ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್ ಬಳಗಕ್ಕೆ ಸ್ಪಿನ್ ಸವಾಲು

ಕುಕ್ ಬಳಗದ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ವಿರಾಟ್ ಬಳಗ ಸಿದ್ಧ
Last Updated 8 ನವೆಂಬರ್ 2016, 19:59 IST
ಅಕ್ಷರ ಗಾತ್ರ

ರಾಜ್‌ಕೋಟ್: ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಬಳಗವು ಈಗ ಇಂಗ್ಲೆಂಡ್ ತಂಡದ ಸವಾಲು ಎದುರಿಸಲಿದೆ.

ಹೋದ ತಿಂಗಳು ನ್ಯೂಜಿಲೆಂಡ್ ಎದುರಿನ ಸರಣಿಯನ್ನು 3–0ಯಿಂದ ಗೆದ್ದು ಅಗ್ರಪಟ್ಟ ಗಳಿಸಿದ್ದ ಭಾರತ ತಂಡ ವು ಈಗ ಐದು ಪಂದ್ಯಗಳ ಸರಣಿಯನ್ನು ಆಡಲಿದೆ.

2014ರಲ್ಲಿ ಇಂಗ್ಲೆಂಡ್ ತಂಡವು ಭಾರತಕ್ಕೆ ಸರಣಿ ಸೋಲಿನ ಕಹಿ ಉಣಿಸಿತ್ತು.

ಅದರ ಮುಯ್ಯಿ ತೀರಿಸಿ ಕೊಳ್ಳಲೂ ಆತಿಥೇಯ ತಂಡವು ಸಿದ್ಧ ವಾಗಿದೆ. ಸ್ಪಿನ್ ಬೌಲಿಂಗ್ ತಂತ್ರಗಾರಿಕೆ ಯೊಂದಿಗೆ ಪ್ರವಾಸಿ ತಂಡದ ಹೆಡೆಮುರಿ ಕಟ್ಟುವ ಉತ್ಸಾಹದಲ್ಲಿದೆ. ಕಿವೀಸ್ ಎದುರಿನ ಸರಣಿಯಲ್ಲಿ 27 ವಿಕೆಟ್‌ಪಡೆಯುವ ಮೂಲಕ ವಿಶ್ಚದ ಬೌಲಿಂಗ್ ಮತ್ತು ಆಲ್‌ರೌಂಡರ್‌ಗಳ ಪಟ್ಟಯಲ್ಲಿ ಮೊದಲ ಸ್ಥಾನ ಪಡೆದಿರುವ ರವಿಚಂದ್ರನ್ ಅಶ್ವಿನ್ ಅವರನ್ನು ಎದುರಿಸುವ ಆತಂಕದಲ್ಲಿ ಅಲಸ್ಟರ್ ಕುಕ್ ಬಳಗ ಇದೆ.  ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ವೇಗಿಗಳ ವಿಭಾಗದಲ್ಲಿ ಇಶಾಂತ್ ಶರ್ಮಾ ಮರಳಿದ್ದಾರೆ. ಅವರು ಬೌಲಿಂಗ್ ಸಾರಥ್ಯ ವಹಿಸುವ ಸಾಧ್ಯತೆ ಹೆಚ್ಚಿದೆ. 

ಒಂದೊಮ್ಮೆ ನಾಲ್ವರು ಬೌಲರ್‌ ಗಳೊಂದಿಗೆ  ತಂಡವು ಕಣಕ್ಕಿಳಿದರೆ ಉಮೇಶ್ ಯಾದವ್ ಅಥವಾ ಮೊಹ ಮ್ಮದ್ ಶಮಿ ಅವರಲ್ಲಿ ಒಬ್ಬರು ಇಶಾಂತ್‌ಗೆ ಜೊತೆ ನೀಡುವರು.

ಮೂವರು ಸ್ಪಿನ್ನರ್, ಇಬ್ಬರು ವೇಗಿಗಳ ಆಯ್ಕೆ ಮಾಡಿದರೆ, ಕಿವೀಸ್ ಎದುರಿನ ಏಕದಿನ ಸರಣಿಯ ‘ಹೀರೊ’ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ ಕೂಡ ಆಡುವ ಸಾಧ್ಯತೆ ಇದೆ. ಆದರೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಮೊದಲ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ.

ಗಂಭೀರ್–ವಿಜಯ್ ಆರಂಭ
ಗಾಯದಿಂದ ಚೇತರಿಸಿಕೊಳ್ಳದ ಕೆ.ಎಲ್. ರಾಹುಲ್ ಮತ್ತು ಶಿಖರ್ ಧವನ್ ಅವರು ಮೊದಲ ಎರಡು ಪಂದ್ಯಗಳಿಗೆ ಆಯ್ಕೆ ಆಗಿಲ್ಲ. ಇದ ರಿಂದಾಗಿ ತಂಡದಲ್ಲಿ ಸ್ಥಾನ ಪಡೆದಿರುವ ಅನುಭವಿ ಆಟಗಾರ ದೆಹಲಿಯ ಗೌತಮ್ ಗಂಭೀರ್ ಅವರು ಮುರಳಿ ವಿಜಯ್ ಅವರೊಂದಿಗೆ ಇನಿಂಗ್ಸ್ ಆರಂಭಿಸು ವುದು ಬಹುತೇಕ ಖಚಿತ ವಾಗಿದೆ.  ಸ್ಥಳೀಯ ಹೀರೊ ಚೇತೇಶ್ವರ್ ಪೂಜಾರ, ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ ಅವರು  ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲವಾಗಿದ್ದಾರೆ.

ಆದರೆ, ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರೋಹಿತ್ ಶರ್ಮಾ ಅವರು ಬ್ಯಾಟಿಂಗ್‌ಗೆ ಬರುತ್ತಿದ್ದ ಆರನೇ ಕ್ರಮಾಂಕದಲ್ಲಿ ಅವಕಾಶ ಪಡೆಯಲು ಕರ್ನಾಟಕದ ಕರುಣ್ ನಾಯರ್,  ಆಲ್‌ರೌಂಡರ್ ಜಯಂತ್ ಯಾದವ್ ಅಥವಾ ಪಾಂಡ್ಯ ಅವರ ನಡುವೆ ಪೈಪೋಟಿ ಇದೆ.

ಕಿವೀಸ್ ಎದುರು ಇಂದೋರ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಸ್ಥಾನ ಪಡೆದಿದ್ದರು. ಆದರೆ, ಅಂತಿಮ ಹನ್ನೊಂದರ ಪಟ್ಟಿಯಲ್ಲಿ ಅವರು ಅವಕಾಶ ಪಡೆದಿರಲಿಲ್ಲ. ಇಲ್ಲಿ ಪದಾರ್ಪಣೆಯ ನಿರೀಕ್ಷೆಯಲ್ಲಿದ್ದಾರೆ. ಇದೇ ಮೊದಲ ಬಾರಿ ಟೆಸ್ಟ್‌ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿರುವ ರಾಜ್‌ಕೋಟ್ ಅಂಗಳದ ಪಿಚ್ ಮೊದಲ ಎರಡು ದಿನ ವೇಗಿಗಳಿಗೆ ನೆರವಾಗಲಿದೆ. ಆದ್ದರಿಂದ ಮಧ್ಯಮವೇಗಿ ಆಲ್‌ರೌಂಡರ್‌ಗೆ  ಅವಕಾಶ ಲಭಿಸುವ ಸಾಧ್ಯತೆ ಹೆಚ್ಚು.

ಕುಕ್ ಬಳಗಕ್ಕೆ ಸವಾಲು
ಹೋದ ವಾರ ಬಾಂಗ್ಲಾದಲ್ಲಿ ಸ್ಪಿನ್‌ ದಾಳಿಯ ಎದುರು ಸೋಲನುಭವಿಸಿ ಬಂದಿರುವ ಅಲಸ್ಟರ್ ಕುಕ್ ಬಳಗಕ್ಕೆ ಆರ್. ಆಶ್ವಿನ್ ಮತ್ತು ಜಡೇಜ ಅವರ ಸವಾಲು ಎದುರಿಸಿ ನಿಲ್ಲುವ ಒತ್ತಡ ಎದುರಿಸುತ್ತಿದೆ. ಕುಕ್, ಜೋ ರೂಟ್ ಮತ್ತು ಜಾನಿ ಬೆಸ್ಟೊ ಅವರಿಗೆ ಭಾರತದಲ್ಲಿ ಆಡಿದ ಅನುಭವ ಇದೆ. ವೇಗದ ಬೌಲರ್ ಸ್ಟುವರ್ಟ್ ಬ್ರಾಡ್, ಗೆರೆತ್ ಬೆಟ್ಟಿ, ಸ್ಪಿನ್ನರ್ ಮೊಯಿನ್ ಅಲಿ, ಆದಿಲ್ ರಶೀದ್ ಅವರು ಬೌಲಿಂಗ್ ವಿಭಾಗದ ಹೊಣೆ ನಿಭಾಯಿಸಲಿದ್ದಾರೆ.

ವೇಗಿ ಜೇಮ್ಸ್ ಆ್ಯಂಡರ್ಸನ್ ಅವರು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಆದರೆ, ಮೊದಲ ಪಂದ್ಯದಲ್ಲಿ ಅವರು ಆಡುತ್ತಿಲ್ಲ.
19 ವರ್ಷದ ಬ್ಯಾಟ್ಸ್‌ಮನ್ ಹಸೀಬ್ ಹಮೀದ್ ಅವರು ಇಂಗ್ಲೆಂಡ್ ಪರ ಪದಾರ್ಪಣೆ ಮಾಡುವುದು ಖಚಿತ ವಾಗಿದೆ. ಈ ಸರಣಿಯನ್ನು ಸಮ ಮಾಡಿ ಕೊಂಡರೂ ಐಸಿಸಿ ಅಗ್ರಪಟ್ಟದಲ್ಲಿ ಭಾರತ ಮುಂದುವರಿಯಲಿದೆ. ಆದರೆ, ಒಂದೊಮ್ಮೆ ಸೋತರೆ. ಮತ್ತೆ ಎರಡನೇ ಸ್ಥಾನಕ್ಕೆ ಜಾರುವ ಸಾಧ್ಯತೆ ಇದೆ.  

ತವರಿನ ಅಂಗಳದಲ್ಲಿ ಪೂಜಾರ ಮತ್ತು ಜಡೇಜ

ನ್ಯೂಜಿಲೆಂಡ್ ಎದುರಿನ ಸರಣಿ ಯಲ್ಲಿ  ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಲಾತ್ಮಕ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಮತ್ತು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು ತಮ್ಮ ತವರಿನ ಅಂಗಳದಲ್ಲಿ ಟೆಸ್ಟ್ ಪಂದ್ಯ ಆಡಲಿದ್ದಾರೆ.

ಇವರಿಬ್ಬರೂ ಆಟಗಾರರು ಸೌರಾಷ್ಟ್ರ ತಂಡದಲ್ಲಿ ಆಡುತ್ತಾರೆ. ಅದರಲ್ಲೂ ಪೂಜಾರ ಅವರಿಗೆ ರಾಜ್‌ಕೋಟ್ ತವರೂರು.
ಇದೇ ಮೊದಲ ಬಾರಿಗೆ ಇಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ. ಅದರಲ್ಲಿ ತಮ್ಮ ವಿಭಾಗದ ಇಬ್ಬರು ಆಟಗಾರರು ಆಡುವುದನ್ನು ನೋಡಲು ಇಲ್ಲಿಯ ಜನರು ತುದಿಗಾಲಿನಲ್ಲಿನಿಂತಿದ್ದಾರೆ.

ತಂಡಗಳು ಇಂತಿವೆ
ಭಾರತ: 
ವಿರಾಟ್ ಕೊಹ್ಲಿ (ನಾಯಕ), ಗೌತಮ್ ಗಂಭೀರ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಕರುಣ್ ನಾಯರ್, ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನಿ, ವೃದ್ಧಿಮಾನ್ ಸಹಾ (ವಿಕೆಟ್‌ ಕೀಪರ್), ರವೀಂದ್ರ ಜಡೇಜ, ಮೊಹ ಮ್ಮದ್ ಶಮಿ, ಇಶಾಂತ್ ಶರ್ಮಾ, ಅಮಿತ್ ಮಿಶ್ರಾ, ಉಮೇಶ್ ಯಾದವ್, ಮುಖ್ಯ ಕೋಚ್: ಅನಿಲ್ ಕುಂಬ್ಳೆ, ಬ್ಯಾಟಿಂಗ್ ಕೋಚ್: ಸಂಜಯ್ ಬಂಗಾರ್, ಫೀಲ್ಡಿಂಗ್ ಕೋಚ್: ಆರ್. ಶ್ರೀಧರ್.
ಇಂಗ್ಲೆಂಡ್:  ಅಲಸ್ಟರ್ ಕುಕ್ (ನಾಯಕ), ಹಸೀಬ್ ಹಮೀದ್, ಜೋ ರೂಟ್, ಬೆನ್ ಡಕೆಟ್, ಮೋಯಿನ್ ಅಲಿ, ಬೆನ್ ಸ್ಟೋಕ್ಸ್, ಜಾನಿ ಬೆಸ್ಟೊ (ವಿಕೆಟ್‌ಕೀಪರ್). ಕ್ರಿಸ್ ವೋಕ್ಸ್, ಆದಿಲ್ ರಶೀದ್, ಸ್ಟುವರ್ಟ್ ಬ್ರಾಡ್, ಗರೆತ್ ಬೆಟ್ಟಿ. ಅಂಪೈರ್‌ಗಳು: ಕುಮಾರ ಧರ್ಮಸೇನ (ಶ್ರೀಲಂಕಾ), ಕ್ರಿಸ್ ಗಫನಿ (ನ್ಯೂಜಿಲೆಂಡ್), ಟಿವಿ ಅಂಪೈರ್: ರಾಡ್ ಟಕ್ಕರ್, ರೆಫರಿ: ರಂಜನ್ ಮದುಗಲೆ (ಶರೀಲಂಕಾ
ಪಂದ್ಯದ ಆರಂಭ:  ಬೆಳಿಗ್ಗೆ 9.30ರಿಂದ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.

ಮುಖ್ಯಾಂಶಗಳು
* ತವರಿನ ಅಂಗಳದಲ್ಲಿ ಆಡಲಿರುವ ಪೂಜಾರ, ಜಡೇಜ

* ಅವಕಾಶದ ನಿರೀಕ್ಷೆಯಲ್ಲಿ ಕರುಣ್ ನಾಯರ್,  ಹಾರ್ದಿಕ್ ಪಾಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT