ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡ ತಳಿಗಳ ಸಂರಕ್ಷಣೆಯ ಹಾದಿ

ಹೊಸ ಹೆಜ್ಜೆ–28
Last Updated 14 ನವೆಂಬರ್ 2016, 19:30 IST
ಅಕ್ಷರ ಗಾತ್ರ
–ನೂರ್ ನವಾಜ್ ಎ. ಎಸ್.
 
**
‘ವ್ಯವಸಾಯ ಎಂದರೆ ಮನೆ ಮಂದಿಯೆಲ್ಲಾ ಸಾಯ’ ಎಂಬ ಹತಾಶೆಯ ಮಾತು ರೈತ ವಲಯದಲ್ಲಿ ಇಂದಿಗೂ ಚರ್ಚಾ ವಿಷಯವೇ. ಆದರೆ ಅದೇ ಕೃಷಿಯನ್ನೇ ಸವಾಲನ್ನಾಗಿ ಸ್ವೀಕರಿಸಿ, ಸಮುದಾಯದ ನೆರವಿನೊಂದಿಗೆ ಭತ್ತದ ನೂರಾರು ತಳಿಯನ್ನು ಉಳಿಸಿ, ಬೆಳೆಸುತ್ತಿರುವ ಅಪರೂಪದ ಸಂಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಗುಂಡೇನಟ್ಟಿ ಗ್ರಾಮದಲ್ಲಿ ಕಾಣಸಿಗುತ್ತದೆ.
 
ಸೋನಾ ಮಸೂರಿ, ಬಾಸುಮತಿ, ಜಯಾ ಹೀಗೆ ನೆನಪಿರುವ ಒಂದಿಷ್ಟು ತಳಿಯನ್ನು ಮಾತ್ರ ಬಲ್ಲ ನಮಗೆ ಇಂದ್ರಾಣಿ, ರಕ್ತಸಾಳಿ, ದೊಡಗ್ಯ, ಕರಿಗಜವಿಲೆ, ಡಾಂಬರುಸಾಳಿ, ಕರಿಯಕ್ಕಿ, ಗಂಧಸಾಳಿ, ಬೆಳಗಾಂ ಬಾಸುಮತಿ ಇನ್ನೂ ಮುಂತಾದವು ತೀರಾ ಅಪರೂಪದ ಹೆಸರುಗಳು. ಆದರೆ ಇವುಗಳು ಯಾವುವೂ ವಿಜ್ಞಾನಿಗಳ ಪ್ರಯೋಗಾಲಯದಲ್ಲಿ ಅಭಿವೃದ್ಧಿಗೊಂಡವುಗಳಲ್ಲ. ಬದಲಿಗೆ ನೂರಾರು ವರ್ಷಗಳಿಂದ ಪೂರ್ವಜರು ಜತನದಿಂದ ಕಾಪಾಡಿಕೊಂಡು ಬಂದ ಇಂಥ ಅಪರೂಪದ ಹಾಗೂ ಔಷಧೀಯ ಗುಣವಿರುವ ತಳಿಗಳನ್ನು ಗುಂಡೇನಟ್ಟಿಯ ಸಿದ್ಧಾರೂಢ ಸಾವಯವ ಕೃಷಿಕರ ಬಳಗ ಹಾಗೂ ಬೀಜ ಬ್ಯಾಂಕ್‌ನಲ್ಲಿ ನೋಡಬಹುದು, ಖರೀದಿಸಬಹುದು ಹಾಗೂ ಬೆಳೆದು ಬಳಸಲೂಬಹುದು. 
 
ತಳಿ ಸಂರಕ್ಷಣೆ ಕುರಿತು ಮಾತನಾಡಿದ ಬಳಗದಲ್ಲಿ ಒಬ್ಬರಾದ ಶಂಕರ ಲಂಗಟಿ ತಮ್ಮ ಬಳಗದ ಕಾರ್ಯಚಟುವಟಿಕೆ ಕುರಿತು ಮಾತನಾಡಿ, ‘ನಮ್ಮ ಬಳಗದಲ್ಲಿ 40 ರೈತರು ಇದ್ದಾರೆ. ದಶಕಕ್ಕೂ ಮೊದಲು ಆರಂಭಗೊಂಡ ಈ ಬಳಗ, 2011ರಿಂದ ನೋಂದಣಿಯಾಗಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು. ಬೆಂಗಳೂರಿನ ಗ್ರೀನ್ ಮತ್ತು ಜಾಗೃತಿ ಪ್ರತಿಷ್ಠಾನದ ಮೂಲಕ ಸಾವಯವ ಹಾಗೂ ದೇಸಿ ತಳಿ ಸಂರಕ್ಷಣೆ ಕುರಿತು ತರಬೇತಿ ನೀಡಿ ನಶಿಸಲಿರುವ ಅಪರೂಪದ ತಳಿಗಳನ್ನು ಬೆಳೆಸಿ ಬೀಜ ಉತ್ಪಾದಿಸಲು ಆಸಕ್ತಿ ಮೂಡಿಸಿದರು. ಇದಕ್ಕೆ ಬೆಂಗಳೂರಿನ ‘ಎಪಾಫ್’ ಸಾವಯವ ಕೃಷಿ ಮಾನ್ಯತಾ ಸಂಸ್ಥೆಯಿಂದ ಪ್ರಮಾಣಪತ್ರವೂ ದೊರೆತಿದೆ’ ಎಂದೆನ್ನುತ್ತಾರೆ. ಇದರ ಮೂಲ ಕಾರಣೀಭೂತರು ಶಂಕರ ಲಂಗಟಿ. ಕೇವಲ ಮೂರನೇ ತರಗತಿಯವರೆಗೆ ಓದಿರುವ ಇವರಿಗೆ ಕೃಷಿಯಲ್ಲಿ ಅಪಾರ ಆಸಕ್ತಿ. ಇತರರಿಗಿಂತ ಭಿನ್ನವಾದ ಕೃಷಿ ಹಾಗೂ ಜನಮಾನಸದಿಂದ ಮರೆಯಾಗಿರುವ ಅಪರೂಪದ ತಳಿಗಳನ್ನು ಸಂರಕ್ಷಿಸಿ ಅವುಗಳನ್ನು ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದರು ಎನ್ನುವುದು ಇವರ ಮಾತಿನಿಂದಲೇ ಅರವಿಗೆ ಬರುವಂತಿತ್ತು.
 
‘ಮೊದಮೊದಲು ನನ್ನ ಹಳ್ಳಿಯ ಸುತ್ತಮುತ್ತಲಿನ ರೈತರಲ್ಲಿದ್ದ ತಳಿಗಳನ್ನು ಸಂಗ್ರಹಿಸಿದೆ. ಬೀಜ ಶುದ್ಧತೆಗೆ ಹೆಚ್ಚು ಗಮನ ನೀಡಿದೆ. ಜತೆಗೆ ಕೃಷಿ ವಿಶ್ವವಿದ್ಯಾಲಯಗಳು ಆಯೋಜಿಸುತ್ತಿದ್ದ ಕೃಷಿ ಮೇಳ, ಬೀಜ ಮೇಳ ಹಾಗೂ ಕೃಷಿ ಕಾರ್ಯಾಗಾರಗಳಿಗೆ ಭೇಟಿ ನೀಡಿ, ಅಲ್ಲಿಗೆ ಬರುತ್ತಿದ್ದ ರೈತರ ಬಳಿ ಇದ್ದ ದೇಸಿ ತಳಿಗಳನ್ನು ಕಲೆ ಹಾಕಿದೆ. ಕೆಲವೊಮ್ಮೆ 100 ಅಥವಾ 200 ಗ್ರಾಂ ಬೀಜ ತಂದು ಅದನ್ನು ಬೆಳೆದು ಸಂರಕ್ಷಿಸಿದ ಉದಾಹರಣೆಗಳೂ ನನ್ನಲ್ಲಿ ಸಾಕಷ್ಟಿವೆ. ನಂತರ ಈ ಪ್ರಯತ್ನಕ್ಕೆ ನನ್ನೂರಿನ ಸಮಾನ ಮನಸ್ಕ ರೈತರು ಜತೆಗೂಡಿದ್ದೇ ಸಂತೋಷ. ಹೀಗೆ ಅಸ್ತಿತ್ವಕ್ಕೆ ಬಂದ ಬಳಗವು ತನ್ನದೇ ಆದ ನೀತಿ, ನಿಯಮಾವಳಿಯನ್ನು ರಚಿಸಿಕೊಂಡಿದೆ’ ಎಂದೆನ್ನುತ್ತಾರೆ ಲಂಗಟಿ.
 
ಸಂಘದ ಪ್ರತಿಯೊಬ್ಬ ಸದಸ್ಯನೂ ಹೆಚ್ಚಿನ ಬೇಡಿಕೆ ಇರುವ ತಳಿಗಳನ್ನು 1 ಅಥವಾ 2 ಎಕರೆ ಪ್ರದೇಶದಲ್ಲಿ ಬೆಳೆಸಿ, ಬಳಗದ ಬೀಜ ಬ್ಯಾಂಕ್‌ಗೆ ಸೂಚಿಸಿದಷ್ಟು ಬೀಜವನ್ನು ನೀಡುತ್ತಾರೆ. ಇದು ಈ ಬಳಗದ ಷರತ್ತು ಕೂಡಾ ಹೌದು. ಇಲ್ಲಿರುವ ಇತರೆ ತಳಿಗಳನ್ನು ಕಾಪಾಡುವ ಉದ್ದೇಶದಿಂದ ಪ್ರತಿ ತಳಿಗಳನ್ನು ಪ್ರತಿ ವರ್ಷ ಒಂದಷ್ಟು ಪ್ರದೇಶದಲ್ಲಿ ಬೆಳೆದು ತಳಿ ಹಾಗೂ ಅದರ ಶುದ್ಧತೆ ಕಾಪಾಡಲಾಗುತ್ತಿದೆ. ಪ್ರತಿ ವರ್ಷ ಬೆಳೆಯುವುದರಿಂದ ಬೀಜದ ಮೊಳಕೆಯೊಡೆಯುವ ಸಾಮರ್ಥ್ಯ ಕಾಪಾಡಿಕೊಳ್ಳುವ ಉದ್ದೇಶವೂ ಇದರಲ್ಲಿದೆ. ಹೀಗಾಗಿಯೇ ಇಂದಿಗೂ 80ಕ್ಕೂ ಹೆಚ್ಚು ತಳಿಗಳು  ಇವರಲ್ಲಿವೆ.
 
ಹೆಚ್ಚಿನ ಬೇಡಿಕೆಯಲ್ಲಿರುವ ತಳಿಗಳಾದ ಇಂದ್ರಾಣಿ, ಎಕರೆಗೆ 25 ಕ್ವಿಂಟಲ್ ಇಳುವರಿ ನೀಡುತ್ತದೆ. ಆದರೆ ಬಹಳಷ್ಟು ತಳಿಗಳ ಇಳುವರಿ ಕೇವಲ ಸರಾಸರಿ 15–17 ಕ್ವಿಂಟಲ್ ಅಷ್ಟೆ. ಆದರೆ ಬೇಡಿಕೆ ಹೆಚ್ಚು. ಹೀಗಾಗಿ ಇವನ್ನು ಹೆಚ್ಚಿನ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
 
ಈ ಬಳಗದ ಕಾರ್ಯ ಚಟುವಟಿಕೆ ನೋಡಲು ರಾಜ್ಯದವರು ಮಾತ್ರವಲ್ಲ, ದೇಶದ ನಾನಾ ಮೂಲೆಯಿಂದ ಬರುವ ಜನರ ಸಂಖ್ಯೆಯೂ ದೊಡ್ಡದಿದೆ. ಕೆಲವರು ಅಪರೂಪದ ತಳಿಯ ಬೀಜಗಳಿಗೆ ಬಂದರೆ, ಇನ್ನೂ ಕೆಲವರು ಬಾಣಂತನಕ್ಕೆ, ಮಧುಮೇಹಿ ಇತ್ಯಾದಿಗಳಿಗೆ ಅಗತ್ಯವಿರುವ ಔಷಧೀಯ ಗುಣವಿರುವ ಅಕ್ಕಿಯನ್ನು ನೋಡಿ, ಖರೀದಿಸಲು ಬರುತ್ತಾರೆ. 
 
ಲಾಭದಾಯಕ, ಸರಳ ಕೃಷಿಗೆ ಆದ್ಯತೆ
ತಮ್ಮಲ್ಲಿರುವ ಜವಾರಿ ತಳಿಯ ಎಮ್ಮೆಗಳು ಸೆಗಣಿಯನ್ನು ಸಾವಯವ ಗೊಬ್ಬರವನ್ನಾಗಿ ಬಳಸುತ್ತಾರೆ. ಎಮ್ಮೆಗೆ ಬೇಕಾಗುವ ಮೇವು ಉತ್ಪಾದಿಸುವ ಸಲುವಾಗಿ ಎತ್ತರದ ಹುಲ್ಲಿನ ಜಾತಿಯಾದ ಕರಿಕಾಲು ದೊಡಗ್ಯ ಭತ್ತವನ್ನೇ ಬೆಳೆಸಿ ಮೇವಿನ ಕೊರತೆಯನ್ನು ನೀಗಿಸಿಕೊಂಡಿದ್ದಾರೆ. ಇದು ರೋಗನಿರೋಧಕ ಶಕ್ತಿ ಹೊಂದಿದ್ದು 5–6 ಅಡಿ ಎತ್ತರ ಬೆಳೆಯುತ್ತದೆ. ಕಡಿಮೆ ನೀರಿನಲ್ಲೂ ಬೆಳೆಯಬಹುದಾದ ಈ ತಳಿ ಮೇವಿನೊಂದಿಗೆ ಭತ್ತವನ್ನೂ ನೀಡುವುದರಿಂದ ದ್ವಿಗುಣ ಲಾಭವನ್ನು ಇವರು ಪಡೆಯುತ್ತಿದ್ದಾರೆ. ಈ ತಳಿ ಬರನಿರೋಧಕ ಹಾಗೂ ಕಳೆ ನಿರೋಧಕ ಗುಣ ಹೊಂದಿರುವುದು ವಿಶೇಷ.
 
ಸಾವಯವ ಗೊಬ್ಬರ ಉತ್ಪಾದನೆಗೆ ಅಗತ್ಯವಿರುವ ಹಸಿರು ತ್ಯಾಜ್ಯಗಳಿಗಾಗಿ ಕೃಷಿ ಹೊಂಡ ನಿರ್ಮಿಸಿ, ಅದರ ಸುತ್ತ ಮರಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ತೋಟಗಾರಿಕಾ ಬೆಳೆಯಾಗಿ ಮಾವು, ನುಗ್ಗೆ, ಹುಣಸೆ, ಬಾಳೆ, ನಿಂಬೆ, ಪಪ್ಪಾಯ ಹಾಗು ಹೆಬ್ಬೇವು, ಸರ್ವೇ ಮರ, ಸಾಗುವಾನಿ, ಚೊಗಚೆ ಇತ್ಯಾದಿ ಅರಣ್ಯ ಮರಗಳು ಇಲ್ಲಿವೆ. 
 
ಇವುಗಳಿಂದ ಹೆಚ್ಚು ಹಸಿರೆಲೆ ಲಭ್ಯವಾಗುತ್ತಿರುವುದರಿಂದ ಫಲವತ್ತಾದ ಗೊಬ್ಬರ ತಯಾರಾಗುತ್ತದೆ ಎಂದು ನುಡಿದರು ಲಂಗಟಿ. 
 
ಭತ್ತ ಮಾತ್ರವಲ್ಲದೆ, ಸಿರಿಧಾನ್ಯ ಹಾಗೂ ಸಾವಯವ ಬೆಲ್ಲವೂ ಇವರಲ್ಲಿ ಲಭ್ಯ. ಸಿರಿಧಾನ್ಯಗಳಲ್ಲಿ ಕೆಂಪು ನವಣೆ, ಹಾಲು ನವಣೆ, ಜಡಿ ನವಣೆ ಹಾಗೂ ಉರಕಲು ನವಣೆ, ಹಾಗೆಯೇ ಎರಡು ಬಗೆಯ ಸಾಮೆ, ಕರಿಸಾಮೆ ಹಾಗೂ ಮಲ್ಲಿಗೆ ಸಾಮೆ ಇವರಲ್ಲಿವೆ. ಇತರೆ ಸಿರಿಧಾನ್ಯಗಳಾದ ಹಾರಕ, ಊದಲು, ಬರಗು, ಬರಲು ಇತ್ಯಾದಿ ಇವರ ಬಳಿ ಲಭ್ಯ. ಇವರ ಹೊಲದಲ್ಲಿ ಸಂಕೇಶ್ವರ 247 ಎಂಬ ಕಬ್ಬಿನ ತಳಿಯನ್ನೂ ಸಾವಯವ ಪದ್ಧತಿಯಲ್ಲಿ ಬೆಳೆಯಲಾಗುತ್ತಿದೆ. ಹಾಗಾಗಿ ಮಾರುಕಟ್ಟೆಗಿಂತ ಅತ್ಯಂತ ಕಡಿಮೆ ಬೆಲೆಗೆ ಸಾವಯವ ಬೆಲ್ಲವನ್ನೂ ಇವರು ಮಾರುತ್ತಿದ್ದಾರೆ. ಇವರ ಒಟ್ಟಾರೆ ಸಾಧನೆಯನ್ನು ಗಮನದಲ್ಲಿರಿಸಿ ಕೇಂದ್ರ ಸರ್ಕಾರವು 2012 ರಲ್ಲಿ ‘ಸಸ್ಯ ತಳಿ ಸಂರಕ್ಷಕ’ ಎಂಬ ಗೌರವದೊಂದಿಗೆ ರೂಪಾಯಿ 10 ಲಕ್ಷ ಬಹುಮಾನವನ್ನೂ ನೀಡಿದೆ. 
 
ಸ್ವಾವಲಂಬನೆಯ ಗುಟ್ಟು
ತರಕಾರಿ ಬೆಳೆಗಳಿಗೆ ಬೆಲೆಯೇ ಇಲ್ಲ ಎಂದು ರೈತರು ಹೇಳುತ್ತಾರೆ. ಆದರೆ ತರಕಾರಿ ಬೆಳೆದು ಮಾರುವುದಕ್ಕಿಂತ ಅವನ್ನು ಬಲಿಯಲು ಬಿಟ್ಟು ಬೀಜಗಳನ್ನು ಮಾಡಿ ಮಾರಿದರೆ ಹೆಚ್ಚಿನ ಲಾಭ ನಮ್ಮದಾಗುತ್ತದೆ. ಹೀಗಾಗಿ ಇವರಲ್ಲಿ ಸಾವಯವ ಕುಂಬಳಕಾಯಿ, ಹಾಗಲ, ಹೀರೆ, ಸೋರೆ, ಪಡವಲ, ನೆಲಸವತೆ ಇತ್ಯಾದಿಗಳ ಬೀಜಗಳು ಲಭ್ಯ. ಇಂದಿನ ಕೃಷಿಕರು ಬರುವ ಕಷ್ಟಗಳನ್ನು ಅವಕಾಶಗಳಂತೆ ಉಪಯೋಗಿಸಿದರೆ ಮಾತ್ರ ಆರ್ಥಿಕವಾಗಿ ಸ್ವಾವಲಂಬನೆಯನ್ನು ಪಡೆಯಬಹುದೆನ್ನುತ್ತಾರೆ ಶಂಕರ ಲಂಗಟಿ.
 
ಮಾರುಕಟ್ಟೆ ವ್ಯವಸ್ಥೆ: ಬದಲಾದ ದಿನಮಾನದಲ್ಲಿ ಸಾವಯವ ಉತ್ಪನ್ನ ಇವರದ್ದಾದರಿಂದ ಮಾರುಕಟ್ಟೆ ಇವರನ್ನೇ ಹುಡುಕಿಕೊಂಡು ಬರುತ್ತಿದೆ. ದೂರದ ದೆಹಲಿಯಿಂದಲೂ ಇವರಿಗೆ ಗ್ರಾಹಕರಿದ್ದಾರೆ. ಆಸಕ್ತರು ಇಲ್ಲಿಗೆ ಬಂದು ಇವರ ಕೃಷಿ ಚಟುವಟಿಕೆ ನೋಡುತ್ತಾರೆ. ಇನ್ನೂ ಕೆಲವರು ದೂರವಾಣಿ ಮೂಲಕ ಕರೆ ಮಾಡಿ, ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುತ್ತಾರೆ. ಬೇಕಾದ ಉತ್ಪನ್ನವನ್ನು ಅವರ ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ಇದೆ. ಇವರಿಗೆ ಕೆಲವು ಮಾಮೂಲಿ ಗ್ರಾಹಕರಿರುವುದರಿಂದ ಮಾರುಕಟ್ಟೆ ನನಗೆ ಒಂದು ಸಮಸ್ಯೆಯೇ ಅಲ್ಲ ಎನ್ನುತ್ತಾರಿವರು. ಅಲ್ಲದೇ ಲಂಗಟಿಯವರು ಕಳೆದ ಮೂರು ವರ್ಷಗಳಿಂದ ಧಾರವಾಡದ ನಗರ ಕೇಂದ್ರ ಸ್ಥಳದ ಗಾಂಧಿ ಪ್ರತಿಷ್ಠಾನದ ಬಳಿ ಪ್ರತಿ ಗುರುವಾರ ಖುದ್ದಾಗಿ ತಮ್ಮ ಸಾವಯವ ಉತ್ಪನ್ನಗಳನ್ನು ಮಾರಲು ಬರುತ್ತಾರೆ. ಸಂಪರ್ಕಕ್ಕೆ: 9972150378.
 
**
ಭತ್ತದ ದೇಸಿ ವೈವಿಧ್ಯದ ಭಂಡಾರ
ಇಂದ್ರಾಣಿ, ರಕ್ತಸಾಳಿ, ದೊಡಗ್ಯ, ಕರಿಗಜವಿಲೆ, ಡಾಂಬರುಸಾಳಿ, ಕರಿಯಕ್ಕಿ, ಗಂಧಸಾಳಿ, ಬೆಳಗಾಂ ಬಾಸುಮತಿ, ಅಂಬಿಮೊಹರಿ, ಮೈಸೂರು ಸಣ್ಣ, ಜೀರಿಗೆ ಸಣ್ಣ, ಕೆಂಪಕ್ಕಿ, ಸೇಲಂ ಸಣ್ಣ, ಮೈಸೂರು ಮಲ್ಲಿಗೆ, ದೊಡ್ಡ ಬೈರನೆಲ್ಲು, ರಾಜಮುಡಿ,  ನವರ, ಮುಳ್ಳಾರೆ, ಮುಗದ ಭತ್ತ, ಸಿದ್ಧಗಿರಿ, ಬಾದಶಾಹಭೋಗ, ಡಾಂಬರಸಾಳಿ, ಮಟಾಲಗ, ಕೊತಂಬರ ಸಾಳಿ ಇನ್ನೂ ಮುಂತಾದವುಗಳು. ಈಗಾಗಲೇ ರಾಜ್ಯದ ಇತರೆ ಜಿಲ್ಲೆಗಳಿಂದ ಒಯ್ದ ತಳಿಗಳನ್ನು ಬೆಳೆಯಲಾಗುತ್ತಿದೆ. 
 
ಶಿವಮೊಗ್ಗದಿಂದ ಬಂದ ರೈತರು ಕರಿಗಜವಿಲೆ, ಮಂಡ್ಯದಲ್ಲಿ ಡಾಂಬರುಸಾಳಿ, ಸೊರಬ-ಸಾಗರದಲ್ಲಿ ಮುಗದ ಬಾಸುಮತಿ ಆಯಾ ಪ್ರದೇಶಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತಿರುವ ಸಂಗತಿಯನ್ನು ಸಂತೋಷದಿಂದ ಹಂಚಿಕೊಂಡರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT