ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಹತ್ತರ ಬರ’ದ ನೀರಾವರಿ ಯೋಜನೆಗಳು!

Last Updated 14 ನವೆಂಬರ್ 2016, 19:30 IST
ಅಕ್ಷರ ಗಾತ್ರ

1972ರಲ್ಲಿ ಕಲಬುರ್ಗಿ ಜಿಲ್ಲೆ ಸೇರಿದಂತೆ ಈ ಭಾಗ ತೀವ್ರ ಬರ ಬಿದ್ದಿತ್ತು. ಅದು ಈಗಲೂ ‘ಬಾಹತ್ತರ ಬರ’ ಎಂದೇ ಪ್ರಸಿದ್ಧಿ. 72ಕ್ಕೆ ಹಿಂದಿಯಲ್ಲಿ ಬಾಹತ್ತರ ಎನ್ನುತ್ತಾರೆ. ಹೀಗಾಗಿ 72ರ ಬರವನ್ನು ‘ಬಾಹತ್ತರ ಬರ’ ಎಂದೇ ಕರೆಯಲಾಗುತ್ತಿದೆ. ಬರದಿಂದ ಕಂಗೆಟ್ಟಿದ್ದ ಜನರ ಕೈಗೆ ಉದ್ಯೋಗ ನೀಡಬೇಕಿತ್ತು. ಈ ಭಾಗದ ಬಹುತೇಕ ಮಧ್ಯಮ ನೀರಾವರಿ ಯೋಜನೆಗಳ ಜಾರಿಗೆ ಈ ಬರವೇ ಪ್ರೇರಣೆಯಾಯಿತು.

ಬೆಣ್ಣೆತೊರಾ ಯೋಜನೆಯ ಕಾಮಗಾರಿ ಆರಂಭಗೊಂಡಿದ್ದು 1972ರಲ್ಲಿ. ಈ ಭಾಗದ ಬಹುತೇಕ ಜಲಾಶಯಗಳ ಕಾಮಗಾರಿ ಆರಂಭಗೊಂಡಿದ್ದು ಹೆಚ್ಚುಕಡಿಮೆ ಇದೇ ಅವಧಿಯಲ್ಲಿ. ಬರ ಪರಿಹಾರ ಕಾಮಗಾರಿಯಾಗಿ ಈ ಜಲಾಶಯಗಳ ಕಾಮಗಾರಿ ಕೈಗೊಳ್ಳಲಾಯಿತು. ಮಂದಗತಿ ಕಾಮಗಾರಿ ಕಾರಣ ಯೋಜನಾ ವೆಚ್ಚವೂ ಹೆಚ್ಚುತ್ತ ಹೋಯಿತು.
 
ಬೆಣ್ಣೆತೊರಾ ಜಲಾಶಯ ಆರಂಭದಲ್ಲಿ ನಾಲ್ಕಾರು ಕೋಟಿಯಷ್ಟಿದ್ದ ಯೋಜನಾ ಮೊತ್ತ 1992 ಹೊತ್ತಿಗೆ ₹73.23 ಕೋಟಿಯಾಗಿತ್ತು. 2012ರಲ್ಲಿ ಪರಿಷ್ಕೃತ ದರಪಟ್ಟಿಯಂತೆ ಯೋಜನಾ ಮೊತ್ತ ₹493 ಕೋಟಿಗೆ ಹೆಚ್ಚಿತು! ಅಮರ್ಜಾ, ಕೆಳದಂಡೆ ಮುಲ್ಲಾಮಾರಿ, ಮೇಲ್ದಂಡೆ ಮುಲ್ಲಾಮಾರಿ, ಗಂಡೋರಿನಾಲಾ, ಹತ್ತಿಕುಣಿ, ಸೌದಾಗರ, ಕಾರಂಜಾ, ಚುಳಕಿನಾಲಾ ಯೋಜನೆಗಳದ್ದು ಇದೇ ಸ್ಥಿತಿ.
 
ಬೆಣ್ಣೆತೊರಾ ಜಲಾಶಯ: ತೀವ್ರ ಬರಗಾಲದಲ್ಲಿಯೂ ಕಲಬುರ್ಗಿಯ ಅರ್ಧ ನಗರದ ಜನರ ದಾಹ ತಣಿಸಿದ ಜಲಾಶಯ ಇದು. ಇದೊಂದೇ ಈ ಜಲಾಶಯದ ಸಾಧನೆ! 2004ರಿಂದ ಜಲಧಿಯನ್ನು ತನ್ನೊಡಲೊಳಗೆ ಇಟ್ಟುಕೊಂಡಿದ್ದರೂ ರೈತರ ಜಮೀನಿಗೆ ಹರಿದಿದ್ದು ಮಾತ್ರ ಅತ್ಯಲ್ಪ. ಎರಡು ವರ್ಷಗಳ ಹಿಂದೆ ಜಲಾಶಯದ ಎಡ ಮತ್ತು ಬಲದಂಡೆ ನಾಲೆಗಳಲ್ಲಿ ಗಿಡಗಂಟಿಗಳು ಬೆಳೆದಿದ್ದವು. ನಾಲೆಯಲ್ಲಿ ಮಳೆ ನೀರು ನಿಂತಿದ್ದರೂ ಅದು ಮುಂದೆ ಸಾಗುತ್ತಿರಲಿಲ್ಲ.
 
ಮುಖ್ಯ ನಾಲೆಗಳಿಗೆ ಕಾಂಕ್ರೀಟ್‌ ಲೈನಿಂಗ್‌ ಬದಲು, ಶಹಾಬಾದ್‌ ಫರ್ಸಿ ಜೋಡಿಸಲಾಗಿತ್ತು. ಆ ಫರ್ಸಿಗಳ ಕುರುಹೂ ಅಲ್ಲಿರಲಿಲ್ಲ. ಜಲಾಶಯದ ಗೇಟ್‌ಗಳಿಂದ ನೀರು ಸೋರಿಕೆ ಆಗುತ್ತಿತ್ತು. ‘ಇದೇನು? ನಾಲೆಗಳ ಸ್ಥಿತಿ ಹೀಗಿದೆಯಲ್ಲ’ ಎಂದು ಅಲ್ಲಿನ ರೈತರೊಬ್ಬರನ್ನು ಪ್ರಶ್ನಿಸಿದಾಗ ಅವರು ಮುಗುಳ್ನಕ್ಕು ಮೌನಕ್ಕೆ ಶರಣಾಗಿದ್ದರು!. ಈಗ ಡ್ರಿಪ್‌ (Dam Rehabilitation & Improvement Project) ಅಡಿ ಜಲಾಶಯ ಆಧುನೀಕರಣ ಕಾಮಗಾರಿ ಆರಂಭಿಸಲಾಗಿದೆ. ಗೇಟ್‌ಗಳಿಂದ ನೀರು ಸೋರಿಕೆ ತಡೆಯಲಾಗಿದೆ. ₹150 ಕೋಟಿ ವೆಚ್ಚದಲ್ಲಿ ಎಡ ಮತ್ತು ಬಲದಂಡೆ ನಾಲೆಗಳ ಆಧುನೀಕರಣ ಕಾಮಗಾರಿ ನಡೆದಿದೆ. ನಾಲೆಗಳ ಜಾಲ ಉತ್ತಮಗೊಂಡು ನೀರು ತಮ್ಮ ಜಮೀನಿಗೆ ಹರಿಯುವ ಆಶಾಭಾವ ರೈತರಲ್ಲಿ ಮೂಡಿದೆ. ಬೆಣ್ಣೆತೊರಾ ನದಿಯ ಉಗಮಸ್ಥಾನ ಮಹಾರಾಷ್ಟ್ರದ ಉಸ್ಮಾನಾಬಾದ್‌ ಜಿಲ್ಲೆಯ ಮಾಲೇಗಾಂವ ಗ್ರಾಮ. ಬೆಣ್ಣೆತೊರಾ ನದಿಯು ಕಲಬುರ್ಗಿ ಜಿಲ್ಲೆಯ ಹೇರೂರ (ಕೆ) ಗ್ರಾಮದ ಮೂಲಕ ಹರಿದು ಕಾಗಿಣಾ ನದಿ ಸೇರುತ್ತದೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಹೇರೂರ (ಕೆ) ಗ್ರಾಮದ ಹತ್ತಿರ ಬೆಣ್ಣೆತೊರಾ ನದಿಗೆ 5.29 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯ ನಿರ್ಮಿಸಲಾಗಿದೆ.
 
ಕೃಷ್ಣಾ  ಜಲಾನಯನ ಪ್ರದೇಶದ ಕೆ–6 ಉಪ ಜಲಾನಯನ (ಲೋವರ್‌ ಭೀಮಾ) ಪ್ರದೇಶಕ್ಕೊಳಪಟ್ಟ ಭಾರಿ ನೀರಾವರಿ ಯೋಜನೆ ಇದು. ನ್ಯಾಯಮೂರ್ತಿ ಬಚಾವತ್‌ ನೇತೃತ್ವದ ಕೃಷ್ಣಾ ನ್ಯಾಯಮಂಡಳಿಯು ಈ ಯೋಜನೆಗೆ 5.75 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ಮತ್ತು ಸೇಡಂ ತಾಲ್ಲೂಕುಗಳ ಒಟ್ಟು 45 ಹಳ್ಳಿಗಳ 20,234 ಹೆಕ್ಟೇರ್‌ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ಈ ಯೋಜನೆಯ ಉದ್ದೇಶ.
 
1972ರಲ್ಲಿ ಬೆಣ್ಣೆತೊರಾ ಕಾಮಗಾರಿ ಆರಂಭಗೊಂಡಿದ್ದರೂ, ಜಲಾಶಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು  29 ವರ್ಷಗಳ ನಂತರ (2001ರಲ್ಲಿ.) 2005ರಿಂದ ಪೂರ್ಣಪ್ರಮಾಣದ ನೀರು ಸಂಗ್ರಹಿಸಲಾಗುತ್ತಿದೆ. 6,038 ಎಕರೆ ಜಮೀನು, 10 ಗ್ರಾಮಗಳು ಮುಳುಗಡೆಯಾಗಿವೆ. 13,476 ಕುಟುಂಬಗಳು ಬಾಧಿತಗೊಂಡಿವೆ. ಇಷ್ಟೆಲ್ಲ ಮಾಡಿ ನೀರು ಸಂಗ್ರಹಿಸಿದರೂ ಎಲ್ಲ 20,234 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲೇ ಇಲ್ಲ ಎಂಬುದು ಈ ಯೋಜನೆಯ ಬಗೆಗೆ ಕೇಳಿಬರುತ್ತಿರುವ ಪ್ರಮುಖ ಅಪಸ್ವರ.
 
‘62.25 ಕಿ.ಮೀ. ಉದ್ದದ ಎಡದಂಡೆ ಹಾಗೂ 82 ಕಿ.ಮೀ. ಉದ್ದದ ಬಲದಂಡೆ ನಾಲೆ ಕಾಮಗಾರಿ ಆಗಲೇ ಪೂರ್ಣಗೊಂಡಿದೆ. ಜಲಾಶಯದಲ್ಲಿ 2005ರಲ್ಲಿ ಗರಿಷ್ಠ ಮಟ್ಟಕ್ಕೆ ನೀರು ಸಂಗ್ರಹಿಸಿ ಪ್ರಾಯೋಗಿಕವಾಗಿ ನಾಲೆಗಳಲ್ಲಿ ನೀರು ಹರಿಸಲಾಗಿದೆ. ಹಂತ ಹಂತವಾಗಿ ನಿರ್ಮಿಸಿದ್ದರ ಪರಿಣಾಮವಾಗಿ ನಾಲೆಗಳ  ಜಾಲ ಶಿಥಿಲಗೊಂಡಿತು. 2009ರಲ್ಲಿ ಅತಿವೃಷ್ಟಿಯಿಂದ ನಾಲೆಗಳ ಜಾಲ ಹಾಳಾಯಿತು. ಹೀಗಾಗಿ ₹150 ಕೋಟಿ ವೆಚ್ಚದಲ್ಲಿ ಎಡ ಮತ್ತು ಬಲದಂಡೆ ನಾಲೆಗಳ ಮರು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಶಹಾಬಾದ್‌ ಫರ್ಸಿ ಬದಲು ಕಾಂಕ್ರೀಟ್‌ ಲೈನಿಂಗ್‌ ಮಾಡಲಾಗುತ್ತಿದ್ದು, ಬಲದಂಡೆ ನಾಲೆಯ 82 ಕಿ.ಮೀ. ಪೈಕಿ 43 ಕಿ.ಮೀ ಹಾಗೂ ಎಡದಂಡೆಯ 60 ಕಿ.ಮೀ. ಪೈಕಿ 30 ಕಿ.ಮೀ. ಕಾಮಗಾರಿ ಮುಗಿದಿದ್ದು, ಪ್ರಸಕ್ತ ಹಿಂಗಾರು ಹಂಗಾಮಿಗೆ ಅಷ್ಟು ಉದ್ದದ ನಾಲೆಗಳಲ್ಲಿ ನೀರು ಹರಿಸಲಾಗುತ್ತಿದೆ. ಜಲಾಶಯ ಆಧುನೀಕರಣ ಹಾಗೂ ನಾಲೆಗಳ ಮರು ನಿರ್ಮಾಣ ಕಾಮಗಾರಿ ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದೆ’ ಎನ್ನುವುದು ಕರ್ನಾಟಕ ನೀರಾವರಿ ನಿಗಮದ ಕಲಬುರ್ಗಿ ನೀರಾವರಿ ವಲಯದ ಮುಖ್ಯ ಎಂಜಿನಿಯರ್‌ ಜಗನ್ನಾಥ ಹಾಲಿಂಗೆ ಅವರ ವಿವರಣೆ. ಜಲಾಶಯ, ನಾಲೆಗಳ ಆಧುನೀಕರಣದ ಜೊತೆಗೆ ಹಸರೀಕರಣಕ್ಕೂ ಆದ್ಯತೆ ನೀಡಲಾಗಿದೆ. ನಾಲೆಗಳ ಸರ್ವಿಸ್‌ ರಸ್ತೆಗಳ ಪಕ್ಕದಲ್ಲಿ ಅಂದಾಜು 5 ಸಾವಿರ ಸಸಿನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ಅವರು.
 
ನಾಲೆ, ಹೊಲಗಾಲುವೆ: ‘ಈವರೆಗೆ ನಿರ್ಮಿಸಿರುವ ನಾಲೆಗಳ ಕಾಮಗಾರಿ ಕಳಪೆಯಾಗಿದೆ. ಹೊಲಗಾಲುವೆಗಳ ಜಾಲ ಇಲ್ಲವೇ ಇಲ್ಲ’ ಎನ್ನುವುದು ರೈತರ ದೂರು. ಆದರೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು, ನೀರು ಬಳಕೆದಾರರ ಸಹಕಾರ ಸಂಘಗಳವರತ್ತ ಬೆರಳು ತೋರುತ್ತಾರೆ. ‘ನೀವು ಸಹಕಾರ ಸಂಘ ರಚಿಸಿಕೊಂಡು ಕಾಮಗಾರಿ ಗುತ್ತಿಗೆಯ ಬೆನ್ನು ಬೀಳುವುದು, ಆಂಧ್ರ ಪ್ರದೇಶದ ಗುತ್ತಿಗೆದಾರರ ಆಮಿಷಕ್ಕೆ ಬಲಿಯಾಗುವುದು ಬೋಗಸ್‌ ಕಾಮಗಾರಿಗೆ ಕಾರಣವಾಗಿದೆ. ಇನ್ನಾದರೂ ಪ್ರಾಮಾಣಿಕವಾಗಿ ಕೆಲಸ ಮಾಡಿ’ ಎನ್ನುತ್ತಾರೆ ಅವರು.
 
‘ಬೆಣ್ಣೆತೊರಾ ಜಲಾಶಯದ ಕಾಮಗಾರಿಯ ‘ಮೇಲೆಯೇ’ ಸಾಕಷ್ಟು ವಿಧಾನಸಭಾ ಚುನಾವಣೆಗಳು ನಡೆದಿವೆ. ಹಲವರು ಶಾಸಕರು, ಸಚಿವರೂ ಆಗಿದ್ದಾರೆ. ಈಗ ನಾವು ಕಳಕಳಿಯಿಂದ ₹177ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೇವೆ’ ಎಂದು ನೇರವಾಗಿ ದೂರುತ್ತಾರೆ ಈ ಜಲಾಶಯದ ಅಚ್ಚುಕಟ್ಟು ಪ್ರದೇಶ ಹೊಂದಿರುವ ಚಿತ್ತಾಪುರ ಕ್ಷೇತ್ರದ ಶಾಸಕ, ಪ್ರವಾಸೋದ್ಯಮ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ.
 
ಇನ್ನು ಹೊಲಗಾಲುವೆ ವಿಷಯದಲ್ಲಿ ಅಧಿಕಾರಿಗಳು ಹೇಳುವುದೇ ಬೇರೆ. ‘ಮೊದಲು ಹೊಲಗಾಲುವೆಗಳನ್ನು ರೈತರೇ ಮಾಡಿಕೊಳ್ಳಬೇಕು ಎಂಬ ನಿಯಮ ಇತ್ತು. ಅಲೈನ್‌ಮೆಂಟ್‌ ಸರಿ ಆಗುವುದಿಲ್ಲ ಎಂಬ ಕಾರಣಕ್ಕೆ ನಂತರ ಇಲಾಖೆಯಿಂದಲೇ ಹೊಲಗಾಲುವೆ ನಿರ್ಮಿಸುವ ನೀತಿ ಜಾರಿಗೊಳಿಸಲಾಯಿತು. ಹೊಲಗಾಲುವೆ ನಿರ್ಮಾಣಕ್ಕೆ ಆರಂಭದಲ್ಲಿ ಇದ್ದ ಮೊತ್ತ ಪ್ರತಿ ಹೆಕ್ಟೇರ್‌ಗೆ ₹6 ಸಾವಿರ ಮಾತ್ರ. ಅದು ₹15ಸಾವಿರ ಆಯಿತು. ಈಗ ₹25 ಸಾವಿರ ನಿಗದಿ ಪಡಿಸಲಾಗಿದೆ. ಒಂದು ನೀರಾವರಿ ಯೋಜನೆಯ ನಾಲೆಗಳ ಒಟ್ಟಾರೆ ಉದ್ದದ ನಾಲ್ಕುಪಟ್ಟು ಹೊಲಗಾಲುವೆಗಳನ್ನು ನಿರ್ಮಿಸಬೇಕಾಗುತ್ತದೆ. ಒಂದು ಯೋಜನೆಯ ನಾಲೆಗಳ ಜಾಲ 100 ಕಿ.ಮೀ.ಯಷ್ಟು ಉದ್ದವಿದ್ದರೆ 400 ಕಿ.ಮೀ. ಉದ್ದದಷ್ಟು ಹೊಲಗಾಲುವೆ ನಿರ್ಮಿಸಬೇಕಾಗುತ್ತದೆ. ಇಷ್ಟೊಂದು ಕಡಿಮೆ ಮೊತ್ತ ಇರುವುದರಿಂದ ಎಲ್ಲ ಹೊಲಗಾಲುವೆಗೂ ಕಾಂಕ್ರೀಟ್‌ ಲೈನಿಂಗ್‌ ಮಾಡಲು ಸಾಧ್ಯವಾಗುವುದಿಲ್ಲ. ನೀರು ಹರಿಸುವ ಸ್ಥಳದಲ್ಲಿ, ಬಹಳ ಇಳಿಜಾರು ಇರುವ ಪ್ರದೇಶದಲ್ಲಿ ಮಾತ್ರ ಕಾಂಕ್ರೀಟ್‌ ಲೈನಿಂಗ್‌ ಮಾಡಲಾಗುತ್ತದೆ. ಉಳಿದೆಡೆ ಹಾಗೇ ಮಣ್ಣಿನಲ್ಲಿ ಹರಿ ಮಾಡಿ ಬಿಡಲಾಗುತ್ತದೆ. ಹೊಲಗಾಲುವೆಯ ಜಾಲ ಸರಿ ಇಲ್ಲದಿರುವುದಕ್ಕೆ ಇದು ಕಾರಣ. ಹೊಲಗಾಲುವೆ ನಿರ್ಮಾಣಕ್ಕೆ ಪ್ರತಿ ಹೆಕ್ಟೇರ್‌ಗೆ ₹60ರಿಂದ ₹70 ಸಾವಿರ ನೀಡಿದರೆ ಸರಿಹೋಗಬಹುದು’ ಎನ್ನುತ್ತಾರೆ ಅವರು.
 
ತೇವಾಂಶ ಮತ್ತು ತೊಗರಿ ಬೆಳೆ: ‘ಈ ಭಾಗದಲ್ಲಿ ತೊಗರಿ ಬೆಳೆ ಹೆಚ್ಚಾಗಿ ಬೆಳೆಯಲಾಗುತ್ತದೆ. ಒಂದೆರಡು ಉತ್ತಮ ಮಳೆಯಾಗಿ, ತೇವಾಂಶ ಇದ್ದರೆ ಸಾಕು. ಉತ್ತಮ ಬೆಳೆ ಬರುತ್ತದೆ. ಅದೇ ಕಾರಣಕ್ಕೆ ರೈತರು ನೀರಾವರಿ ಗೋಜಿಗೆ ಹೋಗುವುದಿಲ್ಲ. ತೇವಾಂಶ ಇದ್ದರೆ ಸಾಕು ಎನ್ನುವ ಮನಃಸ್ಥಿತಿ ಬಹುಪಾಲು ರೈತರದ್ದು. ಹೀಗಾಗಿಯೇ ಜಲಾಶಯಗಳ ಪಕ್ಕದಲ್ಲಿಯೂ ಹೆಚ್ಚಾಗಿ ನೀರಾವರಿ ಇಲ್ಲ’ ಎನ್ನುತ್ತಾರೆ ನೀರಾವರಿ ಎಂಜಿನಿಯರೊಬ್ಬರು.
 
‘ಭೂಮಿ ಸಮತಟ್ಟು ಇಲ್ಲದಿರುವುದು ಇಲ್ಲಿಯ ಇನ್ನೊಂದು ದೊಡ್ಡ ಸಮಸ್ಯೆ. ನಮ್ಮ ಹೊಲ ಮೇಲ್ಭಾಗದಲ್ಲಿದ್ದು, ನಾಲೆ ಕೆಳಭಾಗದಲ್ಲಿದೆ ಎಂದು ರೈತರು ಹಳಿಯುತ್ತಾರೆ. ಹೊಲಕ್ಕಿಂತ ಎತ್ತರದಲ್ಲಿ ನಾಲೆ ನಿರ್ಮಿಸಲು ಅಸಾಧ್ಯ. ಹಾಗೆ ಮಾಡಿದರೆ ಇಡೀ ಯೋಜನೆಯ ಅಲೈನ್‌ಮೆಂಟ್‌ ತಪ್ಪಿಹೋಗುತ್ತದೆ. ನೀರಾವರಿಗೆ ಸೂಕ್ತ ಮಣ್ಣು ಹಾಗೂ ಯಾವುದೇ ಬೆಳೆ ಬೆಳೆಯಬಹುದಾದ ಹವಾಗುಣ ಇದ್ದರೂ ನೀರು ಸದ್ಬಳಕೆಯಾಗದಿರುವುದಕ್ಕೆ ರೈತರ ಈ ಉದಾಸೀನತೆಯೇ ಕಾರಣ’ ಎನ್ನುವುದು ಅವರ ಬೇಸರ. ಈ ವಾದವನ್ನು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಅವರು ಒಪ್ಪುವುದಿಲ್ಲ. ‘ನೀರಾವರಿ ಯೋಜನೆಗಳ ವೈಫಲ್ಯಕ್ಕೆ ಭ್ರಷ್ಟಾಚಾರವೇ ಕಾರಣ. ಸುಖಾಸುಮ್ಮನೆ ರೈತರನ್ನು ದೂರುವುದು ಸರಿಯಲ್ಲ’ ಎನ್ನುತ್ತಾರೆ ಅವರು.
 
‘ಬೆಣ್ಣೆತೊರಾ, ಕೆಳದಂಡೆ ಮುಲ್ಲಾಮಾರಿ, ಮೇಲ್ದಂಡೆ ಮುಲ್ಲಾಮಾರಿ, ಗಂಡೋರಿ ನಾಲಾ, ಭೀಮಾ ಏತ ನೀರಾವರಿ, ಅಮರ್ಜಾ ಮಧ್ಯಮ ನೀರಾವರಿ ಯೋಜನೆಗಳಿಂದ 2 ಲಕ್ಷಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಅಲ್ಪಾವಧಿ ನೀರಾವರಿ ಬೆಳೆಗಳನ್ನು ಬೆಳೆಯಲು ಅವಕಾಶ ಇದೆ. ಈ ಯೋಜನೆಗಳು ಪೂರ್ಣಗೊಂಡು ನೀರು ಸಂಗ್ರಹಿಸುತ್ತಿದ್ದರೂ, ನಾಲೆಗಳ ಜಾಲ ಸರಿ ಇಲ್ಲದ ಕಾರಣ ರೈತರ ಜಮೀನಿಗೆ ನೀರು ಹರಿಯುತ್ತಿಲ್ಲ. ಇನ್ನೊಂದೆಡೆ ನೀರಾವರಿಗೆ ರೈತರನ್ನು ಉತ್ತೇಜಿಸುವ ಕೆಲಸವೂ ಆಗುತ್ತಿಲ್ಲ. ಇದಕ್ಕೆ ಈ ಭಾಗದ ಮಾಜಿ–ಹಾಲಿ ಶಾಸಕರು, ಸಂಸದರು, ಸಚಿವರೇ ಕಾರಣ’ ಎನ್ನುವುದು ಅವರ ನೇರ ಆರೋಪ.
 
ಇನ್ನು ‘ಉದಾಸೀನತೆ’ಗೆ ಅರ್ಥಶಾಸ್ತ್ರಜ್ಞೆ ಪ್ರೊ. ಛಾಯಾ ದೇಗಾಂವಕರ ಅವರ ನೀಡುವ ವ್ಯಾಖ್ಯಾನವೇ ಬೇರೆ. ‘ರೈತರಲ್ಲಿ ಉದಾಸೀನತೆ ಹೆಚ್ಚು ಎನ್ನುವುದಕ್ಕಿಂತ ಅವರಿಗೆ ಉತ್ತೇಜನ ನೀಡುವ ಕೆಲಸ ಆಗುತ್ತಿಲ್ಲ. ಮೊದಲಿನಿಂದಲೂ ಅವರು ಬಡತನದಲ್ಲಿಯೇ ಬಂದಿದ್ದಾರೆ. ನಿಜಾಮರ ಆಡಳಿತದಲ್ಲಿ ಕೃಷಿ ಆದಾಯದ ಬಹುಪಾಲನ್ನು ತೆರಿಗೆ ರೂಪದಲ್ಲಿ ಕೊಡಬೇಕಾಗುತ್ತಿತ್ತು. ಬೆಳೆದ ಬೆಳೆಯಲ್ಲಿ ಮುಕ್ಕಾಲು ಭಾಗ ನಿಜಾಮರಿಗೇ ಕೊಡಬೇಕಲ್ಲ, ಬೆಳೆದ ಬೆಳೆ ಎಲ್ಲ ನಮ್ಮ ಕೈಸೇರಲ್ಲ ಎಂಬ ಭಾವನೆ ಈ ಭಾಗದ ರೈತರಲ್ಲಿ ಬೆಳೆಯಿತು. ಇದರಿಂದಾಗಿ ಕೃಷಿ ಉತ್ಪಾದನೆ ಹಿಮ್ಮುಖವಾಯಿತು. ಆಸಕ್ತಿ ಕುಂಠಿತಗೊಂಡು, ಕಾಲಕ್ರಮೇಣ ಆಲಸಿ ಪ್ರವೃತ್ತಿ ಬೆಳೆಯಲೂ ಇದು ಕಾರಣವಾಯಿತು’ ಎನ್ನುವುದು ಅವರ ಅಭಿಪ್ರಾಯ.
 
ಆರ್ಥಿಕ ಸ್ಥಿತಿಯೇ ಬದಲಾಗುತ್ತಿತ್ತು: ‘ಈ ನೀರಾವರಿ ಯೋಜನೆಗಳು 10 ವರ್ಷಗಳ ಹಿಂದೆಯೇ ಪೂರ್ಣಗೊಂಡಿದ್ದರೆ, ಅಚ್ಚುಕಟ್ಟು ಪ್ರದೇಶದ ಜನರ ಆರ್ಥಿಕ ಚಿತ್ರಣವೇ ಬದಲಾಗುತ್ತಿತ್ತು. ಒಣಬೇಸಾಯ ಪ್ರದೇಶಕ್ಕೆ ಹೋಲಿಸಿದರೆ ನೀರಾವರಿ ಪ್ರದೇಶದ ಆದಾಯ ಮೂರು ಪಟ್ಟು ಹೆಚ್ಚಿರುತ್ತದೆ. ಅಂದರೆ ಒಣ ಬೇಸಾಯದಲ್ಲಿ ಒಂದು ಎಕರೆಗೆ ವಾರ್ಷಿಕ ₹5 ಸಾವಿರ ಆದಾಯ ಬಂದರೆ, ಅದೇ ಒಂದು ಎಕರೆಯಲ್ಲಿ ನೀರಾವರಿಯಿಂದ ₹15 ಸಾವಿರ ಆದಾಯ ಬರುತ್ತದೆ’ ಎನ್ನುವುದು ಅರ್ಥಶಾಸ್ತ್ರಜ್ಞೆ ಪ್ರೊ.ಛಾಯಾ ದೇಗಾಂವಕರ ಅವರ ವಿವರಣೆ.
 
‘ನಮ್ಮದು ಕೃಷಿ ಪ್ರಧಾನ ಅರ್ಥವ್ಯವಸ್ಥೆ. ಎಲ್ಲವೂ ಕೃಷಿಯನ್ನೇ ಅವಲಂಬಿಸಿದೆ. ನೀರಾವರಿಯಿಂದ ರೈತರ ಆರ್ಥಿಕ ಅಭಿವೃದ್ಧಿ ಆಗಿದ್ದರೆ ಅವರಲ್ಲಿ ಖರೀದಿಸುವ ಸಾಮರ್ಥ್ಯ ಹೆಚ್ಚುತ್ತಿತ್ತು. ಖರೀದಿಸುವ ಸಾಮರ್ಥ್ಯ ಹೆಚ್ಚಾದರೆ ಗ್ರಾಹಕ ವಸ್ತುಗಳಿಗೆ ಬೇಡಿಕೆಯೂ ಹೆಚ್ಚುತ್ತಿತ್ತು. ಇದು ಉತ್ಪಾದನಾ, ಸೇವಾ ವಲಯದ ಅಭಿವೃದ್ಧಿಗೆ ಪೂರಕವಾಗುತ್ತಿತ್ತು. ಈ ಪ್ರದೇಶ ಕೈಗಾರಿಕೆ, ಉತ್ಪಾದನೆ ಮತ್ತು ಸೇವಾವಲಯದಲ್ಲಿ ಹಿಂದುಳಿಯಲು ಇದು ಪ್ರಮುಖ ಕಾರಣ’ ಎನ್ನುತ್ತಾರೆ ಅವರು.
 
**
ಎಕರೆಗೆ ₹62,917 ಖರ್ಚು!
ಬೆಣ್ಣೆತೊರಾ, ಭೀಮಾ ಏತ ನೀರಾವರಿ, ಕೆಳದಂಡೆ ಮುಲ್ಲಾಮಾರಿ, ಅಮರ್ಜಾ, ಗಂಡೋರಿ ನಾಲಾ, ಚಂದ್ರಂಪಳ್ಳಿ, ಕಾರಂಜಾ ಈ ಪ್ರಮುಖ ಏಳು ಏತ ನೀರಾವರಿ ಯೋಜನೆಗಳಿಗೆ ಹಂಚಿಕೆಯಾದ ನೀರು 23.254 ಟಿಎಂಸಿ ಅಡಿ. ಈ ಯೋಜನೆಗಳ ಆರಂಭಿಕ ಯೋಜನಾ ಮೊತ್ತ ₹190.24 ಕೋಟಿ. ಆದರೆ ಈವರೆಗೆ ಮಾಡಿರುವ ವೆಚ್ಚ ₹1,660 ಕೋಟಿ! ಈ ಏಳು ಯೋಜನೆಗಳಿಂದ 2,63,838 ಎಕರೆ ನೀರಾವರಿ ಪ್ರದೇಶ ಇದ್ದು, ಸರ್ಕಾರ ಒದಗಿಸಿರುವ ಮಾಹಿತಿ ಪ್ರಕಾರ, ಈಗ ಖರ್ಚಾಗಿರುವ ಹಣ ಲೆಕ್ಕ ಹಾಕಿದರೆ ಸರ್ಕಾರ ಪ್ರತಿ ಎಕರೆ ನೀರಾವರಿ ಕಾಮಗಾರಿಗೆ ₹62,917 ಖರ್ಚು ಮಾಡಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT