ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು

Last Updated 19 ನವೆಂಬರ್ 2016, 19:30 IST
ಅಕ್ಷರ ಗಾತ್ರ

ದಕ್ಷಿಣ ಕರ್ನಾಟಕದ ಜನಪದ ನೃತ್ಯಗಳು
ಲೇ:
ಎಚ್‌.ಆರ್‌. ಚೇತನ
ಪ್ರ: ವಿದ್ಯಾನಿಧಿ ಪ್ರಕಾಶನ, ‘ನನಸು’, ಜೆ.ಟಿ. ಮಠ ರಸ್ತೆ, ಗದಗ–01

*
ಜನಪದ ನೃತ್ಯಗಳ ಕುರಿತಾಗಿ ಇರುವ ಈ ಸಂಶೋಧನಾ ಪ್ರಬಂಧವು ಕರ್ನಾಟಕದ ದಕ್ಷಿಣ ಭಾಗವನ್ನು ತನ್ನ ವಸ್ತುವನ್ನಾಗಿ ಇಟ್ಟುಕೊಂಡಿದೆ. ದಕ್ಷಿಣದ ೧೩ ಜಿಲ್ಲೆಗಳಲ್ಲಿ ಕ್ಷೇತ್ರಕಾರ್ಯ ಮಾಡಿ, ಮಾಹಿತಿ ಸಂಗ್ರಹಿಸಿ ಪ್ರಬಂಧವನ್ನು ಸಿದ್ಧಪಡಿಸಲಾಗಿದೆ. ಮನುಷ್ಯನ ಅನಾದಿಯ ಅಭಿವ್ಯಕ್ತಿ ಈ ನೃತ್ಯಗಳು. ಅವು ನಮ್ಮ ಜನಪದರ ಬದುಕಿನಿಂದ ಹೊರತಾದವುಗಳಲ್ಲ. ಅವರಿಗೆ ಅದೇ ಜೀವನ, ಜೀವನವೇ ಅದು.
 
ಇಲ್ಲಿ ಕೊಡಲಾಗಿರುವ ಜನಪದ ನೃತ್ಯಗಳ ಪರಂಪರೆ, ಸಾಹಿತ್ಯ, ವೇಷಭೂಷಣ, ವಾದ್ಯಗಳ ವಿವರಗಳು ಅತ್ಯಂತ ಆಸಕ್ತಿದಾಯಕವಾಗಿವೆ. ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ, ನಂದಿ ಕಂಬ, ಗೊರವರ ಕುಣಿತ, ಚೌಡಿಕೆ ಮೇಳ, ಕರಗ, ಕೋಲಾಟ, ಸೋಮನ ಕುಣಿತ ಮತ್ತಿರ ನೃತ್ಯಗಳು ಕರ್ನಾಟಕದ ವಿಶಿಷ್ಟ ಜನಪದ ಲೋಕವನ್ನು ಪರಿಚಯಿಸುತ್ತವೆ.
 
ಈ ಜನಪದ ನೃತ್ಯಗಳು ಕಲಾತ್ಮಕವಷ್ಟೇ ಅಲ್ಲ – ಅವಕ್ಕೆ ಧಾರ್ಮಿಕ ನಂಟೂ ಇದೆ. ಇವು ದೇಶದ ನೃತ್ಯ ಪ್ರಕಾರಗಳಲ್ಲೇ ಭಿನ್ನವಾದವು. ಇಂತಹ ನೃತ್ಯಗಳು ಕಾಲಕ್ರಮೇಣ ಬದಲಾಗುತ್ತ ಬಂದಿರುವುದನ್ನೂ ಲೇಖಕಿ ಇಲ್ಲಿ ಗುರುತಿಸಿದ್ದಾರೆ. ಅವುಗಳಲ್ಲಿ ಸುಧಾರಣೆ ಆಗಬೇಕಿರುವ ಅಂಶವೂ ಇಲ್ಲಿದೆ. ಜನಪದ ಕಲಾವಿದರು, ಕಲೆ ಸಂಕಷ್ಟದಲ್ಲಿರುವುದನ್ನು, ಅವು ಪುರುಷ ಪ್ರಧಾನವಾಗಿದ್ದು, ಹೆಣ್ಣಿನ ಶೋಷಣೆ ಅವುಗಳ ಗುರಿಯಾಗಿರುವುದನ್ನು ಈ ಅಧ್ಯಯನದಲ್ಲಿ ಗಮನಿಸಲಾಗಿದೆ. ಸಾಕಷ್ಟು ವಿವರಗಳಿಂದ ಇಡಿಕಿರಿದಿರುವ ಈ ಅಧ್ಯಯನ ಬರಿ ಮಾಹಿತಿಗಳಿಂದಾಗಿ ತೀರ ಸೀಮಿತ ವ್ಯಾಪ್ತಿಯುಳ್ಳದ್ದಾಗಿದೆ.
 
**
(ಪುಟ: 80 ಬೆಲೆ: ₹ 80)
 
ಅ ಆ ಇ ಈ ಉ ಊ (ಸಚಿತ್ರ ಮಕ್ಕಳ ಕವನ ಸಂಕಲನ)
ಲೇ:
ನಿರ್ಮಲಾ ಸುರತ್ಕಲ್‌
ಪ್ರ: ಯು.ಕೆ. ಪೈ, ರಾಧಾಕೃಷ್ಣ ಪ್ರಕಾಶನ,
ಯೂನಿಯನ್‌ ಬ್ಯಾಂಕ್‌ ಎದುರು, ಬೊಳ್ವಾರು, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ–576 201
*
ಕನ್ನಡ ಕಂದಮ್ಮಗಳಿಗಾಗಿ ರಚಿಸಲಾಗಿರುವ 60ಕ್ಕೂ ಹೆಚ್ಚಿನ ಶಿಶುಗೀತೆಗಳನ್ನು ನಿರ್ಮಲಾ ಸುರತ್ಕಲ್‌ ‘ಅ ಆ ಇ ಈ ಉ ಊ’ನಲ್ಲಿ ಕೊಟ್ಟಿದ್ದಾರೆ. ಮಕ್ಕಳ ಭಾವಲೋಕಕ್ಕೆ ಸಂಬಂಧಿಸಿದ, ಅವರ ಪರಿಚಿತ ಜಗತ್ತಿನ ವಸ್ತುಗಳನ್ನು ಇಟ್ಟುಕೊಂಡು ರಚಿಸಲಾದ ಬಾಲಗೀತೆಗಳಿವು. ಕನ್ನಡದ ವರ್ಣಮಾಲೆಯ ಹೆಸರು ಹೊತ್ತ ಈ ಸಂಕಲನ ಹಲಬಗೆಯ ಬಣ್ಣದ ಲೋಕವನ್ನು ಮಕ್ಕಳಿಗೆ ತೋರಲು ಪ್ರಯತ್ನಿಸಿದೆ. ‘ತಾತನ ಚಷ್ಮಾ ಅಡಗಿಸಿ ಮೋಜು/ ಪೇಪರ್‌ ಓದುವ ವೇಳೆ/ ಕಿವಿಯನ್ನು ಹಿಂಡಿ, ಅಮ್ಮನ ಗುದ್ದು / ಅಬ್ಬಾ ಇವನ ಗೋಳೇ!’ (ಒಳ್ಳೆಯ ಹೆಸರು, ಪು. 21) ಎಂಬಲ್ಲಿ ಮಗುವಿನ ಸಹಜ ತುಂಟಾಟದ ಚಿತ್ರವಿದೆ. ಇಂತಹ ಮನೋಹರ, ಮನದುಂಬುವ ಚಿತ್ರಗಳು ಇಲ್ಲಿನ ಅನೇಕ ಗೀತೆಗಳಲ್ಲಿವೆ.
 
ಇಲ್ಲಿನ ‘ನನ್ನ ಹೀರೋ’ ಗೀತೆಯಲ್ಲಿ ಡ್ರೈವರ್‌ ಮಾಮನೇ ಹೀರೋ ಆಗುತ್ತಾನೆ. ಅಂಜದೆ, ಅಳುಕದೆ ರಸ್ತೆಯಲ್ಲಿ ಬಸ್ಸನ್ನು ಓಡಿಸುವ ಅವನು ಸಹಜವಾಗಿಯೇ ಮಕ್ಕಳಿಗೆ ನಾಯಕನಾಗಿ ಕಾಣಿಸುತ್ತಾನೆ. ಬೋಧನೆ, ಎಚ್ಚರಿಕೆಯಿಂದ ಕೂಡಿದ ಈ ಗೀತೆಗಳ ಮೂಲಕ ಮಕ್ಕಳ ಮನಸ್ಸನ್ನು ಆಕರ್ಷಿಸಿ ಅವರನ್ನು ಜೀವಜಗತ್ತಿನ ಕಡೆ ಕರೆದೊಯ್ಯುವುದು ಕವಯಿತ್ರಿಯ ಉದ್ದೇಶ. ಆ ಪ್ರಯತ್ನದಲ್ಲಿ ಅವರು ಸಫಲರಾಗಿದ್ದಾರೆ. ಭಾಷೆಯ ಛಂದ, ಲಯದಿಂದ ಅರಳಿರುವ ಈ ಗೀತೆಗಳು ಹಾಡಿದಾಗ ಮಕ್ಕಳಿಗೆ ಇನ್ನಷ್ಟು ಹತ್ತಿರವಾಗುತ್ತವೆ. ಆಗ ಆ ಹಾಡುಗಳು ಬದುಕಿನ ಕುರಿತ ವಿಸ್ಮಯವನ್ನು ಹೆಚ್ಚಿಸಲು, ತಿಳಿವಳಿಕೆಯನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತವೆ. 
 
**
(ಪುಟ: 159 ಬೆಲೆ: ₹ 160)
 
ಪ್ರಾಚಾರ್ಯ ಪಥ
ಸಂ:
ನಾಗರಾಜ ಮತ್ತಿಗಾರ
ಪ್ರ: ಯಮುನಾ ಪ್ರಕಾಶನ ಮತ್ತಿಗಾರ, ಸಂಪಗೋಡ ಅಂಚೆ, ಸಿದ್ದಾಪುರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ– 581 340
*
ಉಪ್ಪೂರರ ಡೈರಿ ಹಾಗೂ ಶಿಷ್ಯಪ್ರೀತಿ ಈಗಿನ ತಲೆಮಾರಿನವರಿಗೆ ಸುಬ್ರಹ್ಮಣ್ಯ ಧಾರೇಶ್ವರ ಗೊತ್ತು, ಕೊಳಗಿ ಕೇಶವ ಹೆಗಡೆ ಗೊತ್ತು. ಕೆಲವರಿಗಾದರೂ ಕೆ.ಪಿ. ಹೆಗಡೆ ಗೊತ್ತು. ಕಾಳಿಂಗ ನಾವುಡರ ಬಗ್ಗೆ ಕೇಳಿಯಾದರೂ ಗೊತ್ತು. ಆದರೆ ನಾರ್ಣಪ್ಪ ಉಪ್ಪೂರರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಲಿಕ್ಕಿಲ್ಲ. ಈ ಎಲ್ಲ ಸ್ಟಾರ್ ಭಾಗವತರ ಗುರು ನಾರ್ಣಪ್ಪ ಉಪ್ಪೂರರು. 
 
ಯಕ್ಷಗಾನ ಕ್ಷೇತ್ರದಲ್ಲಿ ಎಂದೆಂದೂ ಅಳಿಸಲಾಗದ ಪಡಿಯಚ್ಚು ಮೂಡಿಸಿದ ಕಲಾವಿದರು ಅವರು. ನಾರ್ಣಪ್ಪ ಉಪ್ಪೂರರು ಹಾಗಿದ್ದರು, ಹೀಗಿದ್ದರು, ಹೀಗೆ ಹೀಗೆ ಆಟ ಮಾಡಿಸುತ್ತಿದ್ದರು ಎಂದು ಅವರ ಶಿಷ್ಯರು ಮತ್ತು ಅವರನ್ನು ರಂಗದಲ್ಲಿ ಕಂಡ ಅಭಿಮಾನಿಗಳು ಹೇಳುತ್ತಿದ್ದರೂ ಇಂದಿನ ತಲೆಮಾರಿಗೆ ಅವರನ್ನು ಸರಿಯಾಗಿ ಪರಿಚಯಿಸುವ ಕೆಲಸವಾಗಿರಲಿಲ್ಲ. ಈಗ ಅಂತಹ ಕೆಲಸವನ್ನು ನಾಗರಾಜ ಮತ್ತಿಗಾರ ಮಾಡಿದ್ದಾರೆ. ನಾರ್ಣಪ್ಪ ಉಪ್ಪೂರರೇ ತಮ್ಮ ಬದುಕಿನ ಬಗ್ಗೆ ಆಗಾಗ ಬರೆದ ಡೈರಿಯನ್ನು ಹಾಗೆಯೇ ಪ್ರಕಟಿಸಿದ್ದಾರೆ. ಜೊತೆಗೆ ಉಪ್ಪೂರರ ಶಿಷ್ಯರೂ ಕೂಡ ತಮ್ಮ ಗುರುಗಳ ಬಗ್ಗೆ ಭಾವಪೂರ್ಣವಾಗಿ ಜೊತೆಗೆ ವಿದ್ವತ್ ಪೂರ್ಣವಾಗಿಯೂ ಬರೆದಿದ್ದಾರೆ.
 
ಇದನ್ನು ಯಾವುದೇ ಕಾರಣಕ್ಕೂ ಆತ್ಮಕತೆ ಎನ್ನುವ ಹಾಗಿಲ್ಲ. ಯಾಕೆಂದರೆ ಉಪ್ಪೂರರು ತಮ್ಮ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ಹೇಳಿಕೊಂಡಿಲ್ಲ. ಮೊದಲ ನಾಲ್ಕು ಅಧ್ಯಾಯಗಳಲ್ಲಿ ನಾರಣಪ್ಪ ಉಪ್ಪೂರರೇ ತಮ್ಮ ಬದುಕಿನ ಬಗ್ಗೆ ಬರೆದುಕೊಂಡ ವಿವರಗಳು ಇವೆ ನಿಜ. ಆದರೆ ಅದು ಅಪೂರ್ಣ. ಉಳಿದ ಭಾಗಗಳಲ್ಲಿ ಅವರ ಶಿಷ್ಯರು ಬರೆದ ಲೇಖನಗಳು ಗಮನಾರ್ಹವಾಗಿವೆ.  ಉಪ್ಪೂರರ ಡೈರಿ ಆಗಿನ ಕಾಲದ ಕಲಾವಿದನೊಬ್ಬನ ಸಂಕಷ್ಟವನ್ನು ವಿವರಿಸಿದರೆ ಶಿಷ್ಯರ ಲೇಖನಗಳು ಉಪ್ಪೂರರ ವೈಶಿಷ್ಟ್ಯವನ್ನು ಬಣ್ಣಿಸಿವೆ. ಯಕ್ಷಗಾನವನ್ನು ಗಂಭೀರವಾಗಿ ಅಭ್ಯಾಸ ಮಾಡುವವರಿಗೆ ಇದೊಂದು ಉತ್ತಮ ಪಠ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT