ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಜೋಡಿ, ಹೊಸ ಭರವಸೆ...

Last Updated 13 ನವೆಂಬರ್ 2016, 19:30 IST
ಅಕ್ಷರ ಗಾತ್ರ
‘ಇದುವರೆಗಿನ ನನ್ನ ಯಶಸ್ಸಿನಲ್ಲಿ ಜ್ವಾಲಾ ಗುಟ್ಟಾ ಅವರ ಪಾಲೂ ಇದೆ. ಸಿಹಿ ನೆನಪುಗಳೊಂದಿಗೆ ಬೇರೆ ಆಗುತ್ತಿದ್ದೇವೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಪರಸ್ಪರ ಮಾತನಾಡಿಕೊಂಡೇ ಈ ನಿರ್ಧಾರಕ್ಕೆ ಬಂದಿದ್ದೇನೆ. ಜ್ವಾಲಾ ನಿರ್ಧಾರವನ್ನು ನಾನು ಗೌರವದಿಂದಲೇ ಸ್ವೀಕರಿಸಿದ್ದೇನೆ’
 
–ಹೀಗೆಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದು ಬ್ಯಾಡ್ಮಿಂಟನ್‌ ಡಬಲ್ಸ್‌ ಆಟಗಾರ್ತಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ. ನಿಜ, ಎಲ್ಲಾ ಉತ್ತಮ ಸಂಗತಿಗಳಿಗೂ ಅಂತ್ಯ ಎಂಬುದು ಇದ್ದೇ ಇರುತ್ತದೆ. ಸುಮಾರು ಎಂಟು ವರ್ಷಗಳಿಂದ ಮಹಿಳೆಯರ ಡಬಲ್ಸ್‌ನಲ್ಲಿ ಜೊತೆಗೂಡಿ ಆಡಿರುವ ಅಶ್ವಿನಿ ಹಾಗೂ ಹೈದರಾಬಾದ್‌ನ ಜ್ವಾಲಾ ಗುಟ್ಟಾ ಹಲವು ಸಾಧನೆಗಳ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಆದರೀಗ ಆ ಜೊತೆಯಾಟ ಸಾಕೆನಿಸಿ ತಮ್ಮ ಹಾದಿ ಕಂಡುಕೊಂಡಿದ್ದಾರೆ.
 
2012ರ ಲಂಡನ್‌ ಒಲಿಂಪಿಕ್ಸ್‌ ಬಳಿಕ ಜ್ವಾಲಾ ಗುಟ್ಟಾ ವಿಶ್ರಾಂತಿಗೆ ಮೋರೆ ಹೋಗಿದ್ದ ಕಾರಣ ಅಶ್ವಿನಿ ಪೊನ್ನಪ್ಪ ಕೆಲ ತಿಂಗಳು ಪ್ರದ್ನ್ಯಾ ಗಾದ್ರೆ ಜೊತೆಗೂಡಿ ಆಡಿದ್ದರು. ಮತ್ತೆ ಜ್ವಾಲಾ ಹಾಗೂ ಅಶ್ವಿನಿ ಒಂದುಗೂಡಿ ಆಡಿ ಯಶಸ್ಸು ಕಂಡಿದ್ದರು. ಆದರೆ, ಕಳೆದ ಎರಡು ವರ್ಷಗಳಲ್ಲಿ ಅವರ ಸಾಧನೆ ಅಷ್ಟಕಷ್ಟೆ. 2015ರ ಜನವರಿಯಲ್ಲಿ ಕೆನಡಾ ಓಪನ್‌ ಗೆದ್ದ ಬಳಿಕ ಮಹತ್ವದ ಟೂರ್ನಿಗಳಲ್ಲಿ ಎಡವಿದ್ದೇ ಹೆಚ್ಚು. ರಿಯೊ ಒಲಿಂಪಿಕ್ಸ್‌ನಲ್ಲಿ ಲೀಗ್‌ ಹಂತದಲ್ಲೇ ಹೊರಬಿದ್ದಿದ್ದರು. ಬಿಡಬ್ಲ್ಯುಎಫ್‌ ಬ್ಯಾಡ್ಮಿಂಟನ್‌ ಕ್ರಮಾಂಕದಲ್ಲಿ 14ನೇ ಸ್ಥಾನದಿಂದ 26ನೇ ಸ್ಥಾನಕ್ಕೆ ಕುಸಿದಿದ್ದಾರೆ. ಜೂನ್‌ನಲ್ಲಿ ನಡೆದ ಇಂಡೊನೇಷ್ಯಾ ಓಪನ್ ಬಳಿಕ ಸತತ ಆರು ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.
 
ಜ್ವಾಲಾ ಅವರಿಗೆ ಈಗ 33 ವರ್ಷ. ಅಶ್ವಿನಿಗೆ 27 ವರ್ಷ. 2020ರ ಟೋಕಿಯೊ ಒಲಿಂಪಿಕ್ಸ್‌ ಗಮನದಲ್ಲಿಟ್ಟುಕೊಂಡು ನೋಡಿದರೆ ಅಶ್ವಿನಿ ಪಾಲಿಗೆ ಇದೊಂದು ಸಕಾರಾತ್ಮಕ ನಿರ್ಧಾರ. ಅಶ್ವಿನಿಗೆ ಹೊಸ ಜೊತೆಗಾರ್ತಿಯಾಗಿ ಸಿಕ್ಕಿರುವ ಗೋಪಿಚಂದ್‌ ಅಕಾಡೆಮಿಯ ಎನ್‌.ಸಿಕ್ಕಿ ರೆಡ್ಡಿ ಅವರ ಮಾತುಗಳಲ್ಲಿ ಇದು ಸ್ಪಷ್ಟವಾಗುತ್ತದೆ. ಅಲ್ಲದೇ, ಈ ನಿರ್ಧಾರದಲ್ಲಿ ರಾಷ್ಟ್ರೀಯ ಕೋಚ್‌ ಪುಲ್ಲೇಲಾ ಗೋಪಿಚಂದ್‌ ಪಾತ್ರವೂ ಇರುವಂತಿದೆ. ಜ್ವಾಲಾ ರೀತಿ ಸಿಕ್ಕಿ ರೆಡ್ಡಿ ಕೂಡ ಎಡಗೈ ಆಟಗಾರ್ತಿ. ಅವರಿಗಿನ್ನೂ 24 ವರ್ಷ.
 
ಹೀಗಾಗಿ, ಹೊಂದಿಕೊಳ್ಳಲು ಅಶ್ವಿನಿಗೆ ಹೆಚ್ಚು ಕಷ್ಟವಾಗಲಾರದು. ಜ್ವಾಲಾ ಮಿಶ್ರ ಡಬಲ್ಸ್‌ನತ್ತ ಚಿತ್ತ ಹರಿಸಿದ್ದು, ಉತ್ತರ ಪ್ರದೇಶದ ಮನು ಅತ್ರಿ ಜೊತೆಗೂಡಿ ಆಡಲು ನಿರ್ಧರಿಸಿದ್ದಾರೆ. ಅಶ್ವಿನಿ ಮಿಶ್ರ ಡಬಲ್ಸ್‌ನಲ್ಲಿ ನಂದಗೋಪಾಲ ಕಿದಂಬಿ ಜೊತೆಗೂಡಿ ಆಡಲಿದ್ದಾರೆ.
 
ಅದೇನೇ ಇರಲಿ, ಅಶ್ವಿನಿ ಹಾಗೂ ಜ್ವಾಲಾ ಸಾಧನೆಯ ಹೆಜ್ಜೆ ಗುರುತು ಮೂಡಿಸಿಯೇ ಬೇರೆಯಾಗಿದ್ದಾರೆ. 2011ರ ವಿಶ್ವ ಬ್ಯಾಡ್ಮಿಂಡನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದು ಇವರಿಬ್ಬರ ಪಾಲಿನ ಶ್ರೇಷ್ಠ ಸಾಧನೆ.
 
‘ಎರಡು ಒಲಿಂಪಿಕ್ಸ್‌ಗಳಲ್ಲಿ ಸ್ಪರ್ಧಿಸಿದ ಖುಷಿ ಇದೆ. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಅವಕಾಶ ತಪ್ಪಿಸಿಕೊಂಡ ನೋವು ಇನ್ನೂ ಕಾಡುತ್ತಿದೆ. ರಿಯೊ ಒಲಿಂಪಿಕ್ಸ್‌ಗೆ ತೆರಳುವ ಮುನ್ನ ಡೆಂಗಿ ಸಮಸ್ಯೆಯಿಂದ ಬಳಲಿದ್ದೆ. ಹೀಗಾಗಿ, ಪೂರ್ಣ ಸಾಮರ್ಥ್ಯ ತೋರಿ ಆಡಲು ಸಾಧ್ಯವಾಗಲಿಲ್ಲ’ ಎನ್ನುತ್ತಾರೆ ಕೊಡಗು ಮೂಲದ ಅಶ್ವಿನಿ.
 
*
*
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT