ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಭವನದ ಉದ್ಯಾನ ಜಾಗದಲ್ಲಿ ಈಜುಕೊಳ

₹1.50 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಉದ್ಯಾನ, ಈಜುಕೊಳಕ್ಕೆ ಅಂದಾಜು ₹2 ಕೋಟಿ ವೆಚ್ಚ
Last Updated 17 ನವೆಂಬರ್ 2016, 20:19 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕರ ಭವನದ ಆವರಣದಲ್ಲಿ ಒಂದೂವರೆ ವರ್ಷದ ಹಿಂದೆ ₹1.50 ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ಸುಂದರ ಉದ್ಯಾನ ತೆರವುಗೊಳಿಸಿ ಆ ಜಾಗದಲ್ಲಿ ಈಜುಕೊಳ ನಿರ್ಮಿಸಲು ವಿಧಾನಸಭೆ ಸಚಿವಾಲಯ ಮುಂದಾಗಿದೆ.

ವಿಧಾನಮಂಡಲದ ಅಧಿವೇಶನದ ಅವಧಿ ಹೊರತುಪಡಿಸಿದರೆ ಪ್ರತಿನಿತ್ಯ ಸರಾಸರಿ ಕೇವಲ 30 ಶಾಸಕರು ವಾಸ್ತವ್ಯ ಹೂಡುವ ಶಾಸಕರ ಭವನದಲ್ಲಿ ಈಜುಕೊಳ ನಿರ್ಮಾಣ ಯಾರ ಮೋಜಿಗೆ ಎಂಬ ಪ್ರಶ್ನೆಯೂ ಶಾಸಕರ ವಲಯದಲ್ಲೇ ಕೇಳಿಬಂದಿದೆ.

ಎಲ್ಲಿ ಈಜುಕೊಳ?: ಶಾಸಕರ ಭವನ– 1 ರ ಹಿಂಭಾಗದಲ್ಲಿರುವ ಉದ್ಯಾನ ಜಾಗದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಈಜುಕೊಳ ನಿರ್ಮಿಸಲು ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ವಿಶೇಷ ಆಸಕ್ತಿ ತೋರಿದ್ದಾರೆ.

ಶಾಸಕರ ಭವನದ ನಾಲ್ಕು ಮಹಡಿಗಳ ಎತ್ತರಕ್ಕೆ ಬೆಳೆದುನಿಂತಿದ್ದ ಅಶೋಕ ವೃಕ್ಷಗಳನ್ನು 4 ಅಡಿಗೆ ತುಂಡರಿಸಿ, ಮಧ್ಯೆ ಇದ್ದ ಮರಗಿಡಗಳನ್ನು ತೆರವುಗೊಳಿಸಿ  ಒಂದೂವರೆ ವರ್ಷದ ಹಿಂದೆ ಇಲ್ಲಿ ಆಕರ್ಷಕ ಉದ್ಯಾನ ನಿರ್ಮಿಸಲಾಗಿತ್ತು.

ಆಲಂಕಾರಿಕ ಗಿಡಗಳು,  ಮಧ್ಯೆ ಕಾರಂಜಿ ಸೇರಿದಂತೆ ಉದ್ಯಾನ ನಿರ್ಮಿಸಲು ₹1.50 ಕೋಟಿ ವೆಚ್ಚ ಮಾಡಲಾಗಿತ್ತು. ಉದ್ಯಾನದ ಹೊರಾವರಣ ಬಳಸಿಕೊಂಡು ಶಾಸಕರ ಭವನದ ವಿದ್ಯುತ್‌ ಸುರಕ್ಷತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದಕ್ಕಾಗಿ ಪ್ರತ್ಯೇಕವಾಗಿ ₹ 1ಕೋಟಿ ವೆಚ್ಚ ಮಾಡಲಾಗಿತ್ತು.

ಈಗ ಆಕರ್ಷಕ ಉದ್ಯಾನ ತೆರವುಗೊಳಿಸಿ, ಈಜುಕೊಳ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಈಜುಕೊಳ ನಿರ್ಮಿಸುವ ಸಂಬಂಧ ಕೋಳಿವಾಡ ಹಾಗೂ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಈ ಜಾಗದಲ್ಲಿ ಈಜುಕೊಳ ನಿರ್ಮಿಸುವುದು ಸೂಕ್ತವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಶಾಸಕರ ಭವನದಲ್ಲಿ ಜನ ಓಡಾಡುವುದರಿಂದ ಉದ್ಯಾನದ ಜಾಗದಲ್ಲಿ ಈಜುಕೊಳ ನಿರ್ಮಿಸಿದರೆ, ಶಾಸಕರಿಗೆ ಮುಜುಗರ ಆಗಬಹುದು’ ಎಂದು ಹೇಳಿದ್ದರು.

‘ಸುತ್ತಲೂ ಶಾಸಕರ ಭವನದ ಕಟ್ಟಡಗಳು ಇರುವುದರಿಂದ ಈಜು ಕೊಳದಲ್ಲಿ ಬಳಕೆಯಾದ ನೀರನ್ನು ಕಾಲಕಾಲಕ್ಕೆ ಬದಲಾವಣೆ ಮಾಡುವುದು ಸಮಸ್ಯೆಯಾಗಲಿದೆ. ಶಾಸಕರ ಭವನದ ಬಳಕೆಗೆ ಸಂಪೂರ್ಣವಾಗಿ ಕಾವೇರಿ ನೀರನ್ನು ಪೂರೈಸುತ್ತಿದ್ದು, ಈಜುಕೊಳಕ್ಕೆ ಬೇಕಾಗುವಷ್ಟು ಕಾವೇರಿ ನೀರು ಲಭ್ಯವಾಗುವುದಿಲ್ಲ. ಇದಕ್ಕೆ ಪ್ರತ್ಯೇಕವಾದ ಕೊಳವೆ ಬಾವಿ ಕೊರೆಯಬೇಕಾಗುತ್ತದೆ. ಇದು ಕಾರ್ಯಸಾಧುವಾದ ಯೋಜನೆಯಲ್ಲ’ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಆದರೆ, ‘ಇದನ್ನು ಒಪ್ಪದ ಸಭಾಧ್ಯಕ್ಷ ಕೋಳಿವಾಡ ಅವರು, ಒಳಾಂಗಣ ಈಜುಕೊಳ ನಿರ್ಮಿಸಲು ಯೋಜನಾ ವರದಿ ಸಿದ್ಧಪಡಿಸಿ ಮಂಡಿಸುವಂತೆ ಆದೇಶಿಸಿದ್ದರು. ಉದ್ಯಾನದ ಜಾಗದಲ್ಲಿ ಈಜುಕೊಳ ನಿರ್ಮಿಸುವ ಕುರಿತು ನೀಲನಕ್ಷೆ ಸಿದ್ಧಪಡಿಸುವಂತೆ ಕೋರಿ ಸರ್ಕಾರದ ಮುಖ್ಯ ವಾಸ್ತುಶಿಲ್ಪಿಗೆ ಈಗಾಗಲೇ ಪತ್ರ ಬರೆಯಲಾಗಿದೆ.  ₹ 2 ಕೋಟಿ ವೆಚ್ಚವಾಗುವ ಅಂದಾಜಿದೆ’ ಎಂದು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
*
ಶಾಸಕಿಯರಿಗೆ ಈಜು ಕೊಳ ಬೇಡ
ವಿಧಾನಸಭೆ ಸಚಿವಾಲಯವು ಶಾಸಕರು ಹಾಗೂ  ಶಾಸಕಿಯರಿಗಾಗಿ ಪ್ರತ್ಯೇಕ ಈಜುಕೊಳ ನಿರ್ಮಿಸಲು ಉದ್ದೇಶಿಸಿದೆ. ಆದರೆ, ಎಲ್ಲಿಯೂ ಪುರುಷರಿಗೆ, ಮಹಿಳೆಯರಿಗೆ ಎಂದು ಎರಡು ಈಜು ಕೊಳಗಳಿಲ್ಲ. ಒಂದೇ ಈಜು ಕೊಳದಲ್ಲಿ ಬೇರೆ ಬೇರೆ ಸಮಯದಲ್ಲಿ ಎರಡು ವರ್ಗಕ್ಕೂ ಈಜಲು ಅವಕಾಶವಿರುತ್ತದೆ ಎಂದು ಅಧಿಕಾರಿ  ತಿಳಿಸಿದ್ದಾರೆ.

ವಿಧಾನಪರಿಷತ್ತಿನ ಸದಸ್ಯೆ ಜಯಮಾಲಾ ರಾಮಚಂದ್ರ, ತಾರಾ ಅನೂರಾಧ ಅವರು ಈಜು ಕೊಳ ತಮಗೆ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
‘ಅಧಿವೇಶನ ನಡೆಯುವಾಗ ಮಾತ್ರ ಹೊರ ಜಿಲ್ಲೆಗಳ ಶಾಸಕರು ಭವನದ ಕೊಠಡಿ ಬಳಸುತ್ತಾರೆ. ಆಗ ಶಾಸಕರಿಗೆ ಸ್ವಿಮಿಂಗ್‌ ಮಾಡುವಷ್ಟು ಸಮಯ ಇರುವುದಿಲ್ಲ. ಹೀಗಾಗಿ  ಈಜುಕೊಳ ನಿರುಪಯುಕ್ತ’ ಎಂದು ಅಭಿಪ್ರಾಯಪಟ್ಟರು.
*
ರಾಜ್ಯದ ಜನರಿಗೆ ಕುಡಿಯುವುದಕ್ಕೆ ಮೊದಲು  ನೀರು ಕೊಡಲಿ. ಪ್ರತಿನಿತ್ಯ ಸರಾಸರಿ 33 ಶಾಸಕರು ಮಾತ್ರ ಭವನದಲ್ಲಿ ಇರುತ್ತಾರೆ. ಅಲ್ಲಿ ಈಜುಕೊಳದ ಅವಶ್ಯಕತೆಯೇ ಇಲ್ಲ.
ಬಸವರಾಜ ಹೊರಟ್ಟಿ
ಜೆಡಿಎಸ್‌ ನಾಯಕ, ವಿಧಾನಪರಿಷತ್ತು
*
ಅತ್ತ ಕಾವೇರಿ, ಇತ್ತ ಮಹಾದಾಯಿ ನೀರಿಗಾಗಿ ಜನತೆ ಗುದ್ದಾಡುತ್ತಲೇ ಇದ್ದಾರೆ. ಅದನ್ನು ಬಗೆಹರಿಸಲು ಮುಂದಾಗಲಿ. ಈಜುಕೊಳ ಬೇಕು ಎಂದು ಯಾರು ಬೇಡಿಕೆ ಇಟ್ಟಿದ್ದರು?
ಎನ್‌.ಎಚ್‌. ಕೋನರಡ್ಡಿ
ಶಾಸಕ, ಜೆಡಿಎಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT