ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾವಾಹಿ ಪಾತ್ರಗಳ ಆವಾಹಿಸಿಕೊಂಡಾಗ...

ಕಟಕಟೆ–40
Last Updated 12 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಜಾನ್‌ಪಾಲ್ ನನ್ನ ಆತ್ಮೀಯ ಗೆಳೆಯ. ಸಿಕ್ಕಾಗಲೆಲ್ಲಾ ಗಂಟೆಗಟ್ಟಲೆ ಹರಟೆ ಹೊಡೆಯುವುದೆಂದರೆ ನಮ್ಮಿಬ್ಬರಿಗೆ ಬಲು ಖುಷಿ. ಇತ್ತೀಚೆಗೆ ಸಿಕ್ಕಾಗ ನನ್ನನ್ನು ಮಾತಿಗೆಳೆದು, ‘ನನ್ನ ಪ್ರಕಾರ ಗಂಡಸರ ಹಿಂಸೆಯಿಂದ ಸಾಯುತ್ತಿರುವ ಹೆಂಗಸರ ಸಂಖ್ಯೆ ಜಾಸ್ತಿ ಅನಿಸುತ್ತೆ’ ಎನ್ನುತ್ತಾ ಅದನ್ನು ಬೆಂಬಲಿಸುವ ಅನೇಕ ಸಂಗತಿಗಳನ್ನು ಹೇಳಿದ.

ಸುಮ್ಮನಿದ್ದ ನನಗೆ, ‘ಹೇಳಿಕೇಳಿ ನೀನು ಕ್ರಿಮಿನಲ್ ಲಾಯರ್, ಹೇಳೋ ರಾಯ, ನನ್ನ ಮಾತು ಸರಿಯಿದೆಯಾ?’ ಎಂದು ಕೆಣಕಿದ.  ಅದಕ್ಕೆ ನಾನು, ‘ನಿನ್ನ ಮಾತು  ನಾನು ಸಂಪೂರ್ಣ ಒಪ್ಪುವುದಿಲ್ಲ. ಗಂಡಸರ ಸಾವಿಗೆ ಕಾರಣರಾಗುವ ಹೆಂಗಸರ ಪ್ರಮಾಣ ಏನೂ ಕಮ್ಮಿ ಇಲ್ಲ. ಗಂಡಸರನ್ನು ನೇರವಾಗಿ ಕೊಲ್ಲದಿದ್ದರೂ ಅವರನ್ನು ಜೀವಂತವಾಗಿ ಕೊಲ್ಲುತ್ತಿರುವ ಹೆಂಗಸರ ಬಗ್ಗೆ ನಾನು ಅರಿತಿದ್ದೇನೆ’ ಎಂದೆ.

ಹಾಗೆ ಹೇಳುತ್ತಿದ್ದಂತೆಯೇ ಥಟ್ಟನೆ ನೆನಪಾದದ್ದು ಭಗವಂತಪ್ಪನವರ ಪ್ರಕರಣ. ಆ ಪ್ರಕರಣವನ್ನು ಪ್ರಸ್ತಾಪಿಸುತ್ತಾ, ‘ನೋಡೋ ಜಾನ್‌,  ಗಂಡಸೋ, ಹೆಂಗಸೋ ಟೈಂ ಸರಿಯಿಲ್ಲದಿದ್ದರೆ ಎಲ್ಲವೂ ಎಡವಟ್ಟಾಗುತ್ತದೆ. ಅದೇ ರೀತಿ ಎಲ್ಲಾ ಸರಿ ಇರುವಾಗ ಮನುಷ್ಯ ಯಾಕೆ ತನ್ನ ಬದುಕನ್ನು ನಾಶ ಮಾಡಿಕೊಳ್ಳುತ್ತಾನೆ ಎಂಬ ಪ್ರಶ್ನೆಯೂ ಕಾಡುತ್ತದೆ’ ಎಂದೆ. ಭಗವಂತಪ್ಪನವರ ಪ್ರಕರಣವನ್ನು ಆತನಿಗೆ ವಿವರಿಸಿದೆ...

***
ಕುಗ್ರಾಮವೊಂದರಿಂದ ಬೆಂಗಳೂರಿಗೆ ಬಂದು ಕಷ್ಟಗಳ ನಡುವೆ ಎಂಜಿನಿಯರಿಂಗ್ ಮುಗಿಸಿ ಸರ್ಕಾರಿ ಇಲಾಖೆಯಲ್ಲಿ ಜೂನಿಯರ್ ಎಂಜಿನಿಯರ್ ಆದವರು ಭಗವಂತಪ್ಪ.ತಮ್ಮ ಮೇಲಧಿಕಾರಿಯೊಬ್ಬರ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ನೀಲಗಂಗಾಳೊಂದಿಗೆ ಮದುವೆ ಆಗಬೇಕಾಯಿತು. ಮದುಮಗಳ ಪೂರ್ವಾಪರ  ವಿಚಾರಿಸುವಷ್ಟು ಸಮಯಾವಕಾಶವೂ ಅವರಿಗೆ ಸಿಕ್ಕಿರಲಿಲ್ಲ. ಭಗವಂತಪ್ಪ 2003ರ ಹೊತ್ತಿಗೆ ಮುಖ್ಯ ಎಂಜಿನಿಯರ್ ಆದರು.

ಅಲ್ಲಿಯವರೆಗೆ ಅವರು ಬೆಂಗಳೂರಿನ ಹೊರಗೆ ಅನೇಕ ಸ್ಥಳಗಳಲ್ಲಿ ಜನಾನುರಾಗಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಎಲ್ಲೆಡೆ ಒಳ್ಳೆಯ ಹೆಸರು ಮಾಡಿದ್ದರು.  ಇಲಾಖೆಯ ಒಳಗೂ ಹೊರಗೂ ಎಲ್ಲರಿಗೂ ಬೇಕಾದವರಾಗಿದ್ದರು. ಆದರೆ ಮದುವೆಯಾಗುತ್ತಲೇ ದುರದೃಷ್ಟ  ಅವರನ್ನು ಕಾಡಿತ್ತು.

ಪೋಷಕರ ಅತಿ ಮುದ್ದಿನ ಮಗಳಾಗಿ ಬೆಳೆದ ನೀಲಗಂಗಾ  ಮೊಂಡು ಸ್ವಭಾವದ ಹೆಣ್ಣು. ಗಂಡನ ಒಳ್ಳೆಯತನವೇ ಆಕೆಗೆ ಬಂಡವಾಳವಾಯಿತು. ಭಗವಂತಪ್ಪ ಅವರಿಗೆ ಸಿಕ್ಕುವ ಸರ್ಕಾರಿ ಸೌಕರ್ಯ-ಸವಲತ್ತು  ಅನುಭವಿಸುತ್ತಾ ವಿಲಾಸಿ ಜೀವನ ನಡೆಸತೊಡಗಿದಳು. 18 ವರ್ಷದ ಮಗ ರಾಜೀವ ಅದೃಷ್ಟಕ್ಕೆ  ಅಪ್ಪನಂತೆ  ಒಳ್ಳೆಯ ಗುಣ ಬೆಳೆಸಿಕೊಂಡಿದ್ದ.

ಮುಖ್ಯ ಎಂಜಿನಿಯರ್ ಆಗಿ ಭಗವಂತಪ್ಪ ಬೆಂಗಳೂರಿಗೆ ಸಂಸಾರದೊಂದಿಗೆ ಬಂದಾಗ ಪತ್ನಿಯ ಹಟಕ್ಕೆ ಮಣಿದು ಆಕೆಯ ತವರು ಮನೆಗೆ ಹತ್ತಿರದಲ್ಲೇ ಮನೆ ಮಾಡಿದರು.ಭಗವಂತಪ್ಪ ಮನೆಯಿಂದ ಕಚೇರಿಗೆ ಹೊರಡುತ್ತಿದ್ದಂತೆ ನೀಲಗಂಗಾಳ ಅಪ್ಪ–ಅಮ್ಮ, ಮೂವರು ಸಹೋದರರು ಹಾಗೂ ಅವರ ಪತ್ನಿಯಂದಿರು ಇವರ ಮನೆಗೆ ಲಗ್ಗೆ ಹಾಕುತ್ತಿದ್ದರು. ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಎಲ್ಲವೂ ಇಲ್ಲೇ ನಡೆಯುತ್ತಿತ್ತು.

ಅದು ಅಷ್ಟಕ್ಕೇ ಸೀಮಿತವಾಗಿದ್ದರೆ ಯಾರಿಗೂ ತಕರಾರು ಇರುತ್ತಿರಲಿಲ್ಲವೇನೊ. ಆದರೆ ದಿನ ಕಳೆದಂತೆ ನೀಲಗಂಗಾ ಹಾಗೂ ಆಕೆಯ ತವರು ಮನೆಯವರ ಚಟುವಟಿಕೆಗಳು ಅತಿರೇಕಕ್ಕೆ ಹೋದವು. ಮನೆಯಲ್ಲಿ ನಡೆಯುವ ವಿಚಾರಗಳನ್ನು ರಾಜೀವ ಅಪ್ಪನ ಗಮನಕ್ಕೆ ತರುತ್ತಿದ್ದ. ಅಪ್ಪ– ಮಗ ತಮ್ಮ ಸಾತ್ವಿಕ ಸಿಟ್ಟನ್ನು ತೋರಿಸಿದಾಗಲೆಲ್ಲಾ ನೀಲಗಂಗಾ ಕೆಟ್ಟದಾಗಿ ವರ್ತಿಸುತ್ತಿದ್ದಳು. ಅಪ್ಪ– ಮಗ ಹಿಂಸೆಪಡುವುದನ್ನು ನೋಡಿ ವಿಲಕ್ಷಣ ಆನಂದ ಅನುಭವಿಸುತ್ತಿದ್ದಳು.

ಯಾವ ಕಾರಣವೂ ಇಲ್ಲದೆ ಇದ್ದಕ್ಕಿದ್ದಂತೆ ಅಳುವುದು, ಕೂದಲು ಕೆದರಿಕೊಂಡು ಕೂಗಾಡುವುದು, ಊಟ ಮಾಡದೆ ಹಟ ಮಾಡುವುದು, ಮನೆಯ ಗಾಜಿನ ವಸ್ತು, ಪಾತ್ರೆಗಳನ್ನು ಎಸೆಯುವುದು ಅಬ್ಬಾ... ಒಂದೇ ಎರಡೇ... ಒಟ್ಟಿನಲ್ಲಿ ಅವಳ ವರ್ತನೆಯನ್ನು ತಿದ್ದಿಕೊಳ್ಳುವಂತೆ ಯಾರೂ ಹೇಳುವಂತಿರಲಿಲ್ಲ. ಅದಕ್ಕೆ ಪೂರಕವಾಗಿ ಆಕೆಯ ಮೂಲಕ ಭೋಗ ಜೀವನ ಅನುಭವಿಸುತ್ತಿದ್ದ ತವರಿನವರು ಅವಳನ್ನು ತಲೆ ಮೇಲೆ ಇಟ್ಟುಕೊಂಡು ಮೆರೆಸುತ್ತಿದ್ದರು.

ಅಪ್ಪ– ಮಗ ಚೆನ್ನಾಗಿರುವುದನ್ನು ಸಹಿಸದ ನೀಲಗಂಗಾ, ‘ಮಗನಿಗೆ ಬ್ರೈನ್ ವಾಶ್ ಮಾಡಿ ನನ್ನ ವಿರುದ್ಧ ಎತ್ತಿಕಟ್ಟುತ್ತೀಯ’ ಎಂದು ಗಂಡನ ವಿರುದ್ಧ ಆರೋಪವನ್ನೂ ಮಾಡುತ್ತಿದ್ದಳು. ಇವೆಲ್ಲವುಗಳಿಂದಾಗಿ ಭಗವಂತಪ್ಪನವರು ಯಾರಿಗೂ ಹೇಳಿಕೊಳ್ಳಲಾರದ ತೊಳಲಾಟದಲ್ಲಿ ಸಿಕ್ಕಿಕೊಂಡರು. ಹೆಂಡತಿಯ ಚಲನವಲನ ನಿಯಂತ್ರಿಸಲಾಗದೆ ಅವಳ ವರ್ತನೆ ಬಗ್ಗೆ ಅವರಲ್ಲಿ ಅಗೋಚರ ಭಯ ಆವರಿಸಿಕೊಂಡಿತು. ನೋಡುನೋಡುತ್ತಿದ್ದಂತೆ ಸೋತ ಜೂಜುಗಾರನಂತಾದರು. 

ಒಂದು ರಾತ್ರಿ ಕ್ಷುಲ್ಲಕ ಕಾರಣಕ್ಕೆ ನೀಲಗಂಗಾ ಗಂಡನೊಂದಿಗೆ ಜಗಳವಾಡಿ ಪ್ರತ್ಯೇಕ ಕೋಣೆಯಲ್ಲಿ ಮಲಗಿದಳು. ಮರುದಿನ ಕೆಲಸದಾಕೆ ಗಟ್ಟಿಯಾಗಿ ಚೀರಿಕೊಂಡಾಗಲೇ ಗೊತ್ತಾದದ್ದು... ನೀಲಗಂಗಾ ನೇಣುಹಾಕಿಕೊಂಡಿದ್ದಾಳೆ ಎಂದು...

ವಿಷಯ ತಿಳಿಯುತ್ತಲೇ ಭಗವಂತಪ್ಪ ಹಾಗೂ ರಾಜೀವನ ಮೇಲೆ ಎರಗಲು ನೀಲಗಂಗಾ ತವರಿನ ಕಡೆಯವರು ಬಂದರು. ಇದನ್ನು ಮೊದಲೇ ಊಹಿಸಿದ್ದ ನೆರೆಮನೆಯವರು ಅಪ್ಪ– ಮಗನಿಗೆ ಏಟು ಬೀಳದಂತೆ ಕಾಪಾಡಿದರು.  ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಅಪ್ಪ– ಮಗ ಇಬ್ಬರನ್ನೂ ‘ಆತ್ಮಹತ್ಯೆಗೆ ಪ್ರೇರೇಪಣೆ’ ಆರೋಪಕ್ಕೆ ಗುರಿಯಾಗಿಸುವ ಹುನ್ನಾರ ನೀಲಗಂಗಾಳ ಸಂಬಂಧಿಕರಿಂದ ನಡೆಯಿತು.

ಇವರ ಕೌಟುಂಬಿಕ ಒಳಮರ್ಮಗಳನ್ನು ಬಲ್ಲ ಕೆಲವರು ಮಧ್ಯೆ ಪ್ರವೇಶಿಸಿ ಈ ಹುನ್ನಾರವನ್ನು ತಡೆಯಲು ಪ್ರಯತ್ನಿಸಿದರು. ಮಗ ರಾಜೀವನನ್ನು ಆರೋಪಿಯನ್ನಾಗಿಸದಂತೆ ನೋಡಿಕೊಳ್ಳಲು ಯಶಸ್ವಿಯಾದರೂ, ಭಗವಂತಪ್ಪ ಅವರು ಆರೋಪಿಯಾಗಲೇಬೇಕಾಯಿತು.

ಔಪಚಾರಿಕ ತನಿಖಾ ಕಾರ್ಯಗಳು ಮುಗಿದವು. ತನಿಖಾಧಿಕಾರಿ ಸಲೀಮ್, ಶವವನ್ನು ಅಂತ್ಯಸಂಸ್ಕಾರಕ್ಕಾಗಿ ಮಗನ ವಶಕ್ಕೆ ಕೊಟ್ಟರು. ಅದೇ ಜಾಗದಿಂದ ಭಗವಂತಪ್ಪ ಅವರನ್ನು ಬಂಧಿಸಿ ಬೇಡಿ ಸಮೇತ ಠಾಣೆಗೆ ಕರೆದೊಯ್ದರು ಪೊಲೀಸರು.

‘ನನ್ನ ಹೆಂಡತಿಯ ಶವಸಂಸ್ಕಾರವನ್ನಾದರೂ ಮಾಡಲು ಅವಕಾಶ ಕೊಡಿ’ ಎಂದು ಬೇಡಿಕೊಳ್ಳುತ್ತಿದ್ದ ಭಗವಂತಪ್ಪನವರ ಮಾತನ್ನೂ ಕೇಳಿಸಿಕೊಳ್ಳದೆ ಅಲ್ಲಿಂದ ಅವರನ್ನು ಕರೆದೊಯ್ದ ಹೃದಯವಿದ್ರಾವಕ ದೃಶ್ಯಕ್ಕೆ ಅಲ್ಲಿದ್ದವರೆಲ್ಲ ಮೂಕ ಸಾಕ್ಷಿಗಳಾದರು. ತನಿಖೆಯನ್ನು ಪೂರ್ಣಗೊಳಿಸಿದ ಸರ್ಕಲ್ ಇನ್‌ಸ್ಪೆಕ್ಟರ್‌ ಸಲೀಮ್, ಕೋರ್ಟಿಗೆ ದೋಷಾರೋಪ ಪಟ್ಟಿ ಸಲ್ಲಿಸಿದರು. ಅದರಲ್ಲಿ ಭಗವಂತಪ್ಪನವರ ಮಗ ರಾಜೀವನನ್ನು ಸಾಕ್ಷಿದಾರನನ್ನಾಗಿಸದೆ ಕೈಬಿಡಲಾಯಿತು! ನೀಲಗಂಗಾಳ ತವರಿನ ಎಲ್ಲರೂ ಭಗವಂತಪ್ಪನವರ ವಿರುದ್ಧ ಪ್ರಮುಖ ಸಾಕ್ಷಿದಾರರಾದರು.

ಸೆಷನ್ಸ್‌ ಕೋರ್ಟ್‌ನಲ್ಲಿ ವಿಚಾರಣೆ ಪ್ರಾರಂಭವಾಗುವ ಕಾಲಕ್ಕೆ ಆರೋಪಿಯ ಪರ ನಾನು ವಕಾಲತ್ತು ವಹಿಸಿದ್ದೆ. ಕಟಕಟೆಯಲ್ಲಿ ನಿಂತ ನೀಲಗಂಗಾಳ ಕಡೆಯವರು, ‘ಭಗವಂತಪ್ಪ ನೀಲಗಂಗಾಳನ್ನು ತೀವ್ರವಾಗಿ ಹಿಂಸಿಸುತ್ತಿದ್ದ. ಆಕೆಯ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಹರಣ ಮಾಡಿದ್ದ; ನೀಲಗಂಗಾಳ ಬಂಧು
ಬಳಗದವರನ್ನು ಆತ ಕಡೆಗಣಿಸುತ್ತಿದ್ದ. ಯಾರನ್ನೂ ಮನೆಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಹೆಂಡತಿಯ ಶೀಲವನ್ನು ಶಂಕಿಸುತ್ತಿದ್ದ...’ ಇತ್ಯಾದಿ ಆರೋಪ ಹೊರಿಸಿದರು.

ಈಗ ಅವರನ್ನು ಪಾಟಿ ಸವಾಲಿಗೆ ಒಳಪಡಿಸುವ ಸರದಿ ನನ್ನದಾಯಿತು. ನಾನು ನೀಲಗಂಗಾ ಹಾಗೂ ಆಕೆಯ ತವರು ಮನೆಯವರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದರಿಂದ ಅವರ ಬಗ್ಗೆ ಹಲವು ವಿಚಾರಗಳು ತಿಳಿದಿದ್ದವು.

ನೀಲಗಂಗಾ, ಮಹಿಳಾ ಕ್ಲಬ್ ಒಂದರಲ್ಲಿ ಸದಸ್ಯಳಾಗಿದ್ದು ಪ್ರತಿನಿತ್ಯ ಸಾಯಂಕಾಲ ಅಲ್ಲಿ ಇಸ್ಪೀಟು ಆಡುತ್ತಾ ಕಾಲಹರಣ ಮಾಡುತ್ತಿದ್ದ ಸಂಗತಿ ಈ ಸಂದರ್ಭದಲ್ಲಿ ಹೊರಬಂತು.

ಇದರಿಂದಾಗಿ ಮಗನ ವಿದ್ಯಾಭ್ಯಾಸದ ಕಡೆ ಆಕೆ ಗಮನ ಕೊಡುತ್ತಿರಲಿಲ್ಲ. ಇದರ ಬಗ್ಗೆ ಆಗಾಗ್ಗೆ ಭಗವಂತಪ್ಪ ಅಸಮಾಧಾನ ಕೂಡ ವ್ಯಕ್ತಪಡಿಸುತ್ತಿದ್ದರು ಎನ್ನುವ ವಿಚಾರ ತಿಳಿಯಿತು. ಸ್ವೇಚ್ಛಾಚಾರದ ಬದುಕೇ ಸ್ತ್ರೀಸ್ವಾತಂತ್ರ್ಯ ಎಂದು, ಗಂಡನ ಮೇಲಿನ ದಬ್ಬಾಳಿಕೆಯೇ ವಿಮೋಚನೆ ಎಂದು ಆಕೆ ಭಾವಿಸಿದ್ದಳು ಎನ್ನುವ ವಿಚಾರಗಳೂ ಹೊರ ಬಂದವು.

ಭಗವಂತಪ್ಪ ಕಾರ್ಯನಿಮಿತ್ತ ಬೇರೆಡೆ ಹೋದಾಗಲೆಲ್ಲಾ ಮನೆಯೇ ಕ್ಲಬ್ ಆಗಿಬಿಡುತ್ತಿತ್ತು; ಟಿ.ವಿ. ಧಾರಾವಾಹಿಗಳಲ್ಲಿನ ಖಳನಾಯಕಿಯರ ಪಾತ್ರಗಳೆಂದರೆ ಆಕೆಗೆ ಪ್ರೀತಿಯಾಗಿತ್ತು. ಆ ಪಾತ್ರಗಳನ್ನು ಆವಾಹಿಸಿಕೊಳ್ಳುತ್ತಿದ್ದಳು. ಅದನ್ನೇ ಕಲ್ಪಿಸಿಕೊಂಡು ಹಾಗೆಯೇ ವರ್ತಿಸುತ್ತಿದ್ದಳು.

‘ಕ್ರೈಂ’ ಧಾರಾವಾಹಿಗಳಿಗೆ ತನ್ನನ್ನೇ ಅರ್ಪಿಸಿಕೊಂಡುಬಿಡುತ್ತಿದ್ದಳು; ಒಟ್ಟಿನಲ್ಲಿ ಟಿ.ವಿ ಕಾರ್ಯಕ್ರಮಗಳು ಆಕೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಿ ಸಂವೇದನೆಯನ್ನು ಸಂಪೂರ್ಣ ಹಾಳುಮಾಡಿದ್ದುದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು; ಅವು ಅವಳಲ್ಲಿನ ಕ್ರೂರತನ ಹೆಚ್ಚುವಂತೆ ಮಾಡಿದ್ದವು; ಸಂಸಾರದಲ್ಲಿ ಬಿರುಕು ಹೆಚ್ಚಾಗಲು ಅವಕಾಶ ಮಾಡಿಕೊಟ್ಟಿದ್ದವು... ಹೀಗೆ ಆಕೆಯ ಎಲ್ಲಾ ವಿಚಾರಗಳನ್ನೂ ಕೋರ್ಟ್‌ ಗಮನಕ್ಕೆ ತರುವಲ್ಲಿ ಯಶಸ್ವಿಯಾದೆ.

ಇಷ್ಟೇ ಅಲ್ಲದೆ, ರಾತ್ರಿ ಹತ್ತು ಗಂಟೆಯ ನಂತರ ಮನೆಯ ನಾಯಿಯನ್ನು ಹಿಡಿದುಕೊಂಡು ವಾಕಿಂಗ್‌ಗೆ ಹೋಗುವುದನ್ನು ನೀಲಗಂಗಾ ಚಾಚೂ ತಪ್ಪದೆ ಮಾಡುತ್ತಿದ್ದಳು. ಹೀಗೆ ಮನೆಯಿಂದ ಹೊರಗೆ ಹೋದಾಗ ಮೂರು ಬಾರಿ ಸರಗಳ್ಳರು ಆಕೆಯ ಮೈಮೇಲಿನ ಸರವನ್ನು ಕಿತ್ತುಕೊಂಡುಹೋಗಿದ್ದರು.

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗುತ್ತಿದ್ದವು. ಪತ್ರಿಕೆಗಳಲ್ಲಿ ಆಕೆಯ ಹೆಸರು ಭಗವಂತಪ್ಪನವರ ಹೆಸರಿನೊಂದಿಗೆ ವರದಿಯಾಗುತ್ತಿತ್ತು.  ಇದರಿಂದ ಭಗವಂತಪ್ಪ ಅವರಿಗೆ ಮುಜುಗರ ಆಗುತ್ತಿತ್ತು. ಆದರೆ ನೀಲಗಂಗಾ ಮಾತ್ರ ಒಂದಿಷ್ಟೂ ಪಾಪಪ್ರಜ್ಞೆ ಇಲ್ಲದೆ ತನ್ನ ಹೆಸರನ್ನು ಪತ್ರಿಕೆಗಳಲ್ಲಿ ನೋಡಿ ಖುಷಿ ಪಡುತ್ತಿದ್ದಳು. ಸುಖದ ಭ್ರಾಂತಿ ಹುಟ್ಟಿಸುವ ಮದ್ದು ತಿಂದವಳಂತೆ ವಿಚಿತ್ರ ವರ್ತನೆಗಳನ್ನು ಮುಂದುವರಿಸುತ್ತಲೇ ಇದ್ದಳು. ಇದನ್ನೂ ಕೋರ್ಟ್‌ನಲ್ಲಿ ಹೇಳಿದೆ.

ದೋಷಾರೋಪ ಪಟ್ಟಿಯಲ್ಲಿ ರಾಜೀವನನ್ನು ಪೊಲೀಸರು ಸಾಕ್ಷಿದಾರನನ್ನಾಗಿ ಮಾಡದೇ ಇದ್ದರೂ ಆರೋಪಿಯ ಪರ ಸಾಕ್ಷಿದಾರನನ್ನಾಗಿಸಿ ನಾನು ವಿಚಾರಣೆ ಮಾಡಿದೆ.ಪಾಟಿಸವಾಲಿನಲ್ಲಿ ಇಲ್ಲಿಯವರೆಗೆ ಹೊರಬಂದಿದ್ದ ಅಂಶಗಳನ್ನು ಬೆಂಬಲಿಸುತ್ತಾ ಆತ ಹೇಳಿಕೆ ನೀಡಿದ. ತನ್ನ ತಾಯಿಯ ದುರ್ವರ್ತನೆ ಮತ್ತು ತಂದೆಯ ತಾಕಲಾಟಗಳ ಕುರಿತು ರಾಜೀವ ನೀಡಿದ ಹೇಳಿಕೆಗಳು ಭಗವಂತಪ್ಪ ಅವರ ನಿರಪರಾಧಿತನವನ್ನು ಎತ್ತಿಹಿಡಿಯುವಲ್ಲಿ ಸಂಪೂರ್ಣ ನೆರವಾದವು.

ನೀಲಗಂಗಾಳ ವರ್ತನೆ ಎಷ್ಟು ಮುಂದುವರಿದಿತ್ತು ಎಂದರೆ, ಈಕೆಯ ‘ದರ್ಬಾರು’ ನೋಡಿದ್ದ ಕೆಲವರು, ಭಗವಂತಪ್ಪನವರು ಕಪ್ಪುಹಣ ಕೂಡಿಟ್ಟಿರಬಹುದು ಎಂದು ಸಂಶಯಿಸಿ ತೆರಿಗೆ ಇಲಾಖೆಗೆ ಮೂಗರ್ಜಿ ಸಲ್ಲಿಸಿದ್ದರು! ಈ ಅರ್ಜಿಯನ್ನು ಆಧರಿಸಿ ತೆರಿಗೆ ಅಧಿಕಾರಿಗಳು ಮನೆ ಮೇಲೆ ದಾಳಿಯನ್ನೂ ಮಾಡಿದ್ದರು. ಆದರೆ ಭಗವಂತಪ್ಪ ಅವರು ತಮ್ಮ ಆದಾಯಕ್ಕೆ ಮೀರಿದ ಯಾವುದೇ ಆಸ್ತಿಯನ್ನು ಮಾಡಿಲ್ಲದಿರುವುದು ಗೊತ್ತಾಗಿತ್ತು.  ಆದರೆ ದಾಳಿಯ ವಿಷಯ ಪತ್ರಿಕೆಗಳಲ್ಲಿ ಭಗವಂತಪ್ಪನವರ ಭಾವಚಿತ್ರದೊಂದಿಗೆ ಪ್ರಕಟವಾಗಿ ಅವರನ್ನು ಮತ್ತಷ್ಟು ಕುಗ್ಗಿಸಿತ್ತು.

ಇದಾದ ಮೇಲೆ ಭಗವಂತಪ್ಪ ಅವರನ್ನು ಹತ್ತಿರದಿಂದ ಬಲ್ಲವರು, ಅವರ ಹಿತೈಷಿಗಳು ಮತ್ತು ಬಂಧುಗಳು ನೀಲಗಂಗಾಳನ್ನು ಖಾರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು.‘ಭಗವಂತಪ್ಪ ದೇವರಂಥ ಮನುಷ್ಯ, ಅವನಿಗಾಗುವ ಅವಮಾನಕ್ಕೆಲ್ಲಾ ನೀನೇ ಕಾರಣ’ ಎಂದು ಆಕೆಯ ವರ್ತನೆಯನ್ನು  ಖಂಡಿಸಿದ್ದರು. ಎಲ್ಲರೂ ತನ್ನತ್ತ ಬೊಟ್ಟು ಮಾಡುತ್ತಿದ್ದುದು ನೀಲಗಂಗಾಳನ್ನು ಕುಗ್ಗಿಸತೊಡಗಿತು.

ತನ್ನ ಪರವಾಗಿ ಯಾರೊಬ್ಬರೂ ನಿಲ್ಲದೆ ಇದ್ದುದರಿಂದ ಆಕೆಗೆ ಗರ್ವಭಂಗವಾಗಿತ್ತು. ಜನರೆಲ್ಲಾ ತನ್ನನ್ನು ಹೊಗಳಬೇಕು, ತನ್ನ ಸಿರಿವಂತಿಕೆಯನ್ನು ಮೆಚ್ಚಬೇಕು, ಎಲ್ಲರೂ ತನ್ನತ್ತಲೇ ಗಮನಹರಿಸಬೇಕು ಎಂಬ ಹುಚ್ಚು ಮನಸ್ಥಿತಿಯ ಆಕೆಗೆ ಈ ಅವಮಾನವನ್ನು ಸಹಿಸಿಕೊಳ್ಳುವುದು ಅಸಹನೀಯವಾಯಿತು. ತನ್ನ ಗರ್ವದ ಸ್ಫೋಟಕ್ಕೆ ತಾನೇ ಬಲಿಯಾದಳು, ನೇಣಿಗೆ ಶರಣಾದಳು.

ಸಾಕ್ಷ್ಯಾಧಾರಗಳನ್ನು ಗಮನಿಸಿದ ಸೆಷನ್ಸ್ ಕೋರ್ಟ್‌, ಭಗವಂತಪ್ಪ ಅವರನ್ನು ದೋಷಮುಕ್ತಗೊಳಿಸಿತು. ಅವರು ನಿರ್ದೋಷಿಯೆಂಬ ಸತ್ಯದ ಅರಿವು ಆಗಿಯೋ ಏನೋ ಸರ್ಕಾರ (ಪ್ರಾಸಿಕ್ಯೂಷನ್‌) ಕೂಡ ಸೆಷನ್ಸ್‌ ಕೋರ್ಟ್‌ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಿಲ್ಲ.

ಪತ್ನಿ ಎಷ್ಟೇ ಹಿಂಸೆ ಕೊಟ್ಟಿದ್ದರೂ ಆಕೆಯನ್ನು ಕಳೆದುಕೊಂಡ ನೋವಿನ ಛಾಯೆ ಭಗವಂತಪ್ಪ ಅವರಲ್ಲಿ ಕಾಣುತ್ತಿತ್ತು. ಅದನ್ನು ಕಂಡ ನಾನು ಕೋರ್ಟಿನಿಂದ ಹೊರಬರುತ್ತಿದ್ದಂತೆಯೇ, ‘ನೋಡಿ,  ಬದುಕಿದ್ದೂ ಪ್ರಯೋಜನ ಇಲ್ಲದವರು, ಬೇರೆಯವರ ನೆಮ್ಮದಿ ಕಸಿದುಕೊಂಡವರು ಇದ್ದರೆಷ್ಟು, ಬಿಟ್ಟರೆಷ್ಟು... ಇಂಥವರ ಸಾವಿನ ಬಗ್ಗೆ ಇನಿತೂ ಬೇಸರಪಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ’ ಎಂದು ಸಮಾಧಾನಪಡಿಸತೊಡಗಿದೆ. ಅದಕ್ಕೆ ಭಗವಂತಪ್ಪನವರು ವಿಷಾದದ ನಗೆಬೀರಿ ಮನೆಯತ್ತ ನಡೆದರು...

***
ಈ ಘಟನೆಯನ್ನು ಹೇಳುತ್ತಾ ನಾನು ಜಾನ್‌ಪಾಲ್ ಕಡೆಗೆ ತಿರುಗಿದೆ. ಅವನು  ಎರಡೂ ಕೈಗಳಿಂದ ತನ್ನ ತಲೆಯನ್ನು ಭದ್ರವಾಗಿ ಅಮುಕಿಕೊಂಡು ಘಟನೆಯನ್ನು ಜೀರ್ಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ.

ಹೆಸರುಗಳನ್ನು ಬದಲಾಯಿಸಲಾಗಿದೆ

(ಲೇಖಕ ಹೈಕೋರ್ಟ್‌ ವಕೀಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT