ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಕ್ಕೆ ಸ್ಪಂದಿಸಿದ ಐತಿಹಾಸಿಕ ನಾಟಕಗಳು

ರಂಗಭೂಮಿ
Last Updated 8 ನವೆಂಬರ್ 2016, 19:30 IST
ಅಕ್ಷರ ಗಾತ್ರ

ದಾಖಲೆ, ಐತಿಹ್ಯಗಳ ಆಧಾರದ ಮೇಲೆ ಪ್ರೇಕ್ಷಕರ ಕಲ್ಪನೆಯನ್ನು ವಿಸ್ತರಿಸುವ ಐತಿಹಾಸಿಕ ನಾಟಕಗಳು ಆಸಕ್ತಿ ಹುಟ್ಟಿಸುತ್ತವೆ. ಐದು ದಿನಗಳ ಅಂತಹದೊಂದು ನಾಟಕೋತ್ಸವ ನಗರದ ಹಂಪಿನಗರ ಗ್ರಂಥಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ರಂಗ ಪರಂಪರೆ ಟ್ರಸ್ಟ್ ಈ ಉತ್ಸವ ಸಂಘಟಿಸಿತ್ತು. ಸಮಾನತೆ, ಸ್ವಾತಂತ್ರ್ಯಕ್ಕಾಗಿ ರಾಜರು ಮತ್ತು ಜನರು ನಡೆಸಿದ ಹೋರಾಟವೇ ಐದೂ ದಿನಗಳ ನಾಟಕಗಳ ತಿರುಳಾಗಿತ್ತು. ಕೆ.ಎಂ.ಮುನಿಕೃಷ್ಣಪ್ಪ ರಚಿಸಿ, ಯು.ಗೋವಿಂದೇಗೌಡ ನಿರ್ದೇಶಿಸಿದ ‘ಸುರಪುರ ವೆಂಕಟಪ್ಪ ನಾಯಕ’ ನಾಟಕವನ್ನು ಉತ್ಸವದ ಮೊದಲ ದಿನ ಪ್ರದರ್ಶಿಸಲಾಯಿತು.

ಸಿಜಿಕೆ ಸಲಹೆ ಮೇರೆಗೆ ದಿವಂಗತ ಮುನಿಕೃಷ್ಣಪ್ಪ ಅವರಿಂದ ರಚಿತವಾಗಿದ್ದ ಈ ನಾಟಕಕ್ಕೆ ಪ್ರಯೋಗದ ಭಾಗ್ಯ ಒದಗಿಸಿಕೊಟ್ಟವರು ಐತಿಹಾಸಿಕ ನಾಟಕ ಸಿದ್ಧತೆಯಲ್ಲಿ ಪಳಗಿದವರಾದ ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾಸಂಘದ ಆಂಜನೇಯ. ಉತ್ಸವಕ್ಕೆ ಪೂರ್ವಭಾವಿಯಾಗಿ ನಗರದ ವಿವಿಧೆಡೆ ನಾಲ್ಕಾರು ಪ್ರಯೋಗ ಕಂಡಿದ್ದು ಒಳ್ಳೆಯದೇ ಆಯಿತು ಎನ್ನುವಂತೆ ನಾಟಕ ಉತ್ತಮವಾಗಿ ಮೂಡಿಬಂತು.

ಬ್ರಿಟಿಷ್ ಅಧಿಪತ್ಯಕ್ಕೆ ‘ಸುರಪುರದ ವೆಂಕಟಪ್ಪ ನಾಯಕ’ ತಿರುಗಿ ಬೀಳುತ್ತಾನೆ. ಬಲಿಷ್ಠ ಸೈನ್ಯ ಮತ್ತು ತಂತ್ರಗಾರಿಕೆ ವಿರುದ್ದ ವೆಂಕಟಪ್ಪ ನಾಯಕ ವಿಫಲನಾದರೂ, ಇತಿಹಾಸದಲ್ಲಿ ಅದೊಂದು ರೋಮಾಂಚನಕಾರಿ ಅಧ್ಯಾಯ. ತಾಯಿ ಈಶ್ವರಮ್ಮ ಬೆಂಬಲಕ್ಕೆ ನಿಲ್ಲುವುದು ನಾಟಕದ ವಿಶೇಷ. ಸರಳ ರಂಗಸಜ್ಜಿಕೆ, ಔಚಿತ್ಯಪೂರ್ಣ ಅಭಿನಯ, ನಿರ್ದೇಶಕ ಗೋವಿಂದೇಗೌಡರ ಸಂಗೀತದ ಸಾಥ್ ನಾಟಕದ ಪರಿಣಾಮ ಹೆಚ್ಚಿಸಿದವು.

ವಚನ ಚಳವಳಿಯ ಆಳಕ್ಕಿಳಿದು ಭಿನ್ನ ನೆಲೆಯಲ್ಲಿ ಅದನ್ನು ಕಟ್ಟಿಕೊಟ್ಟ ‘ಇವ ನಮ್ಮವ’ ಒಂದು ಅಪರೂಪದ ನಾಟಕ. ಹಿರಿಯ ನಾಟಕಕಾರ ವ್ಯಾಸ ದೇಶಪಾಂಡೆ ರಚಿಸಿದ ಈ ನಾಟಕವು ಕಥಾ ವಸ್ತುವಿನ ಸಂಕೀರ್ಣತೆಯಿಂದ ಗಾಢ ಚಿಂತನೆಗೆ ಹಚ್ಚುತ್ತದೆ. ತುಮಕೂರು ಅಮರೇಶ್ವರ ವಿಜಯ ನಾಟಕ ಮಂಡಳಿಗೆ ಬಿ.ಎ.ಶಾಂತಲಾದೇವಿ ಈ ನಾಟಕ ನಿರ್ದೇಶಿಸಿದ್ದರು. ಭರವಸೆದಾಯಕ ಯುವ ನಟನಟಿಯರ ಅಭಿನಯ ನಾಟಕವನ್ನು ಕಳೆಗಟ್ಟಿಸಿತು.

‘ವೀರ ಸಿಂಧೂರ ಲಕ್ಷ್ಮಣ’ ನಾಟಕವನ್ನು ಮಾಲತಿಶ್ರೀ ಮೈಸೂರು ನಿರ್ದೇಶನದಲ್ಲಿ ಆಶಾಕಿರಣ ಕಲಾ ಟ್ರಸ್ಟ್ ಸಾದರಪಡಿಸಿತು. ಸ್ವಾತಂತ್ರ್ಯ ಹೋರಾಟದ ಜತೆಗೆ ಸಿರಿವಂತರ ಸಂಪತ್ತನ್ನು ಒಡೆದು ಬಡವರಿಗೆ ಹಂಚುವ ಲಕ್ಷ್ಮಣ- ಆಳರಸರಾದ ಬ್ರಿಟಿಷರ ವಂಚನೆಗೆ ಬಲಿಯಾಗುವುದು ಇತಿಹಾಸದ ಮತ್ತೊಂದು ಅಧ್ಯಾಯ.

ರವಿಕಲಾ, ಕೊಟ್ಟೂರು ಕೋಮಲಮ್ಮ, ಲಲಿತ, ಸುಧಾ ಹೆಗಡೆ, ವಿನೋದಮ್ಮ ಮುಂತಾದ ವೃತ್ತಿ ರಂಗಭೂಮಿಯ ಹೆಸರಾಂತ ಹಿರಿಯ ನಟಿಯರು ಪುರುಷ ಪಾತ್ರಗಳಲ್ಲಿ ಅಭಿನಯಿಸಿದ್ದು ಈ ನಾಟಕದ ವಿಶೇಷ.

ನಿರ್ದೇಶನದ ಜತೆಗೆ ಸಿಂಧೂರ ಲಕ್ಷ್ಮಣನ ಪಾತ್ರವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟವರು ಮಾಲತಿಶ್ರೀ ಮೈಸೂರು. ಉತ್ಸವಕ್ಕಾಗಿಯೇ ‘ಸಿಂಧೂರ ಲಕ್ಷ್ಮಣ’ ನಾಟಕವನ್ನು ಮಾಲತಿಶ್ರೀ ಸಿದ್ಧಪಡಿಸಿದ್ದರು. ಪರಿಣಿತ ವೃತ್ತಿ ಕಲಾವಿದೆಯರು ಅವರ ಜತೆಗಿದ್ದರು.  ಪೂರ್ವಭಾವಿಯಾಗಿ ಆಶ್ರಮವೊಂದರಲ್ಲಿ ನಾಟಕ ಪ್ರಯೋಗಿಸಿ ತಮ್ಮ ಅರ್ಹತೆಯನ್ನು ದೃಢಪಡಿಸಿಕೊಂಡಿದ್ದು, ನಾಟಕದ ಬಗೆಗಿನ ಅವರ ಶ್ರದ್ಧೆಗೆ ಸಾಕ್ಷಿಯಾಗಿತ್ತು.

ಕವಿತಾಕೃಷ್ಣ ಅವರ ‘ಸಂಗೊಳ್ಳಿ ರಾಯಣ್ಣ’ ನಾಟಕ ಸರಳ ರಂಗಸಜ್ಜಿಕೆ ಮತ್ತು ಔಚಿತ್ಯಪೂರ್ಣ ಅಭಿನಯದಿಂದ ಗಮನ ಸೆಳೆಯಿತು. ಬೆಂಗಳೂರು ತ್ರಿಮೂರ್ತಿ ಕಲಾಕೂಟಕ್ಕೆ ಎಚ್.ಎನ್.ಆನಂದಮೂರ್ತಿ ನಾಟಕ ನಿರ್ದೇಶಿಸಿದರು. ಆನಂದಮೂರ್ತಿ ನಟ, ಹಾಡುಗಾರ, ಕವಿ, ನಿರ್ದೇಶಕರೂ ಹೌದು. ಶ್ರದ್ಧೆ, ಪರಿಶ್ರಮದಿಂದ ಹಂತಹಂತವಾಗಿ ಬೆಳೆದು ಬಂದಿರುವ ಈ ಹಿರಿಯರು ಯುವಕರೊಂದಿಗೆ ಬೆರೆಯುವ ಕ್ರಮ ಎಲ್ಲರಿಗೂ ಮಾದರಿ.

ಉತ್ಸವದ ಕೊನೆಯ ದಿನ ಪ್ರದರ್ಶನ ಕಂಡ ನಾಟಕ ರಂಗ ಪರಂಪರೆ ಟ್ರಸ್ಟ್‌ನವರೇ ಸಾದರಪಡಿಸಿದ ‘ಸಾಮ್ರಾಟ್ ಶ್ರೀಪುರುಷ’. ಹೆಚ್ಚು ಐತಿಹಾಸಿಕ ನಾಟಕಗಳನ್ನು ಬರೆದು ಪಳಗಿರುವ ಆಂಜನೇಯ ಅವರು ರಚಿಸಿದ ಈ ನಾಟಕದ ನಿರ್ದೇಶನ ಬಿ.ಎ.ಧನ್ವಂತ್ರಿ ಅವರದು. ಕನ್ನಡ ಆಳ್ವಿಕೆ ವಿಸ್ತರಿಸಿದ ಮೊದಲಿಗ ಅರಸುಗಳ ಪೈಕಿ ಸಾಮ್ರಾಟ ಶ್ರೀಪುರಷನೆಂದು ಬಿರುದಾಂಕಿತನಾದ ಮುತ್ತರಸನೂ ಒಬ್ಬನು ಎಂದು ಹೇಳಲಾಗುತ್ತದೆ.

ಆನೆಗಳ ಬಗ್ಗೆ ಅಪೂರ್ವ ಮಾಹಿತಿ ನೀಡುವ ‘ಗಜಶಾಸ್ತ್ರ’ ಗ್ರಂಥ ರಚಿಸಿದ್ದು ಮುತ್ತರಸನ ಬಹು ಅಮೂಲ್ಯವಾದ ಕೊಡುಗೆ. ಇನ್ನು ಅವನು ಕನ್ನಡ ಆಡಳಿತ ಭಾಷೆ ಮಾಡಿದ ಮುಂತಾದ್ದೆಲ್ಲ ನಾಟಕಕಾರರ ಕಲ್ಪನೆ. ನಾಡುನುಡಿಯ ಬಗ್ಗೆ ಹೆಮ್ಮೆ, ಅಭಿಮಾನ ಮೂಡಿಸಲು ಐತಿಹಾಸಿಕ ನಾಟಕಗಳಲ್ಲಿ ಈ ತರಹದ ಕಲ್ಪನೆಗಳು ಇರುವುದು ಸಾಮಾನ್ಯ.

ಹರ್ಷ, ಭರತ್, ಪ್ರಸಾದರಾವ್, ಶ್ರೀಕಾಂತ, ಶಿವನಗೌಡ, ಕಾವ್ಯಶ್ರೀ, ಹೇಮಾಶ್ರೀ, ಶುಭಶ್ರೀ, ಸುರೇಶ, ರಾಮಕುಮಾರ, ವೆಂಕಟರಮಣ, ಶರಣ್, ವೆಂಕಟೇಶ ಮುಂತಾದವರು ಶಾಂತಲಾ ಮತ್ತು ರಂಗಪರಂಪರೆ ಟ್ರಸ್ಟ್‌ನ ನಾಟಕಗಳಲ್ಲಿ ಹೆಚ್ಚಾಗಿ ಅಭಿನಯಿಸಿ ಹಂತಹಂತವಾಗಿ ಬೆಳೆಯುತ್ತ ಬಂದಿದ್ದಾರೆ. ಪ್ರಸಾದನ ತಜ್ಞ ಅಲೆಮನೆ ಸುಂದರಮೂರ್ತಿ, ಕಲಾವಿದರಾದ ಆನಂದಮೂರ್ತಿ, ಹನುಮಕ್ಕ, ಕೆ.ವೆಂಕಟೇಶ, ಆನಂದಮೂರ್ತಿ, ಮಹದೇವ ಮುಂತಾದ ಹಿರಿಯರು ಇವರ ಜತೆಯೇ ಇದ್ದು ಮುನ್ನಡೆಸಿದ್ದಾರೆ.

ಐತಿಹಾಸಿಕ ನಾಟಕಗಳ ಆಯೋಜನೆಯಲ್ಲಿ ಪರಿಣತಿ ಪಡೆದಿರುವ ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾಸಂಘವು ರಂಗ ಪರಂಪರೆ ಟ್ರಸ್ಟ್‌ನ ಬೆನ್ನಿಗಿತ್ತು. ರಾಜ್ಯಮಟ್ಟದ ಐತಿಹಾಸಿಕ ನಾಟಕೋತ್ಸವ ಎಂದು ಘೋಷಿಸಿದ್ದರೂ- ತುಮಕೂರು, ಬೆಂಗಳೂರು ಮತ್ತು ಗ್ರಾಮಾಂತರ ಜಿಲ್ಲೆಯ ಹೊರತುಪಡಿಸಿದ ಹೆಚ್ಚಿನ ನಾಟಕಗಳಿರಲಿಲ್ಲ. ಆದರೆ ಗುಣಮಟ್ಟದ ನಾಟಕ ಪ್ರದರ್ಶನದಿಂದಾಗಿ ರಾಜ್ಯಮಟ್ಟದ ಎನ್ನುವ ಅಭಿದಾನವನ್ನು ಸಾರ್ಥಕಪಡಿಸಿಕೊಂಡವು. ಅತಿಹೆಚ್ಚು ಐತಿಹಾಸಿಕ ನಾಟಕ ಪ್ರದರ್ಶಿರುವ ಖ್ಯಾತಿ ಹೊಂದಿರುವ ಈ ತಂಡಗಳು ತಮ್ಮ ಹೆಸರಿಗೆ ತಕ್ಕಹಾಗೆ ನಾಟಕಗಳನ್ನು ಆಯೋಜಿಸಿದ್ದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT