ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಧನದ ಮೇಲೆ ಏಟು

ನೋಟು ರದ್ದತಿಯ ಸಾಧಕ ಬಾಧಕ
Last Updated 18 ನವೆಂಬರ್ 2016, 19:28 IST
ಅಕ್ಷರ ಗಾತ್ರ

ನವೆಂಬರ್‌ 8ನೆಯ ತಾರೀಕು ನಮ್ಮ ದೇಶದ ರಾಜಕೀಯ ಹಾಗೂ ಆರ್ಥಿಕ ಇತಿಹಾಸದಲ್ಲಿ ಸ್ಮರಣೀಯ ದಿನ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣ ದಿಗ್ಭ್ರಮೆಗೊಳಿಸುವಂತೆ, ಆಘಾತಕ್ಕೆ ದೂಡುವಂತೆ ಇತ್ತು. ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದಾಗ ನನಗೆ ನನ್ನ ಕಿವಿಗಳನ್ನೇ ನಂಬಲಾಗಲಿಲ್ಲ. ಅವರು ಆಡಿದ ಮಾತುಗಳನ್ನು ಪೂರ್ಣವಾಗಿ ಗ್ರಹಿಸಲು, ಇಂಗ್ಲಿಷ್‌ ಭಾಷಣ ಪ್ರಸಾರ ಆಗುವವರೆಗೆ ಕಾಯಬೇಕಾಯಿತು.       ₹ 500 ಹಾಗೂ ₹ 1,000 ಮುಖಬೆಲೆಯ ನೋಟುಗಳನ್ನು ಮೋದಿ ಅವರು ಒಂದೇ ಏಟಿಗೆ ನಿಷ್ಪ್ರಯೋಜಕಗೊಳಿಸಿದರು.

ಈ ತೀರ್ಮಾನದ ಪರಿಣಾಮಗಳನ್ನು ಅವಲೋಕಿಸುವ ಮುನ್ನ, ಧೈರ್ಯದ ತೀರ್ಮಾನ ಕೈಗೊಂಡ ಪ್ರಧಾನಿಯವರನ್ನು ಅಭಿನಂದಿಸಬೇಕು. ಇಂಥ ಕ್ರಮವನ್ನು ಜಾರಿಗೆ ತರಬೇಕು ಎಂದು ಹಲವು ಜನ ಅರ್ಥ ಸಚಿವರು, ಪ್ರಧಾನ ಮಂತ್ರಿಗಳು ಆಲೋಚಿಸಿದ್ದಿದೆ. ಆದರೆ ಅದನ್ನು ಪೂರ್ಣವಾಗಿ ಜಾರಿಗೆ ತರಲು ಅವರಿಂದ ಆಗಲಿಲ್ಲ. ಇಂಥದ್ದೊಂದು ತೀರ್ಮಾನ ಕೈಗೊಳ್ಳುವ ಎದೆಗಾರಿಕೆ ನರೇಂದ್ರ ಮೋದಿ ಅವರಲ್ಲಿ ಇತ್ತು. ಈ ತೀರ್ಮಾನ ಕೈಗೊಳ್ಳಲು ಮೂರು ಪ್ರಮುಖ ಕಾರಣಗಳನ್ನು ಮೋದಿ  ನೀಡಿದ್ದಾರೆ– ಕಪ್ಪುಹಣ, ನಕಲಿ ನೋಟು, ಭಯೋತ್ಪಾದಕರಿಗೆ ಸಿಗುತ್ತಿದ್ದ ಹಣಕಾಸಿನ ನೆರವು ಹಾಗೂ ಅವುಗಳಿಂದ ದೇಶದ ಮೌಲ್ಯಗಳು, ಆಡಳಿತದ ಮೇಲೆ ಆಗುತ್ತಿದ್ದ ಪರಿಣಾಮ.

ಕಪ್ಪುಹಣದ ಸೃಷ್ಟಿಯು ತೀರಾ ಸಂಕೀರ್ಣವಾದ ವಿಚಾರ. ಸಂಪಾದಿಸಿದ ಯಾವುದೇ ಆಸ್ತಿ ಅಥವಾ ಹಣಕ್ಕೆ ಕಾನೂನುಬದ್ಧವಾಗಿ ತೆರಿಗೆ ಪಾವತಿ ಮಾಡದಿದ್ದರೆ, ಆ ಹಣ/ ಆಸ್ತಿ ಕಾನೂನಿನ ಕಣ್ಣಿನಲ್ಲಿ ‘ಕಪ್ಪುಹಣ’ವಾಗುತ್ತದೆ. ಅಪ್ರಾಮಾಣಿಕವಾದ ಹಲವು ಮಾರ್ಗಗಳ ಮೂಲಕ ಕಪ್ಪುಹಣದ ಸೃಷ್ಟಿ ನಡೆಯುತ್ತದೆ. ವಾಣಿಜ್ಯೋದ್ಯಮಿಗಳು ಕಪ್ಪುಹಣದ ಪ್ರಮುಖ ಮೂಲ. ತಾವು ಪಡೆದ ಸಹಾಯಕ್ಕಾಗಿ ಅವರು ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಕಪ್ಪುಹಣ ವರ್ಗಾಯಿಸುತ್ತಾರೆ. ಲಂಚ ಹಾಗೂ ಭ್ರಷ್ಟಾಚಾರದ ಕಾರಣದಿಂದ ಜನಸಾಮಾನ್ಯರಿಗೆ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಕುಣಿಯಬೇಕಾದ ಒತ್ತಡ ಸೃಷ್ಟಿಯಾಗುತ್ತದೆ. ಭಾರತದಲ್ಲಿ ನಗದು ಹಣವನ್ನು ಹೆಚ್ಚಾಗಿ ಬಳಸುವುದರಿಂದ ಕಪ್ಪುಹಣದ ಸೃಷ್ಟಿ, ಬಳಕೆ ಮತ್ತು ಚಲಾವಣೆ ಸುಲಭದ ಕೆಲಸವಾಗಿದೆ.

ಭಾರತದಲ್ಲಿ ಚಲಾವಣೆಯಲ್ಲಿ ಇರುವ ಹಣದ ಮೊತ್ತ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡ 12ರಷ್ಟು. ವಿಶ್ವಮಟ್ಟದಲ್ಲಿ ಇದು ಸರಾಸರಿ ಶೇಕಡ 4ರಷ್ಟು ಮಾತ್ರ. ಭಾರತದ ಅರ್ಥವ್ಯವಸ್ಥೆಯ ಶೇಕಡ 25ರಷ್ಟು ಪಾಲು ಚಟುವಟಿಕೆಗಳು ಕೇವಲ ನಗದು ಹಣ ಬಳಸಿ ನಡೆಯುತ್ತಿವೆ ಎಂದು ಅಂದಾಜಿಸಲಾಗಿದೆ. ಈ ಹಣ ಮುಖ್ಯವಾಹಿನಿಯ ಆರ್ಥಿಕ ಚಟುವಟಿಕೆಗಳಿಗೆ ಸೇರಿಕೊಳ್ಳದೆ, ಕಪ್ಪುಹಣದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದರ ಜೊತೆ, ಇನ್ನೂ ಶೇಕಡ 25ರಷ್ಟು ಚಟುವಟಿಕೆಗಳು ನಗದು ಆಧರಿಸಿ ನಡೆಯುತ್ತವೆ. ಈ ಹಣ ಕೈಬದಲಾಗುವ ವೇಳೆ ರೂಪಾಂತರ ಹೊಂದುವಂತಿರುತ್ತದೆ. ಕಪ್ಪುಹಣದ ಅತಿದೊಡ್ಡ ದಾಸ್ತಾನು ಹೊಂದಿರುವವರು ರಾಜಕಾರಣಿಗಳು ಎಂಬ ನಂಬಿಕೆ ಇದೆ. ಅವರಲ್ಲಿರುವ ಹಣ ಚುನಾವಣಾ ಖರ್ಚುಗಳಿಗೆ ಬಳಕೆಯಾಗುತ್ತದೆ. ರಿಯಲ್ ಎಸ್ಟೇಟ್‌, ಚಿನ್ನ, ಹಾಸ್ಪಿಟಾಲಿಟಿ ಉದ್ಯಮ, ಜೂಜಿನಂತಹ ಅಕ್ರಮ ಚಟುವಟಿಕೆಗಳಲ್ಲೂ ಕಪ್ಪುಹಣದ ಬಳಕೆ ದೊಡ್ಡ ಮಟ್ಟದಲ್ಲಿ ಆಗುತ್ತದೆ.

ದುರಾಸೆಗೆ, ಲಾಭಕ್ಕೆ ಬಲಿಬಿದ್ದು ಕೆಲವು ನಿರ್ಲಜ್ಜರು ನಕಲಿ ನೋಟುಗಳನ್ನು ಮುದ್ರಿಸುತ್ತಾರೆ. ಅವು ದೇಶದಾದ್ಯಂತ ಚಲಾವಣೆಗೆ ಬಂದು, ಸಾಮಾನ್ಯ ನಾಗರಿಕನ ಕಿಸೆಗೂ ಬಂದು ಕೂರುತ್ತವೆ. ಇವುಗಳನ್ನು ಪತ್ತೆ ಮಾಡುವುದು ಮುಗ್ಧರಿಂದ ಸಾಧ್ಯವಿಲ್ಲ. ಹಾಗಾಗಿ ನಕಲಿ ನೋಟುಗಳು ಚಲಾವಣೆಯಲ್ಲಿ ಉಳಿದುಬಿಡುತ್ತವೆ.

ನಕಲಿ ನೋಟುಗಳನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸುವುದು ಅತ್ಯಂತ ಅಪಾಯಕಾರಿ. ಇಂಥ ಕೃತ್ಯಗಳಿಗೆ ವಿದೇಶಿ ಪ್ರಭುತ್ವಗಳ ಬೆಂಬಲ ಇರುವುದನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪತ್ತೆ ಮಾಡಿದೆ. ನಕಲಿ ನೋಟುಗಳು ನೇಪಾಳ, ದುಬೈ ಮೂಲಕ ಹಾಗೂ ನುಸುಳುಕೋರ ಉಗ್ರವಾದಿಗಳ ಮೂಲಕ ಭಾರತ ಪ್ರವೇಶಿಸುತ್ತವೆ. ನಕಲಿ ನೋಟುಗಳನ್ನು ಹಿಡಿದು ದೇಶದೊಳಕ್ಕೆ ನುಸುಳುವ ಉಗ್ರರು, ಗಡಿರಾಜ್ಯಗಳಲ್ಲಿ ಅಶಾಂತಿಗೆ ಹುಳಿ ಹಿಂಡುವ ಸಂಘಟನೆಗಳಿಗೆ ಈ ಹಣ ನೀಡುತ್ತಾರೆ. ಶಸ್ತ್ರಾಸ್ತ್ರಗಳ ಖರೀದಿಗೆ ಹಣವನ್ನು ಅಮೆರಿಕನ್ ಡಾಲರ್‌ಗೆ ಪರಿವರ್ತನೆ ಮಾಡಿಕೊಳ್ಳಲು ದುಬೈ ಒಂದು ಕೇಂದ್ರ. ಭಾರತದಲ್ಲಿ ಹವಾಲಾ ದಂಧೆಯಲ್ಲಿರುವ ವ್ಯಕ್ತಿಗಳು, ಈ ಹಣವನ್ನು ಉಗ್ರ ಸಂಘಟನೆಗಳ ‘ಸ್ಲೀಪರ್‌ ಸೆಲ್‌’ಗಳಿಗೆ ನೆರವು ನೀಡಲು ಬಳಸುತ್ತಾರೆ.

ಮೋದಿ ಅವರ ತೀರ್ಮಾನವು ನಗದು ರೂಪದಲ್ಲಿ ಸಂಗ್ರಹವಾಗಿದ್ದ ಕಪ್ಪುಹಣಕ್ಕೆ ಏಟು ನೀಡಿದೆ, ನ್ಯಾಯೋಚಿತ ಹಣ ಹೊಂದಿರುವವರನ್ನು ರಕ್ಷಿಸಿದೆ. ಹಣವನ್ನು ಬ್ಯಾಂಕ್‌ಗಳಲ್ಲಿ ಜಮಾ ಮಾಡುವ, ಹಳೆಯ ನೋಟು ಬದಲಿಸಿಕೊಳ್ಳುವ ಪ್ರಕ್ರಿಯೆಗಳು ಜನರಿಗೆ ತೊಂದರೆ ನೀಡಿವೆ, ನಿಜ. ಇದು ಸಣ್ಣ ಅಡಚಣೆ, ಇದು ಸುಧಾರಿಸುತ್ತದೆ. ಚಲಾವಣೆಯಲ್ಲಿದ್ದ ₹ 18 ಲಕ್ಷ ಕೋಟಿಯಲ್ಲಿ ಶೇಕಡ 20ರಷ್ಟು ಜಮಾ ಆಗದೆ ಉಳಿದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಅಂದರೆ, ನಗದು ರೂಪದ ₹ 3.6 ಲಕ್ಷ ಕೋಟಿ ಕಪ್ಪುಹಣ ನಿವಾರಣೆ ಆದಂತಾಗುತ್ತದೆ. ಕಪ್ಪುಹಣ ಮತ್ತೆ ಸೃಷ್ಟಿಯಾಗದು ಎಂದು ಹೇಳಲು ಸಾಧ್ಯವಿಲ್ಲ.

ಆದರೆ, ಕಪ್ಪುಹಣ ಸೃಷ್ಟಿಗೆ ಜನ ಹಿಂದೇಟು ಹಾಕುತ್ತಾರೆ. ಇನ್ನುಳಿದ ಶೇಕಡ 80ರಷ್ಟು ಹಣ  ಬ್ಯಾಂಕಿಂಗ್‌ ವ್ಯವಸ್ಥೆಗೆ ಮರಳಿ ಬರುತ್ತದೆ, ಕೆಲವರು ತೆರಿಗೆ ಪಾವತಿಸುತ್ತಾರೆ. ಮುಂದಿನ ದಿನಗಳಲ್ಲಿ, ಈ ಹಣ ಎಲ್ಲಿ ಬಳಕೆಯಾಯಿತು ಎಂಬುದರ ದಾಖಲೆ ಇರುತ್ತದೆ, ತೆರಿಗೆಯಿಂದ ತಪ್ಪಿಸಿಕೊಳ್ಳಲು ಆಗದು. ಹಲವು ರಾಜ್ಯಗಳಲ್ಲಿ ಮೌಲ್ಯವರ್ಧಿತ ತೆರಿಗೆ ಸಂಗ್ರಹದಲ್ಲಿ ಇದ್ದಕ್ಕಿದ್ದಂತೆ ಹೆಚ್ಚಳ ಆಗಿದೆ ಎಂಬುದನ್ನು ಕೆಲವು ಮೂಲಗಳು ತಿಳಿಸಿವೆ. ಆದರೆ ಇದು ಖಚಿತವಾಗಿಲ್ಲ.
ಈಗ ಕೈಗೊಂಡಿರುವ ತೀರ್ಮಾನದಿಂದ ಭ್ರಷ್ಟಾಚಾರ ಮತ್ತು ಲಂಚಗುಳಿತನವನ್ನು ಸಂಪೂರ್ಣವಾಗಿ ಹೋಗಲಾಡಿಸಲು ಆಗದು. ಇದು ನಮ್ಮ ವಂಶವಾಹಿಯಲ್ಲೇ ಬಂದಿದೆ.

ನಾಲ್ಕು ದಶಕಗಳಿಂದ ನಾವು ಲಂಚಗುಳಿತನದ ಜೊತೆ ಬದುಕುತ್ತ ಬಂದಿದ್ದೇವೆ. ಆದರೆ, ಭ್ರಷ್ಟಾಚಾರದಿಂದ ಸಂಪಾದಿಸಿದ ಹಣ ಕಳೆದುಕೊಳ್ಳುವ ಭಯ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ನಕಲಿ ನೋಟುಗಳನ್ನು ಬಹುಬೇಗ ಮುದ್ರಿಸಲು ಆಗದ ಕಾರಣ, ಭಯೋತ್ಪಾದಕರ ಹಣಕಾಸಿನ ಮೂಲದ ಮೇಲೆ ಏಟು ಬೀಳುತ್ತದೆ. ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಈಗಾಗಲೇ ಕಡಿಮೆ ಆಗಿರುವುದು ಇದನ್ನು ಸೂಚಿಸುತ್ತದೆ. ಹೊಸ ನೋಟುಗಳಲ್ಲಿ ಸುರಕ್ಷಾ ಅಂಶಗಳು ಹೆಚ್ಚಿರುವ ಕಾರಣ, ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವ ವಿದೇಶಿ ಪ್ರಭುತ್ವಗಳಿಗೆ ಹೊಸ ನಕಲಿ ನೋಟುಗಳನ್ನು ಮತ್ತೆ ಮುದ್ರಿಸಲು ಹೆಚ್ಚು ಸಮಯ ಬೇಕಾಗಬಹುದು.

ಭಾರತದಲ್ಲಿನ ವಹಿವಾಟು ನಗದು ರೂಪದಿಂದ, ನಗದು ರಹಿತ ರೂಪಕ್ಕೆ ಹೊರಳಿಕೊಳ್ಳಲು ಸಮಯ ಬೇಕು. ಆದರೆ ಸರ್ಕಾರ ಈಗ ಕೈಗೊಂಡಿರುವ ಕ್ರಮವು ಈ ಸ್ಥಿತ್ಯಂತರವನ್ನು ಚುರುಕುಗೊಳಿಸುತ್ತದೆ. ಬದಲಾವಣೆಗೆ ಸಹಕರಿಸುವ ನಿಟ್ಟಿನಲ್ಲಿ ಸರ್ಕಾರವು, ಡೆಬಿಟ್‌ ಹಾಗೂ ಕ್ರೆಡಿಟ್ ಕಾರ್ಡ್‌ ಪಡೆದುಕೊಳ್ಳಲು ಜನ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು.

ಕೆಲಸವನ್ನು ಒಳ್ಳೆಯ ರೀತಿಯಿಂದ ಆರಂಭಿಸಿದರೆ, ಅದು ಅರ್ಧ ಪೂರ್ಣವಾದಂತೆ ಎಂಬ ಮಾತಿದೆ. ಈಗ ಕೆಲಸ ಒಳ್ಳೆಯ ರೀತಿಯಲ್ಲಿ ಆರಂಭವಾಗಿದೆ. ಜನಧನ ಯೋಜನೆಯಿಂದ ಆರಂಭವಾದ ಸ್ಥಿರ ಪ್ರಯತ್ನಗಳು, ನಗದು ಆಧಾರಿತ ಹಣಕಾಸು ವ್ಯವಸ್ಥೆಯಿಂದ ದೇಶವನ್ನು ಹೊಸ ವ್ಯವಸ್ಥೆಯೆಡೆ ಒಯ್ಯುವ ಉದ್ದೇಶ ಸರ್ಕಾರಕ್ಕಿದೆ ಎಂಬುದನ್ನು ತೋರಿಸುತ್ತವೆ. ಈ ನಿಟ್ಟಿನಲ್ಲಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಧಾನಿ ಸೂಚನೆ ನೀಡಿದ್ದಾರೆ.

ದೇಶದ ಅರ್ಥ ವ್ಯವಸ್ಥೆಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿದೆ. ದೇಶ ಎರಡಂಕಿಯ ಆರ್ಥಿಕ ಬೆಳವಣಿಗೆ ಸಾಧಿಸಲಿದೆ ಎಂದು ಕೆಲವರು ಅಂದಾಜಿಸಿದ್ದಾರೆ. ಪ್ರಧಾನಿಯವರ ತೀರ್ಮಾನದ ಬಗ್ಗೆ ವಿಶ್ವದ ಎಲ್ಲೆಡೆಯಿಂದ ಪೂರಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವು ವಲಯಗಳು ಕಿರು ಅವಧಿಗೆ ಸವಾಲು ಎದುರಿಸಬೇಕಾಗುತ್ತದೆ. ದೇಶಕ್ಕಾಗಿ ಈ ಬೆಲೆ ತೆರಬೇಕಾಗುತ್ತದೆ. ದೇಶ, ಮಾಧ್ಯಮ ಮತ್ತು ರಾಜಕೀಯ ಪಕ್ಷಗಳು ಈ ತೀರ್ಮಾನದಿಂದ ಆಗುವ ಪ್ರಯೋಜನಗಳನ್ನು ಗಮನಿಸದೆ ಇರಬಾರದು.

ಲೇಖಕರು ಆರ್ಥಿಕ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT