ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಯ ಮೇಲೆ ಜಿಗಿತ, ಬದುಕಿನಲ್ಲಿ ಕುಂಟುನಡಿಗೆ

Last Updated 13 ನವೆಂಬರ್ 2016, 5:11 IST
ಅಕ್ಷರ ಗಾತ್ರ

‘ನಾವೆಲ್ಲ ಅಸಹಾಯಕರು. ಸಂಜೆ ಮನೆಗೆ ಮರಳುತ್ತೇವೋ ಇಲ್ಲವೋ ಎನ್ನುವುದು ಬೆಳಿಗ್ಗೆ ಮನೆಯಿಂದ ಹೊರಡುವಾಗ ತಿಳಿದಿರುವುದಿಲ್ಲ’. ತಮಗೆ ತಾವೇ ಹೇಳಿಕೊಳ್ಳುವಂತೆ ಕೌರವ ವೆಂಕಟೇಶ್‌ ಹೇಳಿದರು. ಅವರ ಮಾತಿನಲ್ಲಿನ ವಿಷಾದ, ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಸಾಹಸ ಕಲಾವಿದರ ಅಂತರಂಗದ ಮಾತಿನ ಅಭಿವ್ಯಕ್ತಿಯಂತಿತ್ತು.

‘ಮಾಸ್ತಿಗುಡಿ’ ಸಿನಿಮಾದ ಶೂಟಿಂಗ್‌ನಲ್ಲಿ ಸಾಹಸ ಕಲಾವಿದರಾದ ಉದಯ್‌ ಮತ್ತು ಅನಿಲ್‌, ಹೆಲಿಕಾಪ್ಟರ್‌ನಿಂದ ಧುಮುಕಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮುಳುಗಿದ ದುರ್ಘಟನೆಯ ಹಿನ್ನೆಲೆಯಲ್ಲಿ ಸಾಹಸ ಕಲಾವಿದರ ಸ್ಥಿತಿಗತಿ ಕುರಿತು ವೆಂಕಟೇಶ್‌ ಮಾತನಾಡುತ್ತಿದ್ದರು. ‘ಇದು ಕಣ್ಣಿಗೆ ಕಾಣಿಸಿದ ದುರಂತ. ಸುದ್ದಿಯಾಗದ ಅನಾಹುತಗಳು ಇನ್ನೆಷ್ಟೊ?’ ಎಂದೂ ಅವರು ಹೇಳಿದರು.

ವೆಂಕಟೇಶ್‌ ಮಾತ್ರವಲ್ಲ, ಕನ್ನಡದ ಯಾವುದೇ ಸಾಹಸ ಕಲಾವಿದರನ್ನು ಮಾತನಾಡಿಸಿದರೂ ಅವರು ತಮ್ಮ ಹಾಗೂ ತಮ್ಮ ಗೆಳೆಯರ ಬದುಕಿನ ಬಗ್ಗೆ ನಿರುತ್ಸಾಹದಿಂದಲೇ ಮಾತನಾಡುತ್ತಾರೆ. ಎಲ್ಲರದೂ ಒಂದೇ ದೂರು – ‘ನಮ್ಮ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ನಮ್ಮ ನೆರವಿಗೆ ಯಾರೂ ಇಲ್ಲ’.

ಇಷ್ಟೆಲ್ಲ ತೊಂದರೆ ಇರುವಾಗ, ಸಾಹಸ ಕಲಾವಿದರಾಗಿಯೇ ಯಾಕೆ ದುಡಿಯಬೇಕು ಎಂದು ಕೆಣಕಿದರೆ ವೆಂಕಟೇಶ್‌ ಸಂಯಮದಿಂದಲೇ ಹೇಳುವುದು – ‘ಸಿನಿಮಾ ಸಹವಾಸವೇ ಬೇಡ ಎಂದು ಕೆಲವು ಹುಡುಗರು ಆಟೊ ಓಡಿಸುತ್ತಿದ್ದಾರೆ. ನಮ್ಮಂತಹವರಿಗೆ ಬೇರೆ ಕೆಲಸ ಗೊತ್ತಿಲ್ಲ. ಕೆಲಸ ಮಾಡದೆ ಸುಮ್ಮನಿದ್ದರೆ ಕುಟುಂಬದ ನಿರ್ವಹಣೆ ಹೇಗೆ?’.

ಸಾಹಸ ಕಲಾವಿದರು ಹಾಗೂ ಸಾಹಸ ದೃಶ್ಯಗಳ ನಿರ್ದೇಶಕರ ಮಾತಿರಲಿ, ಈ ಕಲಾವಿದರ ಸಂಘಟನೆಯ ಅಧ್ಯಕ್ಷ ವಿನೋದ್‌ ಅವರ ಮಾತಿನಲ್ಲಿ ಕೂಡ ಗೆಲುವಿಲ್ಲ. ‘ಯಾರಿಗೂ ಇಲ್ಲಿ ಬೆಲೆ ಇಲ್ಲ’ ಎನ್ನುವ ಅವರು ‘ಜೀವಕ್ಕೆ ಬೆಲೆ ಇಲ್ಲ’ ಎನ್ನುವ ಮಾತನ್ನೂ ಆಡುತ್ತಾರೆ. ‘ಮೂರು ವರ್ಷಗಳಿಗೊಮ್ಮೆ ಸಾಹಸ ಕಲಾವಿದರ ಸಂಭಾವನೆ ಶೇ 30ರಷ್ಟು ಹೆಚ್ಚಾಗಬೇಕು. ಆದರೆ, ಸಂಭಾವನೆ ಹೆಚ್ಚಿಸಲು ನಿರ್ಮಾಪಕರು ಚೌಕಾಸಿ ಮಾಡುತ್ತಾರೆ. ನಿಮ್ಮ ಸಿನಿಮಾ ಎಂದುಕೊಂಡು ಅಡ್ಜಸ್ಟ್‌ ಮಾಡಿಕೊಳ್ಳಿ ಎನ್ನುತ್ತಾರೆ.

ಇದಕ್ಕೆಲ್ಲ ಏನು ಮಾಡಬೇಕೋ ಗೊತ್ತಿಲ್ಲ. ಯಾರಿಗೂ ನಮ್ಮ ಬಗ್ಗೆ ಕಾಳಜಿ ಇಲ್ಲ’ ಎನ್ನುವುದು ಅವರ ದೂರು. ಕೆಲವೊಮ್ಮೆ ಸಾಹಸ ಕಲಾವಿದರನ್ನು ಹುರಿದುಂಬಿಸಿಯೂ ಅಪಾಯಕ್ಕೆ ನೂಕಲಾಗುತ್ತದೆ.

ಈ ಹಿನ್ನೆಲೆಯಲ್ಲಿ, ‘ಕಲಾವಿದರನ್ನು ಹೊಗಳಿ ಅಟ್ಟಕ್ಕೇರಿಸಿದರೆ ಅವರಷ್ಟು ಹುಚ್ಚರು ಮತ್ತೊಬ್ಬರು ಇರುವುದಿಲ್ಲ’ ಎನ್ನುವ ಹಿರಿಯನಟ ಲೋಕನಾಥ್‌ ಅವರ ಮಾತನ್ನು ನೆನಪಿಸಿಕೊಳ್ಳಬಹುದು. ಇಂಥ ಹೊಗಳಿಕೆಯ ಒತ್ತಾಯಕ್ಕೆ ತುತ್ತಾಗಿಯೇ ‘ಮಿಂಚಿನ ಓಟ’ ಚಿತ್ರದಲ್ಲಿ ಜೈಲು ಕಾಂಪೌಂಡ್‌ನಿಂದ ಧುಮುಕುವ ಸಂದರ್ಭದಲ್ಲಿ ಒಂದು ಕಾಲನ್ನು ಮುರಿದುಕೊಂಡಿದ್ದ ಅವರು, ಮತ್ತೊಂದು ಚಿತ್ರದ ಶೂಟಿಂಗ್‌ನಲ್ಲಿ 32 ಅಡಿ ಎತ್ತರದ ಸೇತುವೆಯಿಂದ ಹಾರಿ ಎರಡೂ ಕಾಲುಗಳನ್ನು ಮುರಿದುಕೊಂಡಿದ್ದರಂತೆ.

‘ಸಾಹಸ ಕಲಾವಿದರ ಸಂಘ’ದ ಅಧ್ಯಕ್ಷ ವಿನೋದ್‌ ಕೂಡ ಸಾಹಸ ದೃಶ್ಯಗಳ ಸಂಯೋಜನೆಯಲ್ಲಿ ಪಳಗಿದವರು. ಅವರ ಅನುಭವದ ಪ್ರಕಾರ, ಕನ್ನಡ ಚಿತ್ರರಂಗದಲ್ಲಿ ಸಾಹಸ ಕಲಾವಿದರ ಕೆಲಸಕ್ಕೆ ದೊರೆಯುವ ಸಂಭಾವನೆ ಕಡಿಮೆ. ತೆಲುಗು ಅಥವಾ ತಮಿಳು ಚಿತ್ರಗಳಲ್ಲಿ ಕಾರಿನ ಗಾಜೊಂದನ್ನು ಒಡೆಯುವ ಸಾಹಸಕ್ಕೆ ಕಲಾವಿದನೊಬ್ಬನಿಗೆ 10 ಸಾವಿರ ರೂಪಾಯಿ ದೊರೆತರೆ, ನಮ್ಮಲ್ಲಿ ಅದರ ಅರ್ಧವಷ್ಟೇ ದೊರೆಯುತ್ತದಂತೆ.

‘ನಾವು ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುತ್ತೇವೆ. ರಿಸ್ಕ್‌ಗೆ ತಕ್ಕಂತೆ ಹಣ ದೊರೆಯುವುದಿಲ್ಲ. ಹಾಗೆಂದು ಅವಕಾಶಗಳನ್ನು ನಿರಾಕರಿಸುವಂತೆಯೂ ಇಲ್ಲ. ನಮ್ಮ ನಡುವೆಯೇ ಸ್ಪರ್ಧೆ ಸಾಕಷ್ಟಿದೆ’ ಎನ್ನುತ್ತಾರೆ. ‘ಮಾಸ್ತಿಗುಡಿ’ ಚಿತ್ರೀಕರಣದ ದುರಂತದಲ್ಲಿ ಸಾವಿಗೀಡಾದ ಉದಯ್‌ ‘ಸಾಹಸ ಕಲಾವಿದರ ಸಂಘ’ದ ಸದಸ್ಯ. ಉದಯ್‌ರ ಬೆಳವಣಿಗೆಯನ್ನು ಹತ್ತಿರದಿಂದ ಕಂಡಿರುವ ವಿನೋದ್‌ ತಮ್ಮ ಒಡನಾಡಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.

‘ನೆರೆಯ ಭಾಷೆಯ ಚಿತ್ರರಂಗಗಳಿಗೆ ಹೋಲಿಸಿದರೆ, ಸಂಭಾವನೆ ಮಾತ್ರವಲ್ಲ ಸುರಕ್ಷತೆಯ ಸವಲತ್ತುಗಳೂ ನಮ್ಮಲ್ಲಿ ಕಡಿಮೆ. ಹೆಚ್ಚು ರಿಸ್ಕ್‌ನ ದೃಶ್ಯಗಳನ್ನು ಕಡಿಮೆ ಸಮಯ ಹಾಗೂ ಕಡಿಮೆ ಬಜೆಟ್‌ನಲ್ಲಿ ಸಂಯೋಜಿಸುವ ಅನಿವಾರ್ಯತೆ ನಮ್ಮದು. ಸಾಕಷ್ಟು ಸಂದರ್ಭಗಳಲ್ಲಿ ದುಃಖದಲ್ಲೇ ಕೆಲಸ ಮಾಡುತ್ತೇವೆ. ನಮ್ಮ ಮೂಳೆಗಳು ಮುರಿಯುತ್ತವೆ, ಸವೆಯುತ್ತವೆ.

ಕೊನೆಗೊಮ್ಮೆ ನಮ್ಮನ್ನು ಸ್ಕ್ರಾಪ್‌ನಂತೆ ಬಿಸಾಡಲಾಗುತ್ತದೆ’ ಎಂದು ವಿನೋದ್ ಹೇಳುತ್ತಾರೆ. ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಸಾಹಸ ಕಲಾವಿದರಿಗೆ ವಿಮೆ ಕೂಡ ದೊರೆಯುವುದಿಲ್ಲ ಎನ್ನುವ ವಿಷಯದ ಬಗ್ಗೆ ಅವರು ಗಮನಸೆಳೆಯುತ್ತಾರೆ.

‘ಸಾಹಸ ಕಲಾವಿದರು ಆಯಾ ದಿನದ ಸಂಬಳಕ್ಕಾಗಿ ದುಡಿಯುತ್ತಾರೆ. ಹಾಗೆ ದುಡಿಯುವುದು ಕಾರ್ಮಿಕರಿಗೆ ಅನಿವಾರ್ಯ’ ಎಂದು ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್‌ ಹೇಳುತ್ತಾರೆ. ‘ಇತ್ತೀಚೆಗಷ್ಟೇ ಸಿನಿಮಾವೊಂದರ ಶೂಟಿಂಗ್‌ ಸಂದರ್ಭದಲ್ಲಿ ನಡೆದ ವಾಹನ ಅಪಘಾತವೊಂದರಲ್ಲಿ ನಮ್ಮ ಇಬ್ಬರು ಹುಡುಗರಿಗೆ ಪೆಟ್ಟಾಗಿದೆ. ಅವರು ಇನ್ನೊಂದು ವರ್ಷ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕಿದೆ’ ಎನ್ನುವ ಅವರ ಮಾತುಗಳಲ್ಲಿ, ಕಾರ್ಮಿಕರ ವರ್ತಮಾನದ ದಾರುಣತೆ ಇಣುಕುತ್ತದೆ.

‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಅಥವಾ ‘ನಿರ್ಮಾಪಕರ ಸಂಘ’ಕ್ಕೆ ಸಾಹಸ ಕಲಾವಿದರು ಅಥವಾ ಕಾರ್ಮಿಕರ ಬಗ್ಗೆ ಹೇಳಿಕೊಳ್ಳುವಂತಹ ಕಾಳಜಿಯೇನೂ ಇಲ್ಲ ಎನ್ನುವುದು ಎರಡೂ ಸಂಘಟನೆಗಳ ಮುಖ್ಯಸ್ಥರ ಅಳಲು. ಹಾಗಿದ್ದರೆ ಇವರ ಬೆಂಬಲಕ್ಕೆ ಬರಬೇಕಾದವರು ಯಾರು?

‘ಬಡವರ ಬಂಧು ಎಂದು ಹೇಳಿಕೊಳ್ಳುವ ನಾಯಕನಟರು ಇದ್ದಾರಲ್ಲ; ಅವರು ಕೊಂಚ ಆಸಕ್ತಿ ವಹಿಸಿದರೆ ಸಾಕಷ್ಟು ಸಮಸ್ಯೆಗಳು ಬಗೆಹರಿಯುತ್ತವೆ. ಚಿತ್ರರಂಗದಲ್ಲಿ ಗಟ್ಟಿಯಾಗಿರುವುದು ಹೀರೊಗಳ ಧ್ವನಿ ಮಾತ್ರ’ ಎನ್ನುತ್ತಾರೆ ಅಶೋಕ್‌. ಕೌರವ ವೆಂಕಟೇಶ್‌ ಕೂಡ ಅಶೋಕ್‌ ಅನಿಸಿಕೆಯನ್ನು ಸಮರ್ಥಿಸುವಂತೆ ಮಾತನಾಡುತ್ತಾರೆ.

‘ಮೊದಲೆಲ್ಲ ನಿರ್ಮಾಪಕ–ನಿರ್ದೇಶಕರು ಹೇಳಿದಂತೆ ಚಿತ್ರತಂಡದ ಎಲ್ಲರೂ ಕೇಳಬೇಕಾಗಿತ್ತು. ಈಗ ನಿರ್ಣಾಯಕನ ಸ್ಥಾನಕ್ಕೆ ನಾಯಕ ಬಂದಿದ್ದಾನೆ. ಹೀರೊ ವಿದೇಶದಲ್ಲಿ ಶೂಟಿಂಗ್‌ ಮಾಡೋಣ ಎಂದರೆ ನಿರ್ಮಾಪಕ ಒಪ್ಪಲೇಬೇಕಾಗಿದೆ. ಇಂಥ ಸಂದರ್ಭದಲ್ಲಿ ತನ್ನೊಂದಿಗೆ ಕೆಲಸ ಮಾಡುವ ಸಹಕಲಾವಿದರ ಸುರಕ್ಷತೆಯ ಬಗ್ಗೆ ನಾಯಕನಟರಿಗೆ ಕೊಂಚ ಕಾಳಜಿ ಇದ್ದಲ್ಲಿ ಬಡಜೀವಗಳು ಸಲೀಸಾಗಿ ಉಸಿರಾಡಬಹುದು’ ಎನ್ನುತ್ತಾರೆ.

ಸಾಹಸ ದೃಶ್ಯಗಳ ಸಂಯೋಜನೆಯಲ್ಲಿ ಅನಾಹುತಗಳು ಯಾಕಾಗಿ ಉಂಟಾಗುತ್ತವೆ? ಕೌರವ ವೆಂಕಟೇಶ್‌ ಅವರು ನೀಡುವ ಕಾರಣ: ಪ್ಲಾನಿಂಗ್‌ನ ಕೊರತೆ. ‘ಇಂದಿನ ಹೆಸರಾಂತ ಸಾಹಸ ನಿರ್ದೇಶಕರಿಗೆ ತರಾತುರಿಯಲ್ಲಿ ಕೆಲಸ ಮುಗಿಸಬೇಕಾಗಿರುತ್ತದೆ.

ಒಂದು ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲೇ ಅವರಿಗೆ ಮತ್ತೊಂದು ಚಿತ್ರತಂಡ ಕಾಯುತ್ತಿರುತ್ತದೆ. ಇಂಥ ಸಂದರ್ಭದಲ್ಲಿ ಪೂರ್ವಸಿದ್ಧತೆ ಬಗ್ಗೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ‘ಮಾಸ್ತಿಗುಡಿ’ ಉದಾಹರಣೆಯನ್ನೇ ನೋಡಿ. ಸಾಹಸ ನಿರ್ದೇಶಕರ ಅಗತ್ಯಗಳನ್ನೆಲ್ಲ ನಿರ್ಮಾಪಕರು ಪೂರೈಸಿದ್ದರು. ಆದರೆ, ಅಲ್ಲಿ ಪೂರ್ವಸಿದ್ಧತೆ ಹಾಗೂ ಪ್ಲಾನಿಂಗ್‌ನ ಕೊರತೆ ಎದ್ದುಕಾಣುತ್ತಿತ್ತು’ ಎನ್ನುತ್ತಾರೆ.

ಸರಿಗಮ ವಿಜಿ ಅವರದು ಮತ್ತೊಂದು ಕಥೆ. ‘ಕಿರಣ್‌ಬೇಡಿ’ ಚಿತ್ರದ ಶೂಟಿಂಗ್‌ ಸಂದರ್ಭದಲ್ಲಿ ನಡೆದ ಆಕಸ್ಮಿಕದಲ್ಲಿ ವಿಜಿ ಪೆಟ್ಟುತಿಂದವರು. ಕಾರು ಚೇಸಿಂಗ್‌ ಸಮಯದಲ್ಲಿ ನಿಯಂತ್ರಣ ತಪ್ಪಿದ ಕಾರಿಗೆ ಸಿಲುಕಿ ಅವರ ಕಾಲು ಮೂರು ತುಂಡಾಗಿತ್ತು.

ನಿರಂತರ ಚಿಕಿತ್ಸೆ ನಡೆದು, ಪ್ರಸ್ತುತ ವಿಜಿ ಅವರು ಓಡಾಡುವ ಸ್ಥಿತಿಯಲ್ಲಿದ್ದರೂ ಚಿತ್ರೀಕರಣದಲ್ಲಿ ಭಾಗವಹಿಸುವಷ್ಟು ಶಕ್ತಿ ಉಳಿದಿಲ್ಲ. ‘ಅನಿರೀಕ್ಷಿತ ಘಟನೆಯಲ್ಲಿ ನನ್ನ ಜೀವನ ಮುಗಿದುಹೋಯ್ತು. ಸಹ ನಿರ್ದೇಶಕನಾಗಿ ನನಗೆ ಬಿಡುವೇ ಇರಲಿಲ್ಲ. ಈಗ ಕೆಲಸ ಇಲ್ಲದೆ ಕೂರುವ ಸ್ಥಿತಿ ಬಂದಿದೆ’ ಎಂದವರು ನೋವು ತೋಡಿಕೊಳ್ಳುತ್ತಾರೆ.

ಸಾಹಸ ಕಲಾವಿದರ ಸುರಕ್ಷತೆ ಎಂದಕೂಡಲೇ ವಿಜಿ ಅವರಿಗೆ ನೆನಪಿಗೆ ಬರುವುದು ಟೈಗರ್ ಪ್ರಭಾಕರ್. ‘ಪ್ರಭಾಕರ್‌ ಅವರ ಕಾಲದಲ್ಲಿ ಮದರಾಸ್‌ನಿಂದ ಫೈಟರ್‌ಗಳನ್ನು ಕರೆಸುತ್ತಿದ್ದೆವು. ಅವರಲ್ಲೊಬ್ಬ ‘ತಲೆನೋವು’ ಎಂದರೆ ಪ್ರಭಾಕರ್‌ ಚಿಕಿತ್ಸೆ ಕೊಡಿಸುತ್ತಿದ್ದರು.

ಕ್ರೇನ್‌ ಬಳಸಿ ಶೂಟಿಂಗ್‌ ಮಾಡುವ ಸಂದರ್ಭದಲ್ಲಿ, ಛಾಯಾಗ್ರಾಹಕನ ಸುರಕ್ಷತೆಗಾಗಿ ನೆಲದ ಮೇಲೆ ಹಾಸಿಗೆ ಹಾಕಿಸುತ್ತಿದ್ದರು. ಪ್ರಭಾಕರ್‌ ಕೂಡ ಓರ್ವ ಫೈಟರ್‌ ಆಗಿ ಚಿತ್ರರಂಗಕ್ಕೆ ಬಂದು ನಾಯಕರಾಗಿ ಬೆಳೆದವರು. ಆ ಕಾರಣದಿಂದಲೇ ಅವರಿಗೆ ಸಾಹಸ ಕಲಾವಿದರ ಕಾಳಜಿಯ ಬಗ್ಗೆ ವಿಪರೀತ ಆಸ್ಥೆಯಿತ್ತು’ ಎಂದು ವಿಜಿ ಹೇಳುತ್ತಾರೆ. ಅವರ ಮಾತು, ಇಂದಿನ ನಾಯಕನಟರು ತಮ್ಮ ಜೊತೆಗಾರರ ಸುರಕ್ಷತೆಯ ಬಗ್ಗೆ ತೆಗೆದುಕೊಳ್ಳಬೇಕಾದ ಎಚ್ಚರಿಕೆಯನ್ನು ಸೂಚಿಸುವಂತಿದೆ.

ವಿಜಿ ಅವರು ನೆನಪಿಸಿಕೊಳ್ಳುವ ಮತ್ತೊಂದು ಉದಾಹರಣೆ ವಿ.ಸೋಮಶೇಖರ್‌ ನಿರ್ದೇಶನದ ‘ದೇವರೆಲ್ಲಿದ್ದಾನೆ’ ಚಿತ್ರದ್ದು. ಶಿವಸಮುದ್ರದಲ್ಲಿ ಮಗುವನ್ನು ಎಸೆಯುವ ದೃಶ್ಯವನ್ನು ಬೊಂಬೆಯನ್ನು ಬಳಸಿ ಚಿತ್ರೀಕರಿಸಲಾಗಿತ್ತು. ಮಗುವನ್ನು ಕಾಪಾಡಲು ನಾಯಕನಟ ಅಂಬರೀಶ್‌ ನದಿಗೆ ಹಾರುವ ಸನ್ನಿವೇಶ. ಅಂಬರೀಶ್‌ ನೇರ ನದಿಗೆ ಇಳಿಯಲು ಉತ್ಸುಕರಾಗಿದ್ದರು. ಆದರೆ, ಹಗ್ಗ ಕಟ್ಟದೆ ನಾಯಕನನ್ನು ನದಿಗಿಳಿಸಲು ಸಾಹಸ ನಿರ್ದೇಶಕ ಶಿವಯ್ಯ ಒಪ್ಪಲಿಲ್ಲವಂತೆ.

ಸಾಹಸ ದೃಶ್ಯಗಳಲ್ಲಿ ನಾಯಕನ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ ಸಹ ಕಲಾವಿದರ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಚಿತ್ರರಂಗದಲ್ಲಿ ಸಹಜ ಎನ್ನುವಂತಾಗಿದೆ.ಮುನಿ ಎನ್ನುವ ಫೈಟರ್‌ ಅನುಭವ ಕೇಳಿ. ಸಾಹಸ ದೃಶ್ಯವೊಂದರಲ್ಲಿ ಮೂರು ಮಹಡಿ ಎತ್ತರದಿಂದ ಅವರನ್ನು ಜಿಗಿಸಲಾಯಿತು. ಆದರೆ, ಚಿತ್ರದ ನಾಯಕ ನಟನನ್ನು ಮೇಜಿನ ಮೇಲಿನಿಂದ ಜಿಗಿಸಿ ‘ಅಡ್ಜಸ್ಟ್‌’ ಮಾಡಿಕೊಳ್ಳಲಾಯಿತು. ಈ ‘ಅಡ್ಜೆಸ್ಟ್‌ಮೆಂಟ್‌’ ಸಾಹಸ ಕಲಾವಿದರ ಪಾಲಿಗೆ ಯಾವಾಗಲೂ ಇದ್ದದ್ದೆ.

ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಕೆಲವೊಮ್ಮೆ ಅನಾಹುತ ಸಂಭವಿಸುವುದಿದೆ. ಶಿವಯ್ಯನವರ ಉಸ್ತುವಾರಿಯಲ್ಲೇ ‘ಕಠಾರಿವೀರ’ ಚಿತ್ರದ ಕತ್ತಿವರಸೆ ಶೂಟಿಂಗ್‌ನಲ್ಲಿ ರಾಜ್‌ಕುಮಾರ್‌ ಕಣ್ಣಿಗೆ ಪೆಟ್ಟುತಿಂದಿದ್ದರು. ಕತ್ತಿಯ ಅಂಚು ರಾಜ್‌ರ ಕಣ್ಣಿನ ಬಿಳಿಭಾಗವನ್ನು ಸೋಕಿ ಹೋಗಿತ್ತು. ಅದೃಷ್ಟವಶಾತ್‌ ಅನಾಹುತ ಸಂಭವಿಸಲಿಲ್ಲ.

ಕತೆಗೆ ತಕ್ಕಂತೆ ಸಾಹಸ ದೃಶ್ಯಗಳನ್ನು ಸಂಯೋಜಿಸುತ್ತಿದ್ದ ದಿನಗಳಿಂದ, ಕತೆಗಿಂತಲೂ ಸಾಹಸ ದೃಶ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಂದರ್ಭಕ್ಕೆ ಚಿತ್ರರಂಗ ಬಂದುನಿಂತಿದೆ. ಲೈಂಗಿಕ ದೃಶ್ಯಗಳನ್ನು ಸರಕು ಮಾಡಿಕೊಳ್ಳುವಂತೆ, ಮೈನವಿರೇಳಿಸುವ ಸಾಹಸ ದೃಶ್ಯಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನಗಳು ಹೆಚ್ಚಾಗಿವೆ.

ಇಂಥ ಪ್ರಯತ್ನಗಳಲ್ಲಿ ಸಾಹಸ ಕಲಾವಿದರ ಜೀವಗಳು ದಾಳಗಳಾಗುತ್ತವೆ. ಕೆಲವೊಮ್ಮೆ ಕಲಾವಿದರೇ ಉತ್ಸುಕತೆಯಿಂದ ಅಪಾಯಕರ ಸನ್ನಿವೇಶಗಳಿಗೆ ಮುಂದಾಗುತ್ತಾರೆ.ಆದರೆ, ಅವರನ್ನು ನಿಯಂತ್ರಿಸಬೇಕಾದ ಹಾಗೂ ಅಗತ್ಯ ಸುರಕ್ಷತಾ ಸವಲತ್ತುಗಳನ್ನು ಒದಗಿಸಬೇಕಾದ ಜವಾಬ್ದಾರಿ ನಿರ್ಮಾಪಕ–ನಿರ್ದೇಶಕರದೇ ಆಗಿದೆ.

‘ಸಾಹಸ ದೃಶ್ಯಗಳ ಶೂಟಿಂಗ್‌ ನಡೆಯುವ ಬಹುತೇಕ ಸ್ಥಳಗಳಲ್ಲಿ ಆಂಬುಲೆನ್ಸ್‌ ಕೂಡ ಇರುವುದಿಲ್ಲ’ ಎಂದು ಸರಿಗಮ ವಿಜಿ ಹೇಳುತ್ತಾರೆ. ಇಂಥ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ವರ್ತನೆಗಳಿಗೆ ತಡೆಹಾಕುವ ಪ್ರಯತ್ನಗಳಿಗೆ ‘ಮಾಸ್ತಿಗುಡಿ’ಯ ಉದಯ್‌– ಅನಿಲ್‌ರ ಸಾವು ಪ್ರೇರಣೆಯಾಗಬೇಕು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT