ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಆ್ಯಪ್‌ಗಳು

Last Updated 15 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಆ್ಯಪ್..
ಬಹುತೇಕ ಮಧುಮೇಹಿಗಳು  ಕೆಲಸದ ಒತ್ತಡದಿಂದಾಗಿ ಸಕಾಲಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದಿಲ್ಲ!  ಜತೆಗೆ ತಮಗೆ ಅರಿವಿಲ್ಲದಂತೆ ಸಕ್ಕರೆ ಅಂಶವಿರುವ ಆಹಾರವನ್ನು ಸೇವಿಸುತ್ತಾರೆ. ಇದರಿಂದ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಾದಂತೆ ಸಕ್ಕರೆ ಕಾಯಿಲೆ ಉಲ್ಬಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸಾವು ಕೂಡ ಸಂಭವಿಸಬಹುದು. ಈ ಅನಾಹುತಗಳನ್ನು ತಪ್ಪಿಸಲು ಬ್ರಿಟನ್ ವೈದ್ಯರು  ಸಕ್ಕರೆ ಕಾಯಿಲೆ ನಿಯಂತ್ರಿಸುವ ‘ಡಯಾಬಿಟಿಸ್ ಆ್ಯಪ್’ ಅಭಿವೃದ್ಧಿಪಡಿಸಿದ್ದಾರೆ.

ಬ್ರಿಟನ್ನಿನ  ಕಾರ್ಡಿಫ್ ವಿಶ್ವವಿದ್ಯಾಲಯದ ಸ್ಕೂಲ್ ಆಪ್ ಮೆಡಿಸನ್ ವಿಭಾಗದ ಸಂಶೋಧನಾ ವೈದ್ಯರು ಮತ್ತು ಸಾಫ್ಟ್ ವೇರ್ ನಿಪುಣರು ಸೇರಿ ಮಧುಮೇಹ ನಿಯಂತ್ರಿಸುವ ಡಯಾಬಿಟಿಸ್ ಆ್ಯಪ್ ರೂಪಿಸಿದ್ದಾರೆ.   ಇದನ್ನು ಸ್ಮಾರ್ಟ್ ಫೋನ್‌ನಲ್ಲಿ ಅಳವಡಿಸಿಕೊಂಡರೇ  ಸಕ್ಕರೆ ಕಾಯಿಲೆ ತನ್ನಷ್ಟಕ್ಕೆ ನಿಯಂತ್ರಣಕ್ಕೇನೂ ಬರುವುದಿಲ್ಲ! ಬದಲಿಗೆ ಇದು, ನಮ್ಮ ಆಹಾರ ಪದ್ಧತಿ ಮತ್ತು ತಪಾಸಣೆ ಬಗ್ಗೆ ಪದೇ ಪದೇ ಎಚ್ಚರಿಸುವ ಕೆಲಸ ಮಾಡುತ್ತದೆ. ಇದರಿಂದ ರೋಗಿಗಳು ಸಕಾಲಕ್ಕೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಲು ನೆರವು ನೀಡುತ್ತದೆ. 

ಇದರಲ್ಲಿ ಮಧುಮೇಹಿಗಳು ಸಂಪೂರ್ಣ ಮಾಹಿತಿಯನ್ನು ದಾಖಲಿಸಬೇಕು. ಆಹಾರ ಕ್ರಮ ಮತ್ತು ವೈದ್ಯರು ನೀಡಿರುವ ತಪಾಸಣೆ ದಿನಾಂಕಗಳನ್ನು ಆಗಾಗ ನವೀಕರಿಸುತ್ತಿರಬೇಕು. ಒಂದು ವೇಳೆ  ತಪಾಸಣೆ ದಿನಾಂಕವನ್ನು ಮರೆತರೂ  ಆ್ಯಪ್ ರೋಗಿಗಳನ್ನು ತಪಾಸಣೆಗೆ ಹೋಗುವಂತೆ ಎಚ್ಚರಿಸುತ್ತದೆ. ಇದು  ಆಂಡ್ರಾಯ್ಡ್‌ ಮತ್ತು ವಿಂಡೋಸ್ ಅಪ್ಲಿಕೇಶನ್‌ಗಳಲ್ಲಿ ಉಚಿತವಾಗಿ ಲಭ್ಯವಿದೆ.  ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ self-manage diabetes-app
 
* * * 
ಸರ್ಕಾರಿ ನೌಕರರ ಮಾಹಿತಿಗೊಂದು ಆ್ಯಪ್
ಡಿಜಿಟಲ್ ಇಂಡಿಯಾದ ಒಂದು ಭಾಗವಾಗಿ ಕೇಂದ್ರ ಸರ್ಕಾರ, ಸರ್ಕಾರಿ ಅಧಿಕಾರಿಗಳ ಮಾಹಿತಿಗಾಗಿ ನೂತನ ಮೊಬೈಲ್ ಆ್ಯಪ್  ಅಭಿವೃದ್ಧಿಪಡಿಸಿದ್ದು ಇದಕ್ಕೆ ‘ಎಂಪ್ಲಾಯ್ ಆನ್‌ಲೈನ್’ ಎಂದು ಹೆಸರಿಡಲಾಗಿದೆ. ಐಒಎಸ್, ವಿಂಡೋಸ್ ಮತ್ತು ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಈ ಆ್ಯಪ್ ಲಭ್ಯವಿದೆ.
 
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು  ಈ  ಆ್ಯಪ್  ಬಿಡುಗಡೆ ಮಾಡಿದರು.  4900 ಕ್ಕೂ ಹೆಚ್ಚು ಐಎಎಸ್/ ಐಪಿಎಸ್ ಅಧಿಕಾರಿಗಳು ಸೇರಿದಂತೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಮಾಹಿತಿ ಈ ಆ್ಯಪ್‌ನಲ್ಲಿ ಲಭ್ಯವಿದೆ. ಆ ಮೂಲಕ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನಿಗದಿಪಡಿಸಿ  ಸಮಾಲೋಚನೆ ನಡೆಸುವ ಅವಕಾಶವನ್ನು ನಾಗರಿಕರಿಗೆ ಕಲ್ಪಿಸಲಾಗಿದೆ.
 
 
ಸರ್ಕಾರದ ಉನ್ನತಮಟ್ಟದ ಅಧಿಕಾರಿಗಳೂ ಜನ ಸಾಮಾನ್ಯರ ಕೈಗೆ ಸುಲಭವಾಗಿ ಸಿಗಬೇಕು ಎನ್ನುವ ಆಶಯದೊಂದಿಗೆ ಈ ಆ್ಯಪ್  ವಿನ್ಯಾಸ ಮಾಡಲಾಗಿದೆ.  ಅಧಿಕಾರಿಗಳ ವಿವರ, ಅವರ ಹುದ್ದೆ, ಪದನಾಮ, ಅವರ ಸೇವೆ, ವೇತನ, ತೆರಿಗೆ ಪಾವತಿ, ಆಸ್ತಿಗಳಿಕೆ, ಹಾಗೂ ಅಧಿಕಾರಿಯ ಕಾರ್ಯವೈಖರಿ ಮಾಹಿತಿಯನ್ನು ಇದರಲ್ಲಿ ಪಡೆಯಬಹುದಾಗಿದೆ. ಇಷ್ಟು ಮಾತ್ರವಲದೇ ಆರ್‌ಟಿಐ, ಪಿಂಚಣಿ ಸೇರಿದಂತೆ ಇ-ಆಡಳಿತದ ಸೇವೆಗಳನ್ನು ಈ ಆ್ಯಪ್ ಮೂಲಕ ಪಡೆದುಕೊಳ್ಳಬಹುದು.  
 
ಈ ಆ್ಯಪ್ ಬಳಕೆಯಿಂದಾಗಿ ದೇಶದ ನಾಗರಿಕರಿಗೆ ಸರ್ಕಾರಿ ಕಚೇರಿಗಳು ಮತ್ತು ಅಧಿಕಾರಿಗಳನ್ನು ಭೇಟಿಯಾಗಲು ಪದೇ ಪದೇ ಅಲೆಯುವುದು ತಪ್ಪಿದಂತಾಗುತ್ತದೆ. Employees Online-app
 
* * *
ಸುಖ ನಿದ್ದೆಗೆ ಸ್ಲೀಪ್‌ಕೋಚರ್‌ ಆ್ಯಪ್
ಒಬ್ಬ ಆರೋಗ್ಯವಂತ ಮನುಷ್ಯನಿಗೆ ಪೌಷ್ಟಿಕ ಆಹಾರ ಎಷ್ಟು ಮುಖ್ಯವೋ, ನಿದ್ದೆಯೂ ಕೂಡ ಅಷ್ಟೇ ಮುಖ್ಯ! ಮನುಷ್ಯ ಪ್ರತಿ ನಿತ್ಯ 6 ರಿಂದ 7 ಗಂಟೆಗಳ ಕಾಲ ನಿದ್ದೆ ಮಾಡಿದರೆ ಲವ ಲವಿಕೆಯಿಂದ ಇರಲು ಸಾಧ್ಯ ಎಂದು ವೈದ್ಯರು ಹೇಳುತ್ತಾರೆ. ಆದರೆ, ಒತ್ತಡದ ಜೀವನ ಮತ್ತು ಇತರೆ ಕಾರಣಗಳಿಂದ ಕಡಿಮೆ ಅವಧಿಯ ನಿದ್ದೆ ಮಾಡುವವರು ನಮ್ಮ ನಡುವೆ ಇದ್ದಾರೆ. ಇವರ ನೆರವಿಗಾಗಿ ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ‘ಸ್ಲೀಪ್‌ ಕೋಚರ್’ ಎಂಬ ಆ್ಯಪ್ ವಿನ್ಯಾಸ ಮಾಡಿದ್ದಾರೆ.
 
ಈ ಆ್ಯಪ್   ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದ್ದು  ಎಲ್ಲಾ ಸ್ಮಾರ್ಟ್‌ಫೋನ್‌ ಬಳಕೆದಾರರು ಇದನ್ನು ಬಳಸುವ ಮೂಲಕ ತಮ್ಮ ನಿದ್ದೆಯ ಅವಧಿಯನ್ನು ಹೆಚ್ಚಿಸಿಕೊಳ್ಳಬಹುದು ಎನ್ನುತ್ತಾರೆ ಈ ಆ್ಯಪ್ ವಿನ್ಯಾಸ ತಂಡದ ಮುಖ್ಯಸ್ಥ ನಿಡಿಯಾನ ದಾಸ್ಕೊಲೋವಾ.  ನೌಕರರು ಕೆಲವೊಮ್ಮೆ ಕಚೇರಿಯಲ್ಲಿ ಕಂಪ್ಯೂಟರ್‌ಗಳ ಮುಂದೆ ಕೆಲಸ ಮಾಡುವಾಗ ಅದರಲ್ಲೇ ತಲ್ಲೀನರಾಗಿ ತಮಗೆ ಅರಿವಿಲ್ಲದಂತೆ ಹೆಚ್ಚು ಸಮಯ ಕೆಲಸ ಮಾಡುತ್ತಾರೆ. ಇದರಿಂದ ಆಯಾಸಗೊಂಡು ಸರಿಯಾಗಿ ನಿದ್ದೆ ಮಾಡಲಾಗುವುದಿಲ್ಲ.
 
 
ಹೀಗಾಗಿ ನಿದ್ರಾಹೀನತೆಯಿಂದ ಬಳಲುತ್ತಿರುತ್ತಾರೆ. ಈ ಆ್ಯಪ್ ಅನ್ನು ಮೊಬೈಲ್ ಮತ್ತು ಕೆಲಸ ಮಾಡುವ ಕಂಪ್ಯೂಟರ್‌ಗೆ ಅಳವಡಿಸಿ ಕೊಂಡರೆ ದೈಹಿಕ ಮತ್ತು ಮಾನಸಿಕ ಆಯಾಸವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುತ್ತಾರೆ ವಿನ್ಯಾಸಕರು.
 
ಉದಾಹರಣೆಗೆ ಒಬ್ಬ ಉದ್ಯೋಗಿ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಯಾವುದೋ ಒಂದು ಪಾಳಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಕೆಲಸದ ಒತ್ತಡದಲ್ಲಿ 12 ಗಂಟೆಯಾದರೂ  ಆ ನೌಕರನಿಗೆ ಗೊತ್ತಾಗುವುದಿಲ್ಲ!  ಈ ಆ್ಯಪ್ ಅನ್ನು  ಆ ನೌಕರ ತಾನು ಕೆಲಸ ಮಾಡುವ ಕಂಪ್ಯೂಟರ್‌ನಲ್ಲಿ ಅಳವಡಿಸಿಕೊಂಡಿದ್ದರೆ  ಆ ಕಂಪ್ಯೂಟರ್ ಕಚೇರಿ ಮುಕ್ತಾಯದ ಸಮಯಕ್ಕೆ ಅಂದರೆ 11 ಗಂಟೆಗೆ ಸರಿಯಾಗಿ ಆಫ್ ಆಗಿಬಿಡುತ್ತದೆ. ಮತ್ತೆ ಆನ್ ಮಾಡಿದರೂ ಅದು ರನ್ ಆಗುವುದಿಲ್ಲ. ಮತ್ತೆ  ಅದು ಮರು ದಿನದ ಕಚೇರಿ ಸಮಯಕ್ಕೆ ಸರಿಯಾಗಿ ಸ್ವಯಂ ಚಾಲಿತವಾಗಿ ಆನ್ ಆಗುತ್ತದೆ. ಈ ಆ್ಯಪ್ ಅಳವಡಿಸಿಕೊಳ್ಳಲು ಕಂಪೆನಿ/ ಕಚೇರಿಯ ಒಪ್ಪಿಗೆ ಕಡ್ಡಾಯ ಎನ್ನುತ್ತಾರೆ ಈ ಆ್ಯಪ್‌ ವಿನ್ಯಾಸಕರು.  SleepCoacher-app

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT