ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸರಿನಿಂದ ಎದ್ದ ಕಲ್ಯಾಣಿ...

Last Updated 21 ನವೆಂಬರ್ 2016, 19:30 IST
ಅಕ್ಷರ ಗಾತ್ರ

-ಜಿ. ನಂಜೇಗೌಡ
ಮೂರು ಶತಮಾನಗಳ ಹಿಂದಿನ, ಸಂಪೂರ್ಣ ಮುಚ್ಚಿ ಹೋಗಿದ್ದ ಕಲ್ಯಾಣಿಯನ್ನು ಸ್ವಚ್ಛಗೊಳಿಸಿರುವ ಉತ್ಸಾಹಿ ಗ್ರಾಮಸ್ಥರ ತಂಡ ಕಲ್ಯಾಣಿಯನ್ನು ಅಂದಗಾಣಿಸಿದೆ. ಸತತ 25 ದಿನಗಳ ಕಾಲ ಶ್ರಮದಾನ ಮಾಡಿ ಕೆಸರು ತುಂಬಿದ್ದ ಕಲ್ಯಾಣಿಯಲ್ಲಿ ತಿಳಿ ನೀರು ಉಕ್ಕುವಂತೆ ಮಾಡಿದೆ. ಕೊಚ್ಚೆ ಗುಂಡಿಯಂತಿದ್ದ ಕಲ್ಯಾಣಿ ನೋಡುಗರ ಕಣ್ಮನ ತಣಿಸುತ್ತಿದೆ.

ಕಲ್ಯಾಣಿ ಒಳಗೆ ಮತ್ತು ಆಸುಪಾಸಿನಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಬುಡ ಸಹಿತ ಕಿತ್ತು ಹಸನು ಮಾಡಲಾಗಿದೆ. ಸುಮಾರು 20 ದಿನಗಳ ಕಾಲ, 25ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರ ತಂಡ ಬೆವರು ಬಸಿದು ಕಲ್ಯಾಣಿಯನ್ನು ಸ್ವಚ್ಛಗೊಳಿಸಿ ಪ್ರಾಚ್ಯ ಪ್ರಜ್ಞೆ ಮೆರೆದಿದೆ. ಶ್ರೀರಂಗಪಟ್ಟಣ– ಬನ್ನೂರು ರಸ್ತೆಯಲ್ಲಿರುವ ಮಂಡ್ಯಕೊಪ್ಪಲು ಗ್ರಾಮ ತಾಲ್ಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿದ್ದು, ಊರಿನ ಸರ್ಕಾರಿ ಶಾಲೆಯ ಹಿಂದಿರುವ ಐತಿಹಾಸಿಕ ಕಲ್ಯಾಣಿ ಸದ್ಯ ಸುತ್ತಮುತ್ತಲ ಗ್ರಾಮಗಳ ಜನರಿಗೆ ಆಕರ್ಷಣೆಯ ಕೇಂದ್ರವಾಗಿದೆ.

ನರೇಗಾ ನೆರವು: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಎನ್‌ಆರ್‌ಇಜಿಎ)ಯ ಅನುಕೂಲ ಪಡೆದು ಈ ಕಲ್ಯಾಣಿಗೆ ಕಾಯಕಲ್ಪ ನೀಡಲಾಗಿದೆ. ಅರಕೆರೆ ಗ್ರಾಮ ಪಂಚಾಯಿತಿಯಿಂದ ಶ್ರಮದಾನಿಗಳಿಗೆ ಉದ್ಯೋಗ ಚೀಟಿ ಕೊಡಿಸಿ ಅದರ ಮೂಲಕ ಸುಮಾರು ₹3 ಲಕ್ಷ ಹಣ ಪಡೆಯಲಾಗಿದೆ. ಆ ಹಣವನ್ನು ಕಲ್ಯಾಣಿ ಜೀರ್ಣೋದ್ಧಾರಕ್ಕೆ ಬಳಸಿಕೊಳ್ಳಲಾಗಿದೆ. ನರೇಗಾದಲ್ಲಿ ಬಂದ ಹಣದಿಂದಲೇ ಈ ಕಲ್ಲಿನ ಕೊಳದ ಮೆಟ್ಟಿಲುಗಳ ದುರಸ್ತಿ, ಅದರ ಸುತ್ತಲೂ ತಂತಿ ಬೇಲಿ, ಕಲ್ಲು ಕಟ್ಟಡ ಮತ್ತು ಸಿಮೆಂಟ್‌ ನೆಲ ಹಾಸು ನಿರ್ಮಿಸಲಾಗಿದೆ. ನರೇಗಾ ಯೋಜನೆಯ ಹಣ ಅಷ್ಟರ ಮಟ್ಟಿಗೆ ಇಲ್ಲಿ ಸದ್ಬಳಕೆಯಾಗಿದೆ.

ಕಲ್ಯಾಣಿಯ ರಚನೆ: ಚಚ್ಚೌಕಾಕಾರದಲ್ಲಿ ನಿರ್ಮಿಸಿರುವ ಈ ಕಲ್ಯಾಣಿ 75 ಚದರ ಅಡಿ ವಿಸ್ತೀರ್ಣ ಹೊಂದಿದೆ. ನೆಲ ಮಟ್ಟದಿಂದ 20 ಅಡಿಗಳವರೆಗೆ ಕಾಡುಗಲ್ಲುಗಳಿಂದ ಮೆಟ್ಟಿಲುಗಳನ್ನು ಒಂದರ ಮೇಲೆ ಒಂದರಂತೆ ಕರಾರುವಕ್ಕಾಗಿ ಜೋಡಿಸಿದಂತೆ ನಿರ್ಮಿಸಲಾಗಿದೆ. ಅದಕ್ಕಾಗಿ ಸಹಸ್ರಾರು ಕಲ್ಲುಗಳನ್ನು ಬಳಸಲಾಗಿದೆ. ಕಲ್ಲಿನ ಜೋಡಣೆ ಮುಗಿದ ನಂತರದ 20 ಅಡಿಗಳ ಆಳದಲ್ಲಿ ತೊಟ್ಟಿಲು ಗುಂಡಿ (ಕಲ್ಯಾಣಿಯ ತಳ ಭಾಗ) ಕಾಣ ಸಿಗುತ್ತದೆ. ತಳದಲ್ಲಿ ಹಿಟ್ಟುಕಲ್ಲು ಕಾಣುವವರೆಗೂ ಕೊಳವನ್ನು ತೋಡಲಾಗಿದೆ. ಇದೀಗ ಈ ಕಲ್ಯಾಣಿಯಲ್ಲಿ 25 ಅಡಿಗಳಷ್ಟು ನೀರು ತುಂಬಿದೆ.

ಕೊಳವೆ ಬಾವಿ, ನಾಲೆಗಳು ಇರದಿದ್ದ ಆ ಕಾಲದಲ್ಲಿ ಇದು ಊರಿಗೆ ನೀರು ಪೂರೈಸುವ ಪ್ರಮುಖ ಆಕರವಾಗಿತ್ತು.  ಕಾಲ್ನಡಿಗೆಯಲ್ಲಿ ಹೋಗಿ ಬರುವ ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಈ ಕಲ್ಯಾಣಿಯನ್ನು ನಿರ್ಮಿಸಲಾಗಿತ್ತು. ಕಂಠೀರವ ನರಸರಾಜ ಒಡೆಯರ್‌ (1638–59) ಅಥವಾ ಚಿಕ್ಕದೇವರಾಜ ಒಡೆಯರ್‌ (1673–1704) ಕಾಲದಲ್ಲಿ ಇದು ನಿರ್ಮಾಣ ಆಗಿರಬಹುದು. ಹಲವು ದಶಕಗಳ ಹಿಂದೆ ಈ ಕಲ್ಯಾಣಿಗೆ ಹೊಂದಿಕೊಂಡಂತೆ ಧರ್ಮ ಛತ್ರವಿತ್ತು. ದಾರಿ ಹೋಕರಿಗೆ ಅನ್ನ, ಅಂಬಲಿ ವಿತರಣೆ ನಡೆಯುತ್ತಿತ್ತು. ಅದರ ಸ್ಥಾನದಲ್ಲಿ ಈಗ ಸರ್ಕಾರಿ ಶಾಲೆ ತಲೆ ಎತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

‘ಮಂಡ್ಯಕೊಪ್ಪಲು ಗ್ರಾಮ ಮೂಲತಃ ಬ್ರಾಹ್ಮಣರ ಅಗ್ರಹಾರವಾಗಿತ್ತು. ಜನರಿಗೆ ಮತ್ತು ದೇವರ ಅಭಿಷೇಕಕ್ಕೆ ಈ ಕಲ್ಯಾಣಿಯ ನೀರನ್ನೇ ಅವಲಂಬಿಸಲಾಗಿತ್ತು. ಮೇಲುಕೋಟೆ ಅಯ್ಯಂಗಾರ್‌ ಮನೆತನದ ಹತ್ತಾರು ಬ್ರಾಹ್ಮಣ ಕುಟುಂಬಗಳು ಇಲ್ಲಿ ನೆಲೆಸಿದ್ದವು. ಕಾರಣಾಂತರಗಳಿಂದ ಈ ಗ್ರಾಮ ಮೊದಲಿದ್ದ ಸ್ಥಳದಿಂದ ತುಸು ಎತ್ತರ ಪ್ರದೇಶಕ್ಕೆ ಸ್ಥಳಾಂತರಗೊಂಡಿತು. ಆ ಬಳಿಕ ಇಲ್ಲಿದ್ದ ಮೂಲ ಕುಟುಂಬಗಳು ವಲಸೆ ಹೊರಟವು.

ಕೂಲಿ ಅರಸಿ ಎಲ್ಲೆಲ್ಲಿಂದಲೋ ಬಂದವರು ಈ ಊರಲ್ಲಿ ಶಾಶ್ವತವಾಗಿ ತಳವೂರಿದರು ಎಂದು ನಮ್ಮ ಪೂರ್ವಿಕರು ಹೇಳುತ್ತಿದ್ದರು. ಈ ಕಲ್ಯಾಣಿಯ ಪಕ್ಕದಲ್ಲಿ ಊರಿನ ಆರಾಧ್ಯ ದೈವ ಲಕ್ಷ್ಮೀನಾರಾಯಣಸ್ವಾಮಿಯ ದೇವಾಲಯ ಇತ್ತು. ದೇಗುಲ ಶಿಥಿಲವಾಗಿದ್ದ ಕಾರಣ ದೇವರ ಮೂರ್ತಿಯನ್ನು ಗ್ರಾಮದ ಮತ್ತೊಂದು ಭಾಗಕ್ಕೆ ಸ್ಥಳಾಂತರಿಸಿ ಅಲ್ಲಿ ಹೊಸದಾದ ದೇಗುಲ ನಿರ್ಮಿಸಲಾಗಿದೆ’ ಎನ್ನುತ್ತಾರೆ ಗ್ರಾಮದ ಹಿರೀಕ ಪಟೇಲ್‌ ಅನಂತರಾಮು.

‘ಜೀರ್ಣೋದ್ಧಾರ ಮಾಡಿರುವ ಕಲ್ಯಾಣಿಯ ನೀರನ್ನು ಅಗತ್ಯ ಸಂದರ್ಭದಲ್ಲಿ ಬಳಸಿಕೊಳ್ಳಲಾಗುವುದು. ಅದರ ಸುತ್ತಲೂ ಉದ್ಯಾನ ನಿರ್ಮಿಸಿ ಆಲಂಕಾರಿಕ ಗಿಡಗಳನ್ನು ಬೆಳೆಸುತ್ತೇವೆ. ವಾಯು ವಿಹಾರಿಗಳು ಮತ್ತು ದಾರಿ ಹೋಕರು ಕೊಳದ ದಡದಲ್ಲಿ ಕುಳಿತು ದಣಿವಾರಿಸಿಕೊಳ್ಳಲು ಸುತ್ತಲೂ ಸಿಮೆಂಟ್‌ ಬೆಂಚ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ನೆರವು ನೀಡುವ ಭರವಸೆ ನೀಡಿದೆ’ ಎನ್ನುತ್ತಾರೆ ಮುಖ್ಯ ಶ್ರಮದಾನಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT