ ಮಾವಿನಕಟ್ಟೆ ಶಾಲೆಯ ಮಕ್ಕಳ ಮುಖ ಮೊರದಗಲ ಆಗುತ್ತದೆ. ಮೇರಿ ಕ್ಯೂರಿ ನಾಟಕದ ದೆಸೆಯಿಂದಾಗಿ ಆ ಮಕ್ಕಳ ಕಣ್ಣುಗಳಲ್ಲೀಗ ನಕ್ಷತ್ರಕಡ್ಡಿಗಳು! ಕನ್ನಡದ ನಾಳೆಗಳ ಬಗ್ಗೆ ಅನುಮಾನ ಉಳ್ಳವರು, ಸರ್ಕಾರಿ ಶಾಲೆಯ ಈ ಮಕ್ಕಳ ಆತ್ಮವಿಶ್ವಾಸವನ್ನು ನೋಡಬೇಕು.  

ಮೇರಿ 150; ನಾಳೆ ಜನ್ಮದಿನ
ಪೋಲೆಂಡ್‌ನ ಮೇರಿ ಕ್ಯೂರಿ ‘ರೇಡಿಯಂ’ ಕಂಡುಹಿಡಿಯುವ ಮೂಲಕ ‘ಪರಮಾಣು ಯುಗ’ಕ್ಕೆ ಮುನ್ನುಡಿ ಬರೆದ ವಿಜ್ಞಾನಿಗಳಲ್ಲೊಬ್ಬರು. ತಮ್ಮ ಸಂಶೋಧನೆಗಳಿಗಾಗಿ ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದ ಸಾಧನೆ ಅವರದು. ಬದುಕಿನ ಎಡರುತೊಡರುಗಳ ನಡುವೆಯೂ ವಿಜ್ಞಾನದ ಬಗ್ಗೆ ಆಸಕ್ತಿ ಉಳಿಸಿಕೊಂಡ ಅವರು, ವಿದ್ಯಾರ್ಥಿ ದಿನಗಳಲ್ಲಿ ದೀಪದ ಎಣ್ಣೆಯ ವೆಚ್ಚ ಉಳಿಸಲಿಕ್ಕಾಗಿ ನಡುರಾತ್ರಿಯವರೆಗೆ ಗ್ರ೦ಥಾಲಯದಲ್ಲಿ ಓದುತ್ತಿದ್ದರು.

ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ಯುದ್ಧದಲ್ಲಿ ಗಾಯಾಳು ಸೈನಿಕರನ್ನು ಉಪಚರಿಸಿದ್ದರು. ನಿರಂತರವಾಗಿ ಕ್ಷ–ಕಿರಣಗಳಿಗೆ ಒಡ್ಡಿಕೊಂಡಿದ್ದರಿಂದಾಗಿ ರಕ್ತದ ಕ್ಯಾನ್ಸರ್‌ಗೆ ತುತ್ತಾದ ಮೇರಿ 1934ರ ಜುಲೈ 4ರಂದು ನಿಧನರಾದರು. ನವೆಂಬರ್‌ 7 (ಜ: 1867) ಮೇರಿ ಅವರ ಜನ್ಮದಿನ. ಮೇರಿ ಜನಿಸಿ 150 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ, ಮಾವಿನಕಟ್ಟೆ ಮಕ್ಕಳ ಸಾಧನೆ ಮೇರು ವಿಜ್ಞಾನಿಯೊಬ್ಬರಿಗೆ ಸಂದ ಅಪೂರ್ವ ಗೌರವವಾಗಿದೆ.


ಭಲೇ ಅಭಿಷೇಕ್!
ಒಂಬತ್ತನೇ ತರಗತಿಯ ಅಭಿಷೇಕ್ ಡ್ರಮ್‌ನಿಂದ ಶಬ್ದ ಹೊಮ್ಮಿಸಿ ನಾಟಕಕ್ಕೆ ಮುನ್ನುಡಿ ಬರೆಯಬಲ್ಲ. ಕೀಬೋರ್ಡ್‌ನ ಮುದ್ರಿತ ದನಿ ಮೊಳಗುವಂತೆ ಮಾಡಬಲ್ಲ. ವಿದ್ಯುದ್ದೀಪ ಯಾವಾಗ ಎಷ್ಟು ಹಾಕಬೇಕು ಎನ್ನುವುದರಲ್ಲಿಯೂ ಕೈಪಳಗಿದೆ. ಒಮ್ಮೆ ಪ್ಲಗ್‌ ಸಡಿಲ ಆಗಿ, ವಿದ್ಯುದ್ದೀಪ ಹೊತ್ತಿಕೊಳ್ಳಲಿಲ್ಲ.

ಶಾರ್ಟ್‌ ಆಗಿರುವ ಸಾಧ್ಯತೆ ಇತ್ತು. ಬೇರೆ ಹುಡುಗರಾದರೆ ಹೆದರುವ ಇಂಥ ಸಂದರ್ಭದಲ್ಲಿಯೂ ಅಭಿಷೇಕ್, ಸಡಿಲವಾಗಿದ್ದ ಪ್ಲಗ್‌ ಅನ್ನು ಸರಿಪಡಿಸಿ, ನಾಟಕಕ್ಕೆ ಬೆಳಕು ನೀಡಿದ. ಕಳೆದ ವರ್ಷ ಶ್ರೇಷ್ಠ ನಟ ಎನಿಸಿಕೊಂಡಿದ್ದ ಈ ಪ್ರತಿಭೆ ಒಂದರ್ಥದಲ್ಲಿ ಕಾರಂಜಿಯೂ ಹೌದು.

***
ನಾಟಕದ ಮೇಷ್ಟರ ಬಯೋಡೇಟಾ

ಚನ್ನಗಿರಿ ತಾಲ್ಲೂಕಿನ ಪನ್ನಸಮುದ್ರ ವೆಂಕಟೇಶ್ವರ ಕೆ. ಅವರ ಊರು. ಪದವಿ ಮುಗಿಸಿದೊಡನೆ ಪೊಲೀಸ್‌ ಕಾನ್‌ಸ್ಟೆಬಲ್‌ ಕೆಲಸ ಸಿಕ್ಕಿತು. ರಂಗಾಸಕ್ತಿಯಿಂದ ಅಷ್ಟು ಹೊತ್ತಿಗೆ ‘ನೀನಾಸಮ್‌’ನಲ್ಲಿ ಕಲಿಯತೊಡಗಿದ್ದ ಅವರಿಗೆ ಆ ಕೆಲಸ ಬೇಡವಾಯಿತು. ಸಿಕ್ಕ ಸರ್ಕಾರಿ ಕೆಲಸವನ್ನು ತಿರಸ್ಕರಿಸಿದ್ದು ಅವರ ತಂದೆಗೆ ಬೇಸರ ತಂದಿತು.

‘ನೀನಾಸಮ್‌’ನಲ್ಲಿ ರಂಗಶಿಕ್ಷಣದಲ್ಲಿ ಒಂದು ವರ್ಷದ ಡಿಪ್ಲೊಮಾ ಮಾಡಿದ ಅವರು ಎರಡು ವರ್ಷ ತಿರುಗಾಟದಲ್ಲಿಯೂ ತೊಡಗಿಕೊಂಡರು. ಜಯಂತ್ ಜಾಧವ್, ಟಿ.ಪಿ.ಅಶೋಕ್ ತರಹದ ಉಪನ್ಯಾಸಕರು ಹತ್ತಿಸಿದ ಸಾಹಿತ್ಯಿಕ ರುಚಿ ಹಾಗೂ ಗಣೇಶ್, ಚನ್ನಕೇಶವ ಅವರಂಥ ರಂಗಶಿಕ್ಷಕರು ಕಟ್ಟಿಕೊಟ್ಟ ನಾಟಕದ ಅಭಿರುಚಿ ವೆಂಕಟೇಶ್ವರ ಮನಸ್ಸನ್ನು ಇದೇ ಕ್ಷೇತ್ರದ ಸಾಧನೆಗೆ ಪ್ರೇರೇಪಿಸಿತು.

ನಾಟಕಗಳೊಂದಿಗೆ ಅನುಭವ ಹೆಚ್ಚಿಸಿಕೊಳ್ಳತೊಡಗಿದ ಹೊತ್ತಿಗೇ ಸರ್ಕಾರಿ ಶಾಲೆಗೆ ನಾಟಕ ಶಿಕ್ಷಕರು ಬೇಕಾಗಿದ್ದಾರೆ ಎಂಬ ಪ್ರಕಟಣೆ ಗೊತ್ತಾದದ್ದು. ಅರ್ಜಿ ಹಾಕಲು ಒಂದೇ ದಿನ ಕಾಲಾವಕಾಶ ಇದ್ದುದು. ‘ನ್ಯಾಷನಲ್ ಸ್ಕೂಲ್‌ ಆಫ್‌ ಡ್ರಾಮಾ’ ಸೇರಹೋಗಿ, ಅದರಲ್ಲಿ ವಿಫಲರಾಗಿದ್ದ ವೆಂಕಟೇಶ್ವರ ಅವರಿಗೆ ಈ ಕೆಲಸ ಆಸರೆಯಾಗಿ ಕಂಡಿತು. ಈಗ ಅವರಿಗೆ ಸಂಶೋಧನೆಗೂ ಅವಕಾಶ ಸಿಕ್ಕಿದೆ (ಮೇಟಿ ಮಲ್ಲಿಕಾರ್ಜುನ ಮಾರ್ಗದರ್ಶನದಲ್ಲಿ ಪಿಎಚ್‌.ಡಿ.ಗೆ ಅಧ್ಯಯನ ನಡೆಸುತ್ತಿದ್ದಾರೆ), ಮಕ್ಕಳ ಜತೆ ರಂಗಾನುಸಂಧಾನದ ಸಾಧ್ಯತೆಯೂ ಒದಗಿಬಂದಿದೆ. ವೆಂಕಟೇಶ್ವರ್‌ ಅವರ ಇ–ಮೇಲ್‌: swarash83@gmail.com

***
ಮಕ್ಕಳನ್ನು ಊರಿಂದ ಊರಿಗೆ ಕರೆದುಕೊಂಡು ಹೋಗುವುದು ದೊಡ್ಡ ಸವಾಲು. ಅದರಲ್ಲೂ ಬಾಲಕಿಯರನ್ನು ಕಳುಹಿಸಿಕೊಡಲು ಪೋಷಕರು ಸಿದ್ಧರಿರುವುದಿಲ್ಲ. ಎಲ್ಲಾ ಕಷ್ಟಗಳನ್ನೂ ಮೀರಿ ಗೆಲುವು ಸಂದಾಗ ಆಗುವ ಸಂತೋಷ ದೊಡ್ಡದು.
–ಶಿವಮೂರ್ತಿ ಎಚ್‌.ಕೆ. ಕನ್ನಡ ಶಿಕ್ಷಕ

***
ಮೇರಿ ಕ್ಯೂರಿ ಪಾತ್ರಕ್ಕೆ ನಾನು ಆಯ್ಕೆಯಾದಾಗ ಖುಷಿಯಾಯಿತು. ಮೇಷ್ಟ್ರು ನಾಟಕ ಓದುತ್ತಾ ಹೋದಂತೆ ಆ ಪಾತ್ರಕ್ಕೆ ಹೇಗೆಲ್ಲಾ ಇರಬೇಕು ಎಂಬ ಯೋಚನೆ ಮೂಡತೊಡಗಿತು. ಒಂದಾದ ಮೇಲೆ ಒಂದು ಹಂತಕ್ಕೆ ಹೋದಂತೆ ಅಭಿನಯಿಸುವ ಆತ್ಮವಿಶ್ವಾಸವೂ ಹೆಚ್ಚಾಯಿತು.
–ಜಯಶ್ರೀ ಜೆ,  ಮೇರಿ ಕ್ಯೂರಿ ಪಾತ್ರಧಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT