ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಕ್ಕುರುಳಿದೆ ತುರನೂರ ವಾಡೆ

Last Updated 21 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಸ್ಮಾರಕಗಳು ಇತಿಹಾಸದ ಅಧ್ಯಯನಕ್ಕೆ ಜೀವಂತ ಸಾಕ್ಷಿ. ಆದರೆ, ಗತದ ಬಗೆಗಿನ ತಾತ್ಸಾರ ಭಾವನೆ ಮತ್ತು ಹಣವೇ ಮುಖ್ಯವೆಂಬ ಧೋರಣೆಗಳಿಗೆ ಇಂಥ ಸ್ಮಾರಕಗಳು ಬಲಿಯಾಗಿ ನಾಮಾವಶೇಷವಾಗುತ್ತಿವೆ.

ಹಿಂದೆ ದಕ್ಷಿಣ ಮರಾಠಾ ದೇಶ (ಮುಂಬೈ ಪ್ರಾಂತ) ದಲ್ಲಿನ ಒಂದು ಚಿಕ್ಕ ಸಂಸ್ಥಾನವಾಗಿದ್ದ ಇಂದಿನ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿನ ಸ್ಮಾರಕಗಳು ಇದೇ ಗತಿ ಕಾಣುತ್ತಿವೆ. ಸಂಸ್ಥಾನಿಕರ ವಾಯುವಿಹಾರಕ್ಕಾಗಿನ ಅರಮನೆ ಮತ್ತು ಅತಿಥಿಗಳಿಗೆ ನಿರ್ಮಿಸಿದ ವಸತಿಗೃಹಗಳು ನೆಲಕ್ಕುರುಳಿವೆ. ಕಲಾವಿನ್ಯಾಸಕ್ಕೆ ಹೆಸರಾಗಿದ್ದ ಇವು, ಜನಮಾನಸದಲ್ಲಿ ‘ತುರನೂರ ವಾಡೆ’ ಎಂದೇ ಪ್ರಸಿದ್ಧ.

ಅವು ಅವನತಿ ಹಾದಿ ಹಿಡಿಯಲು ಸಂಸ್ಥಾನದ ವಂಶಸ್ಥರು ಖಾಸಗಿಯವರಿಗೆ ಮಾರಾಟ ಮಾಡಿರುವುದೇ ಕಾರಣ. ಖಾಸಗಿಯವರು ಗುಡ್ಡಗಳನ್ನು ಅಗೆದು ಮಣ್ಣನ್ನು ಮಾರಾಟ ಮಾಡುತ್ತಿದ್ದು, ನಿರ್ವಹಣೆ ಇಲ್ಲದೇ ಇವು ಮಣ್ಣು ಹಿಡಿದಿವೆ.

ಮೊದಲು ಅರಮನೆಯಾಗಿ, ಸ್ವತಂತ್ರ ಭಾರತದಲ್ಲಿ ಗುರುಮನೆಯಾಗಿ (ಇದೇ ಕಟ್ಟಡದಲ್ಲಿ ನಗರದ ಸಿ.ಎಸ್.ಬೆಂಬಳಗಿ ಮಹಾವಿದ್ಯಾಲಯ ಪ್ರಾರಂಭವಾಯಿತು), ನಂತರ ಗ್ರಾಮೀಣ ವಿದ್ಯಾರ್ಥಿಗಳಿಗೆ ವಸತಿ ನಿಲಯವಾಗಿತ್ತು. ಎಷ್ಟೋ ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸಿದಾಗ ಈ ವಾಡೆಗೆ ಓದಲು ಹೋಗುತ್ತಿದ್ದರು. ಈಗ ಹೀಗೊಂದು ಗುಡ್ಡ ಇತ್ತು, ಅದರ ಮೇಲೊಂದು ವಾಡೆ ಇತ್ತು ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ಮಣ್ಣಿನ ಗುಡ್ಡ ಸಹಿತ ನೆಲಸಮಗೊಂಡಿದೆ. ಇದು ನಮ್ಮಲ್ಲಿನ ಐತಿಹಾಸಿಕ ಪ್ರಜ್ಞೆ.

ವಿಜಯನಗರದ ನಂತರ ಮರಾಠರ ಆಳ್ವಿಕೆಯಲ್ಲಿ ಒಂದು ಸರಂಜಾಮ ಆಗಿದ್ದ ರಾಮದುರ್ಗವು ಮರಾಠಾ, ಆದಿಲ್‌ಶಾಹಿ ಮತ್ತು ಮೈಸೂರ ಸುಲ್ತಾನರಿಗೆ ತಮ್ಮ ಪ್ರಭುತ್ವ ವಿಸ್ತರಣೆಗೆ ಒಂದು ಆಯಕಟ್ಟಿನ ಸ್ಥಳವಾಗಿತ್ತು. ಅಂತೆಯೇ, ಶಿವಾಜಿ ಇಲ್ಲಿ ಕೋಟೆ ನಿರ್ಮಿಸಿದನು. ಇದರ ಉಸ್ತುವಾರಿಯನ್ನು ಮೊದಲು ಅಪ್ಪಾಜೀರಾವ್ ಸುರೋನಿಗೆ ವಹಿಸಲಾಗಿತ್ತು.

ನಂತರದಲ್ಲಿ ಭಾವೆ ಎಂಬ ಚಿತ್ಪಾವನ ಬ್ರಾಹ್ಮಣ ಮನೆತನ 1948ರ ಸಂಸ್ಥಾನದ ವಿಲೀನೀಕರಣದವರೆಗೆ ಆಳ್ವಿಕೆ ನಡೆಸಿತು. ಈ ಮನೆತನದ ಕೊನೆಯ ರಾಜ ಶ್ರೀಮಂತ ರಾಮರಾವ್ ವೆಂಕಟರಾವ್ ಅಲಿಯಾಸ್ ರಾವ್ ಸಾಹೇಬ ಬಾವೆ 12 ಜನವರಿ 1915ರಂದು ಅಧಿಕಾರಕ್ಕೆ ಬಂದ. 1973ರಲ್ಲಿ ಕೈಗೊಂಡ ಯುರೋಪ್ ಪ್ರವಾಸ ಈತನ ಮೇಲೆ ಗಾಢವಾದ ಪರಿಣಾಮ ಬೀರಿತು.

ಯುರೋಪ್ ಮಾದರಿಯಲ್ಲಿಯೇ ಸಂಸ್ಥಾನದ ಪ್ರಗತಿಯ ಕನಸು ಕಂಡ. ಈ ದಿಶೆಯಲ್ಲಿ ಈತ ಹೊಸ ಕಟ್ಟಡ ನಿರ್ಮಾಣದಂತಹ ಇನ್ನಿತರ ಕಾರ್ಯಗಳನ್ನು ಕೈಗೆತ್ತಿಕೊಂಡು ಸುಮಾರು ಎಂಟು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ. ಮಲಪ್ರಭಾ ನದಿಗೆ ಕೊಳಚಿ ಗ್ರಾಮದ ಬಳಿ ಅಣೆಕಟ್ಟು ನಿರ್ಮಿಸಿ, 300 ಎಕರೆ ಭೂಮಿಗೆ ನೀರಾವರಿ ವ್ಯವಸ್ಥೆ ಮಾಡಿದ.

ಕನ್ನಡ ಶಾಲೆ, ಆಸ್ಪತ್ರೆ, ಪಶು ಆಸ್ಪತ್ರೆ, (ಇವತ್ತಿಗೂ ಇವು ಕಾರ್ಯನಿರ್ವಹಿಸುತ್ತಿವೆ) ಎರಡು ಅಂತಸ್ತಿನ ಇಂಗ್ಲಿಷ್‌ ಶಾಲೆ (ಇಂದಿನ ಸ್ಟೇಟ್ ಜ್ಯೂನಿಯರ್ ಹೈಸ್ಕೂಲ್‌), ನೀರಾವರಿ ಸೌಲಭ್ಯಕ್ಕಾಗಿ ಹಲಗತ್ತಿ ಬಳಿ ಟ್ಯಾಂಕ್‌, ಬ್ಯಾಡ್ಮಿಂಟನ್ ಕ್ಲಬ್ (ಇಂದಿನ ವಿ.ಎಸ್.ಆಪ್ಟೆ ಸೋಷಿಯಲ್ ಕ್ಲಬ್), ವಿಕ್ಟೋರಿಯಾ ಜೂಬ್ಲಿ ಗ್ರಂಥಾಲಯ (ಇಂದಿನ ಸಾರ್ವಜನಿಕ ಕೇಂದ್ರ ಗ್ರಂಥಾಲಯ), ಜಿಲ್ಲಾ ಮತ್ತು ಸಬ್ ಜಡ್ಜ್ ನ್ಯಾಯಾಲಯ (ಇಂದು ನ್ಯಾಯಾಲಯ ಮತ್ತು ಸಬ್ ರೆಜಿಸ್ಟ್ರಾರ್ ಕಚೇರಿ) ಮುಂತಾದವುಗಳನ್ನು ನಿರ್ಮಿಸಿದ ಇದೇ ಅವಧಿಯಲ್ಲಿ ತುರನೂರ ಬಳಿಯ ವಾಡೆಗಳನ್ನು ನಿರ್ಮಿಸಿದ.

ಈ ಎಲ್ಲ ಖರ್ಚನ್ನು ನಿಭಾಯಿಸುವುದಕ್ಕಾಗಿ ಬರದ ತೀವ್ರತೆ ಗಮನಿಸದೆ, ಭೂಕಂದಾಯ ಹೆಚ್ಚಿಸಿ ಪ್ರಜೆಗಳ ಪ್ರತಿರೋಧಕ್ಕೆ ಕಾರಣನಾದ. ಅದೇ ಉಗ್ರ ಹೋರಾಟವಾಗಿ ಪರಿಣಮಿಸಿ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿತು. ಜೆ.ಡಿ.ದಾವರ ಎಂಬ ಮುಂಬೈ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ವಿಚಾರಣೆ ನಡೆಯಿತು. ವಕೀಲ ಕೆ.ಎಫ್. ನಾರಿಮನ್ ಪ್ರಜೆಗಳ ಪರ ವಾದ ಮಂಡಿಸಿದರು. ಕೊನೆಗೆ ಎಂಟು ಜನರಿಗೆ ಗಲ್ಲು ಶಿಕ್ಷೆಯಾಯಿತು. ಒಟ್ಟಿನಲ್ಲಿ ಸಂಸ್ಥಾನಿಕ ಪ್ರಜೆಗಳ ವಿರೋಧಿಯಾದ.

ರಾಜನನ್ನು ರಾಮದುರ್ಗದ ಜನ ಓಡಿಸಿದರು ಎನ್ನುವ ವಿರೋಧಾತ್ಮಕ ಧಾಟಿಯೇ ಈ ಸ್ಮಾರಕಗಳ ಬಗ್ಗೆ ಜನರಲ್ಲಿ ತಾತ್ಸಾರ ಭಾವನೆಗೆ ಕಾರಣವಾಗಿರಬಹುದು. ಸಂಸ್ಥಾನಿಕ, ಪ್ರಜೆಗಳ ವಿರೋಧಿ ಎಂಬ ಭಾವನೆಯಿಂದ ಈ ಸ್ಮಾರಕಗಳನ್ನು ವಿರೋಧಿ ಭಾವನೆಯಿಂದ ನೋಡಿದ್ದಕ್ಕೆ ಅವುಗಳ ಬಗ್ಗೆ ನಮ್ಮಲ್ಲಿ ಪ್ರೀತ್ಯಾದರಗಳು ಸಿಗುವುದಿಲ್ಲ. ಆದರೆ, ಸ್ಮಾರಕಗಳು ಯಾವಾಗಲೂ ಒಂದು ದೇಶದ ಸಂಪತ್ತು ಮತ್ತು ಪ್ರಭುತ್ವವನ್ನು ವಿವರಿಸುವಂತಹವು.

ಅವುಗಳನ್ನು ಹೊಂದುವುದಷ್ಟೇ ಅಲ್ಲ ಅವುಗಳ ಸಂರಕ್ಷಣೆ ಕೂಡ ನಮ್ಮ ಹೊಣೆ. ಯಾಕೆಂದರೆ, ಸ್ಮಾರಕಗಳು ಅಲ್ಲಿನ ಇತಿಹಾಸ, ಕಲೆ ಮತ್ತು ವಾಸ್ತುಶಿಲ್ಪ ವಿನ್ಯಾಸ ಮುಂತಾದವುಗಳನ್ನು ಪ್ರತಿನಿಧಿಸುತ್ತವೆ. ಅವು ನಮ್ಮ ವಾಸ್ತುಶಿಲ್ಪ ಕೌಶಲ್ಯದ ಕುರುಹುಗಳು. ಇವುಗಳನ್ನು ನಮ್ಮ ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವುದು ನಮ್ಮ ಕರ್ತವ್ಯ ಅಲ್ಲವೇ?

ರಾಜನನ್ನು ಹೊರತುಪಡಿಸಿ ಕಲಾ ದೃಷ್ಟಿಯಿಂದ ನೋಡಿದರೆ, ಇವು ನಮ್ಮ ಇತಿಹಾಸವನ್ನು ತಿಳಿಸುತ್ತವೆ. ಆಧುನಿಕ ಕಲಾ ತಂತ್ರಜ್ಞರಿಗೂ ಪ್ರಿಯವಾಗಬಹುದಾದ ಕಟ್ಟಡಗಳು. ಇವುಗಳು ಸ್ಥಳೀಯ ಹಿರಿಮೆಯನ್ನು ಹೆಚ್ಚಿಸುತ್ತವೆ. 

ಐತಿಹಾಸಿಕ ಕಟ್ಟಡಗಳು ಬೌದ್ಧಿಕವಾಗಿ ನಮ್ಮನ್ನು ಗತಕಾಲಕ್ಕೆ ಕೊಂಡೊಯ್ಯುತ್ತವೆ. ಇಂತಹ ಕಲಾತ್ಮಕ ಸ್ಮಾರಕಗಳನ್ನು ಇಂದು ಕಟ್ಟಲು ಸಾಧ್ಯವಿಲ್ಲ. ಆದರೆ, ಇದ್ದವುಗಳನ್ನು ಸಂರಕ್ಷಿಸುವ ಮನಸ್ಥಿತಿ ನಮಗೇಕಿಲ್ಲ? ನಾವಿಂದು ಮಾತು ಮಾತಿಗೂ ಸಾಂಸ್ಕೃತಿಕ ರಾಷ್ಟ್ರೀಯತೆ, ದೇಶಪ್ರೇಮದ ಬಗ್ಗೆ ಮಾತನಾಡುವುದೇಕೆ? ಇವುಗಳನ್ನು ರಾಜ ನಿರ್ಮಿಸಿರಬಹುದು. ಆದರೆ, ಇವುಗಳ ನಿರ್ಮಾಣಕ್ಕೆ ನಮ್ಮ ಕೈಗಳೇ ದುಡಿದಿವೆ. ಒಂದು ಪ್ರದೇಶದ ಜನರು ತಮ್ಮ ಅಸ್ತಿತ್ವ ಭದ್ರಪಡಿಸಿಕೊಳ್ಳಲು ಗತಕಾಲದ ಮೊರೆ ಹೋಗುವುದು ಸಹಜ. ಸ್ವಾತಂತ್ರ್ಯ ಪೂರ್ವದಲ್ಲಿಯೂ ರಾಷ್ಟ್ರೀಯತೆ ಗತಕಾಲದ ನೆನಪುಗಳ ಮತ್ತು ಸಾಧನೆಗಳ ಸ್ಫೂರ್ತಿಯ ಸೆಲೆಯಿಂದಲೇ ಬೆಳೆದಿರುವಂತಹುದು. 1938–39ರಲ್ಲಿ ಇಲ್ಲಿನ ಪ್ರಜೆಗಳು ನಡೆಸಿದ ಸಂಸ್ಥಾನಿಕರ ವಿರುದ್ಧದ ಹೋರಾಟದ ಸಂಕೇತವಾಗಿಯಾದರೂ ಇವುಗಳ ಸಂರಕ್ಷಣೆ ಬೇಡವೇ?.

ಭಾರತ ಸ್ವತಂತ್ರಗೊಂಡ ನಂತರ ಸಂಸ್ಥಾನಗಳು ಇತಿಹಾಸದ ಪುಟ ಸೇರಿದವು. ಆದರೆ, ಸಂಸ್ಥಾನಗಳ ವಿಲೀನೀಕರಣದ ಸಂದರ್ಭದಲ್ಲಿ ಸರ್ಕಾರಿ ಕಟ್ಟಡಗಳನ್ನು ಮಾತ್ರ ಭಾರತ ಸರ್ಕಾರ ವಶಪಡಿಸಿಕೊಂಡು, ಖಾಸಗಿ ಕಟ್ಟಡಗಳನ್ನು ಅವರಿಗೆ ಬಿಟ್ಟು ಕೊಟ್ಟಿದ್ದು ಇಂದು ಕಾನೂನಾತ್ಮಕ ಸಂರಕ್ಷಣೆಗೆ ಅಡ್ಡಿಯಾಗಿರಬಹುದೇ?. ಕರ್ನಾಟಕದ ಪ್ರಸಿದ್ಧ ಮೈಸೂರ ಅರಮನೆ, ಬೆಂಗಳೂರಿನ ಅರಮನೆ, ರಾಜಸ್ತಾನದ ಧೋಲ್ಪುರ್, ಉದಯಪುರ, ತ್ರಿಪುರ ಮುಂತಾದ ಅರಮನೆ ಕುರಿತು ವಿವಾದಗಳಿವೆ.

ಒಟ್ಟಿನಲ್ಲಿ ಸ್ವತಂತ್ರ ಪೂರ್ವ ಭಾರತದಲ್ಲಿದ್ದ 555 ಸಂಸ್ಥಾನಗಳಲ್ಲಿ ಈ ರೀತಿಯಾದ ವ್ಯಾಜ್ಯಗಳು ಸರ್ಕಾರ ಮತ್ತು ರಾಜ ವಂಶಸ್ಥರ ನಡುವೆ ಇಂದಿಗೂ ನ್ಯಾಯಾಲಯಗಳಲ್ಲಿವೆ. ಖಾಸಗಿ ಆಸ್ತಿಗಳೆಂದು ತಮ್ಮಲ್ಲಿಟ್ಟುಕೊಂಡ ಕೋಟೆ, ಅರಮನೆ ಮುಂತಾದ ಭವ್ಯ ಕಟ್ಟಡಗಳ ನಿರ್ವಹಣೆ ಅಸಾಧ್ಯವಾದ್ದರಿಂದ, ಒಂದೆಡೆ, ಕೆಲವು ರಾಜ ವಂಶಸ್ಥರು ಅದಾಯಕ್ಕಾಗಿ ಐಶಾರಾಮಿ ಹೋಟೆಲ್‌ಗಳನ್ನಾಗಿ ಮಾರ್ಪಡಿಸಿಕೊಂಡರೆ, ಇನ್ನೂ ಕೆಲವರು ಸಿನಿಮಾ ಮತ್ತು ಟಿ.ವಿ ವಾಹಿನಿಯವರಿಗೆ ಚಿತ್ರೀಕರಣಕ್ಕಾಗಿ ಬಾಡಿಗೆ ನೀಡಿದ್ದಾರೆ. ಉದಾಹರಣೆಗೆ ರಾಜಸ್ತಾನದ ಧೋಲ್ಪುರದ ರಾಜ ನಿವಾಸ ಅರಮನೆ, ಉದಯಪುರ, ತ್ರಿಪುರ ಹೀಗೆ ಹಲವಾರು ಅರಮನೆಗಳು ಇವೆ. ಇನ್ನೊಂದೆಡೆ ಪಟಿಯಾಲ ಸಂಸ್ಥಾನಿಕರು ತಮ್ಮ ಹಳೆಯ ಕೋಟೆ, ಅರಮನೆ, ಜಮೀನು, ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿನ ಹಣ ತಮ್ಮ ಖಾಸಗಿ ಆಸ್ತಿ ಎಂದು ಪರಿಗಣಿಸದೆ ಸರ್ಕಾರಕ್ಕೆ ನೀಡಿದ್ದಾರೆ.

ಇವೆಲ್ಲವುಗಳನ್ನು ಗಮನಿಸಿದಾಗ, ರಾಮದುರ್ಗದ ತುರನೂರ ಅರಮನೆ ಮತ್ತು ಅತಿಥಿ ಗೃಹಗಳನ್ನು ಹೋಟೆಲ್‌ನನ್ನಾಗಿಯೋ ಏನಾದರೂ ಮಾಡಿ ಉಳಿಸಬಹುದಾಗಿತ್ತು. ಅದು ಬಿಟ್ಟು ಅಲ್ಲಿನ ಮಣ್ಣಿನ ಗುಡ್ಡ ಸಮೇತ ಸ್ಮಾರಕಗಳನ್ನು ನೆಲಕ್ಕುರುಳಿಸಿರುವುದು ನಮ್ಮಲ್ಲಿನ ಐತಿಹಾಸಿಕ ಪ್ರಜ್ಞೆ ಇಲ್ಲದಿರುವುದಕ್ಕೆ ಸಾಕ್ಷಿ. ಇನ್ನಾದರೂ ಉಳಿದ ಇಲ್ಲಿನ ಸ್ಮಾರಕಗಳನ್ನು ಸಂರಕ್ಷಿಸುವ ಇಚ್ಛಾಶಕ್ತಿ ನಮ್ಮಲ್ಲಿ ಬೆಳೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT