ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಮರ್ಶೆ ಗುಣ ಬೆಳೆಸಿಕೊಳ್ಳಿ’

Last Updated 14 ನವೆಂಬರ್ 2016, 20:15 IST
ಅಕ್ಷರ ಗಾತ್ರ

ಬೆಂಗಳೂರು:                                   ಅಕ್ಷರವೆಂಬುದು ಅಲ್ಲಾವುದ್ದೀನನ ಅದ್ಭುತ ಮಾಯಾ ದೀಪ...
                                                   ಅದು ವಶವಾದರೆ ನಿನಗೆ ನೀಡುವುದು ಹೊಸ ಜೀವನ.. ಹೊಸ ರೂಪ..
                                                   ದೀಪ ಉಜ್ಜಿದರೆ ಅವತರಿಸುವನು ಸರ್ವಶಕ್ತ ದೂತ..
                                                    ಅವನ ಬೆನ್ನೇರಿ ನೀ ಸಂಚರಿಸುವೆ ಬ್ರಹ್ಮಾಂಡ ಸಮಸ್ತ...

–ಎಂದು ಕವಿ ಬಿ.ಆರ್‌. ಲಕ್ಷ್ಮಣ್‌ ರಾವ್‌ ಅವರು ತಮ್ಮ ‘ಮಾಯಾ ದೀಪ’ ಕವನದ ಸಾಲುಗಳನ್ನು ವಾಚಿಸುವ ಮೂಲಕ ಅಕ್ಷರದ ಮೇಲೆ ಪ್ರೀತಿ ಬೆಳೆಸಿಕೊಂಡರೆ ಆಗುವ ಅನುಕೂಲಗಳ ಬಗ್ಗೆ ವಿವರಿಸಿದರು.

ಸಾಹಿತ್ಯ ಅಕಾಡೆಮಿ ಮತ್ತು ನ್ಯಾಷನಲ್‌ ಕಾಲೇಜು ಕನ್ನಡ ಸ್ನಾತಕೋತ್ತರ ವಿಭಾಗದ ಸಮನ್ವಯದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಪುಸ್ತಕ ಸಪ್ತಾಹ ಮತ್ತು ಸಾಹಿತ್ಯಕ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.

‘ಪುಸ್ತಕ ನಮಗೆ ಲೋಕಾನುಭವ ನೀಡುತ್ತದೆ. ನಮ್ಮದೇ ಕಲ್ಪನಾ ಲೋಕವನ್ನು ಕಟ್ಟಿಕೊಳ್ಳಲೂ ಪುಸ್ತಕಗಳು ನೆರವಾಗುತ್ತವೆ. ಚಿಕ್ಕವನಿದ್ದಾಗ ನಾನು ಓದುತ್ತಿದ್ದ ‘ಚಂದಮಾಮ’ ‘ಬಾಲಮಿತ್ರ’ ನನ್ನ ಕಲ್ಪನೆಯನ್ನು ವಿಸ್ತರಿಸಿದವು’ ಎಂದು ಬಾಲ್ಯದ ನೆನಪನ್ನು ಹಂಚಿಕೊಂಡರು. ‘ವಿದ್ಯಾರ್ಥಿಗಳು ವಿಮರ್ಶೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಯಾವಾಗ ನಾವು ಪ್ರಶ್ನೆ ಕೇಳುವ ಪ್ರವೃತ್ತಿ ಬೆಳೆಸಿಕೊಳ್ಳುತ್ತೇವೆಯೊ ಆಗ ಪ್ರಗತಿ ಸಾಧ್ಯವಾಗುತ್ತದೆ. ಪ್ರಶ್ನೆ ಕೇಳುವುದು ಎಂದರೆ ಇತರರನ್ನು ಪ್ರಶ್ನಿಸುವುದಲ್ಲ. ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕು. ಅದು ಹೊಸತನದ ಆವಿಷ್ಕಾರಕ್ಕೆ ಕಾರಣವಾಗುತ್ತದೆ’ ಎಂದು ಕಿವಿಮಾತು ಹೇಳಿದರು.

ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, ‘ಲಂಕೇಶರು ಮತ್ತು ನಾನು  ಸೇರಿ ನಾಟಕ ಮಾಡಬೇಕೆಂದಾಗ ನಾಟಕ ತಾಲೀಮು ನಡೆಸಲು ಎಚ್‌. ನರಸಿಂಹಯ್ಯ ಅವರು ನ್ಯಾಷನಲ್‌ ಕಾಲೇಜಿನಲ್ಲಿ ಜಾಗ ಕೊಟ್ಟರು. ಅಂದಿನಿಂದ ನ್ಯಾಷನಲ್‌ ಕಾಲೇಜಿನೊಂದಿಗೆ ಒಡನಾಟ ಆರಂಭವಾಯಿತು’ ಎಂದು ನೆನಪಿಸಿಕೊಂಡರು.

‘ವಿದ್ಯಾರ್ಥಿಗಳಿಗಾಗಿ ನ್ಯಾಷನಲ್‌ ಕಾಲೇಜು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅನೇಕ ವರ್ಷಗಳಿಂದ ಇಲ್ಲಿ ಪ್ರತಿ ಬುಧವಾರ ನಡೆಯುವ ವಿಜ್ಞಾನ ಕಾರ್ಯಕ್ರಮ ಇತರೆ ಕಾಲೇಜುಗಳಿಗೆ ಮಾದರಿಯಾಗಿದೆ. ನೊಬೆಲ್‌ ಪುರಸ್ಕೃತ ವಿಜ್ಞಾನಿಗಳು ಇಲ್ಲಿ ಬೋಧಿಸಿದ್ದಾರೆ. ಈಗ ನಡೆಯುತ್ತಿರುವ ಪುಸ್ತಕ ಸಪ್ತಾಹವೂ ವಿದ್ಯಾರ್ಥಿಗಳ ಬೌದ್ಧಿಕ ಜ್ಞಾನ ವಿಸ್ತಾರಕ್ಕೆ ಪೂರಕವಾಗಿದೆ. ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆಯಬೇಕು’ ಎಂದು ಹೇಳಿದರು.

ನ.14ರಿಂದ 20ರವರಗೆ ನಡೆಯುವ ಈ ಪುಸ್ತಕ ಸಪ್ತಾಹದ ಅಂಗವಾಗಿ ನಾನಾ ಕಾರ್ಯಕ್ರಮಗಳು ನಡೆಯಲಿವೆ. ಮಂಗಳವಾರ ಸಣ್ಣಕಥಾ ವಾಚನ, ಬುಧವಾರ ಇಬ್ಬರು ಲೇಖಕರ ಸಾಕ್ಷ್ಯ ಚಿತ್ರ ಪ್ರದರ್ಶನ, ಗುರುವಾರ ಕವಿಗೋಷ್ಠಿ, ಶುಕ್ರವಾರ ಇಬ್ಬರು ಲೇಖಕರ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಶನಿವಾರ ನಾರಿಚೇತನ: ವಾಚನ ಮತ್ತು ಸಂವಾದ ಕಾರ್ಯಕ್ರಮಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT