ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲದ ನಡೆ ಸೈರಸ್

ವ್ಯಕ್ತಿ
Last Updated 13 ನವೆಂಬರ್ 2016, 5:13 IST
ಅಕ್ಷರ ಗಾತ್ರ

ನಾಲ್ಕು ವರ್ಷಗಳ ಹಿಂದೆ ಸೈರಸ್ ಮಿಸ್ತ್ರಿ ‘ಟಾಟಾ ಸನ್ಸ್ ಕಂಪೆನಿ’ಗಳ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದಾಗ, ಒಳಗಿದ್ದ ಅನೇಕರು ಖುಷಿಪಟ್ಟಿದ್ದರು. ‘ತನ್ನನ್ನು ತಾನೇ ಗೇಲಿ ಮಾಡಿಕೊಂಡು ನಗುವಷ್ಟು ಭೂಮಿತೂಕದ ಮನುಷ್ಯ’ ಎಂಬ ಅಭಿಪ್ರಾಯ ಕೇಳಿಬಂದಿತ್ತು. ಇಡೀ ಉದ್ಯಮ ಲೋಕ ಬೆರಗಿನಿಂದ ನೋಡಿದ ಆಯ್ಕೆ ಅದು.

‘ವಿಕಿಪೀಡಿಯಾ’ದ ವೆಬ್‌ಪುಟಗಳಲ್ಲಿ ಅದುವರೆಗೆ ಅವರನ್ನು ಕುರಿತ ಒಂದು ಸಾಲೂ ಇರಲಿಲ್ಲ. ಮರುದಿನವೇ ಅವರ ವ್ಯಕ್ತಿ ಪರಿಚಯದ ಪುಟ ಅಲ್ಲಿ ಸಿದ್ಧವಾಯಿತು. ಇದೇ ವರ್ಷದ ಅಕ್ಟೋಬರ್ 24ರಂದು ‘ವಿಕಿಪೀಡಿಯಾ’ದ ಸೈರಸ್ ಮಿಸ್ತ್ರಿ ಪುಟಕ್ಕೆ, ‘ಅಧ್ಯಕ್ಷ ಹುದ್ದೆಯಿಂದ ಸೈರಸ್ ಮಿಸ್ತ್ರಿ ಅವರನ್ನು ತೆಗೆದುಹಾಕಲು ಟಾಟಾ ಸಮೂಹದ ನಿರ್ದೇಶಕರೆಲ್ಲಾ ಇಂದು ತೀರ್ಮಾನಿಸಿದರು’ ಎಂಬ ಸಾಲು ಸೇರ್ಪಡೆಯಾಯಿತು.

ಆಗ ಸೈರಸ್ ಮನದಲ್ಲಿ ನಿಜಕ್ಕೂ ಚಡಪಡಿಕೆ ಇತ್ತು. ತನ್ನನ್ನು ಸಮರ್ಥಿಸಿಕೊಳ್ಳುವ ಒಂದೂ ಅವಕಾಶ ಕೊಡದೆ ಹಾಗೆ ಹುದ್ದೆಯಿಂದ ಕಿತ್ತುಹಾಕಿದ್ದು ಸರಿಯಲ್ಲ ಎಂದು ಅವರು ಐದು ಪುಟಗಳ ಇ–ಮೇಲ್ ಬರೆದರು. ಕಂಪೆನಿಯ ವೆಬ್‌ಪುಟಗಳಿಂದ ತಾತ್ಕಾಲಿಕವಾಗಿ ಅವರ ಸಂದರ್ಶನವೊಂದರ ಲಿಂಕ್ ಕಿತ್ತುಹಾಕಿದ್ದೂ ಮೊನ್ನೆ ಮೊನ್ನೆ ಸುದ್ದಿಯೆ.

ಸೈರಸ್ ಮಿಸ್ತ್ರಿ ಹುಟ್ಟಿದ್ದು 1966ರ ಜುಲೈ 4ರಂದು. ಮುಂಬೈನ ಪಾರ್ಸಿ ಕುಟುಂಬದಲ್ಲಿ ಜನಿಸಿದ ಅವರು ಐರಿಷ್‌ ವ್ಯಾಪಾರಿ. ಅಲ್ಲಿನ ಪೌರತ್ವ ಇರುವ ಅವರಿಗೆ ಲಂಡನ್, ಪುಣೆ, ಮುಂಬೈ ಎಲ್ಲೆಡೆಯೂ ಸ್ವಂತ ಮನೆಗಳಿವೆ. ತನ್ನನ್ನು ತಾನು ‘ಜಾಗತಿಕ ಮನುಷ್ಯ’ ಎಂದೇ ಅವರು ಕರೆದುಕೊಳ್ಳುವುದು.

ಅವರು ಟಾಟಾ ಸಮೂಹದ ಆರನೇ ಅಧ್ಯಕ್ಷ. ನವರೋಜಿ ಸಕಲತ್‌ವಾಲಾ ಅವರನ್ನು ಹೊರತುಪಡಿಸಿದರೆ ಹೆಸರಿನ ಜತೆ ‘ಟಾಟಾ’ ಎಂಬ ಕುಟುಂಬ ನಾಮಧೇಯವಿಲ್ಲದ ಅಧ್ಯಕ್ಷ ಎನಿಸಿಕೊಂಡಿದ್ದು ಇವರೇ.

ಲಂಡನ್‌ನ ಇಂಪೀರಿಯಲ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದ ಸೈರಸ್ ಮಿಸ್ತ್ರಿ ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡೇ  ಹುಟ್ಟಿದವರು.ಶಾಪೂರ್ಜಿ ಪಲ್ಲೊಂಜಿ ಸಮೂಹ ದೇಶದ ಶ್ರೀಮಂತ ಕಂಪೆನಿಗಳ ಗುಚ್ಛಗಳಲ್ಲೊಂದು. ನಿರ್ಮಾಣ ಕಂಪೆನಿಗಳ ದಿಗ್ಗಜರಲ್ಲಿ ಒಬ್ಬರೆನಿಸಿಕೊಂಡ ಪಲ್ಲೊಂಜಿ ಶಾಪೂರ್ಜಿ ಮಿಸ್ತ್ರಿ ಅವರ ಕಿರಿಮಗ ಸೈರಸ್.

ಟಾಟಾ ಸಮೂಹದ ಅಧ್ಯಕ್ಷ ಗಾದಿಗೆ ಬರುವ ಮೊದಲು ಸೈರಸ್, ಶಾಪೂರ್ಜಿ ಪಲ್ಲೊಂಜಿ ಅಂಡ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 2005ರಲ್ಲಿ ‘ಟಾಟಾ ಸನ್ಸ್’ ನಿರ್ದೇಶಕ ಮಂಡಳಿಯಿಂದ ತಂದೆ ನಿವೃತ್ತರಾದ ನಂತರ ಆ ಕುರ್ಚಿ ಮೇಲೆ ಕೂರುವ ಅವಕಾಶ ಸೈರಸ್ ಅವರಿಗೆ ಒಲಿದುಬಂದದ್ದು.

‘ಟಾಟಾ ಸನ್ಸ್’ನಲ್ಲಿ ಅತಿ ಹೆಚ್ಚು ಷೇರು ಹೊಂದಿದ ಸಮೂಹ ಶಾಪೂರ್ಜಿ ಪಲ್ಲೊಂಜಿ; ಅದರ ಪ್ರಮಾಣ ಶೇ 18ರಷ್ಟು. ‘ಟಾಟಾ ಎಲ್ಕ್‌ಸಿ’ ಕಂಪೆನಿಯ ಮಂಡಳಿಯಲ್ಲಿ ಕಾರ್ಯನಿರ್ವಾಹಕೇತರ ಸ್ಥಾನದಲ್ಲಿ ಇದ್ದ ಅವರಿಗೆ, ಇತರ ಕಂಪೆನಿಗಳಲ್ಲಿಯೂ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವವಿದೆ. ‘ಬ್ರೀಚ್ ಕ್ಯಾಂಡಿ’ ಆಸ್ಪತ್ರೆ ಟ್ರಸ್ಟಿಯ ಗೌರವವೂ ಅವರದ್ದು.

ಟಾಟಾ ಸಮೂಹದಲ್ಲಿ ಮಹತ್ವದ ಹುದ್ದೆಯಲ್ಲಿ ಕೆಲಸ ಮಾಡುವ ಮೊದಲೇ ಸ್ವಂತ ಕಂಪೆನಿಗಳಲ್ಲಿ ಕೈಪಳಗಿಸಿಕೊಂಡವರು ಸೈರಸ್. ವ್ಯಾಪಾರ ಯೋಜನೆಗಳನ್ನು ಹೊಸೆಯುವುದರಲ್ಲಿ, ಸಂಕಷ್ಟ ನಿವಾರಣೆಯ ಮಾರ್ಗೋಪಾಯಗಳನ್ನು ಯೋಚಿಸುವುದರಲ್ಲಿ ನಿಸ್ಸೀಮರೆನಿಸಿಕೊಂಡ ಅವರು, ಬಂಡವಾಳ ಹೂಡಿಕೆಯ ಕಾರ್ಯತಂತ್ರ ರೂಪಿಸಿ ಯಶಸ್ವಿಯಾದದ್ದೂ ಇದೆ. ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೊಸದಾರಿಗಳನ್ನು ಹುಡುಕಿದ ಚುರುಕುಮತಿ ಅವರು.

‘ಸ್ಟರ್ಲಿಂಗ್ ಅಂಡ್ ವಿಲ್ಸನ್’ ಕಂಪೆನಿಯಲ್ಲಿ ಶಾಪೂರ್ಜಿ ಪಲ್ಲೊಂಜಿ ಸಮೂಹದ ಶೇ 56ರಷ್ಟು ಷೇರುಗಳಿದ್ದವು. ಟಾಟಾ ಸಮೂಹದ ಅಧ್ಯಕ್ಷರಾಗಿ ಸೈರಸ್ ಆಯ್ಕೆಯಾದಾಗ, ‘ಸ್ಟರ್ಲಿಂಗ್ ಅಂಡ್ ವಿಲ್ಸನ್’ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಖುರ್ಷೆದ್ ದಾರುವಾಲಾ, ‘ಅವರು ಉದ್ಯಮದ ಉದ್ಧಾರಕ್ಕಾಗಿ ಟೊಂಕ ಕಟ್ಟಿದವರು.

ನಾಯಕತ್ವದ ಗುಣಗಳ ಪಾಕದಲ್ಲಿ ಅದ್ದಿ ತೆಗೆದಂಥ ವ್ಯಕ್ತಿತ್ವ ಅವರದ್ದು’ ಎಂದು ಹೊಗಳಿದ್ದರು. 2003ರಲ್ಲಿ ಸೈರಸ್ ಮಿಸ್ತ್ರಿ ಅವರು ಸ್ಟರ್ಲಿಂಗ್ ಅಂಡ್ ವಿಲ್ಸನ್ ಆದಾಯ ಗಳಿಕೆ ಹೆಚ್ಚಿಸಿಕೊಳ್ಳಲು ಕೆಲವು ಮಾರ್ಗೋಪಾಯಗಳನ್ನು ಸೂಚಿಸಿದ್ದರು. ₹ 50 ಕೋಟಿ ವಹಿವಾಟು ನಡೆಸುತ್ತಿದ್ದ ಕಂಪೆನಿ ₹ 2000 ಕೋಟಿ ವಹಿವಾಟು ನಡೆಸುವಷ್ಟರ ಮಟ್ಟಿಗೆ ಬೆಳೆಯಿತು.

ನಷ್ಟದಲ್ಲಿದ್ದ ‘ಆಫ್ಕನ್ಸ್ ಇನ್‌ಫ್ರಾಸ್ಟ್ರಕ್ಚರ್‌’ನ ಶೇ 53.96ರಷ್ಟು ಷೇರುಗಳನ್ನು ಶಾಪೂರ್ಜಿ ಪಲ್ಲೊಂಜಿ ಸಮೂಹ ಕೊಂಡುಕೊಂಡದ್ದು 2000ದಲ್ಲಿ. 2011ರ ಹೊತ್ತಿಗೆ ಆ ಕಂಪೆನಿಯ ಒಟ್ಟು ಆದಾಯ 2,893 ಕೋಟಿಗೆ ಏರಿತ್ತು. ಇದು ಶೇ 21ರಷ್ಟು ಪ್ರಗತಿ ಎಂದು ಆಗ ಹೇಳಿಕೊಂಡಿದ್ದ ಕಂಪೆನಿ, ಅದಕ್ಕೆ ಸೈರಸ್ ಮಿದುಳೂ ಕಾರಣ ಎಂದಿತ್ತು.

ತಮ್ಮ ಕುಟುಂಬದ ಕಂಪೆನಿಗಳ ಸಮೂಹಕ್ಕೆ ಸೈರಸ್ ಕೆಲಸ ಮಾಡಲು ಸೇರಿದ್ದು 1991ರಲ್ಲಿ. ಮೊದಲು ನಿರ್ದೇಶಕ ಆಗಿದ್ದ ಅವರು ಮೂರೇ ವರ್ಷಗಳಲ್ಲಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಏರಿದರು. ಇಷ್ಟೆಲ್ಲಾ ಹಿನ್ನೆಲೆ ಇರುವ ಅವರು ಟಾಟಾ ಸಮೂಹದ ಅಧ್ಯಕ್ಷರಾಗಿ ಆಯ್ಕೆಯಾದಾಗ ಎದುರಲ್ಲಿ ಸವಾಲುಗಳಿದ್ದವು.

ನಷ್ಟದಲ್ಲಿದ್ದರೂ ಭಾವನಾತ್ಮಕ ಕಾರಣಕ್ಕೆ ‘ನ್ಯಾನೊ’ ಕಾರನ್ನು ಉಳಿಸಿಕೊಂಡ ಸಮೂಹದ ಎಷ್ಟೋ ಜನರ ನಿರ್ಧಾರಕ್ಕೆ ತಕರಾರು ತೆಗೆದು ಸುದ್ದಿಯಾಗಿದ್ದ ಸೈರಸ್, 150 ವರ್ಷಗಳ ‘ಕಾರ್ಯ ಸಂಸ್ಕೃತಿ’ಯನ್ನೇ ಬುಡಮೇಲು ಮಾಡಿ ಟಾಟಾ ದಿಗ್ಗಜರ ಕೆಂಗಣ್ಣಿಗೆ ಗುರಿಯಾದರು. ಸೈರಸ್ ಸಲಹೆಯನ್ನೂ ಲೆಕ್ಕಿಸದೆ ರತನ್‌ ಟಾಟಾ ‘ಟೆಟ್ಲೆ’, ಉಕ್ಕು ತಯಾರಿಕಾ ಸಂಸ್ಥೆ ‘ಕೋರಸ್’, ‘ಜಾಗ್ವಾರ್‌ ಲ್ಯಾಂಡ್ ರೋವರ್’ ಖರೀದಿಯಲ್ಲಿ ತಮ್ಮ ಕಂಪೆನಿಯನ್ನು ಭಾಗಿಯಾಗಿಸಿದರು.

ಯಾರನ್ನೂ ಲೆಕ್ಕಿಸದೆ ತನ್ನ ಬೇಳೆಯನ್ನಷ್ಟೇ ಬೇಯಿಸಿಕೊಳ್ಳುವ ಜಾಯಮಾನ ಅವರದ್ದಾಗಿತ್ತು ಎಂದು ರತನ್ ಟಾಟಾ ಹೇಳಿದ ಮೇಲೆ ಸೈರಸ್ ಇನ್ನಷ್ಟು ಕುದ್ದುಹೋದರು. 48 ವರ್ಷದ ಸೈರಸ್‌ ವ್ಯಾಪಾರಿ ನಡೆ 78ರ ರತನ್ ಟಾಟಾ ಅವರಿಗೆ ಹಿಡಿಸದೇ ಇರಲಿಕ್ಕೂ ಅವರದ್ದೇ ಆದ ಕಾರಣಗಳಿವೆ. ಸೈರಸ್‌ಗೆ ಇಬ್ಬರು ಸಹೋದರಿಯರು; ಲೈಲಾ ಹಾಗೂ ಅಲೂ.

ರತನ್ ಟಾಟಾ ಅವರ ಸಹೋದರ (ಹಾಫ್ ಬ್ರದರ್) ನಿಯೋಲ್ ಟಾಟಾ ಅವರನ್ನು ಅಲೂ ಮದುವೆಯಾದ ಮೇಲೆ ಎರಡೂ ಕುಟುಂಬಗಳ ನಡುವಿನ ಸಂಬಂಧಕ್ಕೆ ಹೊಸ ಅರ್ಥ ದಕ್ಕಿತ್ತು. ಈಗ ಎರಡೂ ಸಮೂಹಗಳ ನಡುವೆ ವೈಮನಸ್ಸು ಬೆಳೆಯುವ ಲಕ್ಷಣಗಳು ಕಾಣತೊಡಗಿವೆ.

ಬಿಡುವಿದ್ದಾಗ ಪುಸ್ತಕಗಳನ್ನು ಓದುವ, ಗಾಲ್ಫ್ ಆಡಿ ಖುಷಿಪಡುವ ಸೈರಸ್ ಕೆಲವೊಮ್ಮೆ ಅಂತರ್ಮುಖಿ ಆಗುವುದೂ ಉಂಟು. ‘ಮೊಘಲ್–ಎ–ಆಜಮ್’ ಹಿಂದಿ ಚಿತ್ರಕ್ಕೆ ಹಣಕಾಸು ನೀಡಿದ ಅಪ್ಪನ ಮಗನಾದ ಅವರು, ಖ್ಯಾತ ವಕೀಲ ಇಕ್ಬಾಲ್ ಚಾಗ್ಲಾ ಅವರ ಮಗಳು ರೋಹಿಕಾ ಅವರನ್ನು 1992ರಲ್ಲಿ ಮದುವೆಯಾದರು. ಫಿರೋಜ್ ಹಾಗೂ ಜಹಾನ್ ಎಂಬ ಪುತ್ರರಿಗೂ ತಂದೆಯೇ ಮಾದರಿ. ಕ್ಯಾಥೆಡ್ರಲ್ ಶಾಲೆಯಲ್ಲೇ ತಂದೆಯಂತೆ ಕಲಿತ ಮಕ್ಕಳವರು. ರೋಹಿಕಾ ಹೇಳುವಂತೆ ತನ್ನ ಪತಿ ‘ಬಾಂಬೆ ಬಾಯ್’.

ಮೃದುಭಾಷಿ, ಎಸ್‌ಯುವಿ ಮೋಹಿ, ವ್ಯಾಪಾರ ಚತುರ, ಸಂಯಮಿ ಎಂದೆಲ್ಲಾ ಕರೆಸಿಕೊಂಡಿದ್ದ ಸೈರಸ್ ಮಿಸ್ತ್ರಿ ಕುದುರೆ ರೇಸಿಂಗ್ ಮೋಹಿಯೂ ಹೌದು. ಪುಣೆಯಲ್ಲಿ 200 ಎಕರೆಯಷ್ಟು ವಿಶಾಲ ಜಾಗದಲ್ಲಿರುವ ಪಂಜ್ರಿ ಕುದುರೆ ಫಾರ್ಮ್‌ನಲ್ಲಿ ಆಗೀಗ ಕುಟುಂಬವರ್ಗದವರ ಜೊತೆಗೆ ಕಾಲ ಕಳೆಯುತ್ತಾರೆ. ಅದು ಅವರದ್ದೇ ಕುಟುಂಬದ ಒಡೆತನದ ಫಾರ್ಮ್. ಮುಂದೆ ಸೈರಸ್ ವ್ಯಾಪಾರಿಯಾಗಿ ಯಾವ ಹೆಜ್ಜೆ ಇಡುತ್ತಾರೆ ಎನ್ನುವುದು ಉಳಿದಿರುವ ಕುತೂಹಲ.                     
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT