ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಶಿಸ್ತು ಸಮಾನತೆಗೆ ಪ್ರೇರಣೆಯಾಗಲಿ

13ನೇ ಆಳ್ವಾಸ್‌ ನುಡಿಸಿರಿಯ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷೆ ಡಾ. ಬಿ.ಎನ್‌. ಸುಮಿತ್ರಾಬಾಯಿ ಆಶಯ
Last Updated 18 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಮೂಡುಬಿದಿರೆ: ಸಾಮಾಜಿಕ ಸಮಾನತೆಗಾಗಿ ಇಂದು ನಾವು ಮಾಡುತ್ತಿರುವ ಆಗ್ರಹಗಳನ್ನು 12ನೇ ಶತಮಾನದಲ್ಲಿಯೇ ಶಿವಶರಣರು ಮಾಡಿದ್ದರು. ಇಂದಿಗೂ ಶರಣರ ಹಾದಿಯನ್ನು ಕೊಂಡಾಡುತ್ತಲೇ ಸಮಾನತೆಯ ಆಶಯವನ್ನು ಪ್ರತಿಪಾದಿಸುತ್ತಿದ್ದೇವೆ. ಆದರೆ ಶರಣರು ಕ್ರಾಂತಿಯ ಹಾದಿಯಲ್ಲಿ ವೈಯಕ್ತಿಕ ಶಿಸ್ತು ಮತ್ತು ಮೌಲ್ಯಗಳಿಗೆ ನೀಡಿದ ಆದ್ಯತೆಯನ್ನು ಜಾಣಕುರುಡಿನಿಂದ ಮರೆಯುತ್ತಿದ್ದೇವೆ ಎಂದು ಆಳ್ವಾಸ್‌ ನುಡಿಸಿರಿಯ ಸಮ್ಮೇಳನಾಧ್ಯಕ್ಷೆ ಡಾ. ಬಿ.ಎನ್‌. ಸುಮಿತ್ರಾ ಬಾಯಿ ಹೇಳಿದರು.

ಮೂಡುಬಿದಿರೆಯ ರತ್ನಾಕರವರ್ಣಿ ವೇದಿಕೆಯ ಪುಂಡಲೀಕ ಹಾಲಂಬಿ ಸಭಾಂಗಣದಲ್ಲಿ ಶುಕ್ರವಾರ ಕನ್ನಡ ನಾಡು ನುಡಿಯ ರಾಷ್ಟ್ರೀಯ ಹಬ್ಬ 13ನೇ ಆಳ್ವಾಸ್‌ ನುಡಿಸಿರಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಛಲ ಬೇಕು ಶರಣಂಗೆ ಎಂದು ಶರಣರು ನಂಬಿದ್ದರು. ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ ಎನ್ನುವ ವೈಯಕ್ತಿಕ ಶಿಸ್ತು ಕಡ್ಡಾಯವಾಗಿತ್ತು. ಆದರೆ ಇದನ್ನೆಲ್ಲ ಗಮನಿಸದೇ, ತಮಗೆ ಯಾವುದು ಆಪ್ಯಾಯಮಾನವಾಗಿದೆಯೋ ಅದನ್ನು ಮಾತ್ರ ಆರಿಸಿಕೊಂಡು ಕಲ್ಯಾಣ ಮಾದರಿಯ ಕ್ರಾಂತಿ ನಡೆಯಬೇಕು ಎಂದು ಹಾರೈಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು. ವಚನಕಾರರ ನೈತಿಕ ನಿಲುವನ್ನು ಸ್ವೀಕರಿಸಿದ್ದರೆ ಯಾವುದೇ ಸವಾಲನ್ನು ಕರ್ನಾಟಕ ಸ್ವೀಕರಿಸುವುದು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕರ್ನಾಟಕದ ಆಡಳಿತ ವ್ಯವಸ್ಥೆಯೂ ಬ್ರಿಟಿಷರ ಕಲ್ಪನೆಯನ್ನು ದಾಟಿ ವಿಸ್ತರಿಸಲಿಲ್ಲ. ಹೈದರಾಬಾದ್‌ ಕರ್ನಾಟಕ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ಪರಿಕಲ್ಪನೆಯನ್ನು ಮೀರಿ ರಾಮ ಮನೋಹರ ಲೋಹಿಯಾ ಅವರ ಆಶಯದಂತೆ ಆಡಳಿತದ ವಿಕೇಂದ್ರೀಕರಣ ಆಗಲೇ ಇಲ್ಲ.

ಸಾಂಸ್ಕೃತಿಕ ಬಹುತ್ವವನ್ನು ಅಧಿಕಾರದ ವಿಕೇಂದ್ರೀಕರಣದ ಮೂಲಕ ಕಾಪಾಡುವುದು ಸಮಾಜವಾದದ ಮೊದಲ ಹೆಜ್ಜೆಯಾಗಬೇಕಿತ್ತು. ಅದನ್ನು ಮರೆತು ಆಯಾ ಪ್ರದೇಶಗಳು ಇದ್ದಂತೆಯೇ ಇರಲಿ ಎಂಬ ನಿರ್ಲಕ್ಷ್ಯ ಧೋರಣೆ ಸರಿಯಲ್ಲ ಎಂದು ಅವರು ವಿವರಿಸಿದರು.

ಮನೋದಾಸ್ಯ:  ಇಂದಿನ ವಿದ್ಯಾರ್ಥಿಗಳು ವಾಟ್ಸ್‌ಆಪ್‌ನಲ್ಲಿ ಬರುವ ಸಂದೇಶವನ್ನು  ಕಣ್ಣುಮುಚ್ಚಿ ಫಾರ್ವರ್ಡ್‌ ಮಾಡುವ, ಯಾರದೋ ಚಿಂತನೆಯನ್ನು ಮತ್ಯಾರಿಗೋ ದಾಟಿಸಿಬಿಡುವ ಮನೋದಾಸ್ಯಕ್ಕೆ ಒಳಗಾಗದೇ ತಂತ್ರಜ್ಞಾನದ ನೆರವಿನೊಂದಿಗೆ ಸ್ವತಂತ್ರ ಚಿಂತನೆಯನ್ನು ಹೊಂದಬೇಕು ಎಂದು ಕವಿ, ಸಾಹಿತಿ ಜಯಂತ ಗೌರೀಶ ಕಾಯ್ಕಿಣಿ ಹೇಳಿದರು.

ನುಡಿಸಿರಿಯ ಸಂಭ್ರಮವಾಗಿರಬಹುದು, ಊರಿನ ಜಾತ್ರೆಯಾಗಿರಬಹುದು, ಎಲ್ಲ ಮೆರವಣಿಗೆಗಳ ಮೂಲ ಧಾತು ಅಭಿವ್ಯಕ್ತಿ ಸ್ವಾತಂತ್ರ್ಯ. ಪ್ರಜಾಪ್ರಭುತ್ವವನ್ನು ಗೌರವಿಸಿ, ವೈಯಕ್ತಿಕ ವೈಚಾರಿಕತೆಗೆ ಆದ್ಯತೆ ನೀಡುವುದನ್ನು ವಿದ್ಯಾರ್ಥಿಗಳು ಕಲಿಯಬೇಕು. ಪೂರ್ವಜರು ಸೃಷ್ಟಿಸಿದ ಜಾತಿಭೇದ ಅಥವಾ ಮೂಢನಂಬಿಕೆಗಳಿಗೆ ಬಲಿಯಾಗದೇ, ತಮ್ಮದೇ ಆದ ಸ್ವತಂತ್ರ ಚಿಂತನೆಯನ್ನು ರೂಪಿಸಿಕೊಳ್ಳುವುದನ್ನು ಕಲಿಯಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಮನು ಬಳಿಗಾರ್‌, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ, ಶಾಸಕ ಕೆ. ಅಭಯಚಂದ್ರ ಜೈನ್‌, ವಿಧಾನ ಪರಿಷತ್‌ ಸದಸ್ಯ ಗಣೇಶ್‌ ಕಾರ್ಣಿಕ್‌, ಮಾಜಿ ಸಚಿವ ಅಮರನಾಥ ಶೆಟ್ಟಿ ಮತ್ತಿತರರು ಇದ್ದರು.

ನುಡಿಸಿರಿಯ ಕಾಡಲಿಲ್ಲ ನೋಟಿನ ಸಮಸ್ಯೆ
ಮಂಗಳೂರು: 
ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮಾವೇಶ ಎಂದೇ ಗುರುತಿಸಿಕೊಂಡಿರುವ ಆಳ್ವಾಸ್‌ ನುಡಿಸಿರಿ ಸಂಭ್ರಮಕ್ಕೆ ಈ ಬಾರಿ ನೋಟುಗಳ ನಿಷೇಧದಿಂದ ತುಸು ಹಿನ್ನಡೆಯಾಗಬಹುದು ಎನ್ನುವ ನಿರೀಕ್ಷೆ ಸುಳ್ಳಾಗಿದೆ.  ಉದ್ಘಾಟನಾ ಸಮಾರಂಭದಲ್ಲಿ ಪುಂಡಲೀಕ ಹಾಲಂಬಿ ಸಭಾಂಗಣ ತುಂಬಿ ತುಳುಕುತ್ತಿದ್ದು, ನುಡಿಸಿರಿ ಕಾರ್ಯಕರ್ತರು ಮತ್ತಷ್ಟು ಕುರ್ಚಿಗಳನ್ನು ಹಾಕುವ ವ್ಯವಸ್ಥೆ ಮಾಡುತ್ತಿದ್ದರು.

ರಾಜ್ಯದ ವಿವಿಧೆಡೆಗಳಿಂದ ಬಂದ 61ಕ್ಕೂ ಹೆಚ್ಚು ಕಲಾತಂಡಗಳ 850 ಮಂದಿ ಕಲಾವಿದರ ಬೃಹತ್‌ ಮೆರವಣಿಗೆಯೊಂದಿಗೆ ನುಡಿಸಿರಿ ಆರಂಭವಾಯಿತು. ಸಮ್ಮೇಳನದ ಅಧ್ಯಕ್ಷೆ ಡಾ.ಬಿ.ಎನ್‌. ಸುಮಿತ್ರಾ ಬಾಯಿ, ಉದ್ಘಾಟಕರಾದ ಜಯಂತ ಕಾಯ್ಕಿಣಿ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಅಳ್ವ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌, ನುಡಿಸಿರಿಯ ವಿವಿಧ ಘಟಕಗಳ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು. ಇಷ್ಟು ಬೃಹತ್‌ ಸಂಖ್ಯೆಯಲ್ಲಿ ಕಲಾವಿದರ ಮೆರವಣಿಗೆ ಇದ್ದರೂ, ಒಂದು ನಿಮಿಷವೂ ಹೆಚ್ಚು ಸಮಯ ತೆಗೆದುಕೊಳ್ಳದೆ ಸಮಯಕ್ಕೆ ಸರಿಯಾಗಿ ಎಲ್ಲವೂ ನಡೆಯಿತು.

‘ನೋಟುಗಳ ನಿಷೇಧದಿಂದ ಏನಾದರೂ ಸಮಸ್ಯೆ ಸೃಷ್ಟಿಯಾಗಬಹುದು ಎನ್ನುವ ಆತಂಕವಿತ್ತು. ಆದರೆ ನುಡಿಸಿರಿಗೆ ಬರುವ ಅಭಿಮಾನಿಗಳಿಗೆ ಇದ್ಯಾವ ಸಮಸ್ಯೆಯೂ ಆಗದೇ ಯಶಸ್ವಿಯಾಗಿ ಆರಂಭವಾಗಿರುವುದು ಸಂತೋಷ’ ಎಂದು ಡಾ. ಮೋಹನ ಆಳ್ವ ಅವರು ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.

‘ನಾವು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿಯೇ ತಗೊಂಡಿದ್ವಿ. ನಂತರ ಊಟ ಮತ್ತು ವಸತಿ ವ್ಯವಸ್ಥೆಯನ್ನು ಇಲ್ಲಿಯೇ ಒದಗಿಸುತ್ತಿರುವುದರಿಂದ ಹಣಕ್ಕೆ ಹೆಚ್ಚು ಸಮಸ್ಯೆಯೇ ಆಗಲಿಲ್ಲ. ವಾಪಸ್‌ ಹೋಗುವ ಟಿಕೆಟ್‌ಗಳನ್ನೂ ಮುಂಚಿತವಾಗಿ ಆನ್‌ಲೈನ್‌ನಲ್ಲಿ ಪಡೆದಿದ್ದೇವೆ ’ ಎನ್ನುತ್ತಾರೆ ಧಾರವಾಡದ ಸಾಂಬಶಿವ ಅವರು.

ಆದರೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಯಲ್ಲಿ ಕೊಂಚ ಮಾರಾಟಕ್ಕೆ ಹಿನ್ನಡೆಯಾಗಿದೆ. ಸಣ್ಣ ಪುಟ್ಟ ಮಾರಾಟಗಾರರ ಬಳಿ ಕಾರ್ಡ್‌ ಸ್ವೈಪಿಂಗ್‌ ಮೆಷಿನ್ ಇಲ್ಲದೇ ಇರುವುದರಿಂದ ವ್ಯಾಪಾರ ಕಡಿಮೆ ಅನಿಸುತ್ತಿದೆ. ಇನ್ನೆರಡು ದಿನಗಳಲ್ಲಿ ಪರಿಸ್ಥಿತಿ ಸರಿಯಾಗಬಹುದು ಎನ್ನುವ ನಿರೀಕ್ಷೆ ಕೆಲವರದ್ದು.

‘ಕರ್ನಾಟಕ ನಾಳೆಗಳ ನಿರ್ಮಾಣ’ ಎಂಬ ಒಟ್ಟಾರೆ ಆಶಯದಲ್ಲಿ ಈ ಮೂರು ದಿನಗಳ ಸಮ್ಮೇಳನ ನಡೆಯುತ್ತಿದ್ದು, ಶುಕ್ರವಾರ ಸೋದರ ಭಾಷೆಗಳ ಕುರಿತು ವಿವರವಾದ ಚರ್ಚೆಗೆ ವೇದಿಕೆ ಒದಗಿಸಿತು. ತಮಿಳು ಭಾಷೆಯ ಬಗ್ಗೆ ಡಾ. ತಮಿಳ್‌ ಸೆಲ್ವಿ, ಮಲಯಾಳಂ ಬಗ್ಗೆ ಡಾ. ಮೋಹನ ಕುಂಟಾರ್‌, ಕನ್ನಡದ ಬಗ್ಗೆ ಪ್ರೊ. ಕಿಕ್ಕೇರಿ ನಾರಾಯಣ್‌ ವಿಚಾರ ಮಂಡನೆ ಮಾಡಿದರು. 

ಸಮಾನಾಂತರವಾಗಿ ಒಟ್ಟು ಎಂಟು ವೇದಿಕೆಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿರ್ಮಾಣ ಮಾಡಲಾಗಿದ್ದು, ನೃತ್ಯ, ಸಂಗೀತ, ನಾಟಕ, ತೊಗಲು ಗೊಂಬೆಯಾಟ ಮತ್ತಿತರ ಕಾರ್ಯಕ್ರಮಗಳು ನಡೆದವು. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಊಟೋಪಚಾರ ಸ್ವೀಕರಿಸಿದ್ದಾಗಿ ಆಯೋಜಕರು ತಿಳಿಸಿದ್ದಾರೆ.

***
2018ರಲ್ಲಿ ಮತ್ತೊಮ್ಮೆ ವಿಶ್ವ ನುಡಿಸಿರಿ ವಿರಾಸತ್‌ ಆಯೋಜಿಸುವ ಉದ್ದೇಶವಿದ್ದು, ಈಗಿಂದಲೇ ತಯಾರಿಗಳನ್ನು ಆರಂಭಿಸಲಾಗಿದೆ. ಕನ್ನಡ ಪ್ರೀತಿಯೇ ಎಲ್ಲದಕ್ಕೂ ಸ್ಫೂರ್ತಿ
-ಡಾ. ಎಂ. ಮೋಹನ ಆಳ್ವ, ಸಂಘಟಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT