ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ತಾನದ ಸಂಕಷ್ಟ ಹೆಚ್ಚಿಸುವುದೇ ಕರ್ನಾಟಕ?

ರಣಜಿ: ಇಂದಿನಿಂದ ಪಂದ್ಯ, ಸತತ ನಾಲ್ಕನೇ ಜಯದ ಮೇಲೆ ವಿನಯ್‌ ಪಡೆಯ ಕಣ್ಣು
Last Updated 12 ನವೆಂಬರ್ 2016, 19:30 IST
ಅಕ್ಷರ ಗಾತ್ರ

ವಿಜಯನಗರಂ:  ಸತತ ಗೆಲುವು ಮತ್ತು ಆಟಗಾರರ ಆತ್ಮವಿಶ್ವಾಸ ಹಿಂದಿನ ನಿರಾಸೆ ಯನ್ನೆಲ್ಲಾ ಹೇಗೆ ದೂರ ಮಾಡುತ್ತದೆ ಎನ್ನುವುದನ್ನು ಕರ್ನಾಟಕ ತಂಡ ತೋರಿಸಿ ಕೊಟ್ಟಿದೆ. ಇದೇ ಖುಷಿಯಲ್ಲಿ ಈಗ ಮತ್ತೊಂದು ಸವಾಲನ್ನು ಎದುರಿಸಲು ಸಜ್ಜಾಗಿದೆ.

ವಿನಯ್‌ ಕುಮಾರ್‌ ನಾಯಕತ್ವದ ರಾಜ್ಯ ತಂಡ ಇಲ್ಲಿನ ಪಿವಿಜಿ ರಾಜು ಕ್ರಿಕೆಟ್‌ ಮೈದಾನದಲ್ಲಿ ಆಯೋಜನೆ ಯಾಗಿರುವ ‘ಬಿ’ ಗುಂಪಿನ ರಣಜಿ ಪಂದ್ಯ ದಲ್ಲಿ ರಾಜಸ್ತಾನದ ಎದುರು ಭಾನುವಾರ ದಿಂದ ಪೈಪೋಟಿ ನಡೆಸಲಿದೆ. ಸತತ ಎರಡು ವರ್ಷ ದೇಶಿಯ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮೆರೆದ ದಿನಗಳಲ್ಲೆವೂ ಮರೆತು ಹಿಂದಿನ ವರ್ಷ ಲೀಗ್‌ ಹಂತದಲ್ಲಿಯೇ ಮುಗ್ಗರಿಸಿದ್ದ ಕರಾಳ ನೆನಪುಗಳು ರಾಜ್ಯದ ಕ್ರಿಕೆಟ್ ಪ್ರೇಮಿಗಳನ್ನು ಕಾಡುತ್ತಿ ದ್ದವು. ಈಗ ಎಲ್ಲಾ ನಿರಾಸೆಗಳು ಕರ್ನಾ ಟಕ ತಂಡದ ಉತ್ತಮ ಪ್ರದರ್ಶನದಲ್ಲಿ ಕೊಚ್ಚಿ ಹೋಗಿವೆ. ಈಗೇನಿದ್ದರೂ ಸವಿ ನೆನಪುಗಳದ್ದೇ ರಾಜ್ಯಭಾರ.

ಗ್ರೇಟರ್‌ ನೋಯ್ಡಾದಲ್ಲಿ ನಡೆದ ಜಾರ್ಖಂಡ್‌ ಎದುರಿನ ಪಂದ್ಯದಲ್ಲಿ ರಾಜ್ಯ ತಂಡ ಮೂರು ಪಾಯಿಂಟ್ಸ್‌ ಪಡೆದುಕೊಂಡಿತ್ತು. ನಂತರದ ಎರಡು ಪಂದ್ಯಗಳಲ್ಲಿ ದೆಹಲಿ ಮತ್ತು ಅಸ್ಸಾಂ ವಿರುದ್ಧ ಬೋನಸ್‌ ಅಂಕದ ಸಮೇತ ಗೆಲುವು ಪಡೆದಿತ್ತು. ಹೋದ ವಾರ ವಡೋದರದಲ್ಲಿ ವಿದರ್ಭ ತಂಡವನ್ನು 189 ರನ್‌ಗಳಿಂದ ಮಣಿಸಿ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿ ಕ್ವಾರ್ಟರ್‌ ಫೈನಲ್‌ ಹೊಸ್ತಿಲಲ್ಲಿದೆ.

ಈ ಎಲ್ಲಾ ಅಂಶಗಳ ಜೊತೆಗೆ ಅನುಭವಿ ಕೆ.ಎಲ್‌. ರಾಹುಲ್‌ ತಂಡಕ್ಕೆ ಮರಳಿರುವುದು ಬ್ಯಾಟಿಂಗ್‌ ವಿಭಾಗಕ್ಕೆ ಆನೆಬಲ ಬಂದಂತಾಗಿದೆ. ಆರ್‌. ಸಮರ್ಥ್‌ ವಿದರ್ಭ ಎದುರು ಒಟ್ಟು 59 ರನ್‌ ಹೊಡೆದಿದ್ದರು. ರಾಬಿನ್‌ ಉತ್ತಪ್ಪ ಮೊದಲ ಇನಿಂಗ್ಸ್‌ನಲ್ಲಿ 46 ರನ್‌ ಗಳಿಸಿ ಆಸರೆಯಾಗಿದ್ದರು. ಇವರನ್ನು ಹೊರತು ಪಡಿಸಿದರೆ ಉಳಿದ ಪ್ರಮುಖ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಂಡಿದ್ದರು.

ಈ ನಿರಾಸೆಯ ನಡುವೆಯೂ ವಿನಯ್‌ ಹಾಗೂ ಕೆ. ಗೌತಮ್ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ವಿನಯ್‌ ಎರಡೂ ಇನಿಂಗ್ಸ್‌ ಸೇರಿ 95 ರನ್‌ ಹೊಡೆದು ಒಟ್ಟು ಏಳು ವಿಕೆಟ್‌ಗಳನ್ನು ಉರುಳಿ ಸಿದ್ದರು. ಕೊನೆಯಲ್ಲಿ ಅರವಿಂದ್‌, ಅಬ್ರಾರ್‌ ಖಾಜಿ ಕೂಡ ಆಸರೆಯಾಗಿ ದ್ದರು. ಆದ್ದರಿಂದ ಕೊನೆಯ ಕ್ರಮಾಂಕದ ವರೆಗೂ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸುವ ವಿಶ್ವಾಸ ಮೂಡಿಸಿದ್ದಾರೆ.

ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ: ಗಾಯದಿಂದ ಚೇತರಿಸಿಕೊಂಡಿರುವ ರಾಹುಲ್‌ ಜೊತೆ ಸಮರ್ಥ್‌ ಇನಿಂಗ್ಸ್‌ ಆರಂಭಿಸಲಿದ್ದಾರೆ. ಹಿಂದಿನಂತೆಯೇ ರಾಬಿನ್‌ ಉತ್ತಪ್ಪ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲಿದ್ದಾರೆ.

ಹಿಂದಿನ ಪಂದ್ಯದಲ್ಲಿ ಬೆರಳಿಗೆ ಪೆಟ್ಟು ಮಾಡಿಕೊಂಡಿರುವ ಮನೀಷ್‌ ಪಾಂಡೆ ರಾಜಸ್ತಾನ ಎದುರಿನ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಮಯಂಕ್‌ ಅಗರವಾಲ್‌ ಕಣಕ್ಕಿಳಿಯಲಿದ್ದಾರೆ. ಹಿಂದಿನ ನಾಲ್ಕೂ ಪಂದ್ಯಗಳಲ್ಲಿ ಮಯಂಕ್‌ ಆರಂಭಿಕರಾಗಿ ಬ್ಯಾಟ್‌ ಮಾಡಿ ವೈಫಲ್ಯ ಕಂಡಿದ್ದರು.

ಬಲಗೈ ಬ್ಯಾಟ್ಸ್‌ಮನ್‌ ಮಯಂಕ್‌ ದೆಹಲಿ ವಿರುದ್ಧ ಅರ್ಧಶತಕ ಹೊಡೆದಿದ್ದರು. ನಾಲ್ಕು ಪಂದ್ಯಗಳಿಂದ ಏಳು ಇನಿಂಗ್ಸ್‌ ಆಡಿದ್ದು ಒಟ್ಟು 113 ರನ್‌ ಮಾತ್ರ ಗಳಿಸಿದ್ದಾರೆ. ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಮುಂದಿನ ಪಂದ್ಯಗಳಲ್ಲಿ ಜವಾಬ್ದಾರಿಯುತವಾಗಿ ಆಡಬೇಕಾದ ಅನಿವಾರ್ಯತೆ ಮಯಂಕ್‌ ಅವರಿಗಿದೆ. ಭಾನುವಾರ ಬೆಳಿಗ್ಗೆ ಪಿಚ್‌ ನೋಡಿಕೊಂಡು ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಬಗ್ಗೆ ರಾಜ್ಯ ತಂಡ ನಿರ್ಧರಿಸಲಿದೆ.

ಸಂಕಷ್ಟದಲ್ಲಿ ರಾಜಸ್ತಾನ: ರಾಜಸ್ತಾನ ತಂಡ 2010–11 ಮತ್ತು 2011–12ರ ರಣಜಿ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿತ್ತು. ಆದರೆ ಈ ಬಾರಿ ನೀರಸ ಪ್ರದರ್ಶನ ನೀಡಿ ಸಂಕಷ್ಟಕ್ಕೆ ಸಿಲುಕಿದೆ.

ಸೌರಾಷ್ಟ್ರ ವಿರುದ್ಧ ಇಲ್ಲಿಯೇ ಪಂದ್ಯವಾಡಿ ಡ್ರಾ ಮಾಡಿಕೊಂಡಿತ್ತು. ಅಸ್ಸಾಂ ಎದುರು ಇನಿಂಗ್ಸ್‌ ಮತ್ತು 8 ರನ್‌ಗಳ ಜಯ ಪಡೆದಿತ್ತು. ಹಿಂದಿನ ಎರಡು ಪಂದ್ಯಗಳಲ್ಲಿ ಹೈದರಾಬಾದ್‌ ಮತ್ತು ಒಡಿಶಾ ವಿರುದ್ಧದ ಪಂದ್ಯಗಳು ಡ್ರಾ ಆಗಿದ್ದವು. ಒಟ್ಟು ಐದು ಪಂದ್ಯಗಳಿಂದ ಒಂದು ಗೆಲುವು, ಒಂದು ಸೋಲು ಮತ್ತು ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡು 12 ಪಾಯಿಂಟ್ಸ್‌ ಹೊಂದಿವೆ. ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಹಿಂದಿನ ಪಂದ್ಯದಲ್ಲಿ ಎಸ್‌.ಎಫ್‌ ಖಾನ್ ಪದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ರಣಜಿ ಪಂದ್ಯದಲ್ಲಿಯೇ ಶತಕ ಹೊಡೆದಿದ್ದರು. ಇದೆಲ್ಲಕ್ಕಿಂತ ಹೆಚ್ಚಾಗಿ ರಾಜಸ್ತಾನ ತಂಡ ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ. ಈ ತಂಡದ ನಾಯಕ ಪಂಕಜ್‌ ಸಿಂಗ್‌ ಐದು ಪಂದ್ಯಗಳಿಂದ 28 ವಿಕೆಟ್‌ ಪಡೆದು ಹೆಚ್ಚು ವಿಕೆಟ್‌ಗಳನ್ನು ಉರುಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ಇವರ ವೇಗದ ದಾಳಿ ಎದುರಿಸಲು ಕರ್ನಾಟಕ ಕೂಡ ಸಜ್ಜಾಗಿದೆ.

ಇದು ವೇಗಿಗಳ ನಡುವಿನ ಸವಾಲು
ವಿಜಯನಗರಂ: 
ಕರ್ನಾಟಕ ಮತ್ತು ರಾಜಸ್ತಾನ ತಂಡಗಳು ಮೊದಲ ಬಾರಿಗೆ ವಿಜಯನಗರಮ್‌ನಲ್ಲಿ ಹಣಾಹಣಿ ನಡೆಸಲು ಸಿದ್ಧಗೊಂಡಿವೆ. ಈ ತಂಡಗಳನ್ನು ಮುನ್ನಡೆಸುತ್ತಿರುವ ಇಬ್ಬರೂ ವೇಗದ ಬೌಲರ್‌ಗಳೇ. ಆದ್ದರಿಂದ ಪಂದ್ಯ ವೇಗಿಗಳ ನಡು ವಿನ ಸಮರ ಎನಿಸಿದೆ.

ವಿನಯ್‌ ಮತ್ತು ಪಂಕಬ್‌ ಇಬ್ಬರೂ ಬಲಗೈ ವೇಗದ ಬೌಲರ್‌ಗಳು. ರಣಜಿಯಲ್ಲಿ ಬಹುತೇಕ ಸಮ ಸಾಧನೆ ಮಾಡಿರುವವರು. ಇವರಿಬ್ಬರೂ ದೇಶಿಯ ಪ್ರತಿಷ್ಠಿತ ಟೂರ್ನಿಯಲ್ಲಿ ತಲಾ 300ಕ್ಕಿಂತಲೂ ಹೆಚ್ಚು ವಿಕೆಟ್‌ ಪಡೆದವರು. ಒಂದು ಸಾವಿರಕ್ಕಿಂತಲೂ ಹೆಚ್ಚು ರನ್‌ ಗಳಿಸಿದವರು. ಆದ್ದರಿಂದ ಈ ಹಣಾ ಹಣಿಯಲ್ಲಿ ಗೆಲುವಿನ ಮಾಲೆ ಯಾರಿಗೆ ಎಂಬುದು ಕುತೂಹಲ.

ಏಕೆಂದರೆ ರಾಜಸ್ತಾನ ತಂಡದ ಎದುರು ಕರ್ನಾಟಕ ತಂಡ 50 ವರ್ಷಗಳಿಂದ ಒಮ್ಮೆಯೂ ಸೋತಿಲ್ಲ. 1965–66ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಜ್ಯ ತಂಡ ಒಂದು ವಿಕೆಟ್‌ನಿಂದ ಸೋತಿತ್ತು.  ಆ ಬಳಿಕ ಏಳು ಪಂದ್ಯಗಳನ್ನಾಡಿರುವ ಕರ್ನಾಟಕ ಐದರಲ್ಲಿ ಗೆಲುವು ಪಡೆದು ಎರಡು ಪಂದ್ಯಗಳನ್ನು ಡ್ರಾ ಮಾಡಿ ಕೊಂಡಿದೆ. ವಿನಯ್‌ ನಾಯಕತ್ವದಲ್ಲಿ ಕರ್ನಾಟಕ ಎರಡು ಪಂದ್ಯಗಳ ನ್ನಾಡಿದ್ದು ಒಂದರಲ್ಲಿ ಜಯ ಸಾಧಿ ಸಿದೆ. ಇನ್ನೊಂದು ಪಂದ್ಯ ಡ್ರಾ ಆಗಿತ್ತು. ಈ ಬಾರಿಯೂ ಅಜೇಯ ಸಾಧನೆ ಉಳಿಸಿಕೊಳ್ಳುವ ವಿಶ್ವಾಸ ಕರ್ನಾಟಕದ್ದು.

ಅಭ್ಯಾಸದ ಅವಧಿ ಮುಗಿದ ಬಳಿಕ ಶನಿವಾರ ಮಾತನಾಡಿದ ವಿನಯ್‌ ‘ಹಿಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕಾರಣ ಈಗ ಮತ್ತಷ್ಟು ಚೆನ್ನಾಗಿ ಆಡುವ ವಿಶ್ವಾಸ ಬಂದಿದೆ. ಮನೀಷ್‌ ಅಲಭ್ಯರಾದರೂ ಆ ಸ್ಥಾನವನ್ನು ರಾಹುಲ್‌ ತುಂಬಲಿದ್ದಾರೆ. ಹೋದ ವರ್ಷ ಕೆಲವು ಪಂದ್ಯಗಳನ್ನು ನಾವು ಚೆನ್ನಾಗಿ ಆಡಲಿಲ್ಲ ನಿಜ. ಈ ಬಾರಿ ಹೇಗೆ ಆಡುತ್ತಿದ್ದೇವೆ ಎಂಬುದನ್ನು ನೀವೇ ನೋಡುತ್ತಿದ್ದೀರಲ್ಲಾ’ ಎಂದರು.

‘ಸತತ ಮೂರು ಪಂದ್ಯಗಳಲ್ಲಿ ಗೆಲುವು ಪಡೆದು ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದೇವೆ. ಇಷ್ಟಕ್ಕೆ ಎದುರಾಳಿ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಹಿಂದಿನ ಪಂದ್ಯದಲ್ಲಿ ಆಡಿಸಿದಂತೆ ಒಬ್ಬರು ಹೆಚ್ಚುವರಿ ಸ್ಪಿನ್ನರ್‌ ಅಥವಾ ಒಬ್ಬ ಬ್ಯಾಟ್ಸ್‌ಮನ್‌ನನ್ನು ಕಣಕ್ಕಿಳಿಸುವ ಯೋಜನೆ ಇದೆ. ರಾಜಸ್ತಾನ ತಂಡ ಇಲ್ಲಿನ ಮೈದಾನದಲ್ಲಿ ಆಡಿರುವ ಕಾರಣ ಅದರ ಲಾಭವೂ ಆ ತಂಡಕ್ಕೆ ಸಿಗಲಿದೆ’ ಎಂದೂ ವಿನಯ್‌ ಹೇಳಿದರು.

ತಂಡದಲ್ಲಿ ಬದಲಾವಣೆ: ಮೊದಲ ಮೂರು ಪಂದ್ಯಗಳಲ್ಲಿ ಆಡಿದ್ದ ಆಟಗಾರರಲ್ಲಿ ಬಹುತೇಕರೂ ಈಗ ತಂಡದಿಂದ ಹೊರಗಿದ್ದಾರೆ. ಟೂರ್ನಿಯ ನಡುವೆಯೇ ಈ ರೀತಿಯ ಬದಲಾವಣೆ ಅನಿವಾರ್ಯ ಎಂದು ರಾಜಸ್ತಾನ ತಂಡದ ನಾಯಕ ಪಂಕಜ್‌ ಹೇಳಿದ್ದಾರೆ.

‘ನಮ್ಮ ಮೂರನೇ ಪಂದ್ಯದ ಬಳಿಕ ರಜತ್ ಭಾಟಿಯಾ ಸೇರಿದಂತೆ ಕೆಲವರು ಹೊರಗುಳಿದರು. ಆದ್ದ ರಿಂದ ತಂಡದಲ್ಲಿ  ಬದ ಲಾವಣೆ ಮಾಡುವುದು ಅನಿವಾರ್ಯ ವಾಯಿತು’ ಎಂದು ಪಂಕಜ್‌ ತಿಳಿಸಿದರು.

ರಾಬಿನ್‌ಗೆ ಜನ್ಮದಿನದ ಖುಷಿ
ಶುಕ್ರವಾರ 31ನೇ ವಸಂತಕ್ಕೆ ಕಾಲಿಟ್ಟ ರಾಜ್ಯ ತಂಡದ ಹಿರಿಯ ಬ್ಯಾಟ್ಸ್‌ಮನ್‌ ರಾಬಿನ್‌ ಉತ್ತಪ್ಪ ಅವರ ಹುಟ್ಟುಹಬ್ಬವನ್ನು ಸಹ ಆಟಗಾರರು ಶನಿವಾರ ಇಲ್ಲಿ ಆಚರಿಸಿದರು.

ಕ್ಯಾಚ್‌ ಪಡೆಯುವ ಅಭ್ಯಾಸ ಮುಗಿಸಿದ ಬಳಿಕ ಡ್ರೆಸ್ಸಿಂಗ್‌ ಕೊಠಡಿ ಸೇರಿದ ಆಟಗಾರರು ಉತ್ತಪ್ಪ ಅವರ ಜನ್ಮದಿನದ ಖುಷಿಯಲ್ಲಿ ಮಿಂದಿದ್ದೆರು. ಉತ್ತಪ್ಪ ಮುಖಕ್ಕೆ ಕೇಕ್‌ ಹಚ್ಚಿ ಸಂಭ್ರಮಿಸಿದರು.

ತಂಡ ಹೀಗಿದೆ
ಕರ್ನಾಟಕ:
ಆರ್‌. ವಿನಯ್‌ ಕುಮಾರ್‌ (ನಾಯಕ), ಸಿ.ಎಂ. ಗೌತಮ್‌ (ಉಪನಾಯಕ), ಮಯಂಕ್‌ ಅಗರವಾಲ್‌, ಕೆ.ಎಲ್‌. ರಾಹುಲ್‌, ಆರ್‌. ಸಮರ್ಥ್‌, ರಾಬಿನ್‌ ಉತ್ತಪ್ಪ, ಸ್ಟುವರ್ಟ್‌ ಬಿನ್ನಿ, ಶ್ರೇಯಸ್‌ ಗೋಪಾಲ್‌, ಎಸ್‌. ಅರವಿಂದ್‌, ಕೆ. ಗೌತಮ್‌, ಮೀರ್‌ ಕೌನೇನ್‌ ಅಬ್ಬಾಸ್‌, ರೋನಿತ್‌ ಮೋರೆ, ಅರ್ಜುನ ಹೊಯ್ಸಳ, ಅಬ್ರಾರ್‌ ಖಾಜಿ ಮತ್ತು ಪವನ್‌ ದೇಶಪಾಂಡೆ.

ರಾಜಸ್ತಾನ: ಪಂಕಜ್‌ ಸಿಂಗ್ (ನಾಯಕ), ಮಣಿಂದರ್‌ ಸಿಂಗ್‌, ಪ್ರಣಯ್‌ ಶರ್ಮಾ, ಅಶೋಕ್‌ ಮೆನಾರಿಯಾ, ಚೇತನ್‌ ಬಿಸ್ಟ್‌್, ಎಲ್‌. ಮಹಿಪಾಲ್‌, ಅನಿಕೇತ್‌ ಚೌಧರಿ, ತನ್ವೀರ್‌ ಉಲ್‌ ಹಕ್‌, ಸಿದ್ದಾರ್ಥ್‌ ದೊಬಲ್‌, ರಾಜೇಶ್‌ ಬಿಷ್ಣೋಯಿ, ಅಮಿತ್ ಗೌತಮ್‌, ರಾಹುಲ್‌ ಚಾಹರ್‌, ದೀಪಕ್‌ ಚಾಹರ್‌, ಸಲ್ಮಾನ್‌ ಖಾನ್‌ ಮತ್ತು ಅಂಕಿತ್‌ ಲಾಂಬಾ.
ಅಂಪೈರ್‌ಗಳು: ವಿನೀತ್‌ ಕುಲಕರ್ಣಿ ಹಾಗೂ ಅನಿಲ್‌ ದಂಡೇಕರ್‌
ರೆಫರಿ: ನಿತಿನ್‌ ಗೋಯಲ್‌. ಆರಂಭ: ಬೆಳಿಗ್ಗೆ 9.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT