ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಉಚಿತ ಇಂಟರ್‌ನೆಟ್‌...

Last Updated 8 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಇಂಟರ್‌ನೆಟ್‌ ಇಂದಿನ ಅತೀ ಅಗತ್ಯದ ಸಂಪರ್ಕಗಳಲ್ಲಿ ಒಂದಾಗಿದೆ.  ಈ ಸೌಲಭ್ಯದಿಂದ ಲೋಕದ ಎಲ್ಲ ಮಾಹಿತಿಗಳು ಅಂಗೈನಲ್ಲಿರುವ ಮೊಬೈಲ್‌ ಮೇಲೆ ಮೂಡುತ್ತವೆ.

ಕಂಪ್ಯೂಟರ್‌ ಪರದೆಗಳ ಮೇಲೆ ಬಿಚ್ಚಿಕೊಳ್ಳುತ್ತವೆ. ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗಿಗಳವರೆಗೆ ಎಲ್ಲರೂ ಇಂದು ಅಂತರ್ಜಾಲಕ್ಕೆ ಮೊರೆ ಹೋಗಿದ್ದಾರೆ
ಕೆಲವು ತಿಂಗಳ ಹಿಂದೆ ಫೇಸ್‌ಬುಕ್‌ನ  ಫ್ರೀ ಬೇಸಿಕ್ಸ್‌ ಇಂಟರ್‌ನೆಟ್‌ ಡಾಟ್‌ ಆರ್ಗ್‌್  ಸುದ್ದಿ ಮಾಡಿತ್ತು. ಇತ್ತೀಚೆಗೆ ರಿಲಯನ್ಸ್ ಜಿಯೊ ಕಂಪೆನಿ ಉಚಿತ   ಇಂಟರ್ನೆಟ್‌ ಸಂಪರ್ಕ ನೀಡಿರುವುದು ವಿವಾದ ಸೃಷ್ಟಿಸಿದೆ.

ಅಮೆರಿಕದಲ್ಲಿ ವಿದ್ಯಾರ್ಥಿಗಳಿಗಾಗಿಯೇ ಸ್ಪ್ರಿಂಟ್‌ ಎಂಬ ಕಂಪೆನಿಯೊಂದು ‘ದಿ 1 ಮಿಲಿಯನ್ ಪ್ರಾಜೆಕ್ಟ್’ ಅಡಿ ಬಡ ವಿದ್ಯಾರ್ಥಿಗಳಿಗೆ ಉಚಿತ ಇಂಟರ್‌ನೆಟ್‌ ಒದಗಿಸಿ ಮಾದರಿಯಾಗಿದೆ. ಅಂತರ್ಜಾಲದ ಸೌಲಭ್ಯ ಉಳ್ಳವರು ಮತ್ತು ಇಲ್ಲದವರ ನಡುವಣ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ವ್ಯವಸ್ಥೆ ಮಾಡುತ್ತಿದೆ.

ಸ್ಪ್ರಿಂಟ್‌ ಕಂಪೆನಿಯ ಮುಖ್ಯಸ್ಥ ಮಾರ್ಸಿಲೊ ಕ್ಲೌರೆ ಅವರು ಬಡ ಕುಟುಂಬದ ಪ್ರೌಢಶಾಲಾ ಮಕ್ಕಳಿಗೆ ಉಚಿತವಾಗಿ ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಒದಗಿಸಿ   ಪ್ರತಿ ತಿಂಗಳು 3 ಜಿ.ಬಿ.ಹೈಸ್ಪೀಡ್‌ ಡೇಟಾ  ನೀಡುತ್ತಿದ್ದಾರೆ. ಪದವಿ ಮುಗಿಯು ವವರೆಗೆ  ಈ ಸೌಲಭ್ಯ   ದೊರೆಯಲಿದೆ. ನಾಲ್ಕು ವರ್ಷಗಳವರೆಗೆ ಮೊಬೈಲ್‌ ಸೇರಿದಂತೆ ವೈರ್‌ಲೆಸ್ ಉಪಕರಣಗಳ ದುರಸ್ತಿಯನ್ನೂ ಮಾಡಿಕೊಡಲಾಗುತ್ತದೆ.

ಇದಲ್ಲದೆ ಸ್ಪ್ರಿಂಟ್‌ ಕಂಪೆನಿಯ ನೆಟ್‌ವರ್ಕ್‌ಗಳಲ್ಲಿ ವಿದ್ಯಾರ್ಥಿಗಳು ಅನಿಯಮಿತ ದೇಶಿ ಕರೆಗಳನ್ನು ಮಾಡಬಹುದು. ಇಂದು ಇಂಟರ್ನೆಟ್‌ ಐಷಾರಾಮಿ  ಅಲ್ಲ.  ಅದು ಅತಿ ಅಗತ್ಯದ ಸೌಲಭ್ಯ. ಆದರೆ, ಬಡ ವಿದ್ಯಾರ್ಥಿಗಳಿಗೆ ದೊರೆಯದೇ ಹೋದರೆ ಅವರು ವಿಶ್ವದ ಮೂಲೆಮೂಲೆಯಿಂದ ದೊರೆಯುವ ಮಾಹಿತಿಗಳಿಂದ ವಂಚಿತರಾಗುತ್ತಾರೆ. ಅಮೆರಿಕ ಗ್ರಾಮೀಣ ಭಾಗದಲ್ಲಿ ಉಳಿದಿರುವ ಬಡ ಮಕ್ಕಳಿಗೆ ಇದರಿಂದ ಸಾಕಷ್ಟು ಅನುಕೂಲವಾಗಿದೆ ಎನ್ನುತ್ತಾರೆ  ಮಾರ್ಸಿಲೊ. 

ಬೊಲಿವಿಯಾದಿಂದ ಅಮೆರಿಕಕ್ಕೆ ವಲಸೆ ಬಂದಿರುವ ಮಾರ್ಸಿಲೊ ಅವರು ‘ಡಿಜಿಟಲ್‌ ವಿಭಜನೆ’ ಯನ್ನು ಗಂಭೀರವಾಗಿ ಪರಿಗಣಿಸಿದರು. ಬಡ ಕುಟುಂಬದ ಆಫ್ರಿಕನ್‌ ಅಮೆರಿಕನ್‌ ಮತ್ತು ಹಿಸ್ಪಾನಿಕ ಮಕ್ಕಳಿಗೆ ಬ್ರಾಡ್‌ಬ್ಯಾಂಡ್‌ ಸೌಲಭ್ಯ ಇಲ್ಲದಿದ್ದರೆ ಅವರು ಜಗತ್ತಿನಲ್ಲಿ ದೊರೆಯುವ ಮಾಹಿತಿಗಳಿಂದ ವಂಚಿತ ರಾಗುತ್ತಾರೆ ಎಂಬ ಕಾರಣಕ್ಕೆ ‘1 ಮಿಲಿಯನ್‌ ಪ್ರಾಜೆಕ್ಟ್‌’ ರೂಪಿಸಿದರು. 

ಉಚಿತ ಇಲ್ಲವೇ ರಿಯಾಯ್ತಿ ದರದ ಇಂಟರ್ನೆಟ್ ಒದಗಿಸಲು ಅಮೆರಿಕ ಸರ್ಕಾರ ಹಲವು ಕಂಪೆನಿಗಳ ಸಹಾಯ ದೊಂದಿಗೆ ಯೋಜನೆಗಳನ್ನು ಆರಂಭಿ ಸಿದೆ. ಆದರೆ ಸ್ಪ್ರಿಂಟ್‌ ಕಂಪೆನಿಯ  ಯೋಜನೆ ಇವುಗಳಿಗಿಂತ ಹೆಚ್ಚು ಗಮನಸೆಳೆದಿದೆ.

ವಿದ್ಯಾರ್ಥಿ– ಪೋಷಕ– ಶಿಕ್ಷಕ ಸಂಪರ್ಕ: ಮಕ್ಕಳಿಗೆ ಉಚಿತ ಇಂಟರ್ನೆಟ್‌ ಸಂಪರ್ಕ ಒದಗಿಸಿರುವುದರಿಂದ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ, ಪೋಷಕ ಮತ್ತು ವಿದ್ಯಾರ್ಥಿಗಳ ನಡುವೆ ಸಂಪರ್ಕ ಮತ್ತು ಸಂವಹನಕ್ಕೆ ಅನುಕೂಲವಾಗುತ್ತದೆ.

ಶಿಕ್ಷಣ ಸಮಾಜದ ಅಡಿಪಾಯದಂತೆ.  ಆಧುನಿಕ ಯುಗದಲ್ಲಿ ಅಂತರ್ಜಾಲ ಪರಿಣಾಮಕಾರಿ ಸಾಧನ. ಆದ್ದರಿಂದ ಮಕ್ಕಳು ವಂಚಿತರಾಗಬಾರದು ಎನ್ನು ತ್ತಾರೆ ಮಾರ್ಸಿಲೊ ಕ್ಲೌರೆ. ವಿವರಗಳಿಗೆ http://goodworks.sprint.com ಈ ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.

ಅಂಕಿ–ಅಂಶ
* 20% ಅಮೆರಿಕದಲ್ಲಿರುವ ಜನರಿಗೆ ಮೊಬೈಲ್‌ ಡೇಟಾ ಅಥವಾ ಬ್ರಾಡ್‌ಬ್ಯಾಂಡ್‌ ಸೌಲಭ್ಯವಿಲ್ಲ.

* 10  ನಗರಗಳು ಮುಂದಿನ ವರ್ಷದ ಆರಂಭದಲ್ಲಿ  ಮಿಸ್ಸೋರಿ ಸೇರಿದಂತೆ 10 ನಗರಗಳಲ್ಲಿ ‘1 ಮಿಲಿಯನ್‌  ಪ್ರಾಜೆಕ್ಟ್‌’ ಸೌಲಭ್ಯ ದೊರೆಯಲಿದೆ.

* 2 ಲಕ್ಷ ‘1 ಮಿಲಿಯನ್ ಪ್ರಾಜೆಕ್ಟ್’ ಯೋಜನೆ  ಪ್ರತಿ ವರ್ಷ ತಲುಪಲಿರುವ ವಿದ್ಯಾರ್ಥಿಗಳ ಸಂಖ್ಯೆ

***
ಶಾಲೆಗಳಲ್ಲಿ ಮಕ್ಕಳಿಗೆ ಇಂಟರ್‌ನೆಟ್  ಸಂಪರ್ಕ ಸಿಗಬಹುದು. ಆದರೆ ಮನೆಗಳಲ್ಲಿ ಇದರಿಂದ ಅವರು  ವಂಚಿತರಾಗುತ್ತಾರೆ. ಆದ್ದರಿಂದಲೇ ‘1 ಮಿಲಿಯನ್‌ ಪ್ರಾಜೆಕ್ಟ್‌’ ರೂಪಿಸಲಾಗಿದೆ.
–ಮಾರ್ಸಿಲೊ ಕ್ಲೌರೆ , ಸ್ಪ್ರಿಂಟ್‌ ಕಂಪೆನಿಯ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT