ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯುತ ಆಚರಣೆ: ಜಿಲ್ಲಾಡಳಿತ ನಿರಾಳ

ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಗೈರು; ಎಚ್ಚರಿಕೆ ಹೆಜ್ಜೆಯಿಟ್ಟ ಅಧಿಕಾರಿಗಳು
Last Updated 11 ನವೆಂಬರ್ 2016, 9:39 IST
ಅಕ್ಷರ ಗಾತ್ರ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರಿ ವಿರೋಧದ ನಡುವೆಯೂ ಮೂರು ಸ್ಥಳಗಳಲ್ಲಿ ನಿಗದಿತ ಸಮಯದಲ್ಲೇ ಟಿಪ್ಪು ಜಯಂತಿಯನ್ನು ಜಿಲ್ಲಾಡಳಿತ ಶಾಂತಿಯುತವಾಗಿ ಆಚರಿಸುವ ಮೂಲಕ ನಿರಾಳವಾಯಿತು.
 
ರಾಜ್ಯ ಸರ್ಕಾರ ಎರಡನೇ ವರ್ಷದ ಟಿಪ್ಪು ಜಯಂತಿಯನ್ನು ನವೆಂಬರ್‌ 10ರಂದು ಆಚರಣೆ ಮಾಡುವುದಾಗಿ ಘೋಷಣೆ ಮಾಡುತ್ತಿದ್ದಂತೆಯೇ ಈ ಬಾರಿಯೂ ಕೊಡಗಿನಲ್ಲಿ ಆಕ್ರೋಶದ ಕಟ್ಟೆಯೊಡೆಯಿತು.
 
‘ಟಿಪ್ಪು ಕೊಡವರ ಹತ್ಯೆ ನಡೆಸಿ, ಇಲ್ಲಿನ ದೇವಸ್ಥಾನಗಳನ್ನು ಸರ್ವನಾಶ ಮಾಡಿದ್ದ’ ಎಂಬ ಆರೋಪವನ್ನು ಮುಂದಿಟ್ಟುಕೊಂಡು ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಲು ಮುಂದಾದವು. ಕಳೆದ ವರ್ಷವೂ ಇಂತಹದ್ದೇ ಆರೋಪಗಳು ಕೇಳಿಬಂದು ಪರ, ವಿರೋಧ ವ್ಯಕ್ತವಾಗಿತ್ತು. ಇದನ್ನು ನಿರ್ಲಕ್ಷ್ಯಸಿದ್ದ ಜಿಲ್ಲಾಡಳಿತ ಕೈಸುಟ್ಟುಕೊಂಡಿತ್ತು. ಮಡಿಕೇರಿಯಲ್ಲಿ ಗಲಭೆ ನಡೆದು ಅಶಾಂತಿಗೆ ಕಾರಣವಾಗಿತ್ತು. ಆದರೆ, ಈ ಬಾರಿ ಜಿಲ್ಲಾಡಳಿತ ಅಂತಹ ತಪ್ಪು ಮರುಕಳಿಸದಂತೆ ಬಹಳ ಎಚ್ಚರಿಕೆ ವಹಿಸಿತ್ತು.
 
ನಾಲ್ಕು ತಿಂಗಳ ಹಿಂದೆ ಕೊಡಗು ಜಿಲ್ಲೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌ ಮೊದಲು ಬಂದು ಅಧಿಕಾರ ವಹಿಸಿಕೊಂಡರು. ಬಳಿಕ ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಆಗಮನವಾಯಿತು. ಮಡಿಕೇರಿಯಲ್ಲಿ ರಾಜೇಂದ್ರಪ್ರಸಾದ್‌ ಡಿವೈಎಸ್‌ಪಿ ಆಗಿದ್ದ ಕಾರಣ ಜಿಲ್ಲೆಯ ಸೂಕ್ಷ್ಮತೆ ಅರಿವಿತ್ತು.
 
ಆದರೆ, ಜಿಲ್ಲಾಧಿಕಾರಿ ಹೊಸಬರು. ಕಳೆದ ವರ್ಷದ ಕಹಿಘಟನೆ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿ ಭದ್ರತೆಯ ಬಗ್ಗೆ ಸಾರ್ವಜನಿಕರಿಗೂ ಆತಂಕವಿತ್ತು. ಇಬ್ಬರೂ ಅಧಿಕಾರಿಗಳು ತಿಂಗಳಿಂದ ಸಭೆಯ ಮೇಲೆ ಸಭೆ ನಡೆಸಿದರು. ಪರ ಹಾಗೂ ವಿರುದ್ಧವಿದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದರು. ಇದರ ಪರಿಣಾಮ ಟಿಪ್ಪು ಜಯಂತಿಯ ಶಾಂತಿಯುತ ಆಚರಣೆಗೆ ಕೊಡಗು ಜಿಲ್ಲೆ ಸಾಕ್ಷಿಯಾಯಿತು ಎಂಬುದು ಪ್ರಜ್ಞಾವಂತ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಸಾರ್ವಜನಿಕರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 
 
‘ಹಿಂದಿನ ವರ್ಷ ವಿರೋಧದ ಮಧ್ಯೆ ಆಹ್ವಾನ ಪತ್ರಿಕೆಯನ್ನು ಬೇಕಾಬಿಟ್ಟಿ ಹಚ್ಚಲಾಗಿತ್ತು. ಮೆರವಣಿಗೆ ಹಾಗೂ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟ ಕಾರಣ ಅನಾಹುತ ಸಂಭವಿಸಿದ್ದವು’ ಎಂಬ ಆರೋಪಗಳಿವೆ. ಆದರೆ, ಈ ಬಾರಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನೂ ಗೋಪ್ಯವಾಗಿರಿಸಿತು. ಮೆರವಣಿಗೆಗೆ ಅವಕಾಶ ನೀಡಲಿಲ್ಲ, ಮೂರು ದಿನಗಳ ಮೊದಲೇ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿತು. ಸೀಮಿತ ವ್ಯಕ್ತಿಗಳಿಗೆ ಮಾತ್ರ ಆಹ್ವಾನ ಪತ್ರಿಕೆ ಹಂಚಿ, ಅವರನ್ನು ಮಾತ್ರ ಆಹ್ವಾನಿಸಲಾಯಿತು. ಕಾರ್ಯಕ್ರಮವೂ ಅರ್ಧ ಗಂಟೆಯಲ್ಲಿ ಮುಕ್ತಾಯಗೊಂಡಿತು. 
 
ಕಳೆದ ವರ್ಷವೂ ವಿರೋಧವಿದ್ದರೂ ಭದ್ರತೆಗೆ ಪೊಲೀಸರೇ ಇರಲಿಲ್ಲ. ಆದರೆ, ಈ ಬಾರಿ ನಾಲ್ಕು ದಿನಗಳ ಮೊದಲೇ ಜಿಲ್ಲೆಗೆ 3 ಸಾವಿರದಷ್ಟು ಪೊಲೀಸ್‌ ಸಿಬ್ಬಂದಿಯ ಆಗಮನವಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಒಂದು ದಿವಸ ಮೊದಲೇ ಗಡಿಭಾಗದಲ್ಲಿ ವಾಹನ ಪ್ರವೇಶ ನಿರ್ಬಂಧಿಸಿ ಕಿಡಿಗೇಡಿಗಳು ಮಡಿಕೇರಿ ಒಳಪ್ರವೇಶಿಸದಂತೆ ಜಾಗೃತೆ ವಹಿಸಲಾಯಿತು.
 
ಕಳೆದ ವರ್ಷ ಜಿಲ್ಲಾಧಿಕಾರಿ, ಎಸ್‌ಪಿ ರಜೆಯ ಮೇಲೆ ತೆರಳಿದ್ದರು. ಕೊನೆಕ್ಷಣದಲ್ಲಿ ಎಸ್‌ಪಿ ಬಂದಿದ್ದರು ಎಂಬ ಆರೋಪ ಬಲವಾಗಿತ್ತು. ಆದರೆ, ಈ ಬಾರಿ ಜಿಲ್ಲಾಧಿಕಾರಿ, ಜಿಲ್ಲಾ ವರಿಷ್ಠಾಧಿಕಾರಿ ಸ್ಥಳದಲ್ಲಿದ್ದು ಬಂದೋಬಸ್ತ್‌ ನೋಡಿಕೊಂಡರು. ಜತೆಗೆ, ಸರ್ಕಾರದ ನಿರ್ದೇಶನದಂತೆ ಎಡಿಜಿಪಿ ಸುನಿಲ್‌ ಅಗರವಾಲ್‌ ಎರಡು ದಿನಗಳಿಂದ ಮಡಿಕೇರಿಯಲ್ಲೇ ಮೊಕ್ಕಾಂ ಹೂಡಿದ್ದರು. ಆದರೆ, ಜಿಲ್ಲಾ ಪಂಚಾಯಿತಿ ಸಿಒಇ ಚಾರುಲತಾ ಸೋಮಲ್‌ ಚಾರಣಕ್ಕೆಂದು ಬೆಟ್ಟವೇರಲು ಹೋದವರು ಇನ್ನೂ ಬಂದಿಲ್ಲ!
 
ಇನ್ನು ಬುಧವಾರ ಸಚಿವ ಸಂಪುಟ ಸಭೆ ನಡೆಸಿ, ಟಿಪ್ಪು ಜಯಂತಿ ಸರ್ಕಾರ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು. ಜಿಲ್ಲಾ ಉಸ್ತುವಾರಿ ಖುದ್ದು ಹಾಜರಿದ್ದು ಎಚ್ಚವಹಿಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದರು. ಆದರೂ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ ಕಾರ್ಯಕ್ರಮಕ್ಕೆ ಬರುವ ಪ್ರಯತ್ನ ಮಾಡಲಿಲ್ಲ! ಇನ್ನು ಇಡೀ ಜಿಲ್ಲೆಯಲ್ಲಿ ಬಿಜೆಪಿ ಹಿಡಿತ ಸಾಧಿಸಿದೆ.
 
ಸ್ವಲ್ಪಮಟ್ಟಿಗಾದರೂ ಈ ಹಿಡಿತ ಕಸಿದುಕೊಳ್ಳಬೇಕೆಂದು ಕಾಂಗ್ರೆಸ್‌ನ ವೀಣಾ ಅಚ್ಚಯ್ಯ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಲಾಗಿತ್ತು. ಅವರೂ ಸಹ ಜಿಲ್ಲಾಡಳಿತದ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಹೀಗಾಗಿ, ಸರ್ಕಾರದ ಈ ಕಾರ್ಯಕ್ರಮವನ್ನು ಸಮರ್ಥಿಸಿಕೊಳ್ಳಲು ಯಾರೂ ಇರಲಿಲ್ಲ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT