ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾಗ್ಯ’ಗಳು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲ

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಬಿ.ಎಲ್‌. ಶಂಕರ್‌
Last Updated 19 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಮೂಡುಬಿದಿರೆ:  ‘ಜನರಿಗೆ ವಿವಿಧ ಭಾಗ್ಯಗಳನ್ನು ನೀಡಿ ಅವರನ್ನು ಸೋಮಾರಿಗಳನ್ನಾಗಿ ಮಾಡಿ, ಅವರ ದುಡಿಯುವ ಶಕ್ತಿಯನ್ನು ಮರೆಸುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲ’ ಹೀಗೆ ರಾಜ್ಯ ಸರ್ಕಾರಕ್ಕೆ ಲಗುಬಗೆಯಲ್ಲಿ ಚಾಟಿ ಬೀಸಿದ್ದು ಕಾಂಗ್ರೆಸ್ ಮುಖಂಡ ಬಿ.ಎಲ್. ಶಂಕರ್.

ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯ ಎರಡನೇ ದಿನ ‘ಡಿ. ದೇವರಾಜ ಅರಸು- ಶತಮಾನದ ನೆನಪು’ ಕುರಿತು ಮಾತನಾಡಿದ ಅವರು, ಸಾಮಾಜಿಕ ನ್ಯಾಯವೆಂದರೆ ಸಮಾಜದ ಎಲ್ಲ ವರ್ಗದವರಿಗೆ ತಮ್ಮ ತುತ್ತಿನ ಚೀಲವನ್ನು ತಾವೇ ತುಂಬಿಸಲು ಅವರ ಕೈಗೆ ಉದ್ಯೋಗ ಕಲ್ಪಿಸುವುದು.

ಈ ಕೆಲಸವನ್ನು ಐದು ದಶಕದ ಹಿಂದೆ ಡಿ. ದೇವರಾಜ ಅರಸು ಅವರು ಭೂಸುಧಾರಣಾ ಕಾಯ್ದೆ, ಮೀಸಲಾತಿ ಕಾಯ್ದೆಯ ಮೂಲಕ ಮಾಡಿದ್ದರು. ಆದರೆ, ಇಂದಿನ ಸರ್ಕಾರ ಉಚಿತ ಭಾಗ್ಯಗಳ ಮೂಲಕ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ. ಅಲ್ಲದೆ, ತಮ್ಮದೇ ಜಾತಿಯ ಅಧಿಕಾರಿಗಳನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸುತ್ತಿದೆ ಎನ್ನುವ ಮೂಲಕ ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಐದು ಸಾವಿರ ವರ್ಷಗಳ ಇತಿಹಾಸ ಹೊಂದಿದ್ದ ಭೂಮಾಲೀಕತ್ವ ಪರಂಪರೆಯನ್ನು ಬದಲಾಯಿಸಿ, ರಾಜ್ಯದ 8 ಲಕ್ಷ ಕುಟುಂಬಗಳಿಗೆ 14 ಲಕ್ಷ ಎಕರೆ ಭೂಮಿಯನ್ನು ಭೂಸುಧಾರಣಾ ಕಾಯ್ದೆ ಮೂಲಕ ಬಡವರಿಗೆ ನೀಡಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಅಲ್ಲದೆ, ದಲಿತ ಸಾಹಿತ್ಯ ಹಾಗೂ ಹಿಂದುಳಿದ ಸಾಹಿತ್ಯ ಮುಂಚೂಣಿಗೆ ಬರುವಂತೆ ಮಾಡಿದುದರಲ್ಲಿ ದೇವರಾಜ ಅರಸರ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.

ಜನರಲ್ಲಿ ಭರವಸೆ ಮತ್ತು ಕನಸನ್ನು ಬಿತ್ತುವವರು ಜನನಾಯಕರಾಗಿ ಬೆಳೆಯುತ್ತಾರೆ. ದೇವರಾಜ ಅರಸು ಆ ಕಾಲದಲ್ಲಿ ವಾಸ್ತವತೆಗೆ ಅನುಸಂಧಾನ ಮಾಡಿ ಜನರಲ್ಲಿ ಕನಸನ್ನು ಬಿತ್ತಿ ಜನನಾಯಕರಾಗಿ ಬೆಳೆದರು. ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ಅವರು ಒಬ್ಬ ಪರಿವರ್ತನಾಶೀಲ ರಾಜಕಾರಣಿ. ಸಮಾಜದ ಎಲ್ಲ ಸ್ತರದ ಜನರನ್ನು ಅರ್ಥಮಾಡಿಕೊಂಡ ಅವರು ‘ಸಾಮಾಜಿಕ ವಿಜ್ಞಾನಿ’ಯೂ ಹೌದು. ಭಾರತದ ರಾಜಕಾರಣಕ್ಕೆ ಹೊಸ ದಿಕ್ಕನ್ನು ನೀಡಿದ ಅರಸು ಅವರ ಸ್ಮರಣೆ ಎಂದೆಂದಿಗೂ ಪ್ರಸ್ತುತ ಎಂದು ಹೇಳಿದರು. ಸಮ್ಮೇಳನಾಧ್ಯಕ್ಷೆ ಡಾ.ಬಿ.ಎನ್.ಸುಮಿತ್ರಾಬಾಯಿ, ಮೋಹನ್ ಆಳ್ವ ಹಾಗೂ ನಾ.ದಾಮೋದರ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT