ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗು ಮೊದಲ ವಿಜ್ಞಾನಿ

Last Updated 20 ನವೆಂಬರ್ 2016, 19:30 IST
ಅಕ್ಷರ ಗಾತ್ರ

ವಿಜ್ಞಾನಿಗಿರಬೇಕಾದ ಅನೇಕ ಲಕ್ಷಣಗಳನ್ನು ನಾವು ಕಲಿಸಬೇಕಾಗಿಯೇ ಇಲ್ಲ. ಅವೆಲ್ಲವೂ ಅವರು ಹುಟ್ಟುವಾಗಲೇ ಹೊತ್ತು ತಂದಿರುತ್ತಾರೆ. ಅವರು ಅದನ್ನು ಕಳೆದುಕೊಳ್ಳದ ಹಾಗೆ ನಾವು ನೋಡಿಕೊಳ್ಳಬೇಕು; ಅಷ್ಟೇ. ಕುತೂಹಲ, ಅದಮ್ಯ ಉತ್ಸಾಹ ಸ್ವಸಾಮರ್ಥ್ಯಗಳಿಸಿಕೊಳ್ಳುವ, ಗಳಿಸಿಕೊಂಡಿದ್ದನ್ನು ಸಾಧಿಸಿ ತೋರಿಸುವ ಕುತೂಹಲ ಕಲಿಕೆಯಿಂದ ಬಂದದ್ದಲ್ಲ. ಅದು ನಿಸರ್ಗ ನಮಗೆ, ನಿಮೆಗೆಲ್ಲರಿಗೂ ನೀಡಿದ ಬಳುವಳಿ. ದೇಹದ ಒಂದಂಗ ಊನವಾದರೂ ಉಳಿದ ಅಂಗಗಳಿಂದ ಅದನ್ನು ಸರಿದೂಗಿಸಿಕೊಳ್ಳುವ ಕೌಶಲವೂ ಹುಟ್ಟಿನಿಂದ ನಮಗೆ ಬಂದಿದೆ. ಸದುದ್ದೇಶದಿಂದಲೋ, ದುರುದ್ದೇಶದಿಂದಲೋ ಯಾರೋ ಮಾಡುವ ಅವಹೇಳನವನ್ನೇ ನಂಬಿ ನಾವು ನಿಸರ್ಗದ ಕಾಣಿಕೆಯನ್ನು ಕಣ್ಮರೆ ಮಾಡಿದ್ದೇವೆ.

ಮಕ್ಕಳು ಐನ್‌ಸ್ಟೈನರಂತಹ ಖ್ಯಾತ ವಿಜ್ಞಾನಿಗಳೊಡನೆ ಯಾವುದೇ ಕೀಳರಿಮೆ / ಮೇಲರಿಮೆಗಳ ಪರಿವೆಯೇ ಇಲ್ಲದೆ ಬೆರೆಯುತ್ತಿದ್ದುದು ನಿಜ. ಇದರಲ್ಲಿ ವಿಜ್ಞಾನಿಯ ಸೌಜನ್ಯದ ಪಾತ್ರದ ಹಾಗೆಯೇ ಕಿರಿಯರ ಕುತೂಹಲದ ಪಾತ್ರವೂ ಇದೆ. ಐನ್‌ಸ್ಟೈನ್‌ರನ್ನು ನೋಡಿ ಮಗುವೊಂದು ಕಿಟಾರನೆ ಕಿರುಚಿದಾಗ ಪೋಷಕರು ಕಂಗಾಲಾದರು. ಐನ್‌ಸ್ಟೈನ್ ತಪ್ಪು ತಿಳಿವರೆಂಬ ಅಂಜಿಕೆ ಅವರನ್ನು ಬಾಧಿಸಿತು. ನಿಜವಾಗಿ, ಪ್ರಾಮಾಣಿಕ ಪ್ರತಿಕ್ರಿಯೆಯನ್ನು ತೋರಿದವನು ನೀನೇ ಎಂದು ಮಗುವಿನತ್ತ ನೋಡಿ ಮುಗುಳು ನಕ್ಕರು ವಿಜ್ಞಾನಿ.

ಹೌದು, ಮಕ್ಕಳು ವಿಜ್ಞಾನಿಗಳೊಡನೆ ಇರಬಯಸುವಷ್ಟೇ ತೀವ್ರತೆಯಿಂದ ವಿಜ್ಞಾನಿಗಳೂ ಬೆರೆಯುತ್ತಾರೆ. ಸಾರ್ವಜನಿಕರು ಹೋಗಲು ಸಂಕೋಚಪಡುತಿದ್ದ ರಾಯಲ್ ಸೊಸೈಟಿಯ ಬಾಗಿಲನ್ನು ಮಕ್ಕಳ ಭೇಟಿಗಾಗಿ ತೆರೆದ ಕೀರ್ತಿ ಮೈಕೇಲ್ ಫ್ಯಾರೆಡೆಗೆ ಸಲ್ಲುತ್ತದೆ. ಅವರನ್ನು ಕರೆಸಿ, ಉಪನ್ಯಾಸ ನೀಡಿ, ಪ್ರಯೋಗಗಳನ್ನು ಮಾಡಿ ತೋರಿಸಿದ ಈ ವಿಜ್ಞಾನಿ ಮಕ್ಕಳ ತಂದೆಯಲ್ಲ ಎಂಬುದು ವಿಪರ್ಯಾಸ. ‘ನೀವು ಈ ಪ್ರಯೋಗಶಾಲೆಗೆ ಭೇಟಿ ನೀಡುವ ಮೂಲಕ ವಿಜ್ಞಾನ, ಸಂಶೋಧನೆ, ಮತ್ತು ವಿಜ್ಞಾನಿಗಳಿಗೆ ಮಾನ್ಯ ಮಾಡಿ ನನಗೆ ಸಂತಸ ಮೂಡಿಸಿದ್ದೀರಿ’ ಎಂಬುದು ಅವರು ಮಕ್ಕಳಿಗೆ ಉಪನ್ಯಾಸ ನೀಡುವಾಗಿನ ಮೊದಲ ಸಾಲು.

ಲೂಯಿ ಪಾಸ್ತರ್ ಅವರು ತಮ್ಮ ವಿಜ್ಞಾನದ ಸಂಶೋಧನೆಯ ಸಾಧನೆಯನ್ನು ಗುರುತಿಸಿದಾಗ ಅದು ಮುಗ್ಧ ಶಿಶುವಿನ ಹಾಗೆ ನಿಸರ್ಗವನ್ನು ಬೆರೆಗುಗಣ್ಣಿನಿಂದ ನೋಡುವುದು – ಎಂದು ವಿವರಿಸಿದ್ದಾರೆ. ನಿಸರ್ಗ ನೀಡಿದ ಕಾಣಿಕೆಯನ್ನು ಕೆಡದ ಹಾಗೆ ಸಂರಕ್ಷಿಸಿಕೊಳ್ಳುವುದೇ ವಿಜ್ಞಾನಿಗಳ ಆಶಯ.

ನನಗೆ ಮಕ್ಕಳು ಬರೆವ ಪತ್ರದಲ್ಲಿ ಅನೇಕ ಬಾರಿ ಕಾಣಿಸಿಕೊಂಡಿರುವ ಪ್ರಶ್ನೆ ಮೊದಲ ವಿಜ್ಞಾನಿ ಯಾರು?
ಮೊದಲು ಈ ಪ್ರಶ್ನೆಗೆ ಉತ್ತರ ತಿಳಿಯದೆಂದು ಬರೆದೆ. ಅದು ಮಕ್ಕಳಿಗೂ, ನನಗೂ ನಿರಾಶೆ ಮೂಡಿಸಿತು. ಅನಂತರ ಈ ಪ್ರಶ್ನೆಗೆ ಉತ್ತರಿಸಲು ಏಕೆ ಕಷ್ಟವೆಂದು ವಿವರಿಸಿದೆ. ಅದೂ ಮಕ್ಕಳಿಗೆ/ನನಗೆ ಸಮಾಧಾನ ನೀಡಿದ ಉತ್ತರವಾಗಲಿಲ್ಲ. ಮತ್ತೆ ಅದೇ ಪ್ರಶ್ನೆಗೆ ಉತ್ತರ ಬರೆಯಬೇಕಾದಾಗ ಧೈರ್ಯ ಮಾಡಿ ಉತ್ತರ ನೀಡಿದೆ: ಮೊದಲ ವಿಜ್ಞಾನಿ ಮಗು!

ಹೀಗೆ ಹೇಳಿದ್ದಾದರೂ ಹೇಗೆ? ವಿಜ್ಞಾನಿಗಳ ಜೀವನಚರಿತ್ರೆ ಅಧ್ಯಯನ ಮಾಡಿದಾಗ (ಈಗಂತೂ ಅದು ವಿಜ್ಞಾನಿಗಳ ವಿಶ್ವಕೋಶವಾಗಿ ಲಭ್ಯವಾಗಿದೆ) ಅವರು ಸಂಶೋಧನೆ ಕೈಗೊಂಡು ವಿಜ್ಞಾನಿ ಎನಿಸಿಕೊಳ್ಳುವ ಎಷ್ಟೋ ಮೊದಲೇ ವಿಜ್ಞಾನಿಗಿರಬೇಕಾದ ಲಕ್ಷಣಗಳನ್ನು ತಮ್ಮ ಶಾಲಾ ಪೂರ್ವ ದಿನಗಳಲ್ಲಿ / ಶಾಲೆಯಲ್ಲಿ ಅನೇಕ ರೀತಿಯಿಂದ ಮೆರೆದಿರುವುದು ಕಂಡುಬಂದಿತು. ಇವನ್ನು ಅಧ್ಯಯನ ಮಾಡಿ, ಈ ಕುರಿತು ಶಾಲೆಗಳಲ್ಲಿ ಉಪನ್ಯಾಸ ನೀಡಿದಾಗ, ಮಕ್ಕಳು, ತಾವೂ ಈ ವರ್ತನೆ ತೋರಿದ ಬಗ್ಗೆ ಅವರ ಅನುಭವವನ್ನು ಹೇಳಿಕೊಳ್ಳುತ್ತಿದ್ದರು.

ಹೀಗಾಗಿ ಈ ಸಾರ್ವತ್ರಿಕ ಲಕ್ಷಣ ಶಾಲಾ ಕಲಿಕೆಯ ಫಲವಲ್ಲ. ಶಾಲಾ ಕಲಿಕೆಗೆ ಸೇರ್ಪಡೆಯಾಗುವ ಈ ವಿಜ್ಞಾನದ ಹುಡುಕಾಟಗಳು - ಶಾಲೆ, ಪ್ರಯೋಗಾಲಯ, ಗ್ರಂಥಾಲಯಗಳಿಗೆ ಬಂದು ಸೇರುವ ಮೊದಲೇ ಶಾಲೆಗೆ ಹೋಗದವರೇ ಅದನ್ನು ರೂಪಿಸಿರಬೇಕು. ಚಿನ್ನವನ್ನು ಕೀಳುಲೋಹಗಳಿಂದ ತಯಾರಿಸುವ ಪ್ರಯತ್ನ ಶಾಲಾ ಕಲಿಕೆಯ ಫಲವೇನೂ ಅಲ್ಲ. ಅಂದ ಮೇಲೆ, ಕಲಿಕೆಯಿಂದ ಕೌಶಲ, ಮತ್ತು ಶಿಸ್ತು ಕೊಡುಕೊಳ್ಳುವ ಬಗ್ಗೆ ಎರಡು ಮಾತಿಲ್ಲ. ಆದರೆ ಆ ಶಿಸ್ತನ್ನು ರೂಪಿಸಿದ್ದು ಯಾರು?

ಮಕ್ಕಳಿಗೆ, ಸಾರ್ವಜನಿಕರಿಗೆ (ಸಾರ್ವಜನಿಕರೂ ವಿಜ್ಞಾನಕ್ಷೇತ್ರದ ಬಗ್ಗೆ ಭಯ ಮಿಶ್ರಿತ ಕುತೂಹಲ ಇರುವ ಮಕ್ಕಳೇ) ವಿಜ್ಞಾನದ ಬೆಳವಣಿಗೆಗಳನ್ನು ಮನವರಿಕೆ ಮಾಡಿಕೊಡುವ ಪ್ರಯತ್ನಗಳನ್ನು ಕೆಲವು ಅಪವಾದಗಳನ್ನು ಹೊರತುಪಡಿಸಿ - ಎಲ್ಲ ವಿಜ್ಞಾನಿಗಳೂ ಮಾಡಿದ್ದಾರೆ. ಈ ವಿಜ್ಞಾನಿಗಳ ಸಂಖ್ಯಾ ಕೊರತೆಯನ್ನು ನೀಗಿಸಲೇನೋ ಎನ್ನುವ ಹಾಗೆ ತಜ್ಞರೂ ಅಜ್ಞರೂ ವಿನಿಮಯ ಮಾಡಿಕೊಳ್ಳುವ ಒಂದು ತಂಡವೇ ಭಾರತದ ಎಲ್ಲಾ ಭಾಷಾವಾರು ಪ್ರಾಂತ್ಯದಲ್ಲೂ ರೂಪುಗೊಂಡಿದೆ.

ಭಾರತದ ಮಾಜಿ ರಾಷ್ಟ್ರಪತಿಯವರೂ ತಮ್ಮ ಸೂಕ್ಷ್ಮ ಗ್ರಹಿಕೆಯಿಂದ ಮಕ್ಕಳಲ್ಲಿ ಭವಿಷ್ಯದ ಬಗೆಗೆ ಕಾರ್ಮೋಡ ಆವರಿಸಿ ಕಂಗಾಲಾಗಿರುವುದನ್ನು ಗಮನಿಸಿ, ಅವರಿಗೆ ಸ್ಫೂರ್ತಿ ತುಂಬಲು ಮುಂದಾದರು. ಮಕ್ಕಳ ದಿನಾಚರಣೆಗೆ ಪೂರಕವಾದ ಮತ್ತೊಂದು ಕಾರ್ಯಾಚರಣೆ. ಮಾಧ್ಯಮಗಳಲ್ಲಿ ವರದಿ ಆಗುವ ನಕಾರಾತ್ಮಕ ಅಂಶಗಳನ್ನೇ ಹಿಮ್ಮೆಟ್ಟಿಸುವ ಸಕಾರಾತ್ಮಕ ಅಲೆಯನ್ನು ರೂಪಿಸಿ ಪಸರಿಸಿದ್ದು ಅವರ ಸಾಧನೆ. ಅವರನ್ನೂ ಮಕ್ಕಳು ಕೇಳಿದ ಪ್ರಶ್ನೆ: ‘ಮೊದಲ ವಿಜ್ಞಾನಿ ಯಾರು?’

ಈ ಲೇಖಕನ ಧನ್ಯಭಾವವೆಂದರೆ, ಡಾ. ಕಲಾಮ್ ಅವರೂ ‘ಮಾನವಶಿಶು’ ಎಂದೇ ಉತ್ತರಿಸಿದ್ದು. ಈ ಉತ್ತರ ಸೋಜಿಗ ಉಂಟು ಮಾಡಲು ಕಾರಣವನ್ನು ಅವರೇ ಹೇಳಿದರು: ಇಂದಿನ ವಿಜ್ಞಾನಿಯ ಮಾದರಿ (ರೋಲ್ ಮಾಡೆಲ್) ಪ್ರಯೋಗಾಲಯದಲ್ಲಿ ಉಪಕರಣಗಳೊಡನೆ ಬಡಿದಾಡುತ್ತಿರುವ ವ್ಯಕ್ತಿ. ಅಂತಹ ವಿಜ್ಞಾನಿಯನ್ನು ಅವರು ಕಲ್ಪಿಸಿಕೊಂಡಿದ್ದಾರೆ. ಆದ್ದರಿಂದ ಮೂಲಸೆಲೆಯಾದ ಮಾನವ ಕೌತುಕವನ್ನು ಉಪೇಕ್ಷಿಸಿದ್ದಾರೆ. ಮಲಿನಗೊಳ್ಳದ ಕೌತುಕವು ಗರಿಷ್ಠಮಟ್ಟದಲ್ಲಿರುವುದು ಕಿರಿಯರಲ್ಲೇ ಎಂದು ಮನೋವಿಜ್ಞಾನಿಗಳೂ ಒಪ್ಪುತ್ತಾರೆ.

ಅದೇನೆ ಇರಲಿ, ಭಾರತದ ಭವಿತವ್ಯದ ಭವ್ಯಭವನ ನಿಂತಿರುವುದು ಭಾರತದ ನೆಲದ ಮೇಲೆ ಅಲ್ಲ. ಭಾವಿ ಭಾರತದ ಪ್ರಜೆಗಳು ಈ ದೇಶ/ಸಮಾಜದ ಮೇಲೆ ಇರಿಸಿರುವ ಭರವಸೆಯ ಬುನಾದಿಯ ಮೇಲೆ. ಈ ಭರವಸೆ ಭಗ್ನವಾಗದಂತೆ ನಾವೆಲ್ಲರೂ ವಿಶೇಷ ಗಮನ ಹರಿಸಬೇಕಾದ ತುರ್ತು ಈಗಲೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT