ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹೆಮ್ಮೆಯ ಕಟ್ಟಡ

ವಾಸ್ತುಶಿಲ್ಪ ವೈಭವ
Last Updated 17 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಕೆಂಪು ಕಟ್ಟಡಗಳಲ್ಲಿ ಪ್ರತ್ಯೇಕವಾಗಿ ಎದ್ದು ಕಾಣುವ ಸುಂದರ ಕಟ್ಟಡ ಕೆ. ಶೇಷಾದ್ರಿ ಅಯ್ಯರ್‌ ಸ್ಮಾರಕ ಕೇಂದ್ರ ಗ್ರಂಥಾಲಯ. ಪ್ರತಿಷ್ಠಿತ ರಾಜಾರಾಮ್‌ ಮೋಹನ್‌ರಾಯ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಈ ಕಟ್ಟಡ ನಿರ್ಮಾಣಗೊಂಡಿದ್ದು  1915ರಲ್ಲಿ.
 
ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಮೈಸೂರು ದಿವಾನ್‌ ಕೆ. ಶೇಷಾದ್ರಿ ಅಯ್ಯರ್‌ ಗೌರವಾರ್ಥ ನಿರ್ಮಿಸಲಾದ ಈ ಕಟ್ಟಡ ಮೇಲ್ನೋಟಕ್ಕೆ ಸಾಂಸ್ಕೃತಿಕ ಚಟುವಟಿಕೆಗಳ ಮಂದಿರದಂತೆ ಕಾಣುತ್ತದೆ.
 
ಮೈಸೂರಿನ ಹೆಸರಾಂತ ಲಲಿತಮಹಲ್‌ ಅರಮನೆಯ ಛಾಯೆ ಇರುವ ಈ ಯುರೋಪಿಯನ್‌ ಶೈಲಿಯ ಕಟ್ಟಡ ನಿರ್ಮಾಣಕ್ಕೆ ಟಸ್ಕನ್‌ ಕಂಬಗಳ ಆಸರೆ ಇದೆ. ವಸಾಹತು ಮಾದರಿಯಲ್ಲಿಯೇ ಮೈದಾಳಿರುವ ಈ ಕಟ್ಟಡ ಒಂದೆಡೆ ವೃತ್ತಾಕಾರದಲ್ಲಿದ್ದರೆ ಇನ್ನೊಂದು ಕಡೆ ಚೌಕಾಕಾರದಲ್ಲಿ ನಿರ್ಮಾಣಗೊಂಡಿದೆ.
 
ಬ್ರಿಟಿಷರ ದಂಡು ಪ್ರದೇಶದ ಭಾಗವಾದ ಕಬ್ಬನ್‌ಪಾರ್ಕ್‌ನಲ್ಲಿರುವ ಶೇಷಾದ್ರಿ ಸ್ಮಾರಕಕ್ಕೆ ಮೊದಲು ಪ್ರವೇಶ ಇದ್ದಿದ್ದು ವೃತ್ತಾಕಾರದ ದಿಕ್ಕಿನಿಂದ. ಕಲಾತ್ಮಕವಾದ ಎರಡು ಹಂತದ ಕಿಟಕಿಗಳಿರುವ ವೃತ್ತಾಕಾರದ ಕಟ್ಟಡದ ನಡುವೆ ಪ್ರವೇಶ ದ್ವಾರವಿತ್ತು. ಆರಂಭದಿಂದ ಬಹಳ ಕಾಲ ಪ್ರವೇಶ ಹಾಗೂ ಗ್ರಂಥಾಲಯದ ನಾಮಫಲಕ ಇದ್ದುದು ಇಲ್ಲಿಯೇ.
 
ಕೋಲ್ಕತ್ತ, ರಾಷ್ಟ್ರದ ರಾಜಧಾನಿಯಾಗಿದ್ದ  ಸಂದರ್ಭದಲ್ಲಿ ಅಲ್ಲಿ ಹಲವಾರು ವಸಾಹತು ಕಟ್ಟಡಗಳಿಗೆ ರೂವಾರಿಯಾಗಿದ್ದ ವೈಸರಾಯ್‌ ಲಾರ್ಡ್‌ ಕರ್ಜನ್‌ ಪರಿಕಲ್ಪನೆಯಲ್ಲಿಯೇ ಮೈದಾಳಿರುವ ಕಬ್ಬನ್‌ಪಾರ್ಕ್‌ನ ಈ ಕಟ್ಟಡ ನೃತ್ಯ ಮಂದಿರಕ್ಕೆ ಅನುಕೂಲವಾಗಿರುವಂತೆ ರೂಪಿಸಲಾಗಿದೆ. ಇದಕ್ಕೆ ಪುರಾವೆ ಎಂಬಂತೆ ಮೊನ್ನೆ ಮೊನ್ನೆವರೆಗೆ ಮರದ ನೆಲಹಾಸು ಇದ್ದುದು ಇದೀಗ ಇದು ಬದಲಾಗಿದೆ.
 
ವೃತ್ತಕಾರದ ಎರಡು ಹಂತದ ಕಟ್ಟಡದಿಂದ ಪ್ರವೇಶ ಮಾಡಿದರೆ ಚೌಕಾಕಾರದ ಆವರಣ. ನೆಲದಲ್ಲಿ ನಡೆಯುವ ನೃತ್ಯವನ್ನು ವೀಕ್ಷಿಸಲು ಎತ್ತರದಲ್ಲಿ ಎರಡೂ ಬದಿ ವೀಕ್ಷಣಾ ಸ್ಥಳಗಳು. ವಿಶಾಲವಾದ ಸಭಾಭವನದ ಎರಡೂ ಹಿಂಬದಿಗಳಲ್ಲಿ ಗ್ರೀನ್‌ ರೂಮ್‌ಗಳಂತಹ ಕೊಠಡಿಗಳು. ಕಲಾವಿದರು ಹಿಂಬದಿಯಿಂದಲೇ ಬರುವಂತೆ ಪೊರ್ಟಿಕೋದಲ್ಲಿ ಎರಡು ಪ್ರವೇಶ ದ್ವಾರಗಳು.
 
ಈಗ ಈ ಪೊರ್ಟಿಕೋದಲ್ಲಿರುವ ಒಂದೇ ದ್ವಾರವನ್ನು ಗ್ರಂಥಾಲಯಕ್ಕೆ ಉಪಯೋಗಿಸಲಾಗುತ್ತದೆ. ಇನ್ನೊಂದು  ದ್ವಾರ ಮುಚ್ಚಲಾಗಿದೆ. ಪೊರ್ಟಿಕೋ ಮೇಲ್ಭಾಗದಲ್ಲಿ ಬೆಂಗಳೂರಿನ ಜನಪ್ರಿಯ ಹೋಟೆಲ್‌ ಐವತ್ತರ ದಶಕದವರೆಗೂ ಇಲ್ಲಿತ್ತು.
 
ಗ್ರಂಥಾಲಯವಾಗಿ...
ಬೆಂಗಳೂರಿನ ನಾಗರಿಕರು ನೀಡಿದ ಮನವಿಗೆ ಸ್ಪಂದಿಸಿದ ಆಗಿನ ದಿವಾನ್ ಎಂ. ವಿಶ್ವೇಶ್ವರಯ್ಯನವರು ಸ್ವಂತ ಆಸಕ್ತಿ ವಹಿಸಿ ಗ್ರಂಥಾಲಯವನ್ನು ಈ ಕಟ್ಟಡದಲ್ಲಿ ಪ್ರಾರಂಭಿಸಿದ್ದಕ್ಕೆ ದಾಖಲೆಗಳಿವೆ. ಆ ಕಾಲದಲ್ಲೇ ಶೇಷಾದ್ರಿ ಅವರ ಪ್ರತಿಮೆಯನ್ನು ಅನಾವರಣ ಗೊಳಿಸಲಾಗಿದೆ. ಆದರೆ ಇದೊಂದು ನೃತ್ಯ ಮಂದಿರಕ್ಕೆಂದೇ ನಿರ್ಮಾಣವಾದ ಕಟ್ಟಡವೆಂಬುದಕ್ಕೆ ಹೆಚ್ಚಿನ ಮಾಹಿತಿಗಳಿಲ್ಲ. 
 
ಇಡೀ ಕಟ್ಟಡದ ಹೊರ ಮೈಗೆ ಕೆಂಪು ಇಟ್ಟಿಗೆ ಹೊದಿಸಿದ್ದು ಈಗಿನ ಪ್ರವೇಶ ದ್ವಾರವಿರುವ ಚೌಕಾಕಾರದ ವಿನ್ಯಾಸಕ್ಕೆ ಕಲ್ಲು ಕಂಬಗಳನ್ನು ಉಪಯೋಗಿಸಿದೆ. ಒಳ್ಳೆಯ ಗಾಳಿ ಬೆಳಕು ಬರುವಂತೆ ಕಲಾಕರ್ಷಕ ಕಮಾನನ್ನು ಒಳಗೊಂಡ ಕಿಟಕಿಗಳು ಗೋಡೆಯನ್ನು ಆವರಿಸಿಕೊಂಡಿದೆ.
 
ಕಿಟಕಿಗಳ ಅಂಚುಗಳೆಲ್ಲವೂ ಸುಂದರವಾಗಿ ಕೆತ್ತಿರುವ ಕಮಾನುಗಳನ್ನು ಹೊಂದಿದ್ದು ನಡು ನಡುವೆ ಸಣ್ಣ ಸಣ್ಣ ರಂಧ್ರಗಳಿದ್ದು ಇವು ಒಟ್ಟಾರೆ ಅಂದವನ್ನು ಹೆಚ್ಚಿಸುವುದರೊಟ್ಟಿಗೆ ಯಥೇಚ್ಛ ಗಾಳಿ ಒಳಹೋಗಲು ಅವಕಾಶ ನೀಡುವಂತಿವೆ.
 
ಬಿಲ್ಲಿನಂತೆ ಬಾಗಿರುವ ಕಮಾನುಗಳು ಕಂಬಗಳ ನೆರವಿನಿಂದ ನಿಂತಿದ್ದು ಇಂತಹ ಕುಸುರಿ ಕಂಬಗಳು ಆಕರ್ಷಕವಾಗಿವೆ. ಕಿಟಕಿಗಳಿಗೆಲ್ಲಾ ಆಲಂಕಾರಿಕ ಜೋಡಣೆಗಳು ಇಲ್ಲಿಯ ಇನ್ನೊಂದು ವೈಶಿಷ್ಟ್ಯ.
 
ಬಹುತೇಕ ವಸಾಹತು ಕಟ್ಟಡಗಳಲ್ಲಿ ಕಾಣುವ ಐದು ಟಸ್ಕನ್‌ ಕಂಬಗಳ ನೆರವಿನಿಂದ ಸಭಾಂಗಣ ನಿರ್ಮಾಣಗೊಂಡಿದ್ದು ಇಲ್ಲಿಯೂ ಗಾಳಿ ಬೆಳಕು ಬರಲು ವ್ಯವಸ್ಥೆ ಇದೆ. ಇದರಿಂದ ಹಗಲಿನಲ್ಲಿ ಸಹಜವಾದ ಬೆಳಕು ಸಭಾಂಗಣದಲ್ಲಿ ಚೆಲ್ಲುತ್ತಿರುತ್ತದೆ.
 
ಗ್ರಂಥಾಲಯವನ್ನು ಈ ಕಟ್ಟಡಕ್ಕೆ ಹೊಂದಿಸುವ ಸಂದರ್ಭದಲ್ಲಿ ಮೂರು ಹಂತದಲ್ಲಿ ಮರದ ಅಟ್ಟಳಿಗೆಗಳನ್ನು ರೂಪಿಸಿದ್ದು ಇದರಲ್ಲಿ ಗ್ರಂಥಗಳನ್ನು ಕಪಾಟುಗಳಲ್ಲಿ ಒಪ್ಪವಾಗಿ ಜೋಡಿಸಲು ಅವಕಾಶ ಮಾಡಿಕೊಡಲಾಗಿದೆ. ಈ ವಿಶಾಲ ಆವರಣಕ್ಕೆ ನೈಜ ಬೆಳಕಿನ ಯಾವುದೇ ಕೊರತೆ ಇರದಂಥ ವ್ಯವಸ್ಥೆ ಇದೆ.
 
ವಿಶಾಲವಾದ ಸ್ಥಳವಕಾಶವಿದ್ದರೂ ಗ್ರಂಥಾಲಯದ ಅಗತ್ಯಕ್ಕೆ ತಕ್ಕಂತೆ ಕಮಾನುಗಳ ಮಧ್ಯೆ ಕಪಾಟುಗಳನ್ನು ನಿರ್ಮಿಸಿ ಎರಡು ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಇಲ್ಲಿ ಜೋಡಿಸಿಡುವಂತೆ ವ್ಯವಸ್ಥೆ ಮಾಡಿದ್ದಾರೆ.
 
ಮರಮಟ್ಟುಗಳೊಂದಿಗೆ ಆಧುನಿಕ ಉಕ್ಕು ಮೆಟ್ಟಿಲು, ಗಾಜು, ಹಾಳೆಗಳನ್ನು ಎರಡು ಹಂತಗಳಲ್ಲಿ ಅಳವಡಿಸಿದ್ದು ಬೇಕಾದ ಪುಸ್ತಕಗಳನ್ನು ಸುಲಭವಾಗಿ ಎತ್ತಿಕೊಳ್ಳಲು ಹಾಗೂ ಅದನ್ನು ಆರಾಮವಾಗಿ ಅಧ್ಯಯನ ಮಾಡಲು ಅನುಕೂಲ ಕಲ್ಪಿಸಿದ್ದು ಇಲ್ಲಿ ಎಲ್ಲವೂ ಸುಗಮವಾಗಿ ಸಾಗಲು ಸಾಧ್ಯವಾಗಿದೆ.
 
ಅಟ್ಟಳಿಗೆ ಹತ್ತಿ ಇಳಿಯಲು  ಮೆಟ್ಟಿಲುಗಳಿದ್ದು ಇಡೀ ಸಭಾಂಗಣಕ್ಕೆ ಎತ್ತರದ ಗೋಡೆಗಳ ಕಿಟಕಿಗಳಿಂದ ಬೆಳಕು ಬರುವಂತಹ ವಿನ್ಯಾಸವಿದೆ. ಹೊರಗಿನಿಂದ ಕಲಾತ್ಮಕವಾಗಿ ನಿರ್ಮಾಣವಾಗಿರುವ ಶೇಷಾದ್ರಿ ಅಯ್ಯರ್‌ ಸ್ಮಾರಕ ಕಟ್ಟಡ ವಿವಿಧ ಬಣ್ಣಗಳ ಗುಲಾಬಿ ಗಿಡಗಳ ಆಕರ್ಷಣೆಯನ್ನು ತನ್ನಲ್ಲಿಟ್ಟುಕೊಂಡಿದೆ. ಒಳಾವರಣದಲ್ಲಿ ಓದುವ ವಾತಾವರಣಕ್ಕೂ ಸಾಧ್ಯ ಮಾಡಿಕೊಟ್ಟಿರುವ ಈ ಕಟ್ಟಡದ ವಿಶೇಷ.
 
**
ಕೋಲ್ಕತ್ತ, ರಾಷ್ಟ್ರದ ರಾಜಧಾನಿಯಾಗಿದ್ದ  ಸಂದರ್ಭದಲ್ಲಿ ಅಲ್ಲಿ ಹಲವಾರು ವಸಾಹತು ಕಟ್ಟಡಗಳಿಗೆ ರೂವಾರಿಯಾಗಿದ್ದ ವೈಸರಾಯ್‌ ಲಾರ್ಡ್‌ ಕರ್ಜನ್‌ ಪರಿಕಲ್ಪನೆಯಲ್ಲಿಯೇ ಮೈದಾಳಿದೆ ಕಬ್ಬನ್‌ಪಾರ್ಕ್‌ನಲ್ಲಿರುವ ಕೇಂದ್ರ ಗ್ರಂಥಾಲಯ. ಇಡೀ ಕಟ್ಟಡದ ಹೊರ ಮೈಗೆ ಕೆಂಪು ಇಟ್ಟಿಗೆ ಹೊದಿಸಿದ್ದು ಈಗಿನ ಪ್ರವೇಶ ದ್ವಾರವಿರುವ ಚೌಕಾಕಾರದ ವಿನ್ಯಾಸಕ್ಕೆ ಕಲ್ಲು ಕಂಬಗಳನ್ನು ಉಪಯೋಗಿಸಿದೆ. ಒಳ್ಳೆಯ ಗಾಳಿ ಬೆಳಕು ಬರುವಂತೆ ಕಲಾಕರ್ಷಕ ಕಮಾನನ್ನು ಒಳಗೊಂಡ ಕಿಟಕಿಗಳು ಗೋಡೆಯನ್ನು ಆವರಿಸಿಕೊಂಡಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT